ಬುಧವಾರ, ಡಿಸೆಂಬರ್ 14, 2011

ಮೌನದೊಳಗಿನ ಶಬ್ದವನ್ನು ಹುಡುಕುತ್ತಾ




ಸಿನಿಮಾ: ಇಟ್ಸ್ ಆಲ್ ಗಾನ್ ಪೀಟ್ ಟಾಂಗ್
ಭಾಷೆ: ಇಂಗ್ಲೀಷ್/ಸ್ಪಾನಿಶ್
ನಿರ್ದೇಶಕ: ಮೈಕೆಲ್ ಡೋಸ್
ಅವಧಿ: 90 ನಿಮಿಷ

ಪಬ್ಬಿನ ತಿಳಿ ನೀಲ ಬೆಳಕು, ಲೇಸರ್ ಕಿರಣಗಳ ಬಳುಕು, ಮತ್ತಿನಲ್ಲಿ ಜಗತ್ತನ್ನೇ ಮರೆತ ಯುವ ಜನ. ಅವರೆಲ್ಲರಿಗೂ ಇವ ಬಂದ್ರೆ ಮತ್ತೆ ಮತ್ತೇರುತ್ತೆ. ಸಂಗೀತವನ್ನು ರೀ-ಮಿಕ್ಸ್ ಮಾಡುತ್ತಾ ಹೊಸದನ್ನ ಆ ಕ್ಷಣಕ್ಕೆ ಸೃಷ್ಟಿಸುತ್ತಾ ಯುವಕರನ್ನು ಹುಚ್ಚೆದ್ದು ಕುಣಿಯುವಂತೆ ರೋಮಾಂಚಿತಗೊಳಿಸುತ್ತಾನೆ. ಅವನ ಬದುಕಿಗಿರೋ ಹೈ ಫ್ರೀಕ್ವೆನ್ಸಿ ಒಂದೇ. ಅವನಿಗೆ ಶಬ್ದವೇ ಜೀವ, ಜಗತ್ತು. ಇದು ಫ್ರ್ಯಾಂಕಿ ವೈಲ್ಡ್ ಅನ್ನೋ ಡಿಜೆಯೊಬ್ಬ ಬದುಕಿದ ಸಿನಿಮಾ- "ಇಟ್ಸ್ ಆಲ್ ಗಾನ್ ಪೀಟ್ ಟಾಂಗ್".


ಅವನಲ್ಲಿ ಎಲ್ಲವೂ ಇದೆ. ಯಶಸ್ಸು, ಕೀರ್ತಿ, ಹಣ, ಹೆಣ್ಣು, ಹೆಂಡ...ಮತ್ತಷ್ಟು ಮತ್ತೇರಲು ಡ್ರಗ್ಸು...ಪ್ರಸಿದ್ಧ ಡಿಜೆ ಬೇರೆ. ಕಾಲಿಟ್ಟಲ್ಲೆಲ್ಲಾ ಜನ ಮುತ್ತುತ್ತಾರೆ. ಕ್ಯಾಮರಾಗಳು ಕ್ಲಿಕ್ಕಾಗುತ್ತವೆ. ಮ್ಯಾಗಜೀನುಗಳು ಪುಟಗಟ್ಟಲೆ ಬರೆಯುತ್ತವೆ. ಪ್ರತೀ ಕ್ಷಣವನ್ನು ತೀವ್ರವಾಗಿ ತನಗಿಷ್ಟ ಬಂದಂತೆ ಬದುಕುತ್ತಾ ಹೋಗುತ್ತಾನೆ ಫ್ರ್ಯಾಂಕಿ. ಶಬ್ದ ಕರ್ಕಶವಾದರೆ, ಹಾದಿ ತಪ್ಪಿದರೆ ಫ್ರ್ಯಾಂಕಿ ನಿಗಿನಿಗಿ ಕೆಂಡ. ಅವನಿಗೆ ಫ್ರೀಕ್ವೆನ್ಸಿ ಯಾವತ್ತೂ ಮ್ಯಾಚಾಗ್ಬೇಕು.


ಎಲ್ಲಾ ಸರಿಯಾಗಿದ್ದ ಘಳಿಗೆಗಳಲ್ಲೇ ಫ್ರ್ಯಾಂಕಿ ನೀನಿನ್ನೂ ಸಂಪೂರ್ಣ ಕಿವುಡ ಅಂತ್ಹೇಳಿ ಅಗತ್ಯವಾಗಿದ್ದಾಗ ಮಾತ್ರ ಬಳಸಲು ಹಿಯರಿಂಗ್ ಕೈಗಿಡುತ್ತಾನೆ ಡಾಕ್ಟರ್. ಕುಡಿತ ಬಿಡು, ಇರೋವಷ್ಟು ದಿನ ಬದುಕಿಗೆ ಕಂಟ್ರೋಲ್ ಇರಲಿ ಅಂತ ಕಿವಿಮಾತು ಹೇಳುತ್ತಾನೆ. ಅಕ್ಷರಶಃ ನಡುಗಿ ಹೋಗುತ್ತಾನೆ ಫ್ರ್ಯಾಂಕಿ. ಬರ ಬರುತ್ತಾ ಶಬ್ದ ಕಿವಿಗಳೊಳಗೆ ಇಳಿಯದೇ ಹೋದಾಗ ಸೃಷ್ಟಿಯಾಗುವ ಮೌನಕ್ಕೆ, ನೀರವತೆಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಅನ್ನೋದು ಗೊತ್ತಾಗದೇ ಅನಾಥನಾಗುತ್ತಾನೆ. ಪಬ್ಬಿನೊಳ ಹೊಕ್ಕಿ ಮ್ಯೂಸಿಕ್ನ ಮಿಕ್ಸ್ ಮಾಡೋಕೆ ಕೂತರೆ ಅದ್ಯಾವುದೂ ಅಲ್ಲಿರೋರನ್ನ ತಣಿಸುತ್ತಿಲ್ಲ. ತಾನು ಸೃಷ್ಟಿಸುತ್ತಿರುವ ಸಂಗೀತ ಕೇಳುಗನನ್ನು ಪುನೀತಗೊಳಿಸುತ್ತಿಲ್ಲ ಅಂತನ್ನಿಸೋ ಕ್ಷಣವಿದೆಯಲ್ಲ, ಅದು ಸೃಜನಶೀಲ ವ್ಯಕ್ತಿಯೊಬ್ಬನ ಸಾವು. ಅಂತಹ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಫ್ರ್ಯಾಂಕಿಗೆ. ತುರ್ತಾಗಿ ಬದುಕಬೇಕಿದೆ ಫ್ರ್ಯಾಂಕಿಗೆ. ಆದ್ರೇನು ಮಾಡೋದು ಕಿವಿಗೆ ಬೀಳ್ತಿರೋ ಅರೆ ಬರೆ ಸಂಗೀತವೂ ಕರ್ಕಶ. ಸ್ಥಿತಿ ನರಕ. ಎಲ್ಲವನ್ನೂ ಕಿತ್ತು ಎಸೀಬೇಕು ಅನ್ನೋ ಹತಾಶೆ. ಜೊತೆಗಿದ್ದ ಮ್ಯೂಸಿಕ್ ಕಂಪೆನಿ ಕೈ ಬಿಡುತ್ತೆ. ಸಹಚರರು ಮುಖ ತಿರುಗಿಸ್ತಾರೆ. ಮಾಡೆಲ್ ಹೆಂಡ್ತಿ ಮತ್ತೊಬ್ನ ಹಿಂದೆ ಹೋಗ್ತಾಳೆ. ಯಶಸ್ಸು, ಕೀರ್ತಿ  ಎಲ್ಲಾ ಜರ್ರಂತ ಇಳಿದು ಹೋಗುತ್ತೆ. ನಿನ್ನೆ ತನಕ ಸ್ಟಾರ್ ಆಗಿದ್ದೋನು ಇವತ್ತು ಬೆಳಗಾಗೋದ್ರೊಳಗೆ ಕಿವಿ ಕೇಳದ ಡಿಜೆ. ದಿಕ್ಕೇ ತೋಚಲ್ಲ. ಅಕ್ಷರಶಃ ಹುಚ್ಚು ಹಿಡಿದವನಂತೆ ಬೆಟ್ಟವೊಂದರ ಮೇಲೆ ನಿಂತು ಕಿವಿಗಳೆರಡನ್ನು ಮುಚ್ಚಿ ಜೋರಾಗಿ ಚೀರುತ್ತಾನೆ, ಅಸಹಾಯಕನಾಗಿ...ನೋವಲ್ಲಿ ಬೆಂದು ಹಣ್ಣಾದವನಂತೆ.


ಏಕಾಂತ ಕೊಲ್ಲುತ್ತದೆ. ಶಬ್ದವಿಲ್ಲದ ಮೌನ ಹಿಂಡಿ ಹಿಪ್ಪೆ ಮಾಡುತ್ತದೆ. ಶಬ್ದವಿಲ್ಲದ ಜಗತ್ತು ಫ್ರ್ಯಾಂಕಿಗೆ ಸಾವು. ಬಿಟ್ಟೂ ಬಿಡದೇ ಕಾಡುವ ಮೌನವನ್ನು ಕೊಲ್ಲಲು, ಮುಕ್ತಿ ಪಡೆಯಲು ಕಿವಿಗಳೆರಡಕ್ಕೆ ಬ್ಯಾಂಡೇಜು ಸುತ್ತಿ ಮಲಗಿಬಿಡುತ್ತಾನೆ, ದಿನಗಟ್ಟಲೆ. ಕೋಣೆಯೊಳಗೆ ಬರೋ ಬೆಳಕು ಕಳೆದುಕೊಂಡಿರುವ ಅಸ್ಥಿತ್ವವನ್ನು ಪ್ರಶ್ನಿಸುತ್ತದೆ ಅಂತನ್ನಿಸಿ ಕಿಟಕಿಗಳನ್ನು ಪಿಲ್ಲೋಗಳಿಂದ ಮುಚ್ಚುತ್ತಾ ಹೋಗುತ್ತಾನೆ. ನಿಶ್ಯಬ್ದದೊಳಗೆ ಸಾಯುತ್ತಾ, ಕತ್ತಲೊಳಗೆ ಅರಳಲು ಬೆಳಕು ಹುಡುಕುತ್ತಾ ಬಿದ್ದು ಒದ್ದಾಡುತ್ತಾನೆ.


ನಾಲ್ಕಾರು ತಿಂಗಳು ಅಜ್ಞಾತವಾಗಿ ಕತ್ತಲ ಕೋಣೆಯಲ್ಲೇ ಬದುಕೋ ಫ್ರ್ಯಾಂಕಿ, ತಪಸ್ಸು ಮುಗಿಸಿದ ಸನ್ಯಾಸಿಯಂತೆ ಧಿಡೀರನೆ ಎದ್ದು ಬರುತ್ತಾನೆ. ನೀಟಾಗಿ ಶೇವ್ ಮಾಡ್ಕೋತಾನೆ. ತಿಂಗಳ ಮೌನ ಜೀವನೋತ್ಸಾಹವನ್ನು ತುಂಬಿರುತ್ತೆ. ಮತ್ತೆ ತನಗಿಷ್ಟ ಬಂದಂತೆ ಬದುಕೋದಿಕ್ಕೆ ನಿರ್ಧರಿಸುತ್ತಾನೆ ಫ್ರ್ಯಾಂಕಿ. ಆಗವ್ನು ಮಾಡೋ ಮೊತ್ತ ಮೊದಲ ಕೆಲ್ಸ-ಲಿಪ್ ರೀಡಿಂಗ್ ಕಲಿಕೆ. ಇಲ್ಲೇ ಅವನ ಬದುಕಿಗೊಂದು ತಿರುವು. ಕಲಿಸೋ ಹುಡುಗಿಗೂ ಕಿವಿ ಕೇಳಲ್ಲ. ತುಟಿಗಳ ನಡುವಿನ ಚಲನೆಯ ನಡುವೆ ಬದುಕು ಮತ್ತೆ ಚಲಿಸಲು ಪ್ರಾರಂಭಿಸುತ್ತೆ. ತುಟಿಗಳ ಚಲನೆಯೊಳಗೆ ಮೌನದೊಳಗಿನ ಶಬ್ದಗಳನ್ನು ಅರಿಯಲು ಶುರು ಮಾಡುತ್ತಾನೆ. ಅರಿವೇ ಗುರುವಾಗುತ್ತೆ. ತುಟಿ ಮತ್ತು ನಾಲಗೆ ಹುಟ್ಟಿಸುವ ಶಬ್ದದ ನಡುವೆ ಬತ್ತಿ ಹೋಗಿರೋ ಪ್ರೀತಿಗೆ ಮತ್ತೆ ಜೀವ ಬರುತ್ತೆ. ಕಿವಿ ಕೇಳದ ಆ ಹುಡುಗಿ ಸಂಗಾತಿಯಾಗಲು ಫ್ರ್ಯಾಂಕಿಗೆ ಕಾರಣಗಳೇ ಬೇಕಿಲ್ಲ.


ಕಿವುಡುತನದಿಂದ ಸಂಗೀತದ ಲಯವನ್ನ ಹಿಡಿಯಲು ಸಾಧ್ಯವಿಲ್ಲ, ಅದಕ್ಕೊಂದು ಕಿವಿ ಬೇಕೇ ಬೇಕು ಅನ್ನೋ ಭ್ರಮೆಯಲ್ಲೇ ದಿನ ದೂಡುತ್ತಿರುತ್ತಾನೆ ಫ್ರ್ಯಾಂಕಿ ವೈಲ್ಡ್. ಅದೊಂದು ಸಂಜೆ, ಸಂಗಾತಿ ಸ್ಪೀಕರಿನ ಪಕ್ಕ ಕೈ ಹಿಡಿದು ಶಬ್ದದ ರಿದಂನ ಕೇಳಲು ಕಿವಿಯಿಲ್ಲದಿದ್ದರೇನಾಯ್ತು, ಸ್ಪರ್ಶದ ಮೂಲಕ ರಿದಂನ ಹಿಡಿಯೋದು ಸುಲಭ ಅಂತ ತೋರಿಸಿಕೊಡುತ್ತಾಳೆ. ಡ್ಯಾನ್ಸರ್ಳ ಹೆಜ್ಜೆಯ ತಾಳವನ್ನು ಹಿಡಿ ಅಂತ ಹುರಿದುಂಬಿಸುತ್ತಾಳೆ. ಆಗಲೇ ಫ್ರ್ಯಾಂಕಿ ನಿಜವಾಗಿಯೂ ತೆರೆದುಕೊಳ್ಳೋದು. ತನಗೆ ಶಬ್ದದೊಂದಿಗೆ ದಾಂಪತ್ಯ ಸಾಧ್ಯವಿದೆ ಅಂತ ಮನವರಿಕೆಯಾಗೋದೇ ಸಿನಿಮಾದ ಅಪೂರ್ವ ಸನ್ನಿವೇಶ.




ಆಮೇಲಿನದು ವ್ಯಕ್ತಿಯೊಬ್ಬ ಎಲ್ಲಾ ಅಡೆತಡೆಗಳ ಮಧ್ಯೆ ಜೀನಿಯಸ್ ಹೇಗಾಗ್ತಾನೆ ಅನ್ನೋ ಕತೆ. ಸ್ಪೀಕರ್ಗಳ ಮೇಲೆ ಕಾಲಿಟ್ಟು ಶಬ್ದದ ಲಯ ಹಿಡಿಯುತ್ತಾ, ಫ್ರೀಕ್ವೆನ್ಸಿಗಳ ಜೊತೆ ಕುಂಟೆಬಿಲ್ಲೆ ಆಡುತ್ತಾ ಹೋಗುತ್ತಾನೆ. ಹೊಸ ಶಬ್ದ ತರಂಗಗಳು ಅರಳುತ್ತವೆ. ಕಿವಿ ಕೇಳದಿದ್ದರೂ ಸಂಗೀತ ನರನಾಡಿಗಳಲ್ಲಿ ಸಂಚರಿಸುತ್ತೆ. ಕಿವುಡ ಡಿಜೆ ಫ್ರ್ಯಾಂಕಿ ವೈಲ್ಡ್ ತನ್ನ ಸಂಗೀತದಿಂದಾಗಿ ಮತ್ತೆ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗ್ತಾನೆ. ಯುವ ಜನತೆಯ ಐಕಾನ್ ಆಗಿ ಬದ್ಲಾಗ್ತಾನೆ. ಹಾಗೇ ಯಶಸ್ಸಿನ ತುತ್ತ ತುದಿಯಲ್ಲಿರೋವಾಗ್ಲೇ ತನ್ನ ಗೆಳೆಯನಿಗೂ ಹೇಳದೇ ಫ್ರ್ಯಾಂಕಿ ಗೆಳತಿಯೊಂದಿಗೆ ಮರೆಯಾಗುತ್ತಾನೆ. ಬುದ್ಧನಂತೆ ಮೌನಿಯಾಗಿ ನಡೆಯುತ್ತಾನೆ. ಜ್ಞಾನೋದಯಕ್ಕೆ ಮುಖ ಮಾಡಿದಂತೆ.


ಯಶಸ್ಸು, ಕೀರ್ತಿ, ಹಣ ಎಲ್ಲವೂ ಮತ್ತೆ ಮತ್ತೇರಿಸಲು ರೆಡಿಯಾಗಿವೆ. ಆದರೆ ಫ್ರ್ಯಾಂಕಿ ಮಾತ್ರ ಇಲ್ಲ. ಕೊನೆಗೂ ಫ್ರ್ಯಾಂಕಿ ವೈಲ್ಡ್ಗೆ ಪ್ರತೀ ಕ್ಷಣವನ್ನು ತೀವ್ರವಾಗಿ ಅನುಭವಿಸ್ತಾ ಬದುಕೋದೇ ಮುಖ್ಯವಾಗುತ್ತದೆ. ಇವತ್ತಿನ ವರ್ತಮಾನದ ವೇಗ, ಜೊತೆಗೆ ಮೂಟೆಯಷ್ಟು ಗೊಂದಲದ ಗೂಡೊಳಗೆ ಬೇಯುತ್ತಿರೋ ನಾವೆಲ್ಲಾ ಒಂದಿಲ್ಲೊಂದು ಕ್ಷಣದಲ್ಲಿ ಫ್ರಾಂಕಿಯಂತೆಯೇ; ಶಬ್ದವನ್ನು ಗ್ರಹಿಸಿಯೂ ಕಿವುಡರಾಗುವ ಪರಮ ಶಾಪ ನಮ್ಮದು ಕೂಡ. ಸದ್ಯಕ್ಕೆ ನಮಗೆಲ್ಲಾ ಅರ್ಥವಾದರೂ, ನಾವೇ ಪಾತ್ರವಾಗದೇ ಉಳಿಯೋ ಸಿನಿಮಾ ನಮ್ಮ ನಿತ್ಯದ್ದು.


ಪೌಲ್ ಕೈಲ್ ಅನ್ನೋ ನಟ ಫ್ರ್ಯಾಂಕಿ ವೈಲ್ಡ್ ಪಾತ್ರವನ್ನ ಮೈಮೇಲೆ ಅವಾಹಿಸಿಕೊಂಡವನಂತೆ ಅಭಿನಯಿಸಿದ್ದಾನೆ. ಅವನ ನಗೆ, ಅತೀ ಚೆಲ್ಲುತನ, ಹೊಳೆಯೋ ಚಿನ್ನ ಹಲ್ಲು ಎಲ್ಲವನ್ನೂ ನೋಡಿಯೇ ಆನಂದಿಸಬೇಕು. ತಾನಿನ್ನು ಕಿವುಡ ಅಂತ ಗೊತ್ತಾಗಿ ಕ್ರಮೇಣ ಶಬ್ದ ಕಿವಿಯೊಳಗಿಳಿಯದೇ ಬರೀ ಮೌನ ಆವರಿಸೋ ಕ್ಷಣದಿಂದ ಅವನ ಅಭಿನಯ ದಂಗುಬಡಿಸುತ್ತದೆ. ಒಮ್ಮೆ ದಿಕ್ಕೆಟ್ಟವನಂತೆ, ಮತ್ತೊಮ್ಮೆ ಸಂತನಂತೆ, ಅರ್ಥವೇ ಆಗದ ಅಮೂರ್ತ ಕ್ಷಣದೊಳಗೆ ಬದುಕಿ ಕಂಗಾಲಾಗೋ ದೃಶ್ಯಗಳಲ್ಲಿ ನಮ್ಮ ಬದುಕಿನ ಘೋರ ಘಳಿಗೆಗಳೂ ಸೇರಿಕೊಂಡಿವೆಯೇನೋ ಅಂತನ್ನಿಸುತ್ತೆ. ಒಂದರೆಕ್ಷಣ ನಾವೇ ಫ್ಯ್ರಾಂಕಿಯೇನೋ ಅನ್ನೋವಷ್ಟು ತಲ್ಲಣ ಹುಟ್ಟಿಬಿಡುತ್ತೆ. ಪಿಲ್ಲೋಗಳಿಂದ ಮುಚ್ಚಿರೋ ರೂಮಿನ ಗೋಡೆಗಳಿಗೆ ಆತ ಸಿಟ್ಟು, ಅಸಹಾಯಕತೆಯಿಂದ ಹಾರಿ ಹಾರಿ ಒದೆಯುತ್ತಿದ್ದರೆ ಮನಸ್ಸು ಮರುಗುತ್ತದೆ. ಇಡೀ ಸಿನಿಮಾವನ್ನು, ಅದರ ಮುಖ್ಯ ಪಾತ್ರವನ್ನು ನಮ್ಮ ಬದುಕಿನ ಭಾಗವೇನೋ ಅಂತ ಮಾಡಿಬಿಡೋದು ಪೌಲ್ ಕೈಲ್. ಬಿಟ್ಟೂಬಿಡದೇ ಕಾಡುವಂತೆ ಮಾಡೋದು ಅವನೇ. ಯಶಸ್ಸಿನ ಅಮಲು, ಸೋಲಿನ ಘೋರ ಕ್ಷಣಗಳು, ಏಕಾಂತದೊಳಗೆ ಸತ್ತು ಮತ್ತೆ ಹುಟ್ಟುವಲ್ಲೆಲ್ಲಾ ಪೌಲ್ ಒಂದಿಂಚೂ ಅವನೆಡೆಯಿಂದ ದೃಷ್ಟಿ ಹಾಯಿಸದಂತೆ ಅಭಿನಯಿಸಿದ್ದಾನೆ.


ಸಿನಿಮಾದ ಮಧ್ಯೆ ಮಧ್ಯೆ ಡಿಜೆಗಳು, ಫ್ರ್ಯಾಂಕಿ ವೈಲ್ಡ್ ಜೊತೆ ಒಡನಾಡಿದೋರ ಬಿಡಿ ಬಿಡಿ ಸಂದರ್ಶನದ ತುಣುಕುಗಳು ಸಿನಿಮಾಕ್ಕೆ ದೊಡ್ಡ ತಡೆ. ಫ್ರ್ಯಾಂಕಿಯಾಗಿರೋ ಪೌಲ್ ಕೈಲ್ ಮಾಡಿರೋ ಮೋಡಿಯದು. ಫ್ರ್ಯಾಂಕಿಯ ಬದುಕಿನ ಕಾಲ ಘಟ್ಟ ಮತ್ತು ಭಾವನಾತ್ಮಕತೆಯ ಗ್ರಾಫನ್ನು ಚಿತ್ರಕತೆಯಲ್ಲಿ ಜಾಣ್ಮೆಯಿಂದ ಹೆಣಿಯುತ್ತಾ ಹೋಗುತ್ತಾನೆ ನಿರ್ದೇಶಕ-ಮೈಕೆಲ್ ಡೌಸ್. ನೋಡಲೇ ಬೇಕಾದ ಸಿನಿಮಾವಿದು.


ಇದೇ ಸಿನಿಮಾವನ್ನು ಇತ್ತೀಚೆಗೆ ನೀರವ್ ಘೋಷ್ "ಸೌಂಡ್ ಟ್ರ್ಯಾಕ್" ಹೆಸರಲ್ಲಿ ಹಿಂದಿಗೆ ಭಟ್ಟಿ ಇಳಿಸಿದ್ದಾರೆ.


(ಕುಡಿತ, ಡ್ರಗ್ಸ್ ಮತ್ತು ಬೈಗುಳದ ಭಾಷೆ ಬಳಕೆಯಾಗಿರೋದ್ರಿಂದ ಮಕ್ಕಳೊಂದಿಗೆ ಕೂತು ಈ ಸಿನಿಮಾ ದಯವಿಟ್ಟು ನೋಡ್ಬೇಡಿ.)