ಗುರುವಾರ, ಆಗಸ್ಟ್ 27, 2009

ಬೇಯುವ ವಿಷಾದಗಳ ಹೊಸ್ತಿಲಲ್ಲಿ ಸ್ವಗತವೆಂಬ ಮೌನರಾಗ


ಳೆದು ಹೋಗುವುದನ್ನು ಹುಡುಕುವ ಸಿನಿಮಾಗಳು ವಿಶ್ವದ ಹಲವು ಭಾಷೆಗಳಲ್ಲಿ ಬಂದಿವೆ
. ಕಳೆದು ಹೋದ ಪ್ರೇಮಿ, ಗೆಳೆಯ, ಅಮ್ಮ, ಶೂ...ಹೀಗೆ ಪಟ್ಟಿ ಬೆಳೆಯುತ್ತದೆ.ಆದರೆ ಮನುಷ್ಯನೊಬ್ಬ ತನ್ನನ್ನೇ ದಿನ ನಿತ್ಯದಲ್ಲಿ ಕಳೆದುಕೊಂಡರೆ? ಕಳೆದು ಹೋಗಿದ್ದೇನೆ ಎಂದು ಅರಿವಾಗದೆ ಬದುಕುತ್ತಿದ್ದರೆ??--40 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ "ದಿ ಬ್ಯಾಂಡ್ಸ್ ವಿಸಿಟ್" ಎನ್ನುವ ಇಸ್ರೇಲಿ ಸಿನಿಮಾ ಚರ್ಚಿಸುವುದು ಇದೇ ವಿಷಯವನ್ನೇ.



ಈಜಿಪ್ಟಿನ ಅಲೆಗ್ಸಾಂಡ್ರಿಯಾ ಸೆರೆಮೋನಿಯಲ್ ಪೋಲಿಸ್ ಆರ್ಕೆಸ್ಟ್ರಾ, ಇಸ್ರೇಲಿನ ಅರಬ್ ಕಲ್ಚರ್ ಅಕಾಡೆಮಿಯಲ್ಲಿ ಕಾರ್ಯಕ್ರಮ ನೀಡಲು ಬಂದಿಳಿಯುತ್ತದೆ. ಆದರೆ ವಿಳಾಸ ತಪ್ಪಿ ಅನಾಮಿಕ ಊರಿನಲ್ಲಿ ನಿಂತುಬಿಡುತ್ತದೆ. ದಿಕ್ಕು ತೋಚದೆ ಪಕ್ಕದ ರೆಸ್ಟೋರೆಂಟಿನಲ್ಲಿ ಆಶ್ರಯ ಬೇಡುತ್ತದೆ.ಅಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಬಸ್ಸಿಗೆ ಹೊರಡುತ್ತದೆ. ಇದು ಕತೆ. ಹೀಗೆ ಆರ್ಕೆಸ್ಟ್ರಾ ಗುಂಪಿನ 8 ಮಂದಿ,ಅತಿ ಮುಖ್ಯವಾಗಿ ತೌಫೀಕ್ ಪರಿಚಯವೇ ಇಲ್ಲದ ಊರೊಳಗೆ ತನ್ನನ್ನು ಕಂಡುಕೊಳ್ಳುವ ಕತೆಯಿದು.


ಇರಾನ್ ಕೊಲಿರಿನ್ ನಿರ್ದೇಶನದ ಮೊದಲ ಸಿನಿಮಾ. ಕತೆಯೂ ಈತನದ್ದೇ. 2007ರಲ್ಲಿ ಈ ಸಿನಿಮಾ ನಿರ್ಮಾಣವಾಯಿತು. ಮೌನವನ್ನು ಬಳಸಿ ವ್ಯಕ್ತಿಯ ಮನವನ್ನು ತೆರೆದಿಡುವ ತಂತ್ರ ಇಲ್ಲಿದೆ. ಹಾಸ್ಯಪ್ರಜ್ಞೆಯನ್ನು ಜೊತೆಗಿಟ್ಟುಕೊಂಡು ಕತೆ ಹೇಳುತ್ತಾನೆ ಕೊಲಿರಿನ್.




ಆರ್ಕೆಸ್ಟ್ರಾದ ನಾಯಕ ತೌಫೀಕ್ ನ ಒಳಗೊಂದು ನೋವಿನ ಕಡಲಿದೆ. ಸಾವಿರ ಸ್ವಗತಗಳಿವೆ. ತನ್ನ ಮಗನ ಬಗ್ಗೆ ಕಠೋರವಾಗಿದ್ದರಿಂದ ಹೆಂಡತಿ ಕೊರಗಿ ಸತ್ತಳು ಎಂಬ ಪಾಪಪ್ರಜ್ಞೆಯಿದೆ. ಸಾಂಪ್ರದಾಯಿಕ ಸಂಗೀತ ಯುವಜನರಿಂದ ಕಡೆಗಣಿಸಲ್ಪಡುತ್ತಿರುವುದಕ್ಕೆ ಬೇಜಾರಿದೆ. ಇದೆಲ್ಲವನ್ನು ಮರೆಮಾಚಲು ಆತನಿಗೆ ಬ್ಯಾಂಡ್ ಟ್ರೂಪ್ ಬೇಕೇ ಬೇಕು. ಪ್ರಯಾಣ, ಏಕಾಂತ ಎಲ್ಲದರೊಳಗೆ ಬೇಯುತ್ತಾನೆ ಆತ. ಇವರಿಗೆ ಆಶ್ರಯ ನೀಡುವ ರೆಸ್ಟೋರೆಂಟಿನ ಮಾಲಕಿ "ದಿನಾ"ಳದ್ದು ಇದೇ ತರಹದ ಕತೆ. ಜೊತೆಗಿದ್ದ ಪ್ರಿಯತಮ ಈಗಿಲ್ಲ. ರೆಸ್ಟೋರೆಂಟಿನ ಎದುರಿನ ಲೈಟು ಕಂಬಗಳ ಸುಂದರ ರಸ್ತೆಯಂತೆ ಆಕೆಯದ್ದೂ ಒಂದು ಬದುಕು. ಆದರೆ ಆ ರಸ್ತೆ ಯಾವಾಗಲೂ ನಿರ್ಜನ, ನಿರ್ಜೀವ.



ಈ ಸಿನಿಮಾ ಹೇಗೆ ಹುಟ್ಟಿಕೊಂಡಿತು, ಇಂತಹದೊಂದು ಸರಳ, ಪರಿಣಾಮಕಾರಿ ಸಿನಿಮಾದ ವಸ್ತು ಹೇಗೆ ಸಾಧ್ಯವಾಯಿತು ಅನ್ನುವುದನ್ನು ನಿರ್ದೇಶಕ ಕೊಲಿರಿನ್ ಮಾತಲ್ಲೇ ಕೇಳಬೇಕು.



"ಇಸ್ರೇಲಿನಲ್ಲಿ 80ರ ದಶಕದಲ್ಲಿ ಈಜಿಪ್ಟ್ ಸಿನಿಮಾಗಳ ಕ್ರೇಜ್ದ್ದ ಕಾಲ..ಆಗ ನಾನಿನ್ನೂ ಬಾಲಕ. ನನ್ನಂತೆ ಬಹುತೇಕರಿಗೆ ಒಮರ್ ಶರೀಫ್ ಸಿನಿಮಾಗಳೆಂದರೆ ಪಂಚಪ್ರಾಣ. ಇದ್ದಿದ್ದು ಒಂದೇ ಟಿವಿ ಚಾನೆಲ್. ಪ್ರತೀ ಶುಕ್ರವಾರ ಸಂಜೆಯ ಹೊತ್ತಿಗೆ ಅದೇ ಮನರಂಜನೆ. ಸಿನಿಮಾ ಮುಗಿದ ಮೇಲೆ ಕೆಲವೊಮ್ಮೆ ಅರ್ಧಗಂಟೆ "ಇಸ್ರೇಲ್ ಬ್ರಾಡ್ಕಾಸ್ಟಿಂಗ್ ಆರ್ಕೆಸ್ಟ್ರಾ"(ಐಬಿಎ)ದ ಸಂಗೀತ ಕಾರ್ಯಕ್ರಮವಿರುತ್ತಿತ್ತು. ಶಾಸ್ತ್ರೀಯ ಅರೇಬಿಕ್ ಸಂಗೀತವದು. ಟಿವಿ ಖಾಸಗೀಕರಣಕ್ಕೆ ತುತ್ತಾದ ಮೇಲೆ ನಮ್ಮಲ್ಲಿ ನೂರಾರು ಚಾನೆಲ್ ಗಳು ಬಂದವು. ಎಂ ಟಿವಿ ಬಂತು. ಬಿಬಿಸಿ ಬಂತು. 30 ಸೆಕೆಂಡಿನ ಜಾಹೀರಾತುಗಳು ರಾರಾಜಿಸಿದವು. ಇದರ ಮಧ್ಯೆ ಶಾಶ್ವತವಾಗಿ ಕಳೆದು ಹೋದದ್ದು ಮಾತ್ರ ಶಾಸ್ತ್ರೀಯ ಅರೇಬಿಕ್ ಸಂಗೀತ ನುಡಿಸುತ್ತಿದ್ದ ಆರ್ಕೆಸ್ಟ್ರಾ.



ಇರಾನ್ ಕೊಲಿರಿನ್



ಆದರೆ ಇವತ್ತು....

ಇವತ್ತು ನನ್ನ ಮತ್ತು ಗೆಳೆಯನ ಮಗ ಜಗಮಗಿಸುವ ಮೆಕ್ಡೊನಾಲ್ಡ್ ಬೋರ್ಡುಗಳ ಕೆಳಗೆ ಭೇಟಿಯಾಗುತ್ತಾರೆ. ಅದು ಅವರಿಗೆ "ಕಂರ್ಟ್" ಕೊಡುತ್ತಿದೆ" ಎಂದು ಬದಲಾದ ಮನಸ್ಥಿತಿಯೊಳಗೆ ಕಳೆದು ಹೋದದ್ದನ್ನು, ತನ್ನ ಮಕ್ಕಳು ಕಳೆದುಕೊಂಡ ಅಪೂರ್ವ ಕ್ಷಣಗಳನ್ನು ನೆನೆಸಿಕೊಳ್ಳುತ್ತಾನೆ ಕೊಲಿರಿನ್. ಇದೇ ಬೇಗುದಿ ಸಿನಿಮಾದಲ್ಲಿರುವ ತೌಫೀಕ್ ಗೂ ಇದೆ. ಅತೀ ವೇಗದ ಸಾಂಸ್ಕ್ರತಿಕ ಪಲ್ಲಟದ ಬಗ್ಗೆ ಗಾಬರಿಯಿದೆ. ದಿನಾ ಜೊತೆ ಹೋಟೆಲಿನಲ್ಲಿ ಕುಳಿತಾಗ ಆತ ಹಂಚಿಕೊಳ್ಳುವುದು ಇದನ್ನೇ. ಅದಕ್ಕೇ ಆತನಿಗೆ ಖಾಲಿದ್ ಅಧಃಪತನಕ್ಕಿಳಿದ, ಶಿಸ್ತಿಲ್ಲದ ವ್ಯಕ್ತಿಯಂತೆ ಕಾಣುತ್ತಾನೆ. ಟಿವಿ ಖಾಸಗಿಕರಣಕ್ಕೆ ಒಳಗಾದ ಮೇಲೆ ಇಸ್ರೇಲಿನಲ್ಲಿ ಹುಟ್ಟಿಕೊಂಡ ಯುವಜನತೆಯ ಪ್ರತಿನಿಧಿ ಆತ..



ಆದರೆ ಇದೆಲ್ಲದರ ಮಧ್ಯೆ ತೌಫೀಕ್ ವೇಗವಾದ ಸಾಂಸ್ಕ್ರತಿಕ ಪಲ್ಲಟಕ್ಕೆ ಹೊಂದಿಕೊಲ್ಲುವುದು ಅಸಾಧ್ಯವಾಗುತ್ತದೆ. ಗೊಂದಲ, ಅಸಹಾಯಕತೆ ಮಧ್ಯೆ ತನ್ನನ್ನು ಕಂಡುಕೊಳ್ಳುವಲ್ಲಿ ಆತ ಸೋಲುತ್ತಾನೆ. ದಿನಾ ಜೊತೆಗೊಂದು ಸಂವಾದ ಸಾಧ್ಯವಾದ ಮೇಲಷ್ಟೇ ಆತನಿಗೆ ಖಾಲಿದ್(ಅಂದರೆ ಹೊಸ ತಲೆಮಾರು)ಅರ್ಥವಾಗುತ್ತಾನೆ. ದಿನಾ, ತೌಫೀಕ್ ರ ಪರಿಚಯ ಇಬ್ಬರ ವಾಸ್ತವವನ್ನು ಬದಲಾಯಿಸುತ್ತದೆ. ತಮ್ಮೊಳಗೆ ಬಚ್ಚಿಟ್ಟುಕೊಂಡಿದ್ದ ವಿಷಾದ ರಾಗಗಳನ್ನು ಬಿಚ್ಚಿಡುತ್ತಾರೆ.ಎಲ್ಲೋ ಒಂದೆಡೆ ದುಖಃವನ್ನು ಬಸಿದು ನಿರಾಳವಾಗುವ ಹಾಗೆ. ಬಹುಷಃ ಈ ನಿರಾಳತೆಯೇ ತೌಫೀಕ್ ನಿಗೆ ಚೈತನ್ಯಪೂರ್ಣವಾಗಿ ಸುತ್ತಲಿನ ಜನರನ್ನು ನೋಡಲು ಕಲಿಸುತ್ತದೆ. ತಾನು ಬ್ಯಾಂಡ್ ಟ್ರೂಪಿನಿಂದ ಗೇಟ್ ಪಾಸ್ ಕೊಡಬೇಕಿದ್ದ ಚೆಲ್ಲು ಹುಡುಗ ಖಾಲಿದ್ ಇಷ್ಟವಾಗಲು ಶುರುವಾಗುತ್ತಾನೆ. ಖಾಲಿದ್ ಕೇವಲ "ಮಗನಷ್ಟೇ ಅಲ್ಲ.. ಬದಲಾಗಿ ತನ್ನ ಹಾಗು ಯುವ ತಲೆಮಾರಿನ ಸೇತುವೆಗೆ ಕೊಂಡಿಯಾಗುತ್ತಾನೆ. . ಬದುಕಿನ ಲಯವನ್ನು ಆತ ಮತ್ತೆ ಪತ್ತೆ ಹಚ್ಚಿದ್ದಾನೆ. ಅದೇ ಕಾರಣಕ್ಕೆ ಆತ ಕೊನೆಯಲ್ಲಿ ಖಾಲಿದ್ ವಯೋಲಿನ್ ನುಡಿಸುವಾಗ ತನ್ಮಯತೆಯಿಂದ ಆನಂದಿಸುತ್ತಾನೆ.



ಇವರ ನಡುವೆ ಸಿನಿಮಾದಲ್ಲೊಂದು ಪುಟ್ಟ ಪಾತ್ರವಿದೆ. ಆತ ಯುವಕ. ಹಗಲು-ರಾತ್ರಿ ಎಡೆಬಿಡದೆ ತನ್ನ ಪ್ರಿಯತಮೆಯ ಫೋನಿಗೆ ಬೂತಿನ ಬುಡದಲ್ಲೇ ಕಾಯುತ್ತಿರುತ್ತಾನೆ. ಬೇರೆ ಯಾರಾದರು ಅಲ್ಲಿ ಫೋನು ಮಾಡಲು ಬಂದರೆ ಆತನಿಗೆ ಕಿರಿಕಿರಿ. ಆಕೆ ಫೋನು ಮಾಡಿಯೇ ಮಾಡುತ್ತಾಳೆ ಅನ್ನುವ ಕಾತರ, ಇನ್ನೂ ಮಾಡಿಲ್ಲವಲ್ಲ ಎನ್ನುವ ಸುಮಧುರ ವೇದನೆ ಅವನಲ್ಲಿದೆ.





ಇಡೀ ಚಿತ್ರವನ್ನು ಸಂಯಮದಿಂದ, ನಿಶ್ಯಬ್ದದ ಜೊತೆಗೆ ಹೆಣೆಯುತ್ತಾ ಹೋಗುತ್ತಾನೆ ನಿರ್ದೇಶಕ. ತೌಫಿಕ್ ಪಾತ್ರದ ಸಸನ್ ಗಬಾಯ್ ಅಭಿನಯವನ್ನು ಮಿಡ್ ಶಾಟ್ ಗಳಲ್ಲಿ ನೋಡುವುದೇ ಅಪೂರ್ವ ಘಳಿಗೆ. ಮಿಡ್ ಶಾಟ್ ಗಳನ್ನು ಬಳಸಿ ತೌಫೀಕ್ ನ ನೋವನ್ನು ನಮಗೆ ದಾಟಿಸುವಲ್ಲಿ ಕೊಲಿರಿನ್ ಸಫಲನಾಗುತ್ತಾನೆ. ಮುಖದ ನೆರಿಗೆ, ಹುಬ್ಬಿನ ಚಲನೆ, ಕಣ್ಣು ಬತ್ತುವುದು, ಮತ್ತೆ ಅರಳುವುದು-ಇದೆಲ್ಲ ಸಿನಿಮಾಕ್ಕೆ ಶಕ್ತಿ. ಉಳಿದ ಬ್ಯಾಂಡಿನ ಮಂದಿ ಕೂಡಾ ಅಭಿನಯದಲ್ಲಿ ಪೈಪೋಟಿ ನೀಡುತ್ತಿರುತ್ತಾರೆ. ದಿನಾ ಪಾತ್ರದಲ್ಲಿ ರೊನಿತ್ ಎಲ್ಕಾಬೆಟ್ಸ್ ಳನ್ನು ಮರೆಯಲು ಸಾಧ್ಯವಾಗುವುದಿಲ್ಲ.



ಮೌನವನ್ನು ಸ್ವಗತದ ಜಾಗದಲ್ಲಿ ಬಳಸುತ್ತಾ ಬದುಕನ್ನು ಪುನರ್ ಕಟ್ಟಿಕೊಳ್ಳುವ ತಂತ್ರ ಚಿತ್ರಕತೆಯ ಮುಖ್ಯ ಭಾಗ. ನಿರ್ಜನವಾಗಿ ಬಿದ್ದುಕೊಂಡಿರುವ ರಸ್ತೆ, ರೆಸ್ಟೋರೆಂಟ್, ರಾತ್ರಿಯ ಜೊತೆಗೊಂದು ನಡಿಗೆ, ಬೋಳು ಬೆಂಚು ಇದೆಲ್ಲಾ ದ್ರಶ್ಯದ ಮೂಲಕ ಸಿನಿಮಾದಲ್ಲಿ ಕಾಣುವಾಗ ಕತೆಗೊಂದು ಅನುಭೂತಿ ಸಿದ್ಧಿಸುತ್ತದೆ.



ರಾತ್ರಿಯ ನೀರವತೆಯಲ್ಲಿ ಬೆಂಚೊಂದರ ಮೇಲೆ ಕುಳಿತು ದಿನಾ-ತೌಫೀಕ್ ಮಾತನಾಡುವ ದ್ರಶ್ಯ ವಿನ್ಯಾಸ ಆಪ್ತ. ಪರಸ್ಪರರನ್ನು ಅರಿಯುವ ಪ್ರಯತ್ನದಲ್ಲಿ ತೌಫೀಕ್ ಗೆ ಸಂಗೀತದಷ್ಟೇ ಖುಷಿ ಸಿಗುತ್ತದೆ. ಅದನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳಲು ದಿನಾ ಕೂಡಾ ಪ್ರಯತ್ನಿಸುತ್ತಾಳೆ.



ಹರಳುಗಟ್ಟಿದ ವಿಷಾದಗಳನ್ನು ಒಡೆಯುತ್ತಾ ಕಣವಾಗಿ ಕರಗಿಸಿ ಸಿನಿಮಾ ಕೊನೆಯಾಗುವಾಗ, ತಾವು ಕಳೆದುಕೊಂಡಿದ್ದೇನು ಎನ್ನುವ ಪ್ರಜ್ಞೆ ಮತ್ತು ಅದನ್ನು ಪುನರ್ ತುಂಬಿಕೊಳ್ಳುವ ಅವಕಾಶ ತೌಫೀಕ್, ದಿನಾಳಿಗೆ ಪ್ರಾಪ್ತವಾಗುತ್ತದೆ.

ಕಾಯುತ್ತಿರುವ ಪ್ರೇಮಿಗೆ ಕೊನೆಗೂ ಪ್ರಿಯತಮೆಯಿಂದ ಕರೆ ಬರುತ್ತದೆ...


----------------------------------------------------------------------------------------

2007ರಲ್ಲಿ ಇಸ್ರೇಲ್ ನಿಂದ ಸಿನಿಮಾ ಆಸ್ಕರ್ ಅತ್ಯುತ್ತಮ ವಿದೇಶಿ ವಿಭಾಗಕ್ಕೆ ಸ್ಪರ್ಧಿಸಲು ಪೈಪೋಟಿ ನಡೆಸಿತ್ತು. ಆದರೆ ಶೇ.50ರಷ್ಟು ಸಂಭಾಷಣೆ ಇಂಗ್ಲೀಷಿನಲ್ಲಿದ್ದುದರಿಂದ "Beaufort" ಸಿನಿಮಾ ಆಯ್ಕೆಯಾಯಿತು. ಇರಾನ್ ಕೊಲಿರಿನ್ ಈಗ "ದಿ ಪಾತ್ ವೇಸ್ ಇನ್ ಡೆಸರ್ಟ್" ಸಿನಿಮಾ ತಯಾರಿಯಲ್ಲಿ ನಿರತನಾಗಿದ್ದಾನೆ.
----------------------------------------------------------------------------------------

ಶನಿವಾರ, ಆಗಸ್ಟ್ 15, 2009

ಮತ್ತೆ ಬಾಗಿಲು ತೆರೆದಿದೆ: ಸದ್ಯಕ್ಕೆ ನಾಗಮಂಡಲ ಪೋಸ್ಟರು



ತುಂಬಾ ದಿನಗಳಿಂದ ಬ್ಲಾಗಿಗೆ ಬೀಗ ಹಾಕಿ ಹೋಗಿದ್ದೆ.
ಮತ್ತೆ ಬಾಗಿಲು ತೆರೆಯುವ ಮನಸ್ಸಾಗಿದೆ.
ಒಂಟಿ ನಡಿಗೆ, ಮನೆಯಲ್ಲಿ ಮನ ತುಂಬಿಕೊಂಡ ಮಳೆ ಜೊತೆಗಿದೆ.


ಹಂಚಿಕೊಳ್ಳಲು ವಿಷಯಗಳು ಹಲವಿವೆ.
ಮೇ ತಿಂಗಳಲ್ಲಿ "ನಾಗಮಂಡಲ" ಕುರಿತು ಪುಟ್ಟ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿದ್ದೆ. ದೆಹಲಿಯಲ್ಲಿ ನಡೆದ ಸಾಕ್ಷ್ಯಚಿತ್ರೋತ್ಸವಸ್ಪರ್ಧೆಯಲ್ಲಿ ಕೂಡಾ ಭಾಗವಿಹಿಸಿತ್ತು.
ಅದಕ್ಕಾಗಿ ಡಿವಿಡಿ ಕವರ್ ವಿನ್ಯಾಸ ಮಾಡಿ ಕೊಡಲು
ಅಪಾರ ಅವರಲ್ಲಿ ಕೇಳಿಕೊಂಡಿದ್ದೆ. ಬಿಡುವು ಮಾಡಿಕೊಂಡು ಪ್ರೀತಿಯಿಂದ ಮುದ್ದಾದ ವಿನ್ಯಾಸ ಮಾಡಿಕೊಟ್ಟಿದ್ದರು.

ವಿನ್ಯಾಸಗಳು ಇಲ್ಲಿವೆ. ನಿಮಗೆ ಹೇಗನ್ನಿಸಿತು?
ಪ್ರತಿಕ್ರಿಯಿಸಿ(ಅಪಾರ ಸಿಕ್ಕರೆ ಖುದ್ದು ಅವರಿಗೇ ಹೇಳಿ).

ಮತ್ತೊಂದು ಮುಖ್ಯವಾದ ವಿಷಯ
"ಅಪೊಕೊಲಿಪ್ಟೊ" ಸಿನಿಮಾದ ನಾಯಕನನ್ನು ನೆನಪಿಗೆ ತರುವ ನಾಗ ಪಾತ್ರಿಯ ಆಕರ್ಷಕ ಫೋಟೊ ಸೆರೆ ಹಿಡಿದದ್ದು ದುರ್ಗಾಪ್ರಸಾದ್ ಹೆಗಡೆ. ವ್ರತ್ತಿಯಿಂದ ಡಾಕ್ಟರ್. ಮಂಗಳೂರಿನವರು.





(ಫೋಟೋ ಮೇಲೆ ಕ್ಲಿಕ್ ಮಾಡಿರೆ ಗಾತ್ರ ದೊಡ್ಡದಾಗುತ್ತದೆ.)