ಶುಕ್ರವಾರ, ಜೂನ್ 27, 2008

ಒಂದು ವಿಚಿತ್ರ ಕಥೆ

(ಓ ಹೆನ್ರಿ ಕಥೆಗಳನ್ನು ಓದುವ ಸುಖವೇ ಬೇರೆ. ಆತನ ಪ್ರತೀ ಕಥೆಯ ಕೊನೆಗಿರುವ ತಿರುವು ಓದುಗನಲ್ಲೊಂದು ಮಿಂಚು ಹುಟ್ಟಿಸುತ್ತದೆ. "A Strange Story" ಅನ್ನುವ ಆತನ ಪುಟ್ಟ ಕಥೆಯನ್ನು ಓದಿ ಮುಗಿಸಿದಾಗ, ಅದನ್ನು ಹಾಗೆ ಸುಮ್ಮನೆ ಕನ್ನಡಕ್ಕೆ ಅನುವಾದಿಸೋಣ ಅನ್ನಿಸಿತು)

ಆಸ್ಟಿನ್ ಉತ್ತರ ಭಾಗದಲ್ಲಿ ಸ್ಮಾಥರ್ಸ್ ಕುಟುಂಬ ವಾಸಿಸುತ್ತಿತ್ತು. ಜಾನ್ ಸ್ಮಾಥರ್ಸ್, ಅವನ ಹೆಂಡತಿ, ಐದು ವರ್ಷದ ಪುಟ್ಟ ಮಗಳು ಇದು ಅವರ ಸುಖೀ ಕುಟುಂಬ.

ಒಂದು ರಾತ್ರಿ ಊಟಕ್ಕೆ ಕುಳಿತಿದ್ದಾಗ ಮಗಳಿಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಜಾನ್ ಸ್ಮಾಥರ್ಸ್ ಔಷಧಿ ತರಲು ಪೇಟೆಗೆ ಹೋದ.

ಆತ ಹಿಂದಿರುಗಿ ಬರಲಿಲ್ಲ.

ಪುಟ್ಟ ಹುಡುಗಿ ಗುಣಮುಖಳಾದಳು. ಗಂಡನ ಕಣ್ಮರೆಯಿಂದ ಹೆಂಡತಿ ಬಹಳ ದುಃಖಿಸಿದಳು. ಕೊನೆಗೆ ಮರು ಮದುವೆಯಾಗಿ ಸ್ಯಾನ್ ಆಂಟೋನಿಯೋಗೆ ಪ್ರಯಾಣ ಬೆಳೆಸಿದಳು. ಆ ಪುಟ್ಟ ಹುಡುಗಿ ಬೆಳೆದು ನಿಂತಳು.

ಬೆಳೆದು ನಿಂತ ಪುಟ್ಟ ಹುಡುಗಿಗೆ ಸಹ ಮದುವೆಯಾಯಿತು. ಕೆಲವು ವರ್ಷ ಕಳೆಯಿತು. ಈಗವಳು ಐದು ವರ್ಷದ ಮಗಳ ತಾಯಿ. ತನ್ನ ತಂದೆ ಔಷಧಿ ತರಲು ಹೋಗಿ ತಿರುಗಿ ಬಾರದ ಆ ಮನೆಯಲ್ಲೇ ಅವಳೀಗ ವಾಸಿಸುತ್ತಿದ್ದಳು.

ಒಂದು ರಾತ್ರಿ ಅವಳ ಮಗಳು ಪ್ಯಾನ್ಸಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿತು. ಜಾನ್ ಸ್ಮಾಥರ್ಸ್ ಕಾಣೆಯಾಗಿದ್ದ ದಿನವೇ ಇದೆಲ್ಲ ನಡೆದದ್ದು ಆಕಸ್ಮಿಕವೋ, ಪೂರ್ವವಿರ್ಧರಿತವೋ ಗೊತ್ತಿಲ್ಲ.

"ನಾನು ಪೇಟೆಗೆ ಹೋಗಿ ಮಗಳಿಗೆ ಔಷಧಿ ತರುತ್ತೇನೆ" ಎಂದ ಗಂಡ.

"ಪ್ಲೀಸ್ ಬೇಡ, ನೀನೂ ಕೂಡಾ ಹಿಂತಿರುಗಿ ಬರಲು ಮರೆತು ಹೋಗುತ್ತೀಯಾ ನನ್ನಪ್ಪನಂತೆ" ಆಕೆ ಕಣ್ಣೀರಿಟ್ಟಳು.

ಹೆಂಡತಿಯ ಗೋಳು ಕೇಳಲಾಗದೆ ಗಂಡ ಮನೆಯಲ್ಲೇ ಉಳಿದ. ಆದರೆ ಸ್ವಲ್ಪ ಸಮಯದಲ್ಲೇ ಪ್ಯಾನ್ಸಿಯ ಆರೋಗ್ಯ ಹದಗೆಡಲು ಶುರುವಾಯ್ತು. ಗಂಡ ಸ್ಮಿತ್ ಔಷಧಿ ತರಲು ಹೋಗುವುದಾಗಿ ಮತ್ತೆ ಎದ್ದ. ಆದರೆ ಆಕೆ ಬಿಡಲೇ ಇಲ್ಲ.

ಆಗ ಅಕಸ್ಮಾತ್ತಾಗಿ ಬಾಗಿಲು ತೆರೆದುಕೊಂಡಿತು. ಗೂನು ಬೆನ್ನಿನ, ಉದ್ದನೆಯ ಬಿಳಿ ಕೂದಲಿನ ಮುದುಕ ಕೋಣೆ ಪ್ರವೇಶಿಸಿದ. ಅವರು ಗುರುತಿಸುವ ಮೊದಲೇ ಪ್ಯಾನ್ಸಿ ಆತನನ್ನು ಗುರುತಿಸಿದಳು. "ಹೇ...ಅಜ್ಜ ಬಂದ್ರು" ಅಂತ ಖುಷಿ ಖುಷಿಯಾದಳು.

ಆ ಮುದುಕ ಕಿಸೆಯಿಂದ ಔಷಧಿಯ ಬಾಟ್ಲಿ ಹೊರತೆಗೆದ. ಪ್ಯಾನ್ಸಿಗೆ ಚಮಚ ಪೂರ್ತಿ ಕುಡಿಸಿದ. ಆಕೆ ಕೂಡಲೇ ಚೇತರಿಸಿಕೊಂಡಳು.

"ನಾನು ಬರೋದು ಸ್ವಲ್ಪ ತಡವಾಯ್ತು. ಸ್ಟ್ರೀಟ್ ಕಾರಿಗಾಗಿ ಕಾಯುತ್ತಿದ್ದೆ" ಎಂದು ನಿಟ್ಟುಸಿರು ಬಿಟ್ಟ ಜಾನ್ ಸ್ಮಾಥರ್ಸ್.

"ಸಿಗರೇಟಿನಂಚಿನಲ್ಲಿ ಕರಗಿದ ವಿಷಾದ ರಾತ್ರಿ"

ತ ಸಿಗರೇಟಿನ ತುದಿಗೆ ಬೆಂಕಿ ಹಚ್ಚಿದ್ದ. ಕಣ್ಣಲ್ಲೊಂದು ಮರುಭೂಮಿಯಿತ್ತು. ಓಯಸ್ಸಿಸ್ಸನ್ನು ಹುಡುಕಿ ಸುಸ್ತಾದವನ ದಣಿವಿತ್ತು. ಹಾಲ್ನ ಹೊರಗೆ ಮಳೆ ಸುರಿಯಲು ಶುರುವಿಟ್ಟಿತು. ಆದರೆ ತನ್ನ ಬದುಕಿನಲ್ಲಿ ಅಂತಹದೊಂದು ಮಳೆ ಬರಲೇ ಇಲ್ಲವಲ್ಲ ಎಂದುಕೊಂಡ.

ಎಲ್ಲಾ ವಿಷಾದಗಳು ಸಿಗರೇಟಿನ ತುದಿಗೆ ಸಿಕ್ಕು ಬೂದಿಯಾಗುತ್ತಿತ್ತು. ಆತ ತುಂಬಾ ಇಷ್ಟಪಟ್ಟಿದ್ದ ಅಮೃತಾ ಪ್ರೀತಂ ಬರೆದ ಸಾಲು ನೆನಪಾಯಿತು--
ಒಂದು ನೋವಿತ್ತು
ಸದ್ದಿಲ್ಲದೆ ನಾನದನು ಸಿಗರೇಟಿನ ಹಾಗೆ
ಸೇದಿಬಿಟ್ಟೆ
ಒಂದಷ್ಟು ಕವಿತೆಗಳು ಮಾತ್ರ ಉಳಿದಿವೆ
ಸಿಗರೇಟಿನಿಂದ ಹೊಮ್ಮಿದ ಬೂದಿಯನು
ಕೂಡಿಡುವಂತೆ ಕೂಡಿಸಿಟ್ಟಿಹೆನು ನಾನು


ನನ್ನಲ್ಲಿ ಎಷ್ಟು ವಿಷಾದಗಳಿವೆ? ನಾಲ್ಕೋ, ಐದೋ? ಡಜನ್ಗಾಗುವಷ್ಟೋ? ಎಷ್ಟು ಸಿಗರೇಟು ಸೇದಬೇಕು? ಮಳೆಯ ರಭಸ ಹೆಚ್ಚಾಯಿತು. ಸಿಗರೇಟು ಅರ್ಧ ಸುಟ್ಟಿತ್ತು. ರೈಲಿನ ಎಂಜಿನಿನಿಂದ ದುಸಮುಸ ಎಂದು ಆಕಾಶ ಸೇರುವ ಕಪ್ಪು-ಬಿಳಿ ಹೊಗೆ ಹಾಗಿತ್ತು ಅವನ ಬಾಯಿ. ಮನಸ್ಸಿಗೆ ಬೆಂಕಿ ಬಿದ್ದಿತ್ತು. ಬಯಕೆಗಳಿಗೆ, ಭರವಸೆಗಳಿಗೆ ಬಿಂಕಿ ಬಿದ್ದಿತ್ತು. ಮಳೆಯ ರಭಸಕ್ಕೆ ಶಟರ್ು ತೋಯ್ದು ತೊಟ್ಟಿಕ್ಕುತ್ತಿತ್ತು. ಕಾಲ ಬುಡದಲ್ಲಿ ಕೆಸರು. 'ಶೂ'ವಿನ ತುದಿ ಬುಡ ಎಲ್ಲವೂ ಕೆಂಪು,ಕೆಂಪು.

ಉದ್ದನೆಯ ದಾರಿ ಕಂಡಿತು. ಸುಮ್ಮನೆ ನಡೆಯಬೇಕು. ಯಾವುದೇ ಉದ್ದೇಶಗಳಿಲ್ಲದೆ, ಭರವಸೆಗಳಿಲ್ಲದೆ ಎಂದುಕೊಂಡ. ಗಾಳಿ ಬೀಸಲು ಪ್ರಾರಂಭವಾಯಿತು. ಮುನಿಸಿಕೊಂಡ ಹುಡುಗಿಯಂತೆ ಸರಸರನೆ ತರಗಲೆಗಳನ್ನೆಲ್ಲಾ ಎತ್ತಿ ಒಯ್ಯುತ್ತಿತ್ತು. ಈತನನ್ನೂ ಎಳೆದುಕೊಂಡು ಹೋಗಲು ಹುನ್ನಾರ ಮಾಡಿದಂತಿತ್ತು. 'ಬಾ ನನ್ನೊಂದಿಗೆ.ಎಲ್ಲವನ್ನೂ ಹೇಳಿ ನಿರಾಳವಾಗು. ಆಗೋದೆಲ್ಲಾ ಒಳ್ಳೇದಕ್ಕೆ' ಎನ್ನುವಂತಿತ್ತು ಅದರ ಧಾಟಿ. ಆದರೆ ಆತನಿಗೆ ಮಾತ್ರ ಗೊತ್ತು-ಪ್ರವಾಹದಲ್ಲಿ ಈಜುವ ಮಜವೇ ಬೇರೆ. ಧೈರ್ಯ ಒಂದೇ ಸಾಲದು. ಸ್ಥಿಮಿತವೂ ಇರಬೇಕು. ಉಳಿದವರಿಗೆಲ್ಲಾ ಗುರಿ ತಲುಪುವ ಧಾವಂತ. ಆದರೆ ತನಗೆ? ಗುರಿಯ ಆಸುಪಾಸಿನಲ್ಲಿದ್ದರೂ ಮತ್ತೆ ತಿರುಗಿ, ಮತ್ತೊಂದು ಗುರಿಯ ಗಮ್ಯದತ್ತ ನಡೆಯುವುದು ಅಭ್ಯಾಸ. ಅದು ಅಭ್ಯಾಸವೋ, ಅಭಾಸವೋ?ಆತನಿಗಿನ್ನೂ ಸ್ಪಷ್ಟವಿಲ್ಲ. ಕಣ್ಣಲ್ಲಿದ್ದ ಕನಸು ಕೈಗೂಡುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಈಡೇರುತ್ತದೆ ಎನ್ನುವ ಚಂಚಲತೆಯೊಂದಿಗೇ ಬದುಕಿದವನು ತಾನು. ಕಂಡ ಕನಸು ಹಾದಿಯಲ್ಲಿ ಸಾಗುವುದು ನಿತ್ಯವೂ ತನಗೆ ಪೂಜೆಯಿದ್ದಂತೆ.

ಇಂತಹ ಚಿತ್ರ-ವಿಚಿತ್ರ ಚದುರಿದ ಚಿತ್ರಗಳು ಅರೆಕ್ಷಣ ಕಣ್ಣಮುಂದೆ ಹಾದು ಹೋದವು. ತರ್ಕ ಏನೇ ಇರಬಹುದು. ಬುದ್ಧಿ ಮಾತ್ರ ಯಾವುದನ್ನೂ ಅಷ್ಟು ಬೇಗ ಒಪ್ಪಿಕೊಳ್ಳುವುದಿಲ್ಲ. ಬೇವರ್ಸಿ ಬದುಕು. ಅನುಭವ ತಗೊಳಯ್ಯ ಅಂತ್ಹೇಳಿ ಕೈ ತೊಳೆದುಕೊಳ್ಳುತ್ತೆ.

ಮಳೆ ರುದ್ರವಾಗುತ್ತಾ ಹೋಯಿತು. ಆಗಸದಲ್ಲಿ ಗುಡುಗು-ಸಿಡಿಲು. ಆದರೂ ಹೆಜ್ಜೆಗಳು ದೃಢವಾಗುತ್ತಿದ್ದವು. ನಡೆದ ಹೆಜ್ಜೆ ಗುರುತುಗಳಲ್ಲಿ ಮಳೆ ನೀರು ತುಂಬಿಕೊಳ್ಳುತ್ತಿತ್ತು. ಮುಂದೆ ನಡೆದಂತೆಲ್ಲಾ ಹಿಂದೆ ನಡೆದು ಬಂದ ಹೆಜ್ಜೆಗಳೇ ಕಾಣುತ್ತಿಲ್ಲ. ಹತ್ತೋ-ಹನ್ನೆರಡು ಹೆಜ್ಜೆ ಮುಂದಿಟ್ಟಿರಬೇಕು. ಹಾಲ್ನಲ್ಲಿ ಮಂಗಳವಾದ್ಯ ಮೊಳಗುವುದು ಕೇಳಿಸಿತು. ಅಲ್ಲೊಂದು ಸಂಭ್ರಮದ ಅಲೆ ಹೊರಬೀಳುತ್ತಿತ್ತು.

ಆತನಿಗೆ ತಿರುಗಿ ನೋಡಬೇಕೆನಿಸಲಿಲ್ಲ. ಅಕ್ಷತೆ ಕಾಳು ಕೈಯಿಂದ ಜಾರಿಬಿಟ್ಟಿತು. ಗಾಢ ನಿಟ್ಟುಸಿರೊಂದು ಹೊರಬಿತ್ತು. ಆದರೂ ಆತ ನಡೆಯುತ್ತಲೇ ಇದ್ದ. ಕೊನೆ ತಿರುವು ಕಾಣುವವರೆಗೂ....

ಗುರುವಾರ, ಜೂನ್ 19, 2008

ಯುವರ್ ಆನರ್....


ಸಿಎಸ್ಪಿ ಮತ್ತೆ ಕಿರುತೆರೆಯ ಕಟಕಟೆಗೆ ಬಂದು ನಿಂತಿದ್ದಾರೆ. ಇನ್ನೇನಿದ್ದರೂ ಅವ್ರ ವಾದ ಕೇಳೋದಷ್ಟೇ ನಮ್ಮ ಕೆಲಸ. ಅವ್ರಿಗಂತೂ "ಮ"ಕಾರದ ಬಗ್ಗೆ ಮರೆಯದ ಮಮಕಾರ. ಅದಕ್ಕವರು ಈ ಸಲ ಎರಡೆರಡು ಬಾರಿ "ಮುಕ್ತ..ಮುಕ್ತ" ಎನ್ನುತ್ತಿದ್ದಾರೆ.


ಮಧ್ಯಮ ವರ್ಗದ ಬವಣೆಯ ಬದುಕು, ಸಂಘರ್ಷ ಮತ್ತೆ ತೆರೆದುಕೊಂಡಿದೆ. ಒಂದರ್ಥದಲ್ಲಿ ಇದು ನಮಗೆಲ್ಲಾ ಖುಷಿಯ ವಿಷಯ, ಮೈ ಲಾರ್ಡ್ . ಒಂದು ಕುಟುಂಬವನ್ನು ಮೂಲವಾಗಿಟ್ಟುಕೊಂಡು ವ್ಯವಸ್ಥೆಯೊಳಗೆ ಇಣುಕಿ ನೋಡುವ ಟಿಎನ್ಎಸ್ ಒಳನೋಟ ನಮ್ಮನ್ನೆಲ್ಲಾ ಚಿಂತನೆಗೆ ಹಚ್ಚುತ್ತದೆ. ಮಾಯಾಮೃಗ, ಮನ್ವಂತರ, ಮುಕ್ತ ಇದಕ್ಕೆ ಸಾಕ್ಷಿ.

"ಮುಕ್ತ"ದಲ್ಲಿ ಅವ್ರ ಪದ್ಯದ ತೆರಪಿಯನ್ನು ಯಾರಾದರೂ ಮರೆಯುವುದುಂಟಾ, ಯುವರ್ ಆನರ್. ಯಾವುದೇ ಕೋರ್ಟ್ ಸೀನ್ ಬರಲಿ, ಅಲ್ಲೊಂದು ಚೆಂದದ ಕನ್ನಡ ಪದ್ಯದ ಸಾಲು ಇರಲೇಬೇಕು. ಇದರಿಂದಾಗಿ ಕೆಲವಾರು ಕವಿತೆಗಳು ಜನಮನ ಸೇರಿದವು. ಇದನ್ನೆಲ್ಲಾ ಸ್ವಾಗತಿಸುತ್ತಾ ನನ್ನದೊಂದು ತಕರಾರು, ಯುವರ್ ಆನರ್.

ಪಾಯಿಂಟ್ ನಂ1.

ಟಿಎನ್ಎಸ್ ಧಾರಾವಾಹಿಗಳಲ್ಲಿ ಮುಖ್ಯಪಾತ್ರದ ಅಲಿಖಿತ ಡೈಲಾಗ್ ಯಾವತ್ತಿಗೂ ಒಂದೇ-"ಪ್ಲೀಸ್, ನನಗೆ 'ಹಿಂಸೆ' ಆಗುತ್ತೆ". ಮನ್ವಂತರದ ಮಂದಾಕಿನಿ, ಮುಕ್ತದ ನಂದಿನಿ ಎಲ್ಲರ ಹೋಳು ಒಂದೇ. ಇದೊಂಥರಾ ಅಂಟು ರೋಗ. "ಭೂಮಿಕಾ" ನಿರ್ಮಾಣ ಮಾಡುತ್ತಿರುವ ಇತರ ಧಾರಾವಾಹಿಗಳ ಹಣೆಬಹವೂ ಇದೇ. ಮಧ್ಯಮ ವರ್ಗಕ್ಕೂ, ಹಿಂಸೆ ಎಂಬ ಎರಡಕ್ಷರದ ಭಯಂಕರ ಶಬ್ದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ, ಯುವರ್ ಆನರ್?

ಪಾಯಿಂಟ್ ನಂ2.

ಧಾರಾವಾಹಿಗಳನ್ನು 400 ಎಪಿಸೋಡ್ ಒಳಗೆ ಮುಗಿಸೋದು ಸೀತಾರಾಂ ಪಾಲಿಸಿ. "ಮುಕ್ತ" ಇದಕ್ಕೆ ಅಪವಾದ. TRP, ಚಾನೆಲ್ ಒತ್ತಡಕ್ಕೆ ಸೀತಾರಾಂ ಬಲಿಯಾದರು. ವೀಕ್ಷಕರೂ ಟಿಎನ್ಎಸ್ ಕೂಡಾ ಚ್ಯೂಯಿಂಗಮ್ ನಿರ್ದೇಶಕರ ಸಾಲಿಗೆ ಸೇರಿಹೋದರಾ? ಅಂತ ಅನುಮಾನ ಪಟ್ಟುಕೊಂಡರು. ಈ ಬಾರಿ ಪ್ರಸಾರವಾಗುತ್ತಿರುವುದು "ಮುಕ್ತ..ಮುಕ್ತ"!!. ಕೂಡಿಸಿದರೂ, ಗುಣಿಸಿದರೂ ಮುಗಿದು ಹೋದ ಮುಕ್ತಕ್ಕಿಂತ ಒಂದು ಕೈ ಹೆಚ್ಚೇ ಆಗುವ ಸಾಧ್ಯತೆಗಳಿವೆ!!

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು "ಮುಕ್ತ..ಮುಕ್ತ" ಧಾರಾವಾಹಿಯನ್ನು ಬೋರ್ ಹೊಡೆಸದಂತೆ ನಿರ್ದೇಶಿಸಲು ಹಾಗೂ ಹಿಂಸೆಯ 'ತಲೆಹರಟೆ'ಯನ್ನು ಕಡಿಮೆಗೊಳಿಸಲು ಸಿಎಸ್ಪಿಗೆ ತಾಕೀತು ಮಾಡಬೇಕಾಗಿ ಮಾಡಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ, ಯುವರ್ ಆನರ್!!

ಕೊನೆ ಹನಿ:

"ಮುಕ್ತ..ಮುಕ್ತ", ಮುಕ್ತ ಧಾರಾವಾಹಿಯ ಸೀಕ್ವೆಲ್. ಟಿಎನ್ಎಸ್ ನಿರ್ದೇಶನವಿರುವುದರಿಂದ ವೀಕ್ಷಕ ಮಹಾಶಯ ಬಚಾವ್. ಇದರಿಂದ ಸ್ಫೂರ್ತಿ ಪಡೆದು, ಉಳಿದವರೆಲ್ಲಾ ಸೀಕ್ವೆಲ್ಗಳಿಗೆ ಕೈ ಹಾಕಿದರೆ ವೀಕ್ಷಕರ ಮಂತ್ರ-ತಂತ್ರಗಳಿಗಂತೂ ಅಗ್ನಿ ಪರೀಕ್ಷೆ ಗ್ಯಾರೆಂಟಿ!

ಬುಧವಾರ, ಜೂನ್ 18, 2008

ಕಾಮನಬಿಲ್ಲಿನ ಕಣ್ಣುಗಳಿಗೆ



ಯಾಕೋ ನಿನ್ನ
ಕಣ್ಣುಗಳು
ಹೊಸ ಕಾಮನಬಿಲ್ಲನ್ನು
ಹುಟ್ಟಿಸುತ್ತವೆ
ನನಗೊಂದು
ಹೊಸ ದಿಗಂತ
ತೆರೆದುಕೊಳ್ಳುತ್ತದೆ
ಮನಸ್ಸು ಹಕ್ಕಿಯಾಗಿ
ಕಾಮನಬಿಲ್ಲನ್ನು
ಚುಂಬಿಸಿ
ಪುಳಕಗೊಳ್ಳುತ್ತದೆ

ದಿನವೂ
ಸಿಗುತ್ತಿರು ಹೀಗೆ
ಕಾಮನಬಿಲ್ಲಿನ
ಮೆರವಣಿಗೆಯಲ್ಲಿ
ಪ್ರತಿ ನಿತ್ಯ
ಕಳೆದು ಹೋಗುವ
ಪುಣ್ಯವನ್ನು ನನಗೆ
ದಯಪಾಲಿಸು
!

ಕಾಡೋ ಬೆಳದಿಂಗಳ ತಂಪು!

(ಕಳೆದ ವಾರವಷ್ಟೇ "ಕಾಡ ಬೆಳದಿಂಗಳು" ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಪ್ರಶಸ್ತಿ ಸಿಕ್ಕಿದ್ದು ಕನ್ನಡಕ್ಕೆ ಸಂಭ್ರಮದ ವಿಷಯ. ಕಳೆದ ವರ್ಷ ಮೂಡುಬಿದಿರೆಯಲ್ಲಿ "ಕಾಡಬೆಳದಿಂಗಳು" ಸಿನಿಮಾ ಪ್ರದರ್ಶನ ನೋಡಿ ಬಂದು, ಖುಷಿಯಿಂದ ಸಿನಿಮಾ ಕುರಿತು ಬರಹವೊಂದನ್ನು ಬರೆದಿದ್ದೆ. ಅದೇ ಬರಹ ಪ್ರಶಸ್ತಿ ಬಂದ ಸಂತಸದಲ್ಲಿ- ಕಾರ್ತಿಕ್ )


ಗರ ಬಿಡಲು ಒಲ್ಲದ ಮಕ್ಕಳು, ಹಳ್ಳಿಯೇ ಮೂಲ ಬೇರು, ನೆಮ್ಮದಿಯ ಬೀಡು ಎಂದು ನಂಬಿಕೊಂಡ ತಂದೆ-ತಾಯಿ, ಅರ್ಥ ಕಳೆದುಕೊಳ್ಳುತ್ತಿರುವ ಸಂಬಂಧಗಳು, ಉರುಳಾಗುವ ನಂಬಿಕೆಗಳು. "ಕಾಡ ಬೆಳದಿಂಗಳು" ಸಿನಿಮಾ ನೋಡಿ ಹೊರಬಂದ ಮೇಲೂ ಕಾಡುವುದು ಹೀಗೆ.

ಹೆಸರಿಗೆ ತಕ್ಕಂತೆ ಅದು 'ಪುಟ್ಟ'ಳ್ಳಿ. ಅಲ್ಲಿ ಸದಾಶಿವ(ಲೋಕನಾಥ್) ಮೇಷ್ಟ್ರು. ಅವರಿಗೆ ಚಂದ್ರಶೇಖರಯ್ಯ(ದತ್ತಣ್ಣ) ಆತ್ಮೀಯ. ಇಬ್ಬರೂ ಮಕ್ಕಳಿಂದ ಮರುಗಿದವರೇ. ಅವರ ಹಿಡಿ ಪ್ರೀತಿಗೆ, ಸಾಂತ್ವನಕ್ಕೆ ಇಷ್ಟಪಟ್ಟವರು. ಆದರೆ ಅದ್ಯಾವುದೂ ಬಾಳ ಮುಸ್ಸಂಜೆಯಲ್ಲಿ ಬೆಳದಿಂಗಳಾಗುವುದಿಲ್ಲ. ಕಾಡುವುದು ಮಾತ್ರ ಒಂಟಿತನ. ಬಾಂಬ್ ಬ್ಲಾಸ್ಟ್ನಲ್ಲಿ ಮಗನನ್ನು ಕಳೆದುಕೊಳ್ಳುವ ಸದಾಶಿವಯ್ಯ, ಮಗನಿದ್ದರೂ ಸತ್ತಂತಿರುವ ಚಂದ್ರಶೇಖರಯ್ಯ ಇಬ್ಬರ ಪರಿಸ್ಥಿತಿಯೂ ಒಂದೇ.

ಪುಟ್ಟಳ್ಳಿಯ ಡಾಕ್ಯುಮೆಂಟರಿ ಮಾಡಲು ಬೆಂಗಳೂರಿನಿಂದ ಬರುವ ಟಿವಿ ರಿಪೋರ್ಟರ್ ಸುದೀಷ್ಣೆ(ಅನನ್ಯಾ ಕಾಸರವಳ್ಳಿ)ಯೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಹಳ್ಳಿ ಜನರೊಂದಿಗೆ ಬೆರೆಯುತ್ತಾ ಆಕೆಯೆದುರು ಹಳ್ಳಿಯ ಸಮಸ್ಯೆಗಳ ವಿಶ್ವರೂಪ ತೆರೆದುಕೊಳ್ಳುತ್ತದೆ. ಇಲ್ಲಿ ಬಹಳ ಮುಖ್ಯವಾಗಿ ಚರ್ಚಿತವಾಗಿರುವುದು ಸುದ್ದಿಯ ನೈಜತೆಯನ್ನು ತಮಗೆ ಬೇಕಾದಂತೆ ತಿರುಚುವ ಇವತ್ತಿನ ಟಿವಿ ಮಾಧ್ಯಮಗಳ ಎಡಬಿಡಂಗಿತನ. ತನ್ನ ಸ್ವಂತಿಕೆಗೆ ಅಂಟಿಕೊಳ್ಳಬೇಕೋ ಅಥವಾ ಟಿವಿ ಆಫೀಸಿನ ಮರ್ಜಿಗೆ ಬಲಿ ಬೀಳಬೇಕೋ ಎಂದು ಒದ್ದಾಡುವ ಸುದೀಷ್ಣೆಯ ತಾಕಲಾಟ ಇವತ್ತಿನ ಮಾಧ್ಯಮ ಮಂದಿಯ ನಾಡಿಮಿಡಿತ ಹಿಡಿವ ಹಂಬಲ. ನಾವು ಹೇಳಿದ್ದೇ ಸತ್ಯ ಎಂದು ಡಂಗುರ ಹೊಡೆವ ಟಿವಿ ಚಾನೆಲ್ಗಳ ಉದ್ಧಟತನ ಚಿತ್ರದಲ್ಲಿ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ಜಾಗತೀಕರಣದ ಈ ಕಾಲಘಟ್ಟದಲ್ಲಿ ಹಳ್ಳಿ, ನಗರಗಳ ನಡುವೆ ಹೆಚ್ಚುತ್ತಿರುವ ಅಂತರ, ಅದಕ್ಕೆ ಬಲಿಯಾಗುವ ಜನಾಂಗದ ಕಥೆಯನ್ನು "ಕಾಡ ಬೆಳದಿಂಗಳು" ಪ್ರಸ್ತುತಪಡಿಸುವ ರೀತಿ ಅನನ್ಯ. ಸಂಬಂಧಗಳಿಗಿಂತ ಸ್ವಾರ್ಥ ಮುಖ್ಯ ಹಾಗೂ ಅನಿವಾರ್ಯವಾಗುವುದು ಇಡೀ ಚಿತ್ರದಲ್ಲಿ ಕಂಡುಬರುವ ಅಂಶ.



ಇಂತಹದೊಂದು ಸೂಕ್ಷ್ಮ ಕಥೆ ಬರೆದವರು ಪತ್ರಕರ್ತ ಜೋಗಿ. ಅಂಕಣವೊಂದರಲ್ಲಿ ಪ್ರಕಟವಾಗಿದ್ದ ಅವರ "ಚಂದ್ರಹಾಸ,32" ಕಥೆಯ ಎಳೆಯನ್ನು ಚಿತ್ರಕ್ಕೆ ಬಳಸಲಾಗಿದೆ. ಚಿತ್ರಕಥೆ ಮತ್ತು ಸಂಭಾಷಣೆಗೆ ಜೋಗಿ ಜೊತೆ ಪತ್ರಕರ್ತ ಉದಯ ಮರಕಿಣಿ ಸೇರಿಕೊಂಡಿದ್ದಾರೆ. ಇಡೀ ಚಿತ್ರವನ್ನು ಎತ್ತಿ ಹಿಡಿಯುವುದೇ ಈ ಮೂರು ಅಂಶಗಳು. ಅದರಲ್ಲೂ ಬಿಗಿ ಚಿತ್ರಕಥೆ ಸಿನಿಮಾಕ್ಕೊಂದು ಓಘವನ್ನು ನೀಡುತ್ತದೆ. ಸದಾಶಿವಯ್ಯ ಮಗ ಸತ್ತ ಸಂದರ್ಭದಲ್ಲಿ ಮಣ್ಣು ಕಿತ್ತು ಹೋಗಿರುವ ಬೇರನ್ನು ದಿಟ್ಟಿಸುವುದು, ಸುದೀಷ್ಣೆ ಕೆಲಸ ಬಿಡುತ್ತೇನೆ ಎನ್ನುವಾಗ ಜೋರಾಗಿ ಬೀಸುವ ಗಾಳಿ ಇಂತಹ ಅನೇಕ ಸಾಂಕೇತಿಕ ಸೂಕ್ಷ್ಮಗಳು ಚಿತ್ರಕಥೆಯಲ್ಲಿವೆ. "ಅವ್ರ ಪಾಲಿಗೆ ಹಳ್ಳಿ ಸತ್ತಿದೆ. ಹಳ್ಳಿ ಪಾಲಿಗೆ ಅವ್ರು ಸತ್ತಿದ್ದಾರೆ", "ಹುಲಿ ಇಲ್ಲ. ಆದ್ರೂ ಹೊರಕ್ಕೆ ಹೋಗೋದಿಕ್ಕೆ ಆಗೋದಿಲ್ಲ" ಮುಂತಾದ ಅಪೂರ್ವ ಸಂವೇದನಾಶೀಲ ಸಾಲುಗಳು ಚಿತ್ರಕ್ಕೆ ಪ್ಲಸ್ಪಾಯಿಂಟ್. ಜಾಗತೀಕರಣದಿಂದಾಗಿ ಹಳ್ಳಿಗಳ ಸ್ಥಿತ್ಯಂತರದ ನಡುವೆ ಆಶಾವಾದದ ಬದುಕು ಇನ್ನೂ ಜೀವಂತವಾಗಿರುವುದು ಪಾತ್ರಗಳ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಆದರೆ ಸಂಭಾಷಣೆಗಳಲ್ಲಿ ಹಳ್ಳಿಯ ಭಾಷಾ ಸೊಗಡಿನ ಕೊರತೆ ಎದ್ದು ಕಾಣುತ್ತದೆ. ಇದು ಸಂಭಾಷಣೆಕಾರರಿಗೆ ತಟ್ಟಿದ ಜಾಗತೀಕರಣದ ಪ್ರಭಾವವೇನೋ!

ಎಚ್.ಎಂ.ರಾಮಚಂದ್ರ ಸಿಕ್ಕ ಬೆಳಕಲ್ಲೇ ಮೋಡಿ ಮಾಡಿದ್ದಾರೆ. ಚಿತ್ರದ ಪ್ರತಿ ಫ್ರೇಮನ್ನು ಪ್ರೀತಿಸಲು ಸಾಧ್ಯವಾದರೆ ಅದಕ್ಕೆ ಅವರ ಕ್ಯಾಮರಾ ಕಣ್ಣು ಕಾರಣ. ಕಾಡ ಬೆಳದಿಂಗಳಿಗೆ ನಿಜವಾದ 'ಅಮಾವಾಸ್ಯೆ' ರಾಜೇಶ್ ರಾಮನಾಥ್!! ಅವರ ಹಿನ್ನೆಲೆ ಸಂಗೀತವನ್ನು ಮೊದಲ 20 ನಿಮಿಷ ಸಹಿಸಿಕೊಳ್ಳಬೇಕಷ್ಟೇ. ನಂತರದ್ದು ಸರಿ-ಸುಮಾರು. ಕೆಲವೊಂದು ಸನ್ನಿವೇಶಗಳಲ್ಲಿ ಮೌನ ಮಾತಾಗಬೇಕಿತ್ತು. ಆದರೆ ಹಿನ್ನೆಲೆ ಸಂಗೀತ ಅದಕ್ಕೆ ಅವಕಾಶವನ್ನೇ ಕೊಡುವುದಿಲ್ಲ. ಕೆಲವು ಫ್ರೇಮುಗಳು ರಾಮನಾಥ್ ಸಂಗೀತದಲ್ಲಿ ಮರುಗುತ್ತವೆ. ಕೊರಗುವ ಸರದಿ ಪ್ರೇಕ್ಷಕನದ್ದು! ಇಡೀ ಚಿತ್ರದಲ್ಲಿ ಗಮನ ಸೆಳೆಯುವುದು ದೃಶ್ಯ ಜೋಡಣೆ ಮತ್ತು ನಿರೂಪಣೆ. ಕಮರ್ಶಿಯಲ್ ಸಿನಿಮಾಗಳ ನಿರೂಪಣಾ ವೇಗ ಸ್ವಲ್ಪ ಮಟ್ಟಿಗೆ ಎದ್ದು ಕಾಣುತ್ತದೆ. ಅನಿಲ್ ನಾಯ್ಡು ಸಂಕಲನ ಅದಕ್ಕೆ ತಕ್ಕಮಟ್ಟಿಗೆ ಸಹಕರಿಸಿದೆ.

ನಟನೆಯಲ್ಲಿ ಗೆಲ್ಲುವುದು ದತ್ತಣ್ಣ ಹಾಗೂ ಲೋಕನಾಥ್. ಇಬ್ಬರದ್ದೂ ಪೈಪೋಟಿಯ ಅಭಿನಯ. ಸತ್ತ ಕಪ್ಪೆಯನ್ನು ತದೇಕಚಿತ್ತದಿಂದ ದಿಟ್ಟಿಸುತ್ತಾ ಕಣ್ಣಾಲಿಗಳಲ್ಲಿ ವಿಶಾದವನ್ನು ಕರಗಿಸುವ ಲೋಕನಾಥ್ಗೆ ಲೋಕನಾಥೇ ಸರಿಸಾಟಿ. ಇವರಿಬ್ಬರ ನಡುವೆ ಅನನ್ಯಾ ಕಾಸರವಳ್ಳಿ ಪೇಲವ. ನಟನೆಯ ಲೋಪಗಳನ್ನು ಆಕೆಯ ಬೊಗಸೆ ಕಣ್ಣುಗಳು ಬ್ಯಾಲೆನ್ಸ್ ಮಾಡುತ್ತವೆ! ಲಿಂಗದೇವರು ನಿರ್ದೇಶನ ಹಳಿ ತಪ್ಪಿದ ರೈಲಿನಂತೆ ಅಲ್ಲಲ್ಲಿ ಹಿಡಿತ ಕಳೆದುಕೊಂಡಿದೆ. ಕೆಲವೆಡೆ ಅವಸರ ಎದ್ದು ಕಾಣುತ್ತದೆ. ಟಿವಿ ರಿಪೋರ್ಟರೇ ಟೀಂ ಲೀಡರ್, ಕ್ಯಾಮರಾಮೆನ್ ಲೆಕ್ಕಕ್ಕಿಲ್ಲ ಅಂತ ನಿರ್ದೇಶಕರಿಗೆ ಯಾಕನ್ನಿಸಿತೋ ದೇವರೇ ಬಲ್ಲ. ಚಿತ್ರದಲ್ಲಿ ಕ್ಯಾಮರಾಮೆನ್ಗೆ ಕೂಡಿಸಿ, ಕಳೆದು ಅವಕಾಶ ಕೊಟ್ಟಿದ್ದಾರೆ ಲಿಂಗದೇವರು. ಕೆಲವು ಸನ್ನಿವೇಶಗಳಲ್ಲಿ ಮುಂದಿನ ಡೈಲಾಗ್ ಏನು ಅನ್ನೋದು ಪ್ರೇಕ್ಷಕನಿಗೇ ಗೊತ್ತಾಗಿಬಿಡುತ್ತದೆ. ಉದಾಹರಣೆಗೆ; ಹಳ್ಳಿ ಹುಡುಗನೊಬ್ಬ ಪೇಟೆಗೆ ಹೋಗಲು ಬಸ್ಸು ಹತ್ತುವುದು. ಆ ಸಂದರ್ಭದಲ್ಲಿ ಸುದೀಷ್ಣೆ ಮಾತಾಡದಿದ್ದರೇನೇ ಒಳ್ಳೆಯದಿತ್ತು. ಲಿಂಗದೇವರು ಧಾರಾವಾಹಿ ನಿರ್ದೇಶನದ ಹ್ಯಾಂಗೋವರ್ನಿಂದ ಇನ್ನೂ ಹೊರಬಂದಿಲ್ಲ ಎನ್ನುವುದಂತೂ ಕಠೋರ ಸತ್ಯ. ಆದರೂ ತಮಗಿರುವ ಸೀಮಿತ ಅವಕಾಶದಲ್ಲೇ ಕಥೆಯನ್ನು ಸತ್ವಶಾಲಿಯಾಗಿ ಹೇಳಲು ಪ್ರಯತ್ನಪಟ್ಟಿದ್ದಾರೆ. ಆಯ್ದುಕೊಂಡ ಬಸರೀಕಟ್ಟೆ ಪಕ್ಕದ ಲೊಕೇಶನ್ಗಳು ಸಹ ಕಥೆಗೆ ಬೆನ್ನೆಲುಬು. ಕ್ಲೈಮ್ಯಾಕ್ಸ್ ಪ್ರೇಕ್ಷಕ ಊಹಿಸುವುದಕ್ಕಿಂತ ಮೊದಲೇ ಬಂದು ಅಚ್ಚರಿ ಹುಟ್ಟಿಸುತ್ತದೆ. ಇಷ್ಟವಾಗುತ್ತದೆ ಕೂಡಾ. ನಕ್ಸಲಿಸಂ ಸಮಸ್ಯೆಯೂ ಚಿತ್ರದಲ್ಲಿ ಬಂದು ಹೋಗುತ್ತದೆ. ಅಂದ ಹಾಗೆ ಸಿನಿಮಾ ನಿರ್ಮಿಸಿರುವುದು 'ಬೆಂಗಳೂರು ಕಂಪೆನಿ'.



ಸಿನಿಮಾ ಮುಗಿದ ನಂತರವೂ ನಮ್ಮೊಳಗೆ ಬೆಳೆಯುತ್ತಾ, ಕಾಡುವ ದೃಶ್ಯವೆಂದರೆ ಸುದೀಷ್ಣೆ ಕೊನೆಯಲ್ಲಿ ಬೆಟ್ಟದ ಮೇಲಿಂದ ಮೊಬೈಲ್ ಎಸೆಯುವುದು. ಜೊತೆಗೆ ಆ ಎಸೆತ ಹುಟ್ಟುಹಾಕುವ ಪ್ರಶ್ನೆಗಳು ಸಹ ಹಲವು. ಆ ಎಸೆತ ಜಾಗತೀಕರಣ ಹುಟ್ಟಿಸಿದ ನಿರ್ಲಿಪ್ತತೆಯ ಸಂಕೇತವಾ? ನಂಬಿಕೊಂಡ ನಂಬಿಕೆಗಳು ಕುಸಿದಾಗ ಅದರಿಂದ ಹೊರಬಂದು ನಿರುಮ್ಮಳವಾಗಿ ಸ್ವತಂತ್ರಗೊಳ್ಳುವ ತವಕವಾ? ಪರಿಸ್ಥಿತಿಯ ಒತ್ತಡಕ್ಕೆ ಜೈ ಎನ್ನದೆ ತನ್ನತನವನ್ನು ಹುಡುಕಿಕೊಂಡು ಹೊರಟವಳ ಹಾದಿಯಾ? ತನ್ನ ನಿತ್ಯ ನೈಮಿತ್ತಿಕಗಳ ಹೊರತಾಗಿ ತನಗಿರುವ ನೈಜ ಬದುಕು ಬೇರೆಯೇ ಎನ್ನುವ ಸ್ಪಷ್ಟನೆ ಆಕೆಗೆ ಸಿಕ್ಕಿತಾ? ಪ್ರತೀ ಬದಲಾವಣೆ ಗಾಳಿಯೂ ಇದೇ ರೀತಿ ಇರುತ್ತದೆಯಾ? ಜಾಗತೀಕರಣದ ಗೊಂದಲದ ಗೂಡಲ್ಲಿ ಸಿಕ್ಕಿ ಹಾಕಿಕೊಂಡ ನಮ್ಮ ಗೊಂದಲಗಳು ಇವೇ ಇರಬಹುದೇ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹುಟ್ಟಿಸುತ್ತಾ ಗೊಂದಲದ ಗೂಡು ನಮ್ಮಲ್ಲಿ ಉಳಿಯುತ್ತದೆ, ಬೆಳೆಯುತ್ತದೆ.

ಬೆಳದಿಂಗಳ ತಂಪು ಕಾಡುವುದು ಇದೇ ಕಾರಣಕ್ಕೆ!


ಚಿತ್ರ ಕೃಪೆ-ಜೋಗಿ ಮನೆ

ನಡೆದದ್ದು ಇಷ್ಟೇ

ಅದು ನಡೆದು
ಎಷ್ಟು ದಿನಗಳಾಯಿತೋ
ವರ್ಷಗಳಾಯಿತೋ


ಕೋಣೆ ಒಳಗೆ ನಾನಿದ್ದೆ
ಕತ್ತಲು ಚಾಚಿತ್ತು
ಯಾರೋ ಗೋಡೆಯಲ್ಲಿದ್ದ
ಕಿಟಕಿ ಗಾತ್ರದ ಬಿರುಕು
ಮುಚ್ಚುತ್ತಿದ್ದರು


ನಾನು ದಮ್ಮಯ್ಯಗುಡ್ಡೆ ಬಿದ್ದೆ
ಕೇಳಿಸಿರಬೇಕು ಅವರಿಗೆ...
ಆದರೂ ಅವರ್ಯಾರೂ
ಕಾಣುತ್ತಿರಲಿಲ್ಲ ನನಗೆ
ಕೇಳುತ್ತಿದ್ದದ್ದು ತಾಪಿಯ

ಕರ್ಕಶ ಶಬ್ದ, ಸಿಮೆಂಟಿನ ಅಮಲು
ಏರುತ್ತಿದ್ದ ಇಟ್ಟಿಗೆಗಳ
ಸಾಲು ಮೆರವಣಿಗೆ
ಅವರೆಲ್ಲಾ ಬೆಳಕಿನಲ್ಲಿದ್ದರು


ಮೊದ ಮೊದಲೆಲ್ಲಾ ಕಿಟಕಿ ಕಿಂಡಿ
ಮುಚ್ಚುತ್ತಾರೆ ಅಂದುಕೊಂಡಿದ್ದೆ
ದಿನಗಳು ಉರುಳಿದರೂ
ಕೆಲಸ ನಿಲ್ಲಲಿಲ್ಲ
ಕೊನೆ ಕೊನೆಗೆ ಹೊರಗೂ
ಕತ್ತಲಾಗುತ್ತಾ ಬಂತು


ನಡೆದದ್ದು ಇಷ್ಟೇ

ಶುಕ್ರವಾರ, ಜೂನ್ 6, 2008

ನೀರವ ರಾತ್ರಿಯಲ್ಲೊಂದು 'ಅಲೆ'ದಾಟ(ಒಂದು ಲಹರಿ)

ಯಾವ ದುಗುಡಗಳು ಬೇಡ. ನಿರುಮ್ಮಳವಾಗಬೇಕು. ಒಂಟಿಯಾಗಿ ನಡೆಯಬೇಕು, ಅಲೆಯಬೇಕು-ಬೆಳದಿಂಗಳಿಗೆ ಮುಖ ಮಾಡಿಕೊಂಡು. ಕಿರ ಕಿರ ಎನ್ನುವ ರಾತ್ರಿಯ ನಿಶಾಚಾರಿಕೆಯಲ್ಲೂ ಏನೋ ನಿಗೂಢ ಆನಂದವಿದೆ. ದಣಿದ ಜೀವಗಳಿಗೆ ನಿದ್ರೆಯಲ್ಲಿ ಬೆಳಕು ಕೊಡುತ್ತದಂತೆ ರಾತ್ರಿ. ಆದರೆ ನಾನು ಹುಡುಕ ಹೊರಟಿರುವುದು ನೀರವ ಮೌನವನ್ನ, ಗಾಢ ಕತ್ತಲೆಯನ್ನ. ಬದುಕಿನ ಎಲ್ಲಾ ಜಂಜಡಗಳನ್ನು ಕಳಚಿ ನಡೆಯಬೇಕು. ಬೆತ್ತಲೆಯಾಗಿ ಹಾದಿ ಸವೆಸಬೇಕು. ರಾತ್ರಿಗಳಲ್ಲಿ ದಾರಿ ಕಾಣುತ್ತದೋ ಇಲ್ಲವೋ ಆ ಮಾತು ಬೇರೆ.

ಎಲ್ಲದರಿಂದ ಮುಕ್ತಿ ಬೇಕು. ಇಷ್ಟಕ್ಕೂ ಎಲ್ಲವನ್ನೂ ನೇರವಾಗಿ ಹೇಳಿಬಿಡಬೇಕಾ?ಹಾಗಾದರೆ ಭಾವನೆಗಳಿಗೇನು ಅರ್ಥ? ಹೇಳಿಕೊಂಡು ನಿರಾಳವಾಗುವುದು ಸ್ವಾರ್ಥವಲ್ಲದೇ ಮತ್ತಿನ್ನೇನು? ಇದ್ಯಾವುದರ ಉಸಾಬರಿಯೇ ಬೇಡ. ಕಾಲುಗಳು ಸವೆಯುವವರೆಗೆ ನಡೆಯಬೇಕು. ಅದೂ ರಾತ್ರಿಗಳಲ್ಲಿ. ರೂಮು ಬಿಟ್ಟು, ಮನೆ ಬಿಟ್ಟು. ಡಾಂಬಾರು ರಸ್ತೆ, ಕೆಸರು ನೆಲ ಎಲ್ಲಾ ದಾಟಿ ನಡೆಯಬೇಕು. ಗಮ್ಯವಿಲ್ಲದೇ ನಡೆಯಬೇಕು. ಇಷ್ಟಕ್ಕೂ ಇಂಥ ಕಡೆಗೇ ಹೋಗಬೇಕು ಎಂಬ ಹಠ ನನಗೇಕೆ? ದಾರಿ ಎಲ್ಲಿಗೆ ಒಯ್ಯುತ್ತದೋ ಅಲ್ಲಿಗೆ ನಡೆದರೆ ಸಾಕು. ಯಾವುದೋ ತಿರುವು, ಮತ್ತ್ಯಾವುದೋ ಬೆಟ್ಟ ಸಿಗಬಹುದು. ನದಿ ಎದುರಾಗಬಹುದು. ಎಲ್ಲವನ್ನೂ ದಾಟಲು ನಡಿಗೆಗೆ ಮಾತ್ರ ಸಾಧ್ಯ. ಬದುಕ ಕಲಿಸುವುದೂ ಅದೇ, ನೋವ ಮರೆಸುವುದೂ ಅದೇ!

ಇದೆಲ್ಲಾ ಕತ್ತಲಲ್ಲೇ ಆಗಬೇಕು. ಬೆಳಕಿಗೆ ಕತ್ತಲಿಗಿರುವಷ್ಟು ನಿಯತ್ತಿಲ್ಲ. ಅದು ಮೌನಿಯೂ ಅಲ್ಲ. ಮೌನಿಯನ್ನು ಕಂಡರೆ ಆಗುವುದೂ ಇಲ್ಲ. ಆದರೆ ಕತ್ತಲು ಹಾಗಲ್ಲ. ಅರಳಲು ಕಲಿಸುತ್ತದೆ, ಮರಳಲು ಕಲಿಸುತ್ತದೆ. ಕತ್ತಲು ಕೊಡುವ ಬದ್ಧತೆಯನ್ನು ಬೆಳಕು ಕೊಡುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕತ್ತಲಿಗೆ ನನ್ನ ಪರಿಚಯವೇ ಇಲ್ಲ. ಅಲ್ಲಿ ಕಳೆದು ಹೋದರೂ, ಉಳಿದು ಹೋದರೂ ಚಿಂತೆಯಿಲ್ಲ. ನನ್ನೊಳಗಿನ ಕತ್ತಲು ಕೂಡಾ ಹೊರಗಿನ ಕತ್ತಲೊಂದಿಗೆ ಕೂಡಿಕೊಂಡರೆ ಸಾಕು. ಮನಸ್ಸು ಕಪಟಿಯಾಗುವುದಿಲ್ಲ.ಇಂಥದ್ದೇ ಬೇಕೆಂದು ಬೇಡುವುದಿಲ್ಲ! ಮಧ್ಯದಲ್ಲೆಲ್ಲೋ ಎಡವಿದರೆ ನಗುವುದಿಲ್ಲ. ಮುಂದಿನ ಹೆಜ್ಜೆಗಳಿಗೆ ಭಯ, ಭರವಸೆ ಎರಡನ್ನೂ ಕೊಡುತ್ತದೆ. ಹಿಂದೆ ತಿರುಗಿದರೆ ಕತ್ತಲು ಮಾತ್ರ ಕಾಣುತ್ತದೆ. ಬೆಳಕಿಗದು ಸಾಧ್ಯವಿಲ್ಲ.

ಇಷ್ಟಕ್ಕೂ ನಡೆಯುವುದು ಗೊತ್ತಿದ್ದರೆ ಸಾಕು. ಬುಡ್ಡಿ ಬೆಳಕು ಬೇಕಿಲ್ಲ. ನಡೆಯುತ್ತಾ ನಡೆಯುತ್ತಾ ಬೆಳಗಾದರೆ ಅಲ್ಲೇ ಕಲ್ಲಿನಂತೆ ಸ್ಥಂಭಿಸಿದರಾಯಿತು. ಸುತ್ತಮುತ್ತಲಿನವರೆಲ್ಲಾ ಓಡಾಡಲಿ, ಕಿರುಚಲಿ, ಡಾಲರುಗಟ್ಟಲೆ ಸಂಪಾದಿಸಲಿ, ನೇಜಿ ನಡಲಿ, ಟ್ರಾಫಿಕ್ಕು ಜಾಮಿನಲ್ಲಿ ಬೆವರು ಒರೆಸಿಕೊಳ್ಳಲಿ, ಪ್ರೀತಿಸಲಿ-ಹೇಳಲಾಗದೇ ಒದ್ದಾಡಲಿ. ನನಗೆ ಮತ್ತೆ ಕತ್ತಲಾಗುವುದು ಮಾತ್ರ ಮುಖ್ಯ. ದಿನಚರಿ ಮತ್ತೆ ಹುಟ್ಟಿಕೊಳ್ಳುವುದು ರಾತ್ರಿಯ ಮೊದಲ ಸೆಕೆಂಡಿನಲ್ಲೇ. ನಡೆಯಲು ಶುರುಮಾಡಲು ಅಷ್ಟು ಸಾಕು. ಜೊತೆಗೆ ಯಾರು ಬಂದರೇನು?ಬರದೇ ಕೈ ಚೆಲ್ಲಿ ಕುಳಿತರೇನು?

ನನಗೆ ಗೊತ್ತಿರುವುದು ಒಂದೇ-ಒಂಟಿಯಾಗಿ ಹೆಜ್ಜೆ ಹಾಕುವುದು ಮಾತ್ರ!

ನಿತ್ಯಮುತ್ತೈದೆ

ನಾನು ನಿತ್ಯಮುತ್ತೈದೆ
ಚಿರಯೌವ್ವನೆ, ಬತ್ತದ ದೇವಯಾನಿ
ಸೊಂಟದ ಬದುವಿನಲ್ಲಿ
ಉದ್ದುದ್ದ ನೆರಿಗೆಗಳು
ಸರಸರನೆ ಸರಿಯೋ ಸೆರಗು
ಎಲ್ಲರಿಗೂ ಮಾದಕ ತಾಜಮಹಲ್ ನಾನಂತೆ


ಬಿಳಿ ಬಣ್ಣದ ಸೀರೆಗೆ
ಮನಸೋತು ಬಣ್ಣ ಹಚ್ಚಲು
ಓಡಿಹೋದ ಆ ಅಪ್ಪ
ಲೆಫ್ಟು, ರೈಟು ಸಿದ್ಧಾಂತಗಳೆನ್ನುತ್ತಾ
ಕರಗಿ ಹೋದ ಅಣ್ಣ
ಇಂತಹ ಫುಟ್ಪಾತಿನ ವಂಚಕರ
ನಡುವೆ ನಾನು, ತಾಯಿ ಇಬ್ಬರೇ ಉಳಿದದ್ದು ಕೊನೆಗೆ


ಬದುಕಿದ್ದಷ್ಟೂ ದಿನ ಆಕೆ ಸಲಹಿದಳು
ಸಂತಾಪದ ಹೆಸರಲ್ಲಿ ದೇಹ ತುಂಬಾ
ಮುತ್ತಿಕೊಂಡವು ಬೀದಿ ನಾಯಿಗಳು
ಅರೆಬೆಂದ ರೊಟ್ಟಿಯೆಂದರೆ
ಚಪ್ಪರಿಸಿ ತಿನ್ನುವ ಆಸೆ ಅವಕ್ಕೆ


ಈಗ ಉಳಿದಿರುವುದು
ಮಾಸಲು ಬಣ್ಣದ ಕೋಣೆ,
ಕಿರ ಕಿರ ಶಬ್ದದ ಬೀಟೆ ಮಂಚ
ಹಸಿರು ದೀಪ, ನಿಟ್ಟುಸಿರು ಮಾತ್ರ
ಕತ್ತಲೆಯೊಳಗೆ ಯಾರೋ ಬರುತ್ತಾನೆ
ಸರಸ, ಸಲ್ಲಾಪ, ಪ್ರೀತಿಯ ಕಚಗುಳಿ
ಆತನಿಗೆ ಬೇಡ
ದೇಹ ನೀಡಬೇಕು ಅಷ್ಟೇ
ಭಾವನೆಗಳೆಲ್ಲಾ ಬೆತ್ತಲೆ
ಉರುಳಾಡುತ್ತಾನೆ, ಹೊರಳಾಡುತ್ತಾನೆ
ಖುಷಿಯಾದರೆ ನಾಲ್ಕೈದು ನೋಟು ಎಸೆಯುತ್ತಾನೆ
"ವಿಶ್ವದ ಎಂಟನೇ ಅದ್ಭುತವಂತೆ" ಆತನಿಗೆ ನಾನು
ಎದ್ದಾಗ ಬೆನ್ನೆಲ್ಲಾ ಹುರಿ


ರೌರವ ನರಕದಲ್ಲಿದ್ದರೂ
ಮತ್ತೆ ಮುಡಿಯಬೇಕು ಮಲ್ಲಿಗೆ
ಆಗ ಬರುತ್ತಾನೆ ಮತ್ತೊಬ್ಬ
ಕಣ್ಣ ತುಂಬಾ ಮಾದಕತೆ ತುಂಬಬೇಕು
ಆತನಿಗೂ ನಾನು "ವಿಶ್ವದ ಎಂಟನೇ ಅದ್ಭುತ"!


ಎಲ್ಲರೂ ಬರುತ್ತಾರೆ
ಆಗೊಮ್ಮೆ-ಈಗೊಮ್ಮೆ ನನ್ನಲ್ಲಿಗೆ
ಬಂಧಗಳು ಸ್ವರ್ಗದಲ್ಲಿ ಬೆಸೆಯುತ್ತವೆ
ಅಂತಾರೆ ಹಿರಿಯರು
ಆದರೂ ನನ್ನವನೆನ್ನುವವನು
ಯಾಕೆ ಬರುವುದಿಲ್ಲ, ಒಮ್ಮೆಯೂ.....?


(ಬೆಂಗಳೂರಿನ ಕ್ರೈಸ್ಟ್ ಕಾಲೇಜು 2006-07 ಸಾಲಿನಲ್ಲಿ ನಡೆಸಿದ ದ.ರಾ.ಬೇಂದ್ರೆ ಸ್ಮ್ರತಿ ಅಂತರ್ ಕಾಲೇಜು ಕವನ ಸ್ಪರ್ಧೆಯಲ್ಲಿ ಬಹುಮಾನಿತ ಕವನ)