ಗುರುವಾರ, ಸೆಪ್ಟೆಂಬರ್ 2, 2010

ಸಂತೆಯಲಿ ನಿಂತಂತೆ, ಪ್ರೀತಿ ಕತೆಯಲ್ಲೊಂದು ಗೊಂದಲಾಪುರ

(ಸೆಪ್ಟೆಂಬರ್ ತಿಂಗಳ "ರೂಪತಾರಾ"ದ ಸಂವಾದ ವಿಭಾಗದಲ್ಲಿ ಪ್ರಕಟವಾದ ಬರಹ)

ಹೆಸರೇ ಹೇಳುವಂತೆ ಇದು ಕೃಷ್ಣನ್ ಲವ್ ಸ್ಟೋರಿ..ಒಂದು ಪ್ರೀತಿಯ ಕತೆಗೆ ಬೇಕಾದ ಎಲ್ಲವೂ ಇಲ್ಲಿದೆ. ನಾಯಕಿಯ ಪ್ರೀತಿಯ ಮೋಡಿಗೆ ಒಳಗಾಗುವ ನಾಯಕ, ಬಡತನದಲ್ಲಿದ್ದೂ ಮಹಾತ್ವಾಕಾಂಕ್ಷೆಯ ಮೆಟ್ಟಿಲು ಹತ್ತಲು ರೆಡಿಯಾಗಿ ನಿಂತಿರುವ ಘಾಟಿ ನಾಯಕಿ, ಕುಡುಕ ಅಣ್ಣ, ಪ್ರೀತಿಯ ಅಪ್ಪ ಹೀಗೆ ಎಲ್ಲರಿಗೂ ಅವರದ್ದೇ ಆದ ವಿಸ್ತಾರವಿದೆ, ಮಿತಿಯಿದೆ..ಒಂದು ಪ್ರೇಮಕತೆಯ ಚಿತ್ರದಲ್ಲಿ ಏನೆಲ್ಲಾ ಇರಬಹುದು ಎಂದು ನಾವೆಲ್ಲಾ ನಿರೀಕ್ಷಿಸಬಹುದೋ ಅದೆಲ್ಲಾ ಇದೆ...ಅದಕ್ಕಿಂತ ಹೊರತಾಗಿ ಹದಿಹರೆಯದ ಹುಡುಗರ ಭಾಷೆಯಲ್ಲಿ ಹೇಳಬಹುದಾದ ಫುಲ್ ಫೀಲಿಂಗಿದೆ!....ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ನಿರ್ದೇಶಕನೆಂಬ ನಿಜವಾದ ನಾಯಕನಿದ್ದಾನೆ.



ಉತ್ತಮವಾದ ಪ್ರತೀ ದೃಶ್ಯಕ್ಕೂ ಒಂದು ಆರಂಭ, ಮಧ್ಯಂತರ ಹಾಗೂ ಕೊನೆ ಇದ್ದೇ ಇರುತ್ತದೆ. ನಾಯಕ ನಾಯಕಿಯೆದುರು ಪ್ರೀತಿ ನಿವೇದನೆ ಮಾಡುವ  ದೃಶ್ಯವೇ ಇರಲಿ, ಅಥವಾ ನಾಯಕಿ ನಾಯಕನನ್ನು ತಿರಸ್ಕರಿಸುವ ದೃಶ್ಯವೇ ಇರಲಿ, ಮೇಲೆ ಹೇಳಿದ 3 ಹಂತಗಳು ಇದ್ದೇ ಇರುತ್ತವೆ. ಇದೆಲ್ಲಾ ಪರಿಣಾಮಕಾರಿಯಾಗಿದ್ದಾಗ ಮಾತ್ರ ದೃಶ್ಯವೊಂದರ ತೀವ್ರತೆಯನ್ನು, ಆದ್ರತೆಯನ್ನು, ನಲಿವನ್ನು ಕಟ್ಟಿಕೊಡಲು ಸಾಧ್ಯ. ಯೋಗರಾಜ್ ಭಟ್ಟರ ಮುಂಗಾರು ಮಳೆ ಗೆಲ್ಲಲು, ಜನಸಾಮಾನ್ಯನಲ್ಲಿ ನೆಲೆ ನಿಲ್ಲಲು ಚಿತ್ರಕತೆಯಲ್ಲಿ ಬರುವ ಇಂತಹ ಅಂಶಗಳ ಯಶಸ್ವಿ ಅಳವಡಿಕೆಯೇ ಕಾರಣ. ಈ ಸಿನಿಮಾಕ್ಕೆ ಶಶಾಂಕ್ ಆಯ್ದುಕೊಂಡ ಕತೆ ತುಂಬಾ ಸರಳವಾದದ್ದು. ಆದರೆ ಅದನ್ನು ಒಂದು ಚಿತ್ರವಾಗಿ ತೆರೆ ಮೇಲೆ ನಿರೂಪಿಸುವ ರೀತಿಯಿಂದ ಗಮನ ಸೆಳೆಯುತ್ತದೆ. ಚಿತ್ರಕ್ಕಿರುವ ಸಮಸ್ಯೆ ಪ್ರಥಮಾರ್ಧ. ಆರ್ಡಿನರಿ ಅಂತನ್ನಿಸುವ ವಿಷಯವನ್ನು ಆಪ್ತವಾಗಿ ಚಿತ್ರಿಸುವಂತೆ ಮಾಡುವ ಶಕ್ತಿ ಪ್ರತೀ ದೃಶ್ಯಕ್ಕಿದೆ. ಆದರೆ ಕೃಷ್ಣನ ಲವ್ ಸ್ಟೋರಿಯ ಪ್ರಥಮಾರ್ಧ ದೃಶ್ಯದ ಮಿಸ್ ಮ್ಯಾನೇಜ್ಮೆಂಟಿನಲ್ಲೇ ಬೋರ್ ಹೊಡೆಸುತ್ತದೆ. ಚಿತ್ರ ಶುರುವಾಗುವಾಗಲೇ ಚಿತ್ರಕತೆಗೆ ಧಾವಂತವಿದೆ. ಎಲ್ಲಾ ಪಾತ್ರಗಳನ್ನು ಆದಷ್ಟು ಬೇಗ ಎಸ್ಟಾಬ್ಲಿಶ್ ಮಾಡಿಬಿಡಬೇಕೆಂಬ ಅವಸರ ಯಾಕೋ ನೋಡುಗನಲ್ಲಿ ಅಸಹನೆ ಹೆಚ್ಚಿಸುತ್ತದೆ. ಇಂತಹ ಧಾವಂತದಿಂದಾಗಿಯೇ ಅರ್ಧಕ್ಕೇ ಕಟ್ಟಾಗುವ ದೃಶ್ಯದ ಫ್ಲೋ ಲೆವೆಲ್ನಿಂದ ಕಿರಿಕಿರಿ ಮತ್ತಷ್ಟು ಹೆಚ್ಚುತ್ತದೆ. ಸಂಕಲನದ ಸಂದರ್ಭದಲ್ಲಿ ಕತ್ತರಿಯಾಡಿಸುವಾಗ ಎಡವಟ್ಟಾಗಿದೆಯಾ ಎನ್ನುವ ಅನುಮಾನ ಬರುತ್ತದೆ. ಗಲ್ಲಿ ಕ್ರಿಕೆಟ್ಗೆ ಸಂಬಂಧಿಸಿದ ದೃಶ್ಯಗಳಲ್ಲಿ ಇವೆಲ್ಲಾ ಎದ್ದು ಕಾಣುತ್ತದೆ.  

ಇಂಟರ್ವಲ್ನ ನಂತರದ ದ್ವಿತೀಯಾರ್ಥ ಸರಾಗವಾಗಿದೆ. ಕತೆಯ ಜೀವಾಳವಿರುವುದು ದ್ವಿತೀಯಾರ್ಧವನ್ನು ಶಶಾಂಕ್ ನಿಭಾಯಿಸುವ ರೀತಿಯಲ್ಲಿ. ಒಂದು ವಾದವಾಗುವ ಎಲ್ಲಾ ಅಪಾಯಗಳಿದ್ದ ದೃಷ್ಟಿಕೋನವನ್ನು ದೃಶ್ಯವಾಗಿ ಸೆರೆಹಿಡಿಯುವಲ್ಲಿ ಅವರ ಜಾಣ್ಮೆ ಕೆಲಸ ಮಾಡಿದೆ. ನಾಯಕಿಯ ದೃಷ್ಟಿಕೋನದಲ್ಲಿ ಕತೆಯನ್ನು ಬೆಳೆಸುವ, ನೋಡುವ ಶಶಾಂಕ್ ಶೈಲಿ ಕನ್ನಡಕ್ಕೆ ಹೊಸತೇನೂ ಅಲ್ಲದಿದ್ದರೂ ಇವತ್ತಿನ ಕಮರ್ಶಿಯಲ್ ಅಂಶಗಳ ನಡುವೆ ಅದನ್ನವರು ನಿಭಾಯಿಸುವ ರೀತಿ ಖುಷಿ ಕೊಡುತ್ತದೆ. ಇಡೀ ಚಿತ್ರವನ್ನು ಸಹ್ಯಗೊಳಿಸಿರುವುದು ರಾಧಿಕಾ ಪಂಡಿತ್ ಅಭಿನಯ..ದ್ವಿತೀಯಾರ್ಧದಲ್ಲಿ ಆಕೆ ಇಡೀ ಚಿತ್ರವನ್ನು ಆವರಿಸಿಕೊಂಡು ಬಿಡುತ್ತಾಳೆ.. ಗೀತಾಳ ಸಿಟ್ಟು, ಅಸಹಾಯಕತೆ, ಪಾಪಪ್ರಜ್ಞೆ ಎಲ್ಲವನ್ನೂ ಶಶಾಂಕ್ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ...ಆಕೆಯ ಪ್ರತೀ ನಡಿಗೆ, ಚಲನೆ, ನೋಟ, ಮಾತಿನ ಧಾಟಿ ಎಲ್ಲದರಲ್ಲೂ ಪಾತ್ರದ ಬೇಗುದಿಯಿದೆ....ನಾಯಕನನ್ನು ಬಿಟ್ಟು ಹೋಗಿ ಆಕೆ ವಾಪಾಸ್ ಬಂದಾಗ ಸೃಷ್ಟಿಯಾಗುವ ಮುಜುಗರ, ಅವಮಾನ, ಹಿಂಸೆ, ಅಕ್ಕರೆ, ಅಸಹಾಯಕತೆಯ ವಾತಾವರಣ ಎಲ್ಲವನ್ನೂ ವ್ಯವಸ್ಥಿತವಾಗೇ ನಿಭಾಯಿಸಿದ್ದಾರೆ.

ನಾಯಕಿಯ ಭಾವನೆಗಳನ್ನು ತುಂಬಾ ಸೂಕ್ಷ್ಮವಾಗಿ ಕಮರ್ಶಿಯಲ್ ಸೂಕ್ಷ್ಮಗಳನ್ನೊಳಗೊಂಡು ಕಟ್ಟಿಕೊಡುವ ಶಶಾಂಕ್ ಇತರೇ ಪಾತ್ರಗಳ ಇರುವಿಕೆಯನ್ನು ಪೇಲವ ಮಾಡಿಬಿಡುತ್ತಾರೆ ಕೆಲವೊಮ್ಮೆ...ಚಿಕ್ಕಪುಟ್ಟ ಪಾತ್ರಗಳನ್ನು ಮೇಲ್ಮೈಯಲ್ಲೇ ಅವಸರದಲ್ಲಿ ಚಿತ್ರಿಸಿ ಓಡುತ್ತಾರೆ. ಬೈಕನ್ನು ಸಿನಿಮಾದ ಚಿತ್ರಕತೆಯ ಟೂಲ್ ಆಗಿ ಬಳಸಿಕೊಂಡಂತೆ ನಾಯಕನ ಗೆಳೆಯರನ್ನು ನಿರೂಪಿಸುವಲ್ಲಿ ಇನ್ನಷ್ಟು ತಯಾರಿಗಳು ಬೇಕಿತ್ತು. ಚಿಕ್ಕ ಪಾತ್ರಕ್ಕೂ ನಾಯಕನಂತೆಯೇ ಸ್ವತಂತ್ರ ವ್ಯಕ್ತಿತ್ವವಿದೆ ಎನ್ನುತ್ತಾ ಪಾತ್ರಗಳನ್ನು ಕಟ್ಟುತ್ತಾ ಹೋದಾಗಲೇ ಚಿತ್ರಕತೆ, ಸಿನಿಮಾ ಇನ್ನಷ್ಟು ಗಟ್ಟಿಯಾಗೋದು...

ಕೃಷ್ಣನ್ ಲವ್ ಸ್ಟೋರಿಯ ಕಾಮಿಡಿ ದೃಶ್ಯಗಳಲ್ಲಿ ಲವಲವಿಕೆ ಕಾಣವುದಿಲ್ಲ. ಕಾಸಿಲ್ಲದ ನಾಯಕನ ಎದುರು ಪಿಜ್ಜಾ ಕಾರ್ನರ್, ಕಾಫಿ ಡೇ ಇದೆ. ನಾಯಕನ ಪರಿಸ್ಥಿತಿಯನ್ನು ನೋಡಿ ವೆಂಕಟ್ರಮಣಾ ಗೋವಿಂದಾ, ಗೋವಿಂದಾ ಎನ್ನಲು ಶರಣ್ ಇದ್ದಾರಷ್ಟೇ....ಮೊಗ್ಗಿನ ಮನಸಿನಲ್ಲಿ ಶರಣ್ನನ್ನು ನಾಯಕರು ಹೇಳುವ ಕತೆಯ ಭಾಗವಾಗಿ ಮಾಡುವ ಮೂಲಕ ಹಾಸ್ಯವನ್ನು ನಿರೂಪಿಸುವ ತಂತ್ರವೇ ಆಕರ್ಷಕವಾಗಿ ಕಂಡಿತ್ತು ಪ್ರೇಕ್ಷಕನಿಗೆ. ಹಾಗಿದ್ದಾಗ ಮಾತ್ರ ಸಾಮಾನ್ಯವಾದ ಕಾಮಿಡಿ ಟ್ರ್ಯಾಕ್ ಕೂಡಾ ನೋಡಿಸಿಕೊಂಡು ಹೋಗುತ್ತದೆ. ನಗೆಯುಕ್ಕಿಸಲು ಒದ್ದಾಡಬೇಕಾದ ಕಾಲಘಟ್ಟದಲ್ಲಿ ನಾವೆಲ್ಲಾ ಇದ್ದೇವೆ ಎನ್ನುವುದನ್ನು ನಿರ್ದೇಶಕ ಅರಿಯದೇ ಹೋದರೆ ಪ್ರೇಕ್ಷಕನೂ ವೆಂಕಟ್ರಮಣಾ ಗೋವಿಂದ ಅನ್ನುತ್ತಾನಷ್ಟೇ..

ಪೋಷಕ ಪಾತ್ರಗಳನ್ನು ನಿಭಾಯಿಸುವುದರಲ್ಲಿ ಶಶಾಂಕ್ರಲ್ಲೊಂದು ಮೋಡಿಯಿದೆ. ಅಪ್ಪನ ಸಂವೇದನೆಯನ್ನು ತುಂಬಾ ಆಸ್ಥೆಯಿಂದ ಕಟ್ಟಿಕೊಡುತ್ತಾರವರು. ಮೊಗ್ಗಿನ ಮನಸ್ಸಿನ ನಂತರ ಕೃಷ್ಣನ್ ಲವ್ ಸ್ಟೋರಿಯಲ್ಲೂ ಇದು ಪ್ರೂವ್ ಆಗಿದೆ. ಪ್ರೀತಿಯಿಂದ ಮೋಸ ಹೋದ ನಾಯಕ ಪ್ರೀತಿಯ ಉರಿಕೆಂಡವನ್ನು ಮನಸ್ಸಲ್ಲಿಟ್ಟುಕೊಂಡು ನರಳುತ್ತಾ, ಕೊನೆಗೆ ಬಾರಿಗೆ ಹೋಗಿ ಕುಡಿಯುತ್ತಾ ಕೂತಿರಬೇಕಾದರೆ ಎದುರುಗಡೆ ಆತನ ಅಪ್ಪನೂ ಕೂತಿರುವ ದೃಶ್ಯವೇ ಸಾಕು ಸಾಮಾನ್ಯನನ್ನು ತಟ್ಟಿಬಿಡುತ್ತದೆ. ಇತರ ಪಾತ್ರಗಳ ಬಗ್ಗೆ ಅಂತಹ ಆಸ್ಥೆ ಮುಂದಿನ ಚಿತ್ರಗಳಲ್ಲಿ ಇನ್ನಷ್ಟು ಹೆಚ್ಚಾದರೆ ಒಳ್ಳೇದು.

ಇಡೀ ಸಿನಿಮಾದಲ್ಲಿ ಭಯಂಕರ ಕಿರಿಕಿರಿ ಉಂಟುಮಾಡುವುದು ಅಜೇಯ್ ರಾವ್ ಅಭಿನಯ...ಅಸಹಾಯಕ ಸನ್ನಿವೇಶಗಳಲ್ಲಿ ಅವರ ಅಸಹಾಯಕತೆಯೇ ಎದ್ದು ಕಾಣುತ್ತದೆ!...ನಾಯಕನ ಬೇಗುದಿಯನ್ನು, ಚಿರ ವ್ಯಾಮೋಹಿಯಾಗಿ ಬದುಕುವ ಕ್ಷಣಗಳನ್ನು ಜೀವಂತವಾಗಿ ಹಿಡಿದಿಡಲು ಅವರಿಗೆ ಸಾಧ್ಯವಾಗಿಲ್ಲ...ಮತ್ತೊಬ್ಬ ನಟ ಪ್ರದೀಪ್ ಎದುರು ನಟಿಸುವಾಗಲಂತೂ ಇದು ಕಣ್ಣೆದುರು ಕನ್ನಡಿ!.. ಅಜೇಯ್ ಅಭಿನಯದಲ್ಲಿ ಇನ್ನಷ್ಟು ಮಾಗಬೇಕು...ದ್ವಿತೀಯಾರ್ಧವನ್ನು ರಾಧಿಕಾ ಪಂಡಿತ್ ಆವರಿಸಿಕೊಂಡು ಬಿಡುತ್ತಾರಾದ್ದರಿಂದ ಸಮಸ್ಯೆಗೆ ಅಲ್ಪಮಟ್ಟಿನ ಪರಿಹಾರ ಸಿಕ್ಕಿದೆ. ಅಚ್ಯುತ್ರಾವ್, ಉಮಾಶ್ರಿ ಎಂದಿನಂತೆ ವಂಡರ್ಫುಲ್. ಸ್ವಯಂವರ ಮಂಜು ಅಣ್ಣನಾಗಿ, ಸಿಡುಕನಾಗಿ, ಕುಡುಕನಾಗಿ ಅಭಿನಯದಲ್ಲಿ ಗುರುತಿಸಿಕೊಳ್ಳುತ್ತಾರೆ. ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆಯುವುದು ಪ್ರದೀಪ್. ಇತ್ತೀಚೆಗಷ್ಟೇ ಸ್ಟಿಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದ "ನವಿಲಾದವರು" ಎನ್ನುವ ಸಿನಿಮಾದಲ್ಲಿ ಆಪ್ತವಾಗಿ ಅಭಿನಯಿಸಿದ್ದ ಪ್ರದೀಪ್, ಕೃಷ್ಣನ್ ಲವ್ ಸ್ಟೋರಿಯ ಮೂಲಕ ಮತ್ತೊಮ್ಮೆ ಭವಿಷ್ಯದ ಭರವಸೆಯ ಸೋಲೋ ನಾಯಕನಾಗುವ ಎಲ್ಲಾ ಲಕ್ಷಣಗಳನ್ನು ತೋರಿಸಿದ್ದಾರೆ..... 

ಹಾಡುಗಳ ಚಿತ್ರೀಕರಣ, ವಿನ್ಯಾಸ ಎಲ್ಲವೂ ಮುದ ನೀಡುತ್ತದೆ... ಜಯಂತ್ ಕಾಯ್ಕಿಣಿ ಬರೆದ ಸಂತೆಯಲ್ಲಿ ನಿಂತರೂನೂ ನೋಡು ನೀನು ನನ್ನನ್ನೇ ಪ್ರೇಮೋತ್ಸವಕ್ಕೆ ನಂದಾ ದೀಪವಾದರೆ, ಮೋಸ ಮಾಡಲೆಂದು ಸದ್ಯದ ವಿರಹ ಗೀತೆ. ನೀನಾಡದ ಮಾತು ನನ್ನಲಿದೆ ಮಾಧುರ್ಯಕ್ಕೆ ಇಷ್ಟವಾಗುತ್ತದೆ. ಹಚ್ಚಿಕೊಂಡಷ್ಟು ಪ್ರೇಮಿಗಳಿಗೆ ಬದುಕು ಕಷ್ಟವಾಗುತ್ತದೆ!.. ಮುಸ್ಸಂಜೆ ಮಾತಿನ ನಂತರ ವಿ.ಶ್ರೀಧರ್ ಕೃಷ್ಣನ್ ಲವ್ ಸ್ಟೋರಿಯಲ್ಲಿ ಸಂಭ್ರಮದ ರಾಗವನ್ನು ಸರಾಗವಾಗಿಸಿದ್ದಾರೆ. ಕೃಷ್ಣರ ಕ್ಯಾಮರಾ ಕೆಲಸ ಮತ್ತೆ ಸೆಳೆಯುತ್ತದೆ..ಸನ್ನಿವೇಶಗಳನ್ನು ಬೆಳಕು, ನೆರಳಿನ ನೆರಳಲ್ಲಿ ಕಟ್ಟಿಕೊಡುವಾಗಿನ ಕುಸುರಿ ಚಿತ್ರದ ಫ್ರೇಮುಗಳತ್ತ ಪ್ರೇಕ್ಷಕನಿಗೆ ಲವ್ ಅಟ್ ಫಸ್ಟ್ ಸೈಟ್!

ಕೃಷ್ಣನ್ ಲವ್ ಸ್ಟೋರಿ ಒಮ್ಮೆ ನೋಡೋದಿಕ್ಕೆ ಓಕೆ. ಮತ್ತೊಮ್ಮೆಗೂ ಓಕೆ ಅಂತ್ಹೇಳಿ ಪ್ರೇಕ್ಷಕ ಹೋಗುತ್ತಾನಾದರೆ ಅದಕ್ಕೆ ಕಾರಣ ರಾಧಿಕಾ ಪಂಡಿತ್, ಶಶಾಂಕ್ ಮತ್ತು ಹಾಡುಗಳು!!!!

ಮಂಗಳವಾರ, ಜೂನ್ 29, 2010

ಯಕ್ಷ ಕಿನ್ನರರ "ಮಾಯಾಲೋಕ"

"ಮಾಯಾಲೋಕ" ನನ್ನ ಇತ್ತೀಚಿನ 15 ನಿಮಿಷಗಳ ಸಾಕ್ಷ್ಯಚಿತ್ರ. ಇಲ್ಲಿರುವುದು ಒಂದು ರಾತ್ರಿಯ ಯಕ್ಷಗಾನ ಬಯಲಾಟ ಪ್ರಸಂಗವೊಂದರ ದೃಶ್ಯ ಕತೆ. 

ಯಕ್ಷಗಾನ ಸೃಷ್ಟಿಸುವ ಮಾಯಾಲೋಕದೆಡೆಗೆ ಕರಾವಳಿಯ ಮಂದಿಗೊಂದು ಬೆರಗಿದೆ. ದಿನವಿಡೀ ಸಾಮಾನ್ಯನಂತಿರುವ ವ್ಯಕ್ತಿ ಪ್ರತೀ ದಿನ ಸಂಜೆಯಾಗುತ್ತಲೇ ಬಣ್ಣ ಹಚ್ಚುತ್ತಾ ರಾತ್ರಿಗೆ ರಾವಣನೋ, ಮಹಿಷಾಸುರನೋ, ರಾಮನೋ ಆಗಿ ಇಡೀ ರಂಗಸ್ಥಳವನ್ನು ಭಯಭೀತಗೊಳಿಸುತ್ತಾನೆ, ಪುನೀತನನ್ನಾಗಿಸುತ್ತಾನೆ. ಮತ್ತೆ ಮರುದಿನ ರಾತ್ರಿ ಹೊಸದೊಂದು ಪ್ರಸಂಗದ ಭಿನ್ನ ಪಾತ್ರವಾಗಿ ನಲಿದು ಬಿಡುತ್ತಾನೆ. ಪ್ರೇಕ್ಷಕನ ಪಾಲಿಗೆ ಅನಿರ್ವಚನೀಯವಾದ ಇಂತಹ ಪುಳಕವನ್ನು ಹಿಡಿದಿಡುವುದು "ಮಾಯಾಲೋಕ" ಸಾಕ್ಷ್ಯಚಿತ್ರದ ಮುಖ್ಯ ಉದ್ದೇಶ.

ಈ ವಿಷಯವನ್ನು ಮನದಲ್ಲಿಟ್ಟುಕೊಂಡು ಪ್ರೇಕ್ಷಕನೊಬ್ಬ ಯಕ್ಷಗಾನ ಬಯಲಾಟವನ್ನು ಎದುರುಗೊಳ್ಳುವಾಗ ಮೂಡುವ ದೃಶ್ಯ ಸರಣಿಯ ಮೂಲಕವೇ ಯಕ್ಷಗಾನದ ದೃಶ್ಯ ಕತೆಯನ್ನು ಹೇಳಲು ಪ್ರಯತ್ನಿಸಲಾಗಿದೆ. ಆದ್ದರಿಂದ ಪ್ರೇಕ್ಷಕನ ಭಾವಕೋಶದ ಬೆರಗಿನ ಭಾಗವಾದ ಚೌಕಿಯ ದೃಶ್ಯಗಳು ಇಡೀ ಸಾಕ್ಷ್ಯಚಿತ್ರದಲ್ಲಿ ಮಧ್ಯೆ ಮಧ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲಿ ನಡೆಯುವ ಬಣ್ಣಗಾರಿಕೆಯ ತಯಾರಿಗಳು ದೃಶ್ಯ ಗುಚ್ಛವಾಗಿ ಸರಣಿಯುದ್ದಕ್ಕೂ ಇವೆ.

ಕಾರ್ಕಳದ ಕುಕ್ಕುಂದೂರಿನಲ್ಲಿ ನಡೆದ ಯಕ್ಷಗಾನ ಬಯಲಾಟವನ್ನು ಈ ಸಾಕ್ಷ್ಯಚಿತ್ರಕ್ಕಾಗಿ ಚಿತ್ರೀಕರಿಸಲಾಗಿದೆ. ಗೆಳೆಯ ದರ್ಶನ್ ಕ್ಯಾಮರಾ ಹಿಡಿದಿದ್ದಾನೆ. ಅವನ ಸಹಕಾರಕ್ಕೆ ಋಣಿ. ಇದಕ್ಕೆ ಸ್ಕ್ರಿಪ್ಟ್, ಹಿನ್ನೆಲೆ ಧ್ವನಿ, ಧ್ವನಿಗ್ರಹಣ ಎಲ್ಲವೂ ನನ್ನದೇ. ಅಸಂಖ್ಯ ಮುದ್ದಾದ ಚಿತ್ರಿಕೆಗಳಲ್ಲಿ ಸೂಕ್ತವಾದದ್ದನ್ನು ಆಯ್ದುಕೊಳ್ಳುತ್ತಾ, ಮತ್ತೆ ಮತ್ತೆ ದೃಶ್ಯಸರಣಿಯನ್ನು ಚೊಕ್ಕಟಗೊಳಿಸುತ್ತಾ ಚಿತ್ರಿಕೆಗಳನ್ನು ಹೆಣಿಯುವ, ಬೆಸೆಯುವ ಕೆಲಸವಾದ ಸಂಕಲನವನ್ನೂ ನಾನೇ ನಿಭಾಯಿಸಿದ್ದೇನೆ.

ಚಿತ್ರೀಕರಣದ ಸಂದರ್ಭದಲ್ಲಿ ಮನೆಮಂದಿಯಂತೆ ನಮ್ಮಿಬ್ಬರನ್ನು ಸತ್ಕರಿಸಿ, ಆದರಿಸಿದ ಕುಕ್ಕುಂದೂರಿನ ಮಂದಿಗೆ, ಕಟೀಲು ಯಕ್ಷಗಾನ ಮೇಳದ(2ನೇ ಮೇಳ) ಎಲ್ಲಾ ಕಲಾವಿದರಿಗೆ, ಆಡಳಿತ ಮಂಡಳಿಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಕಮ್ಮಿಯೇ. ಯಕ್ಷಗಾನದ ಬಗ್ಗೆ ಕಲಾವಿದರಿಗಿರುವ ಭಾವತೀವ್ರತೆಗೆ(ಪ್ಯಾಶನ್) ನಮ್ಮದೊಂದು ನಮಸ್ಕಾರ.


ಈ ಸಾಕ್ಷ್ಯಚಿತ್ರಕ್ಕಾಗಿ ಬಳಸಲಾದ ಉಪಕರಣ ಹಾಗೂ ತಂತ್ರಾಂಶಗಳು

ಕ್ಯಾಮರಾ: ಸೋನಿ ಪಿಡಿ 170 (ರಾತ್ರಿ ಚಿತ್ರೀಕರಣ ಸ್ಥಳದಲ್ಲಿ ಲಭ್ಯವಿದ್ದ ಬೆಳಕಿನಲ್ಲೇ ಚಿತ್ರೀಕರಿಸಿದ್ದು)
ಧ್ವನಿಗ್ರಹಣ: ಪ್ರೋ ಟೂಲ್ ಆಡಿಯೋ ಕನ್ಸೋಲ್, ಅಡೋಬ್ ಆಡಿಷನ್ 3.0
ಸಂಕಲನ: ಅಡೋಬ್ ಪ್ರಿಮಿಯರ್ ಪ್ರೋ

ಸಮಯ: 15 ನಿಮಿಷ /ಕನ್ನಡ
ಫಾಮ್ಯಾಟ್: ಪಾಲ್ ವೈಡ್ ಸ್ಕ್ರೀನ್(16:9)


ಈ ಸಾಕ್ಷ್ಯಚಿತ್ರದಿಂದ ಆಯ್ದ ಕೆಲವೊಂದು ದೃಶ್ಯ ತುಣುಕುಗಳನ್ನು ಕೆಳಗಿನ ವಿಡಿಯೋದಲ್ಲಿ ವೀಕ್ಷಿಸಬಹುದು. ನಿಮ್ಮ ಅನಿಸಿಕೆ ತಿಳಿಸಿ.

http://www.youtube.com/watch?v=i5BpJRK0Amk

ಗುರುವಾರ, ಜೂನ್ 10, 2010

ಒಂದಂಕೆ- ನೋವೆಂಬ ನಲಿವಿನ ಕಾಲ


ಒಂದು
ಮಾತನ್ನು ಕೂಡಿಟ್ಟಿದ್ದೆ
ಅದು ಮೌನದಲ್ಲೇ
ಕರಗಿ ಹೋಯಿತು


ಒಂದು
ಹನಿ ಕಣ್ಣಲ್ಲಿ ಬಚ್ಚಿಟ್ಟಿದ್ದೆ
ಅದು ರೆಪ್ಪೆಗಳಿಗೆ
ತಿಳಿದು ಹೋಯಿತು


ಒಂದು
ಮೊಗ್ಗನ್ನು ಇಟ್ಟುಕೊಂಡಿದ್ದೆ
ಅದು ಸೂರ್ಯನಿಗೆ
ಇಷ್ಟವಾಗಿ ಹೋಯಿತು


ಒಂದು
ನವಿಲುಗರಿ ಸಿಕ್ಕಿತು
ಅದಕ್ಕೆ ನವಿಲು
ಬಣ್ಣ ತುಂಬದೇ ಹೋಯಿತು

ಭಾನುವಾರ, ಮೇ 2, 2010

ಕಥೆಯೊಂದು ದೃಶ್ಯವಾಗುವ ಪಯಣದ ಹಿಂದಿನ ಕಥೆ

"ಈ ಪುಸ್ತಕ ಚಿತ್ರ ತಯಾರಿಕೆಗಾಗಲಿ, ಚಿತ್ರ ತಂತ್ರಜ್ಞರಾಗಲಿ ಅಥವಾ ಚಿತ್ರ ವಿದ್ಯಾರ್ಥಿಗಳಿಗಾಗಲಿ ರಚಿತವಾದ ಕೈಪಿಡಿ ಅಥವಾ ಪಠ್ಯವಲ್ಲ; ಚಲನಚಿತ್ರವೆಂಬ ಹೊಸ ಯಂತ್ರ ಭಾಷೆಯ ಪ್ರಕ್ರಿಯೆಗಳನ್ನು ಸ್ಥೂಲವಾಗಿ ಅರಿವುಗೊಳಿಸಿಕೊಂಡು ಚಲನಚಿತ್ರ ಸಹೃದಯತೆಯನ್ನು ರೂಢಿಸಿಕೊಳ್ಳಲು ಬಯಸುವ ಸಾಮಾನ್ಯ ಓದುಗರಿಗೊಂದು ಪರಿಚಯ ಪುಸ್ತಕ" ಎಂದು "ಸಿನಿಮಾದ ಯಂತ್ರಭಾಷೆ" ಪುಸ್ತಕದ ಪ್ರಾರಂಭದ ಪುಟಗಳಲ್ಲೇ ಸ್ಪಷ್ಟಪಡಿಸುತ್ತಾರೆ ಲೇಖಕರಾದ ಕೆ.ವಿ ಸುಬ್ಬಣ್ಣ ಮತ್ತು ಅಕ್ಷರ. 1981ರಲ್ಲಿ ಪ್ರಥಮ ಮುದ್ರಣ ಈ ಪುಸ್ತಕ ಕನ್ನಡದಲ್ಲಿ ಸಿನಿಮಾದ ತಾಂತ್ರಿಕತೆ ಕುರಿತು ಓದಲು ಸಿಗುವ ಅಪೂರ್ವ ಪುಸ್ತಕಗಳಲ್ಲೊಂದು(ಈಗ ಪ್ರತಿಗಳು ಲಭ್ಯವಿಲ್ಲ). ಇದಕ್ಕಿಂತ ಮೊದಲು ಬಿ ಪುಟ್ಟಸ್ವಾಮಿ, ಅಬ್ದುಲ್ ರೆಹಮಾನ್ ಪಾಶಾ ಸಿನಿಮಾ ತಾಂತ್ರಿಕತೆ ಕುರಿತು ಬರೆದಿದ್ದರೂ ಅದು ತಾಂತ್ರಿಕತೆಯ ಅಂಶಗಳನ್ನು ಒಳಗೊಂಡ ವ್ಯಾಪ್ತಿ ಬಹಳ ಸಣ್ಣದಿತ್ತು. ನಂತರದ ದಿನಗಳಲ್ಲಿ ಕನ್ನಡದಲ್ಲಿ ಸಿನಿಮಾ ತಾಂತ್ರಿಕತೆಯ ಕುರಿತು ಬಂದ ಪುಸ್ತಕವೇ ವಿರಳ. ಅದರಲ್ಲಿ ನೆನಪಿನಲ್ಲುಳಿಯುವ ಪುಸ್ತಕ "ಸಿನಿಮಾದ ಯಂತ್ರ ಭಾಷೆ". ಹೆಗ್ಗೋಡಿನ ನೀನಾಸಂ ಚಿತ್ರ ಸಮಾಜದ ಪರವಾಗಿ ಅಕ್ಷರ ಪ್ರಕಾಶನ ಇದನ್ನು ಪ್ರಕಟಿಸಿದೆ.

224 ಪುಟಗಳ ಈ ಪುಸ್ತಕ ಸಿನಿಮಾವನ್ನು ಕೇವಲ ಕತೆಯ ಅಥವಾ ಭಾವನಾತ್ಮಕ ನೆಲೆಯಲ್ಲಿ ಮಾತ್ರವಲ್ಲದೆ ತಾಂತ್ರಿಕವಾಗಿ ಅರ್ಥೈಸಿಕೊಳ್ಳಲು ಸಹಕಾರಿ. ಸಿನಿಮಾದ ತಾಂತ್ರಿಕ ಅಂಶಗಳನ್ನು ಸಾಮಾನ್ಯನಿಗೆ ಅರ್ಥವಾಗುವ ಭಾಷೆಯಲ್ಲಿ ವಿವರಿಸಿರುವುದು ಈ ಪುಸ್ತಕದ ಬಹುದೊಡ್ಡ ಶಕ್ತಿ. ಪುಸ್ತಕವನ್ನು 5 ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದೆ. ಸಿನಿಮಾದ ಹಿನ್ನೆಲೆ-ಹುಟ್ಟು, ಯಂತ್ರ ಪ್ರಕ್ರಿಯೆ, ತಂತ್ರ ಪ್ರಕ್ರಿಯೆ, ನಿರ್ಮಾಣ ಪ್ರಕ್ರಿಯೆ, ಭಾಷಾ ಪ್ರಕ್ರಿಯೆ ಎನ್ನುವ ವಿಭಾಗಗಳಲ್ಲಿ ಒಟ್ಟು ಸಿನಿಮಾ ತಾಂತ್ರಿಕವಾಗಿ ನಿರ್ಮಾಣವಾಗುವ ವಿವಿಧ ಹಂತಗಳ ಸ್ಥೂಲ ನೋಟವಿದೆ. ಸಿನಿಮಾದ ಜೀವಾಳವಾದ ದೃಷ್ಟಿ ವಿಶೇಷ ತತ್ವ(persistence of vision) ಕುರಿತ ವಿವರಣೆ, ಕ್ಯಾಮರಾ ಕೆಲಸ ಮಾಡುವ ರೀತಿ, ಲೆನ್ಸ್, ರೀಲ್, ಕ್ಯಾಮೆರಾ ಚಲನೆ, ಸಂಕಲನ ಹಾಗೂ ತಾಂತ್ರಿಕ ಜವಾಬ್ದಾರಿಗಳನ್ನು ನಿಭಾಯಿಸುವವರ ಹೊಣೆ ಮತ್ತು ಕೆಲಸಗಳ ವಿವರಗಳಿವೆ. 1981ರಲ್ಲಿ ಪ್ರಕಟವಾಗಿರುವುದರಿಂದ ಸಂಕಲನ ವಿಭಾಗದಲ್ಲಿ ಇತ್ತೀಚಿನ ಡಿಜಿಟಲ್ ತಾಂತ್ರಿಕತೆ ಕುರಿತು ಪ್ರಸ್ತಾಪವಿಲ್ಲ.

ಚಿತ್ರೀಕರಣ ಪೂರ್ವ, ಚಿತ್ರೀಕರಣ ಸಂದರ್ಭ ಹಾಗೂ ಚಿತ್ರೀಕರಣೋತ್ತರ ಸಂದರ್ಭದಲ್ಲಿ ಘಟಿಸಬೇಕಾದ ತಾಂತ್ರಿಕ ಅವಶ್ಯಕತೆಗಳ ಮಹತ್ವವನ್ನು ಸಾಮಾನ್ಯ ಓದುಗನ ಮನದಲ್ಲಿ ದಾಖಲು ಮಾಡಲು ಲೇಖಕರು ಪ್ರಯತ್ನಪಟ್ಟಿದ್ದಾರೆ. ದೃಶ್ಯ ಮತ್ತು ಧ್ವನಿಯ ಸಮ್ಮಿಲನದ ಸೂಕ್ಮ್ಷತೆ, ಸಿನಿಮಾದ ನಿರ್ಮಾಣದ ಅಂತಿಮ ಫಲಿತಾಂಶದಲ್ಲಿ ಆಗುವ ಬದಲಾವಣೆಗಳನ್ನು ಹೇಳಿದ್ದಾರೆ. ಪುಸ್ತಕದ ಕೊನೆಯಲ್ಲಿ ಕೊಟ್ಟಿರುವ ಪಾರಿಭಾಷಿಕ ಪದಗಳ ವಿವರಣೆ ತಾಂತ್ರಿಕ ಶಬ್ದಗಳನ್ನು ಓದುಗನಿಗೆ ಇರುವ ಅನುಮಾನಗಳನ್ನು ಪರಿಹರಿಸಿ, ಇನ್ನಷ್ಟು ಸ್ಪಷ್ಟ ಚಿತ್ರಣವನ್ನು ಕೊಡುತ್ತದೆ.

ಸಿನಿಮಾವನ್ನು ಬೆರಗಿನಿಂದ ನೋಡುತ್ತಾ, ಸಿನಿಮಾದ ಕತೆಯ ಭಾವನಾತ್ಮಕ ಸಾಧ್ಯತೆಗಳನ್ನು ಮಾತ್ರ ಚಚರ್ಿಸುವ ಸಿನಿಮಾ ಪ್ರಿಯರಿಗೆ "ಸಿನಿಮಾದ ಯಂತ್ರಭಾಷೆ" ತಾಂತ್ರಿಕ ಅಂಶಗಳ ಮೂಲಕ ಸಾಧ್ಯವಾಗುವ ದೃಶ್ಯ ಶಕ್ತಿಯನ್ನು ತಿಳಿದುಕೊಳ್ಳಲು ಉಪಯುಕ್ತ. ಕಥೆ ಮತ್ತು ಚಿತ್ರನಾಟಕದಲ್ಲಿ ತಾಂತ್ರಿಕ ಅಂಶಗಳನ್ನು ಬಳಸಿಕೊಂಡು ದೃಶ್ಯವೊಂದನ್ನು ಸೃಷ್ಟಿಸುವ ಹಿಂದಿನ ಸುದೀರ್ಘ ಪ್ರಯಾಣವನ್ನು ಅರ್ಥಮಾಡಿಸುತ್ತದೆ. ಈ ಮೂಲಕ ಸಿನಿಮಾದ ತಾಂತ್ರಿಕತೆ ಕುರಿತು ಇನ್ನಷ್ಟು ಆಸಕ್ತಿಯಿಂದ ಹೆಚ್ಚಿನ ಮಾಹಿತಿಯನ್ನು ವಿವಿಧ ಕಡೆಯಿಂದ ಕಲೆ ಹಾಕಲು ಈ ಪುಸ್ತಕವೊಂದು ನೆಪವಾಗುತ್ತದೆ.

"ಸಿನಿಮಾದ ಯಂತ್ರಭಾಷೆ" ಯ ನಂತರ ಸಿನಿಮಾ ತಾಂತ್ರಿಕತೆಯನ್ನು ಮನದಟ್ಟು ಮಾಡಿಸುವ ಯಶಸ್ವಿ ಪುಸ್ತಕ ಪ್ರಯತ್ನ ಕನ್ನಡಲ್ಲಿ ಆಗಿಲ್ಲ. ಜೊತೆಗೆ ಕನ್ನಡದಲ್ಲಿ ಸಿನಿಮಾದ ಚಿತ್ರ ನಾಟಕ ರಚನೆ, ಕಡಿಮೆ ತಾಂತ್ರಿಕೆ ಸಾಧ್ಯತೆಗಳೊಂದಿಗೆ ಸಾಧ್ಯವಾಗಬಹುದಾದ ಸಿನಿಮಾ ನಿರ್ಮಾಣ ಕುರಿತು ಪುಸ್ತಕಗಳೇ ಇಲ್ಲ. ಬದಲಾಗುತ್ತಿರುವ ತಾಂತ್ರಿಕ ಆವಿಷ್ಕಾರ, ಸುಲಭಕ್ಕೆ ಜನಸಾಮಾನ್ಯನ ಕೈಗೆಟಕುತ್ತಿರುವ   ವಿಡಿಯೋ ಕ್ಯಾಮೆರಾಗಳು, ಸಾಮಾನ್ಯವಾಗಿರುವ ಕಂಪ್ಯೂಟರ್ ಬಳಕೆ, ಸರಳ ಸಂಕಲನ ತಂತ್ರಾಂಶಗಳ ಲಭ್ಯತೆ ಇವೆಲ್ಲಾ ಇವತ್ತು ಮನೆಯಲ್ಲಿದ್ದುಕೊಂಡೇ ಡಿಜಿಟಲ್ ಸಿನಿಮಾ ನಿರ್ಮಾಣವನ್ನು ಸಾಧ್ಯವಾಗಿಸಿವೆ. ಅಂತಹ ಸಾಧ್ಯತೆಗಳಿಗೆ ಪೂರಕವಾಗುವ, ಉತ್ತೇಜಿಸುವಂತಹ "ಸಿನಿಮಾದ ಯಂತ್ರಭಾಷೆ"ಯಂತಹ ಪುಸ್ತಕಗಳ ಅವಶ್ಯಕತೆ ಇವತ್ತಿನ ಕನ್ನಡದ ಸಾಮಾನ್ಯನಿಗಿದೆ.

ಸೋಮವಾರ, ಏಪ್ರಿಲ್ 26, 2010

ಬಾಬಾ ರಾಂಚೋಡದಾಸನ ದೇಹ, ಡೆಡ್ ಪೋಯೆಟ್ಸ್ ಸೊಸೈಟಿಯ ಜೀವ, ಲೆಕ್ಕವಿಲ್ಲದಷ್ಟು ರೂಪಾಂತರ



ಚಿತ್ರಕತೆಯ ಬರವಣಿಗೆ ದೃಶ್ಯ ಲೆಕ್ಕಾಚಾರದ ಬರವಣಿಗೆಯೇ. ಅಲ್ಲಿ ಬರಹಗಾರನಿಗೆ ಪ್ರತೀ ಪಾತ್ರದ ಪೂರ್ವಾಪರಗಳು ಗೊತ್ತಿರಬೇಕು. ಆ ಪಾತ್ರದ ಬಿಡಿ ಬಿಡಿ ವಿವರಗಳು ಕೂಡಾ ಸ್ಪಷ್ಟವಿರಬೇಕು. ಆತನೋ/ಆಕೆಯೋ ಮೊದಲ ದಿನ ಶಾಲೆಗೆ ಹೋಗಿದ್ದಾಗ ಇದ್ದಿದ್ದ ದುಗುಡ, ಹಿಂಜರಿಕೆ, ಮೊದಲ ಬರ್ತ್ ಡೇ ಸಂಭ್ರಮ ಎಲ್ಲವೂ ನೆನಪಿರಬೇಕು.ಅದನ್ನಾತ ಚಿತ್ರಕತೆಯಲ್ಲಿ ಸೇರಿಸದೇ ಹೋಗಬಹುದು. ಆದರೂ ತನ್ನ ಪಾತ್ರಗಳ ಪ್ರತಿ ಹೆಜ್ಜೆಯೂ ಸ್ಪಷ್ಟವಿರಬೇಕು. ಹಾಗಿದ್ದಾಗ ಮಾತ್ರ ಪಾತ್ರ, ಸನ್ನಿವೇಶ ಹೆಚ್ಚು ಪರಿಣಾಮಕಾರಿಯಾಗಿ ಬರೆಯಲ್ಪಡುತ್ತದೆ.

ಚಿತ್ರಕತೆಯೊಂದನ್ನು ಬರೆಯುವ ಹೊತ್ತಿಗೆ ಬರಹಗಾರನನ್ನು ಪ್ರಭಾವಿಸುವ ಅಂಶಗಳು ಹಲವಾರು. ಆತ ನೋಡಿದ ವಿಶ್ವದ ಯಾವುದೋ ಭಾಷೆಯ ಚಲನಚಿತ್ರ, ಓದಿದ ಕಾದಂಬರಿಯ ಪಾತ್ರವೊಂದರ ಗುಣ, ಅವಗುಣ, ಸ್ನೇಹಿತನ ಮದುವೆಯಲ್ಲಿ ಕಂಡ ದಬಾಯಿಸುವ ಹುಡುಗಿ ಕೂಡಾ ಪಾತ್ರವೊಂದನ್ನು, ಸನ್ನಿವೇಶವನ್ನು ಸೃಷ್ಟಿಸುವ ಸಂದರ್ಭದಲ್ಲಿ ಸಹಾಯಕ್ಕೆ ಬರಬಹುದು. ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಎಲ್ಲಾ ಅಂಶಗಳು ಚಿತ್ರಕತೆಯೊಳಗೆ ಸೇರಿಕೊಳ್ಳುತ್ತಾ ಹೋಗುತ್ತದೆ. ಅದೇ ಪಾತ್ರವನ್ನು, ಸನ್ನಿವೇಶವನ್ನು ಬೆಳೆಸಬಹುದು. ಆ ಮೂಲಕ ಪಾತ್ರ, ಸನ್ನಿವೇಶ ಮತ್ತಷ್ಟು ಗಟ್ಟಿಯಾಗುವ ಸಂದರ್ಭಗಳು ಜಾಸ್ತಿ. ಇಂತಹ ಗಮನಿಸುವಿಕೆ ಹಾಗೂ ಅಳವಡಿಸುವಿಕೆ ಚಿತ್ರಕತೆಯೊಂದನ್ನು ಬರೆಯುವ ಸಂದರ್ಭದಲ್ಲಿ ಬರಹಗಾರನಿಗೆ ಹೆಚ್ಚು ಸಹಕಾರಿ. ಅಂತಹದೊಂದು ಸಾಧ್ಯತೆಯನ್ನು ಚಿತ್ರಕತೆಯಲ್ಲಿ ಮಿಳಿತಗೊಳಿಸಲು ಬರಹಗಾರ ಪ್ರತೀ ಬಾರಿ ಪ್ರಯತ್ನಿಸುತ್ತಲೇ ಇರುತ್ತಾನೆ. ಈ ತರಹದ ರೂಪಾಂತರ ನಾವು ನೋಡುವ ಹೆಚ್ಚಿನ ಸಿನಿಮಾಗಳ ಚಿತ್ರಕತೆಯಲ್ಲಿ ಕಂಡುಬರುತ್ತದೆ. ಅದೇ ಕಾರಣಕ್ಕೆ ಯೋಗರಾಜ ಭಟ್ಟರ ಮನಸಾರೆಯಲ್ಲಿ "ಶ್ವಶಾಂಕ್ ರಿಡಂಪ್ಶನ್"ನ ರೆಡ್ ಮತ್ತು ಬ್ರೂಕ್ ಛಾಯೆ ಕಾಣುವುದು. ಆದ್ದರಿಂದಲೇ ಗಾಳಿಪಟದಲ್ಲಿ ಡೈಸಿ ಬೋಪಣ್ಣನ ಪಾತ್ರವನ್ನು ನೋಡಿದಾಗ ಶೋಲೆಯ ಜಯಾ ಬಾಧುರಿ ಪದೇ ಪದೇ ನೆನಪಾಗುವುದು. ಮಜಾ ಎಂದರೆ ಸಿನಿಮಾ ನೋಡುತ್ತಿರುವಾಗ ಕೆಲವೊಮ್ಮೆ ಇದು ನಮ್ಮ ಗಮನಕ್ಕೇ ಬರುವುದಿಲ್ಲ. ಇಲ್ಲೇ ಚಿತ್ರಕತೆಯನ್ನು ಬರೆದ ಬರಹಗಾರನ ಯಶಸ್ಸಿರುವುದು. ಯಾಕೆಂದರೆ ಆತ ಅಂತಹದೊಂದು ರೂಪಾಂತರವನ್ನು ಅಥವಾ ಹೊಂದಾಣಿಕೆಯನ್ನು ನಾಜೂಕಾಗಿ ಭಿನ್ನ ಸನ್ನಿವೇಶ, ವಾತಾವರಣದಲ್ಲಿ ಕೂರಿಸಿರುತ್ತಾನೆ. 


ಇತ್ತೀಚೆಗೆ ಬಂದ "ಥ್ರೀ ಈಡಿಯೇಟ್ಸ್" ಸಿನಿಮಾವನ್ನೇ ಬೇಕಿದ್ದರೆ ತೆಗೆದುಕೊಳ್ಳಿ. ಬಾಬಾ ರಾಂಚೋಡ್ ದಾಸ್  ಮೋಡಿಗೆ ಇಡೀ ದೇಶವೇ ಜಹಾಪನಾ ತುಸ್ಸೀ ಗ್ರೇಟ್ ಹೋ ಎಂದು ಸಲಾಮು ಹೊಡೆದದ್ದೇ ಹೊಡೆದದ್ದು. ಎಲ್ಲರಿಗೂ ಗೊತ್ತಿರುವಂತೆ ಥ್ರೀ ಈಡಿಯೆಟ್ಸ್ ಚೇತನ್ ಭಗತ್ ಬರೆದ "ಫೈವ್ ಪಾಯಿಂಟ್ ಸಮ್ವನ್" ಇಂಗ್ಲೀಷ್ ಕಾದಂಬರಿಯನ್ನು ಬಳಸಿಕೊಂಡಿದೆ. ಆದರೆ ನಿರ್ದೇಶಕ  ರಾಜ್ ಕುಮಾರ್ ಹಿರಾನಿ ಚಲನಚಿತ್ರದ ದೃಶ್ಯ ಅನುಕೂಲಕ್ಕೆ ತಕ್ಕ ಹಾಗೆ ಮೂಲ ಕಾದಂಬರಿಯ ಕಥಾ ಹಂದರದಲ್ಲಿ ಅನೇಕ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ. ಹೊಸ ಪಾತ್ರಗಳು ಬಂದಿವೆ. ಸನ್ನಿವೇಶಗಳು ಬದಲಾಗಿವೆ. ಮತ್ತೊಂದಷ್ಟು ಸೇರಿಕೊಂಡಿವೆ. ಆದರೂ ಬಾಬಾ ರಾಂಚೋಡ್ ದಾಸನನ್ನು  ನೋಡುತ್ತಿದ್ದ ಹಾಗೆ, "ಸಕ್ಸಸ್ ನ  ಹಿಂದೆ ಓಡಬೇಡಿ. ಎಕ್ಸಲೆನ್ಸ್ ಮುಖ್ಯ" ಎನ್ನುವಾಗಲೆಲ್ಲಾ ಹಾಗೂ ಅದನ್ನು ಸಾಧಿಸಲು ಆತ ಹೊರಡುವ ಸಂದರ್ಭಗಳನ್ನು ನೋಡುತ್ತಿದ್ದಂತೆ 1989ರಲ್ಲಿ ತೆರೆಕಂಡ ಪೀಟರ್ ವೇರ್ ನಿರ್ದೇಶನ ದ "ಡೆಡ್ ಪೋಯೆಟ್ಸ್ ಸೊಸೈಟಿ"ಯ ಇಂಗ್ಲೀಷ್ ಸಾಹಿತ್ಯದ ಮೇಷ್ಟ್ರು ಜಾನ್ ಕೀಟಿಂಗ್  ನೆನಪಾಗುತ್ತಾನೆ.  ಆತನೂ ಹಾಗೆಯೇ. ಕವಿತೆ ಬದುಕನ್ನು ಫ್ರಫುಲ್ಲವಾಗಿಡುತ್ತದೆ, ಎಲ್ಲಾ ನೋವುಗಳಿಗೆ ಬೊಗಸೆ ಹಿಡಿಯುತ್ತದೆ ಎಂದು ನಂಬಿಕೊಂಡವ. ಕವಿತೆಯನ್ನು ಸರಳವಾಗಿ ಅರ್ಥೈಸಿಕೊಳ್ಳುವಂತೆ ಮಾಡಲು ಪ್ರಯತ್ನ ಪಡುವವ. ಅದೇ ಕಾರಣಕ್ಕೆ ಆತ ಫುಟ್ಬಾಲಿನ ಜೊತೆ, ಶಾಲೆಯ ಹೊರಾಂಗಣದಲ್ಲಿ ಸ್ವಚ್ಛಂದವಾಗಿ ಹುಡುಗರನ್ನು ಬಿಟ್ಟು ಕವಿತೆಯನ್ನು ಆಸ್ವಾದಿಸುವುದನ್ನು ಕಲಿಸುತ್ತಾನೆ. "ಡೆಡ್ ಪೋಯೆಟ್ಸ್ ಸೊಸೈಟಿ"ಯಲ್ಲಿ ಬರುವ ಈ ಇಂಗ್ಲೀಷ್ ಮೇಷ್ಟ್ರ ರೂಪಾಂತರವೇ ನಮ್ಮ ರಾಂಚೋಡ್ದಾಸ್(ಆಮೀರ್ ಖಾನ್). ರಾಂಚೋ ಪಾತ್ರದ ನಡೆ-ನಡವಳಿಕೆ "ಫೈವ್ ಪಾಯಿಂಟ್ ಸಮ್ವನ್" ಕಾದಂಬರಿಯಲ್ಲಿರುವ ರೆಯಾನ್ನಂತೆಯೇ ಇದ್ದರೂ ಸಹ, ಆತ ಬದುಕನ್ನು, ಎದುರಾಗುವ ಪ್ರತೀ ಕೆಲಸವನ್ನು ಆಸ್ವಾದಿಸುವುದನ್ನು ಕಲಿಸಲು ಬಳಸಿಕೊಳ್ಳುವ ಫಿಲಾಸಫಿಯ ಹಿಂದಿರುವುದು ಇಂಗ್ಲೀಷ್ ಮೇಷ್ಟ್ರು ಕೀಟಿಂಗೇ. ಮೂಲ ಕಾದಂಬರಿಯಲ್ಲಿ ಬರುವ ರೆಯಾನ್(ಸಿನಿಮಾದಲ್ಲಿ ರಾಂಚೋ) ಪಾತ್ರಕ್ಕೊಂದು ಸರಿಯಾದ ಪಾತ್ರ ಚೌಕಟ್ಟೇ ಇಲ್ಲ. ಜನಪ್ರೀಯ ಇಂಗ್ಲೀಷ್ ಸಾಹಿತ್ಯದ ಮೂಲಕ ತಲುಪಬೇಕಿರುವ ಮೇಲ್ಮಧ್ಯಮ ವರ್ಗದ ಇಷ್ಟಾನುಸಾರದ ಟೈಂಪಾಸ್ ರೀಡಿಂಗಿಗೆ ಬೇಕಾದಷ್ಟೇ ಉದ್ದೇಶಗಳನ್ನಿಟ್ಟುಕೊಂಡು ಚೇತನ್ ಭಗತ್ ಇಡೀ ಕಾದಂಬರಿಯನ್ನು ಬರೆದಂತೆ ಅನ್ನಿಸುತ್ತದೆ. ಹಾಗಾಗಿ ರಾಂಚೋಗೆ ಒಂದು ಬಲವಾದ "ಮುಖ್ಯ ಪಾತ್ರಕ್ಕಿರುವ ಗುರಿ"ಯನ್ನು(ಚಿತ್ರಕತೆಯ ಬರವಣಿಗೆಯಲ್ಲಿ ಬಹುಮುಖ್ಯ ಅಂಶ) ನೀಡುವಲ್ಲಿ ಕೀಟಿಂಗ್ ಪಾತ್ರ ರಾಜ್ ಕುಮಾರ್ ಹಿರಾನಿ ಮತ್ತವರ ತಂಡಕ್ಕೆ ಸಹಾಯಕ್ಕೆ ಬಂದಿದೆ. ಗಮನಿಸಬೇಕಾದ ಇನ್ನೊಂದು ವಿಷಯವಿದೆ. ರಾಂಚೋನಷ್ಟೇ ಯಂತ್ರಗಳ ಮೇಲೆ ಹುಚ್ಚು ಪ್ರೀತಿಯನ್ನಿಟ್ಟುಕೊಂಡಿರುವ ಜೋಯ್ ಲೋಬೋ, ಡೆಡ್ ಪೋಯೆಟ್ ಸೊಸೈಟಿಯ ನೀಲ್ ಪೆರ್ರಿಯ ಪಾತ್ರದಂತೆ ಅಸಹಾಯನಾಗಿ, ಅವಸರಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಜಾಯ್ ಲೋಬೋ ಮತ್ತು ನೀಲ್ ಪೆರ್ರಿಯ ನಡೆ-ನಡವಳಿಕೆ ಒಂದೇ ರೀತಿಯಾದದ್ದು.


ಇಂತಹ ಅಳವಡಿಕೆಗಳನ್ನು ರಿಮೇಕು ಅಥವಾ ಯಥಾವತ್ತು ನಕಲು ಎಂದು  ನೇರವಾಗಿ ಆಪಾದಿಸಲಾಗುವುದಿಲ್ಲ. ಯಾಕೆಂದರೆ ಮೇಲೆ ಉದಾಹರಿಸಿದ ಎಲ್ಲಾ ಸಿನಿಮಾ ಅಳವಡಿಕೆಗಳು ಒಟ್ಟಾರೆಯಾಗಿ ಚಿತ್ರಕತಾ ಬರಹಗಾರನನ್ನು ಬಹಳಷ್ಟು ಪ್ರಭಾವಿಸಿದ ಸಿನಿಮಾ, ಕಾದಂಬರಿಯ ಯಾವುದೋ ಒಂದು ಪಾತ್ರ ಇವೆಲ್ಲವನ್ನೂ ಮಿಳಿತಗೊಳಿಸಿಕೊಂಡಿವೆ. ಒಟ್ಟು ಸಿನಿಮಾದ ಹೂರಣವನ್ನೋ, ಪಾತ್ರದ ಅಪರಿಮಿತ ಆತ್ಮವಿಶ್ವಾಸವನ್ನೋ ಬಳಸಿಕೊಂಡರೆ ತಪ್ಪಲ್ಲವಲ್ಲ. ಪಾಂಡವರ ಕಥೆಯನ್ನೇ ಇಟ್ಟುಕೊಂಡು ಕನ್ನಡದಲ್ಲಿ "ಹಬ್ಬ"  ಎನ್ನುವ ಸಿನಿಮಾ ಬಂದದ್ದು ನೆನಪಿದೆ ತಾನೇ. ಅದೇ ರೀತಿ ಪಾಂಚಾಲಿಯ ದೃಷ್ಟಾಂತವನ್ನು ಅಳವಡಿಸಿಕೊಂಡು ದಿನೇಶ್ ಬಾಬು ಕನ್ನಡದಲ್ಲಿ "ಪಾಂಚಾಲಿ" ಎನ್ನುವ ಸಿನಿಮಾ ಮಾಡಿರುವುದನ್ನೂ ಇದೇ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳಬಹುದು. ಜೂನ್ನಲ್ಲಿ ಬಿಡುಗಡೆಗೆ ಕಾಯುತ್ತಿರುವ ಮಣಿರತ್ನಂರ "ರಾವಣ"ದಲ್ಲೂ ರಾಮಾಯಣದ್ದೇ ಅಳವಡಿಕೆ ಇದೆ...ಆದರೆ ಇಲ್ಲೆಲ್ಲಾ ಗಮನಿಸಬೇಕಾದ ಮತ್ತೊಂದು ಅಂಶವಿದೆ...ಮೂಲ ಕತೆಯನ್ನು ಭಿನ್ನ ಕಥಾ ಆಯಾಮದೊಂದಿಗೆ ಬೆಳೆಸುತ್ತಾ ಹೋದ ಹಾಗೆ ಹೊಸದೊಂದು ಚಿತ್ರಕತೆ ಹುಟ್ಟುತ್ತಾ ಹೋಗುತ್ತದೆ... ಮಜಾ ಇರೋದು ಇಲ್ಲೇ..ಹೀಗೆ ಪುರಾಣದ್ದೋ, ಕಾದಂಬರಿಯದ್ದೋ ಒಂದು ಪಾತ್ರವನ್ನು ಆಯಾ ಲೇಖಕ ನಿರ್ಮಿಸಿದ ವಾತಾವರಣವನ್ನು ಮೀರಿ ಭಿನ್ನ ಸನ್ನಿವೇಶ, ಸಂದರ್ಭದಲ್ಲಿ ಯೋಚಿಸುತ್ತಾ ಹೊರಟರೆ ಸಿನಿಮಾಕ್ಕಾಗುವ ಚಿತ್ರಕತೆ ಬರವಣಿಗೆಗೆ ಕೂರಬಹುದು. ಚೀನೀ ಸಿನಿಮಾ "ಸಂಸಾರ"ವನ್ನೇ ಬೇಕಿದ್ದರೆ ಗಮನಿಸಿ... ಬುದ್ಧನ ಸಂಸಾರ ತ್ಯಜಿಸುವ ನಿರ್ಧಾರವನ್ನೇ ಪ್ರಶ್ನಿಸುವ, ಆ ಮೂಲಕ ಬುದ್ಧ ಹೆಣ್ಣೊಬ್ಬಳನ್ನು ಅತಂತ್ರಕ್ಕೆ ದೂಡುವುದನ್ನು ಒಂದು ವೇಳೆ ಯಶೋಧರೆ ದಿಟ್ಟತನದಿಂದ ಪ್ರಶ್ನಿಸಿದರೆ ಹೇಗಿರುತ್ತದೆ ಎನ್ನುವ ನೆಲೆಗಟ್ಟಿನಲ್ಲಿ ಬೌದ್ಧ ಭಿಕ್ಷುವಿನ ಕತೆಯ ಹಿನ್ನೆಲೆಯಲ್ಲಿ ಚಿತ್ರಕತೆಗಾರ ಹೆಣೆಯುತ್ತಾ ಹೋದಾಗ ಸೃಷ್ಟಿಯಾಗುವ ಸಮಸ್ಯೆ ಹಾಗೂ ಅದನ್ನು ಪರಿಹರಿಸಿಕೊಳ್ಳಲು ಪಾತ್ರಗಳು ಹುಡುಕುವ ದಾರಿಗಳೇ ಚಿತ್ರಕತೆಯ ಬರವಣಿಗೆಯ "ಸೆಟಪ್-ಕನ್ಫ್ರಂಟೇಶನ್-ರಿಜಲ್ಯೂಶನ್" ಎನ್ನುವ ಚಿತ್ರಕತೆಯ ಮೂಲ ಸೂತ್ರವಾಗುತ್ತದೆ(ಪ್ರತಿ ಸಿನಿಮಾದ ಚಿತ್ರಕತೆಯು ಕ್ರಮವಾಗಿ ಈ ಮೂರು ಅಂಶಗಳನ್ನು ಹೊಂದಿರುತ್ತದೆ).


ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಒಪ್ಪುತ್ತೇವೆ ತಾನೇ. ಬಿ.ಆರ್ ಅಂಬೇಡ್ಕರ್ ರಾಮನ ಬಗೆಗೊಂದು ಲೇಖನ ಬರೆದಿದ್ದಾರೆ(ಹಂಪಿ ವಿಶ್ವವಿದ್ಯಾಲಯ ಪ್ರಕಟಿಸಿರುವ "ದೇವರನ್ನು ಕುರಿತು ಒಂದು ಹಿನ್ನೋಟ" ಪುಸ್ತಕದಲ್ಲಿದೆ). ಅದೇ ರಾಮ ಸೀತೆಯನ್ನು ಜೀವಿತಾವಧಿಯಲ್ಲಿ ನಡೆಸಿಕೊಂಡ ರೀತಿ ಸರಿಯೇ ಎನ್ನುವುದು ಆ ಬರವಣಿಗೆಯ ಮೂಲ ತಿರುಳು. ಇದನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಮಾನವೀಯ ನೆಲೆಯಲ್ಲಿ ರಾಮನ ನೆಲೆಗಟ್ಟು ಎಷ್ಟರಮಟ್ಟಿಗೆ ಅಭದ್ರವಾದದ್ದು, ಸ್ವಾರ್ಥದಿಂದ ಕೂಡಿದ್ದು ಎನ್ನುವುದನ್ನು ಅಂಬೇಡ್ಕರ್ ಬರೆಯುತ್ತಾ ಹೋಗುತ್ತಾರೆ. ರಾಮನ ಬಗ್ಗೆ ಇರುವ ಈ ಜಿಜ್ಙಾಸೆಯೇ ಸಿನಿಮಾ ಚಿತ್ರಕಥೆಯ ಬರವಣಿಗೆಗೆ ಸಹಾಯಕ. ಇದೇ ವಿಷಯವನ್ನು ಇವತ್ತಿನ ಸಂದರ್ಭದ ಪಾತ್ರಗಳಿಗೆ ಅಳವಡಿಸಿದರೆ ಒಂದು ಸಿನಿಮಾದ ಚಿತ್ರಕತೆ ಖಂಡಿತಾ ಸಾಧ್ಯವಾಗುತ್ತದೆ. ಇದೇ ಗೊಂದಲಗಳಿಗೆ, ವೈರುಧ್ಯಗಳಿಗೆ ಇನ್ನಷ್ಟು ಸನ್ನಿವೇಶಗಳನ್ನು ಸೇರಿಸುತ್ತಾ ಹೋದಾಗ ಚಿತ್ರಕತೆಗೊಂದು ಸೂಕ್ತ ಚೌಕಟ್ಟು ನಿರ್ಮಾಣವಾಗುತ್ತದೆ. ತರ್ಕ, ಸಮಸ್ಯೆ, ಪರಿಹಾರ ಇವೆಲ್ಲಾ ಚಿತ್ರಕತೆಯ ಬರವಣಿಗೆಯ ಅಗತ್ಯಗಳು.



ಮುಗಿಸುವ ಮುನ್ನ:

"ಸಕ್ಸೆಸ್ ಕೇ ಪೀಛೆ ಮತ್ ಭಾಗೋ, ಲೈಫ್ ಕಾ ಮಜಾ ಲೂಟ್ ಲೋ" ಎಂದು ರಾಂಚೋ ಹೇಳುವಾಗಲೆಲ್ಲಾ ಡೆಡ್ ಪೋಯೆಟ್ ಸೊಸೈಟಿಯ "I went to the woods because i wanted to live deliberately, i wanted to live deep and suck out all the morrow of life, to put to rout all that was not life and not when i had come to die discover that i had not lived " ಎನ್ನುವ ಸಾಲುಗಳೇ ಮತ್ತೆ ಮತ್ತೆ ನೆನಪಾಗುತ್ತವೆ. ಶಾಲೆಯಿಂದ ಹೊರಹಾಕಲ್ಪಟ್ಟ ಕೀಟಿಂಗ್ ತರಗತಿಯಿಂದ ಹೊರ ನಡೆಯುವಾಗ ಶಾಲಾ ಮುಖ್ಯಸ್ಥನ ಮಾತನ್ನು ಧಿಕ್ಕರಿಸಿ "ಕ್ಯಾಪ್ಟನ್ ಓ ಮೈ ಕ್ಯಾಪ್ಟನ್" ಎನ್ನುತ್ತಾ ವಿದ್ಯಾರ್ಥಿಗಳೆಲ್ಲಾ  ಒಬ್ಬೊಬ್ಬರೇ ಡೆಸ್ಕಿನ ಮೇಲೇರುವ ಸನ್ನಿವೇಶದ ಅಳವಡಿಕೆಯೇ ಥ್ರೀ ಈಡಿಯೆಟ್ಸ್ ನಲ್ಲಿ  ಕೆಲಸ ಸಿಕ್ಕ ಖುಷಿಯಲ್ಲಿ ಕಾರಿಡಾರಿನಲ್ಲೇ ಫರ್ಹಾನ್, ರಾಜು ಪ್ಯಾಂಟು ಬಿಚ್ಚಿ "ಜಹಾಪನಾ ತುಸ್ಸೀ ಗ್ರೇಟ್ ಹೋ" ಎನ್ನುತ್ತಾ ರಾಂಚೋಗೆ ಸಲಾಮು ಹೊಡೆಯುವ ಅಪೂರ್ವ ಸನ್ನಿವೇಶವಾಗಿದೆ. ಇನ್ನೊಮ್ಮೆ ಡೆಡ್ ಪೋಯೆಟ್ಸ್ ಸೊಸೈಟಿಯನ್ನೋ, ಥ್ರೀ ಈಡಿಯೆಟ್ಸ್ ಸಿನಿಮಾವನ್ನೋ ನೋಡುವಾಗ ಇದನ್ನೆಲ್ಲಾ ಹಾಗೇ ಸುಮ್ಮನೆ ಗಮನಿಸಿ.

("ಸಾಂಗತ್ಯ"ದ ಪ್ರಥಮ ಮುದ್ರಿತ  ಸಂಚಿಕೆಯಲ್ಲಿ ಪ್ರಕಟಗೊಂಡ ಬರಹ)

ಗುರುವಾರ, ಏಪ್ರಿಲ್ 1, 2010

ಬೆಂಗಳೂರೆಂದರೆ,,,,,,,,


ಬೆಂಗಳೂರೆಂದರೆ........

ಕುಡಿದು ಬಿಟ್ಟ ಬೈಟೂ ಕಾಫಿ, ಸಂಜೆಯ ಹೊತ್ತಿಗೆ ಹೆಚ್ಚಾಗಿ ಸುರಿಯುವ ಮಳೆ, ಪಿಡ್ಜಾ ಹಟ್ಟಿನ ಮುಂದುಗಡೆ ಹೋಂ ಡೆಲಿವರಿಗೆ ನಿಂತ ಹೀರೋ ಹೋಂಡಾ, ಪಲ್ಸರ್ಗಳು, ತಿಂಗಳಾಂತ್ಯದಲ್ಲೋ ವಾರಾಂತ್ಯದಲ್ಲೋ ಧಿಡೀರ್ ಹುರುಪುಗೊಂಡು ಕಾರ್ಯಾಚರಣೆಗೆ ಇಳಿಯುವ ಜ್ಞಾನೋದಯಗೊಂಡ ಬುದ್ಧಂತಹ ಟ್ರಾಫಿಕ್ಕು ಪೋಲೀಸರು, ಕೆಂಪು ಬಣ್ಣದ ಸಿಗ್ನಲ್ಲು ಬಿದ್ದಾಗ ನಿಂತ ಹೋಂಡಾ ಆಕ್ಟಿವಾದ ಹ್ಯಾಂಡಲನ್ನು ಏಕಾಗ್ರತೆಯಿಂದ ಹಿಡಿದು ಡ್ರೈವಿಂಗ್ ಸೀಟಿನಲ್ಲಿ ಕೂತ ಅಮ್ಮನ ಕತೆ ಕೇಳುತ್ತಿರುವ ಮುದ್ದು ಪುಟಾಣಿ, ಸತ್ತ ಮೀನನ್ನು ಚರಂಡಿಗೆ ಎಸೆಯುತ್ತಿರುವ ತ್ಯಾಗರಾಜನಗರದ ಅಕ್ವೇರಿಯಂ ಅಂಗಡಿಯ ಮಾಲೀಕ, ಜಗಮಗಿಸುವ
ಪಾರ್ಟಿ-ಮದುವೆ ಹಾಲ್, ದ್ವಾರದಲ್ಲೇ ಇಂಥೋರು ವೆಡ್ಸ್ ಇಂಥೋರನ್ನ ಅನ್ನೋ ಹೂವಿನ ಕಟೌಟ್, ಮೆಟ್ರೋಗೆ ಕಟ್ಟುತ್ತಿರುವ ಕಂಬ, ಸೇತುವೆ ಮೇಲೆ ಕುಳಿತ ವೆಲ್ಡರಿನ ಹಣೆಯಿಂದ ನೆಲ ಸೇರುತ್ತಿರುವ ಬೆವರಿನ ಹನಿ, ಸಿಟಿ ರೈಲ್ವೆ ಸ್ಟೇಶನ್ನಿನ ಅಂಡರ್ಪಾಸಿನ ಮೆಟ್ಟಿಲಿಳಿಯುವಾಗ ಪಕ್ಕದಲ್ಲೇ ನಡೆಯುತ್ತಾ "ಇನ್ನೂರು ಬರ್ತೀಯಾ" ಎಂದು ಕಿವಿ ಹತ್ತಿರ ಉಸುರಿದ ಹುಡುಗಿ, ಉತ್ತರ ಸಿಕ್ಕದೇ ಮುಂದಿನವನತ್ತ ಅದೇ ವೇಗದಲ್ಲಿ ನಡೆಯುವ ಆಕೆಯ ಹೆಜ್ಜೆಗಳು, "ಡಬ್ಬಾ ತರಹಾ ಇದೆ ಸಾರ್ ಸಿನ್ಮಾ. ಮಲ್ಕೊಳಿ ಮನೆಗ್ಹೋಗಿ" ಎನ್ನುತ್ತಾ ಬೈಕು ಪಾರ್ಕು ಮಾಡುವಾಗ ಬುದ್ದಿಮಾತು ಹೇಳುವ ಥಿಯೇಟರಿನ ವಾಚ್ಮನ್ನು, ಆಫ್ ಮಾಡಿದ ಬೈಕು ಸಿಗ್ನಲ್ಲು ಬಿದ್ದಾಗ ಹೊಡೆದ ಕಿಕ್ಕಿಗೆ ಸ್ಟಾರ್ಟ್ ಆಗದೇ ಇದ್ದೋರೆಲ್ಲಾ ಸಿಟ್ಟಿನಲ್ಲಿ, ರಣೋತ್ಸಾಹದಲ್ಲಿ ಹೊಡೆಯುತ್ತಿರುವ ವೆರೈಟಿ ಹಾರ್ನುಗಳು, ಮೆಜೆಸ್ಟಿಕ್ಕಿನ ಕಲ್ಲುಬೆಂಚಿನಲ್ಲಿ ತನ್ನ ಹುಡುಗ ಮಾಡುತ್ತಿರುವ ಚೇಷ್ಟೆಗಳಿಗೆ ಹುಸಿಮುನಿಸು ತೋರಿಸುತ್ತಾ, ಅಕ್ಕ ಪಕ್ಕದವರ ಪರಿವೆಯೇ ಇರದೇ ಜೋರಾಗಿ ಗದರುತ್ತಾ ನಗುತ್ತಿರುವ ಹುಡುಗಿ, ತಡೆಹಿಡಿದ ಮೂತ್ರವನ್ನು ವಿಸರ್ಜಿಸಲು ಬೇರ್ಯಾವುದೇ ಸೂಕ್ತ ಮಾರ್ಗ ಕಾಣದೇ ಮೂಗು ಹಿಡಿಯುತ್ತಾ, ಕಾಲಿನ ಪ್ಯಾಂಟನ್ನು ಎತ್ತಿಹಿಡಿಯುತ್ತಾ ಮೆಜೆಸ್ಟಿಕ್ಕಿನ ಜಗತ್ಪ್ರಸಿದ್ಧ ಸುವಾಸನೆ ಭರಿತ ಸಾರ್ವಜನಿಕ ಮೂತ್ರಾಲಯ ಹೊಕ್ಕ ಎಂಜಿನಿಯರಿಂಗ್ ಸ್ಟೂಡೆಂಟು, ಉತ್ತರ ಪ್ರದೇಶದ ಮೀಸೆ ಚಿಗುರದ ಹುಡುಗ ಫುಟ್ಪಾತಲ್ಲಿ ನಿಂತು ನೀಡುತ್ತಿರುವ ಪಾನಿಪುರಿಯನ್ನು ಚಪ್ಪರಿಸಿ ತಿನ್ನುತ್ತಿರುವ ಹರೆಯದ ಹುಡುಗಿ, ಅವಳನ್ನೇ ತದೇಕಚಿತ್ತದಿಂದ ಬಿಎಂಟಿಸಿ ಬಸ್ಸೊಳಗಿನ ರಶ್ಶನ್ನೂ ಲೆಕ್ಕಿಸದೇ ನೋಡುತ್ತಾ ತನ್ನ ಸುತ್ತ ವೃಂದಾವನ ಕಟ್ಟಿಕೊಳ್ಳುತ್ತಿರುವ ಹುಡುಗ, ತಮ್ಮತಮ್ಮೊಳಗೆ ಕನ್ನಡದಲ್ಲೇ ವ್ಯವಹರಿಸುತ್ತಾ ಬಂದ ಗಿರಾಕಿಗಳ ಮುಂದೆ ಮಾತ್ರ "ವಾಟ್ ಡು ಯು ವಾಂಟ್ ಸರ್" ಎನ್ನುತ್ತಿರುವ ಪಿಜ್ಜಾ ಕೌಂಟರಿನವರು, ಸಿಗ್ನಲ್ಲು ಬೀಳದಿದ್ದರೂ ತಟಕ್ಕನೆ ಕೆಜಿ ರೋಡು ದಾಟಲು ಹರಸಾಹಸ ಪಡುತ್ತಾ ವೇಗವಾಗಿ ಬರುವ ವಾಹನಗಳ ಬ್ರೇಕಿನ ಸದ್ದಿಗೆ ಹೆದರಿ ಮತ್ತೆ ರಸ್ತೆ ಪಕ್ಕಕ್ಕೆ ಬಂದು ನಿಲ್ಲುವ ಮಂದಿ, ಸೆಂಟ್ರಲ್ ಕಾಲೇಜಿನ ಕಂಪೌಡು ಹಾರಿ ಶಾರ್ಟ್ ಕಟ್ಟಿನಲ್ಲಿ ಲೇಟಾದ ಕ್ಲಾಸು ತಲುಪಲು ಹೊರಟ ಗುಜರಾತಿ, ಪಿಕ್ಪಾಕೇಟ್ ಆದ ಮೊಬೈಲಿನ ಬಗ್ಗೆ ಕಂಪ್ಲೇಂಟು ಕೊಡಲು ಜಯನಗರ ಸ್ಟೇಶನ್ನಿನ ಒಳಹೊಕ್ಕು ಪೋಲೀಸರನ್ನು ಕಂಡರೆ ನೆನಪಾಗುವ ಸಾಯಿಕುಮಾರ್ ಸಿನಿಮಾಗಳು, ಭಯಂಕರ ಭಯಂಕರ ಡೈಲಾಗುಗಳು, ಫುಟ್ಪಾತಿನಲ್ಲಿ ತೆಗೆದುಕೊಂಡ ಸಿನಿಮಾ ಡಿವಿಡಿ ಹೀರೋ ಇನ್ನೇನು ಮುತ್ತುಕೊಟ್ಟೇ ಬಿಡುತ್ತಾನೆ ಎನ್ನುವ ದೃಶ್ಯದಲ್ಲೇ ಸಿನಿಮಾದ ಕೊನೆಯ ದೃಶ್ಯದಂತೆ ನಿಂತುಹೋಗಿರುವ ದುರದೃಷ್ಟದ ಘಳಿಗೆ,  ಎರಡೆರಡು ಸಾರಿ ಪ್ರಯತ್ನಪಟ್ಟರೂ ಕಾರ್ಡು ಡಿಟೆಕ್ಟು ಮಾಡದ ಎಟಿಎಂ ಮೆಶಿನ್ನು, ಮಾರ್ಕೆಟ್ಟಿನಲ್ಲಿ ಭವಿಷ್ಯವೇ ಕೈಕೊಟ್ಟ ವ್ಯಕ್ತಿಯಿಂದ ಭವಿಷ್ಯ ಕೇಳುತ್ತಿರುವ ಬಡ ಹೆಂಗಸು, ಅದ್ಯಾವುದೋ ಘಳಿಗೆಯಲ್ಲಿ ಪೈಪು ಒಡೆದು ನದಿಯಂತೆ ಹರಿಯುತ್ತಿರುವ ಕಾವೇರಿ ನೀರು, ಕೈ ಕೋಳ ಹಾಕಿ ಹರೆಯದ ಹುಡುಗನೊಬ್ಬನನ್ನ ಚಿಕ್ಕಪೇಟೆಯ ದರ್ಗಾದ ಎದುರಿನ ಜನ ದಟ್ಟಣೆಯಲ್ಲಿ ಒಯ್ಯುತ್ತಿರುವ ಪೋಲೀಸ್ ಪೇದೆ, ಎಸ್ಪಿ ರೋಡಲ್ಲಿ 7 ರೂಪಾಯಿಗೆ ಸಿಗುವ ಬ್ಲ್ಯಾಂಕು ಡಿವಿಡಿ, ನಿಂತ ಬೈಕಿಗೆ ರಭಸದಿಂದ ಬಂದು ಗುದ್ದಿದ ಬಸ್ಸು, ಹಾರಿ ಮುಂದಿದ್ದ ಕಾರಿನ ಮೇಲೆ ಬಿದ್ದ ಟೈ ಹಾಕಿಕೊಂಡ ಮಧ್ಯವಯಸ್ಕ, ಹಿಂದೆ ಮುಂದೆ ನಡೆಯಲು ತಿರುಗಲೂ ಸಾಧ್ಯವಾಗದ ಬೆಳಿಗ್ಗಿನ-ಸಂಜೆಯ ಬಿಎಂಟಿಸಿಯಲ್ಲಿ ಮುಂದಕ್ಕೆ ಹೋಗಲಿಕ್ಕೆ ದಾರಿ ಬಿಡದಿದ್ದಕ್ಕೆ ತಾವು ತಾವೇ ಲಾಯರುಗಳೆಂಬಂತೆ ವಾದ ಮಾಡುತ್ತಾ, ಜಗಳ ಕಾಯುತ್ತಾ ಸುತ್ತಲಿನವರನ್ನು ಸಿಂಪತಿ, ಹೂಂಕಾರ, ಠೇಂಕಾರಗಳಿಗೆ ಎಳೆಯಲು ಯತ್ನಿಸುತ್ತಾ ಬಿಎಂಟಿಸಿಯಲ್ಲೇ ಕ್ರಾಂತಿ ಮಾಡಲು ಹೊರಟವರು, ಹೇ ಅವನೇ ಕಣೋ ಕೊತ್ವಾಲನ ರೈಟ್ ಹ್ಯಾಂಡು ಆಗಿದ್ದವ-ಶೆಟ್ಟಿ ಎನ್ನುತ್ತಾ ಕೌಂಟರಿನಲ್ಲಿರುವ ಬೋಳುತಲೆಯ ಕನ್ನಡಕದ ಆಸಾಮಿಯನ್ನು ಕ್ಯಾಂಟೀನಿನಲ್ಲಿ ತೋರಿಸುತ್ತಿರುವ ಕಾಲೇಜು ಹುಡುಗರು, "ಮಗಾ ಅವ್ಳ ಮನೆ ಹತ್ರ ಹೋಗಿದ್ಯಾ, ಏನಂದ್ಳೋ" ಎನ್ನುತ್ತಾ ಗೆಳೆಯನೊಬ್ಬನನ್ನು ಥೇಟು ಲೂಸು ಮಾದನ ಸಿನಿಮಾದ ದೃಶ್ಯದಂತೆ ಕೇಳುತ್ತಿರುವ ಹೈಸ್ಕೂಲು ಹುಡುಗ, ಕ್ರಿಕೆಟ್ ಆಡಿ ಕೊಳೆಯಾದ ಅವನ ಸಮವಸ್ತ್ರ, ಒಂದೆರಡು ಗಂಟೆ ಗಿಜಿಗುಡುವ ಮೆಜೆಸ್ಟಿಕ್ಕಿನಲ್ಲಿ ಸುಮ್ಮನೆ ಕೂತರೆ ಜೀವನ ನಶ್ವರ, ಕ್ಷಣಿಕ ಎನ್ನುವ ಸತ್ಯ ಗೊತ್ತಾಗಿ ಗಾಬರಿಯಿಂದ ಸನ್ಯಾಸಿಗಳಾಗುತ್ತೇವೋ ಎನ್ನುವ ಭಯದಿಂದ ಸಿಕ್ಕ ಬಸ್ಸು ಹತ್ತಿಬಿಡುವ ಧಾವಂತ, ಆನಂದ ರಾವ್ ಸರ್ಕಲ್ಲಿನ ಫ್ಲೈ ಓವರಿನಲ್ಲಿ ಟ್ರಾಫಿಕ್ ಜಾಮಾಗಿ ಅಟೇನ್ಶನ್ನಲ್ಲಿ ಅಡ್ಡಾ ದಿಡ್ಡಿ ನಿಂತ ಬಸ್ಸು, ಕಾರು, ಪ್ರವಾಸಕ್ಕೆ ಹೊರಟ ಟೆಂಪೋ ಟ್ರ್ಯಾಕ್ಸು, ದೊಡ್ಡ ನೀಲಿ ಡ್ರಮ್ಮು, ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಮಾಡಿಟ್ಟ ರಾಮನವಮಿಯ ಪಾನಕ ಫುಲ್ರಶ್ಶಿನ ಮಧ್ಯೆ ಅರೆ ಕಾಸಿನ ಮಜ್ಜಿಗೆ, ಪದ್ಮನಾಭನಗರದ ಬಸ್ಸ್ಟ್ಯಾಂಡಿನಲ್ಲಿ ಸಂಜೆ ಆರೂವರೆ ಹೊತ್ತಿಗೆ ತಪ್ಪಿಸದೇ ಬೇಟಿಯಾಗುವ ಎಂಟುಮಂದಿ ತಾತಂದಿರು, ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಪೇರಿಸಿಟ್ಟ ಮುದ್ದೆ, ಮಧ್ಯಾಹ್ನಗಳಲ್ಲಿ ಗಾಂಧೀನಗರದಲ್ಲಿ ಸಾಲಾಗಿ ಊಟಕ್ಕೆ ಬಂದು ನಿಲ್ಲುವ ಆಟೋರಿಕ್ಷಾದವರು, ರಿಕ್ಷಾದ ಮುಂದೆ ಹಿಂದೆ ಅಂಟಿಹೋದ ರಾಜ್ಕುಮಾರು, ಶಂಕರ್ನಾಗು..ಕನ್ನಡಿಯಲ್ಲಿ ಬರೆದಿಟ್ಟ ತಂದೆ ತಾಯಿ ಆಶೀರ್ವಾದ, ನಾರಿ ಮುನಿದರೆ ಮಾರಿ, ಎರಡು ಕಾರು ಬಸ್ಸುಗಳ ಮಧ್ಯೆ ಇರುವ ಹೊದ್ದು ಹಾಸಲಾಗುವಷ್ಟೇ ಇರುವ ಜಾಗದಲ್ಲಿ ಬೈಕು ನುಗ್ಗಿಸುತ್ತಾ ತುಂಬಾ ಮುಂದೆ ಬಂದೆ ಎಂದು ಖುಷಿಯಾಗಿ ಬೀಗಿ ಗತ್ತಿನಿಂದ ಹಿಂದಕ್ಕೆ ನೋಡುತ್ತಿರುವ ಬೈಕಿನವ, ಗಾಜಿನ ಕಟ್ಟಡಗಳ ಮೇಲೆ ಭಯಕ್ಕೋ ಭಕ್ತಿಗೋ ಕನ್ನಡದ ಧ್ವಜ, ರಾಜ್ಕುಮಾರು, ಇತ್ತೀಚೆಗೆ ವಿಷ್ಣುವರ್ಧನ್ನು, ಬೆಳಿಗ್ಗೆಗೆ ಮುಗಿದು ಹೋದ ಕರಗ, ಉಳಿದು ಹೋದ ಬಣ್ಣದ ಬಲೂನು, ಪ್ರಸಾದದ ಹೂ, ನಿಂತಲ್ಲೆಲ್ಲಾ ಕಸ ಲೋಡು ಮಾಡುತ್ತಾ ಅದೆಲ್ಲಾ ಓವರ್ ಲೋಡಾಗಿ ಕಸದ ವಾಹನ ಚಲಿಸುವಾಗ ಒಂದೋ ಎರಡೋ ಪರ್ಸೆಂಟು ಗಾಳಿಗೆ ಹಾರುತ್ತಾ ತನ್ನೆಲ್ಲಾ ಘಮಗಳನ್ನು ಹರಡುತ್ತಿರುವ ಬೆಳಿಗ್ಗಿನ ಹೊತ್ತು, ಹರಿದು ಹೋದ ಪೋಸ್ಟರಿನಲ್ಲಿ ನಿಂತು ನಗುತ್ತಿರುವ ನಾಯಕ, ಜಾಸ್ತಿ ವಾಹನಗಳು ಚಲಿಸಿದಾಗ ಸಣ್ಣಗೆ ನಡುಗುವ ಮಾರ್ಕೆಟ್ಟಿನ ಫ್ಲೈಓವರ್ರು, ದೇವೇಗೌಡ ಪೆಟ್ರೋಲ್ ಬಂಕಿನ ಸಿಗ್ನಲ್ಲಿನಲ್ಲಿ ಹೂ, ಹರಿವೆ ಸೊಪ್ಪನ್ನು ಮಾರುತ್ತಿರುವ ಹೈಸ್ಕೂಲು ಹುಡುಗಿಯ ಕಣ್ಣಲ್ಲಿ ಮಿನುಗುತ್ತಿರುವ ಸಂಜೆಯ ಉತ್ಸಾಹ......

ಹೀಗೆ.........

ಬೆಂಗಳೂರೆಂದರೆ ಪೂರ್ಣ ವಿರಾಮವಿಲ್ಲದ, ವಾಕ್ಯವಾಗಲು ಒದ್ದಾಡುವ ಕಾಮಾಗಳಿಂದಲೇ ತುಂಬುತ್ತಾ ಹೋಗುವ ಚಿತ್ರ ಪಟ....ಬಣ್ಣ ಬಣ್ಣದ ಗಾಳಿಪಟ....ಸೂತ್ರ ಹಿಡಿದು ನಿಯಂತ್ರಿಸುತ್ತಾ, ಸಣ್ಣವರಾಗುತ್ತಾ, ಸೂತ್ರ ಹರಿದಾಗ ಅಷ್ಟು ಹೊತ್ತು ಆಡಿದ ಆಟವನ್ನು ನೆನೆಯುತ್ತಾ ಬಿದ್ದ ಗಾಳಿಪಟವನ್ನು ಹುಡುಕುವುದು..ಸಿಗದಿದ್ದರೆ ಒಂದಿಷ್ಟು ಪರ್ಸಂಟೇಜು ದುಃಖಿಸುತ್ತಾ ಮತ್ತೊಂದಷ್ಟು ಪರ್ಸಂಟೇಜು ಆಶೋತ್ತರಗಳೊಂದಿಗೆ ಗೋಂದು, ಬಣ್ಣದ ಪೇಪರು, ಹಿಡಿಸುಡಿ ಕಡ್ಡಿ ಹಿಡಿದು ಮತ್ತೊಂದು ಗಾಳಿಪಟಕ್ಕೆ ರೆಡಿಯಾಗುವುದು.....

ಬೆಂಗಳೂರೆಂದರೆ ಹಾಗೇ......... 


ಚಿತ್ರ ಕೃಪೆ: ಬಾಲು ಮಂದರ್ತಿ 

ಶನಿವಾರ, ಮಾರ್ಚ್ 27, 2010

ಅಡಿಕೆ ತೋಟಗಳಿಗೆ ಅಡರಿದೆ ಮುಪ್ಪು




ತೋಟದೊಡೆಯನೇ ಅಡಿಕೆ ಹೆಕ್ಕುವವನು, ಅಡಿಕೆ ಹೊರುವವನು. ರಟ್ಟೆಯಲ್ಲಿ ತಾಕತ್ತಿದ್ದರೆ ಮರದಿಂದ ಅಡಿಕೆ ಇಳಿಸುವವನು" ಎನ್ನುವಲ್ಲಿಗೆ ದಕ್ಷಿಣ ಕನ್ನಡದ ಅಡಿಕೆ ಕೃಷಿಕರ ಪರಿಸ್ಥಿತಿ ಬಂದು ನಿಂತಿದೆ(ಉಳಿದ ಭಾಗದ ಕೃಷಿಕರದ್ದೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ). "ದುಡ್ಡು ಕೇಳಿದಷ್ಟು ಕೊಡುವ. ಮಜಲಿನದ್ದು, ಬಾಕಿಮಾರಿನ ತೋಟದ ಅಡಿಕೆ ಇಳಿಸಿ ಕೊಡು. ಅಡಿಕೆ ಹೆಕ್ಲಿಕ್ಕೆ ಮುಂದಿನ ವಾರ ಒಂದು ದಿನ ಇಬ್ಬರು ಬರ್ತಾರಂತೆ. ಅಷ್ಟರೊಳಗೆ ಮುಗಿಸಿಕೊಡು ಮಾರಾಯ" ಎಂದು ಪರಿಚಯವಿರುವ ಕೆಲಸಗಾರರಿಗೆ ದಮ್ಮಯ್ಯ ಗುಡ್ಡೆ ಬಿದ್ದರೂ ಕೆಲಸಕ್ಕೆ ಜನ ಸಿಗುತ್ತಿಲ್ಲ. ನಾಳೆಯಿಂದ ನಾಲ್ಕು ದಿನ ನಿರಂತರವಾಗಿ ಕೆಲಸಕ್ಕೆ ಬರುತ್ತೇವೆ ಎಂದು ಹೇಳಿದ ಕೆಲಸದವರು ಆ ನಾಲ್ಕು ದಿನ ಕಳೆದು ವಾರವಾದರೂ ಪತ್ತೆಯಿಲ್ಲ. ಮೊಬೈಲಿಗೆ ಕಾಲ್ ಮಾಡಿದರೆ ರಿಂಗ್ ಮಾತ್ರ ಆಗುತ್ತದೆ. ರಿಸೀವ್ ಮಾಡುವವರಿಲ್ಲ.


"ನಿಮ್ಮಲ್ಲಿ ಕೆಲಸಕ್ಕೆ ಜನ ಸಿಗ್ತಾರಾ??" ಎನ್ನುವುದು ಪರಸ್ಪರ ಭೇಟಿಯಾಗುವ ಅಡಿಕೆ ಕೃಷಿಕರೆಲ್ಲರ ಮೊದಲ ಮುಖ್ಯ ಪ್ರಶ್ನೆ. ಮದುವೆ ಇರಲಿ, ಸಾರ್ವಜನಿಕ ಗಣೇಶೋತ್ಸವವಿರಲಿ, ತಾಲೂಕು ಪಂಚಾಯಿತಿ ಮೀಟಿಂಗ್ ಇರಲಿ, ರಶ್ಶಾದ ಖಾಸಗಿ ಬಸ್ಸಲ್ಲಿ ಪರಸ್ಪರರು ಸಿಕ್ಕಲಿ ಇದಂತೂ ನಿತ್ಯದ ಸುಪ್ರಭಾತ.

ಒಂದು ಕಾಲದಲ್ಲಿ ಅಂದರೆ ಹತ್ತೋ ಹದಿನೈದು ವರ್ಷಗಳ ಹಿಂದೆ ಎರಡೋ ಮೂರೋ ಎಕರೆಯಲ್ಲಿ ಅಡಿಕೆ ಸಸಿ ನೆಟ್ಟು ಅದನ್ನು ತನ್ನದೇ ಮಗುವೇನೋ ಎಂಬಂತೆ ಬೆಳೆಸಿದ ಅಡಿಕೆ ಕೃಷಿಕ ಇವತ್ತು ಕೆಲಸದವರಿಲ್ಲದೇ ಪೂರ್ತಿ
ಕಂಗಾಲು. ಜೊತೆಗೆ ಅವನ ತೋಟವೀಗ ಹತ್ತು ಎಕರೆಯಷ್ಟು ವಿಸ್ತಾರ ಬೇರೆ. ಪ್ರಾರಂಭದ ದಿನಗಳಲ್ಲಿ ತೋಟ ಮಾಡಬೇಕು ಎನ್ನುವ ಹುರುಪಿತ್ತು. ಸ್ವತಃ ಅಡಿಕೆ ಮರಕ್ಕೆ ಹತ್ತಿ ಅಡಿಕೆ ಇಳಿಸುವ ತಾಕತ್ತಿತ್ತು. ಮೊದಲೆರಡು ವರ್ಷಗಳಲ್ಲಿ ಬಂದ ಹಿಡಿ ಪಾವು ಲಾಭದಲ್ಲಿ ಹೆಂಡತಿಯ ಕೊರಳು ಖಾಲಿ ಖಾಲಿ ಕಾಣುವುದನ್ನು ಕಂಡು ಲಕ್ಷ್ಮಣ ಆಚಾರಿ ಹತ್ರ ಸಿಂಪಲ್ಲಾದ ಚಿನ್ನದ ಚೈನು ಮಾಡಿಸಬೇಕು ಎಂದುಕೊಂಡಿದ್ದ ತನ್ನ ಯೋಜನೆಯನ್ನೇ ಮುಂದೂಡಿ ಹೊಸದಾಗಿ ಬಂದ ಸ್ಪಿಂಕ್ಲರ್ ಹಾಕಿಸಿದರೆ ಕಡೇ ಪಕ್ಷ ಬೇಸಿಗೆಯಲ್ಲಿ ನೀರು ಸರಿಯಾಗಿ ಗಿಡಗಳಿಗೆ ಸಿಗುತ್ತದೆ ಎನ್ನುವಂತಹ ಅಭಿವೃದ್ಧಿ ಯೋಜನೆಗಳಿದ್ದವು. ಇದೆಲ್ಲದರ ಜೊತೆಗೆ ಮನೆಯಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ ಸಾಗುತ್ತಿತ್ತು. ಮಗನ ಆಸೆ ಪೂರೈಸಲಿ ಎನ್ನುವ ಏಕೈಕ ಉದ್ದೇಶದಿಂದ ತನ್ನ ಹಣಕಾಸಿನ ಇತಿಮಿತಿಗೆ ದುಬಾರಿಯಾದ ಮಗನ ಇಷ್ಟದ ಕೋರ್ಸಿಗೆ ಸೇರಿಸಿದ್ದ ಆತ. ಅದಕ್ಕೆ ತೆಗೆದ ಸಾಲವನ್ನು ಮುಂದಿನ ಕೆಲವಾರು ವರ್ಷಗಳಲ್ಲಿ ತೀರಿಸಿಕೊಂಡರಾಯಿತು ಎನ್ನುವ ದೂರಾಲೋಚನೆ ಆತನದ್ದು. ಇದೆಲ್ಲದರ ಮಧ್ಯೆ ಬೆಳೆದ ಮಗಳಿಗೆ ಮದುವೆ ಮಾಡಿರುತ್ತಾನೆ. ತೋಟವನ್ನು ಸಲಹುತ್ತಾ, ಸಂಬಂಧಿಗಳಿಗೆ ಬೇಜಾರಾಗಬಾರದು, ಸಂಬಂಧಗಳು ಉಳಿಯಬೇಕು ಎನ್ನುವ ಕಾಳಜಿಯಿಂದ  ಎಪ್ರೀಲ್ ಮೇಯ ಮದುವೆ ಸೀಜನ್ನಿನಲ್ಲಿ ಒಂದೇ ದಿನ ಮೂರು ಮೂರು ಮದುವೆ ಅಟೆಂಡು ಮಾಡುತ್ತಾ, ಮತ್ತೊಂದಕ್ಕೆ ಹೆಂಡತಿಯನ್ನು ಕಳಿಸಿ ಅಬ್ಬಾ ಅಂತೂ ಈ ವರ್ಷದ ಮದುವೆ ಕೋಟಾ ಮುಗಿಯಿತು ಎಂದು ಉಸಿರೆಳೆದುಕೊಂಡಿರುತ್ತಾನೆ.


"ನಿಮಗೇನು ಬಿಡೋ ಮಾರಾಯ. ಅಡಿಕೆ ತೋಟ ಇದೆ. ಮರದಲ್ಲಿ ಅಡಿಕೆ ಬೆಳೆಯುತ್ತದೆ. ಇಳಿಸಿ ಮಾರಿದರಾಯ್ತು. ಜೀವನ ಆರಾಮು" ಎನ್ನುವ ಉಡಾಫೆಯ ಮಾತುಗಳೇ ಸಂಬಂಧಿಕರದ್ದು. ಅವರಿಗಂತೂ "ತೋಟ ಮಾಡಿಕೊಂಡು ಇವನೊಬ್ಬ ಆರಾಮವಾಗಿ ದಿನದೂಡುತ್ತಿದ್ದಾನೆ. ನಮ್ಮಂತೆ ನಗರದಲ್ಲಿ ಒದ್ದಾಡುತ್ತಿಲ್ಲವಲ್ಲ" ಎನ್ನುವ ಭ್ರಮೆ. ಇನ್ನು ಊರಲ್ಲಿರುವ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಕಂಡು "ನಮಗೆ ಊರಲ್ಲಿ ಉಂಟು" ಎಂದು ನಗರದಲ್ಲಿ ತಮ್ಮ ಪ್ರೆಸ್ಟೀಜು ಹೆಚ್ಚಿಸಲು ಮಾತಾಡುವವರಿಗೇನು ಕಮ್ಮಿ ಇಲ್ಲ. ಇವರ್ಯಾರಿಗೂ ಅಡಿಕೆ ತೋಟವನ್ನು ಸಂಭಾಳಿಸುವುದು ಮೊದಲಿನಷ್ಟು ಸುಲಭವಲ್ಲ ಎನ್ನುವುದು ಗೊತ್ತಾಗುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಇವರಿಗೆಲ್ಲಾ ವರ್ಷಕ್ಕೊಮ್ಮೆ ಊರಿಗೆ ಬರುವಾಗ ಅಡಿಕೆ ತೋಟ ಅಡ್ಡಾಡಲು ಪಾರ್ಕಿನಂತೆ ಕಾಣುತ್ತದೆಯೇ ಹೊರತು ತೋಟದ ಜ್ವಲಂತ ಸಮಸ್ಯೆಗಳು ಬೇಕಿಲ್ಲ. ನಿಭಾಯಿಸುವವ ಅದನ್ನು ಹೇಳಲು ಹೊರಟರೂ ಅವರಿಗೆ ಕೇಳಲು ಆಸಕ್ತಿ ಇಲ್ಲ. ಇದೆಲ್ಲ ಸಾವಿರದೊಂಬೈನೂರ ಐವತ್ತನಾಲ್ಕನೇ ಇಸವಿಯ ಬ್ಲ್ಯಾಕ್ ಅಂಡ್ ವೈಟ್ ಸಿನಿಮಾದ ಅವ್ಯಾಹತ ಗೋಳಿನ ದೃಶ್ಯದಂತೆ ಕಾಣುವ ಮಟ್ಟಿಗಿನ ಸಿನಿಕತೆ ಅವರಲ್ಲಿ ತುಂಬಿ ತುಳುಕಾಡುತ್ತಿದೆ. ಅದನ್ನು ನಗರದ ವಾತಾವರಣ ಹುಟ್ಟು ಹಾಕಿದೆ. 

ಬೆಳಿಗ್ಗೆ, ಮಧ್ಯಾಹ್ನ, ಸಂಜೆ ತೋಟ ತೋಟ ಎಂದು ಓಡಾಡುತ್ತಿದ್ದಂತಹ ಜೀವಗಳಿಗಿವತ್ತು ವಯಸ್ಸಾಗಿದೆ. ಅಡಿಕೆ ರೇಟು ಪಾತಾಳದಲ್ಲಿ ನೇತಾಡಲು ಶುರು ಮಾಡಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಮಗ ಬೆಂಗ್ಳೂರು, ಮಂಗ್ಳೂರು ಸೇರಿಕೊಂಡು ಕೆಲಸ ಮಾಡಲು ಶುರು ಮಾಡಿ ಒಂದೆರಡು ವರ್ಷವಾಗಿದೆ. ಅವನಿಗೆ ತೋಟದಲ್ಲಿ ದೊಡ್ಡ ಮಟ್ಟಿನ ಇಂಟರೆಸ್ಟ್ ಇಲ್ಲ. ಹಾಕಿದ ಕಾಸೇ ಹುಟ್ಟದಿರುವ ಸನ್ನಿವೇಶವಿರುವಾಗ ಅಪ್ಪನೂ ಮಗನಿಗೆ ಒತ್ತಾಯ ಮಾಡುತ್ತಿಲ್ಲ. ಕೆಲಸಕ್ಕೆ ಜನ ಮೊದಲಿನಂತೆ ಸಿಗುತ್ತಿಲ್ಲ ಎನ್ನುವುದೇ ದೊಡ್ಡ ತಲೆನೋವು. ತಾನೇ ಕೆಲಸ ಮಾಡುವ ಎಂದರೆ ವಯಸ್ಸು ಕೇಳುತ್ತಿಲ್ಲ. ಯಾರಿಗೆ ಬೇಕು ಅಡಿಕೆ ಕೃಷಿ ಎನ್ನುವಂತಾಗಿದೆ. ಮೊದಲಿನಂತೆ ಈಗಿನ ಕೆಲಸಗಾರರು ಇಲ್ಲ. ಮಂಗ್ಳೂರು ಬೆಂಗ್ಳೂರು ಟ್ರೈನು ಶುರುವಾದ ಮೇಲೆ ಊರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಹುಡುಗರು, ಬೆಂಗ್ಳೂರಲ್ಲಿ ಮೇಸ್ತ್ರಿ ಕೆಲಸಕ್ಕೆ ಹೆಲ್ಪರ್ಗಳಾಗಿ ಸೇರಿಕೊಳ್ಳುವ ಸಂಖ್ಯೆ ಜಾಸ್ತಿಯಾಗಿದೆ. ಅವರಿಗೆ ಶೀಘ್ರವಾಗಿ "ನಗರದಲ್ಲಿ ಮೇಸ್ತ್ರಿ"ಗಳಾಗುವ ಹಂಬಲ. ಮತ್ತೆ ಕೆಲವರು ನಗರದಲ್ಲಿ ಒದ್ದಾಡಿ ಕೆಲಸ ಹುಡುಕಿಕೊಂಡಿದ್ದಾರೆ. ಊರಲ್ಲಿ ತೋಟದ ಕೆಲಸಕ್ಕೆ ಹೋದರೆ ಜೀವನ ಪರ್ಯಂತ ತಮ್ಮ ಅಪ್ಪ-ಅಮ್ಮಂದಿರಂತೆ ಹೊಟ್ಟೆಗಷ್ಟೇ ಮಾತ್ರ ದುಡಿಯುವ ಪರಿಸ್ಥಿತಿ ಮುಂದುವರಿಯುವುದು ಅವರಿಗೆಲ್ಲಾ ಬೇಕಾಗಿಲ್ಲ. ಬೆಂಗ್ಳೂರಲ್ಲಿ ತಿಂಗಳುಗಟ್ಟಲೆ ದುಡಿದರೆ ಉಳಿಸಬಹುದು ಎನ್ನುವ ಯೋಚನೆಯಿಂದ ಟ್ರೈನು ಹತ್ತುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ನಗರದಲ್ಲಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಗ್ರೇಡಿಂಗ್ ಸಿಸ್ಟಂ ಊರಿಗೆ ಬಂದಾಗಲೆಲ್ಲಾ ಚಲಾವಣೆಯಾಗುತ್ತದೆ ಎನ್ನುವ ತೀರ್ಮಾನಗಳಿವೆ
. "ಇಲ್ಲಿಗಿಂತ ಕಾಲು ವಾಶಿ ಜಾಸ್ತಿ ದುಡಿದರೂ, ಬೆಂಗ್ಳೂರಲ್ಲಿ ಕೈಯಲ್ಲಿ ದುಡ್ಡು ಉಳೀಲಿಕ್ಕೆ ಉಂಟಾ. ಇವರಿಗೆಲ್ಲ ಮರ್ಲ್(ಹುಚ್ಚು)" ಎಂದು ಊರ ಹಿರಿಯರು ಗೊಣಗುತ್ತಿರುತ್ತಾರೆ. ಇವರಲ್ಲಿ ಯಾರು ಸರಿ, ಯಾರು ತಪ್ಪು ಎಂದು ಜಡ್ಜ್ಮೆಂಟು ಪಾಸು ಮಾಡುವುದರಲ್ಲಿ ಹೆಚ್ಚಿನವರಿಗೆ ಆಸಕ್ತಿಯೇ ಉಳಿದಿಲ್ಲ. "ಎಲ್ಲಾ ನಮ್ಮ ಕರ್ಮ" ಎಂದು ಗೊಣಗುತ್ತಾರಷ್ಟೇ.

ಇನ್ನು ಖಾಯಮ್ಮಾಗಿ ಅಡಿಕೆ ಸುಲಿಯಲು ಬರುತ್ತಿದ್ದವರೂ ಸಹ ಕಳೆದ ವರ್ಷದಿಂದ ನಿಯಮಿತವಾಗಿ ಕೈ ಕೊಡಲು ಪ್ರಾರಂಭಿಸಿದ್ದಾರೆ. ಬಂಟ್ವಾಳ ತಾಲೂಕಿನ ರಾಯಿಯ ಅಡಿಕೆ ಸುಲಿಯುವ ಹುಡುಗರು ದೂರದ ಸುಬ್ರಮಣ್ಯಕ್ಕೆ ಹೋಗಿ ಒಂದೆರಡು ವಾರ ನಿಂತು ಅಡಿಕೆ ಸುಲಿದು ಕೊಟ್ಟು ಬಂದಿದ್ದಾರೆ. ಹಾಗೆ ಹೋಗಿದ್ದರಿಂದ ಊರಲ್ಲಿ ಅವರು ಖಾಯಮ್ಮಾಗಿ ಅಡಿಕೆ ಸುಲಿಯುತ್ತಿದ್ದ ಮನೆಗಳ ಅಡಿಕೆ ಸುಲಿಯುವವರಿಲ್ಲದೇ ಬಾಕಿಯಾಗಿದೆ. ಕೆಲಸಗಾರರಿಗೆ ಯಾವ ಪರಿ ತತ್ವಾರವೆಂದರೆ ಕೆಲವರಂತೂ ಕಳೆದ ವರ್ಷ ಅಡಿಕೆ ಸುಲಿಯಲು ಜನ ಸಿಕ್ಕದೇ ಆ ಅಡಿಕೆಯನ್ನು ಈ ವರ್ಷ ಸುಲಿಯಲು ಜನರನ್ನು ಹೊಂದಿಸಿಕೊಳ್ಳುವಷ್ಟರಲ್ಲೇ ಸುಸ್ತಾಗಿದ್ದಾರೆ. ದೂರದ ಸುಬ್ರಮಣ್ಯಕ್ಕೆ ರಾಯಿಯಿಂದ ಅಡಿಕೆ ಸುಲಿಯಲು ಜನ ಹೋಗಲು ಕಾರಣ ಸಹ ಕೆಲಸಗಾರರ ಕೊರತೆಯೇ. ಅಡಿಕೆ ಸುಲಿಯಲು, ಅಡಿಕೆ ತೆಗೆಯಲು ಗೊತ್ತಿರುವುದು ಸಹ ತುಂಬಾ ಕಡಿಮೆ ಮಂದಿಗೇನೇ. ಅವರೆಲ್ಲಾ ಹೆಚ್ಚು ಕಡಿಮೆ ಹತ್ತು ವರ್ಷದಿಂದ ಅದೇ ಕೆಲಸ ಮಾಡಿಕೊಂಡು ಬಂದಿದ್ದಾರೆ. 


ಅವರನ್ನು ಬಿಟ್ಟರೆ ಯುವಕರಲ್ಲಿ ಬಹುತೇಕರು ಈ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಅಡಿಕೆ ಸಂಬಂಧಿ ವೃತ್ತಿಗಿಂತ ಕಡಿಮೆ ದೈಹಿಕ ಶ್ರಮ ಹಾಗೂ ಹೆಚ್ಚು ಆಕರ್ಷಕವಾದ ಸ್ವಲ್ಪ ಅಧಿಕ ಸಂಬಳವನ್ನು ಕೊಡುವ ಕೆಲಸಗಳು ಹಲವಾರು ಕಣ್ಣೆದುರಿಗಿವೆ. ಜೊತೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಮಣ್ಣಿನಲ್ಲಿ, ಬಿಸಿಲಿನಲ್ಲಿ, ಕೆಸರಿನಲ್ಲಿ ಕೆಲಸ ಮಾಡುವ ಜರೂರತ್ತಿಲ್ಲ. ಟಿಪ್ಟಾಪಾಗಿ ಡ್ರೆಸ್ ಮಾಡಿಕೊಂಡು ಬಸ್ ಹತ್ತಿದರಾಯಿತು. ಹೇಗೆ ಅಡಿಕೆ ಕೃಷಿಕರು ತಮ್ಮ ಮಕ್ಕಳಿಗೆ ತೋಟದ ಉಸಾಬರಿ ಬೇಡ, ಚೆನ್ನಾಗಿ ಓದಿ ಕೆಲಸ ಹಿಡಿಯಲಿ ಎಂದು ಆಶಿಸುತ್ತಿದ್ದಾರೋ ಅದೇ ರೀತಿಯ ಆಸೆ ಕೆಲಸಗಾರರ ಕುಟುಂಬಗಳಲ್ಲೂ ಹೆಚ್ಚಾಗಿ ಕಾಣುತ್ತಿದೆ. ಜಾಗತೀಕರಣದಿಂದಾಗಿ ಮೊಬೈಲ್ ಮೂಲಕ ಹಳ್ಳಿಗಳಲ್ಲೂ ಸಾಧ್ಯವಾದ ಸಂಪರ್ಕ ಕ್ರಾಂತಿ, ಎರಡು ಸಾವಿರದ ಆಸುಪಾಸಿನಲ್ಲಿ ಸಿಗುವ ಡಿಟಿಹೆಚ್, ಕಡಿಮೆ ದರದಲ್ಲಿ ಕೈಗಟಕುವ ಎಲೆಕ್ಟ್ರಾನಿಕ್ ಉಪಕರಣಗಳು, ಡಿಸ್ಕೌಂಟಿನಲ್ಲಿ ಸಿಗುವ ಥರವೇಹಾರಿ ಬಟ್ಟೆಗಳು ಇತ್ಯಾದಿಗಳು ಸೇರಿ ಕೆಲಸಗಾರ ಕುಟುಂಬಗಳಿಗೆ ಮೊದಲಿಗಿಂತ ನೆಮ್ಮದಿಯ ನಿಟ್ಟುಸಿರು ಬಿಡಲು ಸಹಕರಿಸಿವೆ. ಇದೆಲ್ಲದರಿಂದಾಗಿ ಅಡಿಕೆ ಸುಲಿಯುವ, ತೋಟದ ಕೆಲಸಗಾರನಿಗೆ ಮಗ ತನಗಿಂತ ಅರೆಪಾವು ನೆಮ್ಮದಿಯ ಕೆಲಸ ಮಾಡಲಿ ಎನ್ನುವ ಆಸೆ ಇರುತ್ತದೆ. ಹಾಗಿದ್ದಾಗ ಮಗ ಗ್ಯಾರೇಜಿನಲ್ಲಿ ಕೆಲಸಕ್ಕೆ ಹೋದರೂ ಮುಪ್ಪಾದ ಅಪ್ಪನಿಗೆ ಸಂತೋಷವೇ. ಫ್ಯಾಶನೆಬಲ್   ಆಗಿ, ಕಂಫರ್ಟ್ ಜೋನ್ ನಲ್ಲಿ ಬದುಕುವುದು ಒಂದು ಕಾಲದಲ್ಲಿ ಮೇಲ್ವರ್ಗಕ್ಕೆ ಮಾತ್ರ ಸೀಮೀತವಾಗಿತ್ತು. ನಂತರ ಮಧ್ಯಮ ವರ್ಗಕ್ಕೆ ಬಂತು. ಇತ್ತೀಚೆಗಂತೂ ಅದು ದಕ್ಷಿಣ ಕನ್ನಡದ ಕೆಳ ಮಧ್ಯಮ ಹಾಗೂ ದುಡಿಯುವ ವರ್ಗದಲ್ಲಿ ಢಾಳಾಗಿ ಕಾಣಿಸುತ್ತಿದೆ.

ತೋಟದ ಕೆಲಸಕ್ಕೆ ಜನರನ್ನು ಒಟ್ಟು ಮಾಡುವುದಂತೂ ಕನಸಿನ ಮಾತೇ. ಹಟ್ಟಿಯ ಗೊಬ್ಬರ ಹೊರುವ ಕೆಲಸ ಅಂದ್ರೆ ಸಾಕು ಕೆಲಸಕ್ಕೆ ಬರುವವರೂ ದಿಢೀರ್ ಕಣ್ಮರೆಯಾಗುತ್ತಾರೆ. ಒಂದು ವೇಳೆ ನಿಮ್ಮ ಮನೆಗೆ ಖಾಯಮ್ಮಾಗಿ ಕೆಲಸಕ್ಕೆ ಬರುವವರು ತಪ್ಪಿಸಿಕೊಳ್ಳುತ್ತಿದ್ದಾರೆ ಅಂತ ಗೊತ್ತಾಗಿ ಮೆತ್ತಗೆ ಅಸಮಾಧಾನ ಹೊರಹಾಕಿದಿರೋ ನಿಮ್ಮ ಕತೆ ಮುಗಿದಂತೆಯೇ. ಅವರೆಲ್ಲಾ ಶಾಶ್ವತವಾಗಿ ನಿಮ್ಮ ತೋಟದ ಕಡೆ ಮುಖವೇ ಹಾಕುವುದಿಲ್ಲ. ಅವರಿಗಂತೂ ಕೆಲಸಕ್ಕೆ ಕರಿಯುವವರ ಕ್ಯೂ ಇದೆ. ಅಲ್ಲಿಗೆ ನಿಮ್ಮ ತೋಟದ ಕೆಲಸ ಪಡ್ಚಾ. ನೀವೂ ಪಡ್ಚಾ. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಅಡಿಕೆ ತೋಟ ಹೊಂದಿರುವವರು ಕೆಲಸಗಾರರ ಜೊತೆ ವ್ಯವಹರಿಸುವಾಗ, ಮಾತನಾಡುವಾಗ ಅಗತ್ಯಕ್ಕಿಂತ ಹೆಚ್ಚು ಜಾಗರೂಕತೆಯಿಂದ ವರ್ತಿಸುತ್ತಿದ್ದಾರೆ.

ಮಾತಿನಲ್ಲಿ ಕೃತಿಯಲ್ಲಿ ಯಡವಟ್ಟಾದರೆ ಸದ್ಯದ ಪರಿಸ್ಥಿತಿಯಲ್ಲಿ ದಕ್ಷಿಣ ಕನ್ನಡದ ಯಾವ ದೇವರೂ, ದೈವವೂ ಕಾಪಾಡುವುದಿಲ್ಲ. ಈಗಿರುವ ಕೆಲಸಗಾರರ ಕೊರತೆ, ಅವರಿಗಾಗಿ ಕಾದುಕುಳಿತುಕೊಳ್ಳುವ ಉಸಾಬರಿ ತಪ್ಪಿಸಲು ಪಡ್ರೆ ಸಮೀಪದ ಸಮಾನ ಪಂಗಡದ ಅದೇ ಊರಿನ ಕೆಲವು ಅಡಿಕೆ ತೋಟದವರು ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಸ್ವಸಹಾಯ ಗುಂಪುಗಳಂತೆ ಪಡ್ರೆಯ ಈ ಗುಂಪು ಕೆಲಸ ಮಾಡುತ್ತದೆ. ವಾರದಲ್ಲಿ ಒಂದೋ ಎರಡೋ ದಿನ ಆ ಗುಂಪಿನಲ್ಲಿರುವವರ ಮನೆಯಲ್ಲಿ ಕೆಲಸ ಮಾಡುವುದು. ಆ ಗುಂಪಿನಲ್ಲಿರುವ ಯಾರೇ ಕರೆದರೂ ಅವರಲ್ಲಿ ತೋಟದ ಕೆಲಸಕ್ಕೆ ಹೋಗಬೇಕು. ಅವರವರೇ ಗೊಬ್ಬರ ಹೊರುವುದರಿಂದ ಹಿಡಿದು ಅಡಿಕೆ ಕೊಯ್ಯುವವರೆಗೆ ಕೆಲಸ ಮಾಡುತ್ತಾರೆ. ಅಡಿಕೆ ಸುಲಿಯುತ್ತಾರೆ, ಮಳೆ ಸೂಚನೆ ಸಿಕ್ಕರೆ ಸಾಕು ಅಡಿಕೆ ರಾಶಿ ಮಾಡಲು ಓಡಿಬರುತ್ತಾರೆ. ಅಲ್ಲಿ ಮಾಡಿದ ಕೆಲಸಕ್ಕೆ ಸಂಬಳ ಇಲ್ಲ. ಆವತ್ತು ಕೆಲಸ ಮಾಡಿದ್ದಕ್ಕೆ ಅಲ್ಲೊಂದು ಗಡದ್ದು ಹಬ್ಬದ ಊಟ. ಹೀಗೆ ನಮ್ಮ ನಮ್ಮ ತೋಟದ ಕೆಲಸಗಳನ್ನು ನಾವೇ ಮಾಡಿದರೆ ಮಾತ್ರ ಊಟಕ್ಕುಂಟಷ್ಟೇ ಎನ್ನುವಲ್ಲಿಗೆ ಸಮಸ್ಯೆ ಬಂದು ನಿಂತಿದೆ.

ಕೆಲಸದವರನ್ನು ನಂಬಿಕೊಂಡು ಕೃಷಿ ಮಾಡುತ್ತೇವೆ ಎನ್ನುವ ಆತ್ಮವಿಶ್ವಾಸಕ್ಕೆ ಬೆಂಕಿ ಬಿದ್ದು ಕಾಲವಾಗಿದೆ. ಈಗಿರುವುದಂತೂ ಆದೇ ಆತ್ಮವಿಶ್ವಾಸದ ಬೂದಿ. ಅದನ್ನು ತೋಟದ ಮಾಲೀಕರೇ ಅಡಿಕೆ ಮರದ ಬುಡಕ್ಕೆ ಹಾಕಿದರೆ ಸ್ವಲ್ಪ ಹೆಚ್ಚು ದಿನ ಅಡಿಕೆ ಮರ ಬದುಕಬಹುದು. ಆದರೆ ಅದಕ್ಕೆ ತಕ್ಕ ಫಲ ನೀಡುತ್ತದೆ ಎನ್ನುವ ಗ್ಯಾರೆಂಟಿ ಇಲ್ಲ! ಅಡಿಕೆ ಕೃಷಿ ನಮ್ಮ ಕಾಲಕ್ಕಾಯಿತು ಎಂದು ಹಿರಿಯರು ಸ್ವಗತದಲ್ಲಿ ಮಾತಾಡಲು ಶುರುಮಾಡಿ ವರ್ಷಗಳೇ ಕಳೆದಿವೆ. ಆದರೂ ಆ ಹಿರಿ ಜೀವಗಳು ಪ್ರತೀ ವರ್ಷದ ಬಜೆಟ್ ನೋಡುವುದನ್ನು ಬಿಟ್ಟಿಲ್ಲ. ಅಲ್ಲೇನಾದರೂ ಪರ್ಯಾಯ ಕೃಷಿಗೆ ಉಪಯುಕ್ತವಾಗುವಂತಹ ಸವಲತ್ತುಗಳಿವೆಯಾ ಎಂದು ತಡಕಾಡುತ್ತಾ "ಎಂತ ಕರ್ಮ. ಎಲ್ಲಾ ಪಕ್ಷಗಳೂ ಒಂದೇ. ಎಲ್ಲರದ್ದೂ ಕಣ್ಣೊರೆಸುವ ತಂತ್ರ" ಎನ್ನುತ್ತಾ ಉಸಿರೆಳೆದುಕೊಳ್ಳುತ್ತಾರೆ.

ಗೋಪಾಲಕೃಷ್ಣ ಕುಂಟಿನಿ ಅವರ "ದೀಪದ ಕೆಳಗೆ ಕತ್ತಲು" ಎನ್ನುವ ಕತೆಯಲ್ಲಿ ಸಂಕಪ್ಪಯ್ಯ ಎನ್ನುವ ಪಾತ್ರವೊಂದು ಬರುತ್ತದೆ. ಸಂಕಪ್ಪಯ್ಯ ಕಷ್ಟಪಟ್ಟು ಮಾಡಿದ ತೋಟ ಹೊಸದಾಗಿ ನಿರ್ಮಿಸಲ್ಪಡುವ
ಅಣೆಕಟ್ಟಿನಿಂದಾಗಿ ಮುಳುಗುವ ಹಂತಕ್ಕೆ ಬಂದಿರುತ್ತದೆ. ಅದ್ದರಿಂದ ಊರು ಬಿಡುವ ಮೊದಲು ಸಂಕಪ್ಪಯ್ಯನ ಮಗ ತೋಟದ ಅಡಿಕೆ ಮರಗಳನ್ನು ಕಡಿಯಲು ಫೀಟಿಗೆ ಇಂತಿಷ್ಟು ಎಂದು ಕಂಟ್ರ್ಯಾಕ್ಟು ಕೊಡುತ್ತಾನೆ. ಇದನ್ನೆಲ್ಲಾ ಈಜಿ ಚೇರಿನ ಮೇಲೆ ಕುಳಿತು ವೃದ್ಧ ಸಂಕಪ್ಪಯ್ಯ ಕೇಳಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಈಗಾಗಲೇ ಕೆಲವು ಕಡೆ ಅಡಿಕೆ ಮರ ಕಡಿದು ರಬ್ಬರು ಹಾಕುತ್ತಿದ್ದಾರೆ. 

ಸಂಕಪ್ಪಯ್ಯನಂತಹ ವೃದ್ಧರು ದಕ್ಷಿಣ ಕನ್ನಡದಲ್ಲಿ ಸಾವಿರಾರು ಮಂದಿ ಈಜಿ ಚೇರಿನಲ್ಲಿ ಒಂಟಿಯಾಗಿ ಕುಳಿತಿದ್ದಾರೆ. ಅವರ ಕಣ್ಣ ಮುಂದೆ ಅವರೇ ಬೆಳೆಸಿದ ತೋಟ ಮೌನದಿಂದಿದೆ.



ಚಿತ್ರ ಕೃಪೆ: ಮಹೇಶ್ ಪಿ ಕುಂಬ್ಳೆ 

 

ಬುಧವಾರ, ಮಾರ್ಚ್ 24, 2010

ನಗರದ ನಿಟ್ಟುಸಿರುಗಳ ನಡುವೆ ಒಂದು ಸಂಜೆ

ಅದೆಷ್ಟು ದಿನಗಳಾಯಿತೋ ಬಾಲ್ಕನಿಯಲ್ಲಿ ನಿಂತು ಚಂದ್ರನನ್ನು ನೋಡಿ...
ಮನೆಯ ಕಿಟಕಿಯೊಳಗಿನಿಂದ ಚಂದ್ರನ ಬೆಳಕು, ಸರಳುಗಳ ನೆರಳು ನೆಲದಲ್ಲಿ ಬೆಳಕಿನ ರಂಗೋಲಿ ಬಿಡಿಸಿದ್ದನ್ನು ನೋಡುತ್ತಾ ಮೈ ಮರೆತು ನಿದ್ದೆ ಹೋಗಿ. ರಾತ್ರಿ ನೈಟು ಶಿಫ್ಟು ಮಾಡಿ ಆಫೀಸಿನ ಕ್ಯಾಬುಗಳನ್ನು ಏರುವವರಿಗೆ ಹುಣ್ಣಿಮೆಯಿದ್ದರೂ, ಅಮಾವಾಸ್ಯೆ ಇದ್ದರೂ ತಲೆಕೆಡಿಸಿಕೊಳ್ಳುವ ಉಮೇದಿಲ್ಲ. ನಿದ್ದೆ ಕಣ್ಣಲ್ಲಿ ಕರಗುವುದಷ್ಟೇ ಗೊತ್ತು. ಕ್ಯಾಬಿನ ಕಿಟಕಿಯಿಂದ ಹೊರಕ್ಕೆ ಇಣುಕಿ ನೋಡುತ್ತಾ ಕುಳಿತುಕೊಳ್ಳುವುದರಲ್ಲಿ ಹೆಚ್ಚು ಆಸ್ಥೆಯಿಲ್ಲ. ಪ್ರತೀ ನೂರು ಮೀಟರಿಗೆ ಒಂದಕ್ಕೊಂದು ಅಪ್ಪಿಕೊಂಡಂತೆ ಇರುವ ನಿಯಾನು ದೀಪ, ಟ್ಯೂಬ್ಲೈಟುಗಳ ಮಧ್ಯೆ ನಗರದಲ್ಲಿರುವ ಚಂದ್ರ ಡೆಡ್ ಇನ್ವೆಸ್ಟ್ಮೆಂಟ್. ಅನಗತ್ಯ ಎನರ್ಜಿ
ವೇಸ್ಟು....ಸುಮ್ಮನೆ ಮಧ್ಯಾಹ್ನಗಳಲ್ಲಿ ಕಾರ್ಪೋರೇಷನ್ನಿನ ಆಫ್ ಮಾಡದ ಲೈಟುಗಳಂತೆ ಬೆಳಗುತ್ತಿರುವವ ಎನ್ನುವ ಭಾವನೆಯೇ ಆತನ ಬಗ್ಗೆ....

ಸದ್ಯಕ್ಕೆ ನಮಗೆಲ್ಲಾ ಚಂದ್ರನಿಲ್ಲದ ರಾತ್ರಿ, ನಿರ್ಜನ, ಏಕಾಂತ ಪ್ರದೇಶಗಳಲ್ಲಿ ಹುಟ್ಟುವ ಚಡಪಡಿಕೆ, ಕಾತರವನ್ನು ನಗರ ಉಳಿಸುವುದೇ ಇಲ್ಲ. ಅಷ್ಟರಮಟ್ಟಿಗೆ ಚಂದ್ರ ನಗರಗಳಲ್ಲಿ ಅಪ್ರಸ್ತುತ. ಆತನ ಗೈರು ಹಾಜರಿಯೂ ನಮಗೆಲ್ಲಾ ಒಪ್ಪಿತವಾಗುವ ವಿಷಯವೇ.

ನಮ್ಮ ನಗರದ ಅಪಾರ್ಟ್ಮೆಂಟಿನ
ಬಾಲ್ಕನಿ, ಮನೆಯ ಮಹಡಿಗಳಿಂದ ಕಾಣಲು ಹೊರಡುವ ಚಂದ್ರನಿಗೆ ಬೆಳಕಿನ ಸರಪಳಿ. ಯಾಕೆಂದರೆ ಉದ್ದುದ್ದ ಮಲಗಿದ ರಸ್ತೆಯಂತೆ ಬದುಕು ನೆರಳುಗಳಿಲ್ಲದ ಅಸ್ಥಿಪಂಜರ. ನಿತ್ಯದ ಸುಸ್ಥಿತಿಗೆ ನಮಗೆಲ್ಲಾ ಬೆಳಗಿನ ಸೂರ್ಯೋದಯ ಬೇಕು. ಟ್ರಾಫಿಕ್ಕು ಜಾಮು ಬೇಕು. ಜೊತೆಗೆ ಉಪಹಾರ ದರ್ಶಿನಿಯ ಬೈಟೂ ಕಾಫಿ. ಅಭ್ಯಾಸವಿದ್ದರೆ ಸೇದಲು ಚೋಟುದ್ದದ ಸಿಗರೇಟು. ಏಕಾಂತದ ರಾತ್ರಿ, ನಿಶ್ಯಬ್ದವಾಗಿರುವ ಸಂಜೆ, ರಾತ್ರಿ ಯಾರಿಗೂ ಬೇಡ. ಬೆಳಕಿಗೆ ಇರುವ ಅಗಾಧ ಮಾರ್ಕೆಟ್ಟು ಕತ್ತೆಲೆಗಿಲ್ಲ. ಬೆಳಕು ಇವತ್ತು ಬೆರಗಲ್ಲವೋ ಅಣ್ಣಾ...ಅದು ಕೇವಲ ಬೆಸ್ಕಾಂನ ಮಧ್ಯೆ ಮಧ್ಯೆ ಬಂದು ಹೋಗುವ ಲೋಡ್ಶೆಡ್ಡಿಂಗು, ಪವರ್ಕಟ್ಟು.

ರಾತ್ರಿಯಾಯಿತೆಂದರೆ ಸಾಕು ಜಗತ್ತಿಗೆ ನಿದ್ದೆಯ ನಾಟಕ. ಹೇಳಿಕೊಳ್ಳಲು ಆಯಾಸದ ಸಬೂಬು. ಚಳಿಗೆ ನಡೆಯುತ್ತಾ, ಒಂಟಿಯಾಗಿ ರಾತ್ರಿಗಳಲ್ಲಿ ಸುಮ್ಮನೆ ಕೂತುಕೊಳ್ಳಿ ಅಂತ ನೀವು ಹೇಳಿದರೆ ಹೇಗೆ ಸ್ವಾಮಿ ಎಂದು ದಬಾಯಿಸಲು ಸಾವಿರ ನಾಲಿಗೆಗಳಿವೆ. ನಮ್ಮದೇನಿದ್ದರೂ ಗಂಟೆಗೆ 24 ಡಾಲರು ದುಡಿಯುವವರ ದಂಡು. ತಪ್ಪದೇ ರಾತ್ರೆ ಇಡೀ ಕಂಪ್ಯೂಟರ್ ಮುಂದೆ ಸೈನ್ ಇನ್ ಆಗಿದ್ದರೆ ಮಾತ್ರ ಕೆಲಸ, ಆಕರ್ಷಕ ಸಂಬಳ ಉಳಿಯುತ್ತದೆ. ಅಷ್ಟರಮಟ್ಟಿಗೆ ರಾತ್ರಿ, ಕೊನೇ ಕ್ಷಣದ ಆಕ್ಸಿಜನ್ ಇದ್ದಂತೆ ಇವತ್ತಿನ ಆಧುನಿಕ ಜಗತ್ತಿಗೆ. ರಾತ್ರಿಯ ತಂಪು, ತಂಗಾಳಿ ಎನ್ನುವುದೆಲ್ಲಾ ಕವಿಗಳ ಗಿಮಿಕ್ಕು ಎನ್ನುವ ಅಸಡ್ಡೆ. ನಗರದ ರಾತ್ರಿಗಳಲ್ಲಿ ಹೆಚ್ಚೆಂದರೆ ಜೀವಭಯ, ನಡುಕ......ಹೆಚ್ಚೆಂದರೆ ವೀಕೆಂಡುಗಳಲ್ಲಿ ಶಾಪಿಂಗು, ಔಟಿಂಗು ಹೋಗಿ ಹಿಂತಿರುಗುವಾಗ ಆಗುವ ಸ್ಟುಪಿಡ್ ಚಳಿ. ಅದಕ್ಕಾಗಿ ಮೆಗಾ ಮಾಲ್ಗಳಲ್ಲಿ ತೆಗೆದುಕೊಂಡ ಬ್ರ್ಯಾಂಡೆಡ್ ಜರ್ಕಿನ್ನು
, ಸ್ವೆಟರು ಹಾಕಿಕೊಳ್ಳುತ್ತಾ ಕಟ ಕಟ ಎಂದು ಹಲ್ಲು ಕಡಿಯುವುದು.... ಯಾರಿಗೆ ಬೇಕು ಸ್ವಾಮಿ ರಾತ್ರಿಯ ಉಸಾಬರಿ...ಸಿಗ್ನಲ್ನಲ್ಲಿ ನಿಂತಾಗ ಚಂದ್ರ ಇದ್ದಾನೋ ಇಲ್ಲವೋ ಎಂದು ಆಕಾಶದತ್ತ ತಲೆ ಹಾಕುವ ಉಸಾಬರಿ. ಸಿಗ್ನಲ್ಲಿನ ಕೆಂಪು ದೀಪ ಹಸಿರಿಗೆ ತಿರುಗಿದರೆ ಸಾಕು...ಮನೆ ತಲುಪಿ ಉಸ್ಸಪ್ಪಾ ಎಂದು ಹಾಸಿಗೆಗೆ ಒರಗಿದರೆ ಸಾಕು....ಇಷ್ಟೇ ಸಾಧ್ಯತೆಗಳಿರುವುದು ಬಹುಷಃ ನಗರದ ರಾತ್ರಿಗಳಿಗೆ.
******************

ಮೌನವಾಗಿರುವ ನಗರ ಯಾರಿಗೂ ಬೇಡ. ಅದಕ್ಕೇ ಮಧ್ಯರಾತ್ರಿ, ತಡರಾತ್ರಿಯವರೆಗೂ ಮೆಸೇಜು ಬಂದು ಬೀಳುತ್ತದೆ ಇನ್ಬಾಕ್ಸಿಗೆ. ಮಾತನಾಡದೇ ಮೌನವಾಗಿರುವಾಗ ದುಡ್ಡು ಹುಟ್ಟಿಸುವುದನ್ನು ಇನ್ನೂ ಅನ್ವೇಶಿಸಿಲ್ಲ ಅಷ್ಟೇ. ಆದ್ದರಿಂದ ನಗರದಲ್ಲಿ ಕೆಲಸ ಸಿಗದವರು, ಕೆಲಸ ಕಳಕೊಂಡವರು ಹೀಗೆ ತಾತ್ಕಾಲಿಕ ನಗರ ತಿರಸ್ಕೃತರು ಮಾತ್ರ ಮೌನಕ್ಕೆ ಒಗ್ಗುವ ಮಂದಿ. ಮೌನದಲ್ಲೇ ಸೋಲನ್ನು ಪರಾಮರ್ಶಿಸುವ
ಮಂದಿ....ಒಂದು ವೇಳೆ ಮಧ್ಯರಾತ್ರಿ ಆತ/ ಆಕೆ ಎಚ್ಚರವಿದ್ದಾರೆ ಎಂದಿಟ್ಟುಕೊಳ್ಳಿ. ಒಂದೋ ಆತ ಆಕೆಯೊಂದಿಗೆ ಮಾತನಾಡುತ್ತಿರುತ್ತಾನೆ. ಇಲ್ಲವೇ ಆಕೆ ಆತನೊಂದಿಗೆ ಮಾತನಾಡುತ್ತಿರುತ್ತಾಳೆ. ಅವರಿಬ್ಬರೂ ಮೌನವಾಗಿರುವುದು ಒಬ್ಬರಿಗೊಬ್ಬರು ಕೈಕೊಟ್ಟು ಗುಡ್ಬೈ ಹೇಳಿದಾಗ ಮಾತ್ರ. ಆ ರಾತ್ರಿಗಳಲ್ಲೂ ಚಂದ್ರನಿಗಿಂತ, ಮೌನಕ್ಕಿಂತ ಕಾಫಿ ಡೇಗಳು ಪ್ರತೀ ಭೇಟಿಗಳಲ್ಲಿ ಹುಟ್ಟಿಸಿದ ತೆಳು ಬೆಳಕಿನ ಕುಂಡಗಳು ಹೆಚ್ಚು ಆಪ್ಯಾಯಮಾನವಾಗಿದ್ದು ಕಾಣುತ್ತವೆ ಪರಸ್ಪರರಿಗೆ. ಇದು ನಗರದ ಭಾಷೆ.

ಸುಮ್ಮನೆ ಕೂತು ಆಕೆಯ ಬೆನ್ನಿಗೆ ಒರಗಿ ಕೈಯೊಳಗೆ ಕೈ ಬೆಸೆದು ಇಬ್ಬರೂ ಒಂದಕ್ಷರವೂ ಮಾತಾಡದೇ ಇದ್ದದ್ದು, ಹಾಸ್ಟೆಲ್ನಲ್ಲಿದ್ದಾಗ ಮಧ್ಯರಾತ್ರಿ ರೂಮು ಬಿಟ್ಟು ನಡೆಯುತ್ತಾ ಹಾಸ್ಟೆಲಿನ ಹಿಂದಿದ್ದ ಬಂಡೆ ಏರಿ ಕುಳಿತದ್ದು ಇವೆಲ್ಲಾ ಸಮಯವಿದ್ದರೆ ಸಂತೋಷವನ್ನಷ್ಟೇ ಕೊಡುತ್ತದೆ ಎನ್ನುವುದು ಗೊತ್ತಾಗಿಬಿಟ್ಟಿದೆ. ಹಿಂದೆಲ್ಲಾ ಹಾಗೆ ಸುಮ್ಮನೆ ನಡೆಯಲು ಹೊರಟಾಗ ಯಾವುದೇ ಅಪೇಕ್ಷೆಗಳಿರುತ್ತಿರಲಿಲ್ಲ. ಆದರೀಗ ಅಪೇಕ್ಷೆಗಳಿಲ್ಲದೆ ಬದುಕಲು ಸಾಧ್ಯವಾಗುತ್ತಿಲ್ಲ. ಅಪೇಕ್ಷೆಯೇ ಗೆಲುವಿನ ಮೆಟ್ಟಿಲು ಎನ್ನುತ್ತಾ ಬಡಬಡಿಸುತ್ತಾರೆ ಮ್ಯಾನೇಜ್ಮೆಂಟ್ ಗುರುಗಳು. ಅವರ ಪ್ರಕಾರ ಎಲ್ಲಾ ಕ್ರಿಯೆಗಳಿಗೂ ಒಂದು ನಿರ್ದಿಷ್ಟ
ಉತ್ತರವಿರಲೇಬೇಕು. ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಇರಬೇಕೆಂದೇನೂ ಇಲ್ಲ ಎಂದರೆ ಸಾಕು ಸನಾತನಿಗಳಾಗಿಬಿಡುತ್ತೇವೆ. ಬಳಸಿ ಬಿಸಾಡುವ "ಕಮಾಡಿಟಿ" ನಾವೇ ಆಗಿಬಿಡುತ್ತೇವೆ. ಆದ್ದರಿಂದ ಇಲ್ಲಿ ಮಾರ್ಕೆಟ್ ಇಲ್ಲದ ವಸ್ತುಗಳೆಲ್ಲಾ ಉಪಯೋಗಕ್ಕೆ ಬಾರದ ವಸ್ತುಗಳು.

ಸುಮ್ಮನೆ ಕುಳಿತುಕೊಳ್ಳುವುದು ಎನ್ನುವ ಶಬ್ದವೇ ಸದ್ಯಕ್ಕೆ ಕಾಯಕ ವಿರೋಧಿ. ಋಷಿಗಳು ನೂರಾರು ದಿನ ಕುಳಿತು ತಪಸ್ಸು ಮಾಡಿದರು ಎನ್ನುವುದು ನಮಗಿವತ್ತು ಕೇವಲ ಕತೆಯಲ್ಲ....ಅದೊಂದು ಹುಚ್ಚು ಕಲ್ಪನೆಯ ಪರಮಾವಧಿ. ಯಾಕೆಂದರೆ ಮೂರೂವರೆ ನಿಮಿಷದ ಸಿಗ್ನಲ್ಲು ದಾಟಿ ಈಚೆಗೆ ಬರುವಾಗ ಒಂದು ಯುಗವೇ ಕಳೆಯುವಂತಹ ವಾಸ್ತವವಿರುವಾಗ ಹೇಗೆ ನಂಬುವುದು ಹೇಳಿ...ಹೇಳಿ ಕೇಳಿ ನಾವು ವಾಸ್ತವದ ಶಿಶುಗಳು.....ಅದಕ್ಕಿರುವ ಹಲವು ಸಾಧ್ಯತೆಗಳು ಸಹ ಸುಮ್ಮನೆ ಕುಳಿತುಕೊಳ್ಳುವುದು ಎನ್ನುವ ವಿಚಾರವನ್ನು ಕೆಲಸ ಕದಿಯುವ ಪಟ್ಟಿಗೆ ಸೇರಿಸಿಬಿಟ್ಟಿದೆ. ನಗರದ ಮನೆಗಳಲ್ಲಿದ್ದಾಗ ರಾತ್ರಿ ಹನ್ನೊಂದರ ನಂತರ ಕಪ್ಪು ಆಕಾಶ ನೋಡಲು ಹೊರಕ್ಕಿಣುಕುವ ವಿಚಾರ ಬರುವುದೇ ಕಡಿಮೆ. ಅದರಿಂದೇನು ಉಪಯೋಗ ಮೊದ್ಲು ಹೇಳಿ ಅನ್ನುವುದು ಮೊದಲ ಮತ್ತು ಕೊನೆಯ ಪ್ರಶ್ನೆ. ಕುವೆಂಪು ಪ್ರತಿದಿನ ಬೆಳಿಗ್ಗೆ ತಮ್ಮ ಮನೆಯ ಕಂಪೌಂಡಿನಲ್ಲಿದ್ದ ಮರದ ಎದುರು ಕುರ್ಚಿ
ಹಾಕಿ ಕುಳಿತುಕೊಂಡು ಹಕ್ಕಿಗಳ ಗೂಡನ್ನು ವೀಕ್ಷಿಸುತ್ತಿದ್ದರು ಎನ್ನುವುದು ಕವಿಗಳಿಗೆ ಮಾತ್ರ ಸಾಧ್ಯವಾಗುವ ನಮ್ಮ ಸದ್ಯದ ವಾಸ್ತವ...ತೇಜಸ್ವಿ ಹಕ್ಕಿ ಫೋಟೋ ಕ್ಲಿಕ್ಕಿಸಲು ಗಂಟೆಗಳಷ್ಟು ಕಾಯುತ್ತಾ ಕುಳಿತಿರುತ್ತಿದ್ದರು, ಮೀನಿಗೆ ಗಾಳ ಹಾಕುತ್ತಾ ತದೇಕಚಿತ್ತದಿಂದ ಕಾಯುತ್ತಿದ್ದರು ಎನ್ನುವುದು ಮೂಡಿಗೆರೆಯಲ್ಲೋ, ತೀರ್ಥಹಳ್ಳಿಯಲ್ಲೋ, ದಿಡುಪೆಯಲ್ಲೋ ಮಾತ್ರ ಸಾಧ್ಯವಾಗುವ ನಗರದ ವಾಸ್ತವ...ಹೇಗಿದ್ದರೂ ನಮಗಂತೂ ವೀಕೆಂಡಿನ ಒಂದೋ ಎರಡೋ ದಿನಕ್ಕೆ ಆಯಾಸ ಕಳೆಯಲು ನಿದ್ದೆಯಿದೆ, ಉತ್ಸಾಹವಿದ್ದರೆ ವಂಡರ್ ಲಾ, ತಪ್ಪಿದರೆ ಮಲ್ಟಿಪ್ಲೆಕ್ಸಿನಲ್ಲಿ ಸಿನಿಮಾದ ಊಲಾಲಾ...ಇಲ್ಲವೇ ಝಗಮಗಿಸುವ ಮಾಲುಗಳ ಆಫರುಗಳಲ್ಲಿ ಯಾವುದು ಬೆಟರು ಅಂತ ಮಹಡಿ ಮಹಡಿ ಹತ್ತಿ ಜಾಲಾಡುವ ಕ್ರೀಡಾಕೂಟ...!!!
******************

ಇದೆಲ್ಲವನ್ನೂ ನಿತ್ಯ ನೈಮಿತ್ತಿಕದಂತೆ ಗಮನಿಸುತ್ತಾ ಪ್ರತಿ ಸಂಜೆ ನಿಯಾನು ಬಲ್ಬುಗಳು ಉರಿಯಲು ಶುರುವಾಗುತ್ತವೆ. ಚಂದ್ರನಿದ್ದರೂ ಆ ಕಣ್ಣುಕುಕ್ಕುವ ಬೆಳಕಲ್ಲಿ ಮಬ್ಬು ಮಬ್ಬು. ನಗರದ ಜಗತ್ತಿಗೆ ಚಂದ್ರ ಬಂದರೂ ಹೋದರೂ ದೊಡ್ಡ ವಿಷಯವೇ ಅಲ್ಲ. ಇಲ್ಲಿ ಬೆಳಕೂ ಸಹ ಕಂಪ್ಯೂಟರು ಕುಟ್ಟುವಷ್ಟೇ ಯಾಂತ್ರಿಕ, ಸಾರ್ವತ್ರಿಕ.....!!!

ಎಲ್ಲರ ಭಾವನಾತ್ಮಕ ನೆಲೆಗಳನ್ನು ನಿರ್ಲಿಪ್ತತೆಯ
ಮಗ್ಗುಲಿಗೆ ಹಾಕಿಬಿಡಲು ನಗರದ ಬೆಳಕು ಸಾಕು...ಮೌನವಾಗಿರದ ಪ್ರತಿ ಕ್ಷಣವೂ ಸಾಕು.....ಚಂದ್ರನಿರುವ ನಗರದ ರಾತ್ರಿಯೂ ಸಾಕು.

ಅದಕ್ಕೇ ಹೇಳಿದ್ದು-ನಗರದ ಉದ್ದುದ್ದ ಮಲಗಿದ ರಸ್ತೆಯಂತೆ ಬದುಕು ನೆರಳುಗಳಿಲ್ಲದ ಅಸ್ಥಿಪಂಜರ...!!!

ಶುಕ್ರವಾರ, ಮಾರ್ಚ್ 12, 2010

ಸ್ವಗತೋನ್ಮತ್ತ ತಲ್ಲಣಗಳು

ಇಲ್ಲಿರುವುದೆಲ್ಲಾ ಬಿಡಿ ಬಿಡಿ ಭಾವನೆಗಳು. ಹತ್ತಾರು ಕ್ಷಣಗಳಲ್ಲಿ ಹೊಳೆದದ್ದು, ಜುಮ್ಮೆನ್ನುವಂತೆ ಮಾಡಿದ್ದು. ಇಲ್ಲಿನ ಪ್ರತೀ ಶಬ್ದ, ಸಾಲು ಹಲವಾರು ಅರ್ಥದೊಂದಿಗೆ ಕಾಡಿವೆ. ಬಿಡಿ ಸಾಲುಗಳಲ್ಲಿ ಒಂದಕ್ಕಿಂತ ಹೆಚ್ಚಿನ ಕತೆಗಳಿವೆ. ಹಾಗಂತ ಅನ್ನಿಸಿದೆ ಬರೆದಾದ ಮೇಲೆ. ಹಾಗಲ್ಲ ಅಂತಾನೂ ಅನ್ನಿಸಿದೆ, "ಹಾಗನ್ನಿಸಿದ" ನಂತರದ ಫಳಿಗೆಗೆ. ನಿಮಗೇನು ಅನ್ನಿಸುತ್ತೋ...???

--
ಹೂ
ಮುತ್ತಿಟ್ಟರೆ
ಬಾಡುತ್ತಾಳೆ


--
ನಿನ್ನೆ
ಕಂಡ
ಸೂರ್ಯ
ಇವತ್ತಿಲ್ಲ
ಹಗಲು


--
ಕುಕ್ಕರಿನ
ವಿಶಿಲು
ಜೀವ
ತೇಗುತ್ತದೆ


--
ಕರಚಿದ
ಕರಿಬೇವಿನ
ಎಲೆಗಳಲಿ
ಒಗ್ಗರಣೆ
ಹಸಿರು


--
ಅಕ್ಷರ
ಮೂಡುತ್ತಿದೆ
ಕಂಪ್ಯೂಟರ್
ಪರದೆ
ಇನ್ನೂ
ಖಾಲಿ


--
ಹಳದಿ
ರಸೀತಿಯಲಿ
ಉಳಿದ
ಲೆಕ್ಕ
ಅರೆ
ಚುಕ್ತಾ


--
ಟೆರೇಸಿನಲಿ
ನಿಂತೆ
ನಾನು
ನಗರ
ಬೆತ್ತಲೆ


--
ನಾನಿದ್ದೇನೆ
ದೀಪದ
ಬುಡದಲ್ಲಿ
ಸತ್ತಿದೆ
ಹಾತೆ

ಶುಕ್ರವಾರ, ಫೆಬ್ರವರಿ 26, 2010

ಅಚಾನಕ್ಕಾಗಿ ದೇವರಂತೆ ಪ್ರತ್ಯಕ್ಷವಾಗಿಬಿಡಬೇಕು ಲೇಖಕ

ಓದುಗನಿಗೆ ಲೇಖಕ ಸುಲಭಕ್ಕೆ ಸಿಕ್ಕಬಾರದು.
ಯಾವುದೋ ಮದುವೆ ಸಮಾರಂಭದಲ್ಲಿ ಆಗಷ್ಟೇ ಪರಿಚಯವಾದ ವ್ಯಕ್ತಿಯ ಜೊತೆ ಶತಮಾನಗಳಷ್ಟು ಹಿಂದಿನ ಪರಿಚಯದಂತೆ ಮಾತನಾಡಲು ಶುರುಮಾಡಿಬಿಡುವಂತೆ ಲೇಖಕನ ಜೊತೆಗಿನ ಪರಿಚಯ ತಿರುಗಿಬಿಡಬಾರದು.

ಒಂದು ಕತೆಯೋ, ಪುಸ್ತಕವೋ ಓದಿದ ಕ್ಷಣಕ್ಕೆ ಕವಿ, ಕತೆಗಾರನ ವಿಳಾಸವೋ, ನಂಬರೋ ಈಗಂತೂ ಸುಲಭಕ್ಕೆ ಸಿಕ್ಕುಬಿಡುತ್ತದೆ. ಅಲ್ಲಿಗೆ ಓದುಗ ಹೊಗಳುಭಟನಾಗಿ ರೂಪಾಂತರ ಹೊಂದುವ ಪ್ರಕ್ರಿಯೆ ಅನಿವಾರ್ಯವಾಗಿ ಶುರುವಾಗುತ್ತದೆ. ಅಥವಾ ಲೇಖಕ ಅಂತಹದೊಂದು ಅನಿವಾರ್ಯತೆಯನ್ನು ಇವತ್ತಿನ ದಿನಮಾನದಲ್ಲಿ ಖಡಾಖಂಡಿತವಾಗಿ ನಿರೀಕ್ಷಿಸುತ್ತಿದ್ದಾನೆಯೇ? ಬೆಂಗಳೂರಿನಲ್ಲಿರುವ ಈ ಒಂದೂವರೆ ವರ್ಷದಲ್ಲಿ ಹಾಗನ್ನಿಸುತ್ತಿದೆ. ಯಾಕೋ..???

ನಮ್ಮಿಷ್ಟದ ಲೇಖಕ, ಕವಿ, ಕತೆಗಾರನ ಪರಿಚಯ ಮಾಡಿಕೊಳ್ಳಲೇಬಾರದು, ಪರಿಚಯವಿದ್ದರೂ ಆದಷ್ಟು ದೂರದಲ್ಲಿದ್ದು ಬಿಡಬೇಕು ಅಂತನ್ನಿಸುತ್ತದೆ. ಆತ ಭವಿಷ್ಯದಲ್ಲಿ ಸೊಗಸಾದ ಪದ್ಯ ಬರೆಯುತ್ತಾನೆ, ನನ್ನ ಬಾಲ್ಯವನ್ನು ಮತ್ತೆ ಹೆಣೆಯಲು, ನೆನೆಯಲು ಪೂರಕವಾಗುವಂತೆ ಅವನ ಬಾಲ್ಯವನ್ನು ಕಟ್ಟಿಕೊಡುವ ಕತೆಯೊಂದನ್ನು, ಅಥವಾ ನನಗೆ ಪರಿಚಯವಿರದ ವಾತಾವರಣವನ್ನು ಪರಿಚಯಿಸಿ ಕೊಡುತ್ತಾನೆ ಅಂತ ಕಾಯುತ್ತಾ ಕೂರಬೇಕು. ಮಳೆ, ವಿರಹ, ಪ್ರಿಯತಮೆಯ ಸಲ್ಲಾಪ, ಸಂಗೀತದಲ್ಲೇ ಕಳೆದು ಹೋಗಿರುವ ಜಯಂತ್ ಕಾಯ್ಕಿಣಿಯ ಹೊಸ ಕತೆಗೆ ಓದುಗ ಕಾದುಕೂತಂತೆ ಸನ್ನಿವೇಶ ಸೃಷ್ಟಿಯಾಗಿಬಿಡಬೇಕು. ದೇಶಕಾಲದಲ್ಲಿ ಪ್ರಿಂಟಾಗಿದ್ದ ಜಯಂತರ "ಚಾರ್ಮಿನಾರು" ನಂತರ ಹೊಸದ್ಯಾವ ಕತೆ ತೆರೆದುಕೊಳ್ಳುತ್ತದೆ ಎಂದು ವರ್ಷಗಳಿಂದ ಕಾದುಕುಳಿತಿದ್ದೇವಲ್ಲ ಹಾಗೇ ಇರಬೇಕು ಓದುಗ. ಅದೇ ಚಡಪಡಿಕೆ, ಅದೇ ಕಾತರ, ಅದೇ ನಿರೀಕ್ಷೆ. ಪರಿಚಯವಾಗಿಬಿಟ್ಟರೆ ಬಿಟ್ಟರೆ ಮುಗೀತು ಬಿಡಿ. ಹೊಸ ಕಥೆ ಯಾವಾಗ ಎಂದು ಜಯಂತ್ ಸಿಕ್ಕಾಗಲೆಲ್ಲಾ ಕೇಳಿ ಪ್ರಾಣ ತಿನ್ನುತ್ತೇವೆ. ಜೊತೆಗೆ ಹೊಸ ಕತೆ ಬರೆದಿಲ್ಲವಲ್ಲ ಎನ್ನುವ ಪಾಪಪ್ರಜ್ಙೆಯನ್ನೋ, ಧಿಡೀರ್ ಎಚ್ಚರವನ್ನೋ ಲೇಖಕಕನಲ್ಲಿ ಹುಟ್ಟುಹಾಕಿ ಭಯಂಕರ ಓದುಗರಾಗಿಬಿಡುತ್ತೇವೆ. ಅಲ್ಲಿಗೆ ನಮಗೂ ಸೋನಿ ಚಾನೆಲ್ಲಿನಲ್ಲಿ ಪ್ರಸಾರವಾಗುವ ಸಿಐಡಿ ಧಾರಾವಾಹಿಗೂ ಹೆಚ್ಚಿನ ವ್ಯತ್ಯಾಸ ಉಳಿದಿರುವುದಿಲ್ಲ.

ಲೇಖಕ ಓದುಗನಿಗೆ ಅಚಾನಕ್ಕಾಗಿ ಸಿಕ್ಕಿಬಿಡಬೇಕು, ಪ್ರತ್ಯಕ್ಷವಾಗಿಬಿಡಬೇಕು ದೇವರಂತೆ ಎನ್ನುವುದೇ ಇಲ್ಲಿನ ವಾದ. ಕತೆಯ ಮಧ್ಯದಲ್ಲೆಲ್ಲೋ ಅನಿರೀಕ್ಷಿತ ತಿರುವು ಗೋಚರಿಸಿದಾಗ "ಓ...ಮುಂದಿನ ಓದು ಇನ್ನೂ ಮಜಾ ಇದೆ" ಎಂದು ಆಸ್ಥೆಯಿಂದ ಉಳಿದ ಪುಟಗಳನ್ನು ಓದುತ್ತಾ ಕೂರುವಂತಹ ಕುತೂಹಲದಂತಿರಬೇಕು ಲೇಖಕನ ಅಚಾನಕ್ ಭೇಟಿ.

ಗಡಿಬಿಡಿಯ ಒಂಭತ್ತು ಗಂಟೆಯ ಹೊತ್ತಲ್ಲಿ ರಶ್ಶಾದ ಬಿಎಂಟಿಸಿಯಲ್ಲಿ ಒಂದೂವರೆ ಕಾಲಲ್ಲಿ ನಿಲ್ಲುತ್ತಾ ಮೆಜೆಸ್ಟಿಕ್ ಕಡೆಗೆ ಹೋಗಬೇಕಾದರೆ, ಬಸವನಗುಡಿ ಪೋಲೀಸ್ ಸ್ಟೇಶನ್ನಿಂದ ಗಾಂಧೀಬಜಾರಿನ ಕಡೆಗೆ ಹೋಗುವ ರಿಕ್ಷಾದ ಒಳಗಿರುವ ವ್ಯಕ್ತಿಯ ಕಂಡ ಕೂಡಲೇ "ಹೇ ಅದು ಕಿ.ರಂ ಅಲ್ವಾ" ಎಂದು ಮನಸ್ಸು ಗಟ್ಟಿಯಾಗಿ ಹೇಳಬೇಕು. ವಿಮರ್ಶೆ ನೆನಪಾಗಬೇಕು. ಕಾವ್ಯದ ಕುರಿತ ಅವರ ಮಾತುಗಳು ಥಟ್ ಅಂತ ಕಣ್ಣೆದುರು ಬಂದು ನಿಲ್ಲಬೇಕು.

ಎಸ್.ದಿವಾಕರ್ ಹೊಸ ಮಯೂರ ತಿರುವಿ ಹಾಕುತ್ತಾ ಸುಚಿತ್ರಾದ ಎದುರಿನ ಟೀ ಅಂಗಡಿ ಹತ್ರ ನಿಂತಿರಬೇಕಾದರೆ ಅವರನ್ನು ದೂರದಲ್ಲೇ ನಿಂತು ನೋಡಬೇಕು. ಅವರ ಒಂದಷ್ಟು ಉತ್ತಮ ಅನುವಾದಗಳು, ಕತೆಗಳು ನೆನಪಾಗುತ್ತಾ, ಮರೆತ ಮತ್ತೊಂದಷ್ಟನ್ನು ನೆನಪಿಸಬೇಕು. ಮರೆತು ಹೋದ ಅವರ ಕತೆಯೊಂದನ್ನು ಅದೇ ದಿನ ರೂಮಿಗೆ ಹೋದಾಗ ಹುಡುಕುತ್ತಾ ನಿದ್ದೆಯಿಲ್ಲದೇ ಕಳೆಯಬೇಕು. ಸಿಕ್ಕರೆ ಮತ್ತೊಮ್ಮೆ ಓದಿ ಖುಷಿಯಾಗಬೇಕು.

ಚಿಕ್ಕಲಸಂದ್ರ- ಉತ್ತರಹಳ್ಳಿ ರಸ್ತೆಯಲ್ಲಿ ರಾತ್ರಿ ಎಂಟರ ಹೊತ್ತಿಗೆ ಬಸ್ಸಿಳಿದು ರೂಂ ಕಡೆ ಹೊರಟಾಗ ಚಂದ್ರಶೇಖರ ಆಲೂರು ಟ್ರ್ಯಾಕ್ ಪ್ಯಾಂಟು ಹಾಕಿಕೊಂಡು ನಮ್ಮೆದುರೇ ಹಾದುಹೋದ ಹೊತ್ತಿನಲ್ಲಿ ನಮ್ಮೊಳಗೆ ಹುಟ್ಟುವ ಪುಳಕಕ್ಕೆ ಅಕ್ಷರಗಳ ಹಂಗಿಲ್ಲ. ಮಾತಿನ ಹಂಗಿಲ್ಲ. ಸ್ಮೃತಿಪಟಲದಲ್ಲಿ ವೆರೋನಿಕಾಳದ್ದೇ ಒಲಿದಂತೆ ಹಾಡುವ ಚಿತ್ರ.

ಈಗಂತೂ ಎಲ್ಲೆಡೆಯೂ ಲೇಖಕ ಸುಲಭಕ್ಕೆ ಸಿಕ್ಕುಬಿಡುತ್ತಾನೆ ಬಿಡಿ. ಬೆಂಗಳೂರಿನ ಪ್ರಶಸ್ತಿ, ಗೋಷ್ಠಿ, ಸೆಮಿನಾರು, ಸಾಹಿತ್ಯ ಚರ್ಚೆ, ಪುಸ್ತಕ ಬಿಡುಗಡೆಯ ನಿತ್ಯ ಗೊಂದಲಪುರಕ್ಕಿಂತ ಹೀಗೇ ಬೆಂಗಳೂರಿನ ಫುಟ್ಪಾತು, ಅನಾಮಿಕ ಅಂಗಡಿಯ ಮುಂಭಾಗ, ಯಾವುದೋ ನಾಟಕದ ಪ್ರದರ್ಶನದ ವೇಳೆ ಪ್ರೇಕ್ಷಕರ ನಡುವೆ ನಮ್ಮ ಪ್ರೀತಿಯ ಲೇಖಕ ಕಣ್ಣಿಗೆ ಕಾಣಿಸಿಕೊಂಡರೆ, ಓದುಗನಿಗೆ ಪ್ರಿಯತಮೆಯನ್ನೇ ಕಂಡಷ್ಟು ಪುಳಕವಾಗುತ್ತದೆ. ಆತನನ್ನು ಆ ಫಳಿಗೆಗಳಲ್ಲಿ ಓಡಿಹೋಗಿ ಮಾತಾಡಿಸೋಣ ಎನ್ನುವುದಕ್ಕಿಂತ ಸುಮ್ಮನೆ ನಿಂತು ನೋಡುವುದು, ಆತನ ಬರಹಗಳ ಮಳೆಯ ನೆನಪಲ್ಲಿ ನೆನೆಯುವುದೇ ಖುಷಿ. ಹಾಗೆ ಓದುಗ ಸುಮ್ಮನೆ ನಿಂತು ನೋಡುವ ಕ್ಷಣಗಳಲ್ಲೇ ಲೇಖಕನೊಬ್ಬನ ಬರಹದ ಶಕ್ತಿಯ ಸಾರ್ಥಕತೆಯೂ ಅಡಗಿದೆಯೇನೋ...ಯಾರಿಗೆ ಗೊತ್ತು. ಅದಕ್ಕೇ ಇರಬೇಕು ಅಕ್ಷರವೆಂಬ ಬಣ್ಣದ ಹುಡಿ ಒಮ್ಮೆ ಕೈ ತಾಕಿದರೆ ಸಾಕು, ಮೈಮನ ರಂಗೋಲಿಯಾಗುತ್ತದೆ.

ಕತೆಗಾರ ವ್ಯಾಸರು ಹೇಳುತ್ತಿದ್ದ ಥೇಟಾನುಥೇಟ್ "ಬೆಂಗಳೂರಿಗರ" ಎಲ್ಲಾ ಲಕ್ಷಣಗಳನ್ನು ಹೊಂದಿರುವ ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಕಂಡುಬರುವ ಅದದೇ ರಿಪೀಟೆಡ್ ಹೊಗಳಿಕೆ, ಉತ್ತಮ, ಅತ್ಯುತ್ತಮ ಎಂದು ಹೇಳಲೇ ಬೇಕಾದ ಅನಿವಾರ್ಯತೆ ಹಾಗೂ ಪ್ರೇಕ್ಷಕನಾಗಿ ಹೋದರೆ ಇಂಥದ್ದನ್ನೆಲ್ಲಾ ಕೇಳಲೇಬೇಕಾದ ರಿಯಾಲಿಟಿ ಶೋಗಳ ಫಾರ್ಮ್ಯಾಟ್ ಗಿಂತ ಓದುಗನಿಗೆ ದಾರಿ ಮಧ್ಯೆ ಅಚಾನಕ್ಕಾಗಿ ಪ್ರತ್ಯಕ್ಷನಾಗಿ ಕಣ್ಮರೆಯಾಗುವ ಲೇಖಕನೇ ವಾಸಿ. ಕಡೇ ಪಕ್ಷ ಆತನ ಕತೆಯ, ಕವಿತೆಯ ಪುನರ್ ಮನನ, ಪುನರ್ ಓದು ಓದುಗನಿಗೆ ಸಾಧ್ಯ.

ಅಂತಹ ಅನಾಮಿಕ ಭೇಟಿಗಳನ್ನು, ಪ್ರತ್ಯಕ್ಷಗಳನ್ನು ಸಾಧ್ಯವಾಗಿಸುವ ಬೆಂಗಳೂರಿನ ಟ್ರಾಫಿಕ್ಕು, ಬಿಎಂಟಿಸಿ, ಫುಟ್ಪಾತು, ಅಂಗಡಿ ಮುಂಭಾಗ ಇತ್ಯಾದಿಗಳಿಗೆ ಮನದುಂಬಿ ನಮಸ್ಕಾರ.

ಮಂಗಳವಾರ, ಫೆಬ್ರವರಿ 16, 2010

ರಾಧೆಯ ಪ್ರೀತಿಯ ಕೃಷ್ಣನೂ ಜೊತೆಗೊಂದಿಷ್ಟು ಪ್ರಶ್ನೆಗಳೂ...

ಕೊಳಲ ತೊರೆದು ಹೋದ-ರಾಧೇ
ಮುರಳೀಧರ ಗೋಪಾಲಕೃಷ್ಣ
ಎಲ್ಲಿ ಇದ್ದೆಯೇ
ಎತ್ತ ಪೋದೆಯೇ
ಸಮಯದಿ ಕೃಷ್ಣನ ತಡೆಯದೇ ರಾಧೇ

ಎಂದು ದುಃಖಿಸುತ್ತಾ ನುಡಿಯುತ್ತಾರೆ ಸಖಿಯರು. ಕುಸಿದು ಕುಳಿತುಕೊಳ್ಳುತ್ತಾಳೆ ರಾಧೆ. ಕೃಷ್ಣನ ಈಗಿನ ಸುದೀರ್ಘ ಪಯಣ ತನ್ನನ್ನು ಆತನೊಂದಿಗೆ ಒಂದುಗೂಡಿಸುವುದಿಲ್ಲ ಎನ್ನುವುದು ರಾಧೆಗೆ ಬಹುಷಃ ಅರ್ಥವಾಗುತ್ತದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕೊಳಲ ತೊರೆದು ಹೋದ ರಾಧಾ ಮಾಧವ ಆಕೆಯಲ್ಲೊಂದು ವಿಷಾದ ವಾಸ್ತವಗಳನ್ನು ಸೃಷ್ಟಿಸುತ್ತಾನೆ. ಕೃಷ್ಣ ಯಾಕೆ ರಾಧೆಯ ಅನುಪಸ್ಥಿತಿಯಲ್ಲಿ ಆಕೆಯನ್ನು ತೊರೆದು, ಆಕೆಗೆ ಯಾವುದೇ ಸೂಚನೆಗಳನ್ನು, ಸಮಾಧಾನಗಳನ್ನು ನೀಡದೇ ಹೊರಟ. ಅಕ್ರೂರ ಬಂದು "ಬನ್ನಿ ಮಧುರೆಗೆ ಬಿಲ್ಲ ಹಬ್ಬಕೆ ಹೋಗುವಾ" ಎನ್ನುವಾಗ ರಾಧೆ ಕೃಷ್ಣನ ಎದುರಿದ್ದರೆ ಆತ ಅಕ್ರೂರನ ಆಹ್ವಾನವನ್ನು ತಿರಸ್ಕರಿಸುತ್ತಿದ್ದನೇ? ಪ್ರೀತಿಯ ಎದುರು ಆಹ್ವಾನ ಕರ್ತವ್ಯವಾಗಿ ಬದಲಾಗುವುದು ತಪ್ಪುತ್ತಿತ್ತೇ?

ಕೃಷ್ಣನಿಗೆ ಚೆನ್ನಾಗಿ ಗೊತ್ತಿತ್ತು. ರಾಧೆಯ ಉಪಸ್ಥಿತಿ ತನ್ನನ್ನು ತಾನೇ ಮರೆಯುವಂತೆ ಮಾಡುತ್ತದೆ. ಮಗುವಿನಂತೆ ನಲಿಯುವುದನ್ನು ಕಲಿಸುತ್ತದೆ. ಸಡಗರ, ಸಂಭ್ರಮದ ವಾಸ್ತವದಲ್ಲಿ ಬದುಕುತ್ತಾ ಇರುವಂತೆ ಮಾಡುತ್ತದೆ.ನಿತ್ಯದಲ್ಲಿ ಆಕೆ ಕಾಣದೇ ಹೋದರೆ ಆತನಿಗೆ ಅದೆಂತಹುದೋ ಚಡಪಡಿಕೆ. ತನ್ನೊಳಗೆ ತುಂಬಿಕೊಂಡ ರಾಧೆಯ ಬಿಂಬ ಸ್ಪಷ್ಟ-ಅಸ್ಪಷ್ಟಗಳ ಅಲುಗಿನ ಮೇಲೆ ತೂಗುತ್ತಿರಬೇಕಾದರೆ ಕೃಷ್ಣನಿಗೆ ರಾಧೆಯನ್ನು ಭೇಟಿಯಾಗಿ ಕಣ್ತುಂಬಿಕೊಳ್ಳಬೇಕು. ಆ ಭೇಟಿಯಲ್ಲೇ ಕಳೆದು ಹೋಗಬೇಕು.

ಸಖಿರಿಗೆಲ್ಲ ಕೃಷ್ಣ ದೇವರಾಗಿ ಕಾಣುತ್ತಾನೆ. ಅವನ ದೈವತ್ವ ಕಾಣುತ್ತದೆ. ಆದರೆ ರಾಧೆಗೆ ಆತ ಕೇವಲ ಪ್ರೇಮಿ. ತನ್ನೆಲ್ಲಾ ಭಾವನೆಗಳಿಗೆ ಸ್ಪಂದಿಸುವ ಗೆಳೆಯ. ಸಾದಾ ಸೀದಾ ನಮ್ಮಂತೆಯೇ ಇರುವ ಮನುಷ್ಯ. ಆದ್ದರಿಂದ ಆಕೆಗೆ ಕೃಷ್ಣನಲ್ಲಿರುವ ದೈವತ್ವ ಮುಖ್ಯವಾಗುವುದಿಲ್ಲ. ಆತ ಮುಖ್ಯವಾಗುತ್ತಾನೆ. ಆತನೊಳಗಿರುವ ಪ್ರೇಮಿ ಮುಖ್ಯವಾಗುತ್ತಾನೆ. ಅದೇ ಕಾರಣಕ್ಕೆ ಆಕೆಗೆ ಆತನ ಪಿಸುದನಿ ರೋಮಾಂಚನವನ್ನುಂಟು ಮಾಡುತ್ತದೆ. ಆತನಿಲ್ಲದೆ ವಾಸ್ತವ ವಿರಹವಾಗುತ್ತದೆ.

**************************************
ಮಾತೆತ್ತಿದರೆ ರಾಮ ದೈವತ್ವಕ್ಕಿಂತ ಹೆಚ್ಚು ಮಾನವೀಯ ವ್ಯಕ್ತಿತ್ವ ಎನ್ನುತ್ತೇವೆ. ಕೃಷ್ಣನಿಗೆ ಹೆಚ್ಚು ದೈವತ್ವದ ಅಂಶಗಳನ್ನು ಆರೋಪಿಸುತ್ತೇವೆ. ಕಪಟ ನಾಟಕ ಸೂತ್ರಧಾರಿ ಎಂದು ಲೇಬಲ್ ಅಂಟಿಸಿಬಿಡುತ್ತೇವೆ. ರಾಧೆಯ ವಿರಹ ದೊಡ್ಡದು ಎಂದು ಮರುಗುತ್ತೇವೆ, ಕೊಂಡಾಡುತ್ತೇವೆ. ಆದರೆ ರಾಧೆಯನ್ನು ಬಿಟ್ಟು ಮಧುರೆಯ ದಾರಿ ಹಿಡಿದ ಕೃಷ್ಣನ ಒಳಗಿನ ನೋವುಗಳನ್ನು ನಾವೆಂದಾದರೂ ಆಲೋಚಿಸಿದ್ದೇವೆಯೇ? ರಾಧೆಗಾಗಿ ತನ್ನ ಕೊಳಲನ್ನೇನೋ ಬಿಟ್ಟ. ಆತನ ಒಳಗೆ ಹುಟ್ಟಿಕೊಂಡ ರಾಧೆಯ ವಿರಹದ ಕಣ್ಣೀರನ್ನು ಯಾವಾಗ ಒರೆಸಿಕೊಂಡ? ಅದೆಷ್ಟು ನಿಟ್ಟುಸಿರುಗಳಿತ್ತೋ ಎನೋ ಅವನಲ್ಲಿ......ಆ ನೋವುಗಳನ್ನು ಆತ ರಾಮನಂತೆ ಎಲ್ಲೂ ಪ್ರದರ್ಶನಕ್ಕಿಡುವುದಿಲ್ಲ. ಅಥವಾ ಆತನ ನಡವಳಿಕೆಯಲ್ಲಿ ಪ್ರತಿಬಿಂಬಿತವಾಗುವುದಿಲ್ಲ. ನೋವನ್ನು ಏಕಾಂತದ ಹಾಡನ್ನಾಗಿ ಮಾಡಿಕೊಳ್ಳುತ್ತಾನೆ, ತನಗೆ ಮಾತ್ರ ಕೇಳಿಸಿಕೊಳ್ಳುವಂತೆ. ಪಾಂಡವರಿಗೆ ಬೇಕಾದವನಾಗುತ್ತಾ, ದೇವರಾಗುತ್ತಾ, ಕೌರವರಲ್ಲಿ ಅಸಹನೆ, ಭಯ ಎರಡನ್ನೂ ಹುಟ್ಟಿಸುತ್ತಾ ತನ್ನ ಖಾಸಗಿ ಮಾತುಗಳನ್ನು, ಮೌನವನ್ನು ಪ್ರೇಮಿಯಾಗಿ ಆತ ತನ್ನಲ್ಲೇ ಬಚ್ಚಿಡುತ್ತಾನೆ. ಅವನ ಅಕ್ಕ ಪಕ್ಕದಲ್ಲಿರುವ ಬಲರಾಮ, ಪಾಂಡವರು, ಕೌರವರು ಇವರ್ಯಾರಿಗೂ ಅದು ಮುಖ್ಯವಲ್ಲ.....ಕೆಲವೊಂದು ವಿಷಯಗಳು ಜಗತ್ತಿಗೆ ಅಮುಖ್ಯವಾಗುವ ಮೂಲಕವೇ ಏಕಾಂತಕ್ಕೆ ಹತ್ತಿರವಾಗುತ್ತವೆ ಎನ್ನುವುದರಲ್ಲಿ ಕೃಷ್ಣನ ವಿರಹದ ಪ್ರಕ್ರಿಯೆ ಇದೆ.

ಕೃಷ್ಣನೀಗ ಹೋಗಲೇಬೇಕಿದೆ. ಕುರುಕ್ಷೇತ್ರ ಯುದ್ಧಕ್ಕೊಂದು ವೇದಿಕೆ ಸಿದ್ಧ ಮಾಡಬೇಕಿದೆ. ಆತನಿಗೆ ಗೊತ್ತು. ಕೊಳಲು ಜೊತೆಗಿದ್ದರೆ ನೆನಪುಗಳ ಮೆರವಣಿಗೆ ಒತ್ತರಿಸಿಕೊಂಡು ಬರುತ್ತದೆ. ರಾಧೆಯೊಳಗೆ ಕಳೆದು ಹೋಗುತ್ತೇನೆ. ಅದಕ್ಕೇ ಆತ "ಹೊಳಲಿಗೆ ಕೊಳಲಿದು ತರವಲ್ಲ/ ಮಧುರೆಗೆ ಸವಿ ಸಲ್ಲ" ಎನ್ನುತ್ತಾ ತಾನು ಬಿಸುಟಿದ ವೃಂದಾವನದೊಳಗಿರುವ ಕೊಳಲನ್ನು ದಿಟ್ಟಿಸುತ್ತಾ ದೂರವಾಗುತ್ತಾನೆ."ಪೋಗದಿರಯ್ಯ ಪೋಗದಿರೈ ಮಾರಸುಂದರ/ ಗಿರಿಧರ ನೀ ಪೋಗದಿರಯ್ಯ" ಎನ್ನುವ ಗೋಪಿಕೆಯರ ವಿನಂತಿ, ಬಿನ್ನಹ ಎಲ್ಲವೂ ಅಕ್ರೂರ, ಬಲರಾಮರ ಜೊತೆಗೆ ಹೊರಟವನಿಗೆ ಕೇಳದೇ ಹೋಯಿತೇಕೇ? ಅಥವಾ ಕೇಳಿಯೂ ಕೇಳಿಸದಂತೆ ನಟಿಸಿದನೇ ಆತ. "ಪೋಗದಿರಯ್ಯಾ" ಎನ್ನುವ ಮಾತು ರಾಧೆಯ ಬಾಯಿಂದ ಹೊರಬಂದಿದ್ದರೆ ಕೃಷ್ಣ ಗೋಕುಲದಿಂದ ನಿರ್ಗಮಿಸದೇ ಉಳಿಯುತ್ತಿದ್ದನೇ? ಪಾಂಚಜನ್ಯ ಹಿಡಿಯುವ ಪ್ರಸಂಗ ಬರುತ್ತಿರಲಿಲ್ಲವೇ? ಅರ್ಜುನನಿಗೆ ವಿಶ್ವರೂಪ ದರ್ಶನದ ಅವಕಾಶ, ಮಾರ್ಗದರ್ಶನ ದಕ್ಕದೇ ಹೋಗುತ್ತಿತ್ತೇನೋ.

"ಎನ್ನೀ ಕೊಳಲಿದು ಕಾಡಿನ ಬಿದಿರು/ ಈ ಹುಲುಕಡ್ಡಿಗೆ ಎನಿತೋ ಚದುರು!" ಎಂದು ಪ್ರೀತಿಯಿಂದ ಪ್ರತೀ ಬಾರಿ ಕೊಳಲಿನ ಮೈದಡವಿ ಹರ್ಷಗೊಂಡಿದ್ದ ಕೃಷ್ಣನಿಗೇ ಸದ್ಯಕ್ಕೆ ಕೊಳಲು ಬೇಡ. ಕೊಳಲು ಹುಟ್ಟಿಸುವ ನೆನಪುಗಳು ಬೇಡ. ನೆನಪುಗಳ ಮೂಲಕ ತೆರೆದುಕೊಳ್ಳುವ ಬೃಂದಾವನವೂ ಬೇಡ. ಹಾಗಿದ್ದರೆ ಕೃಷ್ಣನಿಗೆ ರಾಧೆಯ ನೆನಪೂ ಬೇಡವಾಯಿತೇ?

"ಪೋ ರಾಧೆ ಬೇಗ ಪೋ ರಾಧೆ" ಎಂದು ಸಖಿಯರು ಅವಸರಿಸಿದರೂ ರಾಧೆಗೆ ಬಿಟ್ಟು ಹೋದ ಸಖನ ಬೆನ್ನತ್ತುವುದು ಬೇಕಿಲ್ಲ. ಆತನ ಪಯಣ ನಿಲ್ಲಿಸಿ ಗೋಗರೆದು ಕರೆ ತರಬೇಕೆನ್ನುವ ಬಯಕೆಯಿಲ್ಲ. " ಹಾ ತೊರೆದನೇ-ಕೊಳಲ ತೊರೆದನೇ" ಎನ್ನುವಲ್ಲಿ ಆಕೆಗೆ ಕೃಷ್ಣ ತನ್ನ ಸರ್ವಸ್ವವೇ ಆದ ಕೊಳಲನ್ನೂ, ತನ್ನನ್ನೂ ಬಿಟ್ಟುಹೋದ ದುಃಖವಿದೆ. ಅದರಿಂದ ಹೊರ ಹೊಮ್ಮದ ತನ್ನ-ಆತನ ಪ್ರೇಮದ ಉಸಿರಿನ ವೇದನೆಯ ಆತಂಕ ಅರ್ಥವಾದಂತಿದೆ. ಕೃಷ್ಣನಿಲ್ಲದ ರಾಧೆ ಪೂರ್ಣವಲ್ಲ ಎನ್ನುವ ಸತ್ಯ ಕೃಷ್ಣನಿಗೂ ಗೊತ್ತಿದೆ. ಅದಕ್ಕವನು ಕೊಳಲನ್ನೂ ಬಿಟ್ಟು ನಡೆದಿದ್ದಾನೆ. ಕೊಳಲೇ ಕೃಷ್ಣನಾಗುತ್ತಾ, ಕೃಷ್ಣನ ಜೊತೆ ನಲಿನಲಿದ, ಅಪ್ಪುಗೆಯಲಿ ಪರವಶವಾದ ದಿನಗಳನ್ನು ನೆನಪಿಸುತ್ತಾ ಕೃಷ್ಣನಂತೆಯೇ ರಾಧೆಯ ಬೊಗಸೆ ತುಂಬಿಕೊಳ್ಳುತ್ತದೆ. ರಾಧೆಯನ್ನೂ, ಕೊಳಲನ್ನೂ ಬಿಟ್ಟು ನಡೆದಿರುವುದರಿಂದ ಕೃಷ್ಣನೆಂಬ ನಿಷ್ಕಲ್ಮಶ ಪ್ರೇಮಿಯೂ ಒಂಟಿಯಾಗಿದ್ದಾನೆ. ಅಪೂರ್ಣವಾಗಿಯೇ ಉಳಿದುಕೊಳ್ಳುತ್ತಾನೆ. ಹಾಗೆ ಉಳಿದುಕೊಳ್ಳುವುದರಲ್ಲೇ ಆತನಿಗೆ ಹೆಚ್ಚು ಸುಖವಿದ್ದಂತೆ ತೋರುತ್ತದೆ. ಇಲ್ಲಿ ಕೃಷ್ಣನಿಗಾಗಿ ಕಾಯುತ್ತಿರುವ ರಾಧೆಯ ಪ್ರೀತಿ ದೊಡ್ಡದೇ ಅಥವಾ ಕೊಳಲನ್ನು ಬಿಟ್ಟು ಹೋಗುವ ಮೂಲಕ ರಾಧೆಗೆ ಸಮಾಧಾನ ಹೇಳಲು ಹೊರಟ ಕೃಷ್ಣನ ಪ್ರೀತಿಯ ಕಾಳಜಿ ಹೆಚ್ಚೇ?

ಆತ ಬಿಟ್ಟು ಹೋದ ಕೊಳಲೊಳಗಿರುವ ಆತನ ಉಸಿರಿನ ಬೆಚ್ಚನೆಯನ್ನು ತುಟಿಯ ಪ್ರಾಣರಸದಿಂದ ಹೀರುತ್ತಾ ಕೃಷ್ಣನಿಗಾಗಿ ಕಾಯುತ್ತಿದ್ದಾಳೆ ರಾಧೆ. ಕೊಳಲ ತೊರೆದು ಹೋದ ಎಂದು ಗೊತ್ತಾದ ಮರುಕ್ಷಣದಲ್ಲೇ ಆಕೆಯಲ್ಲಿ ಉಳಿಯುವುದು ಖಚಿತವಾಗಿ ಎರಡು ಪ್ರಶ್ನೆಗಳು

ನೆನೆದನೇ...ಎನ್ನ ನೆನೆದನೇ
ಮರಳನೇ....ಇನ್ನು ಮರಳನೇ

ಈ ಪ್ರಶ್ನೆಗಳಿಗೆ ಎರಡು ರೀತಿಯ ಉತ್ತರಗಳನ್ನು ಕಂಡುಕೊಳ್ಳುವ ಸಾಧ್ಯತೆ ಇದೆ...ಅದೆಲ್ಲಕ್ಕಿಂತ ಹೆಚ್ಚಾಗಿ ಮೌನವಾಗಿರುವುದಕ್ಕೂ ಅವಕಾಶವಿದೆ. ಅದಕ್ಕೇ ಇರಬೇಕು ರಾಧೆಗೆ ಸುದೀರ್ಘ ಮೌನವೂ ಪ್ರೀತಿಯಂತಹ ಸಹಜ ಭಾವ ಎಂದೆನಿಸುತ್ತದೆ.

ಯಾಕೆಂದರೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರವೇ ಅಂತಿಮವಲ್ಲ ಎನ್ನುವುದು ರಾಧೆಗೂ ಗೊತ್ತಿದೆ...!!

ಮಂಗಳವಾರ, ಜನವರಿ 19, 2010

ಕನಸುಗಳಿಗಿದು ಕಾಲವಲ್ಲ

ಪದವಿಯ ದ್ವಿತೀಯ ವರ್ಷದಲ್ಲಿದ್ದಾಗ ಬರೆದ ಕವಿತೆಯಿದು.

ಕನಸುಗಳಿಗಿದು
ಕಾಲವಲ್ಲ

ಕಾಮನಬಿಲ್ಲು ಕ್ಷಿತಿಜದಲಿ
ಮಿನುಗಿದ್ದು ನೆನಪಿಲ್ಲ
ರಾತ್ರಿಯ ನಕ್ಷತ್ರಗಳು
ಸ್ಪಾಟ್ಲೈಟುಗಳಾಗಿ ಬಿಟ್ಟಿವೆ
ಸೂರ್ಯ ಬಚ್ಚಲು ಕಾಯಿಸುತ್ತಾನೆ
ಬಿದಿಗೆ ಚಂದ್ರಮನ
ಬೆಳಕಿನ ಊಟಕ್ಕೆ
60 ವ್ಯಾಟಿನ ಬಲ್ಬು ಬಿಡುವುದಿಲ್ಲ
ಬಾಲ್ಕನಿಯ ಮೌನ
ಟ್ರಾಫಿಕ್ಕು ಸದ್ದಿಗೆ ಸುಸ್ತಾಗಿ ಮಲಗಿದೆ
ಗೋಡೆಯ ಮೇಲಿನ
ಪ್ಲಾಸ್ಟಿಕ್ ಹೂವು ಬಾಡುತ್ತದೆ
ಎನ್ನುವ ಭರವಸೆಯಿಲ್ಲ
ಕನ್ನಡಿಯ ಮುಖ
ನಗುವುದನ್ನು ನಾ ನೋಡಿಲ್ಲ
ಒಂಟಿಯಾಗಿ
ನಡೆಯಬೇಕು ಅಂತ ಅನಿಸುವುದಿಲ್ಲ
ಸಿಗರೇಟಿನ ಕಿಡಿ
ತುಟಿ ಸುಟ್ಟರೂ ಚೀರಬೇಕೆನಿಸುವುದಿಲ್ಲ
ರಾತ್ರಿ ಕಂಡ ಕನಸು
ಇವತ್ತು ಬೆಳಿಗ್ಗೆ ನೆನಪಿಗೇ ಬರುವುದಿಲ್ಲ

ಈಗಂತೂ ಖಾತ್ರಿಯಾಗಿದೆ
ಕನಸುಗಳಿಗಿದು
ಕಾಲವಲ್ಲ!