ಶನಿವಾರ, ಸೆಪ್ಟೆಂಬರ್ 27, 2008

ದೇವರು ಬದುಕುತ್ತಾ ಸಾಯುತ್ತಾ...(ಪುಟಾಣಿ ಕತೆ-7)

ದೇವರು ಸತ್ತು ಹೋದರು ಅಂತ ಸುದ್ದಿ ಸಿಕ್ಕಿತು.

ಸಾಲಿಗ್ರಮಕ್ಕೆ ಹಾಲು ಎರೆದು ಸ್ವಚ್ಚಗೊಳಿಸುತ್ತಿದ್ದವ ಮಡಿ ಪಂಚೆಯಲ್ಲಿ ಓಡಿ ಹೋದೆ. ಅದಾಗಲೇ 24*7 ಚಾನೆಲ್ಗಳೆಲ್ಲಾ ಬ್ರೇಕಿಂಗ್ ನ್ಯೂಸ್ನಲ್ಲಿ ಈ ಸುದ್ದಿಯನ್ನು ಚ್ಯೂಯಿಂಗಮ್ಮಿನಂತೆ ಎಳೆಯಲು ಶುರು ಮಾಡಿದ್ದರು.

ದೇವರು ಇಷ್ಟು ಬೇಗ ಸಾಯಲು ಕಾರಣವೇನು?
ಮೊದಲ ನೋಟಕ್ಕೆ ಹಾರ್ಟ್ ಅಟ್ಯಾಕ್ ತರಹ ಕಾಣುತ್ತೆ. ಆದರೆ ಹೃದಯ ನಿಂತು ಹೋಗುವ ವಯಸ್ಸಾ ದೇವರದ್ದು.
ದೇವ್ರೂ ಕೂಡಾ ಸಾಯ್ತಾರೆ ಅಂದ್ರೆ ಅಶ್ಚರ್ಯ.

ಆದರೆ ಪೋಲೀಸ್ ಇಲಾಖೆ ಈ ಘಟನೆಯನ್ನು ಆತ್ಮಹತ್ಯೆಯೋ, ಕೊಲೆಯೋ, ಸಹಜ ಸಾವೋ ಎಂಬುದನ್ನು ಇನ್ನೂ ದೃಢಪಡಿಸಿಲ್ಲ.

ಎಲ್ಲರೂ ಓಡೋಡಿ ಬಂದರು. ಸತ್ತ ದೇವರನ್ನು ನೋಡಲು.
ಹೆಣವನ್ನು ಕಂಡಾಗ ಎಲ್ಲರಿಗೂ ಒಮ್ಮೆ ಅವರವರ ದೇವರ ಮುಖ ಕಂಡಿತು. ಮತ್ತೊಮ್ಮೆ ಹೆಣ ತಮ್ಮ ದೇವರನ್ನು ಹೋಲುತ್ತಿಲ್ಲವಲ್ಲ ಅಂತ ಅನ್ನಿಸಲು ಶುರುವಾಯ್ತು
.
ಇವರೆಲ್ಲರ ಮಧ್ಯೆ ದೇವರು ಬದುಕುತ್ತಾ ಸಾಯುತ್ತಾ, ಸಾಯುತ್ತಾ ಬದುಕುತ್ತಾ.....

ದೇವರ ಹೆಣ ಕೊಳೆಯಲು ಆರಂಭವಾಯ್ತು.

ಮಂಗಳವಾರ, ಸೆಪ್ಟೆಂಬರ್ 23, 2008

ಕೂಡಿಸುವುದನ್ನೇ ಮರೆತು ಹೋದ...(ಪುಟಾಣಿ ಕತೆ-6)

ಪವನನಿಗೆ ಕೂಡಿಸಿ ಮಾತ್ರ ಗೊತ್ತಿತ್ತು.
ಕಳೆದು ಗೊತ್ತಿರಲಿಲ್ಲ. ಗುಣಿಸಿ, ಭಾಗಿಸಿ ಗೊತ್ತಿರಲಿಲ್ಲ.

2+2 ಅಂದ್ರೆ ಫೋರ್ ಅನ್ನುತ್ತಿದ್ದ. 18+6 ಅಂದ್ರೆ 24 ಎನ್ನುವುದು ಅವನಿಗೆ ಸರಿಯಾಗಿ ಗೊತ್ತಿತ್ತು. 2-2, 12/6, 8*3 ಎಷ್ಟು ಅಂದ್ರೆ ಅವನಿಗೆ ಬಿಲ್ ಕುಲ್ ಹೊಳೆಯುತ್ತಿರಲಿಲ್ಲ.

ಪವನ ಕೂಡಿಸಿಯೇ ಎಸ್.ಎಸ್.ಎಲ್.ಸಿ ಪಾಸಾದದ್ದು. ಕೂಡಿಸುವುದರಲ್ಲಿ ಹಿಂದೆ ಅನ್ನೋ ಕಾರಣಕ್ಕೇನೇ ನಾಲ್ಕನೇ ಕ್ರಾಸಿನ ನಳಿನಳ ಪ್ರಪೋಸಲ್ ತಿರಸ್ಕರಿಸಿದ್ದು. ಅವನಿಗೆ ಕ್ರಿಕೇಟ್ ಇಷ್ಟ. ಕಾರಣ ಸರಳ. ಅಲ್ಲಿ ರನ್ ಕೂಡಿಸುವುದಷ್ಟೇ ಕೆಲಸ.

ಹೀಗೆ ಪವನ ಕೂಡಿಸುತ್ತಾ ಕೂಡಿಸುತ್ತಾ ದೊಡ್ಡವನಾದ...ಮೀಸೆ ಮೂಡಿತು...ನರಗಳು ಜಿವ್ವೆಂದವು...ಅಕ್ಷರಗಳನ್ನ ಕೂಡಿಸುತ್ತಾ ಹೋದ...ಕತೆಯಾಯಿತು...ಕಾದಂಬರಿಯಾಯಿತು
...ಹೆಸರು ಬಂತು...ಬಿರುದು ಬಂತು...ಪುಸ್ತಕವೆಲ್ಲ ಖರ್ಚಾಗಿ ಹೋಯಿತು...ಮರು ಮುದ್ರಣಕ್ಕೆ ತಯಾರಾಯಿತು.

ಒಂದು ದಿನ ಆತನಿಗೆ ಕಳೆಯುವುದು ಹೇಗೆ, ಗುಣಿಸಿ ಭಾಗಿಸುವುದು ಹೇಗೆ ಅನ್ನುವುದು ಗೊತ್ತಾಗಿ ಹೋಯಿತು.

ಆನಂತರ ಪವನ ಕೂಡಿಸುವುದನ್ನೇ ಮರೆತು ಹೋದ!!

ಗುರುವಾರ, ಸೆಪ್ಟೆಂಬರ್ 18, 2008

ಇವತ್ತು ಕಾಯೋದು ಒಂದರ್ಥದಲ್ಲಿ ಶಾಪ!

ಇವತ್ತು ಕಾಯೋದು ಒಂದರ್ಥದಲ್ಲಿ ಶಾಪ!

ಆಕೆ ಬರುತ್ತಾಳೆ ಅಂತ ಆತ ಕಾಯುತ್ತಾ ಕೂರುವುದು, ಆತ ಬರುತ್ತಾನೆ ಎಂದು ಆಕೆ ಮಲ್ಲಿಗೆ ಮೊಗ್ಗು ಕಟ್ಟುತ್ತಾ ಕನವರಿಸುವುದು ಈಗಂತೂ ನೆನಪು ಮಾತ್ರ.

ದುಶ್ಯಂತನ ದಾರಿ ಕಾದ ಶಾಕುಂತಲೆ, ರಾಮನಿಗಾಗಿ ಕಾಯುತ್ತಾ ಹಣ್ಣಾದ ಶಬರಿ ಎಲ್ಲರೂ ಮರೆತು ಹೋಗುವಷ್ಟು ನಾವು ಬೆಳೆದಿದ್ದೇವೆ. ಕಾಯುತ್ತಾ ಕಾಯುತ್ತಾ ಮಾಗುವುದು, ಬಾಗುವುದು. ಸಿಟ್ಟು, ಸೆಡವು ಎಲ್ಲವನ್ನು ಉಳಿಸಿಕೊಳ್ಳುತ್ತಾ, ಕಳೆದುಕೊಳ್ಳುತ್ತಾ ದಿನದೂಡುವುದು ಎನ್ನುವುದರಲ್ಲಿ ನಮಗೆ ಹೆಚ್ಚು ಆಸಕ್ತಿ ಉಳಿದಂತಿಲ್ಲ.

ಇದನ್ನೆಲ್ಲ ಇಲ್ಲಿ ಯಾಕೆ ಹೇಳಬೇಕಾಯಿತೆಂದರೆ ಮೊನ್ನೆ ಮೊನ್ನೆ ಗೆಳೆಯನೊಬ್ಬ ಯಾವುದೋ ನಂಬರಿಗೆ ಮೆಸೇಜು ಫಾರ್ವರ್ಡ್ ಮಾಡುತ್ತಿದ್ದ. "ಮೆಸೇಜ್ ಸೆಂಟ್" ಅಂತ ಮೊಬೈಲ್ ತೋರಿಸಿತು. ಆಗಲೇ ಡೆಲಿವರ್ಡ್ ಅಂತ ತೋರಿಸಲೇ ಇಲ್ಲ. ಪೆಂಡಿಂಗ್ ಅನ್ನುವ ಸೂಚನೆ ಮೊಬೈಲ್ ಪರದೆ ಮೇಲಿತ್ತು.

ಆತ ಕೂತಲ್ಲೇ ಚಡಪಡಿಸಿದ. ನಿಂತಲ್ಲೇ ಅಡ್ಡಾಡಿದ. ಮತ್ತೆ ಮೊಬೈಲು ನೋಡಿಕೊಂಡ...ಆಗಲೂ ಪೆಂಡಿಂಗ್ ಅನ್ನುವ ಸೂಚನೆಯೇ. ಮತ್ತೆ ಅಸ್ವಸ್ಥನಂತೆ ಒದ್ದಾಡಿದ.

ಕೂಡಲೇ ಅದೇ ಮೆಸೇಜನ್ನು ಚಕಚಕನೆ ಎಡಿಟ್ ಮಾಡಿ ಮತ್ತದೇ ನಂಬರಿಗೆ ಕಳಿಸಿದ!

ಮಂಗಳವಾರ, ಸೆಪ್ಟೆಂಬರ್ 16, 2008

ಸೂರ್ಯನ ಬೆಳಕು ಹೀರಿದವನ ಕಥೆ..(ಪುಟಾಣಿ ಕತೆ-5)

"ನಿನ್ನನ್ನು ಆಗಸದ ತುಂಬ ಮಿನುಗುವಂತೆ ಮಾಡುತ್ತೇನೆ" ಅದು ಆತನ ಪ್ರಾಮಿಸ್.

ಆಕೆಗಂತೂ ಆಕಾಶಕ್ಕೆ ಮೂರೇ ಗೇಣು. ಆತನಿಂದ ಕದ್ದು ಚುಂಬನ ಸ್ವೀಕರಿಸಿದಷ್ಟೇ ರೋಮಾಂಚನ.
ಆದರೆ ನಿಜವಾದ ಫಜೀತಿಗೆ ಸಿಕ್ಕಿ ಹಾಕಿಕೊಂಡದ್ದು ಮಾತ್ರ ಆತ. ಹುಚ್ಚು ಆವೇಶದಲ್ಲಿ ಪ್ರಾಮಿಸ್ ಏನೋ ಮಾಡಿದ್ದ. ಅದನ್ನು ಉಳಿಸಿಕೊಳ್ಳುವುದು ಹೇಗೆ?

ಆತನಿಗೆ ಮಂಡೆಬಿಸಿ ಶುರುವಾಯಿತು.
ತಲೆ ಎತ್ತಿ ನೋಡುತ್ತಾನೆ ಆಗ ಸುಡು ಸುಡು ಮದ್ಯಾಹ್ನ.
ಕೊನೆಗೊಂದು ಉಪಾಯ ಹೊಳೆಯಿತು.
ಆತ ಆಗಸದಲ್ಲಿನ ಸೂರ್ಯನ ಬೆಳಕನ್ನೇ ಹೀರಲು ಪ್ರಾರಂಭಿಸಿದ.
ಸಂಜೆ ಹೊತ್ತಿಗೆ ಸೂರ್ಯ ಮಂಕಾದ.
ಗೋಧೂಳಿಯ ನಂತರದ ಘಳಿಗೆಗೆ ನಿಜವಾದ ಸೂರ್ಯ ಸತ್ತೇ ಹೋದ.
ಈಗ ಆತನೇ ಸೂರ್ಯ.

ಆತ ಖುಷಿಯಿಂದ ಆಕೆಯ ಬಳಿಗೆ ಓಡಿದ.
ಆತ ಹತ್ತಿರ ಬರುತ್ತಿದ್ದಂತೆ ಆಕೆಗೆ ಆತನ ಶಾಖ ತಡೆದುಕೊಳ್ಳಲು ಆಗಲಿಲ್ಲ.
ಕೊನೆಗೆ ಆಕೆ, ಆತನಿಗೋಸ್ಕರ ವಿಧಿಯಿಲ್ಲದೆ ಆತನ ಬೆಳಕನ್ನೇ ಹೀರುತ್ತಾ ಹೋದಳು.
ಆತ ಮತ್ತಷ್ಟು ಹತ್ತಿರ ಬಂದ.
ಆಕೆ ರಾತ್ರಿಯ ನಿಶ್ಯಬ್ದದೊಳಗೆ ಪ್ರಕಾಶಮಾನವಾಗಿ ಬೆಳಗಲು ಪ್ರಾರಂಭಿಸಿದಳು.
ಆತ ಭಾವಪರವಶನಾಗಿ ಅವಳೊಳಗೆ ಕಳೆದು ಹೋದ.

ಮಂಗಳವಾರ, ಸೆಪ್ಟೆಂಬರ್ 2, 2008

Sorry, ನನಗೆ ನಗಲು ಪರ್ಮಿಶನ್ ಕೊಟ್ಟಿಲ್ಲ..(ಪುಟಾಣಿ ಕತೆ-4)

"Sorry

ನನಗೆ

ನಗಲು

ಪರ್ಮಿಶನ್ ಕೊಟ್ಟಿಲ್ಲ"

ಅಶ್ಚರ್ಯವಾಯ್ತು. ಇದಂತೂ ಒಳ್ಳೇ ಬ್ರೇಕಿಂಗ್ ನ್ಯೂಸ್ ಆಗಲಿಕ್ಕೆ ಫಿಟ್ ಅನ್ನಿಸಿತು. ಒಂದೆರಡು ಬೈಟ್ ತಗೊಂಡ್ರಾಯ್ತು. ಇವತ್ತಿನ ಅರ್ಧ ಗಂಟೆ ಪ್ರೋಗ್ರಾಂ ಡಮಾರ್. ಈ ವಾರದ ಟಿಆರ್ಪಿ ಏರಲಿಕ್ಕೆ ಇಷ್ಟು ಸಾಕು. ಚೀಫ್ ಕೂಡಾ ದಿಲ್ ಖುಷ್.

ಆದರೆ ನನಗೆ ಒಗಟು ಅನ್ನಿಸಿದ್ದು ಆತನ ಮಾತು.

ಒಳ್ಳೆ ಬಂಗಲೆ ಇದೆ. ಓಡಾಡಲಿಕ್ಕೆ ಸ್ಕೋಡಾ. ಅಷ್ಟು ದೊಡ್ಡ ಹುದ್ದೆ ಬೇರೆ. ಆರ್ಡರು ಮಾಡುವುದಷ್ಟೇ ಕೆಲಸ. ಈತನಿಗೆ ನಗಲು ಯಾರ ಪರ್ಮಿಶನ್ ಬೇಕು. ಇದಂತೂ ಹಾಸ್ಯಾಸ್ಪದ. ಅಥವಾ ಆತನಿಗೆ ಪತ್ರಕರ್ತನಾದ ನನ್ನನ್ನು ರೇಗಿಸಿ ಖುಷಿಪಡಬೇಕು ಅಂತ ಅನ್ನಿಸುತ್ತಿದೆಯಾ? ಆದರೆ ಅದು ನನ್ನ ಅನುಮಾನ ಮಾತ್ರ. ಆತ ಸಂದರ್ಶನದುದ್ದಕ್ಕೂ ಹಾಗೆ ತೋರ್ಪಡಿಸಿಕೊಳ್ಳಲಿಲ್ಲ. ಆತನ ಎದೆಯಾಳದಲ್ಲೇನೋ ಭಯಂಕರ ನೋವಿನ ಸಂತೆ ಇದ್ದಂತೆ ನನಗನಿಸಿತು.

ಆತ ವಿವರಿಸುತ್ತಾ ಹೋದ.

ಯಾಕೆ ನಗಲು ಸಾಧ್ಯವಾಗುತ್ತಿಲ್ಲ. ನಕ್ಕರೆ ಏನು ಪ್ರಾಬ್ಲಂ. ಎಲ್ಲವನ್ನು ಹೇಳುತ್ತಲೇ ಇದ್ದ. ಆತನನ್ನು ಕೇಳುತ್ತಾ ಹೋದಂತೆಲ್ಲಾ ಇದೇ ಕತೆ ಎಲ್ಲೋ ಕೇಳಿದ ಹಾಗಿದೆಯಲ್ಲ ಅನ್ನುವ ಅನುಮಾನ ಶುರುವಾಯಿತು. ಪಾತ್ರಗಳು, ಸನ್ನಿವೇಶಗಳು ಸ್ವಲ್ಪ ಆಚೆ-ಈಚೆ. ಆದರೆ ಇಡೀ ಕತೆಯ ಹೂರಣ ಒಂದೇ. ಯಾರ ಕತೆ ಇದು.

"ಈ ಕತೆಯನ್ನೆಲ್ಲೋ ಕೇಳಿದ ಹಾಗಿದೆಯಲ್ಲ. ಸೇಮ್ ಟು ಸೇಮ್ ನಿಮ್ಮದೇ ಸಮಸ್ಯೆ ಆತನಿಗೆ ಕೂಡಾ" ಅಂತ ಆತನ ಎದುರು ಬಾಯ್ಬಿಟ್ಟು ಹೇಳಲು ಆಗಲಿಲ್ಲ. "ಅರ್ಜೆಂಟ್ ಪ್ರೋಗ್ರಾಂ ಕವರ್ ಮಾಡ್ಬೇಕು. ಮತ್ತೆ ಫೋನ್ ಮಾಡ್ತೀನಿ" ಹಾಗಂತ ಹೇಳಿ ಹೊರಬಿದ್ದೆ.

ಡೈರಿ ಸರ್ಕಲ್ಲಿನ ಟ್ರಾಫಿಕ್ಕಿನಿಂದ ಹೊರಬಂದಾಗ ಸುಸ್ತೋ ಸುಸ್ತು.

ಆಗಲು ಕಾಡುತ್ತಿದ್ದದ್ದು ಆತ ಹೇಳಿದ ಆತನದ್ದೇ ಕತೆ.

ಅದರ ಪ್ರತಿ ಭಾವನೆ, ಸಮಸ್ಯೆ, ಸನ್ನಿವೇಶ ಎಲ್ಲೋ ನನಗೆ ಪರಿಚಿತ ಅನ್ನಿಸಿತು. ಬಹುಷಃ ನನ್ನ ಪರಿಚಯದವನದ್ದೇ ಸಮಸ್ಯೆ ಇದು. ಅವನಿಗೂ ನಗಲು ಆಗುತ್ತಿರಲಿಲ್ಲ. ಯಾರದು.....?

ಛೆ...ಸದ್ಯಕ್ಕೆ ನೆನಪಾಗುತ್ತಿಲ್ಲ.

ಅದಾದ ನಂತರದ ಘಳಿಗೆಗೆ ನಗಲು ಪ್ರಯತ್ನಿಸಿದೆ.

ಸಾಧ್ಯವಾಗಲಿಲ್ಲ !