ಬುಧವಾರ, ಡಿಸೆಂಬರ್ 31, 2008

ಎರಡು 'ಮದ್ಯ'ರಾತ್ರಿಯ ಹನಿಗಳು

ಅಪಾರರ ಸ್ವರ್ಗದ ಲಿಂಕು "ಮದ್ಯಸಾರ" ಓದಿದ ಮೇಲೆ ನನ್ನಲ್ಲಿ ಮೂಡಿದ ಎರಡು ಹನಿಗಳಿವು. ಇದು ಥರ್ಟಿಯೋ,ಸಿಕ್ಸ್ಟಿಯೋ,ನೈಂಟಿಯೋ ಎನ್ನುವ ವಿಷಯದಲ್ಲಿ ನಾನು ಅನಕ್ಷರಸ್ಥ!

ಗುಟುಕಾಗಿ ಹೀರಿಕೊಳ್ಳುವುದು ನಿಮ್ಮ ಕೆಲಸ.


ವಿಸ್ಕಿ ವೈಯಕ್ತಿಕ
ಸೋಡಾ ಸಾರ್ವತ್ರಿಕ
ಬೆರೆಸಿದಷ್ಟು ನಿತ್ಯ ನೂತನ
ಅಮಲಿಗೆ ತೆರೆಯುವ ಕಣ್ಣಿಗೆ
ಲೋಕ ಲಡಕಾಸಿ ಸೈಕಲು


ಗ್ಲಾಸುಗಳು ತುಂಬಬೇಕು
ಕಣ್ಣ ಹನಿ ಚೂರೇ ಚೂರು ತುಂಬಿದಂತೆ
ಬಿಕ್ಕಳಿಸಿದ ಸ್ವಗತಗಳಿಗೆ
ಗುಟುಕೇ ಪಂಚಾಮೃತ
ಉಳಿಯುವ ಮೌನಕ್ಕೆ
ಖಾಲಿ ಗ್ಲಾಸೇ ಉತ್ತರ

ಶನಿವಾರ, ಡಿಸೆಂಬರ್ 13, 2008

ಕಾಂಕ್ರೀಟು ಕಾಡಿನ ಕನವರಿಕೆ...(ಪುಟಾಣಿ ಕತೆ-10)

ರಾತ್ರಿ ಹನ್ನೆರಡಿರಬೇಕು.

ನವಿಲು ರೆಕ್ಕೆ ಬಿಚ್ಚಿ ಹಣೆ ಮೇಲೆ ಕೂತಿತ್ತು. ಜೂನಲ್ಲಷ್ಟೇ ನವಿಲು ನೋಡಿದ ನೆನಪು ನನಗೆ. ಈಗಂತೂ ಕುಣಿದಾಡುವುದಷ್ಟೇ ಬಾಕಿ. ಬೆಂಗಳೂರಿನಂತಹ ಆದಿ ಇಲ್ಲದ ಅಂತ್ಯ ಪ್ರಾಸದಲ್ಲಿ ಈ ನವಿಲು ಬಂದದ್ದಾದರೂ ಹೇಗೆ? ಹೇಗೆ ಬಂದರೇನು? ನನಗೆ ನವಿಲು ಮಾತ್ರ ಮುಖ್ಯ.


ಸಾಕಬೇಕು ಈ ನವಿಲನ್ನು. ಅದು ತಿನ್ನುವ ಹುಳು-ಹುಪ್ಪಟೆ ಸಿಗುವ ಅಂಗಡಿ ತಡಕಾಡಬೇಕು. ಅದನ್ನೆಲ್ಲಿ ಮಲಗಿಸಬೇಕು ಎಂಬುದನ್ನೂ ಯೋಚಿಸಬೇಕಷ್ಟೇ. ಅಜ್ಜಿಯ ಹೇನು ತೆಗೆದ ಹಾಗೆ ನವಿಲಿನ ಗರಿಗಳನ್ನು ತೆಗೆಯಬೇಕು. ಈಗಂತೂ ನವಿಲಿನ ಗರಿಯ ಬೀಸಣಿಗೆ ಸಿಗುವುದೇ ಇಲ್ಲ. ಸಿಕ್ಕರೆ 100 ರುಪಾಯಿ ಎನ್ನುತ್ತಾರೆ ಬೋಳಿಮಕ್ಳು. ಈಗ ನವಿಲೇ ಮನೆಯಲ್ಲಿದೆ. ಬೇಕಿದ್ದಾಗ ಬೀಸಣಿಗೆ ಮಾಡಿಕೊಂಡರಾಯಿತು. ತೀರಾ ಅಗತ್ಯ ಬಿದ್ದರೆ ಮಾಂಸ ಮಾರಿ ತಿಂಗಳ ಬಾಡಿಗೆ ಕಟ್ಟಬಹುದು.


ಇಷ್ಟೆಲ್ಲ ಕಾಟ ಕೊಟ್ಟರೆ ನವಿಲು ಹಾರಿ ಹೋಗಲ್ವಾ? ಯಾಕೆ ಹಾರಿ ಹೋಗುತ್ತೆ? ಅದು ನನ್ನ ಗುಲಾಮ. ಆಫೀಸಿನಲ್ಲಿ ನಾನು ಬಾಸ್ಗೆ ಹೇಗೋ ಹಾಗೆ. ಆದರಿಲ್ಲಿ ನಾನೇ ಬಾಸ್. ಇದನ್ನೆಲ್ಲಾ ನವಿಲಿಗೆ ಅರ್ಥ ಮಾಡಿಸುವುದು ಹೇಗೆ? ಅದೇನು ಕಷ್ಟ ಅಲ್ಲ. ಬಾಸ್ ಪ್ರತೀ ಬಾರಿಯೂ ರಾತ್ರೋರಾತ್ರಿ ಕೆಲಸದ ಪ್ರಪಾತಕ್ಕೆ ಸದ್ದಿಲ್ಲದೆ ನನ್ನನ್ನು ನೂಕಿ ಸಿಗರೇಟು ಹಚ್ಚಿ ಕೂರುತ್ತಾನಲ್ಲ ಹಾಗೆ ಕೂರಬೇಕು. ಬಾಸ್ ಪ್ರತೀ ಬಾರಿ ಹೀಗೆ ಮಾಡಿದಾಗ ನನಗೆ ತಿಳಿಯಲೇ ಇಲ್ಲ. ಇನ್ನು ನವಿಲಿಗೆ ಹೇಗೆ ಗೊತ್ತಿರುತ್ತೆ ಇಂತಹ ಕಪಟತನಗಳು. ಕಾಡಿನಿಂದ ಬಂದ ಮುಂಡೇವಕ್ಕೆ ಏನು ಹೆಚ್ಚಿಗೆ ಗೊತ್ತಿರುತ್ತೆ. ನಿಯತ್ತು ಇರುತ್ತೆ. ಪ್ರತಿಭಟನೆಯ ಸುಳಿಯಂತೂ ಕನಸಿನ ಮಾತು.


ಹೀಗೆಲ್ಲ ಯೋಚಿಸುತ್ತಿದ್ದಾಗ ನವಿಲು ಜೋರಾಗಿ ಕೂಗಿತು. ನನ್ನ ಹಣೆ ಮೇಲೆ ನಾಲ್ಕಾರು ಬಾರಿ ಶತಪಥ ತಿರುಗಿತು.

ನೇರವಾಗಿ ನನ್ನ ಕಣ್ಣೊಂದನ್ನು ಕುಕ್ಕಿತು.

ಬುಧವಾರ, ಡಿಸೆಂಬರ್ 3, 2008

ಭಯೋತ್ಪಾದನೆ ವಿರುದ್ಧ ಸಮರಕ್ಕೂ ಸಿದ್ಧ

ಮುಂಬೈ ಘಟನೆಯಿಂದ ಇಡೀ ದೇಶ ಮತ್ತೆ ನಲುಗಿದೆ.

"ನಮ್ಮ ದೇಶ ಕೆಟ್ಟು ಕೆರ ಹಿಡಿದಿದೆ. ಯಾವತ್ತೂ ಬದಲಾಗೋಲ್ಲ" ಅಂತೆಲ್ಲಾ ಮಾತಾಡುತ್ತಿದ್ದ ವಿದ್ಯಾವಂತರು, ಯುವಕರು "ನಾವೇನಾದರು ಅಲ್ಪ-ಸ್ವಲ್ಪ ಕೊಡುಗೆಯನ್ನಾದರೂ ಕೊಡಬೇಕು. ಇಲ್ಲಾಂದ್ರೆ ಈ ದೇಶ ನಮ್ಮ ಮೊಮ್ಮಕ್ಕಳ ಕಾಲಕ್ಕೂ ಬದಲಾಗೋಲ್ಲ" ಅಂತ ನಿರ್ಧರಿಸಿದಂತಿದಂತಿದೆ. ಒಂದಾಗಿ ದೇಶವನ್ನು ಬದಲಾಯಿಸೋಣ ಬನ್ನಿ ಎಂದು ಪರಸ್ಪರರನ್ನು ಕರೆಯುತ್ತಿದ್ದಾರೆ. "ವಿ ನೀಡ್ ಚೇಂಜ್" ಎನ್ನುತ್ತಿದೆ, ಇಡೀ ದೇಶ. ಜಾತಿ-ಮತಗಳಿಗಿಂತ ನಾನು ಭಾರತೀಯ ಎನ್ನುವುದೇ ಮುಖ್ಯವಾಗುತ್ತಿದೆ ಇಲ್ಲಿ. "ರಾಜಕಾರಣಿಗಳಿಗೆ ನೋ ಎಂಟ್ರಿ" ಇದು ಎಲ್ಲೆಡೆಯೂ ಪ್ರತಿಧ್ವನಿಸುತ್ತಿರುವ ಆಕ್ರೋಶ.

ಮುಂಬೈಯಲ್ಲಿ ನಡೆದ ಭಯೋತ್ಪಾದಕ ಘಟನೆಯಲ್ಲಿ ಹುತಾತ್ಮರಾದ ವೀರ ಯೋಧರಿಗೆ, ಮಡಿದ ಮಂದಿಗೆ ನಮನ ಸಲ್ಲಿಸುವ ಪುಟ್ಟ ಸಮಾರಂಭ ಕಬ್ಬನ್ ಪಾರ್ಕ್ ಪಕ್ಕದ ಗಾಂಧಿ ಪ್ರತಿಮೆ ಎದುರು ನಡೆಯಿತು. ಆ ಕ್ಷಣಗಳು ಕ್ಯಾಮರಾ ಕಣ್ಣಲ್ಲಿ
.























(ಚಿತ್ರಗಳು:ಗೌತಮ್)