ಮಂಗಳವಾರ, ಜನವರಿ 11, 2011

ಗುರುತೇ ಇರದ ಸಾಲುಗಳು

1
ಜರೂರತ್ತು
ಜವಾಬ್ದಾರಿ
ಜಮಾನ
ಜನ
ಜಾತ್ರೆ
ಜೈ ಹೋ

2
ಮಳೆಯ
ಮೊದಲ ಹನಿಗೆ
ದನಿಗೂಡಿಸಿ ಹಾಡಿದ
ಬೀಜದಲ್ಲಿ ಬದುಕು

3
ಮುತ್ತೆಲ್ಲಾ
ಮೌನವಾಗಿ
ಮೌನ ಬಸಿರಾಗಿ
ಮುಂಜಾನೆಯಾಗುವ ಹೊತ್ತು

4
ಛಾಯೆ ಬಿಟ್ಟು ಹೋದ ಚಿತ್ರ
ಬಿಸಿಲಲ್ಲೇ ಮನೆ ಮಾಡಿತು.

5
ತುಟಿಯಲ್ಲಿ ಉಳಿದ ಪ್ರಶ್ನೆಗಳು
ಉತ್ತರಗಳಿಗೆ ಚುಂಬಿಸುವ ಮನಸ್ಸಿಲ್ಲ

6
ಹೇಳಿ ಹೋಗದ ಕಾರಣ
ಒಡೆದ ಬಿಂಬವ ಸೂಸುವ ಕನ್ನಡಿ

7
ಅವಳ ತುಟಿಯಂಚಿನ ನಗೆಯಲ್ಲಿ
ಹುಟ್ಟಿದ ಯೌವನಕ್ಕೆ
ವಯಸ್ಸಿಲ್ಲ.

8
ಮುಟ್ಟಿದರೆ ಮುನಿಯುತ್ತಾಳೆ
ದೂರ ಸರಿದರೆ ತೆಕ್ಕೆಗೆಳೆಯುತ್ತಾಳೆ
ಹರೆಯಕ್ಕೆ ಉಸಿರಿದೆ
ಅನ್ನೋದೇ ಮರೆತು ಹೋಗಿದೆ

9
ಅವಳ ಕೈಯಲ್ಲಿ
ಉಳಿದು ಹೋದ
ರಂಗೋಲಿ ಹುಡಿಯಲ್ಲಿ
ನನ್ನ ಮದರಂಗಿ

10
ಕೊಡೆಯ ತುದಿಯಿಂದ
ಕವಲೊಡೆದ ನೀರ ಹನಿಗಳಲ್ಲಿ
ಸಾವಿರ ಬಿಸಿ ನಿಟ್ಟುಸಿರು

11
ಅವಳ ಹೆಜ್ಜೆಯ ಗುರುತಿನಡಿ
ಹಾರಿದ ಗಾಳಿಪಟಕ್ಕೆ
ನೆನಪಿನ ಹಂಗಿಲ್ಲ!


12
ನಿನ್ನ ತುಟಿಯ
ಜೇನ ಹೀರುವ ಹೊತ್ತಿಗೆ
ನಾನು
ಗುಲಾಬಿಯ ಪಕಳೆ

13
ನಿನ್ನ ಕಂಗಳಲ್ಲಿ
ಅರಳುತ್ತಿರುವ
ಹೂವಿಗೆ
ನನ್ನ
ಪರಿಮಳ

14
ಮುಖ ಮೂಕ!

15
ಪ್ರಶ್ನೆಗಳಿರುವುದೇ ಸುಮ್ಮನೆ!

16
ಒಪ್ಪಿಗೆ ಒಲವಲ್ಲ
ನಗು ನಲಿವಲ್ಲ

17
ಕರುಣೆ ಇರಲಿ!

18
ದನಿ ನಡುಗುತ್ತಾ
ಕಣ್ಣು ಜಲಪಾತವಾಗುವ ಹೊತ್ತಿಗೆ
ನೀನು ನೆನಪಿನ ಹಂಗು ತೊರೆದ
ಸಮುದ್ರ


19
ಬೆಟ್ಟದ ಮೇಲೆ
ನಿಂತ ಒಂಟಿ ಶವಕ್ಕೆ
ಹಾರಾಡುವ
ಉಸಿರು

20
ನೋವು
ಅಭ್ಯಾಸವಾದರೆ
ಜೇನ
ಹನಿ
ಕಹಿ

21
ಪಟಪಟಿಸುವ
ನಿನ್ನ
ಸೀರೆ ಸೆರಗೊಳಗೆ
ನನ್ನ
ಬೆವರು ಹಸಿರು

22
ಅವಳ
ಮುಖದ
ನೆರಿಗೆಗಳಲ್ಲಿ
ವಿರಮಿಸದ
ನಾನು

23
ಎಲ್ಲಾ
ಕಳೆದ ಮೇಲೆ
ಉಳಿದಿರುವುದರ
ಲೆಕ್ಕ
ಏತಕ್ಕೆ?

24
ಕಣ್ಣ
ಒಳಗೆ ಬಿದ್ದ
ಕಾಮನಬಿಲ್ಲು
ನೋವುಗಳೆಲ್ಲಾ
ನಕ್ಕ
ಕ್ಷಣ

25
ಮುಂಗುರುಳ
ತುದಿಯಲ್ಲಿ
ಅಂಟಿದ
ವಿಶಾದಕ್ಕೆ
ಗುರುತೇ ಇರದ
ಮುಖವಾಡ

26
ಕಾಲವಾಗಿರುವ
ಸತ್ಯಗಳ
ಗೋರಿಯ ಮೇಲೆ
ನಾಳೆಯ ಹಾಡು

27
ಮೊಳಕೆ
ಮರವಾಗುವ ಹೊತ್ತಿಗೆ
ಬಾಳ ಮುಸ್ಸಂಜೆಯಲ್ಲಿ
ಅವಳು.

4 ಕಾಮೆಂಟ್‌ಗಳು:

Narayan Bhat ಹೇಳಿದರು...

ಗಗನದಲಿ ಸಾಲು-ಸಾಲಾಗಿ ವಿಹರಿಸುವ ಪಕ್ಷಿಗಳಂತೆ...ಪ್ರತಿ ಸಾಲುಗಳೂ ಮುದ ನೀಡುತ್ತವೆ.

ಕನಸು.. ಹೇಳಿದರು...

ಪ್ರತಿಯೊಂದೂ ಹೈಕುಗಳಂತೆ, ಹನಿಗವನಗಳಂತೆ ಭಾಸವಾಗುತ್ತದೆ. ಸೊಗಸಾಗಿವೆ , ಮನಸಿಗೆ ಮುದ ನೀಡುತ್ತವೆ.

ಅನಾಮಧೇಯ ಹೇಳಿದರು...

ಕೊಡೆಯ ತುದಿಯಿಂದ
ಕವಲೊಡೆದ ನೀರ ಹನಿಗಳಲ್ಲಿ
ಸಾವಿರ ಬಿಸಿ ನಿಟ್ಟುಸಿರು

adbhuta kalpane

Ashwini hosangadi ಹೇಳಿದರು...

oppige olavalla
Nagu nalivalla...

Estu dinagalinda hididitide e salugalla? Nice lines with meaning...