ಗುರುವಾರ, ಸೆಪ್ಟೆಂಬರ್ 2, 2010
ಸಂತೆಯಲಿ ನಿಂತಂತೆ, ಪ್ರೀತಿ ಕತೆಯಲ್ಲೊಂದು ಗೊಂದಲಾಪುರ
ಸೋಮವಾರ, ಏಪ್ರಿಲ್ 26, 2010
ಬಾಬಾ ರಾಂಚೋಡದಾಸನ ದೇಹ, ಡೆಡ್ ಪೋಯೆಟ್ಸ್ ಸೊಸೈಟಿಯ ಜೀವ, ಲೆಕ್ಕವಿಲ್ಲದಷ್ಟು ರೂಪಾಂತರ
ಚಿತ್ರಕತೆಯೊಂದನ್ನು ಬರೆಯುವ ಹೊತ್ತಿಗೆ ಬರಹಗಾರನನ್ನು ಪ್ರಭಾವಿಸುವ ಅಂಶಗಳು ಹಲವಾರು. ಆತ ನೋಡಿದ ವಿಶ್ವದ ಯಾವುದೋ ಭಾಷೆಯ ಚಲನಚಿತ್ರ, ಓದಿದ ಕಾದಂಬರಿಯ ಪಾತ್ರವೊಂದರ ಗುಣ, ಅವಗುಣ, ಸ್ನೇಹಿತನ ಮದುವೆಯಲ್ಲಿ ಕಂಡ ದಬಾಯಿಸುವ ಹುಡುಗಿ ಕೂಡಾ ಪಾತ್ರವೊಂದನ್ನು, ಸನ್ನಿವೇಶವನ್ನು ಸೃಷ್ಟಿಸುವ ಸಂದರ್ಭದಲ್ಲಿ ಸಹಾಯಕ್ಕೆ ಬರಬಹುದು. ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಎಲ್ಲಾ ಅಂಶಗಳು ಚಿತ್ರಕತೆಯೊಳಗೆ ಸೇರಿಕೊಳ್ಳುತ್ತಾ ಹೋಗುತ್ತದೆ. ಅದೇ ಪಾತ್ರವನ್ನು, ಸನ್ನಿವೇಶವನ್ನು ಬೆಳೆಸಬಹುದು. ಆ ಮೂಲಕ ಪಾತ್ರ, ಸನ್ನಿವೇಶ ಮತ್ತಷ್ಟು ಗಟ್ಟಿಯಾಗುವ ಸಂದರ್ಭಗಳು ಜಾಸ್ತಿ. ಇಂತಹ ಗಮನಿಸುವಿಕೆ ಹಾಗೂ ಅಳವಡಿಸುವಿಕೆ ಚಿತ್ರಕತೆಯೊಂದನ್ನು ಬರೆಯುವ ಸಂದರ್ಭದಲ್ಲಿ ಬರಹಗಾರನಿಗೆ ಹೆಚ್ಚು ಸಹಕಾರಿ. ಅಂತಹದೊಂದು ಸಾಧ್ಯತೆಯನ್ನು ಚಿತ್ರಕತೆಯಲ್ಲಿ ಮಿಳಿತಗೊಳಿಸಲು ಬರಹಗಾರ ಪ್ರತೀ ಬಾರಿ ಪ್ರಯತ್ನಿಸುತ್ತಲೇ ಇರುತ್ತಾನೆ. ಈ ತರಹದ ರೂಪಾಂತರ ನಾವು ನೋಡುವ ಹೆಚ್ಚಿನ ಸಿನಿಮಾಗಳ ಚಿತ್ರಕತೆಯಲ್ಲಿ ಕಂಡುಬರುತ್ತದೆ. ಅದೇ ಕಾರಣಕ್ಕೆ ಯೋಗರಾಜ ಭಟ್ಟರ ಮನಸಾರೆಯಲ್ಲಿ "ಶ್ವಶಾಂಕ್ ರಿಡಂಪ್ಶನ್"ನ ರೆಡ್ ಮತ್ತು ಬ್ರೂಕ್ ಛಾಯೆ ಕಾಣುವುದು. ಆದ್ದರಿಂದಲೇ ಗಾಳಿಪಟದಲ್ಲಿ ಡೈಸಿ ಬೋಪಣ್ಣನ ಪಾತ್ರವನ್ನು ನೋಡಿದಾಗ ಶೋಲೆಯ ಜಯಾ ಬಾಧುರಿ ಪದೇ ಪದೇ ನೆನಪಾಗುವುದು. ಮಜಾ ಎಂದರೆ ಸಿನಿಮಾ ನೋಡುತ್ತಿರುವಾಗ ಕೆಲವೊಮ್ಮೆ ಇದು ನಮ್ಮ ಗಮನಕ್ಕೇ ಬರುವುದಿಲ್ಲ. ಇಲ್ಲೇ ಚಿತ್ರಕತೆಯನ್ನು ಬರೆದ ಬರಹಗಾರನ ಯಶಸ್ಸಿರುವುದು. ಯಾಕೆಂದರೆ ಆತ ಅಂತಹದೊಂದು ರೂಪಾಂತರವನ್ನು ಅಥವಾ ಹೊಂದಾಣಿಕೆಯನ್ನು ನಾಜೂಕಾಗಿ ಭಿನ್ನ ಸನ್ನಿವೇಶ, ವಾತಾವರಣದಲ್ಲಿ ಕೂರಿಸಿರುತ್ತಾನೆ.
ಇತ್ತೀಚೆಗೆ ಬಂದ "ಥ್ರೀ ಈಡಿಯೇಟ್ಸ್" ಸಿನಿಮಾವನ್ನೇ ಬೇಕಿದ್ದರೆ ತೆಗೆದುಕೊಳ್ಳಿ. ಬಾಬಾ ರಾಂಚೋಡ್ ದಾಸ್ ಮೋಡಿಗೆ ಇಡೀ ದೇಶವೇ ಜಹಾಪನಾ ತುಸ್ಸೀ ಗ್ರೇಟ್ ಹೋ ಎಂದು ಸಲಾಮು ಹೊಡೆದದ್ದೇ ಹೊಡೆದದ್ದು. ಎಲ್ಲರಿಗೂ ಗೊತ್ತಿರುವಂತೆ ಥ್ರೀ ಈಡಿಯೆಟ್ಸ್ ಚೇತನ್ ಭಗತ್ ಬರೆದ "ಫೈವ್ ಪಾಯಿಂಟ್ ಸಮ್ವನ್" ಇಂಗ್ಲೀಷ್ ಕಾದಂಬರಿಯನ್ನು ಬಳಸಿಕೊಂಡಿದೆ. ಆದರೆ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಚಲನಚಿತ್ರದ ದೃಶ್ಯ ಅನುಕೂಲಕ್ಕೆ ತಕ್ಕ ಹಾಗೆ ಮೂಲ ಕಾದಂಬರಿಯ ಕಥಾ ಹಂದರದಲ್ಲಿ ಅನೇಕ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ. ಹೊಸ ಪಾತ್ರಗಳು ಬಂದಿವೆ. ಸನ್ನಿವೇಶಗಳು ಬದಲಾಗಿವೆ. ಮತ್ತೊಂದಷ್ಟು ಸೇರಿಕೊಂಡಿವೆ. ಆದರೂ ಬಾಬಾ ರಾಂಚೋಡ್ ದಾಸನನ್ನು ನೋಡುತ್ತಿದ್ದ ಹಾಗೆ, "ಸಕ್ಸಸ್ ನ ಹಿಂದೆ ಓಡಬೇಡಿ. ಎಕ್ಸಲೆನ್ಸ್ ಮುಖ್ಯ" ಎನ್ನುವಾಗಲೆಲ್ಲಾ ಹಾಗೂ ಅದನ್ನು ಸಾಧಿಸಲು ಆತ ಹೊರಡುವ ಸಂದರ್ಭಗಳನ್ನು ನೋಡುತ್ತಿದ್ದಂತೆ 1989ರಲ್ಲಿ ತೆರೆಕಂಡ ಪೀಟರ್ ವೇರ್ ನಿರ್ದೇಶನ ದ "ಡೆಡ್ ಪೋಯೆಟ್ಸ್ ಸೊಸೈಟಿ"ಯ ಇಂಗ್ಲೀಷ್ ಸಾಹಿತ್ಯದ ಮೇಷ್ಟ್ರು ಜಾನ್ ಕೀಟಿಂಗ್ ನೆನಪಾಗುತ್ತಾನೆ. ಆತನೂ ಹಾಗೆಯೇ. ಕವಿತೆ ಬದುಕನ್ನು ಫ್ರಫುಲ್ಲವಾಗಿಡುತ್ತದೆ, ಎಲ್ಲಾ ನೋವುಗಳಿಗೆ ಬೊಗಸೆ ಹಿಡಿಯುತ್ತದೆ ಎಂದು ನಂಬಿಕೊಂಡವ. ಕವಿತೆಯನ್ನು ಸರಳವಾಗಿ ಅರ್ಥೈಸಿಕೊಳ್ಳುವಂತೆ ಮಾಡಲು ಪ್ರಯತ್ನ ಪಡುವವ. ಅದೇ ಕಾರಣಕ್ಕೆ ಆತ ಫುಟ್ಬಾಲಿನ ಜೊತೆ, ಶಾಲೆಯ ಹೊರಾಂಗಣದಲ್ಲಿ ಸ್ವಚ್ಛಂದವಾಗಿ ಹುಡುಗರನ್ನು ಬಿಟ್ಟು ಕವಿತೆಯನ್ನು ಆಸ್ವಾದಿಸುವುದನ್ನು ಕಲಿಸುತ್ತಾನೆ. "ಡೆಡ್ ಪೋಯೆಟ್ಸ್ ಸೊಸೈಟಿ"ಯಲ್ಲಿ ಬರುವ ಈ ಇಂಗ್ಲೀಷ್ ಮೇಷ್ಟ್ರ ರೂಪಾಂತರವೇ ನಮ್ಮ ರಾಂಚೋಡ್ದಾಸ್(ಆಮೀರ್ ಖಾನ್). ರಾಂಚೋ ಪಾತ್ರದ ನಡೆ-ನಡವಳಿಕೆ "ಫೈವ್ ಪಾಯಿಂಟ್ ಸಮ್ವನ್" ಕಾದಂಬರಿಯಲ್ಲಿರುವ ರೆಯಾನ್ನಂತೆಯೇ ಇದ್ದರೂ ಸಹ, ಆತ ಬದುಕನ್ನು, ಎದುರಾಗುವ ಪ್ರತೀ ಕೆಲಸವನ್ನು ಆಸ್ವಾದಿಸುವುದನ್ನು ಕಲಿಸಲು ಬಳಸಿಕೊಳ್ಳುವ ಫಿಲಾಸಫಿಯ ಹಿಂದಿರುವುದು ಇಂಗ್ಲೀಷ್ ಮೇಷ್ಟ್ರು ಕೀಟಿಂಗೇ. ಮೂಲ ಕಾದಂಬರಿಯಲ್ಲಿ ಬರುವ ರೆಯಾನ್(ಸಿನಿಮಾದಲ್ಲಿ ರಾಂಚೋ) ಪಾತ್ರಕ್ಕೊಂದು ಸರಿಯಾದ ಪಾತ್ರ ಚೌಕಟ್ಟೇ ಇಲ್ಲ. ಜನಪ್ರೀಯ ಇಂಗ್ಲೀಷ್ ಸಾಹಿತ್ಯದ ಮೂಲಕ ತಲುಪಬೇಕಿರುವ ಮೇಲ್ಮಧ್ಯಮ ವರ್ಗದ ಇಷ್ಟಾನುಸಾರದ ಟೈಂಪಾಸ್ ರೀಡಿಂಗಿಗೆ ಬೇಕಾದಷ್ಟೇ ಉದ್ದೇಶಗಳನ್ನಿಟ್ಟುಕೊಂಡು ಚೇತನ್ ಭಗತ್ ಇಡೀ ಕಾದಂಬರಿಯನ್ನು ಬರೆದಂತೆ ಅನ್ನಿಸುತ್ತದೆ. ಹಾಗಾಗಿ ರಾಂಚೋಗೆ ಒಂದು ಬಲವಾದ "ಮುಖ್ಯ ಪಾತ್ರಕ್ಕಿರುವ ಗುರಿ"ಯನ್ನು(ಚಿತ್ರಕತೆಯ ಬರವಣಿಗೆಯಲ್ಲಿ ಬಹುಮುಖ್ಯ ಅಂಶ) ನೀಡುವಲ್ಲಿ ಕೀಟಿಂಗ್ ಪಾತ್ರ ರಾಜ್ ಕುಮಾರ್ ಹಿರಾನಿ ಮತ್ತವರ ತಂಡಕ್ಕೆ ಸಹಾಯಕ್ಕೆ ಬಂದಿದೆ. ಗಮನಿಸಬೇಕಾದ ಇನ್ನೊಂದು ವಿಷಯವಿದೆ. ರಾಂಚೋನಷ್ಟೇ ಯಂತ್ರಗಳ ಮೇಲೆ ಹುಚ್ಚು ಪ್ರೀತಿಯನ್ನಿಟ್ಟುಕೊಂಡಿರುವ ಜೋಯ್ ಲೋಬೋ, ಡೆಡ್ ಪೋಯೆಟ್ ಸೊಸೈಟಿಯ ನೀಲ್ ಪೆರ್ರಿಯ ಪಾತ್ರದಂತೆ ಅಸಹಾಯನಾಗಿ, ಅವಸರಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಜಾಯ್ ಲೋಬೋ ಮತ್ತು ನೀಲ್ ಪೆರ್ರಿಯ ನಡೆ-ನಡವಳಿಕೆ ಒಂದೇ ರೀತಿಯಾದದ್ದು.
ಇಂತಹ ಅಳವಡಿಕೆಗಳನ್ನು ರಿಮೇಕು ಅಥವಾ ಯಥಾವತ್ತು ನಕಲು ಎಂದು ನೇರವಾಗಿ ಆಪಾದಿಸಲಾಗುವುದಿಲ್ಲ. ಯಾಕೆಂದರೆ ಮೇಲೆ ಉದಾಹರಿಸಿದ ಎಲ್ಲಾ ಸಿನಿಮಾ ಅಳವಡಿಕೆಗಳು ಒಟ್ಟಾರೆಯಾಗಿ ಚಿತ್ರಕತಾ ಬರಹಗಾರನನ್ನು ಬಹಳಷ್ಟು ಪ್ರಭಾವಿಸಿದ ಸಿನಿಮಾ, ಕಾದಂಬರಿಯ ಯಾವುದೋ ಒಂದು ಪಾತ್ರ ಇವೆಲ್ಲವನ್ನೂ ಮಿಳಿತಗೊಳಿಸಿಕೊಂಡಿವೆ. ಒಟ್ಟು ಸಿನಿಮಾದ ಹೂರಣವನ್ನೋ, ಪಾತ್ರದ ಅಪರಿಮಿತ ಆತ್ಮವಿಶ್ವಾಸವನ್ನೋ ಬಳಸಿಕೊಂಡರೆ ತಪ್ಪಲ್ಲವಲ್ಲ. ಪಾಂಡವರ ಕಥೆಯನ್ನೇ ಇಟ್ಟುಕೊಂಡು ಕನ್ನಡದಲ್ಲಿ "ಹಬ್ಬ" ಎನ್ನುವ ಸಿನಿಮಾ ಬಂದದ್ದು ನೆನಪಿದೆ ತಾನೇ. ಅದೇ ರೀತಿ ಪಾಂಚಾಲಿಯ ದೃಷ್ಟಾಂತವನ್ನು ಅಳವಡಿಸಿಕೊಂಡು ದಿನೇಶ್ ಬಾಬು ಕನ್ನಡದಲ್ಲಿ "ಪಾಂಚಾಲಿ" ಎನ್ನುವ ಸಿನಿಮಾ ಮಾಡಿರುವುದನ್ನೂ ಇದೇ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳಬಹುದು. ಜೂನ್ನಲ್ಲಿ ಬಿಡುಗಡೆಗೆ ಕಾಯುತ್ತಿರುವ ಮಣಿರತ್ನಂರ "ರಾವಣ"ದಲ್ಲೂ ರಾಮಾಯಣದ್ದೇ ಅಳವಡಿಕೆ ಇದೆ...ಆದರೆ ಇಲ್ಲೆಲ್ಲಾ ಗಮನಿಸಬೇಕಾದ ಮತ್ತೊಂದು ಅಂಶವಿದೆ...ಮೂಲ ಕತೆಯನ್ನು ಭಿನ್ನ ಕಥಾ ಆಯಾಮದೊಂದಿಗೆ ಬೆಳೆಸುತ್ತಾ ಹೋದ ಹಾಗೆ ಹೊಸದೊಂದು ಚಿತ್ರಕತೆ ಹುಟ್ಟುತ್ತಾ ಹೋಗುತ್ತದೆ... ಮಜಾ ಇರೋದು ಇಲ್ಲೇ..ಹೀಗೆ ಪುರಾಣದ್ದೋ, ಕಾದಂಬರಿಯದ್ದೋ ಒಂದು ಪಾತ್ರವನ್ನು ಆಯಾ ಲೇಖಕ ನಿರ್ಮಿಸಿದ ವಾತಾವರಣವನ್ನು ಮೀರಿ ಭಿನ್ನ ಸನ್ನಿವೇಶ, ಸಂದರ್ಭದಲ್ಲಿ ಯೋಚಿಸುತ್ತಾ ಹೊರಟರೆ ಸಿನಿಮಾಕ್ಕಾಗುವ ಚಿತ್ರಕತೆ ಬರವಣಿಗೆಗೆ ಕೂರಬಹುದು. ಚೀನೀ ಸಿನಿಮಾ "ಸಂಸಾರ"ವನ್ನೇ ಬೇಕಿದ್ದರೆ ಗಮನಿಸಿ... ಬುದ್ಧನ ಸಂಸಾರ ತ್ಯಜಿಸುವ ನಿರ್ಧಾರವನ್ನೇ ಪ್ರಶ್ನಿಸುವ, ಆ ಮೂಲಕ ಬುದ್ಧ ಹೆಣ್ಣೊಬ್ಬಳನ್ನು ಅತಂತ್ರಕ್ಕೆ ದೂಡುವುದನ್ನು ಒಂದು ವೇಳೆ ಯಶೋಧರೆ ದಿಟ್ಟತನದಿಂದ ಪ್ರಶ್ನಿಸಿದರೆ ಹೇಗಿರುತ್ತದೆ ಎನ್ನುವ ನೆಲೆಗಟ್ಟಿನಲ್ಲಿ ಬೌದ್ಧ ಭಿಕ್ಷುವಿನ ಕತೆಯ ಹಿನ್ನೆಲೆಯಲ್ಲಿ ಚಿತ್ರಕತೆಗಾರ ಹೆಣೆಯುತ್ತಾ ಹೋದಾಗ ಸೃಷ್ಟಿಯಾಗುವ ಸಮಸ್ಯೆ ಹಾಗೂ ಅದನ್ನು ಪರಿಹರಿಸಿಕೊಳ್ಳಲು ಪಾತ್ರಗಳು ಹುಡುಕುವ ದಾರಿಗಳೇ ಚಿತ್ರಕತೆಯ ಬರವಣಿಗೆಯ "ಸೆಟಪ್-ಕನ್ಫ್ರಂಟೇಶನ್-ರಿಜಲ್ಯೂಶನ್" ಎನ್ನುವ ಚಿತ್ರಕತೆಯ ಮೂಲ ಸೂತ್ರವಾಗುತ್ತದೆ(ಪ್ರತಿ ಸಿನಿಮಾದ ಚಿತ್ರಕತೆಯು ಕ್ರಮವಾಗಿ ಈ ಮೂರು ಅಂಶಗಳನ್ನು ಹೊಂದಿರುತ್ತದೆ).
ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಒಪ್ಪುತ್ತೇವೆ ತಾನೇ. ಬಿ.ಆರ್ ಅಂಬೇಡ್ಕರ್ ರಾಮನ ಬಗೆಗೊಂದು ಲೇಖನ ಬರೆದಿದ್ದಾರೆ(ಹಂಪಿ ವಿಶ್ವವಿದ್ಯಾಲಯ ಪ್ರಕಟಿಸಿರುವ "ದೇವರನ್ನು ಕುರಿತು ಒಂದು ಹಿನ್ನೋಟ" ಪುಸ್ತಕದಲ್ಲಿದೆ). ಅದೇ ರಾಮ ಸೀತೆಯನ್ನು ಜೀವಿತಾವಧಿಯಲ್ಲಿ ನಡೆಸಿಕೊಂಡ ರೀತಿ ಸರಿಯೇ ಎನ್ನುವುದು ಆ ಬರವಣಿಗೆಯ ಮೂಲ ತಿರುಳು. ಇದನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಮಾನವೀಯ ನೆಲೆಯಲ್ಲಿ ರಾಮನ ನೆಲೆಗಟ್ಟು ಎಷ್ಟರಮಟ್ಟಿಗೆ ಅಭದ್ರವಾದದ್ದು, ಸ್ವಾರ್ಥದಿಂದ ಕೂಡಿದ್ದು ಎನ್ನುವುದನ್ನು ಅಂಬೇಡ್ಕರ್ ಬರೆಯುತ್ತಾ ಹೋಗುತ್ತಾರೆ. ರಾಮನ ಬಗ್ಗೆ ಇರುವ ಈ ಜಿಜ್ಙಾಸೆಯೇ ಸಿನಿಮಾ ಚಿತ್ರಕಥೆಯ ಬರವಣಿಗೆಗೆ ಸಹಾಯಕ. ಇದೇ ವಿಷಯವನ್ನು ಇವತ್ತಿನ ಸಂದರ್ಭದ ಪಾತ್ರಗಳಿಗೆ ಅಳವಡಿಸಿದರೆ ಒಂದು ಸಿನಿಮಾದ ಚಿತ್ರಕತೆ ಖಂಡಿತಾ ಸಾಧ್ಯವಾಗುತ್ತದೆ. ಇದೇ ಗೊಂದಲಗಳಿಗೆ, ವೈರುಧ್ಯಗಳಿಗೆ ಇನ್ನಷ್ಟು ಸನ್ನಿವೇಶಗಳನ್ನು ಸೇರಿಸುತ್ತಾ ಹೋದಾಗ ಚಿತ್ರಕತೆಗೊಂದು ಸೂಕ್ತ ಚೌಕಟ್ಟು ನಿರ್ಮಾಣವಾಗುತ್ತದೆ. ತರ್ಕ, ಸಮಸ್ಯೆ, ಪರಿಹಾರ ಇವೆಲ್ಲಾ ಚಿತ್ರಕತೆಯ ಬರವಣಿಗೆಯ ಅಗತ್ಯಗಳು.
ಮುಗಿಸುವ ಮುನ್ನ:
"ಸಕ್ಸೆಸ್ ಕೇ ಪೀಛೆ ಮತ್ ಭಾಗೋ, ಲೈಫ್ ಕಾ ಮಜಾ ಲೂಟ್ ಲೋ" ಎಂದು ರಾಂಚೋ ಹೇಳುವಾಗಲೆಲ್ಲಾ ಡೆಡ್ ಪೋಯೆಟ್ ಸೊಸೈಟಿಯ "I went to the woods because i wanted to live deliberately, i wanted to live deep and suck out all the morrow of life, to put to rout all that was not life and not when i had come to die discover that i had not lived " ಎನ್ನುವ ಸಾಲುಗಳೇ ಮತ್ತೆ ಮತ್ತೆ ನೆನಪಾಗುತ್ತವೆ. ಶಾಲೆಯಿಂದ ಹೊರಹಾಕಲ್ಪಟ್ಟ ಕೀಟಿಂಗ್ ತರಗತಿಯಿಂದ ಹೊರ ನಡೆಯುವಾಗ ಶಾಲಾ ಮುಖ್ಯಸ್ಥನ ಮಾತನ್ನು ಧಿಕ್ಕರಿಸಿ "ಕ್ಯಾಪ್ಟನ್ ಓ ಮೈ ಕ್ಯಾಪ್ಟನ್" ಎನ್ನುತ್ತಾ ವಿದ್ಯಾರ್ಥಿಗಳೆಲ್ಲಾ ಒಬ್ಬೊಬ್ಬರೇ ಡೆಸ್ಕಿನ ಮೇಲೇರುವ ಸನ್ನಿವೇಶದ ಅಳವಡಿಕೆಯೇ ಥ್ರೀ ಈಡಿಯೆಟ್ಸ್ ನಲ್ಲಿ ಕೆಲಸ ಸಿಕ್ಕ ಖುಷಿಯಲ್ಲಿ ಕಾರಿಡಾರಿನಲ್ಲೇ ಫರ್ಹಾನ್, ರಾಜು ಪ್ಯಾಂಟು ಬಿಚ್ಚಿ "ಜಹಾಪನಾ ತುಸ್ಸೀ ಗ್ರೇಟ್ ಹೋ" ಎನ್ನುತ್ತಾ ರಾಂಚೋಗೆ ಸಲಾಮು ಹೊಡೆಯುವ ಅಪೂರ್ವ ಸನ್ನಿವೇಶವಾಗಿದೆ. ಇನ್ನೊಮ್ಮೆ ಡೆಡ್ ಪೋಯೆಟ್ಸ್ ಸೊಸೈಟಿಯನ್ನೋ, ಥ್ರೀ ಈಡಿಯೆಟ್ಸ್ ಸಿನಿಮಾವನ್ನೋ ನೋಡುವಾಗ ಇದನ್ನೆಲ್ಲಾ ಹಾಗೇ ಸುಮ್ಮನೆ ಗಮನಿಸಿ.
ಮಂಗಳವಾರ, ಸೆಪ್ಟೆಂಬರ್ 8, 2009
ಕನ್ನಡದ ಗುಲಾಬಿಗೆ ರಾಷ್ಟ್ರಪ್ರಶಸ್ತಿ

ಅವಳು ಕನಸಿನ ಗುಲಾಬಿ. ಪ್ರತೀ ದಿನ ಸಾಯಂಕಾಲ ಸಿನಿಮಾ ನೋಡುವ ಹುಚ್ಚು. ಆ ಮೂಲಕ ಹೊಸ ಕನಸುಗಳನ್ನು ಕಾಣುವ ಬಯಕೆ ಆಕೆಗೆ. ಆ ಕನಸುಗಳ ಮೂಲಕ ತನ್ನ ಸೀಮಿತ ಪರಿಧಿಯನ್ನು ಮೀರಿ ಮುನ್ನಡೆಯುವ ಆಸೆ. ಬಹುಷಃ ಈ ಅಂಶವೇ ಆಕೆಯನ್ನು ಪ್ರಫುಲ್ಲವಾಗಿಡುವುದು.
ಆಕೆ ನೋಡುವ ಸಿನಿಮಾದ ಬಿಡಿಬಿಡಿ ಚಿತ್ರಗಳಂತೆ ಬದುಕೂ ಹರಿದು ಹಂಚಿಹೋಗಿದೆ, ಹೋಗುತ್ತಿದೆ. ಹೆರಿಗೆ ಮಾಡಿಸಿದ ಸಲುವಾಗಿ ಬರುವ ಟಿವಿ ಪ್ರಾರಂಭದಲ್ಲಿ ಅವಳಲ್ಲೊಂದು ಅಪೂರ್ವ ಘಳಿಗೆಗಳನ್ನು ಸೃಷ್ಠಿಸುತ್ತಾ ಹೋಗುತ್ತದೆ. ನಂತರದ ದಿನಗಳಲ್ಲಿ ಪಲ್ಲಟಗಳ ನಡುವೆ ಪಟಪಟಿಸುತ್ತದೆ. ಇದು ಗುಲಾಬಿ ಎಂಬ ಸೂಲಗಿತ್ತಿಯ "ಗುಲಾಬಿ ಟಾಕೀಸು"....
ಕನ್ನಡ ಸಿನಿಮಾದ ಗುಲಾಬಿ ಉಮಾಶ್ರೀಗೆ ರಾಷ್ಟ್ರಪ್ರಶಸ್ತಿ ಬಂದಿದೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ "ಗುಲಾಬಿ ಟಾಕೀಸು" ವೈದೇಹಿ ಅವರ ಕಥೆ ಆಧಾರಿತ ಸಿನಿಮಾ(ಸಿನಿಮಾ ಮಾಧ್ಯಮಕ್ಕೆ ಅನುಗುಣವಾಗಿ ಇಲ್ಲಿ ಕತೆ ಮಾರ್ಪಾಡಾಗಿದೆ). ಅದರಲ್ಲಿನ ಮುಖ್ಯಪಾತ್ರವೇ ಗುಲಾಬಿಯದ್ದು.
ಉಮಾಶ್ರೀಯ ವೃತ್ತಿ ಜೀವನದ ಮೈಲಿಗಲ್ಲು ಗುಲಾಬಿ ಪಾತ್ರ. ಆ ಪಾತ್ರದ ಆಳ-ಅಗಲಗಳನ್ನು ತನ್ನ ಅಭಿನಯದಿಂದಲೇ ಹಿಗ್ಗಿಸಿದ್ದಾರೆ ಆಕೆ. ಉಮಾಶ್ರೀಯದ್ದು ರಂಗಭೂಮಿಯ ಹಿನ್ನೆಲೆ. ಸಿನಿಮಾ ರಂಗಭೂಮಿ ಎರಡೂ ಭಿನ್ನ ಗುಣಗಳನ್ನು ಹೊಂದಿರುವ ಮಾಧ್ಯಮಗಳು.
ಬಹುಷಃ ರಂಗಭೂಮಿ ಉಮಾಶ್ರೀಯನ್ನು ಬಳಸಿಕೊಂಡಷ್ಟು ಸಶಕ್ತವಾಗಿ ಕನ್ನಡ ಸಿನಿಮಾ ತನ್ನ ಮಾಧ್ಯಮದಲ್ಲಿ ಬಳಸಿಕೊಂಡಿರಲಿಲ್ಲ. ಒಡಲಾಳ, ಹರಕೆಯ ಕುರಿ ನಾಟಕಗಳು ಆಕೆಯ ರಂಗಭೂಮಿಯ ಸಶಕ್ತ ಅಭಿವ್ಯಕ್ತಿಗಳು. ಕನ್ನಡ ಸಿನಿಮಾದಲ್ಲಿ ಉಮಾಶ್ರೀ ಅಂದರೆ ಸಾಕು ಎನ್ನೆಸ್ ರಾವ್ ಕಾಂಬಿನೇಶನ್ನಿನ ಕಿಲಕಿಲದಂತಹ ಪಾತ್ರದ ಜೊತೆಗೆ ಜೋತು ಬೀಳುವ ಪಾತ್ರಗಳಂತಹವೇ ಹೆಚ್ಚು ಕಾಣುವುದು. ಇದೇ ಅತಿರೇಕದ ನಟನೆಗೆ ಉಮಾಶ್ರೀ ಮುಂದಿನ ದಿನಗಳಲ್ಲಿ ಬ್ರ್ಯಾಂಡ್ ಆಗಿದ್ದೂ ಉಂಟು. ಸಂಗ್ಯಾಬಾಳ್ಯ, ಮಣಿ ಸಿನಿಮಾಗಳಂತಹ ಬೆರಳೆಣಿಕೆಯ ಸಿನಿಮಾಗಳಷ್ಟೇ ಆಕೆಗೆ ವೈವಿಧ್ಯಮಯವಾದ ಪಾತ್ರಗಳನ್ನು ನೀಡಿದ್ದು. ಉಮಾಶ್ರೀಯ ಒಳಗಿದ್ದ ನಟಿ ಸಿನಿಮಾದಲ್ಲಿ ಪ್ರಖರವಾಗಿ ಕಾಣಿಸಿಕೊಂಡದ್ದು- ಕಾಸರವಳ್ಳಿಯವರ ಗುಲಾಬಿ ಟಾಕೀಸಿನಲ್ಲಿಯೇ.
ಗುಲಾಬಿಯ ಪಾತ್ರ ಸಿನಿಮಾದ ವಿವಿಧ ಹಂತಗಳಲ್ಲಿ ಸಂಕೀರ್ಣವಾಗುತ್ತಾ ಹೋಗುವ ಪರಿ ಪ್ರೇಕ್ಷಕನಿಗೆ ದಕ್ಕುವುದಕ್ಕೆ ಸಾಧ್ಯವಾಗುವುದು ಉಮಾಶ್ರೀಯ ಅಭಿನಯದಲ್ಲಿ. ಅವಳಲ್ಲಿರುವ ಸ್ವಗತಗಳು, ಗಂಡನ ಎರಡನೇ ಹೆಂಡತಿಯ ಮಗ ಅದ್ದುವಿನೆಡೆಗಿರುವ ಪ್ರೀತಿ, ನೇತ್ರುವಿನ ಜೊತೆಗಿನ ಗೆಳೆತನ, ಟಿವಿ ಬಂದ ನಂತರ ಬದಲಾಗುವ ಸಂಬಂಧಗಳ ವ್ಯಾಪ್ತಿಯನ್ನು ಆಕೆ ಅರ್ಥೈಸಿಕೊಳ್ಳುವಲ್ಲಿ ಆಕೆ ಪಡುವ ಪಾಡನ್ನು, ಗುಲಾಬಿಯ ಸಂದಿಗ್ಧವನ್ನು ಉಮಾಶ್ರೀ ತೆರೆಮೇಲೆ ಬಿಚ್ಚಿಡುತ್ತಾರೆ. "ಮೊದಲಾದರೆ ವಾರಗಟ್ಟಲೆ ಸಿನಿಮಾ ನೋಡುತ್ತಿದ್ದೆ. ಬೇರೆ ಬೇರೆ ಕನಸುಗಳು ಬೀಳುತ್ತಿದ್ದವು. ಮನೆಯಲ್ಲೀಗ ಟಿವಿಯಿದೆ. ದಿನವೂ ಬೇರೆ ಬೇರೆ ಸಿನಿಮಾ ನೋಡುತ್ತೇನೆ. ಆದರೆ ಬೀಳುತ್ತಿರುವುದು ಒಂದೇ ಕನಸು" ಎನ್ನುವಾಗ ಉಮಾಶ್ರೀಯ ಮುಖದಲ್ಲಿನ ಒತ್ತಡ, ಕಣ್ಣಲ್ಲಿ ಕರಗುತ್ತಿರುವ ನೋವು ಪ್ರೇಕ್ಷಕನಿಗೆ ದಾಟುತ್ತದೆ.
ಉಮಾಶ್ರೀಯ ನಟನೆಯ ತೀವ್ರತೆಯ ಸನ್ನಿವೇಶಗಳು "ಗುಲಾಬಿ ಟಾಕೀಸು" ಸಿನಿಮಾದ ಹಲವೆಡೆ ಕಾಣುತ್ತದೆ. ಉಮಾಶ್ರೀಯ ಅಭಿನಯಕ್ಕೊಂದು ಸಲಾಮು ಹೇಳಲು ಗುಲಾಬಿಯನ್ನು ಮನೆಯಿಂದ ಹೊರಕ್ಕೆ ಹಾಕುವ ಸನ್ನಿವೇಶವೊಂದೇ ಸಾಕು. ಆ ಸನ್ನಿವೇಶದಲ್ಲಿ ಗುಲಾಬಿಯ ಪ್ರತಿಭಟನೆಯ ಪರಿಯನ್ನೊಮ್ಮೆ ನೀವು ನೋಡಬೇಕು. ಪಾತ್ರೆಗಳನ್ನು ಮನೆಯಿಂದ ಹೊರಹಾಕುತ್ತಿರುವಾಗ ಅದನ್ನೆಲ್ಲಾ ಹೆಕ್ಕಿ ಮತ್ತೆ ಒಳಗಿಡಲು ಪ್ರಯತ್ನಿಸುವುದು, ಕಬ್ಬಿಣದ ಪೆಟ್ಟಿಗೆಯ ಮೇಲೆ ಜಗ್ಗದಂತೆ ಕೂರುವ ಪರಿಯನ್ನು ನೋಡಿದಾಗ ಉಮಾಶ್ರಿಯೊಳಗಿರುವ ಗುಲಾಬಿ ಅರ್ಥವಾಗುತ್ತಾ ಹೋಗುತ್ತಾಳೆ.

ಗುಲಾಬಿಯಂತಹ ಪಾತ್ರವನ್ನು ಉಮಾಶ್ರೀಯ ಮೂಲಕ ತೆರೆಗೆ ತಂದ ಗಿರೀಶ್ ಕಾಸರವಳ್ಳಿಯವರಿಗೆ ಅಭಿನಂದನೆಗಳು ಸಲ್ಲಲೇಬೇಕು.....
ಮತ್ತಷ್ಟು ಒಳ್ಳೆಯ ಗುಲಾಬಿಗಳನ್ನು ಉಮಾಶ್ರೀ ಮುಂದೆಯೂ ಕಟ್ಟಿಕೊಡಲಿ.
ಓದಿಲ್ಲವಾದಲ್ಲಿ ಕೆಳಗಿನ ಕೊಂಡಿ ಕ್ಲಿಕ್ ಮಾಡಿ. ||
ಗುರುವಾರ, ಆಗಸ್ಟ್ 27, 2009
ಬೇಯುವ ವಿಷಾದಗಳ ಹೊಸ್ತಿಲಲ್ಲಿ ಸ್ವಗತವೆಂಬ ಮೌನರಾಗ

ಕಳೆದು ಹೋಗುವುದನ್ನು ಹುಡುಕುವ ಸಿನಿಮಾಗಳು ವಿಶ್ವದ ಹಲವು ಭಾಷೆಗಳಲ್ಲಿ ಬಂದಿವೆ. ಕಳೆದು ಹೋದ ಪ್ರೇಮಿ, ಗೆಳೆಯ, ಅಮ್ಮ, ಶೂ...ಹೀಗೆ ಪಟ್ಟಿ ಬೆಳೆಯುತ್ತದೆ.ಆದರೆ ಮನುಷ್ಯನೊಬ್ಬ ತನ್ನನ್ನೇ ದಿನ ನಿತ್ಯದಲ್ಲಿ ಕಳೆದುಕೊಂಡರೆ? ಕಳೆದು ಹೋಗಿದ್ದೇನೆ ಎಂದು ಅರಿವಾಗದೆ ಬದುಕುತ್ತಿದ್ದರೆ??--40 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ "ದಿ ಬ್ಯಾಂಡ್ಸ್ ವಿಸಿಟ್" ಎನ್ನುವ ಇಸ್ರೇಲಿ ಸಿನಿಮಾ ಚರ್ಚಿಸುವುದು ಇದೇ ವಿಷಯವನ್ನೇ.
ಈಜಿಪ್ಟಿನ ಅಲೆಗ್ಸಾಂಡ್ರಿಯಾ ಸೆರೆಮೋನಿಯಲ್ ಪೋಲಿಸ್ ಆರ್ಕೆಸ್ಟ್ರಾ, ಇಸ್ರೇಲಿನ ಅರಬ್ ಕಲ್ಚರ್ ಅಕಾಡೆಮಿಯಲ್ಲಿ ಕಾರ್ಯಕ್ರಮ ನೀಡಲು ಬಂದಿಳಿಯುತ್ತದೆ. ಆದರೆ ವಿಳಾಸ ತಪ್ಪಿ ಅನಾಮಿಕ ಊರಿನಲ್ಲಿ ನಿಂತುಬಿಡುತ್ತದೆ. ದಿಕ್ಕು ತೋಚದೆ ಪಕ್ಕದ ರೆಸ್ಟೋರೆಂಟಿನಲ್ಲಿ ಆಶ್ರಯ ಬೇಡುತ್ತದೆ.ಅಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಬಸ್ಸಿಗೆ ಹೊರಡುತ್ತದೆ. ಇದು ಕತೆ. ಹೀಗೆ ಆರ್ಕೆಸ್ಟ್ರಾ ಗುಂಪಿನ 8 ಮಂದಿ,ಅತಿ ಮುಖ್ಯವಾಗಿ ತೌಫೀಕ್ ಪರಿಚಯವೇ ಇಲ್ಲದ ಊರೊಳಗೆ ತನ್ನನ್ನು ಕಂಡುಕೊಳ್ಳುವ ಕತೆಯಿದು.
ಇರಾನ್ ಕೊಲಿರಿನ್ ನಿರ್ದೇಶನದ ಮೊದಲ ಸಿನಿಮಾ. ಕತೆಯೂ ಈತನದ್ದೇ. 2007ರಲ್ಲಿ ಈ ಸಿನಿಮಾ ನಿರ್ಮಾಣವಾಯಿತು. ಮೌನವನ್ನು ಬಳಸಿ ವ್ಯಕ್ತಿಯ ಮನವನ್ನು ತೆರೆದಿಡುವ ತಂತ್ರ ಇಲ್ಲಿದೆ. ಹಾಸ್ಯಪ್ರಜ್ಞೆಯನ್ನು ಜೊತೆಗಿಟ್ಟುಕೊಂಡು ಕತೆ ಹೇಳುತ್ತಾನೆ ಕೊಲಿರಿನ್.
ಆರ್ಕೆಸ್ಟ್ರಾದ ನಾಯಕ ತೌಫೀಕ್ ನ ಒಳಗೊಂದು ನೋವಿನ ಕಡಲಿದೆ. ಸಾವಿರ ಸ್ವಗತಗಳಿವೆ. ತನ್ನ ಮಗನ ಬಗ್ಗೆ ಕಠೋರವಾಗಿದ್ದರಿಂದ ಹೆಂಡತಿ ಕೊರಗಿ ಸತ್ತಳು ಎಂಬ ಪಾಪಪ್ರಜ್ಞೆಯಿದೆ. ಸಾಂಪ್ರದಾಯಿಕ ಸಂಗೀತ ಯುವಜನರಿಂದ ಕಡೆಗಣಿಸಲ್ಪಡುತ್ತಿರುವುದಕ್ಕೆ ಬೇಜಾರಿದೆ. ಇದೆಲ್ಲವನ್ನು ಮರೆಮಾಚಲು ಆತನಿಗೆ ಬ್ಯಾಂಡ್ ಟ್ರೂಪ್ ಬೇಕೇ ಬೇಕು. ಪ್ರಯಾಣ, ಏಕಾಂತ ಎಲ್ಲದರೊಳಗೆ ಬೇಯುತ್ತಾನೆ ಆತ. ಇವರಿಗೆ ಆಶ್ರಯ ನೀಡುವ ರೆಸ್ಟೋರೆಂಟಿನ ಮಾಲಕಿ "ದಿನಾ"ಳದ್ದು ಇದೇ ತರಹದ ಕತೆ. ಜೊತೆಗಿದ್ದ ಪ್ರಿಯತಮ ಈಗಿಲ್ಲ. ರೆಸ್ಟೋರೆಂಟಿನ ಎದುರಿನ ಲೈಟು ಕಂಬಗಳ ಸುಂದರ ರಸ್ತೆಯಂತೆ ಆಕೆಯದ್ದೂ ಒಂದು ಬದುಕು. ಆದರೆ ಆ ರಸ್ತೆ ಯಾವಾಗಲೂ ನಿರ್ಜನ, ನಿರ್ಜೀವ.
ಈ ಸಿನಿಮಾ ಹೇಗೆ ಹುಟ್ಟಿಕೊಂಡಿತು, ಇಂತಹದೊಂದು ಸರಳ, ಪರಿಣಾಮಕಾರಿ ಸಿನಿಮಾದ ವಸ್ತು ಹೇಗೆ ಸಾಧ್ಯವಾಯಿತು ಅನ್ನುವುದನ್ನು ನಿರ್ದೇಶಕ ಕೊಲಿರಿನ್ ಮಾತಲ್ಲೇ ಕೇಳಬೇಕು.
"ಇಸ್ರೇಲಿನಲ್ಲಿ 80ರ ದಶಕದಲ್ಲಿ ಈಜಿಪ್ಟ್ ಸಿನಿಮಾಗಳ ಕ್ರೇಜ್ ಇದ್ದ ಕಾಲ..ಆಗ ನಾನಿನ್ನೂ ಬಾಲಕ. ನನ್ನಂತೆ ಬಹುತೇಕರಿಗೆ ಒಮರ್ ಶರೀಫ್ ಸಿನಿಮಾಗಳೆಂದರೆ ಪಂಚಪ್ರಾಣ. ಇದ್ದಿದ್ದು ಒಂದೇ ಟಿವಿ ಚಾನೆಲ್. ಪ್ರತೀ ಶುಕ್ರವಾರ ಸಂಜೆಯ ಹೊತ್ತಿಗೆ ಅದೇ ಮನರಂಜನೆ. ಆ ಸಿನಿಮಾ ಮುಗಿದ ಮೇಲೆ ಕೆಲವೊಮ್ಮೆ ಅರ್ಧಗಂಟೆ "ಇಸ್ರೇಲ್ ಬ್ರಾಡ್ಕಾಸ್ಟಿಂಗ್ ಆರ್ಕೆಸ್ಟ್ರಾ"(ಐಬಿಎ)ದ ಸಂಗೀತ ಕಾರ್ಯಕ್ರಮವಿರುತ್ತಿತ್ತು. ಶಾಸ್ತ್ರೀಯ ಅರೇಬಿಕ್ ಸಂಗೀತವದು. ಟಿವಿ ಖಾಸಗೀಕರಣಕ್ಕೆ ತುತ್ತಾದ ಮೇಲೆ ನಮ್ಮಲ್ಲಿ ನೂರಾರು ಚಾನೆಲ್ ಗಳು ಬಂದವು. ಎಂ ಟಿವಿ ಬಂತು. ಬಿಬಿಸಿ ಬಂತು. 30 ಸೆಕೆಂಡಿನ ಜಾಹೀರಾತುಗಳು ರಾರಾಜಿಸಿದವು. ಇದರ ಮಧ್ಯೆ ಶಾಶ್ವತವಾಗಿ ಕಳೆದು ಹೋದದ್ದು ಮಾತ್ರ ಶಾಸ್ತ್ರೀಯ ಅರೇಬಿಕ್ ಸಂಗೀತ ನುಡಿಸುತ್ತಿದ್ದ ಆರ್ಕೆಸ್ಟ್ರಾ.
ಆದರೆ ಇವತ್ತು....
ಇವತ್ತು ನನ್ನ ಮತ್ತು ಗೆಳೆಯನ ಮಗ ಜಗಮಗಿಸುವ ಮೆಕ್ಡೊನಾಲ್ಡ್ ಬೋರ್ಡುಗಳ ಕೆಳಗೆ ಭೇಟಿಯಾಗುತ್ತಾರೆ. ಅದು ಅವರಿಗೆ "ಕಂಫರ್ಟ್" ಕೊಡುತ್ತಿದೆ" ಎಂದು ಬದಲಾದ ಮನಸ್ಥಿತಿಯೊಳಗೆ ಕಳೆದು ಹೋದದ್ದನ್ನು, ತನ್ನ ಮಕ್ಕಳು ಕಳೆದುಕೊಂಡ ಅಪೂರ್ವ ಕ್ಷಣಗಳನ್ನು ನೆನೆಸಿಕೊಳ್ಳುತ್ತಾನೆ ಕೊಲಿರಿನ್. ಇದೇ ಬೇಗುದಿ ಸಿನಿಮಾದಲ್ಲಿರುವ ತೌಫೀಕ್ ಗೂ ಇದೆ. ಅತೀ ವೇಗದ ಸಾಂಸ್ಕ್ರತಿಕ ಪಲ್ಲಟದ ಬಗ್ಗೆ ಗಾಬರಿಯಿದೆ. ದಿನಾ ಜೊತೆ ಹೋಟೆಲಿನಲ್ಲಿ ಕುಳಿತಾಗ ಆತ ಹಂಚಿಕೊಳ್ಳುವುದು ಇದನ್ನೇ. ಅದಕ್ಕೇ ಆತನಿಗೆ ಖಾಲಿದ್ ಅಧಃಪತನಕ್ಕಿಳಿದ, ಶಿಸ್ತಿಲ್ಲದ ವ್ಯಕ್ತಿಯಂತೆ ಕಾಣುತ್ತಾನೆ. ಟಿವಿ ಖಾಸಗಿಕರಣಕ್ಕೆ ಒಳಗಾದ ಮೇಲೆ ಇಸ್ರೇಲಿನಲ್ಲಿ ಹುಟ್ಟಿಕೊಂಡ ಯುವಜನತೆಯ ಪ್ರತಿನಿಧಿ ಆತ..
ಆದರೆ ಇದೆಲ್ಲದರ ಮಧ್ಯೆ ತೌಫೀಕ್ ವೇಗವಾದ ಸಾಂಸ್ಕ್ರತಿಕ ಪಲ್ಲಟಕ್ಕೆ ಹೊಂದಿಕೊಲ್ಲುವುದು ಅಸಾಧ್ಯವಾಗುತ್ತದೆ. ಗೊಂದಲ, ಅಸಹಾಯಕತೆ ಮಧ್ಯೆ ತನ್ನನ್ನು ಕಂಡುಕೊಳ್ಳುವಲ್ಲಿ ಆತ ಸೋಲುತ್ತಾನೆ. ದಿನಾ ಜೊತೆಗೊಂದು ಸಂವಾದ ಸಾಧ್ಯವಾದ ಮೇಲಷ್ಟೇ ಆತನಿಗೆ ಖಾಲಿದ್(ಅಂದರೆ ಹೊಸ ತಲೆಮಾರು)ಅರ್ಥವಾಗುತ್ತಾನೆ. ದಿನಾ, ತೌಫೀಕ್ ರ ಪರಿಚಯ ಇಬ್ಬರ ವಾಸ್ತವವನ್ನು ಬದಲಾಯಿಸುತ್ತದೆ. ತಮ್ಮೊಳಗೆ ಬಚ್ಚಿಟ್ಟುಕೊಂಡಿದ್ದ ವಿಷಾದ ರಾಗಗಳನ್ನು ಬಿಚ್ಚಿಡುತ್ತಾರೆ.ಎಲ್ಲೋ ಒಂದೆಡೆ ದುಖಃವನ್ನು ಬಸಿದು ನಿರಾಳವಾಗುವ ಹಾಗೆ. ಬಹುಷಃ ಈ ನಿರಾಳತೆಯೇ ತೌಫೀಕ್ ನಿಗೆ ಚೈತನ್ಯಪೂರ್ಣವಾಗಿ ಸುತ್ತಲಿನ ಜನರನ್ನು ನೋಡಲು ಕಲಿಸುತ್ತದೆ. ತಾನು ಬ್ಯಾಂಡ್ ಟ್ರೂಪಿನಿಂದ ಗೇಟ್ ಪಾಸ್ ಕೊಡಬೇಕಿದ್ದ ಚೆಲ್ಲು ಹುಡುಗ ಖಾಲಿದ್ ಇಷ್ಟವಾಗಲು ಶುರುವಾಗುತ್ತಾನೆ. ಖಾಲಿದ್ ಕೇವಲ "ಮಗನಷ್ಟೇ ಅಲ್ಲ.. ಬದಲಾಗಿ ತನ್ನ ಹಾಗು ಯುವ ತಲೆಮಾರಿನ ಸೇತುವೆಗೆ ಕೊಂಡಿಯಾಗುತ್ತಾನೆ. . ಬದುಕಿನ ಲಯವನ್ನು ಆತ ಮತ್ತೆ ಪತ್ತೆ ಹಚ್ಚಿದ್ದಾನೆ. ಅದೇ ಕಾರಣಕ್ಕೆ ಆತ ಕೊನೆಯಲ್ಲಿ ಖಾಲಿದ್ ವಯೋಲಿನ್ ನುಡಿಸುವಾಗ ತನ್ಮಯತೆಯಿಂದ ಆನಂದಿಸುತ್ತಾನೆ.
ಇವರ ನಡುವೆ ಸಿನಿಮಾದಲ್ಲೊಂದು ಪುಟ್ಟ ಪಾತ್ರವಿದೆ. ಆತ ಯುವಕ. ಹಗಲು-ರಾತ್ರಿ ಎಡೆಬಿಡದೆ ತನ್ನ ಪ್ರಿಯತಮೆಯ ಫೋನಿಗೆ ಬೂತಿನ ಬುಡದಲ್ಲೇ ಕಾಯುತ್ತಿರುತ್ತಾನೆ. ಬೇರೆ ಯಾರಾದರು ಅಲ್ಲಿ ಫೋನು ಮಾಡಲು ಬಂದರೆ ಆತನಿಗೆ ಕಿರಿಕಿರಿ. ಆಕೆ ಫೋನು ಮಾಡಿಯೇ ಮಾಡುತ್ತಾಳೆ ಅನ್ನುವ ಕಾತರ, ಇನ್ನೂ ಮಾಡಿಲ್ಲವಲ್ಲ ಎನ್ನುವ ಸುಮಧುರ ವೇದನೆ ಅವನಲ್ಲಿದೆ.
ಇಡೀ ಚಿತ್ರವನ್ನು ಸಂಯಮದಿಂದ, ನಿಶ್ಯಬ್ದದ ಜೊತೆಗೆ ಹೆಣೆಯುತ್ತಾ ಹೋಗುತ್ತಾನೆ ನಿರ್ದೇಶಕ. ತೌಫಿಕ್ ಪಾತ್ರದ ಸಸನ್ ಗಬಾಯ್ ಅಭಿನಯವನ್ನು ಮಿಡ್ ಶಾಟ್ ಗಳಲ್ಲಿ ನೋಡುವುದೇ ಅಪೂರ್ವ ಘಳಿಗೆ. ಮಿಡ್ ಶಾಟ್ ಗಳನ್ನು ಬಳಸಿ ತೌಫೀಕ್ ನ ನೋವನ್ನು ನಮಗೆ ದಾಟಿಸುವಲ್ಲಿ ಕೊಲಿರಿನ್ ಸಫಲನಾಗುತ್ತಾನೆ. ಮುಖದ ನೆರಿಗೆ, ಹುಬ್ಬಿನ ಚಲನೆ, ಕಣ್ಣು ಬತ್ತುವುದು, ಮತ್ತೆ ಅರಳುವುದು-ಇದೆಲ್ಲ ಸಿನಿಮಾಕ್ಕೆ ಶಕ್ತಿ. ಉಳಿದ ಬ್ಯಾಂಡಿನ ಮಂದಿ ಕೂಡಾ ಅಭಿನಯದಲ್ಲಿ ಪೈಪೋಟಿ ನೀಡುತ್ತಿರುತ್ತಾರೆ. ದಿನಾ ಪಾತ್ರದಲ್ಲಿ ರೊನಿತ್ ಎಲ್ಕಾಬೆಟ್ಸ್ ಳನ್ನು ಮರೆಯಲು ಸಾಧ್ಯವಾಗುವುದಿಲ್ಲ.
ಮೌನವನ್ನು ಸ್ವಗತದ ಜಾಗದಲ್ಲಿ ಬಳಸುತ್ತಾ ಬದುಕನ್ನು ಪುನರ್ ಕಟ್ಟಿಕೊಳ್ಳುವ ತಂತ್ರ ಚಿತ್ರಕತೆಯ ಮುಖ್ಯ ಭಾಗ. ನಿರ್ಜನವಾಗಿ ಬಿದ್ದುಕೊಂಡಿರುವ ರಸ್ತೆ, ರೆಸ್ಟೋರೆಂಟ್, ರಾತ್ರಿಯ ಜೊತೆಗೊಂದು ನಡಿಗೆ, ಬೋಳು ಬೆಂಚು ಇದೆಲ್ಲಾ ದ್ರಶ್ಯದ ಮೂಲಕ ಸಿನಿಮಾದಲ್ಲಿ ಕಾಣುವಾಗ ಕತೆಗೊಂದು ಅನುಭೂತಿ ಸಿದ್ಧಿಸುತ್ತದೆ.
ರಾತ್ರಿಯ ನೀರವತೆಯಲ್ಲಿ ಬೆಂಚೊಂದರ ಮೇಲೆ ಕುಳಿತು ದಿನಾ-ತೌಫೀಕ್ ಮಾತನಾಡುವ ದ್ರಶ್ಯ ವಿನ್ಯಾಸ ಆಪ್ತ. ಪರಸ್ಪರರನ್ನು ಅರಿಯುವ ಪ್ರಯತ್ನದಲ್ಲಿ ತೌಫೀಕ್ ಗೆ ಸಂಗೀತದಷ್ಟೇ ಖುಷಿ ಸಿಗುತ್ತದೆ. ಅದನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳಲು ದಿನಾ ಕೂಡಾ ಪ್ರಯತ್ನಿಸುತ್ತಾಳೆ.
ಹರಳುಗಟ್ಟಿದ ವಿಷಾದಗಳನ್ನು ಒಡೆಯುತ್ತಾ ಕಣವಾಗಿ ಕರಗಿಸಿ ಸಿನಿಮಾ ಕೊನೆಯಾಗುವಾಗ, ತಾವು ಕಳೆದುಕೊಂಡಿದ್ದೇನು ಎನ್ನುವ ಪ್ರಜ್ಞೆ ಮತ್ತು ಅದನ್ನು ಪುನರ್ ತುಂಬಿಕೊಳ್ಳುವ ಅವಕಾಶ ತೌಫೀಕ್, ದಿನಾಳಿಗೆ ಪ್ರಾಪ್ತವಾಗುತ್ತದೆ.
ಕಾಯುತ್ತಿರುವ ಪ್ರೇಮಿಗೆ ಕೊನೆಗೂ ಪ್ರಿಯತಮೆಯಿಂದ ಕರೆ ಬರುತ್ತದೆ...
----------------------------------------------------------------------------------------
2007ರಲ್ಲಿ ಇಸ್ರೇಲ್ ನಿಂದ ಈ ಸಿನಿಮಾ ಆಸ್ಕರ್ ನ ಅತ್ಯುತ್ತಮ ವಿದೇಶಿ ವಿಭಾಗಕ್ಕೆ ಸ್ಪರ್ಧಿಸಲು ಪೈಪೋಟಿ ನಡೆಸಿತ್ತು. ಆದರೆ ಶೇ.50ರಷ್ಟು ಸಂಭಾಷಣೆ ಇಂಗ್ಲೀಷಿನಲ್ಲಿದ್ದುದರಿಂದ "Beaufort" ಸಿನಿಮಾ ಆಯ್ಕೆಯಾಯಿತು. ಇರಾನ್ ಕೊಲಿರಿನ್ ಈಗ "ದಿ ಪಾತ್ ವೇಸ್ ಇನ್ ದ ಡೆಸರ್ಟ್" ಸಿನಿಮಾ ತಯಾರಿಯಲ್ಲಿ ನಿರತನಾಗಿದ್ದಾನೆ.
----------------------------------------------------------------------------------------
ಬುಧವಾರ, ಏಪ್ರಿಲ್ 22, 2009
ಇರಾನಿನಲ್ಲಿ ಸಿನಿಮಾ ಸುಲಭದ ಮಾತಲ್ಲ

ಕುಡಿತ, ಪ್ರೇಮಿಗಳ ಸರಸ-ಸಲ್ಲಾಪ, ಕಡಿಮೆ ಬಟ್ಟೆ ಧರಿಸಿದ ಮಹಿಳೆ ಎಲ್ಲದಕ್ಕೂ ಇಲ್ಲಿ ಕತ್ತರಿ. ಪ್ರದರ್ಶನಕ್ಕೆ ಅಯೋಗ್ಯ.
ವರ್ಷದಲ್ಲಿ 8ರಿಂದ 10 ಹಾಲಿವುಡ್ ಸಿನಿಮಾಗಳು ಥಿಯೇಟರ್ಗಳಲ್ಲಿ ಪ್ರದರ್ಶನ ಕಂಡರೇನೇ ಹೆಚ್ಚು. ಇಲ್ಲಿ ಸೆನ್ಸಾರ್ ಮಂಡಳಿ ಕತ್ತರಿ ಆಡಿಸಿದ ಸಮಕಾಲೀನ ಹಾಲಿವುಡ್ ಕ್ಲಾಸಿಕ್ ಸಿನಿಮಾಗಳು ಮಾತ್ರ ಟಿವಿಯಲ್ಲಿ ಪ್ರದರ್ಶನ ಕಾಣುತ್ತವೆ.
ಇರಾನಿನ 53 ಮಿಲಿಯನ್ ಜನರ ಭಾಷೆ ಪರ್ಶಿಯನ್. ಹಾಗಾಗಿ ಇದೇ ಅಧಿಕ ಭಾಷೆಯಲ್ಲಿ ಚಿತ್ರಗಳು ತಯಾರಾಗುತ್ತವೆ.
ವರ್ಷಕ್ಕೆ ಹೆಚ್ಚುಕಮ್ಮಿ 130 ಚಿತ್ರಗಳು ತಯಾರಾಗುತ್ತವೆ. ಕಾಮಿಡಿ, ರೊಮ್ಯಾಂಟಿಕ್ ಮೆಲೋಡ್ರಾಮಾ ಮತ್ತು ಕೌಟುಂಬಿಕ ಕಾಮಿಡಿ ಚಿತ್ರಗಳೇ ಹೆಚ್ಚು.
ಕಲಾತ್ಮಕ ಸಿನಿಮಾಗಳು ಹೆಚ್ಚಾಗಿ ಥಿಯೇಟರ್ಗಳಲ್ಲಿ ಪ್ರದರ್ಶನ ಕಾಣುವುದಿಲ್ಲ. ಆದರೆ ಕೆಲವಾರು ಸಿನಿಮಾಗಳು ಹೌಸ್ಫುಲ್ ಪ್ರದರ್ಶನ ಕಂಡ ಉದಾಹರಣೆಗಳಿವೆ.
ನಮ್ಮಲ್ಲಿರುವಂತೆ ಅಲ್ಲಿಯೂ ಪೈರಸಿ ಹುಲುಸಾಗಿಯೇ ಬೆಳೆದಿದೆ. ಆದ್ದರಿಂದ ಕಲಾತ್ಮಕ ಸಿನಿಮಾಗಳ ಪೈರೇಟೆಡ್ ಡಿವಿಡಿಗಳು ಸುಲಭಾಗಿ ಸಿಗುತ್ತವೆ.
ಅರಬ್ ಮತ್ತು ಭಾರತೀಯ ಸಿನಿಮಾಗಳೆಡೆಗೆ ಇರಾನಿಯರಿಗೆ ಅಷ್ಟಾಗಿ ಆಸಕ್ತಿ ಇಲ್ಲ. ಕಳೆದ ಎಂಟು ವರ್ಷಗಳಲ್ಲಿ ಈ ಎರಡೂ ದೇಶಗಳ ಒಂದೇ ಒಂದು ಸಿನಿಮಾ ಕೂಡಾ ಪ್ರದರ್ಶನ ಕಂಡಿಲ್ಲ.

ಪರ್ಶಿಯನ್ನರ ದೃಶ್ಯ ಮಾಧ್ಯಮಕ್ಕೆ ಸುದೀರ್ಫ ಇತಿಹಾಸವಿದೆ. ಕ್ರಿ.ಪೂ 500ರಿಂದ ದೃಶ್ಯ ಅಭಿವ್ಯಕ್ತಿ ಪ್ರಾರಂಭವಾಯಿತು ಎನ್ನುವುದಕ್ಕೆ ದಾಖಲೆಗಳಿವೆ. ದೃಶ್ಯ ಕಲೆ, ಆಲಂಕಾರಿಕ ಕಲೆ, ಸಾಹಿತ್ಯ, ಕಟ್ಟಡ ನಿರ್ಮಾಣ, ನೃತ್ಯ, ಸಂಗೀತ ಎಲ್ಲದರಲ್ಲೂ ಪರ್ಶಿಯನ್ನರು ಛಾಪು
ಭಾನುವಾರ, ಏಪ್ರಿಲ್ 12, 2009
ಫಸ್ಟ್ ಹಾಫ್ ಮುಗಿದಿದೆ

ಮಜಿದಿಗೆ 50: "ಚಿತ್ರ-ಕತೆ"

ನಮ್ಮ ಜಗತ್ತಿನ ಒಂದು ಭಾಗವೇ
ಮಜಿದ್ ಮಜಿದಿಯ ಸಿನಿಮಾಗಳಲ್ಲಿನ ಮುಸ್ಲಿಂ ಹೆಣ್ಣು ಪಾತ್ರಗಳಿಗೆ ಹೆಚ್ಚು ಜೀವಂತಿಕೆಯಿದೆ. "ದಿ ಫಾದರ್" ಚಿತ್ರದಲ್ಲಿ ಬರುವ ತಾಯಿಯ ಪಾತ್ರ ತನ್ನ ಮಕ್ಕಳಿಗಾಗಿ ಮಾಡಿಕೊಳ್ಳುವ ಎರಡನೇ ಮದುವೆ, "ಬರನ್" ಚಿತ್ರದಲ್ಲಿ ಹುಡುಗಿ ಹುಡುಗನಂತೆ ವೇಷ ಧರಿಸಿ ದುಡಿಯುವ ಕತೆ, ವ್ಯಕ್ತಿತ್ವ ಎಲ್ಲದರಲ್ಲೂ ಡೈನಮಿಕ್ ಅಂಶಗಳು ಕಾಣುತ್ತವೆ. ಆದರೆ ಪಾಶ್ಚಿಮಾತ್ಯ ಸಿನಿಮಾ ನಿರ್ಮಾಪಕರು ಮುಸ್ಲಿಂ ಮಹಿಳೆಯರನ್ನು ದೈಹಿಕ ಮತ್ತು ಮಾನಸಿಕವಾಗಿ ಬಲಹೀನ ಎಂದು ಚಿತ್ರಿಸುವುದಲ್ಲಿ ಪೂರ್ವಾಗ್ರಹಗಳಿವೆ, ದುರುದ್ದೇಶಗಳಿವೆ ಎನ್ನುವ ತಕರಾರು ಮಜಿದಿಯದ್ದು.
ಮಜಿದಿಗೆ 50: ಬದುಕಿನ "ಕತೆ"

ಭಾನುವಾರ, ಏಪ್ರಿಲ್ 5, 2009
ಬದುಕಿನ ಫುಟ್ಪಾತಿನಲ್ಲಿ ಭರವಸೆಯ ರಂಗೋಲಿ


ಭಾನುವಾರ, ಮಾರ್ಚ್ 22, 2009
"ಸಾವಿನ ಹೊಸ್ತಿಲಲ್ಲಿ ನಿಂತು ನಕ್ಕವರ ಕತೆ"









