ಕವಿತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವಿತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಮಾರ್ಚ್ 5, 2014

ಕಾಡುವಂಥ ಸ್ವಪ್ನ ಸಾಕೇ

ಸಂತೆಯಲಿ ಬಿದ್ದ ಸ್ವಪ್ನದಂತೆ
ನೋವಿಗೆ ಅವಳದೇ ಪನ್ನೀರು
ಕಾಡಿಗೆ ಕರಗದೇ ಒಂಚೂರು

ಕುಂತ ಒಂದು ಘಳಿಗೇಲಿ
ನಡೆದ ಒಂದು ಹೆಜ್ಜೇಲಿ
ಒಂಟಿಯಾಗಿ ಒಲವು ಬೆಂದು ಬಾಡಿದೆ
ಎದೆಯಲಿ ಮುಗಿಯದ ನೋವಿಗೆ
ಕಣ್ಣಲಿ ಕಾಣದ ಹಸಿವಿದೆ

ಉಸಿರೆಲ್ಲೋ ಕಳೆದು
ಹೆಸರೆಲ್ಲೋ ಉಳಿದು
ಇರದೇ ಇದ್ದರೂ
ಕಣ್ಣಲಿ ಕಾಣಿಸೋ ಸತ್ಯಕೆ 
ಬೇರೆ ಪ್ರೇಮ ಪತ್ರ ಬೇಕೇ
ಕಾಡುವಂಥ ಸ್ವಪ್ನ ಸಾಕೇ.....

ಶನಿವಾರ, ಅಕ್ಟೋಬರ್ 1, 2011

ಅನಾ"ಮತ್ತು"ಗಳು....

ಕುಣಿಯುತ್ತಿಲ್ಲ ನವಿಲು
ಹಣತೆ ಕಿಡಿಗೆ ಕೀಟಗಳ ಮುತ್ತು
ಮತ್ತು
ವರ್ಷಕ್ಕೆ ಒಂದೇ ಆಶಾಢ, ಒಂದೇ ಶ್ರಾವಣ.


ಚಿಗುರುವ ಎಲೆಗಳಲಿ ಮುದಿ ಮಾಯೆ
ಕಣ್ಣೀರ ಹನಿಗಳಲಿ ರೆಪ್ಪೆ ಬಯಲು
ಕಟ್ಟಡಗಳು ಏರುತ್ತಾ ನೆಮ್ಮದಿ ಸಾವು.
ಹೆಣೆದ ಜೇಡರ ಬಲೆಯಂತೆ ವಿದ್ಯುತ್ ತಂತಿ
ಮತ್ತು
ತಿಂಗಳಿಗೊಂದೇ ಸಂಬ್ಳ, ಒಂದೇ ನೌಕ್ರಿ.


ಇಟ್ಟ ಕಣ್ಣಲ್ಲಿ ನೆಟ್ಟ ನೋಟದಲಿ
ಸರ್ಕಾರಿ ಬಸ್ಸಿನ ಕನ್ನಡಿ ಹೊಳಪು
ದರ್ಶಿನಿಯ ಬೈಟೂ ಕಾಫಿ
ಟೂ ಬಿಟ್ಟ ಮಗಳು
ಶಾಪಿಂಗಿನಲ್ಲೇ ಕಳೆದು ಕೂಡಿಸಿ ಗುಣಿಸಿದ
ಸಮಯ ಡಿಸ್ಕೌಂಟ್ ಫ್ರೀ..
ಫೋಟೋಶಾಪಿನಲ್ಲೇ ಹೂ ಅರಳಿ
ಘಮ್, ಘಮ್
ದರಿದ್ರ ಕರೆಂಟು..
ಲ್ಯಾಪ್ಟಾಪ್ ಬೆಳಕಲ್ಲೇ ಉಣ್ಣಬೇಕು


ಬರಲಿ ಮತ್ತೊಂದು ಚತುರ್ಥಿ, ದೀಪಾವಳಿ
ಮೆತ್ತಲು ಬೇಕು ದೇಸಿ ಪೌಡರು
ಟೆರೇಸಿನ ಮೇಲೇ ಮಾದರಿ ಕೃಷಿ: ಒಂದು ಚಿಂತನೆ
...ಮರೆತೇ ಹೋಗಿತ್ತು
ಇಂಟರ್ನೆಟ್ಟು ಕಟ್ಟಾಗಿದೆ, ಬಿಲ್ಲು ಪಾವತಿಯಾಗಿಲ್ಲ.
ಗೂಗಲ್, ಫೇಸ್ಬುಕ್, ಆರ್ಕುಟ್ 
ಸಾಕಷ್ಟು ಪರಿಚಯಗಳನ್ನು ಅಪ್ರೂವ್
ಮಾಡಬೇಕು.
ದರಿದ್ರದ್ದು ಫ್ಲೈಓವರ್ ಕೂಡಾ ಜಾಮು.


ಬನ್ನಿ ಸ್ವಲ್ಪ ದಿನ ರೆಸಾರ್ಟಿಗೆ 
ಪ್ರಕೃತಿ ಚಿಕಿತ್ಸೆಯ ನೆಮ್ಮದಿ
ಎರಡೇ ದಿನ
ಫ್ರೀ ಪ್ಯಾಕೇಜ್ ಬೇರೆ.
ಅಪ್ಪ-ಅಮ್ಮನನ್ನೂ ನೋಡಿದ ಹಾಗಾಯ್ತು
ಬನ್ನಿ, ಬನ್ನಿ..

ಗುರುವಾರ, ಮಾರ್ಚ್ 17, 2011

ನನ್ನ ಬೆಡ್ರೂಮಿನ ಗೋಡೆಗಳಿಗೆ ಪೈಂಟ್ ಮಾಡಿಸಬೇಕಾಗಿದೆ


ನನ್ನ ಬೆಡ್ರೂಮಿನ
ಗೋಡೆಗಳಿಗೆ
ಪೈಂಟ್ ಮಾಡಿಸಬೇಕಾಗಿದೆ

ಇಡೀ ಚಿತ್ರಗಳೆಲ್ಲಾ
ಹುಡಿ ಹುಡಿ
ಹುಡುಗಿಯ ಕಣ್ಣು
ಒಂದೂವರೆ ಕಾಲಿನ ಮುದುಕಪ್ಪ
ಹಾರಿ ಹೋಗಲಿಕ್ಕೆ
ರೆಕ್ಕೆ ಬಡಿದ ಹಕ್ಕಿ...ಓಫ್
ಉಳಿದದ್ದು ದೀರ್ಘ ಹಗಲು

ನಾಚುತ್ತಾ ನೀರು
ತರಲು ನಿಂತ
ಹೆಣ್ಣಿನ ಚಿತ್ರ
ಮಗ್ಗುಲಲಿ
ದಿಬ್ಬಣದ ಅಬ್ಬರ
ಮೇಲೆ ಕೆಳಗೆ
ಬರಿದಾದದ್ದು
ಉಸಿರೆಳೆದ ಹೆಣ್ಣು
ಉಳಿದದ್ದು ಸಾಯುತ್ತಿರುವ
ರಾತ್ರಿ

ನನ್ನ ಬೆಡ್ರೂಮಿನ
ಗೋಡೆಗಳಿಗೆ
ಪೈಂಟ್ ಮಾಡಿಸಬೇಕಾಗಿದೆ

ಮಂಗಳವಾರ, ಜನವರಿ 11, 2011

ಗುರುತೇ ಇರದ ಸಾಲುಗಳು

1
ಜರೂರತ್ತು
ಜವಾಬ್ದಾರಿ
ಜಮಾನ
ಜನ
ಜಾತ್ರೆ
ಜೈ ಹೋ

2
ಮಳೆಯ
ಮೊದಲ ಹನಿಗೆ
ದನಿಗೂಡಿಸಿ ಹಾಡಿದ
ಬೀಜದಲ್ಲಿ ಬದುಕು

3
ಮುತ್ತೆಲ್ಲಾ
ಮೌನವಾಗಿ
ಮೌನ ಬಸಿರಾಗಿ
ಮುಂಜಾನೆಯಾಗುವ ಹೊತ್ತು

4
ಛಾಯೆ ಬಿಟ್ಟು ಹೋದ ಚಿತ್ರ
ಬಿಸಿಲಲ್ಲೇ ಮನೆ ಮಾಡಿತು.

5
ತುಟಿಯಲ್ಲಿ ಉಳಿದ ಪ್ರಶ್ನೆಗಳು
ಉತ್ತರಗಳಿಗೆ ಚುಂಬಿಸುವ ಮನಸ್ಸಿಲ್ಲ

6
ಹೇಳಿ ಹೋಗದ ಕಾರಣ
ಒಡೆದ ಬಿಂಬವ ಸೂಸುವ ಕನ್ನಡಿ

7
ಅವಳ ತುಟಿಯಂಚಿನ ನಗೆಯಲ್ಲಿ
ಹುಟ್ಟಿದ ಯೌವನಕ್ಕೆ
ವಯಸ್ಸಿಲ್ಲ.

8
ಮುಟ್ಟಿದರೆ ಮುನಿಯುತ್ತಾಳೆ
ದೂರ ಸರಿದರೆ ತೆಕ್ಕೆಗೆಳೆಯುತ್ತಾಳೆ
ಹರೆಯಕ್ಕೆ ಉಸಿರಿದೆ
ಅನ್ನೋದೇ ಮರೆತು ಹೋಗಿದೆ

9
ಅವಳ ಕೈಯಲ್ಲಿ
ಉಳಿದು ಹೋದ
ರಂಗೋಲಿ ಹುಡಿಯಲ್ಲಿ
ನನ್ನ ಮದರಂಗಿ

10
ಕೊಡೆಯ ತುದಿಯಿಂದ
ಕವಲೊಡೆದ ನೀರ ಹನಿಗಳಲ್ಲಿ
ಸಾವಿರ ಬಿಸಿ ನಿಟ್ಟುಸಿರು

11
ಅವಳ ಹೆಜ್ಜೆಯ ಗುರುತಿನಡಿ
ಹಾರಿದ ಗಾಳಿಪಟಕ್ಕೆ
ನೆನಪಿನ ಹಂಗಿಲ್ಲ!


12
ನಿನ್ನ ತುಟಿಯ
ಜೇನ ಹೀರುವ ಹೊತ್ತಿಗೆ
ನಾನು
ಗುಲಾಬಿಯ ಪಕಳೆ

13
ನಿನ್ನ ಕಂಗಳಲ್ಲಿ
ಅರಳುತ್ತಿರುವ
ಹೂವಿಗೆ
ನನ್ನ
ಪರಿಮಳ

14
ಮುಖ ಮೂಕ!

15
ಪ್ರಶ್ನೆಗಳಿರುವುದೇ ಸುಮ್ಮನೆ!

16
ಒಪ್ಪಿಗೆ ಒಲವಲ್ಲ
ನಗು ನಲಿವಲ್ಲ

17
ಕರುಣೆ ಇರಲಿ!

18
ದನಿ ನಡುಗುತ್ತಾ
ಕಣ್ಣು ಜಲಪಾತವಾಗುವ ಹೊತ್ತಿಗೆ
ನೀನು ನೆನಪಿನ ಹಂಗು ತೊರೆದ
ಸಮುದ್ರ


19
ಬೆಟ್ಟದ ಮೇಲೆ
ನಿಂತ ಒಂಟಿ ಶವಕ್ಕೆ
ಹಾರಾಡುವ
ಉಸಿರು

20
ನೋವು
ಅಭ್ಯಾಸವಾದರೆ
ಜೇನ
ಹನಿ
ಕಹಿ

21
ಪಟಪಟಿಸುವ
ನಿನ್ನ
ಸೀರೆ ಸೆರಗೊಳಗೆ
ನನ್ನ
ಬೆವರು ಹಸಿರು

22
ಅವಳ
ಮುಖದ
ನೆರಿಗೆಗಳಲ್ಲಿ
ವಿರಮಿಸದ
ನಾನು

23
ಎಲ್ಲಾ
ಕಳೆದ ಮೇಲೆ
ಉಳಿದಿರುವುದರ
ಲೆಕ್ಕ
ಏತಕ್ಕೆ?

24
ಕಣ್ಣ
ಒಳಗೆ ಬಿದ್ದ
ಕಾಮನಬಿಲ್ಲು
ನೋವುಗಳೆಲ್ಲಾ
ನಕ್ಕ
ಕ್ಷಣ

25
ಮುಂಗುರುಳ
ತುದಿಯಲ್ಲಿ
ಅಂಟಿದ
ವಿಶಾದಕ್ಕೆ
ಗುರುತೇ ಇರದ
ಮುಖವಾಡ

26
ಕಾಲವಾಗಿರುವ
ಸತ್ಯಗಳ
ಗೋರಿಯ ಮೇಲೆ
ನಾಳೆಯ ಹಾಡು

27
ಮೊಳಕೆ
ಮರವಾಗುವ ಹೊತ್ತಿಗೆ
ಬಾಳ ಮುಸ್ಸಂಜೆಯಲ್ಲಿ
ಅವಳು.

ಗುರುವಾರ, ಜೂನ್ 10, 2010

ಒಂದಂಕೆ- ನೋವೆಂಬ ನಲಿವಿನ ಕಾಲ


ಒಂದು
ಮಾತನ್ನು ಕೂಡಿಟ್ಟಿದ್ದೆ
ಅದು ಮೌನದಲ್ಲೇ
ಕರಗಿ ಹೋಯಿತು


ಒಂದು
ಹನಿ ಕಣ್ಣಲ್ಲಿ ಬಚ್ಚಿಟ್ಟಿದ್ದೆ
ಅದು ರೆಪ್ಪೆಗಳಿಗೆ
ತಿಳಿದು ಹೋಯಿತು


ಒಂದು
ಮೊಗ್ಗನ್ನು ಇಟ್ಟುಕೊಂಡಿದ್ದೆ
ಅದು ಸೂರ್ಯನಿಗೆ
ಇಷ್ಟವಾಗಿ ಹೋಯಿತು


ಒಂದು
ನವಿಲುಗರಿ ಸಿಕ್ಕಿತು
ಅದಕ್ಕೆ ನವಿಲು
ಬಣ್ಣ ತುಂಬದೇ ಹೋಯಿತು

ಶುಕ್ರವಾರ, ಮಾರ್ಚ್ 12, 2010

ಸ್ವಗತೋನ್ಮತ್ತ ತಲ್ಲಣಗಳು

ಇಲ್ಲಿರುವುದೆಲ್ಲಾ ಬಿಡಿ ಬಿಡಿ ಭಾವನೆಗಳು. ಹತ್ತಾರು ಕ್ಷಣಗಳಲ್ಲಿ ಹೊಳೆದದ್ದು, ಜುಮ್ಮೆನ್ನುವಂತೆ ಮಾಡಿದ್ದು. ಇಲ್ಲಿನ ಪ್ರತೀ ಶಬ್ದ, ಸಾಲು ಹಲವಾರು ಅರ್ಥದೊಂದಿಗೆ ಕಾಡಿವೆ. ಬಿಡಿ ಸಾಲುಗಳಲ್ಲಿ ಒಂದಕ್ಕಿಂತ ಹೆಚ್ಚಿನ ಕತೆಗಳಿವೆ. ಹಾಗಂತ ಅನ್ನಿಸಿದೆ ಬರೆದಾದ ಮೇಲೆ. ಹಾಗಲ್ಲ ಅಂತಾನೂ ಅನ್ನಿಸಿದೆ, "ಹಾಗನ್ನಿಸಿದ" ನಂತರದ ಫಳಿಗೆಗೆ. ನಿಮಗೇನು ಅನ್ನಿಸುತ್ತೋ...???

--
ಹೂ
ಮುತ್ತಿಟ್ಟರೆ
ಬಾಡುತ್ತಾಳೆ


--
ನಿನ್ನೆ
ಕಂಡ
ಸೂರ್ಯ
ಇವತ್ತಿಲ್ಲ
ಹಗಲು


--
ಕುಕ್ಕರಿನ
ವಿಶಿಲು
ಜೀವ
ತೇಗುತ್ತದೆ


--
ಕರಚಿದ
ಕರಿಬೇವಿನ
ಎಲೆಗಳಲಿ
ಒಗ್ಗರಣೆ
ಹಸಿರು


--
ಅಕ್ಷರ
ಮೂಡುತ್ತಿದೆ
ಕಂಪ್ಯೂಟರ್
ಪರದೆ
ಇನ್ನೂ
ಖಾಲಿ


--
ಹಳದಿ
ರಸೀತಿಯಲಿ
ಉಳಿದ
ಲೆಕ್ಕ
ಅರೆ
ಚುಕ್ತಾ


--
ಟೆರೇಸಿನಲಿ
ನಿಂತೆ
ನಾನು
ನಗರ
ಬೆತ್ತಲೆ


--
ನಾನಿದ್ದೇನೆ
ದೀಪದ
ಬುಡದಲ್ಲಿ
ಸತ್ತಿದೆ
ಹಾತೆ

ಮಂಗಳವಾರ, ಜನವರಿ 19, 2010

ಕನಸುಗಳಿಗಿದು ಕಾಲವಲ್ಲ

ಪದವಿಯ ದ್ವಿತೀಯ ವರ್ಷದಲ್ಲಿದ್ದಾಗ ಬರೆದ ಕವಿತೆಯಿದು.

ಕನಸುಗಳಿಗಿದು
ಕಾಲವಲ್ಲ

ಕಾಮನಬಿಲ್ಲು ಕ್ಷಿತಿಜದಲಿ
ಮಿನುಗಿದ್ದು ನೆನಪಿಲ್ಲ
ರಾತ್ರಿಯ ನಕ್ಷತ್ರಗಳು
ಸ್ಪಾಟ್ಲೈಟುಗಳಾಗಿ ಬಿಟ್ಟಿವೆ
ಸೂರ್ಯ ಬಚ್ಚಲು ಕಾಯಿಸುತ್ತಾನೆ
ಬಿದಿಗೆ ಚಂದ್ರಮನ
ಬೆಳಕಿನ ಊಟಕ್ಕೆ
60 ವ್ಯಾಟಿನ ಬಲ್ಬು ಬಿಡುವುದಿಲ್ಲ
ಬಾಲ್ಕನಿಯ ಮೌನ
ಟ್ರಾಫಿಕ್ಕು ಸದ್ದಿಗೆ ಸುಸ್ತಾಗಿ ಮಲಗಿದೆ
ಗೋಡೆಯ ಮೇಲಿನ
ಪ್ಲಾಸ್ಟಿಕ್ ಹೂವು ಬಾಡುತ್ತದೆ
ಎನ್ನುವ ಭರವಸೆಯಿಲ್ಲ
ಕನ್ನಡಿಯ ಮುಖ
ನಗುವುದನ್ನು ನಾ ನೋಡಿಲ್ಲ
ಒಂಟಿಯಾಗಿ
ನಡೆಯಬೇಕು ಅಂತ ಅನಿಸುವುದಿಲ್ಲ
ಸಿಗರೇಟಿನ ಕಿಡಿ
ತುಟಿ ಸುಟ್ಟರೂ ಚೀರಬೇಕೆನಿಸುವುದಿಲ್ಲ
ರಾತ್ರಿ ಕಂಡ ಕನಸು
ಇವತ್ತು ಬೆಳಿಗ್ಗೆ ನೆನಪಿಗೇ ಬರುವುದಿಲ್ಲ

ಈಗಂತೂ ಖಾತ್ರಿಯಾಗಿದೆ
ಕನಸುಗಳಿಗಿದು
ಕಾಲವಲ್ಲ!

ಶನಿವಾರ, ಜನವರಿ 10, 2009

ಆವಿಯಾದ ರಕ್ತ ಕಣ



ರಸ್ತೆ ಭಣಗುಡುತ್ತಿತ್ತು
ನಿದ್ರಿಸುತ್ತಾ ಆಕಳಿಕೆ
ಚಿಮಿಣಿ ಬೆಳಕಲ್ಲಿ ನಡೆಯುತ್ತಿದ್ದೆ
ಸುಂದರ ಸುಮಗಳು
ಹಸಿರು ಮರಗಳು ದಾಟುತ್ತಿದ್ದವು
ಧುತ್ತನೆ ಕಾಲಿಗೆ ಅಡರಿತು ಕಡಿದ ಕಾಲು

ಆರಡಿ ಉದ್ದದ ದೇಹಗಳು
ಮೂರಡಿಯಾಗಿ ಚೆಲ್ಲಿ ಕುಳಿತಿದ್ದವು
ಸತ್ತವರ ಸುತ್ತ ಹುತ್ತ ಬೆಳೆದಂತೆ
ನಾಯಿ, ನರಿ, ಹದ್ದುಗಳು ಬಾಯಾರಿದ್ದವು
ಬಿಳಿ ಮೂಳೆ, ಎರೆಹುಳುವಿನಂತಹ ನರ
ಹಸಿರು ಕಣ್ಣು ಎಲ್ಲವನ್ನೂ ನಿಯತ್ತಾಗಿ
ಬಾಯಿಗಿಳಿಸುತ್ತಾ ಅವುಗಳ ರಕ್ಕಸ
ಹಸಿವು ಸಾಯುತ್ತಿತ್ತು

ಬೆತ್ತಲಾಗಿ ಒಬ್ಬರ ಮೇಲೊಬ್ಬರಂತೆ
ಮಲಗಿದ್ದರು ಧೀರರು
ಕನಸಿನ ಕಣ್ಣುಗಳು, ಬಾಯಾರಿದ ಗಂಟಲು
ಸಾಯದ ನೋವು ಎಲ್ಲಾ ಆಕಾಶ ನೋಡುತ್ತಿದ್ದವು
ಮೊನ್ನೆಯಷ್ಟೇ ಮದುವೆಯಾದವ
ನಿನ್ನೆಯಷ್ಟೇ ನಕ್ಷತ್ರ ಕಂಡವ
ನಾಳೆ ಸೇನಾನಿಯಾಗಬೇಕಿದ್ದವ
ಎಲ್ಲರೂ ನನ್ನೆದುರೇ ನರಳುತ್ತಾ ಮುರುಟಿ ಹೋದರು

ಛಿದ್ರ ರಥಗಳ ಮಧ್ಯೆ ರಾಜಠೀವಿಯಿಂದ
ಬಾಣದ ಹೊದಿಕೆ ಹೊದ್ದು ನಿದ್ರಿಸುತ್ತಿದ್ದ ಆತ
ಬಾನಿನ ಸೂರ್ಯ ಬಣ್ಣ ಕಳೆದುಕೊಳ್ಳುತ್ತಿದ್ದ
ಆಗಸ ಕೆಂಪಾಗುತ್ತಿತ್ತು
ಅಲ್ಯೂಮಿನಿಯಂ ತಟ್ಟೆಯಂತೆ ಜಜ್ಜಿದ ಕಿರೀಟ
ರಥದ ಚಕ್ರದಡಿ ಮುದುಡಿತ್ತು
ಇನ್ನು ಕಿಲುಬು ಕಾಸಿನ ಕಿಮ್ಮತ್ತಿಲ್ಲ ಅದಕ್ಕೆ
"ಕ್ಷತ್ರೀಯನಿಗೆ ಯುದ್ಧವೇ ಮುಖ್ಯ" ಎಂಬ
ಬರಹ ಕಂಡಿತು ನನಗೆ ರಥದಡಿ
"ಹಸಿದವರ ಬದುಕು ಕ್ಷತ್ರೀಯನಿಗೆ
ಫುಟ್ಬಾಲು ಚೆಂಡಲ್ಲವೇ?" ಅಂತ ಅಂದುಕೊಂಡೆ

ಆದರೂ ಆತನ ಕಣ್ಣುಗಳಲ್ಲಿ
ಚಿನ್ನದ ಕಿರೀಟ ಮಿನುಗುತ್ತಿತ್ತು
ಮುಖದ ತುಂಬೆಲ್ಲಾ ವೈರಿಯ
ಮಾರ್ಗವನ್ನು ಸೂಚಿಸುವ ಸುಪ್ತ ರೇಖೆಗಳು
ಮೀಸೆಯಡಿ ಚಿನ್ನದ ಸಿಂಹಾಸನ
ನೇತಾಡುತ್ತಾ ನಗುತ್ತಿತ್ತು.

ಆಗಲೇ ರಕ್ತ ಕಣಗಳು
ಆವಿಯಾಗಿ ಆಕಾಶದಲ್ಲಿ
ಮೋಡಗಳಾದದ್ದು.

(ಕೆಂಡಸಂಪಿಗೆಯಲ್ಲಿ ಪ್ರಕಟವಾದ ಕವಿತೆ)

ಬುಧವಾರ, ಡಿಸೆಂಬರ್ 31, 2008

ಎರಡು 'ಮದ್ಯ'ರಾತ್ರಿಯ ಹನಿಗಳು

ಅಪಾರರ ಸ್ವರ್ಗದ ಲಿಂಕು "ಮದ್ಯಸಾರ" ಓದಿದ ಮೇಲೆ ನನ್ನಲ್ಲಿ ಮೂಡಿದ ಎರಡು ಹನಿಗಳಿವು. ಇದು ಥರ್ಟಿಯೋ,ಸಿಕ್ಸ್ಟಿಯೋ,ನೈಂಟಿಯೋ ಎನ್ನುವ ವಿಷಯದಲ್ಲಿ ನಾನು ಅನಕ್ಷರಸ್ಥ!

ಗುಟುಕಾಗಿ ಹೀರಿಕೊಳ್ಳುವುದು ನಿಮ್ಮ ಕೆಲಸ.


ವಿಸ್ಕಿ ವೈಯಕ್ತಿಕ
ಸೋಡಾ ಸಾರ್ವತ್ರಿಕ
ಬೆರೆಸಿದಷ್ಟು ನಿತ್ಯ ನೂತನ
ಅಮಲಿಗೆ ತೆರೆಯುವ ಕಣ್ಣಿಗೆ
ಲೋಕ ಲಡಕಾಸಿ ಸೈಕಲು


ಗ್ಲಾಸುಗಳು ತುಂಬಬೇಕು
ಕಣ್ಣ ಹನಿ ಚೂರೇ ಚೂರು ತುಂಬಿದಂತೆ
ಬಿಕ್ಕಳಿಸಿದ ಸ್ವಗತಗಳಿಗೆ
ಗುಟುಕೇ ಪಂಚಾಮೃತ
ಉಳಿಯುವ ಮೌನಕ್ಕೆ
ಖಾಲಿ ಗ್ಲಾಸೇ ಉತ್ತರ

ಬುಧವಾರ, ಆಗಸ್ಟ್ 20, 2008

ಚಿ(ಂ)ತೆ

ಚಿತೆ ಧಗಧಗ ಉರಿಯುತ್ತಿತ್ತು


ವಿಕಾರಗಳೆಲ್ಲಾ ಆಕಾರಗಳಾಗುತ್ತಿದ್ದವು


ತಣ್ಣನೆಯ ತಿಳಿಗಾಳಿ ತುಂಬಾ


ಕಾಮಪಿಪಾಸು ಬೆವರು, ವಿಷಣ್ಣ ನಗೆ


ಕ್ರೌರ್ಯದ ಉತ್ತುಂಗದಿ


ನಾನು ಸಾಯುತ್ತಿದ್ದೆ




ದೃಷ್ಠಿಯ ಚಿಗುರುಗಳು


ಚಿತೆಯ ಬೆಂಕಿಯೊಳು ಸ್ಖಲಿಸುತ್ತಾ


ಆಲದ ಮರಕ್ಕೆ ನೇಣು ಬಿಗಿದಿತ್ತು


ಹಿತ್ತಲ ಗಿಡಗಳೆಲ್ಲಾ ಓಯಸ್ಸಿಸ್ಸಾಗಿದ್ದವು


ಪ್ರತಿಮೆಗಳು ಅದರೊಳಗೆ ಮುದುಡಿದ್ದವು




ಬಲವಂತದ ಸ್ವಪ್ನಗಳು


ಬಸಿರಿನ ಧ್ವನಿಗಳು


ಎಲ್ಲಕ್ಕೂ ಉಸಿರೊಂದೇ ಇರಲಿಲ್ಲ


ಚಾಚಿದ ಹೆಬ್ಬಾವಿನ ಕೈಗಳು ವಾಚಾಳಿಯಾಗುತ್ತಿದ್ದವು


ಕೆಂಡದ ಕಣ್ಣುಗಳ ರಕ್ತದಿ


ಹಸಿವು ಧುಮುಕುತ್ತಿತ್ತು




ಚರ್ಚಿನ ಗಂಟೆಯ ನಾಲಗೆ


ಕಪಟಿಯ ಕೆಮ್ಮು


ಹದ್ದಿನ ಕಣ್ಣಿನ ಕಾಮ, ನಪುಂಸಕ ಕ್ರೋಧ


ಈ ಎಲ್ಲಾ ಕ್ರಿಯೆ-ಪ್ರಕ್ರಿಯೆಯೊಳಗೆ


ಅರ್ಥವಾಯಿತು ನನಗೆ


ನಾನಿನ್ನೂ ಸತ್ತಿಲ್ಲ, ಬದುಕುತ್ತಿದ್ದೇನೆ!

ಸೋಮವಾರ, ಜುಲೈ 21, 2008

ಕಟಕಟೆ ಕೋಣೆಯಾದರೆ


ಕಟಕಟೆ
ಕೋಣೆಯಾದರೆ
ಸಬೂಬುಗಳು
ಸಾಬೀತಾಗುವುದಿಲ್ಲ

ಆಡಿಸಿದ ಗೋಣು
ಗೇಣಿ ಕೇಳುತ್ತದೆ
ಒಂಟಿ ದಸಕತ್ತಿಗೆ
ಬೆಲೆಯಿಲ್ಲ

ಕಾಂಕ್ರೀಟು
ತೋಳುಗಳಲ್ಲಿ ದಿವ್ಯಸನ್ನಿಧಿ
ನಲುಗಿದರೆ
ಉಸಿರು ಹುಟ್ಟುವುದಿಲ್ಲ

ಮಂಗಳವಾರ, ಜುಲೈ 1, 2008

ನೆನಪಾದಳು ಶಾಕುಂತಲೆ

ನೆನಪಾದಳು ಶಾಕುಂತಲೆ
ಅರವತ್ತರ ಹರೆಯದಲ್ಲಿ
ಎಲ್ಲಿರುವಳು ಆಕೆಯೀಗ?

ತೆರಳಬೇಕೆಂದಿದ್ದೇನೆ ಅತ್ತ
ತಿರುಕನಂತೆ, ಅಲೆಮಾರಿಯಂತೆ


ಆವತ್ತು ಹಸಿ-ಬಿಸಿ ಬಯಕೆಗಳಿದ್ದವು
ಬಿಸಿಯುಸಿರು ಮೊಗವ ತಾಕಿದಾಗ ಸಂತಸವಾಗುತ್ತಿತ್ತು
ಆ ಮುಂಗುರುಳ ಚೆಲುವೆಯ ಜೊತೆ
ಅದೆಷ್ಟು ಕಡೆ ಅಡ್ಡಾಡಿದ್ದೆ ನಾನು
ನಿದ್ದೆಯಿಲ್ಲದ ರಾತ್ರಿಗಳು, ಮನದ ತುಂಬಾ ಕನಸುಗಳು
ಗಾಂಧಿ, ಲೋಹಿಯಾ, ಬುದ್ಧ ಯಾರೂ ರುಚಿಸುತ್ತಿರಲಿಲ್ಲ
ಕೂತಾಗ-ನಿಂತಾಗ ಆಕೆ "ನೆನಪೇ" ಆಗುತ್ತಿದ್ದಳು

ಅರಳಿರುವ ಹೂವು
ನೀಲ-ನಿರ್ಮಲ ಆಕಾಶ
ಎಲ್ಲವನ್ನೂ ತೋರಿಸುತ್ತಿದ್ದಳು ಆಕೆ
ಆಶಾವಾದಿಯಾಗಬೇಕಂತೆ
ಬಾಡಿ ಹೋದ ಹೂ-ಬಳ್ಳಿ, ಕಪ್ಪನೆಯ ಮೋಡ
ಆಕೆಗೆ ಕಾಣುತ್ತಿರಲಿಲ್ಲ
ತಲೆ ತುಂಬಾ ಸಮಾಜ, ತತ್ವ, ಆದರ್ಶ
ಎನ್ನುತ್ತಿದ್ದವಳು ಕೊನೆಗೆ ಮಾಡಿದ್ದಾದರೂ ಏನು?
ಸುಂದರ-ಸುಮಧುರ ವಂಚನೆ

ಅದೆಷ್ಟು ದಿನ ಸಿಗರೇಟುಗಳ ಸುಡಲಿ
ಬೆಚ್ಚಗಿನ ಹೊಗೆ ಕೆಂಡವ ಆರಿಸಿತೇ?
ವಿಸ್ಕಿಯ ಗುಟುಕು ಗಂಟಲಿನಿಂದ ಕೆಳಗಿಳಿಯುತ್ತಿಲ್ಲ
ಒಡಲು ಸುಟ್ಟು ಹೋಗಿದೆ
ವಯಸ್ಸು, ದೇಹ, ಎರಡೂ ಕರಗುತ್ತಿದೆ
ಮನಸ್ಸೂ ಕೂಡಾ

ಸಜ್ಜನನಾಗಬೇಕೆಂದಿದ್ದೇನೆ, ನಿರ್ಮಲನಾಗಬೇಕೆಂದಿದ್ದೇನೆ
ಬಿರಿದ ತುಟಿಗಳು, ಉರಿದ ಒಡಲು
ಉಫ್......ಸಾಕಪ್ಪಾ ಸಾಕು
ನೆಮ್ಮದಿ ಬೇಕಾಗಿದೆ, ಚಿರ ವಿಶ್ರಾಂತಿಯೆಡೆಗೆ ಸಾಗಬೇಕಿದೆ
ಆದರೂ ಆಕೆ ನೆನಪಾಗುತ್ತಾಳೆ
ಕಳೆದು ಹೋದ ಮಧುರಭಾವದಂತೆ, ಸ್ಮಾರಕದಂತೆ

(ಬೆಂಗಳೂರಿನ ಕ್ರೈಸ್ಟ್ ಕಾಲೇಜು 2005-06 ಸಾಲಿನಲ್ಲಿ ನಡೆಸಿದ ದ.ರಾ.ಬೇಂದ್ರೆ ಸ್ಮ್ರತಿ ಅಂತರ್ ಕಾಲೇಜು ಕವನ ಸ್ಪರ್ಧೆಯಲ್ಲಿ ಬಹುಮಾನಿತ ಕವನ)

ಬುಧವಾರ, ಜೂನ್ 18, 2008

ಕಾಮನಬಿಲ್ಲಿನ ಕಣ್ಣುಗಳಿಗೆ



ಯಾಕೋ ನಿನ್ನ
ಕಣ್ಣುಗಳು
ಹೊಸ ಕಾಮನಬಿಲ್ಲನ್ನು
ಹುಟ್ಟಿಸುತ್ತವೆ
ನನಗೊಂದು
ಹೊಸ ದಿಗಂತ
ತೆರೆದುಕೊಳ್ಳುತ್ತದೆ
ಮನಸ್ಸು ಹಕ್ಕಿಯಾಗಿ
ಕಾಮನಬಿಲ್ಲನ್ನು
ಚುಂಬಿಸಿ
ಪುಳಕಗೊಳ್ಳುತ್ತದೆ

ದಿನವೂ
ಸಿಗುತ್ತಿರು ಹೀಗೆ
ಕಾಮನಬಿಲ್ಲಿನ
ಮೆರವಣಿಗೆಯಲ್ಲಿ
ಪ್ರತಿ ನಿತ್ಯ
ಕಳೆದು ಹೋಗುವ
ಪುಣ್ಯವನ್ನು ನನಗೆ
ದಯಪಾಲಿಸು
!

ನಡೆದದ್ದು ಇಷ್ಟೇ

ಅದು ನಡೆದು
ಎಷ್ಟು ದಿನಗಳಾಯಿತೋ
ವರ್ಷಗಳಾಯಿತೋ


ಕೋಣೆ ಒಳಗೆ ನಾನಿದ್ದೆ
ಕತ್ತಲು ಚಾಚಿತ್ತು
ಯಾರೋ ಗೋಡೆಯಲ್ಲಿದ್ದ
ಕಿಟಕಿ ಗಾತ್ರದ ಬಿರುಕು
ಮುಚ್ಚುತ್ತಿದ್ದರು


ನಾನು ದಮ್ಮಯ್ಯಗುಡ್ಡೆ ಬಿದ್ದೆ
ಕೇಳಿಸಿರಬೇಕು ಅವರಿಗೆ...
ಆದರೂ ಅವರ್ಯಾರೂ
ಕಾಣುತ್ತಿರಲಿಲ್ಲ ನನಗೆ
ಕೇಳುತ್ತಿದ್ದದ್ದು ತಾಪಿಯ

ಕರ್ಕಶ ಶಬ್ದ, ಸಿಮೆಂಟಿನ ಅಮಲು
ಏರುತ್ತಿದ್ದ ಇಟ್ಟಿಗೆಗಳ
ಸಾಲು ಮೆರವಣಿಗೆ
ಅವರೆಲ್ಲಾ ಬೆಳಕಿನಲ್ಲಿದ್ದರು


ಮೊದ ಮೊದಲೆಲ್ಲಾ ಕಿಟಕಿ ಕಿಂಡಿ
ಮುಚ್ಚುತ್ತಾರೆ ಅಂದುಕೊಂಡಿದ್ದೆ
ದಿನಗಳು ಉರುಳಿದರೂ
ಕೆಲಸ ನಿಲ್ಲಲಿಲ್ಲ
ಕೊನೆ ಕೊನೆಗೆ ಹೊರಗೂ
ಕತ್ತಲಾಗುತ್ತಾ ಬಂತು


ನಡೆದದ್ದು ಇಷ್ಟೇ

ಶುಕ್ರವಾರ, ಜೂನ್ 6, 2008

ನಿತ್ಯಮುತ್ತೈದೆ

ನಾನು ನಿತ್ಯಮುತ್ತೈದೆ
ಚಿರಯೌವ್ವನೆ, ಬತ್ತದ ದೇವಯಾನಿ
ಸೊಂಟದ ಬದುವಿನಲ್ಲಿ
ಉದ್ದುದ್ದ ನೆರಿಗೆಗಳು
ಸರಸರನೆ ಸರಿಯೋ ಸೆರಗು
ಎಲ್ಲರಿಗೂ ಮಾದಕ ತಾಜಮಹಲ್ ನಾನಂತೆ


ಬಿಳಿ ಬಣ್ಣದ ಸೀರೆಗೆ
ಮನಸೋತು ಬಣ್ಣ ಹಚ್ಚಲು
ಓಡಿಹೋದ ಆ ಅಪ್ಪ
ಲೆಫ್ಟು, ರೈಟು ಸಿದ್ಧಾಂತಗಳೆನ್ನುತ್ತಾ
ಕರಗಿ ಹೋದ ಅಣ್ಣ
ಇಂತಹ ಫುಟ್ಪಾತಿನ ವಂಚಕರ
ನಡುವೆ ನಾನು, ತಾಯಿ ಇಬ್ಬರೇ ಉಳಿದದ್ದು ಕೊನೆಗೆ


ಬದುಕಿದ್ದಷ್ಟೂ ದಿನ ಆಕೆ ಸಲಹಿದಳು
ಸಂತಾಪದ ಹೆಸರಲ್ಲಿ ದೇಹ ತುಂಬಾ
ಮುತ್ತಿಕೊಂಡವು ಬೀದಿ ನಾಯಿಗಳು
ಅರೆಬೆಂದ ರೊಟ್ಟಿಯೆಂದರೆ
ಚಪ್ಪರಿಸಿ ತಿನ್ನುವ ಆಸೆ ಅವಕ್ಕೆ


ಈಗ ಉಳಿದಿರುವುದು
ಮಾಸಲು ಬಣ್ಣದ ಕೋಣೆ,
ಕಿರ ಕಿರ ಶಬ್ದದ ಬೀಟೆ ಮಂಚ
ಹಸಿರು ದೀಪ, ನಿಟ್ಟುಸಿರು ಮಾತ್ರ
ಕತ್ತಲೆಯೊಳಗೆ ಯಾರೋ ಬರುತ್ತಾನೆ
ಸರಸ, ಸಲ್ಲಾಪ, ಪ್ರೀತಿಯ ಕಚಗುಳಿ
ಆತನಿಗೆ ಬೇಡ
ದೇಹ ನೀಡಬೇಕು ಅಷ್ಟೇ
ಭಾವನೆಗಳೆಲ್ಲಾ ಬೆತ್ತಲೆ
ಉರುಳಾಡುತ್ತಾನೆ, ಹೊರಳಾಡುತ್ತಾನೆ
ಖುಷಿಯಾದರೆ ನಾಲ್ಕೈದು ನೋಟು ಎಸೆಯುತ್ತಾನೆ
"ವಿಶ್ವದ ಎಂಟನೇ ಅದ್ಭುತವಂತೆ" ಆತನಿಗೆ ನಾನು
ಎದ್ದಾಗ ಬೆನ್ನೆಲ್ಲಾ ಹುರಿ


ರೌರವ ನರಕದಲ್ಲಿದ್ದರೂ
ಮತ್ತೆ ಮುಡಿಯಬೇಕು ಮಲ್ಲಿಗೆ
ಆಗ ಬರುತ್ತಾನೆ ಮತ್ತೊಬ್ಬ
ಕಣ್ಣ ತುಂಬಾ ಮಾದಕತೆ ತುಂಬಬೇಕು
ಆತನಿಗೂ ನಾನು "ವಿಶ್ವದ ಎಂಟನೇ ಅದ್ಭುತ"!


ಎಲ್ಲರೂ ಬರುತ್ತಾರೆ
ಆಗೊಮ್ಮೆ-ಈಗೊಮ್ಮೆ ನನ್ನಲ್ಲಿಗೆ
ಬಂಧಗಳು ಸ್ವರ್ಗದಲ್ಲಿ ಬೆಸೆಯುತ್ತವೆ
ಅಂತಾರೆ ಹಿರಿಯರು
ಆದರೂ ನನ್ನವನೆನ್ನುವವನು
ಯಾಕೆ ಬರುವುದಿಲ್ಲ, ಒಮ್ಮೆಯೂ.....?


(ಬೆಂಗಳೂರಿನ ಕ್ರೈಸ್ಟ್ ಕಾಲೇಜು 2006-07 ಸಾಲಿನಲ್ಲಿ ನಡೆಸಿದ ದ.ರಾ.ಬೇಂದ್ರೆ ಸ್ಮ್ರತಿ ಅಂತರ್ ಕಾಲೇಜು ಕವನ ಸ್ಪರ್ಧೆಯಲ್ಲಿ ಬಹುಮಾನಿತ ಕವನ)

ಶುಕ್ರವಾರ, ಏಪ್ರಿಲ್ 4, 2008

ಸತ್ತು ಅಭ್ಯಾಸವಾದವರೊಂದಿಗೆ ಸಂಭಾಷಣೆ

ಸತ್ತು ಅಭ್ಯಾಸ

ಇದ್ದವರು ಯಾರಾದರೂ

ಇದ್ದರೆ ಕರೆಯಿರಿ...

ನನಗೆ ಅವರ

ಜೊತೆ ಮಾತನಾಡಬೇಕು




ಕೇಳಲು ಪ್ರಶ್ನೆಗಳಿವೆ

ಹಲವು

ಹೇಗೆ ಅಭ್ಯಾಸ
ಮಾಡಿಕೊಂಡಿರಿ ಸಾಯಲು

ಸತ್ತು ಸತ್ತು

ಸಾವಿಗೂ ಅಭ್ಯಾಸವಾಗಿದೆಯಾ





ನೀವು ಅನಿವಾರ್ಯವಾಗಿ

ಸತ್ತಿರೋ

ಅನುಭವ ಗಳಿಸಲು

ಸತ್ತಿರೋ

ಅಥವಾ ಅನುಭವಿಸಿ

ಸತ್ತಿರೋ

ಸಾವಿನಲ್ಲಿ ಎಷ್ಟು ವಿಧ

ಯಾವುದು ಪ್ರಮುಖ

ಯಾವುದು ಗೌಣ





ಅದೆಲ್ಲಾ 'ಸಾಯಲಿ' ಬಿಡಿ

ಹೇಗೆ ಸತ್ತರೆ ಒಳ್ಳೆಯದು

ಅನ್ನೋದನ್ನ ಮೊದಲು

ನನಗೆ ತಿಳಿಸಿ!

ಭಾನುವಾರ, ಮಾರ್ಚ್ 9, 2008

ಬೊಗಸೆ ಕಂಗಳಿಗೊಂದು ಬಿನ್ನಹ

ನನಗೆ
ಉತ್ತರಗಳು ಬೇಡ
ಪ್ರಶ್ನೆಗಳಲ್ಲೇ
ಬದುಕಿ ಗೊತ್ತಿದೆ



ಪ್ರತೀ ಪ್ರಶ್ನೆಯು
ಇರಿದಾಗ
ಕುಟುಕಿದಾಗ
ನರಳಿ ಗೊತ್ತಿದೆ



ಬೀದಿ ದೀಪದ
ಬೆಳಕಲ್ಲಿ
ಪ್ರಶ್ನೆಗಳಲ್ಲೇ
ಮನೆ ಕಟ್ಟಿ
ಅಭ್ಯಾಸವಾಗಿದೆ



ಪ್ರತೀ ಮುಂಜಾನೆ
ನೆಲ ಸಾರಿಸಿ
ರಂಗವಲ್ಲಿ ಚುಕ್ಕಿ ಇಡುತ್ತಿ
ಎಂದು ಹಂಬಲಿಸಿ
ಮುಸ್ಸಂಜೆ ಹತ್ತಿರಾಗುತ್ತಿದೆ
ಮತ್ತೇಕೆ ಬೇಕು ಹೇಳು
ನಿನ್ನ ಉತ್ತರದ ಚಿ()ತೆ?



ಪ್ರಶ್ನೆಗಳ
ಶೂನ್ಯದಲ್ಲಿ
ವೃಂದಾವನ ಕಟ್ಟಲು
ಗೊತ್ತಿರುವ ನನಗೆ
ನೀನಿಲ್ಲದೆ ಬದುಕಬಹುದು
ಆದರೆ ನಿನ್ನ ಪ್ರೀತಿ
ಹುಟ್ಟಿಸಿದ ಪ್ರಶ್ನೆ ಇಲ್ಲದೆ
ಬದುಕಲು ಗೊತ್ತಿಲ್ಲ!




(ಬೆಂಗಳೂರಿನಕ್ರೈಸ್ಟ್ ಕಾಲೇಜು ನಡೆಸಿದ 2007-08ನೇ ಸಾಲಿನ ಡಾ..ರಾ.ಬೇಂದ್ರೆ ಸ್ಮೃತಿ ಅಂತರ್ಕಾಲೇಜು ಕವನ ಸ್ಪರ್ಧೆಯಲ್ಲಿ ಬಹುಮಾನಿತ ಕವನ)

ಸೋಮವಾರ, ಮಾರ್ಚ್ 3, 2008

'ಬೆಂದ'ಕಾಳೂರಿನ ಸ್ವಗತ

ಮಾತು

ಕಡಿಮೆ ಮಾಡು





ಕಂಪ್ಯೂಟರ್ರು ಕುಟ್ಟುತ್ತಾ


ಕುಟ್ಟುತ್ತಾ ವೈರಸ್ಸು

ಶಾಪಿಂಗು ಮಾಲುಗಳಲಿ

ಬಿಕರಿ ಎಂಟಾಣೆಗೆ

ತಪ್ಪಿದರೆ ಒಂದೂವರೆಗೆ





ಫುಟ್ಪಾತು ರಾತ್ರಿಗಳಲಿ


ನಗುವ ಎದೆ ತೆರೆದ ಸುಂದ್ರಿ

ಟಾಕೀಸಿನ ಮೂರಿ ಟಾಯ್ಲೆಟ್ಟು

ಮಾತು ಮಾತಿಗೂ ಚೌಕಾಸಿ'

ಆತನೊಬ್ಬ ಬಿಕ್ನಾಸಿ'

ಗೊಣಗುವ ಹಣ್ಣಿನ ಹುಡುಗಿ

ಇಲ್ಲ ಟು ಲೆಟ್ ಬೋರ್ಡ್

ಮನೆ ಮುಂದೆ ಮಾತ್ರ

'ನಾಯಿ ಇದೆ ಎಚ್ಚರಿಕೆ'!!





ಸಿಟಿ ಬಸ್ಸಲ್ಲಿ ಕಾಲು ತಾಕಿದ್ರೆ


ನಿನ್ನಮ್ಮನ್........ ಕಾಣಲ್ವಾ ಕಣ್ಣು

ಮುಂದಿನ ಸೀಟಲ್ಲಿ

ಹ್ಯಾರಿಪಾಟರ್ ಓದೋ ಕಾರ್ಮಲ್ ಪೆಣ್ಣು!!

ಟೈಮ್ಸ್ ನೋಡಿದರೆ

'ಸಿಟಿ ಬೆಳೆಯುತ್ತಿದೆ,

ನಾರಾಯಣ ಮೂರ್ತಿ ಗರಂ,

ಗೌಡ ಖತಂ,

ಭೂಲ್ ಭುಲಯ್ಯಾ- ನಾಟ್ ಎ ವರ್ತಿ

ಟು ವಾಚ್-ನಾನ್`ಸೆನ್ಸ್'!!

ಕಾರಲ್ಲಿ ಕೂತರೆ

ಎಫೆಮ್ಮು-ಸಖತ್ ಹಾಟ್ ಮಗಾ!





ಅದಕ್ಕೇ ಹೇಳಿದ್ದು


ಮಾತು ಕಡಿಮೆ ಮಾಡು

ಸೋಮವಾರ, ಫೆಬ್ರವರಿ 25, 2008

ಒಂದು ವೃತ್ತಾಂತ


ವೃತ್ತದ ಬಳಿ ಬಂದು ನಿಂತೆ
ಭೋರೋ ಅನ್ನುವ ಮಳೆ
ನಾಲ್ಕಾರು ಕಡೆ ತೆರಳಲು ದಾರಿ
ಎಲ್ಲಿಗೆ ಹೋಗಬೇಕು?



ತೋಯುವ ದೇಹದಲಿ
ನಡುಕ ಪ್ರಾರಂಭವಾಯಿತು
ರಕ್ಕಸ ಗುಡುಗು, ಸಿಡಿಲು
ನಾಲ್ಕೂ ಹಾದಿಯಿಂದ
ಒಂದೊಂದು ಶಕ್ತಿ ಎಳೆಯುತ್ತಿತ್ತು

ಮಳೆ ನಿಂತಿತು
ಎರಡು ರಸ್ತೆಗಳು
ಕೆಸರಿನಿಂದ ತುಂಬಿದವು
ಮತ್ತೆರಡು ಶುಭ್ರ
ಎಲ್ಲಿ ದಾರಿ ಹುಡುಕುವುದು
ಕೆಸರ ರಸ್ತೆ ಆಚೆ
ಕಮಲವಿದೆಯೇ?
ತಿಳಿ ಬಣ್ಣದ ರಸ್ತೆ
ದಾಟಿದರೆ ಕೆಸರಿದೆಯೇ?

ಮತ್ತೆ ಮಳೆ
ಸುರಿಯುತ್ತದೆಯೇ
ಎಂದು ಕಾದು ಕುಳಿತೆ!

ಶುಕ್ರವಾರ, ಫೆಬ್ರವರಿ 22, 2008

3 ಸಾಲಿನ ವಿಷಾದಗಳು


ಈಗೀಗ

ಕವನಗಳೇ

ಹುಟ್ಟುವುದಿಲ್ಲ



ಸಂಗೀತದ

ಕಡಲಲಿ

ಪಲ್ಲವಿ ಪಲುಕಿಲ್ಲ



ಮಳೆ ಬಿದ್ದರೆ

ಗಡಗಡ

ಚಳಿ ಮಾತ್ರ



ರಾತ್ರಿಯ ಮೌನ

ಬೊಗಸೆಯಲಿ

ಬೆಂದ ಹಕ್ಕಿ



ಮುದುಡುವ

ಹೂಗಳೇ

ಕಣ್ಣಿಗೆ ಕನಸು