ಬುಧವಾರ, ಡಿಸೆಂಬರ್ 31, 2008

ಎರಡು 'ಮದ್ಯ'ರಾತ್ರಿಯ ಹನಿಗಳು

ಅಪಾರರ ಸ್ವರ್ಗದ ಲಿಂಕು "ಮದ್ಯಸಾರ" ಓದಿದ ಮೇಲೆ ನನ್ನಲ್ಲಿ ಮೂಡಿದ ಎರಡು ಹನಿಗಳಿವು. ಇದು ಥರ್ಟಿಯೋ,ಸಿಕ್ಸ್ಟಿಯೋ,ನೈಂಟಿಯೋ ಎನ್ನುವ ವಿಷಯದಲ್ಲಿ ನಾನು ಅನಕ್ಷರಸ್ಥ!

ಗುಟುಕಾಗಿ ಹೀರಿಕೊಳ್ಳುವುದು ನಿಮ್ಮ ಕೆಲಸ.


ವಿಸ್ಕಿ ವೈಯಕ್ತಿಕ
ಸೋಡಾ ಸಾರ್ವತ್ರಿಕ
ಬೆರೆಸಿದಷ್ಟು ನಿತ್ಯ ನೂತನ
ಅಮಲಿಗೆ ತೆರೆಯುವ ಕಣ್ಣಿಗೆ
ಲೋಕ ಲಡಕಾಸಿ ಸೈಕಲು


ಗ್ಲಾಸುಗಳು ತುಂಬಬೇಕು
ಕಣ್ಣ ಹನಿ ಚೂರೇ ಚೂರು ತುಂಬಿದಂತೆ
ಬಿಕ್ಕಳಿಸಿದ ಸ್ವಗತಗಳಿಗೆ
ಗುಟುಕೇ ಪಂಚಾಮೃತ
ಉಳಿಯುವ ಮೌನಕ್ಕೆ
ಖಾಲಿ ಗ್ಲಾಸೇ ಉತ್ತರ

ಶನಿವಾರ, ಡಿಸೆಂಬರ್ 13, 2008

ಕಾಂಕ್ರೀಟು ಕಾಡಿನ ಕನವರಿಕೆ...(ಪುಟಾಣಿ ಕತೆ-10)

ರಾತ್ರಿ ಹನ್ನೆರಡಿರಬೇಕು.

ನವಿಲು ರೆಕ್ಕೆ ಬಿಚ್ಚಿ ಹಣೆ ಮೇಲೆ ಕೂತಿತ್ತು. ಜೂನಲ್ಲಷ್ಟೇ ನವಿಲು ನೋಡಿದ ನೆನಪು ನನಗೆ. ಈಗಂತೂ ಕುಣಿದಾಡುವುದಷ್ಟೇ ಬಾಕಿ. ಬೆಂಗಳೂರಿನಂತಹ ಆದಿ ಇಲ್ಲದ ಅಂತ್ಯ ಪ್ರಾಸದಲ್ಲಿ ಈ ನವಿಲು ಬಂದದ್ದಾದರೂ ಹೇಗೆ? ಹೇಗೆ ಬಂದರೇನು? ನನಗೆ ನವಿಲು ಮಾತ್ರ ಮುಖ್ಯ.


ಸಾಕಬೇಕು ಈ ನವಿಲನ್ನು. ಅದು ತಿನ್ನುವ ಹುಳು-ಹುಪ್ಪಟೆ ಸಿಗುವ ಅಂಗಡಿ ತಡಕಾಡಬೇಕು. ಅದನ್ನೆಲ್ಲಿ ಮಲಗಿಸಬೇಕು ಎಂಬುದನ್ನೂ ಯೋಚಿಸಬೇಕಷ್ಟೇ. ಅಜ್ಜಿಯ ಹೇನು ತೆಗೆದ ಹಾಗೆ ನವಿಲಿನ ಗರಿಗಳನ್ನು ತೆಗೆಯಬೇಕು. ಈಗಂತೂ ನವಿಲಿನ ಗರಿಯ ಬೀಸಣಿಗೆ ಸಿಗುವುದೇ ಇಲ್ಲ. ಸಿಕ್ಕರೆ 100 ರುಪಾಯಿ ಎನ್ನುತ್ತಾರೆ ಬೋಳಿಮಕ್ಳು. ಈಗ ನವಿಲೇ ಮನೆಯಲ್ಲಿದೆ. ಬೇಕಿದ್ದಾಗ ಬೀಸಣಿಗೆ ಮಾಡಿಕೊಂಡರಾಯಿತು. ತೀರಾ ಅಗತ್ಯ ಬಿದ್ದರೆ ಮಾಂಸ ಮಾರಿ ತಿಂಗಳ ಬಾಡಿಗೆ ಕಟ್ಟಬಹುದು.


ಇಷ್ಟೆಲ್ಲ ಕಾಟ ಕೊಟ್ಟರೆ ನವಿಲು ಹಾರಿ ಹೋಗಲ್ವಾ? ಯಾಕೆ ಹಾರಿ ಹೋಗುತ್ತೆ? ಅದು ನನ್ನ ಗುಲಾಮ. ಆಫೀಸಿನಲ್ಲಿ ನಾನು ಬಾಸ್ಗೆ ಹೇಗೋ ಹಾಗೆ. ಆದರಿಲ್ಲಿ ನಾನೇ ಬಾಸ್. ಇದನ್ನೆಲ್ಲಾ ನವಿಲಿಗೆ ಅರ್ಥ ಮಾಡಿಸುವುದು ಹೇಗೆ? ಅದೇನು ಕಷ್ಟ ಅಲ್ಲ. ಬಾಸ್ ಪ್ರತೀ ಬಾರಿಯೂ ರಾತ್ರೋರಾತ್ರಿ ಕೆಲಸದ ಪ್ರಪಾತಕ್ಕೆ ಸದ್ದಿಲ್ಲದೆ ನನ್ನನ್ನು ನೂಕಿ ಸಿಗರೇಟು ಹಚ್ಚಿ ಕೂರುತ್ತಾನಲ್ಲ ಹಾಗೆ ಕೂರಬೇಕು. ಬಾಸ್ ಪ್ರತೀ ಬಾರಿ ಹೀಗೆ ಮಾಡಿದಾಗ ನನಗೆ ತಿಳಿಯಲೇ ಇಲ್ಲ. ಇನ್ನು ನವಿಲಿಗೆ ಹೇಗೆ ಗೊತ್ತಿರುತ್ತೆ ಇಂತಹ ಕಪಟತನಗಳು. ಕಾಡಿನಿಂದ ಬಂದ ಮುಂಡೇವಕ್ಕೆ ಏನು ಹೆಚ್ಚಿಗೆ ಗೊತ್ತಿರುತ್ತೆ. ನಿಯತ್ತು ಇರುತ್ತೆ. ಪ್ರತಿಭಟನೆಯ ಸುಳಿಯಂತೂ ಕನಸಿನ ಮಾತು.


ಹೀಗೆಲ್ಲ ಯೋಚಿಸುತ್ತಿದ್ದಾಗ ನವಿಲು ಜೋರಾಗಿ ಕೂಗಿತು. ನನ್ನ ಹಣೆ ಮೇಲೆ ನಾಲ್ಕಾರು ಬಾರಿ ಶತಪಥ ತಿರುಗಿತು.

ನೇರವಾಗಿ ನನ್ನ ಕಣ್ಣೊಂದನ್ನು ಕುಕ್ಕಿತು.

ಬುಧವಾರ, ಡಿಸೆಂಬರ್ 3, 2008

ಭಯೋತ್ಪಾದನೆ ವಿರುದ್ಧ ಸಮರಕ್ಕೂ ಸಿದ್ಧ

ಮುಂಬೈ ಘಟನೆಯಿಂದ ಇಡೀ ದೇಶ ಮತ್ತೆ ನಲುಗಿದೆ.

"ನಮ್ಮ ದೇಶ ಕೆಟ್ಟು ಕೆರ ಹಿಡಿದಿದೆ. ಯಾವತ್ತೂ ಬದಲಾಗೋಲ್ಲ" ಅಂತೆಲ್ಲಾ ಮಾತಾಡುತ್ತಿದ್ದ ವಿದ್ಯಾವಂತರು, ಯುವಕರು "ನಾವೇನಾದರು ಅಲ್ಪ-ಸ್ವಲ್ಪ ಕೊಡುಗೆಯನ್ನಾದರೂ ಕೊಡಬೇಕು. ಇಲ್ಲಾಂದ್ರೆ ಈ ದೇಶ ನಮ್ಮ ಮೊಮ್ಮಕ್ಕಳ ಕಾಲಕ್ಕೂ ಬದಲಾಗೋಲ್ಲ" ಅಂತ ನಿರ್ಧರಿಸಿದಂತಿದಂತಿದೆ. ಒಂದಾಗಿ ದೇಶವನ್ನು ಬದಲಾಯಿಸೋಣ ಬನ್ನಿ ಎಂದು ಪರಸ್ಪರರನ್ನು ಕರೆಯುತ್ತಿದ್ದಾರೆ. "ವಿ ನೀಡ್ ಚೇಂಜ್" ಎನ್ನುತ್ತಿದೆ, ಇಡೀ ದೇಶ. ಜಾತಿ-ಮತಗಳಿಗಿಂತ ನಾನು ಭಾರತೀಯ ಎನ್ನುವುದೇ ಮುಖ್ಯವಾಗುತ್ತಿದೆ ಇಲ್ಲಿ. "ರಾಜಕಾರಣಿಗಳಿಗೆ ನೋ ಎಂಟ್ರಿ" ಇದು ಎಲ್ಲೆಡೆಯೂ ಪ್ರತಿಧ್ವನಿಸುತ್ತಿರುವ ಆಕ್ರೋಶ.

ಮುಂಬೈಯಲ್ಲಿ ನಡೆದ ಭಯೋತ್ಪಾದಕ ಘಟನೆಯಲ್ಲಿ ಹುತಾತ್ಮರಾದ ವೀರ ಯೋಧರಿಗೆ, ಮಡಿದ ಮಂದಿಗೆ ನಮನ ಸಲ್ಲಿಸುವ ಪುಟ್ಟ ಸಮಾರಂಭ ಕಬ್ಬನ್ ಪಾರ್ಕ್ ಪಕ್ಕದ ಗಾಂಧಿ ಪ್ರತಿಮೆ ಎದುರು ನಡೆಯಿತು. ಆ ಕ್ಷಣಗಳು ಕ್ಯಾಮರಾ ಕಣ್ಣಲ್ಲಿ
.(ಚಿತ್ರಗಳು:ಗೌತಮ್)
ಮಂಗಳವಾರ, ನವೆಂಬರ್ 4, 2008

ರುದ್ರ ಭೂಮಿಯೊಳು ಭದ್ರ ಸಮಾಧಿ....(ಕತೆ)

"ಏನೋ ದಿನೇ ದಿನೇ ತೆಳ್ಳಗಾಗುತ್ತಿದ್ದೀಯಾ"
"ಹೌದೌದು.ಮುಂದೊದು ದಿನ ಕರಗಿಯೇ ಹೋಗುತ್ತೇನೆ!"

ಅನುಮಾನವೇ ಇಲ್ಲ.ಅದು ಕಾಳಿಂಗ ಸರ್ಪ.ಗೊತ್ತಾಗುವಷ್ಟರಲ್ಲೇ ಕಚ್ಚಿಯಾಗಿತ್ತು. ಭಗ್ಗನೆ ಎದೆ ಭಯದಿಂದ ಹೊತ್ತಿಕೊಂಡಿತು. ಒಂದುಮಧ್ಯಾಹ್ನವಿರಬಹುದು, ಘಟನೆ ಸಂಭವಿಸಿದ್ದು. ಮನೆ ಕಡೆ ಹೆಜ್ಜೆ ಹಾಕಿದೆ. ಕಾಲುಗಳು ಬಸವಳಿಯುತ್ತಿವೆ ಎನಿಸಿತು. ಬಹುಷಃವಿಷವೇರುತ್ತಿರಬೇಕು. ಇನ್ನು ಐದೋ-ಆರೋ ನಿಮಿಷ. ಮತ್ತೆ ಮನೆ ಮುಂದೆ ವಿಷಾದದ ಛಾಯೆ. ಅಪ್ಪ ಗಾಡ ಮೌನಿಯಾಗುತ್ತಾನೆ. ಅಮ್ಮ ಕರಗಿ, ಕರಗಿ ಗೋಳಿಗೆ ಹಣೆ ಹಚ್ಚಿಕೊಳ್ಳುತ್ತಾಳೆ. ನಾನು ಸತ್ತು ನಾಲ್ಕೋ-ಐದು ಗಂಟೆಗಳಲ್ಲಿ ಸುಡಬಹುದು. ಹೆಚ್ಚೆಂದರೆದೊಡ್ಡಪ್ಪ ಬರುವವರೆಗೆ ಕಾಯಬಹುದೇನೋ. ಒಂಭತ್ತನೇ ದಿನಕ್ಕೆ ಹತ್ತಿರದವರು-ದೂರದವರು ಬರುತ್ತಾರೆ. ಊಟ ಮಾಡಿಹೋಗುತ್ತಾರೆ. ಇನ್ವಿಟೇಶನ್ ಕಾರ್ಡಲ್ಲಿ ರಾಹುಲ ಮೊಬೈಲ್ನಲ್ಲಿ ತೆಗೆದ ನನ್ನ ಫೋಟೋ ಹಾಕಬಹುದು. ಮನೆ ತಲುಪಿದರೆ ಅದನ್ನೇಹಾಕಬೇಕು ಅಂತ ಅವನಿಗೆ ಮೆಸೇಜು ಮಾಡಿಬಿಡಬೇಕು.

ಮನೆ ಹತ್ತಿರ ಬಂತು. ಛಾವಡಿಯಲ್ಲಿ ಕೂತೆ. ಫ್ಯಾನು ಅದುಮಿದೆ. ರೆಕ್ಕೆ ಬಡಿಯಲು ಪುರುಸೊತ್ತಿಲ್ಲದ ಪ್ರಾಣಪಕ್ಷಿಗೆ ಯಾಕೆ ಬೇಕುಫ್ಯಾನಿನ ಉಸಾಬರಿ?ಪ್ರಾಣ ದೇಹದಿಂದ ಕಳಚಿಕೊಂಡಾಗ ಮೈಯೆಲ್ಲ ಬೆವರುತ್ತದಾ? ಅಸಾಧ್ಯ ನೋವಾಗುತ್ತದಾ? ಗೊಂದಲಗಳಲ್ಲೇ ಕಣ್ಣು ಮುಚ್ಚಿದೆ.

ಫಕ್ಕನೆ ಎಚ್ಚರವಾಯ್ತು. ಕಣ್ಣು ಬಿಟ್ಟಾಗ ಬೆಳಿಗ್ಗೆ ಏಳು. ಇಷ್ಟಕ್ಕೂ ನಾನು ಈವರೆಗೆ ಅನುಭವಿಸಿದ್ದು ಕನಸೇ? ಕಾಳಿಂಗ ಸರ್ಪ ಕಚ್ಚಿದ್ದುನಿಜವಾ? ಕಚ್ಚಿದ್ದೇ ನಿಜವಾದರೆ ಅದು ನಿದ್ದೆಯಲ್ಲೋ,ಎಚ್ಚರದಲ್ಲೋ? ಇಷ್ಟೆಲ್ಲಾ ಆಗಿದ್ದರೂ ನಾನೇಕೆ ಸಾಯುತ್ತಿಲ್ಲ. ಸ್ಮೃತಿ-ವಿಸ್ಮೃತಿ
ಗಳ ನಡುವೆ ಕಳೆದು ಹೋಗುತ್ತಿದ್ದೇನೆಯೇ?

ಎದೆ ಶುಭ್ರವಾಗಿತ್ತು. ಮನಸ್ಸು ಗೊಂದಲಗಳ ಮೂಟೆ. ಮುಖಕ್ಕೆ ನೀರು ಚಿಮುಕಿಸಿದೆ. ಬಟ್ಟ ಬಯಲು ಅಪ್ಪಿಕೊಂಡ ಮೊದಲಮಳೆಯಂತೆ ಭಾಸವಾಯಿತು. ಉಲ್ಲಾಸ ಚಿಮ್ಮುತ್ತಿದೆಯೆನಿಸಿತು. ಎಂದಿನಂತೆ ಕನ್ನಡಿಯಲ್ಲಿ ಮುಖ ನೋಡಿಕೊಂಡೆ. ಬೆಚ್ಚಿಬಿದ್ದೆ. ಮೂರ್ಛೆ ಹೋಗುವುದೊಂದೇ ಬಾಕಿ. ಆಯಾಸಗಳೆಲ್ಲಾ ರಾತ್ರಿ ಕರಗಿ ನೆರಿಗೆಯಾಗಿ ಬಿದ್ದಿದೆಯೇನೋ ಎನ್ನುವಷ್ಟರ ಮಟ್ಟಿಗೆ ಮುಖದತುಂಬಾ ನೆರಿಗೆ. ಶುದ್ಧ ಬರಗೆಟ್ಟ ನೆಲದಂತಹ ಒಡೆದ ಮುಖ ವಿಕಾರವಾಗಿ ಆಕಳಿಸುತ್ತಿತ್ತು. ಬೆವರು ಕಟ್ಟೆ ಒಡೆಯಲು ಪ್ರಾರಂಭಿಸಿತು.ದೇಹ ಗಾಳಿಗೆ ಸಿಕ್ಕ ತರಗೆಲೆಯಂತೆ ಅಲ್ಲಾಡಿತು. ನನ್ನಲ್ಲಾದ ಬದಲಾವಣೆಯಿಂದ ಎದೆ, ಸಾವಿರ ಪಿಸ್ಟನ್ನಿನ ವೇಗದಂತೆಹೊಡೆದುಕೊಳ್ಳುತ್ತಿತ್ತು. ಸಾವು ರಕ್ತ ಹೀರಲು ಪ್ರಾರಂಭಿಸಿದೆಯೇ? ದಿನ ದಿನವೂ ಸ್ವಲ್ಪ ಸ್ವಲ್ಪವೇ ಸಾಯಲು ತಯಾರಿಮಾಡಿಕೊಳ್ಳಬೇಕೇ? ಇವತ್ತಂತೂ ಕಾಳೇಜಿಗೆ ಬೇಗ ಹೋಗಬೇಕು. ಅಸೈನ್ಮೆಂಟು ಬೇರೆ ಇಡಬೇಕು. ಸ್ನಾನಕ್ಕೆ ಬಚ್ಚಲಿಗೆ ಓಡಿದೆ. ಬೈರಾಸು ಜೊತೆಗಿತ್ತು. ಕರೆಂಟು ಬೇರೆ ಇರಲಿಲ್ಲ. ಹೊರಗೆ ಬೆಳಕಿದ್ದರೂ ಬಚ್ಚಲಿಗೆ ಯಾವತ್ತೂ ಸೂರ್ಯೋದಯವಾಗುತ್ತಿರಲಿಲ್ಲ. ಅಲ್ಲಿಬಲ್ಬೇ ಸೂರ್ಯ,ಚಂದ್ರ, ನಕ್ಷತ್ರ. ಇಲ್ಲದಿದ್ದರೆ ಅಮಾವಾಸ್ಯೆ ಕತ್ತಲು. ನಮ್ಮ ಮನೆಗೆ ಇದೊಂದು ಶಾಪ. ಬಾಲ್ದಿಗೆ ಹಂಡೆಯಿಂದ ಬಿಸಿನೀರು ತೋಡಿದೆ. ಸ್ವಲ್ಪ ತಣ್ಣೀರು ಹಾಕಿದೆ. ಉಗುರು ಬೆಚ್ಚಗಿನ ನೀರು ಅಂತ ಖಾತ್ರಿ ಮಾಡಿ, ಖುಷಿಯಿಂದ ಮೈಯ್ಗೆ ಸುರಿದಾಗ ಸುಟ್ಟುಹೋಗುವಷ್ಟು ಬಿಸಿ. ತಣ್ಣೀರು ಸಾಕಾಗಲಿಲ್ಲವೇನೋ. ಮತ್ತೆ ಬಾಲ್ದಿಗೆ ಸೇರಿಸಿದೆ. ಈಗಲೂ ಮೈ ತುಂಬಾ ಉರಿ, ಉರಿ. ಬಿಸಿ ನೀರಿನಸಹವಾಸ ಸಾಕಪ್ಪಾ ಸಾಕು ಅಂದುಕೊಂಡು ತಣ್ಣೀರನ್ನು ಮೈಗೆ ಹೊಯ್ದುಕೊಂಡೆ. ಯಾವತ್ತಿಗಿಂತಲೂ ನೀರು ತಂಪಾಗಿತ್ತು. ದೇಹಕ್ಕೂ ಹಿತ ಎನಿಸುತ್ತಿತ್ತು. ಮತ್ತೆರಡು ಬಾಲ್ದಿ ತಣ್ಣೀರು ಸುರಿದುಕೊಂಡೆ. ಜಲಪಾತವೊಂದರ ಕೆಳಗೆ ಬೆತ್ತಲೆ ನಿಂತ ಅನುಭವ. ಮನಸ್ಸು ಅರಳಲು ಪ್ರಾರಂಭವಾಯ್ತು. ಮೈಯೊರೆಸಲು ಬೈರಾಸು ತೆಗೆದಾಗ ಕರೆಂಟು ಬಂತು. ಒರಸುತ್ತಾ ಮೈ-ಕೈನೋಡಿಕೊಂಡಾಗ ಹೌಹಾರಿದೆ. ಎದೆಯ ಭಾಗದಲ್ಲಾಗಲೇ ಕೃಷ್ಣ ಕಪ್ಪು. ಕಪ್ಪುಪಟ್ಟೆ ಸುರುಳಿ ಬಿಚ್ಚಿತ್ತು. ಬಲಗೈಯ ಅರ್ಧಭಾಗದವರೆಗೆ ಹರಡಿ ಬೆಳೆಯುತ್ತಲೇ ಇತ್ತು. ನೋಡ ನೋಡುತ್ತಿದ್ದ ಹಾಗೆಯೇ ಸ್ವಲ್ಪ-ಸ್ವಲ್ಪವೇ ಆವರಿಸಿಕೊಳ್ಳುತ್ತಿತ್ತು. ಕಪ್ಪಾದಜಾಗದಲ್ಲೇನೋ ಮೃದುತ್ವ. ಮಿಂಚಿನ ಸಂಚಲನ.

ಅನುಮಾನವೇ ಇಲ್ಲ. ನಾನು ಸಾಯುತ್ತಿಲ್ಲ. ಹಾವಾಗಿ ಬದಲಾಗುತ್ತಿದ್ದೇನೆ. ಕಾಳಿಂಗ ಸರ್ಪವಾಗಿ ಬದಲಾಗುತ್ತಿದ್ದೇನೆ. ಸಾವು ಹೀಗೂಸಾಧ್ಯವಾ? ಪೂರ್ತಿ ಹಾವಾಗಿ ಹೆಡೆ ಬಿಚ್ಚಲು ಇನ್ನೆಷ್ಟು ಗಂಟೆ ಬೇಕು?ನಾನು ಹಾವಾಗಿ ಬದಲಾಗುತ್ತಿರುವುದು ವಾಸ್ತವವೇ ಅಥವಾನನ್ನ ಭ್ರಮೆಯ ಭಾಗವೇ? ಛೆ...ಛೆ... ಮನುಷ್ಯನೊಬ್ಬ ಹಾವಾಗುವುದು ಅಂದರೆ ನಂಬೋದಕ್ಕೆ ಸಾಧ್ಯಾನಾ? ಬಹುಷಃ ಸಾಯುವಮುಂಚೆ ಒಳ್ಳೆಯದೆಲ್ಲ ಕರಗಿ ಆವಿಯಾಗಿ ಕೆಟ್ಟದ್ದು ಕಪ್ಪಗಿ ಹೆಪ್ಪುಗಟ್ಟುತ್ತಿದೆಯೇ? ಗೊಂದಲದ ಕಡಲು ಉಕ್ಕುತ್ತಿತ್ತು.

ಕಾಳಿಂಗ ಕಚ್ಚಿದ ದಿನ ತೋಟದಿಂದ ಮನೆಗೆ ಬರುತ್ತಿದ್ದಾಗ ಗದ್ದೆ ಬದಿ ಅಚ್ಚಣ್ಣ ಸಿಕ್ಕಿದ್ದರು. ಮನೆಗೆ ಹೋಗಿದ್ದರಂತೆ. ನನ್ನನ್ನ ನೋಡಿತಿಂಗಳಾಯ್ತಲ್ಲೇನೋ ನಿನ್ನನ್ನ ನೋಡಿ. ದಿನೇ ದಿನೇ ತೆಳ್ಳಗಾಗುತ್ತಿದ್ದೀಯಾ ಮಾರಾಯ" ಅಂದರು. ನಾನು ನಗುತ್ತಾ "ಹೌದೌದುಮುಂದೊಂದು ದಿನ ಕರಗಿಯೇ ಹೋಗುತ್ತೇನೆ" ಎಂದಿದ್ದೆ. ಹಾಗಾದರೆ ನಾನು ಸಾಯುವ ವಿಚಾರ ನನಗೆ ಗೊತ್ತಿಲ್ಲದಿದ್ದರೂ, ನನ್ನಅರಿವಿಗೆ ಗೊತ್ತಿತ್ತಾ? ತಿಂಗಳಿನಿಂದ ಇಷ್ಟಿಷ್ಟೇ ಸಾಯುತ್ತಿದ್ದವನಿಗೆ ಸಾಯುತ್ತಿರುವ ಅನುಭವ ಕೊಟ್ಟದ್ದು ಕಾಳಿಂಗ ಸರ್ಪವಾ?

ಮೈ ಮುಚ್ಚಿಕೊಂಡು ಬಚ್ಚಲಿನಿಂದ ರೂಮಿಗೆ ದಡಬಡಿಸಿದೆ. ಉದ್ದನೆಯ ಕೈಯ ಅಂಗಿಯನ್ನು ಹುಡುಕಿ ಹಾಕಿದೆ. ಸರಸರ ನಡೆಯುತ್ತಾಗೇಟು ದಾಟಿದ ಮೇಲೆ 'ಅಮ್ಮ, ಕಾಲೇಜಿಗೆ ಹೋಗಿ ಬರ್ತೀನಿ' ಅಂತ ಕೂಗು ಹಾಕಿದೆ. 'ಕಾಲೇಜೂ ಬೇಡ. ಏನೂ ಬೇಡ. ಬೇಕಿದ್ದರೆಮಧ್ಯಾಹ್ನ ನಂತರ ಹೋದರಾಯಿತು' ಅಂತನ್ನಿಸುತ್ತಿತ್ತು. ಆದರೂ ಹೆಜ್ಜೆ ಸರಸರ ಸಾಗುತ್ತಿತ್ತು. ಮನೆಯಿಂದ ಎರಡು ಮೈಲಿ ನಡೆದರೆಸಾಕು. ಕಾಲೇಜಿಗೆ ಬಸ್ಸೋ, ಜೀಪೋ ಸಿಗುತ್ತಿತ್ತು. ಆದರೆ ಸಾಗುವ ಎರಡು ಮೈಲಿ ಮಾತ್ರ ನಿರ್ಜನ ಸಂತೆ. ಕಾಡು ಬೇರೆ. ಬಳುಕುವಹದಿಹರೆಯದ ಸುಂದರಿಯ ಹಾಗಿರುವ ಕಾಲುದಾರಿಯಲ್ಲಿ ನಡೆಯಬೇಕು.

ನಡೆಯುತ್ತಲೇ ಇದ್ದೆ. ಶ್ವಾಸಕೋಶಗಳನ್ನು ಮೊದಲ ಬಾರಿಗೆ ಹಿಂಡಿದಂತಾಯಿತು. ಕೆಮ್ಮು ಬಂತು ಅಂತ ಬಾಯಿ ತೆರೆದು ಕುಳಿತರೆಹೊರಬಿದ್ದದ್ದು ದೊಡ್ಡ ಶ್ವಾಸ. ನಂತರ ನಾನು ನಾನಾಗಿರಲಿಲ್ಲ. ಮೂಗಿನ ಹೊಳ್ಳೆ ಒಳಗೆ ಹೋದ ಗಾಳಿ ಹೊರ ಬಂದಾಗ ಬುಸ್ಎಂದು ಶಬ್ದ ಮಾಡುತ್ತಿತ್ತು. ಹೊರ ಬರುವ ಗಾಳಿಯಲ್ಲಿ ರೋಷವಿತ್ತೋ, ಆವೇಶವಿತ್ತೋ ಬಲ್ಲವರಾರು. ಅರ್ಧ ಮೈಲಿ ನಡೆದಿರಬಹುದು.
ನಡಿಗೆ ಮತ್ತೂ ವೇಗವಾಗುತ್ತಿದೆಯಲ್ಲ ಎಂದು ನನ್ನನ್ನ ನೋಡಿಕೊಂಡಾಗ ಆಶ್ಚರ್ಯವಾಯ್ತು. ನಾನು ನಡೆಯುತ್ತಿಲ್ಲ, ತೆವಳುತ್ತಿದ್ದೇನೆ. ಕೈ,ಕಾಲುಗಳೆಲ್ಲಾ ಅಂಟಿ ಆಗಲೇ ಹೊತ್ತಾಗಿತ್ತು. ಅಡ್ಡಡ್ಡ ಬೆಳೆದಿದ್ದವನು ದಾರಿಯುದ್ದಕ್ಕೂ ಉದ್ದುದ್ದ ಬೆಳೆದಿದ್ದೆ. ಆದರೆ ಎದೆಲ್ಲ ನನ್ನಗಮನಕ್ಕೇ ಬರಲಿಲ್ಲ. ಹಾಕಿದ್ದ ಜೀನ್ಸ್ ಪ್ಯಾಂಟು, ಅಂಗಿ ಪೊರೆ ಕಳಚಿದಂತೆ ದಾರಿಯಲ್ಲಿ ಕಳಚಿ ಬಿದ್ದಿತ್ತು. ನಗ್ನದೇಹಿ ನಾನೀಗ. ಸಾಯುವ ಪ್ರತೀ ಪ್ರಕ್ರಿಯೆಯೂ ಹೀಗೇನಾ? ನಡೆದೇ ಸಾಯಬೇಕಾ? ಕತ್ತು, ಮುಖ ಎರಡನ್ನು ಬಿಟ್ಟು ಇಡೀ ದೇಹ ಕಪ್ಪು ಕಪ್ಪಾಗಿತ್ತು. ಮೆತ್ತಗಾಗಿತ್ತು. ಸದ್ಯ, ಮಾತನಾಡಲಾದರೂ ಸ್ವಾತಂತ್ರ್ಯವಿದೆಯಲ್ಲ ಅಂದುಕೊಂಡೆ.

ಕ್ಲಾಸು ತಲುಪಿದೆ. ಆವತ್ತಿನ ಮೊದಲ ಪಿರೇಡು ಇಂಗ್ಲೀಷ್ ಲಿಟರೇಚರ್. ಕ್ಲಾಸಿಗೆ ಬಂದ ಪ್ರೊಫೆಸರ್ರು ಅಟೆಂಡೆನ್ಸು ಕರೆಯಲು ಶುರುಮಾಡಿದರು. ನನ್ನ ಹೆಸರು ಕರೆದರು. ಎಂದಿನಂತೆ 'ಎಸ್ ಸಾರ್' ಅಂದೆ. ಯಾವುದೋ ಅಗೋಚರ ಸಿಡಿಲ ಧ್ವನಿಸುಳಿಗಾಳಿಯೊಂದಿಗೆ ಹೊರಬಂದಂತಿತ್ತು, ನನ್ನ ಮಾತು. ನಾನು ಮಾತಾಡಿರಲಿಲ್ಲ, ಬುಸುಗುಟ್ಟಿದ್ದೆ. ನಾನು ಕುಳಿತುಕೊಳ್ಳುವಜಾಗದಲ್ಲಿ ನಾನಿರಲಿಲ್ಲ! 'ಸಾರ್ ನಾನು ಕಾಳಿಂಗ ಸರ್ಪವಾಗಿ ಬದಲಾಗಿದ್ದೇನೆ' ಎಂದು ಹೇಳಿದೆ. ಮೆಟಫಿಜಿಕಲ್ ಪೋಯೆಟ್ರಿಎಂದೆಲ್ಲಾ ಬಡಬಡಿಸುತ್ತಿದ್ದ ಪ್ರೊಫೆಸರಿಗೆ ನಾನವತ್ತು ಸೂಪರ್ ನ್ಯಾಚುರಲ್ ಎಲಿಮೆಂಟಿನಂತೆ ಕಂಡೆ. ಒಂದರೆಕ್ಷಣ ಇಡೀ ತರಗತಿಸ್ಥಬ್ದ. ನಂತರದ್ದು ಎದ್ದೆವೋ ಬಿದ್ದೆವೋ ಎಂಬ ಓಟ. ಜೊತೆಗೆ ಕಿರುಚಾಟ, ಅರಚಾಟ. ಕಾಳಿಂಗ....ಕಾಳಿಂಗ....ಸರ್ಪ....ಕಾ
"
ಳಿಂಗಸರ್ಪ.... ನಂತರ ನಾನಲ್ಲಿರಲಿಲ್ಲ.

'ಥೂ ಇವರ ಸಹವಾಸವೇ ಬೇಡ. ಬದಲಾದವರು ಯಾವತ್ತಿಗೂ ಇವರಿಗೆ ಬೇಡ. ಮೊದಲ ನೋಟದಲ್ಲಿ ಅವರಿಗೆ ಕಂಡ ಹಾಗೇನಾವಿರಬೇಕು. ಹಾಗಿದ್ದರೆ ಮಾತ್ರ ಲೋಕಕ್ಕೆ ಪ್ರೀತಿ-ಪಾತ್ರ. ಇತರರಿಗೆ ಬೇಕಾದಂತೆ ಬದುಕಬೇಕು. ಆಗ ಬದಲಾಯಿತು ಮುಖಅಂಗೈಯಗಲದ ಹೆಡೆಯಂತೆ. ಮೂಡಿತು ರೋಷದ ಕಡಲು. ರಣಚಂಡಿ ಬುಸುಗುಡುವಿಕೆ.

ಸೀದಾ ತೆವಳುತ್ತಾ, ಓಡುತ್ತಾ ಗುಡ್ಡವೊಂದರ ತುದಿಗೆ ಹೋಗಿ ನಿಂತೆ. ತುಂಬಾ ಹೊತ್ತು ಒಂಟಿಯಾಗಿದ್ದೆ. ನಿರಾಶನಾಗಿದ್ದೆ. ನನ್ನಬುಸುಗುಡುವಿಕೆ ಮಾತ್ರ ಕೇಳಿಸುತ್ತಿತ್ತು. ಮುಂದೇನು? ತೋಚಲಿಲ್ಲ. ಆಗ ಬಂದದ್ದು ರಣಹದ್ದು. ಗುಡ್ಡದ ಏಕಾಂಗಿ ಬೋಳು ಮರದತುದಿಯಲ್ಲಿ ಕೂತು ನನ್ನನ್ನೇ ನೋಡುತ್ತಿತ್ತು. ನಾನೂ ಹೆಡೆಯರಳಿಸಿದೆ. 'ನಿನಗೆ ಆಗಸ ತೋರಿಸುತ್ತೇನೆ. ಕನಸು ಕಾಣಬೇಡ. ಭವಿಷ್ಯದ ಚಿಂತೆ ಬೇಡ. ನಾನೇ ನಿನ್ನ ಕನಸು. ಎತ್ತರಕ್ಕೇರಲು ಗೋಪುರ ಕಟ್ಟಿದರೆ ಸಾಲದು. ಧೈರ್ಯ ಬೇಕು, ಬಾ' ಎಂದಿತು. ಕೊಕ್ಕಿನಿಂದ ಕುಕ್ಕಿತು.

ಆಗ ನಾನಂತೂ ಪೂರ್ಣ ಶೂನ್ಯ.

(ಉದಯವಾಣಿಯಲ್ಲಿ ಪ್ರಕಟವಾದ ಕತೆ)

ಸೋಮವಾರ, ಅಕ್ಟೋಬರ್ 13, 2008

ಯಾವ ಮೋಹನ ಮುರಳಿ ಕರೆಯಿತೋ...(ಪುಟಾಣಿ ಕತೆ-9)

ಊರಿಂದ ಪೇಟೆಗೆ ಹೊರಟಿದ್ದೆ.
ನನ್ನ ಸೀಟ್ ನಂಬರು:ಎ4, ಸ್ಲೀಪರ್ ಸೀಟು.
ಮೂಡುಬಿದಿರೆಯ ಏಕಾಂಗಿತನ, ಉಜಿರೆ ಪಕ್ಕದ ಕುಡುಮೌನಿ ಗಡಾಯಿಕಲ್ಲು, ಧರ್ಮಸ್ಥಳದ ದೀಪದ ಬೆಳಕು ದಾಟಿದಾಗ ಹತ್ತಿರ ಹತ್ತಿರ ಹನ್ನೆರಡು.

ಉಳುಕುತ್ತಾ,ಬಳುಕುತ್ತಾ ಬಸ್ಸು ಶಿರಾಡಿ ಘಾಟಿ ಏರುತ್ತಿದ್ದದ್ದು, ಬಲ ಬದಿಯಲ್ಲಿ ಜನರೇಟರಿನ ಬೆಳಕಲ್ಲಿ ರಾತ್ರಿ ಪಾಳಿಯ ಹೆಂಗಸರು, ಗಂಡಸರು ಗುಂಡ್ಯದ ಹೊಳೆಯ ಅಣೆಕಟ್ಟಿಗೆ ಕಾಂಕ್ರೀಟು ಹೊರುತ್ತಿದ್ದುದು ನೋಡಿದೆ. ನೋಡಿ ಆನಂದಿಸುವುದೋ, ದುಃಖಿಸುವುದೋ ಎಂದು ತಿಳಿಯುವ ಮೊದಲೇ ಮಂಪರು ನಿದ್ದೆ.

ಎದ್ದಾಗ ಬಸ್ಸು ಎಲ್ಲೋ ನಿಂತಿತ್ತು.
ಆಗ ಗಂಟೆ ಎರಡು. ಬಸ್ಸಿನಲ್ಲಿದ್ದವರಲ್ಲಿ ಬಹಳಷ್ಟು ಮಂದಿ ಹೊರಗೆ ಹೋಗಿದ್ದರು. ಉಳಿದವರು ಕೂತಲ್ಲಿ, ಕೆಲವರು ಮಲಗಿದಲ್ಲಿ ಚೆಲ್ಲಾಪಿಲ್ಲಿಯಾಗಿದ್ದರು.
ಅಷ್ಟು ಹೊತ್ತು ಬಲವಂತದಿಂದ ಕಟ್ಟಿಕೊಂಡಿದ್ದ ಉಚ್ಚೆಯನ್ನು ಹೊರಹಾಕಲು ಓಡಿದೆ. ಕೊರೆಯುವ ಚಳಿ. ಒಂದೈದು ನಿಮಿಷ ಒದ್ದಾಡಿದೆ.

ಒಂದರ ಪಕ್ಕ ಒಂದು. ಮಹಾನಗರದ ಕಡೆ ಹೊರಟ ಬಸ್ಸುಗಳು. ಕೆಲವರು ಹೊರಗಡೆ ಕಾಫಿ ಹೀರುತ್ತಿದ್ದರು. ಚಳಿಯಲ್ಲಿ ನಡುಗುತ್ತಿದ್ದರು. ಹೋಟೇಲಿನ ಸಿಡಿ ಪ್ಲೇಯರ್ "ಏನೋ ಒಂಥರಾ" ಎಂದು ಅರಚುತ್ತಿತ್ತು.

ಸ್ವಲ್ಪ ಹೊತ್ತಲ್ಲೇ
ಒಂದೊಂದೇ ಹೆಡ್ ಲೈಟುಗಳು ಬೆಳಗಿದವು.
ಬಸ್ಸಿನ ಡ್ರೈವರುಗಳು ಅಕ್ಸಿಲೇಟರಿನ ಮೇಲೆ ಕಾಲು ಅದುಮಲು ಶುರುಮಾಡಿದರು. ಸ್ಟೇರಿಂಗಿನ ಆಣತಿಯಂತೆ ಚಕ್ರಗಳು ತಿರುಗಿದವು ವೇಗವಾಗಿ, ಆಚೆ-ಈಚೆ.

ನನ್ನದು ಯಾವ ಬಸ್ ನಂಬರು?
C1, M,Y,Z,1,2,3.......
??????????
ಆ ಕ್ಷಣಕ್ಕೆ ಹೊಳೆಯಲಿಲ್ಲ.

ಅಕ್ಸಿಲೇಟರಿನ ವೇಗಕ್ಕೆ ಬಸ್ಸಿನ ಟಯರುಗಳು ಸ್ಪೀಡಾಗಿ ನನ್ನಿಂದ ದೂರ ಓಡಲು ಶುರು ಮಾಡಿದವು.
ವೇಗವಾಗಿ ಮತ್ತೂ ವೇಗವಾಗಿ.

ಶುಕ್ರವಾರ, ಅಕ್ಟೋಬರ್ 10, 2008

ಸಿಗ್ನಲ್ಲು ಹಳದಿಯಿಂದ ಹಸಿರಿಗೆ ತಿರುಗುತ್ತಿದ್ದಾಗ...(ಪುಟಾಣಿ ಕತೆ-8)


ಮೊನ್ನೆ ಮೊನ್ನೆ ಜೆ.ಸಿ.ರೋಡ್ ಬ್ಲಾಕ್ ಆದಾಗ ಒಂದು ಮುಖ ಕಂಡಿತ್ತು, ಟ್ರಾಫಿಕ್ಕಿನ ಮಧ್ಯೆ.
ತುಂಬಾ ಪರಿಚಿತ ಮುಖ ಅದು.
ಸಿಗ್ನಲ್ ಹಳದಿ ದೀಪಕ್ಕೆ ತಿರುಗಿ ನಂತರ ಹಸಿರು ದೀಪವನ್ನು ತೋರಿಸುತ್ತಿದ್ದಾಗ ಈ ಘಟನೆ ಸಂಭವಿಸಿದ್ದು.

ಮತ್ತೆ ಜೆ.ಸಿ. ರೋಡ್ ಬ್ಲಾಕ್ ಆಗಲಿಲ್ಲ.

ಇವತ್ತು ಟ್ರಾಫಿಕ್ ಜಾಮ್ ಆಗಿದೆ.
ಸಿಗ್ನಲ್ಲು ಹಳದಿಯಿಂದ ಹಸಿರಿಗೆ ತಿರುಗುತ್ತಿದೆ.
ಟ್ರಾಫಿಕ್ಕಿನ ಮಧ್ಯೆ ಯಾವುದೋ ಮುಖ ಮತ್ತೆ ಮತ್ತೆ ಪರಿಚಿತ ಅನ್ನಿಸುತ್ತಿದೆ.

ಇದು ಅದೇ ಹಳೆಯ ಮುಖವಾ ಅಥವಾ ಹೊಸ ಮುಖವಾ?
ಭಾನುವಾರ, ಅಕ್ಟೋಬರ್ 5, 2008

ವಿಧೇಯನಾಗಿ ಉಳಿದು ಹೋದ ಒಬ್ಬ ಸಾಮಾನ್ಯ ಮನುಷ್ಯನಮಗೆಲ್ಲಾ ರಾಜ್ ಕುಮಾರ್ ಇವತ್ತಿಗೂ ಇಷ್ಟವಾಗುವುದಕ್ಕೆ ಕಾರಣಗಳಿವೆ.

ನಾವ್ಯಾವತ್ತೂ ಆತನನ್ನು ಹೊರಗಿನವನು ಅಂತ ಪರಿಗಣಿಸಲೇ ಇಲ್ಲ. ಇವತ್ತಿಗೂ ಆ ರಾಜಕುಮಾರ ನಮ್ಮ ಮನೆಯವನೇ. ಅಕ್ಕರೆಯ ಅಣ್ಣ, ಒಲುಮೆಯ ಗಂಡ,ನಲ್ಮೆಯ ಗೆಳೆಯ, ವಿಧೇಯ ಮಗ, ಬುದ್ಧಿವಂತ, ಹೃದಯವಂತ ವ್ಯಕ್ತಿಯಾಗಿಯೇ ನಮ್ಮ ಭಾವಕೋಶದಲ್ಲಿ ಉಳಿದು ಬಿಟ್ಟಿದ್ದಾನೆ.

ಆತನ ಸಿನಿಮಾಗಳಿಂದ ನಾವು ಕಲಿತಿದ್ದನ್ನು ಮರೆಯಲು ಸಾಧ್ಯವೇ....?
ಅವರೊಂಥರಾ ನಮ್ಮೆಲ್ಲರ ಪ್ರೀತಿಯ ಮೇಷ್ಟ್ರು. ಅದೆಷ್ಟು ಬಾರಿ ತಿದ್ದಿ, ತೀಡಿದ್ದಾರೆ ಅಪ್ರತ್ಯಕ್ಷವಾಗಿ. ಅದಕ್ಕೇ ರಾಜ್ ಹೊರಗಿನವರಲ್ಲ. ನಮ್ಮ ಕುಟುಂಬದ ಸದಸ್ಯ ಎನ್ನಲು ಪ್ರತೀ ಬಾರಿ ಹೆಮ್ಮೆ ಎನಿಸುತ್ತದೆ.
ಈ ಭಾವನೆ ಕರ್ನಾಟಕದುದ್ದಕ್ಕೂ ಇದೆ. ತಮ್ಮ ಸರಳ, ಸಜ್ಜನ, ನಡೆ-ನುಡಿ, ಅಭಿನಯದ ಮೂಲಕ ಪ್ರೀತಿಯ,ಸಂವೇದನೆಯ ಕೋಟೆಯನ್ನು ನಮ್ಮೊಳಗೆ ಕಟ್ಟಿ ಹೋಗಿದ್ದಾರೆ ರಾಜ್. ಅಭಿಮಾನಿಗಳಿಗೆ ಆತ ನಟಸಾರ್ವಭೌಮ, ವರನಟ, ಕನ್ನಡ ಕಂಠೀರವ. ಆದರೆ ನಮ್ಮೆಲ್ಲರ ಪಾಲಿಗೆ ಆತ ಕೇವಲ ರಾಜಣ್ಣ. "ಅಭಿಮಾನಿ ದೇವರುಗಳೇ" ಎಂದು ಸಂಬೊಧಿಸುತ್ತಾ ವಿಧೇಯನಾಗಿ ಉಳಿದು ಹೋದ ಒಬ್ಬ ಸಾಮಾನ್ಯ ಮನುಷ್ಯ.


ಅತ್ಯಂತ ಹಿಂದುಳಿದ, ಬಡ, ರೈತಾಪಿ ಕುಟುಂಬದಿಂದ ಬಂದ ದೊಡ್ಡ ಗಾಜನೂರಿನ ಸಿಂಗಾನೆಲ್ಲೂರು ಪುಟ್ಟಸ್ವಾಮಯ್ಯನವರ ಮಗ ಮುತ್ತುರಾಜ್, ಯಾವ ಗಾಡ್ ಫಾದರುಗಳ ಹಂಗಿಲ್ಲದೆ ಕನ್ನಡಿಗರ ಕಣ್ಮಣಿಯಾಗಿ ಬೆಳೆದ ರೀತಿ ಕಣ್ಮನ ತಣಿಯುವಷ್ಟೇ ಅಪೂರ್ವ. ರಾಜ್ ಕುಮಾರ್ ಅಭಿನಯಿಸಿದಷ್ಟು ವೈವಿಧ್ಯಮಯ ಪಾತ್ರಗಳು ಬಹುಷಃ ಇನ್ಯಾವ ನಟನಿಗೂ ಒಲಿದಿಲ್ಲ. ಸಾಮಾಜಿಕ ಪಾತ್ರಗಳಿಗಿಂತ ಪೌರಾಣಿಕ, ಐತಿಹಾಸಿಕ ಪಾತ್ರಗಳಿಂದಲೇ ರಾಜ್ ಕುಮಾರ್ ಮನೆ-ಮನ ತಟ್ಟಿದವರು.
ಬಬ್ರುವಾಹನನ ಆ ಅಸ್ಖಲಿತ ಸಂಭಾಷಣೆ, ಆವೇಶ ಮರೆಯಲು ಸಾಧ್ಯವೇ?--"ಏನು ಪಾರ್ಥ, ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನ ಗೆಲ್ಲಲಾರೆ" ಎನ್ನುವ ಸಂಭಾಷಣೆ ರಾಜ್ ಬಾಯಿಂದ ಕೇಳಿದರೆ ಇವತ್ತಿಗೂ ರೋಮಾಂಚನ,ಮೈಯೆಲ್ಲ ಕಿವಿಯಾಗುತ್ತದೆ. ಅರ್ಜುನನ ಬಗ್ಗೆ ಅನುಮಾನಗಳೇಳುತ್ತವೆ. ಯಾವ ಪಾತ್ರ ಕೊಟ್ಟರೂ ಪರಕಾಯ ಪ್ರವೇಶವೇ. ಕನಕದಾಸ, ಪುರಂದರದಾಸ, ಪುಲಿಕೇಶಿ, ಕಾಳಿದಾಸ, ಮಯೂರ ,ಕೃಷ್ಣದೇವರಾಯ ಹೇಗಿದ್ದರೋ ಗೊತ್ತಿಲ್ಲ. ಆದರೆ ಅವರನ್ನೆಲ್ಲಾ ನಾವು ಸಾಕ್ಷಾತ್ ನೋಡುವಂತಾಗಿದ್ದು ರಾಜ್ ಕುಮಾರ್ ಮೂಲಕ."ಬಂಗಾರದ ಮನುಷ್ಯ" ರಾಜೀವನನ್ನು ಮರೆತೆನೆಂದರೂ ಮರೆಯಲಿ ಹ್ಯಾಂಗ?

ಇವತ್ತು ಚಲನಚಿತ್ರ ಎನ್ನುವುದು ಪಕ್ಕಾ ಉದ್ಯಮ. ವ್ಯಾಪಾರಿ ಮನಃಸ್ಥಿತಿ, ಲಾಭ-ನಷ್ಟಗಳ ಲೆಕ್ಕಾಚಾರಗಳೇ ಏಣಿಯ ಅಂತಿಮ ಮೆಟ್ಟಿಲುಗಳು. ಆದರೆ ಚಲನಚಿತ್ರ ಮಾಧ್ಯಮವನ್ನು ಸಾಂಸ್ಕೃತಿಕ ಮಾಧ್ಯಮವಾಗಿ ಜೀವಿತಾವಧಿವರೆಗೂ ಬೆಳೆಸಿದ, ಪೊರೆದುಕೊಂಡು ಬಂದವರಲ್ಲಿ ರಾಜ್ ಅಗ್ರಗಣ್ಯ. ಡಬ್ಬಿಂಗ್ ಹಾವಳಿ ತಪ್ಪಿಸಲು ಸ್ನೇಹಿತರ ಜೊತೆ ಸೇರಿಕೊಂಡು ನಿರ್ಮಿಸಿದ "ರಣಧೀರ ಕಂಠೀರವ" ಚಲನಚಿತ್ರ ರಾಜ್ ಕುಮಾರ್ ಅವರಿಗಿದ್ದ ಸಾಂಸ್ಕೃತಿಕ ಮಾಧ್ಯಮದೆಡೆಗಿನ ಕಾಳಜಿಯ ಮತ್ತೊಂದು ರೂಪ. ಅನ್ಯ ಭಾಷಾ ಚಿತ್ರಗಳಲ್ಲಿ ನಟಿಸುವುದಿಲ್ಲ ಎನ್ನುವ ತಮ್ಮ ನಿಲುವಿಗೆ ಬದ್ಧವಾಗಿದ್ದದ್ದು, ಇದೇ ಕಾರಣಕ್ಕಾಗಿ ಅಮಿತಾಭ್ "ಕೂಲಿ" ಚಿತ್ರದಲ್ಲೊಂದು ಪಾತ್ರ ನಿರ್ವಹಿಸಲು ವಿನಂತಿಸಿದಾಗ ತಿರಸ್ಕರಿಸಿದ್ದು....... ಗೋಕಾಕ್ ಚಳವಳಿ ರಾಜ್ ಕುಮಾರ್ ಪ್ರವೇಶದ ನಂತರ ಪಡೆದುಕೊಂಡ ಜನಬೆಂಬಲ, ಸ್ಪಂದನೆ ಅವರ ಸಿನಿಮಾಗಳಷ್ಟೇ ಅಪೂರ್ವ ದ್ರಶ್ಯಾವಳಿಗಳ ಸಂಕಲನ.

"ಯಾರೇ ಕೂಗಾಡಲಿ, ಊರೇ ಹೋರಾಡಲಿ" ಎಂದು ಹಾಡಲು ಶುರು ಮಾಡುತ್ತಾ, "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು", "ಜನರಿಂದ ನಾನು ಮೇಲೆ ಬಂದೆ" ಎನ್ನುತ್ತಾ ಹೊಸ ಸಂಕಲ್ಪಕ್ಕೆ, ದೀಕ್ಷೆಗೆ, ಬದ್ಧತೆಗೆ ಜನಸಾಮಾನ್ಯನನ್ನು ತೆರೆದುಕೊಳ್ಳುವಂತೆ ಮಾಡಿದ್ದು ನಮ್ಮ ರಾಜ್ ಕುಮಾರ್.
ಇವತ್ತಿಗೂ ಕೂಡಾ ಮುತ್ತುರಾಜನ "ರಾಜಕುಮಾರ" ಎನ್ನುವ ಚೇತನ ಅನೇಕರ ಬದುಕುಗಳನ್ನು ಕಟ್ಟಿಕೊಳ್ಳಲು ಸಹಾಯಮಾಡುತ್ತಿದೆ, ತಿದ್ದಿಕೊಳ್ಳಲು ನೆರವಾಗುತ್ತಿದೆ. ಕುಸಿದು ಬಿದ್ದ ಮನೆಯ ಒಂದೊಂದೇ ಇಟ್ಟಿಗೆ ಪೇರಿಸಲು ಸಹಾಯ ಮಾಡುತ್ತಿದೆ.

ಇದೆಲ್ಲವನ್ನು ಸಾಧ್ಯಮಾಡುವುದು ಮತ್ತದೇ ನಮ್ಮ ರಾಜ್ ಕುಮಾರ್ ಎಂಬ ಪ್ರೀತಿಯ ಮೇಷ್ಟ್ರು, ಅಕ್ಕರೆಯ ಅಣ್ಣ, ಒಲುಮೆಯ ಗಂಡ, ನಲ್ಮೆಯ ಗೆಳೆಯ, ವಿಧೇಯ ಮಗ, ಬುದ್ಧಿವಂತ, ಹೃದಯವಂತ .......

ಎಲ್ಲಕ್ಕಿಂತ ಹೆಚ್ಚಾಗಿ ವಿಧೇಯನಾಗಿ ಉಳಿದು ಹೋಗುವ ಮನುಷ್ಯ.


ಚಿತ್ರಕೃಪೆ :ಪಿಕಾಸ ವೆಬ್ ಆಲ್ಬಮ್

ಶನಿವಾರ, ಸೆಪ್ಟೆಂಬರ್ 27, 2008

ದೇವರು ಬದುಕುತ್ತಾ ಸಾಯುತ್ತಾ...(ಪುಟಾಣಿ ಕತೆ-7)

ದೇವರು ಸತ್ತು ಹೋದರು ಅಂತ ಸುದ್ದಿ ಸಿಕ್ಕಿತು.

ಸಾಲಿಗ್ರಮಕ್ಕೆ ಹಾಲು ಎರೆದು ಸ್ವಚ್ಚಗೊಳಿಸುತ್ತಿದ್ದವ ಮಡಿ ಪಂಚೆಯಲ್ಲಿ ಓಡಿ ಹೋದೆ. ಅದಾಗಲೇ 24*7 ಚಾನೆಲ್ಗಳೆಲ್ಲಾ ಬ್ರೇಕಿಂಗ್ ನ್ಯೂಸ್ನಲ್ಲಿ ಈ ಸುದ್ದಿಯನ್ನು ಚ್ಯೂಯಿಂಗಮ್ಮಿನಂತೆ ಎಳೆಯಲು ಶುರು ಮಾಡಿದ್ದರು.

ದೇವರು ಇಷ್ಟು ಬೇಗ ಸಾಯಲು ಕಾರಣವೇನು?
ಮೊದಲ ನೋಟಕ್ಕೆ ಹಾರ್ಟ್ ಅಟ್ಯಾಕ್ ತರಹ ಕಾಣುತ್ತೆ. ಆದರೆ ಹೃದಯ ನಿಂತು ಹೋಗುವ ವಯಸ್ಸಾ ದೇವರದ್ದು.
ದೇವ್ರೂ ಕೂಡಾ ಸಾಯ್ತಾರೆ ಅಂದ್ರೆ ಅಶ್ಚರ್ಯ.

ಆದರೆ ಪೋಲೀಸ್ ಇಲಾಖೆ ಈ ಘಟನೆಯನ್ನು ಆತ್ಮಹತ್ಯೆಯೋ, ಕೊಲೆಯೋ, ಸಹಜ ಸಾವೋ ಎಂಬುದನ್ನು ಇನ್ನೂ ದೃಢಪಡಿಸಿಲ್ಲ.

ಎಲ್ಲರೂ ಓಡೋಡಿ ಬಂದರು. ಸತ್ತ ದೇವರನ್ನು ನೋಡಲು.
ಹೆಣವನ್ನು ಕಂಡಾಗ ಎಲ್ಲರಿಗೂ ಒಮ್ಮೆ ಅವರವರ ದೇವರ ಮುಖ ಕಂಡಿತು. ಮತ್ತೊಮ್ಮೆ ಹೆಣ ತಮ್ಮ ದೇವರನ್ನು ಹೋಲುತ್ತಿಲ್ಲವಲ್ಲ ಅಂತ ಅನ್ನಿಸಲು ಶುರುವಾಯ್ತು
.
ಇವರೆಲ್ಲರ ಮಧ್ಯೆ ದೇವರು ಬದುಕುತ್ತಾ ಸಾಯುತ್ತಾ, ಸಾಯುತ್ತಾ ಬದುಕುತ್ತಾ.....

ದೇವರ ಹೆಣ ಕೊಳೆಯಲು ಆರಂಭವಾಯ್ತು.

ಮಂಗಳವಾರ, ಸೆಪ್ಟೆಂಬರ್ 23, 2008

ಕೂಡಿಸುವುದನ್ನೇ ಮರೆತು ಹೋದ...(ಪುಟಾಣಿ ಕತೆ-6)

ಪವನನಿಗೆ ಕೂಡಿಸಿ ಮಾತ್ರ ಗೊತ್ತಿತ್ತು.
ಕಳೆದು ಗೊತ್ತಿರಲಿಲ್ಲ. ಗುಣಿಸಿ, ಭಾಗಿಸಿ ಗೊತ್ತಿರಲಿಲ್ಲ.

2+2 ಅಂದ್ರೆ ಫೋರ್ ಅನ್ನುತ್ತಿದ್ದ. 18+6 ಅಂದ್ರೆ 24 ಎನ್ನುವುದು ಅವನಿಗೆ ಸರಿಯಾಗಿ ಗೊತ್ತಿತ್ತು. 2-2, 12/6, 8*3 ಎಷ್ಟು ಅಂದ್ರೆ ಅವನಿಗೆ ಬಿಲ್ ಕುಲ್ ಹೊಳೆಯುತ್ತಿರಲಿಲ್ಲ.

ಪವನ ಕೂಡಿಸಿಯೇ ಎಸ್.ಎಸ್.ಎಲ್.ಸಿ ಪಾಸಾದದ್ದು. ಕೂಡಿಸುವುದರಲ್ಲಿ ಹಿಂದೆ ಅನ್ನೋ ಕಾರಣಕ್ಕೇನೇ ನಾಲ್ಕನೇ ಕ್ರಾಸಿನ ನಳಿನಳ ಪ್ರಪೋಸಲ್ ತಿರಸ್ಕರಿಸಿದ್ದು. ಅವನಿಗೆ ಕ್ರಿಕೇಟ್ ಇಷ್ಟ. ಕಾರಣ ಸರಳ. ಅಲ್ಲಿ ರನ್ ಕೂಡಿಸುವುದಷ್ಟೇ ಕೆಲಸ.

ಹೀಗೆ ಪವನ ಕೂಡಿಸುತ್ತಾ ಕೂಡಿಸುತ್ತಾ ದೊಡ್ಡವನಾದ...ಮೀಸೆ ಮೂಡಿತು...ನರಗಳು ಜಿವ್ವೆಂದವು...ಅಕ್ಷರಗಳನ್ನ ಕೂಡಿಸುತ್ತಾ ಹೋದ...ಕತೆಯಾಯಿತು...ಕಾದಂಬರಿಯಾಯಿತು
...ಹೆಸರು ಬಂತು...ಬಿರುದು ಬಂತು...ಪುಸ್ತಕವೆಲ್ಲ ಖರ್ಚಾಗಿ ಹೋಯಿತು...ಮರು ಮುದ್ರಣಕ್ಕೆ ತಯಾರಾಯಿತು.

ಒಂದು ದಿನ ಆತನಿಗೆ ಕಳೆಯುವುದು ಹೇಗೆ, ಗುಣಿಸಿ ಭಾಗಿಸುವುದು ಹೇಗೆ ಅನ್ನುವುದು ಗೊತ್ತಾಗಿ ಹೋಯಿತು.

ಆನಂತರ ಪವನ ಕೂಡಿಸುವುದನ್ನೇ ಮರೆತು ಹೋದ!!

ಗುರುವಾರ, ಸೆಪ್ಟೆಂಬರ್ 18, 2008

ಇವತ್ತು ಕಾಯೋದು ಒಂದರ್ಥದಲ್ಲಿ ಶಾಪ!

ಇವತ್ತು ಕಾಯೋದು ಒಂದರ್ಥದಲ್ಲಿ ಶಾಪ!

ಆಕೆ ಬರುತ್ತಾಳೆ ಅಂತ ಆತ ಕಾಯುತ್ತಾ ಕೂರುವುದು, ಆತ ಬರುತ್ತಾನೆ ಎಂದು ಆಕೆ ಮಲ್ಲಿಗೆ ಮೊಗ್ಗು ಕಟ್ಟುತ್ತಾ ಕನವರಿಸುವುದು ಈಗಂತೂ ನೆನಪು ಮಾತ್ರ.

ದುಶ್ಯಂತನ ದಾರಿ ಕಾದ ಶಾಕುಂತಲೆ, ರಾಮನಿಗಾಗಿ ಕಾಯುತ್ತಾ ಹಣ್ಣಾದ ಶಬರಿ ಎಲ್ಲರೂ ಮರೆತು ಹೋಗುವಷ್ಟು ನಾವು ಬೆಳೆದಿದ್ದೇವೆ. ಕಾಯುತ್ತಾ ಕಾಯುತ್ತಾ ಮಾಗುವುದು, ಬಾಗುವುದು. ಸಿಟ್ಟು, ಸೆಡವು ಎಲ್ಲವನ್ನು ಉಳಿಸಿಕೊಳ್ಳುತ್ತಾ, ಕಳೆದುಕೊಳ್ಳುತ್ತಾ ದಿನದೂಡುವುದು ಎನ್ನುವುದರಲ್ಲಿ ನಮಗೆ ಹೆಚ್ಚು ಆಸಕ್ತಿ ಉಳಿದಂತಿಲ್ಲ.

ಇದನ್ನೆಲ್ಲ ಇಲ್ಲಿ ಯಾಕೆ ಹೇಳಬೇಕಾಯಿತೆಂದರೆ ಮೊನ್ನೆ ಮೊನ್ನೆ ಗೆಳೆಯನೊಬ್ಬ ಯಾವುದೋ ನಂಬರಿಗೆ ಮೆಸೇಜು ಫಾರ್ವರ್ಡ್ ಮಾಡುತ್ತಿದ್ದ. "ಮೆಸೇಜ್ ಸೆಂಟ್" ಅಂತ ಮೊಬೈಲ್ ತೋರಿಸಿತು. ಆಗಲೇ ಡೆಲಿವರ್ಡ್ ಅಂತ ತೋರಿಸಲೇ ಇಲ್ಲ. ಪೆಂಡಿಂಗ್ ಅನ್ನುವ ಸೂಚನೆ ಮೊಬೈಲ್ ಪರದೆ ಮೇಲಿತ್ತು.

ಆತ ಕೂತಲ್ಲೇ ಚಡಪಡಿಸಿದ. ನಿಂತಲ್ಲೇ ಅಡ್ಡಾಡಿದ. ಮತ್ತೆ ಮೊಬೈಲು ನೋಡಿಕೊಂಡ...ಆಗಲೂ ಪೆಂಡಿಂಗ್ ಅನ್ನುವ ಸೂಚನೆಯೇ. ಮತ್ತೆ ಅಸ್ವಸ್ಥನಂತೆ ಒದ್ದಾಡಿದ.

ಕೂಡಲೇ ಅದೇ ಮೆಸೇಜನ್ನು ಚಕಚಕನೆ ಎಡಿಟ್ ಮಾಡಿ ಮತ್ತದೇ ನಂಬರಿಗೆ ಕಳಿಸಿದ!

ಮಂಗಳವಾರ, ಸೆಪ್ಟೆಂಬರ್ 16, 2008

ಸೂರ್ಯನ ಬೆಳಕು ಹೀರಿದವನ ಕಥೆ..(ಪುಟಾಣಿ ಕತೆ-5)

"ನಿನ್ನನ್ನು ಆಗಸದ ತುಂಬ ಮಿನುಗುವಂತೆ ಮಾಡುತ್ತೇನೆ" ಅದು ಆತನ ಪ್ರಾಮಿಸ್.

ಆಕೆಗಂತೂ ಆಕಾಶಕ್ಕೆ ಮೂರೇ ಗೇಣು. ಆತನಿಂದ ಕದ್ದು ಚುಂಬನ ಸ್ವೀಕರಿಸಿದಷ್ಟೇ ರೋಮಾಂಚನ.
ಆದರೆ ನಿಜವಾದ ಫಜೀತಿಗೆ ಸಿಕ್ಕಿ ಹಾಕಿಕೊಂಡದ್ದು ಮಾತ್ರ ಆತ. ಹುಚ್ಚು ಆವೇಶದಲ್ಲಿ ಪ್ರಾಮಿಸ್ ಏನೋ ಮಾಡಿದ್ದ. ಅದನ್ನು ಉಳಿಸಿಕೊಳ್ಳುವುದು ಹೇಗೆ?

ಆತನಿಗೆ ಮಂಡೆಬಿಸಿ ಶುರುವಾಯಿತು.
ತಲೆ ಎತ್ತಿ ನೋಡುತ್ತಾನೆ ಆಗ ಸುಡು ಸುಡು ಮದ್ಯಾಹ್ನ.
ಕೊನೆಗೊಂದು ಉಪಾಯ ಹೊಳೆಯಿತು.
ಆತ ಆಗಸದಲ್ಲಿನ ಸೂರ್ಯನ ಬೆಳಕನ್ನೇ ಹೀರಲು ಪ್ರಾರಂಭಿಸಿದ.
ಸಂಜೆ ಹೊತ್ತಿಗೆ ಸೂರ್ಯ ಮಂಕಾದ.
ಗೋಧೂಳಿಯ ನಂತರದ ಘಳಿಗೆಗೆ ನಿಜವಾದ ಸೂರ್ಯ ಸತ್ತೇ ಹೋದ.
ಈಗ ಆತನೇ ಸೂರ್ಯ.

ಆತ ಖುಷಿಯಿಂದ ಆಕೆಯ ಬಳಿಗೆ ಓಡಿದ.
ಆತ ಹತ್ತಿರ ಬರುತ್ತಿದ್ದಂತೆ ಆಕೆಗೆ ಆತನ ಶಾಖ ತಡೆದುಕೊಳ್ಳಲು ಆಗಲಿಲ್ಲ.
ಕೊನೆಗೆ ಆಕೆ, ಆತನಿಗೋಸ್ಕರ ವಿಧಿಯಿಲ್ಲದೆ ಆತನ ಬೆಳಕನ್ನೇ ಹೀರುತ್ತಾ ಹೋದಳು.
ಆತ ಮತ್ತಷ್ಟು ಹತ್ತಿರ ಬಂದ.
ಆಕೆ ರಾತ್ರಿಯ ನಿಶ್ಯಬ್ದದೊಳಗೆ ಪ್ರಕಾಶಮಾನವಾಗಿ ಬೆಳಗಲು ಪ್ರಾರಂಭಿಸಿದಳು.
ಆತ ಭಾವಪರವಶನಾಗಿ ಅವಳೊಳಗೆ ಕಳೆದು ಹೋದ.

ಮಂಗಳವಾರ, ಸೆಪ್ಟೆಂಬರ್ 2, 2008

Sorry, ನನಗೆ ನಗಲು ಪರ್ಮಿಶನ್ ಕೊಟ್ಟಿಲ್ಲ..(ಪುಟಾಣಿ ಕತೆ-4)

"Sorry

ನನಗೆ

ನಗಲು

ಪರ್ಮಿಶನ್ ಕೊಟ್ಟಿಲ್ಲ"

ಅಶ್ಚರ್ಯವಾಯ್ತು. ಇದಂತೂ ಒಳ್ಳೇ ಬ್ರೇಕಿಂಗ್ ನ್ಯೂಸ್ ಆಗಲಿಕ್ಕೆ ಫಿಟ್ ಅನ್ನಿಸಿತು. ಒಂದೆರಡು ಬೈಟ್ ತಗೊಂಡ್ರಾಯ್ತು. ಇವತ್ತಿನ ಅರ್ಧ ಗಂಟೆ ಪ್ರೋಗ್ರಾಂ ಡಮಾರ್. ಈ ವಾರದ ಟಿಆರ್ಪಿ ಏರಲಿಕ್ಕೆ ಇಷ್ಟು ಸಾಕು. ಚೀಫ್ ಕೂಡಾ ದಿಲ್ ಖುಷ್.

ಆದರೆ ನನಗೆ ಒಗಟು ಅನ್ನಿಸಿದ್ದು ಆತನ ಮಾತು.

ಒಳ್ಳೆ ಬಂಗಲೆ ಇದೆ. ಓಡಾಡಲಿಕ್ಕೆ ಸ್ಕೋಡಾ. ಅಷ್ಟು ದೊಡ್ಡ ಹುದ್ದೆ ಬೇರೆ. ಆರ್ಡರು ಮಾಡುವುದಷ್ಟೇ ಕೆಲಸ. ಈತನಿಗೆ ನಗಲು ಯಾರ ಪರ್ಮಿಶನ್ ಬೇಕು. ಇದಂತೂ ಹಾಸ್ಯಾಸ್ಪದ. ಅಥವಾ ಆತನಿಗೆ ಪತ್ರಕರ್ತನಾದ ನನ್ನನ್ನು ರೇಗಿಸಿ ಖುಷಿಪಡಬೇಕು ಅಂತ ಅನ್ನಿಸುತ್ತಿದೆಯಾ? ಆದರೆ ಅದು ನನ್ನ ಅನುಮಾನ ಮಾತ್ರ. ಆತ ಸಂದರ್ಶನದುದ್ದಕ್ಕೂ ಹಾಗೆ ತೋರ್ಪಡಿಸಿಕೊಳ್ಳಲಿಲ್ಲ. ಆತನ ಎದೆಯಾಳದಲ್ಲೇನೋ ಭಯಂಕರ ನೋವಿನ ಸಂತೆ ಇದ್ದಂತೆ ನನಗನಿಸಿತು.

ಆತ ವಿವರಿಸುತ್ತಾ ಹೋದ.

ಯಾಕೆ ನಗಲು ಸಾಧ್ಯವಾಗುತ್ತಿಲ್ಲ. ನಕ್ಕರೆ ಏನು ಪ್ರಾಬ್ಲಂ. ಎಲ್ಲವನ್ನು ಹೇಳುತ್ತಲೇ ಇದ್ದ. ಆತನನ್ನು ಕೇಳುತ್ತಾ ಹೋದಂತೆಲ್ಲಾ ಇದೇ ಕತೆ ಎಲ್ಲೋ ಕೇಳಿದ ಹಾಗಿದೆಯಲ್ಲ ಅನ್ನುವ ಅನುಮಾನ ಶುರುವಾಯಿತು. ಪಾತ್ರಗಳು, ಸನ್ನಿವೇಶಗಳು ಸ್ವಲ್ಪ ಆಚೆ-ಈಚೆ. ಆದರೆ ಇಡೀ ಕತೆಯ ಹೂರಣ ಒಂದೇ. ಯಾರ ಕತೆ ಇದು.

"ಈ ಕತೆಯನ್ನೆಲ್ಲೋ ಕೇಳಿದ ಹಾಗಿದೆಯಲ್ಲ. ಸೇಮ್ ಟು ಸೇಮ್ ನಿಮ್ಮದೇ ಸಮಸ್ಯೆ ಆತನಿಗೆ ಕೂಡಾ" ಅಂತ ಆತನ ಎದುರು ಬಾಯ್ಬಿಟ್ಟು ಹೇಳಲು ಆಗಲಿಲ್ಲ. "ಅರ್ಜೆಂಟ್ ಪ್ರೋಗ್ರಾಂ ಕವರ್ ಮಾಡ್ಬೇಕು. ಮತ್ತೆ ಫೋನ್ ಮಾಡ್ತೀನಿ" ಹಾಗಂತ ಹೇಳಿ ಹೊರಬಿದ್ದೆ.

ಡೈರಿ ಸರ್ಕಲ್ಲಿನ ಟ್ರಾಫಿಕ್ಕಿನಿಂದ ಹೊರಬಂದಾಗ ಸುಸ್ತೋ ಸುಸ್ತು.

ಆಗಲು ಕಾಡುತ್ತಿದ್ದದ್ದು ಆತ ಹೇಳಿದ ಆತನದ್ದೇ ಕತೆ.

ಅದರ ಪ್ರತಿ ಭಾವನೆ, ಸಮಸ್ಯೆ, ಸನ್ನಿವೇಶ ಎಲ್ಲೋ ನನಗೆ ಪರಿಚಿತ ಅನ್ನಿಸಿತು. ಬಹುಷಃ ನನ್ನ ಪರಿಚಯದವನದ್ದೇ ಸಮಸ್ಯೆ ಇದು. ಅವನಿಗೂ ನಗಲು ಆಗುತ್ತಿರಲಿಲ್ಲ. ಯಾರದು.....?

ಛೆ...ಸದ್ಯಕ್ಕೆ ನೆನಪಾಗುತ್ತಿಲ್ಲ.

ಅದಾದ ನಂತರದ ಘಳಿಗೆಗೆ ನಗಲು ಪ್ರಯತ್ನಿಸಿದೆ.

ಸಾಧ್ಯವಾಗಲಿಲ್ಲ !

ಬುಧವಾರ, ಆಗಸ್ಟ್ 20, 2008

ಚಿ(ಂ)ತೆ

ಚಿತೆ ಧಗಧಗ ಉರಿಯುತ್ತಿತ್ತು


ವಿಕಾರಗಳೆಲ್ಲಾ ಆಕಾರಗಳಾಗುತ್ತಿದ್ದವು


ತಣ್ಣನೆಯ ತಿಳಿಗಾಳಿ ತುಂಬಾ


ಕಾಮಪಿಪಾಸು ಬೆವರು, ವಿಷಣ್ಣ ನಗೆ


ಕ್ರೌರ್ಯದ ಉತ್ತುಂಗದಿ


ನಾನು ಸಾಯುತ್ತಿದ್ದೆ
ದೃಷ್ಠಿಯ ಚಿಗುರುಗಳು


ಚಿತೆಯ ಬೆಂಕಿಯೊಳು ಸ್ಖಲಿಸುತ್ತಾ


ಆಲದ ಮರಕ್ಕೆ ನೇಣು ಬಿಗಿದಿತ್ತು


ಹಿತ್ತಲ ಗಿಡಗಳೆಲ್ಲಾ ಓಯಸ್ಸಿಸ್ಸಾಗಿದ್ದವು


ಪ್ರತಿಮೆಗಳು ಅದರೊಳಗೆ ಮುದುಡಿದ್ದವು
ಬಲವಂತದ ಸ್ವಪ್ನಗಳು


ಬಸಿರಿನ ಧ್ವನಿಗಳು


ಎಲ್ಲಕ್ಕೂ ಉಸಿರೊಂದೇ ಇರಲಿಲ್ಲ


ಚಾಚಿದ ಹೆಬ್ಬಾವಿನ ಕೈಗಳು ವಾಚಾಳಿಯಾಗುತ್ತಿದ್ದವು


ಕೆಂಡದ ಕಣ್ಣುಗಳ ರಕ್ತದಿ


ಹಸಿವು ಧುಮುಕುತ್ತಿತ್ತು
ಚರ್ಚಿನ ಗಂಟೆಯ ನಾಲಗೆ


ಕಪಟಿಯ ಕೆಮ್ಮು


ಹದ್ದಿನ ಕಣ್ಣಿನ ಕಾಮ, ನಪುಂಸಕ ಕ್ರೋಧ


ಈ ಎಲ್ಲಾ ಕ್ರಿಯೆ-ಪ್ರಕ್ರಿಯೆಯೊಳಗೆ


ಅರ್ಥವಾಯಿತು ನನಗೆ


ನಾನಿನ್ನೂ ಸತ್ತಿಲ್ಲ, ಬದುಕುತ್ತಿದ್ದೇನೆ!

ಮಂಗಳವಾರ, ಆಗಸ್ಟ್ 12, 2008

ಅರ್ಥವಾಗದೆ ಹೋದವರು...(ಪುಟಾಣಿ ಕತೆ-3)

"ಇಷ್ಟು ವರ್ಷ ಪರಿಚಯವಿದ್ದರೂ ನೀನಿನ್ನೂ ಅರ್ಥವಾದದ್ದು ಅಲ್ಪ-ಸ್ವಲ್ಪ ಕಣೋ" ಎಂದಳು ಆಕೆ.
ಆತ ಸುಮ್ಮನೆ ನಕ್ಕ.
ತನ್ನ ಬಗ್ಗೆ ತಾನೇ ಹೇಳಿಕೊಳ್ಳುವುದು ಒಂಥರಾ ಹೇಸಿಗೆ. ಮಾತಲ್ಲಿ ಹೇಳುವುದೆಲ್ಲ ಅತ್ಯಂತ ಸುಂದರ ಕಥೆಯ ಬರ್ಬರ ಅಂತ್ಯ ಅಂತನ್ನಿಸಿತ್ತು ಆತನಿಗೆ, ಅನೇಕ ಬಾರಿ.
ಆಕೆ ಹೊರಟು ನಿಂತಳು.
ಸಂಜೆ ಕೆಂಪಾಯಿತು.

ಒಂದು ದಿನ:
"ಆತ ಆಸ್ಪತ್ರೆಯಲ್ಲಿದ್ದಾನೆ. ಸಾಯಲು ಇನ್ನು ಕೆಲವೇ ಕ್ಷಣ" ಹಾಗಂತ ಸುದ್ದಿ ಸಿಕ್ಕಿತು, ಆಕೆಗೆ.
ಓಡೋಡಿ ಬಂದಳು.
ಆತನ ಸ್ಥಿತಿ ನೋಡಿ ಆಕೆಯ ಕಣ್ಣುಗಳು ಮಂಜು, ಮಂಜು.
ದುಃಖವನ್ನು ತಡೆ ಹಿಡಿಯುತ್ತಾ, ಆತನ ತಲೆ ನೇವರಿಸಿದಳು.
ಕಣ್ಣ ಹನಿಗಳು ಸಾಲಾಗಿ ಆತನ ಕೈಯ ಮೇಲೆ ಬಿದ್ದವು.
ಆತನಿಗೆ ಅದೇನನ್ನಿಸಿತೋ ಏನೋ.
ತುಂಬ ಅಕ್ಕರೆಯಿಂದ ಒಂದೊಂದೇ ಹನಿಗಳಿಗೆ ಮುತ್ತಿಡುತ್ತಾ ಹೋದ.
ನಿಟ್ಟುಸಿರಿನೊಂದಿಗೆ ಆಕೆ ನಕ್ಕಳು.
ಆತನ ಕಣ್ಣು ಮಂಜು,ಮಂಜು!!

ಶುಕ್ರವಾರ, ಆಗಸ್ಟ್ 1, 2008

ಹೊತ್ತಿ ಉರಿಯಿತು ಧರೆ!

1945 ಜುಲೈ 16....
ಅಮೇರಿಕಾ ಅಧ್ಯಕ್ಷ ಟ್ರೂಮನ್ ಪೋಸ್ಟ್ಡ್ಯಾಂ ಗೋಷ್ಠಿಯಲ್ಲಿದ್ದ. ಜಪಾನಿಗೆ ಎಚ್ಚರಿಕೆ ನೀಡಲು ಮಿತ್ರ ರಾಷ್ಟ್ರಗಳು ಅಂದು ನಿರ್ಣಯ ಕೈಗೊಳ್ಳುವುದರಲ್ಲಿದ್ದವು. ಆದರೆ ಟ್ರೂಮನ್ಗೆ ನ್ಯೂ ಮೆಕ್ಸಿಕೋದ ಆಲ್ಮೋಗಾರ್ಡ್ನಲ್ಲಿ ನಡೆಯುತ್ತಿದ್ದ ಪರೀಕ್ಷೆಯ ಫಲಿತಾಂಶದ ಬಗ್ಗೆ ಕಾತರವಿತ್ತು. ಆಗ ಟ್ರೂಮನ್ ಕೈಗೊಂದು ಚೀಟಿ ಬಂತು. ಅದರಲ್ಲಿ ಸ್ಪಷ್ಟವಾಗಿ ಬರೆದಿತ್ತು-"It is a boy". ಅದರರ್ಥ ಇಷ್ಟೇ-ಪರೀಕ್ಷಾರ್ಥ ನಡೆಸಿದ ಅಣುಬಾಂಬಿನ ಸ್ಪೋಟ ಯಶಸ್ವಿ.

ಪೋಸ್ಟ್ಡ್ಯಾಂ ಗೋಷ್ಠಿಯನ್ನು ಜಪಾನಿನ ಪ್ರಧಾನಿ ಕಂಟಾಕೋ ಸುಜುಕಿ ನಿರ್ಲಕ್ಷಿಸಿ ಬಿಟ್ಟ. ಅಮೇರಿಕಾಕ್ಕೆ ಮಹಾಯುದ್ಧವನ್ನು ಹತ್ತಿಕ್ಕಲೇಬೇಕಾಗಿತ್ತು. ಅದಕ್ಕಾಗಿ ಅಗಸ್ಟ್ 6ರಂದು ಅಣು ಬಾಂಬ್ ಸ್ಪೋಟಕ್ಕೆ ಆಂಯ್ದುಕೊಂಡದ್ದು ಹಿರೋಷಿಮಾ ನಗರವನ್ನು.
ಎರಡೂವರೆ ಲಕ್ಷಕ್ಕೂ ಅಧಿಕ ನಾಗರೀಕರಿದ್ದ ಹಿರೋಷಿಮಾದಲ್ಲಿ ಮಿಲಿಟರಿ ಕೇಂದ್ರವಿತ್ತು. ಒಂದು ಲಕ್ಷಕ್ಕೂ ಅಧಿಕ ಸೈನಿಕರು ಅಲ್ಲಿದ್ದರು. ಜೊತೆಗೆ ಜಪಾನಿನ ಮದ್ದುಗುಂಡುಗಳ ದಾಸ್ತಾನು ಅಲ್ಲಿತ್ತು. ಇವೆಲ್ಲವನ್ನು ಗಮನಿಸಿಯೇ ಅಮೇರಿಕಾ 'ಲಿಟ್ಲ್ ಬಾಯ್' ಸ್ಪೋಟಕ್ಕೆ ಹಿರೋಷಿಮಾವನ್ನು ಆಯ್ದುಕೊಂಡದ್ದು.

ವಿಷಘಳಿಗೆ
ಅವತ್ತು ಅಗಸ್ಟ್ 6ರ ಬೆಳಗು.
ಹಿರೋಷಿಮಾ ಎಂದಿನಂತೆ ಕಾರ್ಯನಿರತವಾಗಿತ್ತು. ಕೆಲಸದ ಗಡಿಬಿಡಿಯಲ್ಲಿ 9 ಬಾರಿ ಎಚ್ಚರಿಕೆಯ ಗಂಟೆ ಮೊಳಗಿದ್ದನ್ನು ಯಾರೂ ಅಷ್ಟಾಗಿ ಗಮನಿಸಲಿಲ್ಲ. ಆಗಸದಲ್ಲಿ ಕ್ಷೀಣವಾಗಿ ಸದ್ದು ಮಾಡುತ್ತಾ ಅಮೇರಿಕಾದ ಬಿ-29 ವಿಮಾನ ಹಾರುತ್ತಿತ್ತು. ಎರಡು ಬಾರಿ ಹಿರೋಷಿಮಾವನ್ನು ಸುತ್ತು ಹಾಕಿ ಏಳೂವರೆ ಹೊತ್ತಿಗೆ ಸಮುದ್ರದ ದಿಕ್ಕಿನಲ್ಲಿ ಕಣ್ಮರೆಯಾಯಿತು. ದಿನವೂ ಇಂತಹ ದೃಶ್ಯಗಳು ಸಾಮಾನ್ಯವಾದ್ದರಿಂದ ಯಾರೂ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಅವರ್ಯಾರ ಕಲ್ಪನೆಗೂ ನಿಲುಕದ ಸತ್ಯವೊಂದಿತ್ತು. ಬಿ-29 ಸುಮ್ಮನೆ ಗಸ್ತು ಹೊಡೆಯಲು ಮಾತ್ರ ಬಂದಿರಲಿಲ್ಲ. ಬಾಂಬ್ ಸ್ಪೋಟಕ್ಕೆ ಮುಹೂರ್ತವಿಡಲು ಹಿರೋಷಿಮಾದ ಹವಾಮಾನ ಪರೀಕ್ಷಿಸಲು ಬಂದಿತ್ತು!

ಮುಂದೆ ನಡೆದದ್ದು ಕರಾಳ ದುಸ್ವಪ್ನ.
ನಾಲ್ಕೂವರೆ ಟನ್ ತೂಕದ ಅಣುಬಾಂಬ್ ಹೊತ್ತ 'ಎನೋಲಾ ಗೇ' ವಿಮಾನ 8.09ರ ಹೊತ್ತಿಗೆ ಕಾಣಿಸಲು ಶುರುವಾಯಿತು. ಭೂ ಮಟ್ಟದಿಂದ 1850 ಅಡಿ ತಲುಪಿದಾಗ ಬಾಂಬ್ ಸ್ಪೋಟಗೊಳ್ಳಬೇಕು. ಇದು ವಿಜ್ಞಾನಿಗಳ ಯೋಜನೆ. ಆದರೆ ಅವರಿಗೆಲ್ಲ ಬಾಂಬ್ ಸ್ಪೋಟಗೊಳ್ಳುವಾಗ ಭೂಮಿಯ ಮೇಲ್ಪದರವೇ ಬಿರುಕು ಬೀಳಬಹುದೆಂಬ ಆತಂಕವಿತ್ತು.
'ನಾವೀಗ ಬಾಂಬ್ ಕೆಳಗೆಸೆಯಲಿದ್ದೇವೆ. ನಾನು ಸಿಗ್ನಲ್ ಕೊಟ್ಟ ಕೂಡಲೇ ನೀವೆಲ್ಲಾ ಕ್ವಿನೀನ್ ಹರಳುಗಳಿಂದ ಮಾಡಿದ ಗಾಜಿನ ಕನ್ನಡಕ ಹಾಕಿಕೊಳ್ಳಿ. ಸ್ಪೋಟ ಮುಗಿಯುವವರೆಗೂ ತೆಗೆಯಕೂಡದು',ಹಾಗಂತ ಆಜ್ಞೆ ಮಾಡಿದವನ ಹೆಸರು ಕ್ಯಾಪ್ಟನ್ ಟಿಬೇಟ್ಸ್. ಅಷ್ಟರಲ್ಲಿ ನನ್ನ ಗುರಿ ಹತ್ತಿರಾಗುತ್ತಿದೆ ಎನ್ನುತ್ತಾ ಬಾಂಬ್ ಎಸೆಯುವ ವ್ಯವಸ್ಥೆ ಚಾಲೂ ಮಾಡಿದ ಥಾಮಸ್ ಫರ್ಬಿ. ಆಗ ಸಮಯ 8.15.

ವಿಮಾನದಡಿಯಿಂದ 3 ಪ್ಯಾರಾಚೂಟ್ಗಳು ಒಂದಾದ ಮೇಲೊಂದರಂತೆ ಹೂವು ಅರಳಿದಂತೆ ಕೆಳಗಿಳಿಯತೊಡಗಿದವು. ಒಂದು ಪ್ಯಾರಾಚೂಟ್ನಲ್ಲಿ ಬಾಂಬ್ ಕೆಳಗಿಳಿಯುತ್ತಿದ್ದರೆ, ಮಿಕ್ಕವೆರಡರಲ್ಲಿ ರೇಡಿಯೇಷನ್ ಮತ್ತು ತಾಪಮಾನ ಅಳೆದು ರೇಡಿಯೋ ಮುಖಾಂತರ ತಿಳಿಸುವ ಯಂತ್ರಗಳಿದ್ದವು.

ಲಿಟ್ಲ್ ಬಾಯ್ 1850 ಅಡಿ ತಲುಪಿದಾಗ ಗಡಿಯಾರದ ಮುಳ್ಳು 8.16ರ ಹತ್ತಿರವಿತ್ತು. ಆಗ ನಡೆದದ್ದು ಕಿವಿಗಡಚಿಕ್ಕುವ ಸ್ಪೋಟ. 20,000 ಟನ್ಗೂ ಅಧಿಕ ಟಿ.ಎನ್.ಟಿ ಶಕ್ತಿಯೊಂದಿಗೆ ಸ್ಪೋಟ ಸಂಭವಿಸಿಯೇ ಬಿಟ್ಟಿತು. ಕ್ಷಣಾರ್ಧದಲ್ಲೇ ಅಣಬೆಯಾಕಾರದ ಮೋಡ ಸೃಷ್ಟಿಯಾಗಿ, ಕೆಲವೇ ನಿಮಿಷಗಳಲ್ಲಿ 40,000 ಅಡಿ ಎತ್ತರಕ್ಕೇರಿತು. ಕೂಡಲೇ ಹಿರೋಷಿಮಾದ ಸುಮಾರು 10 ಚದರ ಮೈಲಿ ಸುತ್ತಳತೆಯ ಪ್ರದೇಶ ಅತ್ಯುಷ್ಣದ ಅಗ್ಗಿಷ್ಟಿಕೆಯಾಯಿತು. ಸಾವಿರಾರು ಜನರು ಕೆಲವೇ ಸೆಕೆಂಡ್ ಬದುಕಿದ್ದಿರಬಹುದು. ಬಾಂಬ್ ಸಿಡಿದ 10 ಮೈಲಿ ಪ್ರದೇಶದಲ್ಲಿದ್ದ ಯಾವ ಮನೆಯೂ ಉಳಿಯಲಿಲ್ಲ. ಅಲ್ಲಿದ್ದವರ ಚರ್ಮ ಶಾಖಕ್ಕೆ ಕಪ್ಪಾಗಿ ಹೋಯಿತು. ಶಾಖದ ಪ್ರಖರತೆ ಎಷ್ಟಿತ್ತೆಂದರೆ ಉರುಳಿದ ಮನೆಗಳ ಕಾಂಕ್ರೀಟು ಮತ್ತು ಕಲ್ಲುಗಳು ಕರಗಿ ಗಾಜಿನ ಮಾದರಿಯಲ್ಲಿ ಒಂದಕ್ಕೊಂದು ಅಂಟಿ ಬಿಟ್ಟಿದ್ದವು. ಟಾರಿನಂತೆ ದೇಹಗಳು ಕರಗಿ ನೀರು ನೀರಾಯಿತು. 68,000 ಮಂದಿ ಒಮ್ಮೆಗೆ ಬೆಂದು ಹೋದರು. ಇಡೀ ಹಿರೋಷಿಮಾ ಜಾಜ್ವಲ್ಯಮಾನ ಚಿತೆಯಾಯಿತು. ಅಗಾಧ ಉಷ್ಣತೆಯ ಪರಿಣಾಮದಿಂದಾಗಿ ಕೆಲಕಾಲದಲ್ಲೇ ಕರಿ ನೀರಿನ ಮಳೆ ಹಿರೋಷಿಮಾದಲ್ಲಿ ಸುರಿಯಿತು.
ಇಷ್ಟೆಲ್ಲಾ ಆದರೂ ಅಮೇರಿಕಾ ಅಧ್ಯಕ್ಷ ಟ್ರೂಮನ್ ಖಿನ್ನನಾಗಿ ಕುಳಿತಿದ್ದ. ಜಪಾನ್ ಸರ್ಕಾರ ಆಂತರಿಕ ಗೊಂದಲದಿಂದಾಗಿ ಶರಣಾತಿ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಲಿಲ್ಲ. ಆದ್ದರಿಂದ ಅಮೇರಿಕಾ, ಕೊಕುರಾ ಎಂಬ ಪಟ್ಟಣದ ಮೇಲೆ ಅಗಸ್ಟ್ 9ರಂದು 'ಫ್ಯಾಟ್ಮನ್' ಎಂಬ ಮತ್ತೊಂದು ಅಣುಬಾಂಬ್ ದಾಳಿ ನಡೆಸಲು ನಿರ್ಧರಿಸಿತು. ಕೊಕುರಾದಲ್ಲಿ ಮೋಡ ಮುಸುಕಿದ ವಾತಾವರಣವಿದ್ದುದರಿಂದ ನಾಗಾಸಾಕಿ ಪಟ್ಟಣ ಬಾಂಬ್ ದಾಳಿಗೆ ತುತ್ತಾಯಿತು. ಇಲ್ಲಿ ಸಜೀವವಾಗಿ ಬೆಂದು ಹೋದವರ ಸಂಖ್ಯೆ 60,000.

ಶತಮಾನದ ಅಮಾನವೀಯ ಘಟನೆ ನಡೆದದ್ದು ಹೀಗೆ.
ಇಂದಿಗೂ ಈ ಎರಡೂ ಪಟ್ಟಣಗಳಲ್ಲಿ ರಕ್ತದ ಕ್ಯಾನ್ಸರ್, ಅಂಗವೈಕಲ್ಯ ತಲೆಮಾರುಗಳಿಂದ ಬಂದ ಬಳುವಳಿಯಂತೆ ಮುಂದುವರಿಯುತ್ತಿದೆ. ಅಣುಬಾಂಬ್ ಬಿದ್ದ ವರ್ಷದ ಕೊನೆಗೆ ಹಿರೋಷಿಮಾ ಒಂದರಲ್ಲೇ ಬೆಂಕಿಯಿಂದ ಬೆಂದು, ವಿಕಿರಣಕ್ಕೆ ತುತ್ತಾದವರು 1 ಲಕ್ಷದ 40 ಸಾವಿರ ಮಂದಿ.

ಇಂತಹದೊಂದು ಪೈಶಾಚಿಕ ಕೃತ್ಯ ನಡೆಸಿದ್ದಕ್ಕೆ ಯಾರನ್ನು ದೂರಬೇಕು, ನೀವೇ ಹೇಳಿ? ಬಾಂಬ್ ಹಾಕಲು ಅನುಮತಿ ಕೊಟ್ಟು ಆಮೇಲೆ ಮರುಗಿದ ಅಮೇರಿಕಾದ 33ನೇ ಅಧ್ಯಕ್ಷ ಟ್ರೂಮನ್ನನ್ನೇ? ಬಾಂಬ್ ತಯಾರಿಯ ನೇತೃತ್ವ ವಹಿಸಿದ್ದ ಬಾರ್ನ್ ಓಪೆನ್ಹೈಮರ್ ಎಂಬ ವಿಜ್ಞಾನಿಯನ್ನೇ? ಇಂತಹದೊಂದು ಅಸ್ತ್ರ ಸಾಧ್ಯವೆಂದು ಸೈದ್ಧಾಂತಿಕವಾಗಿ ತೋರಿಸಿಕೊಟ್ಟ ಆಲ್ಬರ್ಟ್ ಐನ್ಸ್ಟಿನ್ ಬರೆದ ಪತ್ರವನ್ನೇ? ನಿರುದ್ವಿಗ್ನವಾಗಿ ಹಿರೋಷಿಮಾ ಮೇಲೆ ಬಾಂಬ್ ಉದುರಿಸಿದ ಥಾಮಸ್ ಫರ್ಬಿಯನ್ನೇ? ಅಥವಾ ಯುದ್ಧವಾಗಲೇಬೇಕೆಂದು ಮೊಂಡು ಹಿಡಿದಿದ್ದ ಜಪಾನಿನ ರಕ್ಷಣಾ ಅಧಿಕಾರಿಗಳನ್ನೇ?

ಅಗಸ್ಟ್ 6 ಹಾಗೂ 9ನೇ ತಾರೀಕು ಬಂತೆಂದರೆ ಸಾಕು, ಪ್ರತೀ ವರ್ಷ ಈ ಪ್ರಶ್ನೆಗಳೆಲ್ಲಾ ಮತ್ತೆ ಮತ್ತೆ ಕಾಡುತ್ತವೆ.
ಇತಿಹಾಸವೇ ಹಾಗೆ!

ಮಂಗಳವಾರ, ಜುಲೈ 29, 2008

ನಗು ಅತ್ತ ದಿನ...(ಪುಟಾಣಿ ಕತೆ-2)

ಅದೊಂದು ದಿನ...
ನಗು ಅತ್ತಿತು.
ಅದನ್ನು ನೋಡಿ ಅಳು ಗಾಬರಿಯಾಗಿ ನಕ್ಕಿತು.

ಒಂದೇ ದಿನದೊಳಗೆ ಇಡೀ ಜಗತ್ತು ಬದಲಾಯಿತು.
ಜನ ನಗುವಲ್ಲೆಲ್ಲ ಅಳತೊಡಗಿದರು.
ಅಳುತ್ತಿದ್ದವರೆಲ್ಲ ನಗಲು ಶುರು ಮಾಡಿದರು.

ಮಾಷ್ಟ್ರು ಹುಡುಗನಿಗೆ ನಾಲ್ಕರ ಮಗ್ಗಿ ತಪ್ಪು ಹೇಳಿದ್ದಕ್ಕೆ ಅಡಿಕೊಲಿನಿಂದ ಗಂಟಿಗೆರದು ಕೊಟ್ಟರು. ಹುಡುಗ ಜೋರಾಗಿ ಗಳಗಳನೆ ನಕ್ಕ.
ಚರ್ಚಿನ ಕನ್ೞೆಶನ್ ಬಾಕ್ಸ್ ನಲ್ಲಿ ಪಾದ್ರಿಗಳಿಗೆ ನಗು ನಗುತ್ತ ದುಃಖ ತೋಡಿಕೊಳ್ಳುವವರು ಕಂಡು ಬಂದರು. ಕಾಮಿಡಿ ಸೀರಿಯಲ್ಲುಗಳು ಧಿಡೀರನೆ ನಿಂತು ಹೋದವು.
ಲಾಫಿಂಗ್ ಕ್ಲಬ್ಬುಗಳ ತುಂಬಾ ಹ್ಹಹ್ಹಹ್ಹ ಬದಲು ಅಳುವವರ ಆಕ್ರಂದನ ಮುಗಿಲು ಮುಟ್ಟಿತು.

ಸತ್ತಾಗ ಜನ ನಗತೊಡಗಿದರು.
ಮಗು ಹುಟ್ಟಿದಾಗ ಅಳತೊಡಗಿದರು.
ಸತ್ತ ಹೆಣದ ಮುಂದೆ "ಹ್ಹ...ಹ್ಹ...ಹ್ಹೆಹ್ಹೆ ...ಹ್ಹಹ್ಹ... ಹೋಗ್ಬಿಟ್ಟೆಯಲ್ಲಪ್ಪಾ" ಅಂತ ಹೌಸ್ಫುಲ್ ನಗು.

ಇದನ್ನೆಲ್ಲಾ ನೋಡಿ ಸಿಕ್ಕಾಪಟ್ಟೆ ಕನ್ಫ್ಯೂಸ್ ಆದದ್ದು ಸಾವಿಗೆ.
ಜನ ಸಾಯುವಾಗ ನಗುತ್ತಾರೆ ಅಂತ ತಿಳಿದಾಕ್ಷಣ
ಸಾವು ಅಳಲು ಶುರು ಮಾಡಿತು!!
ಹಾಗೂ
ಅದು ನಿಜವಾಗಲೂ ಅತ್ತಿತು!!

ಸೋಮವಾರ, ಜುಲೈ 21, 2008

ಕಟಕಟೆ ಕೋಣೆಯಾದರೆ


ಕಟಕಟೆ
ಕೋಣೆಯಾದರೆ
ಸಬೂಬುಗಳು
ಸಾಬೀತಾಗುವುದಿಲ್ಲ

ಆಡಿಸಿದ ಗೋಣು
ಗೇಣಿ ಕೇಳುತ್ತದೆ
ಒಂಟಿ ದಸಕತ್ತಿಗೆ
ಬೆಲೆಯಿಲ್ಲ

ಕಾಂಕ್ರೀಟು
ತೋಳುಗಳಲ್ಲಿ ದಿವ್ಯಸನ್ನಿಧಿ
ನಲುಗಿದರೆ
ಉಸಿರು ಹುಟ್ಟುವುದಿಲ್ಲ

ಬುಧವಾರ, ಜುಲೈ 9, 2008

ಪ್ರಣತಿಯ ಬೆಳಕಿಗೆ ಕಾದವ (ಪುಟಾಣಿ ಕತೆ-1)

(ಇತ್ತೀಚೆಗೆ ಒಂದಷ್ಟು ಪುಟಾಣಿ ಕತೆಗಳನ್ನು ಬರೆದೆ. ಅದರಲ್ಲಿ ಇದೂ ಒಂದು)

ಅವಳು "ಪ್ರಣತಿ"

ಸಾವಿರ ಕಾರ್ತಿಕೋತ್ಸವದ ಬೆಳಕನ್ನು ತನ್ನಲ್ಲಿ ಬಚ್ಚಿಟ್ಟುಕೊಂಡವಳು. ದೇವಸ್ಥಾನದ ಗರ್ಭಗುಡಿಯ ಮುಂಬಾಗಿಲಲ್ಲಿ ಪ್ರತಿ ದಿನವೂ ಎರಡು ಹಣತೆ ಬೆಳಗುತ್ತಿದ್ದವಳು.

ಅವನು "ಅವನೇ"

ಕಾರ್ತಿಕೋತ್ಸವದ ಬೆಳಕಿನ ತೇರಲ್ಲಿ ಕಳೆದುಹೋದವ. ಪ್ರಣತಿಯ ಬೆಳಕಿಗಾಗಿ ಹಪಹಪಿಸಿದವ. ಪ್ರತಿ ದಿನವೂ ಗರ್ಭಗುಡಿಯ ಮುಂದಿನ ಬೆಳಕಲ್ಲಿ ಉಳಿದು ಹೋದವ. ಅವಳು ಹಚ್ಚಿಟ್ಟ ದೀಪ ದಿನವೂ ಆರಿ ಹೋಗುತ್ತಿದ್ದಾಗ ಗುಟ್ಟಾಗಿ ಎಣ್ಣೆ ಸುರಿದವ.

ಒಂದು "ಮುಂಜಾನೆ"
ಆತ ದೇವಸ್ಥಾನಕ್ಕೆ ಹೋದಾಗ ಪ್ರಣತಿ ಉರಿಯುತ್ತಿರಲಿಲ್ಲ. ಮಾಸಿದ ತಿಬಿಲೆ, ಬಿಳಿಯೆಲ್ಲ ಕಪ್ಪಾಗಿದ್ದ ಬತ್ತಿ ಅಷ್ಟೇ ಅಲ್ಲಿದ್ದದ್ದು. ಆತ ಪ್ರಣತಿಯ ಬೆಳಕಿಗೆ ಕಾದ. ಕೈಯಲಿದ್ದ ಎಣ್ಣೆಯ ಡಬ್ಬಿ ಹಾಗೇ ಉಳಿಯಿತು.

ರಾತ್ರಿಯಾಯಿತು, ಬೆಳಗಾಯಿತು. ವರುಷಗಳು ಉರುಳಿದವು. ಆದರೂ ಆತನ ಮೊಗದ ಕಾತರ ಕರಗಲಿಲ್ಲ.


ಕೊನೆಗೊಂದು ದಿನ ಅಲ್ಲಿ ನಿಂತಿದ್ದ ಆತ ದೇವರಾದ!

ನೋಡ ನೋಡುತ್ತಿದ್ದಂತೆ ಪ್ರಣತಿ ಆತನ ಕಣ್ಣಲ್ಲಿ ಬೆಳಗಿತು!

"ಕನ್ನಡಿ ಒಳಗೆ ಗಳಗನಾಥರಿರಲಿಲ್ಲ "- ಇಂಗ್ಲೀಷಲ್ಲಿ

(ಜೋಗಿ ಅವರು ಬರೆದ ಕತೆಗಳಲ್ಲಿ ಮತ್ತೆ ಮತ್ತೆ ಕಾಡುವುದು-"ಕನ್ನಡಿ ಒಳಗೆ ಗಳಗನಾಥರಿರಲಿಲ್ಲ ". ಆ ಕತೆ ಉಂಟು ಮಾಡುವ ತವಕ-ತಲ್ಲಣ ನಮ್ಮೊಳಗೆ ಉಳಿಯುತ್ತದೆ, ಬೆಳೆಯುತ್ತದೆ. ಸಾಹಿತ್ಯ ಅನುವಾದ ಸ್ಪರ್ಧೆಯೊಂದಕ್ಕೆ ಉಜಿರೆ ಎಸ್ಡಿಎಂ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕ ಮಿಥುನ್ ಚಕ್ರವರ್ತಿ ಈ ಕತೆಯನ್ನು "Galaganatha did not find himself in the Mirror" ಎನ್ನುವ ಹೆಸರಲ್ಲಿ ಅನುವಾದಿಸಿದ್ದರು. ಜೋಗಿ ಕೂಡ ಅನುವಾದವನ್ನು ಇಷ್ಟಪಟ್ಟಿದ್ದರು. ನೀವೂ ಓದಿ ನೋಡಿ. ಅನುವಾದ ಓದಿ ಇಷ್ಟವಾದರೆ, ಪ್ರತಿಕ್ರಿಯೆಯಾಗಿ ನಿಮ್ಮ ನಾಲ್ಕು ಸಾಲುಗಳಿರಲಿ)


Galaganatha did not find himself in the mirror

--by: Girish Rao(Jogi)

--Translation: Mithun Chakravarty

Galaganatha was startled.
As usual when he stood in front of the mirror, he couldn’t see his reflection. He felt his eyes had grown dim and therefore rubbed them. Still he could not see him. He was frightened and looked outside the window. Far in the distance, the healthy hillock with majesty, the palm tree grown over it without anybody’s obligation, the Choudeshwari temple under it, the Renje tree well attired in grey flowers, the anonymous brook running under it….. everything looked quite clear.

Again he looked into the mirror. He could see the mirror, but there was no Galaganatha in it. The mirror that showed the objects in inverted mode was so indifferent that day that it behaved as if Galaganatha was not standing there. This thought really started torturing his conscience. He raised his arm, took his towel out of his shoulder and held it in front of the mirror. He took a step back. Standing there, he gazed to check if other things were visible in the mirror.

The mirror reflected everything except Galaganatha. When he bent, the tiled roof, the cot at a side glance, all looked apparent. Galaganatha felt insulted that the mirror hesitated to show him. Standing in front of the mirror, Galaganatha started thinking if he had done anything wrong. In the kitchen, his wife who was cooking was angry and was beating her third daughter. The first daughter was getting ready for the college and was literally waiting for Galaganatha to finish his shaving and vacate the place aft the mirror. When Galaganatha was peering into the mirror like a suspecting animal, his daughter felt annoyed to see this and irritably said, ‘Oh! appa, it’s enough. Please come aside, I have to go to college.’

Galaganatha stood afar and watched his daughter getting ready with her make-up. Her gestures conveyed that she was looking her image adoringly in the mirror. She parted her lips, applied lipstick and pressed both her lips on one another, furnishing the corners with the hem of a towel. She opened her eyes exorbitantly wide, applied kajol and made up her hair on the forehead. The mirror was swallowing her slowly. If what is happening right now is true, his very attempt of seeing in the mirror before, itself is a lie. The mirror rejecting him also might be a lie. ‘Let me see!’ uttered Galaganatha and jumped in front of the mirror. The suddenness of his jump frightened his daughter and she was angry.

Galaganatha was not visible in the mirror to Galaganatha. Why is father today standing in front of the mirror for long? With surprise and anxiety, the daughter asked, ‘What happened to your face, appa? Didn’t you sleep in the night? See your eyes! How red they have become!’ Galaganatha was really frightened now. ‘Why? What has happened?’ he asked anxiously. ‘I really cannot see your face…..You go to the mirror and look for yourself!’ Saying this, the daughter held her books and ran towards the street.

* * *
On the whole day, the mirror affair literally troubled Galaganatha. All the people who met him asked, ‘Are! Why have you become like this? Are you not in good health?’ and tormented him. When he stood in front of the mirror to see how he looked, he couldn’t see him. Galaganatha felt that the mirror in the house had deceived him and he went to his usual barber Govinda’s shop. Govinda had decorated his whole shop with mirrors. They were arranged in such an order that one face looked like ten, twenty…….

Govinda made him sit on the chair. Galaganatha was startled once more. He could see only the chair and not Galaganatha, the giant occupant of the chair. Further, he heard the sound of Govinda’s scissors on his head. The cut hair from his head started falling on his body. But the mirror was silent and numb. He felt the mirror was angry on him and was further scared. Immediately he got a troubling doubt whether he existed or not. To ensure, he bent and looked into his hands, legs and stomach. Govinda immediately caught his head and proceeded with his hair cutting.

After paying Govinda, Galaganatha came out. He developed a tremendous suspicion whether he was visible to the world or not. Has nobody faced such a problem? If I go to a doctor, will I get medicine to this? Is it the problem of sight or the mirror? He strangely recalled Shastriji at the same time. Shastri is a great Pundit. He knows both Astrology and Ayurveda. Without taking bath, one should not approach him. Galaganatha came running to his house and took bath. He expected that his face could be seen at least in the tumbler of hot water while bathing. The water in the tumbler was shimmering, but showed nobody’s face.

* * *
Galaganatha did not spell his problem with Shastri. He was perplexed how he should say to Shastri that he couldn’t see himself in the mirror. Casually he spoke about his cough, back pain…… and enquired about the bridegroom for his first daughter. While coming out, Galaganatha asked at last, ‘Shastriji, I met one of my old acquaintances before two days. His problem is unique. He cannot see himself in the mirror though he stands in front of it!’ Shastriji without even thinking once said, ‘During such time, it is like that!’ and hurried inside the house.

During Such time means What time? Did he say about old age, the time of death? When we die, the body doesn’t live, only mind keeps wandering. In that case am I dead? But why am I visible to others? Am I dead for me and living for them? Is it possible to be like that? Can one live only to others? If I am alive to myself and dead for others, will I be able to see myself?

Galaganatha thinking the same came to his house. At last, he wanted to stand in front of the mirror. He expected, ‘Possibly, now I may see myself!’ With this, he came to the gateway, washed his legs and knocked the door. The door opened. Straight away, he went to the mirror and stood in front of it. He didn’t see anyone in the mirror. He probed deep into the mirror and saw slowly the face of his wife. Galaganatha turned back. His wife had just taken bath and had tied the towel on her hair and was applying vermilion powder on the forehead. Galaganatha was just in front and the wife showed no sign of recognition and he felt scared. He tried to utter something, but didn’t. The wife undoing the knot of her hair asked her daughter, ‘Where has your father gone? The daughter who was playing dice with the wild nuts said, ‘I don’t know!’
* * * * * * * * * * * *

ಮಂಗಳವಾರ, ಜುಲೈ 1, 2008

ನೆನಪಾದಳು ಶಾಕುಂತಲೆ

ನೆನಪಾದಳು ಶಾಕುಂತಲೆ
ಅರವತ್ತರ ಹರೆಯದಲ್ಲಿ
ಎಲ್ಲಿರುವಳು ಆಕೆಯೀಗ?

ತೆರಳಬೇಕೆಂದಿದ್ದೇನೆ ಅತ್ತ
ತಿರುಕನಂತೆ, ಅಲೆಮಾರಿಯಂತೆ


ಆವತ್ತು ಹಸಿ-ಬಿಸಿ ಬಯಕೆಗಳಿದ್ದವು
ಬಿಸಿಯುಸಿರು ಮೊಗವ ತಾಕಿದಾಗ ಸಂತಸವಾಗುತ್ತಿತ್ತು
ಆ ಮುಂಗುರುಳ ಚೆಲುವೆಯ ಜೊತೆ
ಅದೆಷ್ಟು ಕಡೆ ಅಡ್ಡಾಡಿದ್ದೆ ನಾನು
ನಿದ್ದೆಯಿಲ್ಲದ ರಾತ್ರಿಗಳು, ಮನದ ತುಂಬಾ ಕನಸುಗಳು
ಗಾಂಧಿ, ಲೋಹಿಯಾ, ಬುದ್ಧ ಯಾರೂ ರುಚಿಸುತ್ತಿರಲಿಲ್ಲ
ಕೂತಾಗ-ನಿಂತಾಗ ಆಕೆ "ನೆನಪೇ" ಆಗುತ್ತಿದ್ದಳು

ಅರಳಿರುವ ಹೂವು
ನೀಲ-ನಿರ್ಮಲ ಆಕಾಶ
ಎಲ್ಲವನ್ನೂ ತೋರಿಸುತ್ತಿದ್ದಳು ಆಕೆ
ಆಶಾವಾದಿಯಾಗಬೇಕಂತೆ
ಬಾಡಿ ಹೋದ ಹೂ-ಬಳ್ಳಿ, ಕಪ್ಪನೆಯ ಮೋಡ
ಆಕೆಗೆ ಕಾಣುತ್ತಿರಲಿಲ್ಲ
ತಲೆ ತುಂಬಾ ಸಮಾಜ, ತತ್ವ, ಆದರ್ಶ
ಎನ್ನುತ್ತಿದ್ದವಳು ಕೊನೆಗೆ ಮಾಡಿದ್ದಾದರೂ ಏನು?
ಸುಂದರ-ಸುಮಧುರ ವಂಚನೆ

ಅದೆಷ್ಟು ದಿನ ಸಿಗರೇಟುಗಳ ಸುಡಲಿ
ಬೆಚ್ಚಗಿನ ಹೊಗೆ ಕೆಂಡವ ಆರಿಸಿತೇ?
ವಿಸ್ಕಿಯ ಗುಟುಕು ಗಂಟಲಿನಿಂದ ಕೆಳಗಿಳಿಯುತ್ತಿಲ್ಲ
ಒಡಲು ಸುಟ್ಟು ಹೋಗಿದೆ
ವಯಸ್ಸು, ದೇಹ, ಎರಡೂ ಕರಗುತ್ತಿದೆ
ಮನಸ್ಸೂ ಕೂಡಾ

ಸಜ್ಜನನಾಗಬೇಕೆಂದಿದ್ದೇನೆ, ನಿರ್ಮಲನಾಗಬೇಕೆಂದಿದ್ದೇನೆ
ಬಿರಿದ ತುಟಿಗಳು, ಉರಿದ ಒಡಲು
ಉಫ್......ಸಾಕಪ್ಪಾ ಸಾಕು
ನೆಮ್ಮದಿ ಬೇಕಾಗಿದೆ, ಚಿರ ವಿಶ್ರಾಂತಿಯೆಡೆಗೆ ಸಾಗಬೇಕಿದೆ
ಆದರೂ ಆಕೆ ನೆನಪಾಗುತ್ತಾಳೆ
ಕಳೆದು ಹೋದ ಮಧುರಭಾವದಂತೆ, ಸ್ಮಾರಕದಂತೆ

(ಬೆಂಗಳೂರಿನ ಕ್ರೈಸ್ಟ್ ಕಾಲೇಜು 2005-06 ಸಾಲಿನಲ್ಲಿ ನಡೆಸಿದ ದ.ರಾ.ಬೇಂದ್ರೆ ಸ್ಮ್ರತಿ ಅಂತರ್ ಕಾಲೇಜು ಕವನ ಸ್ಪರ್ಧೆಯಲ್ಲಿ ಬಹುಮಾನಿತ ಕವನ)

ಶುಕ್ರವಾರ, ಜೂನ್ 27, 2008

ಒಂದು ವಿಚಿತ್ರ ಕಥೆ

(ಓ ಹೆನ್ರಿ ಕಥೆಗಳನ್ನು ಓದುವ ಸುಖವೇ ಬೇರೆ. ಆತನ ಪ್ರತೀ ಕಥೆಯ ಕೊನೆಗಿರುವ ತಿರುವು ಓದುಗನಲ್ಲೊಂದು ಮಿಂಚು ಹುಟ್ಟಿಸುತ್ತದೆ. "A Strange Story" ಅನ್ನುವ ಆತನ ಪುಟ್ಟ ಕಥೆಯನ್ನು ಓದಿ ಮುಗಿಸಿದಾಗ, ಅದನ್ನು ಹಾಗೆ ಸುಮ್ಮನೆ ಕನ್ನಡಕ್ಕೆ ಅನುವಾದಿಸೋಣ ಅನ್ನಿಸಿತು)

ಆಸ್ಟಿನ್ ಉತ್ತರ ಭಾಗದಲ್ಲಿ ಸ್ಮಾಥರ್ಸ್ ಕುಟುಂಬ ವಾಸಿಸುತ್ತಿತ್ತು. ಜಾನ್ ಸ್ಮಾಥರ್ಸ್, ಅವನ ಹೆಂಡತಿ, ಐದು ವರ್ಷದ ಪುಟ್ಟ ಮಗಳು ಇದು ಅವರ ಸುಖೀ ಕುಟುಂಬ.

ಒಂದು ರಾತ್ರಿ ಊಟಕ್ಕೆ ಕುಳಿತಿದ್ದಾಗ ಮಗಳಿಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಜಾನ್ ಸ್ಮಾಥರ್ಸ್ ಔಷಧಿ ತರಲು ಪೇಟೆಗೆ ಹೋದ.

ಆತ ಹಿಂದಿರುಗಿ ಬರಲಿಲ್ಲ.

ಪುಟ್ಟ ಹುಡುಗಿ ಗುಣಮುಖಳಾದಳು. ಗಂಡನ ಕಣ್ಮರೆಯಿಂದ ಹೆಂಡತಿ ಬಹಳ ದುಃಖಿಸಿದಳು. ಕೊನೆಗೆ ಮರು ಮದುವೆಯಾಗಿ ಸ್ಯಾನ್ ಆಂಟೋನಿಯೋಗೆ ಪ್ರಯಾಣ ಬೆಳೆಸಿದಳು. ಆ ಪುಟ್ಟ ಹುಡುಗಿ ಬೆಳೆದು ನಿಂತಳು.

ಬೆಳೆದು ನಿಂತ ಪುಟ್ಟ ಹುಡುಗಿಗೆ ಸಹ ಮದುವೆಯಾಯಿತು. ಕೆಲವು ವರ್ಷ ಕಳೆಯಿತು. ಈಗವಳು ಐದು ವರ್ಷದ ಮಗಳ ತಾಯಿ. ತನ್ನ ತಂದೆ ಔಷಧಿ ತರಲು ಹೋಗಿ ತಿರುಗಿ ಬಾರದ ಆ ಮನೆಯಲ್ಲೇ ಅವಳೀಗ ವಾಸಿಸುತ್ತಿದ್ದಳು.

ಒಂದು ರಾತ್ರಿ ಅವಳ ಮಗಳು ಪ್ಯಾನ್ಸಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿತು. ಜಾನ್ ಸ್ಮಾಥರ್ಸ್ ಕಾಣೆಯಾಗಿದ್ದ ದಿನವೇ ಇದೆಲ್ಲ ನಡೆದದ್ದು ಆಕಸ್ಮಿಕವೋ, ಪೂರ್ವವಿರ್ಧರಿತವೋ ಗೊತ್ತಿಲ್ಲ.

"ನಾನು ಪೇಟೆಗೆ ಹೋಗಿ ಮಗಳಿಗೆ ಔಷಧಿ ತರುತ್ತೇನೆ" ಎಂದ ಗಂಡ.

"ಪ್ಲೀಸ್ ಬೇಡ, ನೀನೂ ಕೂಡಾ ಹಿಂತಿರುಗಿ ಬರಲು ಮರೆತು ಹೋಗುತ್ತೀಯಾ ನನ್ನಪ್ಪನಂತೆ" ಆಕೆ ಕಣ್ಣೀರಿಟ್ಟಳು.

ಹೆಂಡತಿಯ ಗೋಳು ಕೇಳಲಾಗದೆ ಗಂಡ ಮನೆಯಲ್ಲೇ ಉಳಿದ. ಆದರೆ ಸ್ವಲ್ಪ ಸಮಯದಲ್ಲೇ ಪ್ಯಾನ್ಸಿಯ ಆರೋಗ್ಯ ಹದಗೆಡಲು ಶುರುವಾಯ್ತು. ಗಂಡ ಸ್ಮಿತ್ ಔಷಧಿ ತರಲು ಹೋಗುವುದಾಗಿ ಮತ್ತೆ ಎದ್ದ. ಆದರೆ ಆಕೆ ಬಿಡಲೇ ಇಲ್ಲ.

ಆಗ ಅಕಸ್ಮಾತ್ತಾಗಿ ಬಾಗಿಲು ತೆರೆದುಕೊಂಡಿತು. ಗೂನು ಬೆನ್ನಿನ, ಉದ್ದನೆಯ ಬಿಳಿ ಕೂದಲಿನ ಮುದುಕ ಕೋಣೆ ಪ್ರವೇಶಿಸಿದ. ಅವರು ಗುರುತಿಸುವ ಮೊದಲೇ ಪ್ಯಾನ್ಸಿ ಆತನನ್ನು ಗುರುತಿಸಿದಳು. "ಹೇ...ಅಜ್ಜ ಬಂದ್ರು" ಅಂತ ಖುಷಿ ಖುಷಿಯಾದಳು.

ಆ ಮುದುಕ ಕಿಸೆಯಿಂದ ಔಷಧಿಯ ಬಾಟ್ಲಿ ಹೊರತೆಗೆದ. ಪ್ಯಾನ್ಸಿಗೆ ಚಮಚ ಪೂರ್ತಿ ಕುಡಿಸಿದ. ಆಕೆ ಕೂಡಲೇ ಚೇತರಿಸಿಕೊಂಡಳು.

"ನಾನು ಬರೋದು ಸ್ವಲ್ಪ ತಡವಾಯ್ತು. ಸ್ಟ್ರೀಟ್ ಕಾರಿಗಾಗಿ ಕಾಯುತ್ತಿದ್ದೆ" ಎಂದು ನಿಟ್ಟುಸಿರು ಬಿಟ್ಟ ಜಾನ್ ಸ್ಮಾಥರ್ಸ್.

"ಸಿಗರೇಟಿನಂಚಿನಲ್ಲಿ ಕರಗಿದ ವಿಷಾದ ರಾತ್ರಿ"

ತ ಸಿಗರೇಟಿನ ತುದಿಗೆ ಬೆಂಕಿ ಹಚ್ಚಿದ್ದ. ಕಣ್ಣಲ್ಲೊಂದು ಮರುಭೂಮಿಯಿತ್ತು. ಓಯಸ್ಸಿಸ್ಸನ್ನು ಹುಡುಕಿ ಸುಸ್ತಾದವನ ದಣಿವಿತ್ತು. ಹಾಲ್ನ ಹೊರಗೆ ಮಳೆ ಸುರಿಯಲು ಶುರುವಿಟ್ಟಿತು. ಆದರೆ ತನ್ನ ಬದುಕಿನಲ್ಲಿ ಅಂತಹದೊಂದು ಮಳೆ ಬರಲೇ ಇಲ್ಲವಲ್ಲ ಎಂದುಕೊಂಡ.

ಎಲ್ಲಾ ವಿಷಾದಗಳು ಸಿಗರೇಟಿನ ತುದಿಗೆ ಸಿಕ್ಕು ಬೂದಿಯಾಗುತ್ತಿತ್ತು. ಆತ ತುಂಬಾ ಇಷ್ಟಪಟ್ಟಿದ್ದ ಅಮೃತಾ ಪ್ರೀತಂ ಬರೆದ ಸಾಲು ನೆನಪಾಯಿತು--
ಒಂದು ನೋವಿತ್ತು
ಸದ್ದಿಲ್ಲದೆ ನಾನದನು ಸಿಗರೇಟಿನ ಹಾಗೆ
ಸೇದಿಬಿಟ್ಟೆ
ಒಂದಷ್ಟು ಕವಿತೆಗಳು ಮಾತ್ರ ಉಳಿದಿವೆ
ಸಿಗರೇಟಿನಿಂದ ಹೊಮ್ಮಿದ ಬೂದಿಯನು
ಕೂಡಿಡುವಂತೆ ಕೂಡಿಸಿಟ್ಟಿಹೆನು ನಾನು


ನನ್ನಲ್ಲಿ ಎಷ್ಟು ವಿಷಾದಗಳಿವೆ? ನಾಲ್ಕೋ, ಐದೋ? ಡಜನ್ಗಾಗುವಷ್ಟೋ? ಎಷ್ಟು ಸಿಗರೇಟು ಸೇದಬೇಕು? ಮಳೆಯ ರಭಸ ಹೆಚ್ಚಾಯಿತು. ಸಿಗರೇಟು ಅರ್ಧ ಸುಟ್ಟಿತ್ತು. ರೈಲಿನ ಎಂಜಿನಿನಿಂದ ದುಸಮುಸ ಎಂದು ಆಕಾಶ ಸೇರುವ ಕಪ್ಪು-ಬಿಳಿ ಹೊಗೆ ಹಾಗಿತ್ತು ಅವನ ಬಾಯಿ. ಮನಸ್ಸಿಗೆ ಬೆಂಕಿ ಬಿದ್ದಿತ್ತು. ಬಯಕೆಗಳಿಗೆ, ಭರವಸೆಗಳಿಗೆ ಬಿಂಕಿ ಬಿದ್ದಿತ್ತು. ಮಳೆಯ ರಭಸಕ್ಕೆ ಶಟರ್ು ತೋಯ್ದು ತೊಟ್ಟಿಕ್ಕುತ್ತಿತ್ತು. ಕಾಲ ಬುಡದಲ್ಲಿ ಕೆಸರು. 'ಶೂ'ವಿನ ತುದಿ ಬುಡ ಎಲ್ಲವೂ ಕೆಂಪು,ಕೆಂಪು.

ಉದ್ದನೆಯ ದಾರಿ ಕಂಡಿತು. ಸುಮ್ಮನೆ ನಡೆಯಬೇಕು. ಯಾವುದೇ ಉದ್ದೇಶಗಳಿಲ್ಲದೆ, ಭರವಸೆಗಳಿಲ್ಲದೆ ಎಂದುಕೊಂಡ. ಗಾಳಿ ಬೀಸಲು ಪ್ರಾರಂಭವಾಯಿತು. ಮುನಿಸಿಕೊಂಡ ಹುಡುಗಿಯಂತೆ ಸರಸರನೆ ತರಗಲೆಗಳನ್ನೆಲ್ಲಾ ಎತ್ತಿ ಒಯ್ಯುತ್ತಿತ್ತು. ಈತನನ್ನೂ ಎಳೆದುಕೊಂಡು ಹೋಗಲು ಹುನ್ನಾರ ಮಾಡಿದಂತಿತ್ತು. 'ಬಾ ನನ್ನೊಂದಿಗೆ.ಎಲ್ಲವನ್ನೂ ಹೇಳಿ ನಿರಾಳವಾಗು. ಆಗೋದೆಲ್ಲಾ ಒಳ್ಳೇದಕ್ಕೆ' ಎನ್ನುವಂತಿತ್ತು ಅದರ ಧಾಟಿ. ಆದರೆ ಆತನಿಗೆ ಮಾತ್ರ ಗೊತ್ತು-ಪ್ರವಾಹದಲ್ಲಿ ಈಜುವ ಮಜವೇ ಬೇರೆ. ಧೈರ್ಯ ಒಂದೇ ಸಾಲದು. ಸ್ಥಿಮಿತವೂ ಇರಬೇಕು. ಉಳಿದವರಿಗೆಲ್ಲಾ ಗುರಿ ತಲುಪುವ ಧಾವಂತ. ಆದರೆ ತನಗೆ? ಗುರಿಯ ಆಸುಪಾಸಿನಲ್ಲಿದ್ದರೂ ಮತ್ತೆ ತಿರುಗಿ, ಮತ್ತೊಂದು ಗುರಿಯ ಗಮ್ಯದತ್ತ ನಡೆಯುವುದು ಅಭ್ಯಾಸ. ಅದು ಅಭ್ಯಾಸವೋ, ಅಭಾಸವೋ?ಆತನಿಗಿನ್ನೂ ಸ್ಪಷ್ಟವಿಲ್ಲ. ಕಣ್ಣಲ್ಲಿದ್ದ ಕನಸು ಕೈಗೂಡುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಈಡೇರುತ್ತದೆ ಎನ್ನುವ ಚಂಚಲತೆಯೊಂದಿಗೇ ಬದುಕಿದವನು ತಾನು. ಕಂಡ ಕನಸು ಹಾದಿಯಲ್ಲಿ ಸಾಗುವುದು ನಿತ್ಯವೂ ತನಗೆ ಪೂಜೆಯಿದ್ದಂತೆ.

ಇಂತಹ ಚಿತ್ರ-ವಿಚಿತ್ರ ಚದುರಿದ ಚಿತ್ರಗಳು ಅರೆಕ್ಷಣ ಕಣ್ಣಮುಂದೆ ಹಾದು ಹೋದವು. ತರ್ಕ ಏನೇ ಇರಬಹುದು. ಬುದ್ಧಿ ಮಾತ್ರ ಯಾವುದನ್ನೂ ಅಷ್ಟು ಬೇಗ ಒಪ್ಪಿಕೊಳ್ಳುವುದಿಲ್ಲ. ಬೇವರ್ಸಿ ಬದುಕು. ಅನುಭವ ತಗೊಳಯ್ಯ ಅಂತ್ಹೇಳಿ ಕೈ ತೊಳೆದುಕೊಳ್ಳುತ್ತೆ.

ಮಳೆ ರುದ್ರವಾಗುತ್ತಾ ಹೋಯಿತು. ಆಗಸದಲ್ಲಿ ಗುಡುಗು-ಸಿಡಿಲು. ಆದರೂ ಹೆಜ್ಜೆಗಳು ದೃಢವಾಗುತ್ತಿದ್ದವು. ನಡೆದ ಹೆಜ್ಜೆ ಗುರುತುಗಳಲ್ಲಿ ಮಳೆ ನೀರು ತುಂಬಿಕೊಳ್ಳುತ್ತಿತ್ತು. ಮುಂದೆ ನಡೆದಂತೆಲ್ಲಾ ಹಿಂದೆ ನಡೆದು ಬಂದ ಹೆಜ್ಜೆಗಳೇ ಕಾಣುತ್ತಿಲ್ಲ. ಹತ್ತೋ-ಹನ್ನೆರಡು ಹೆಜ್ಜೆ ಮುಂದಿಟ್ಟಿರಬೇಕು. ಹಾಲ್ನಲ್ಲಿ ಮಂಗಳವಾದ್ಯ ಮೊಳಗುವುದು ಕೇಳಿಸಿತು. ಅಲ್ಲೊಂದು ಸಂಭ್ರಮದ ಅಲೆ ಹೊರಬೀಳುತ್ತಿತ್ತು.

ಆತನಿಗೆ ತಿರುಗಿ ನೋಡಬೇಕೆನಿಸಲಿಲ್ಲ. ಅಕ್ಷತೆ ಕಾಳು ಕೈಯಿಂದ ಜಾರಿಬಿಟ್ಟಿತು. ಗಾಢ ನಿಟ್ಟುಸಿರೊಂದು ಹೊರಬಿತ್ತು. ಆದರೂ ಆತ ನಡೆಯುತ್ತಲೇ ಇದ್ದ. ಕೊನೆ ತಿರುವು ಕಾಣುವವರೆಗೂ....

ಗುರುವಾರ, ಜೂನ್ 19, 2008

ಯುವರ್ ಆನರ್....


ಸಿಎಸ್ಪಿ ಮತ್ತೆ ಕಿರುತೆರೆಯ ಕಟಕಟೆಗೆ ಬಂದು ನಿಂತಿದ್ದಾರೆ. ಇನ್ನೇನಿದ್ದರೂ ಅವ್ರ ವಾದ ಕೇಳೋದಷ್ಟೇ ನಮ್ಮ ಕೆಲಸ. ಅವ್ರಿಗಂತೂ "ಮ"ಕಾರದ ಬಗ್ಗೆ ಮರೆಯದ ಮಮಕಾರ. ಅದಕ್ಕವರು ಈ ಸಲ ಎರಡೆರಡು ಬಾರಿ "ಮುಕ್ತ..ಮುಕ್ತ" ಎನ್ನುತ್ತಿದ್ದಾರೆ.


ಮಧ್ಯಮ ವರ್ಗದ ಬವಣೆಯ ಬದುಕು, ಸಂಘರ್ಷ ಮತ್ತೆ ತೆರೆದುಕೊಂಡಿದೆ. ಒಂದರ್ಥದಲ್ಲಿ ಇದು ನಮಗೆಲ್ಲಾ ಖುಷಿಯ ವಿಷಯ, ಮೈ ಲಾರ್ಡ್ . ಒಂದು ಕುಟುಂಬವನ್ನು ಮೂಲವಾಗಿಟ್ಟುಕೊಂಡು ವ್ಯವಸ್ಥೆಯೊಳಗೆ ಇಣುಕಿ ನೋಡುವ ಟಿಎನ್ಎಸ್ ಒಳನೋಟ ನಮ್ಮನ್ನೆಲ್ಲಾ ಚಿಂತನೆಗೆ ಹಚ್ಚುತ್ತದೆ. ಮಾಯಾಮೃಗ, ಮನ್ವಂತರ, ಮುಕ್ತ ಇದಕ್ಕೆ ಸಾಕ್ಷಿ.

"ಮುಕ್ತ"ದಲ್ಲಿ ಅವ್ರ ಪದ್ಯದ ತೆರಪಿಯನ್ನು ಯಾರಾದರೂ ಮರೆಯುವುದುಂಟಾ, ಯುವರ್ ಆನರ್. ಯಾವುದೇ ಕೋರ್ಟ್ ಸೀನ್ ಬರಲಿ, ಅಲ್ಲೊಂದು ಚೆಂದದ ಕನ್ನಡ ಪದ್ಯದ ಸಾಲು ಇರಲೇಬೇಕು. ಇದರಿಂದಾಗಿ ಕೆಲವಾರು ಕವಿತೆಗಳು ಜನಮನ ಸೇರಿದವು. ಇದನ್ನೆಲ್ಲಾ ಸ್ವಾಗತಿಸುತ್ತಾ ನನ್ನದೊಂದು ತಕರಾರು, ಯುವರ್ ಆನರ್.

ಪಾಯಿಂಟ್ ನಂ1.

ಟಿಎನ್ಎಸ್ ಧಾರಾವಾಹಿಗಳಲ್ಲಿ ಮುಖ್ಯಪಾತ್ರದ ಅಲಿಖಿತ ಡೈಲಾಗ್ ಯಾವತ್ತಿಗೂ ಒಂದೇ-"ಪ್ಲೀಸ್, ನನಗೆ 'ಹಿಂಸೆ' ಆಗುತ್ತೆ". ಮನ್ವಂತರದ ಮಂದಾಕಿನಿ, ಮುಕ್ತದ ನಂದಿನಿ ಎಲ್ಲರ ಹೋಳು ಒಂದೇ. ಇದೊಂಥರಾ ಅಂಟು ರೋಗ. "ಭೂಮಿಕಾ" ನಿರ್ಮಾಣ ಮಾಡುತ್ತಿರುವ ಇತರ ಧಾರಾವಾಹಿಗಳ ಹಣೆಬಹವೂ ಇದೇ. ಮಧ್ಯಮ ವರ್ಗಕ್ಕೂ, ಹಿಂಸೆ ಎಂಬ ಎರಡಕ್ಷರದ ಭಯಂಕರ ಶಬ್ದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ, ಯುವರ್ ಆನರ್?

ಪಾಯಿಂಟ್ ನಂ2.

ಧಾರಾವಾಹಿಗಳನ್ನು 400 ಎಪಿಸೋಡ್ ಒಳಗೆ ಮುಗಿಸೋದು ಸೀತಾರಾಂ ಪಾಲಿಸಿ. "ಮುಕ್ತ" ಇದಕ್ಕೆ ಅಪವಾದ. TRP, ಚಾನೆಲ್ ಒತ್ತಡಕ್ಕೆ ಸೀತಾರಾಂ ಬಲಿಯಾದರು. ವೀಕ್ಷಕರೂ ಟಿಎನ್ಎಸ್ ಕೂಡಾ ಚ್ಯೂಯಿಂಗಮ್ ನಿರ್ದೇಶಕರ ಸಾಲಿಗೆ ಸೇರಿಹೋದರಾ? ಅಂತ ಅನುಮಾನ ಪಟ್ಟುಕೊಂಡರು. ಈ ಬಾರಿ ಪ್ರಸಾರವಾಗುತ್ತಿರುವುದು "ಮುಕ್ತ..ಮುಕ್ತ"!!. ಕೂಡಿಸಿದರೂ, ಗುಣಿಸಿದರೂ ಮುಗಿದು ಹೋದ ಮುಕ್ತಕ್ಕಿಂತ ಒಂದು ಕೈ ಹೆಚ್ಚೇ ಆಗುವ ಸಾಧ್ಯತೆಗಳಿವೆ!!

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು "ಮುಕ್ತ..ಮುಕ್ತ" ಧಾರಾವಾಹಿಯನ್ನು ಬೋರ್ ಹೊಡೆಸದಂತೆ ನಿರ್ದೇಶಿಸಲು ಹಾಗೂ ಹಿಂಸೆಯ 'ತಲೆಹರಟೆ'ಯನ್ನು ಕಡಿಮೆಗೊಳಿಸಲು ಸಿಎಸ್ಪಿಗೆ ತಾಕೀತು ಮಾಡಬೇಕಾಗಿ ಮಾಡಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ, ಯುವರ್ ಆನರ್!!

ಕೊನೆ ಹನಿ:

"ಮುಕ್ತ..ಮುಕ್ತ", ಮುಕ್ತ ಧಾರಾವಾಹಿಯ ಸೀಕ್ವೆಲ್. ಟಿಎನ್ಎಸ್ ನಿರ್ದೇಶನವಿರುವುದರಿಂದ ವೀಕ್ಷಕ ಮಹಾಶಯ ಬಚಾವ್. ಇದರಿಂದ ಸ್ಫೂರ್ತಿ ಪಡೆದು, ಉಳಿದವರೆಲ್ಲಾ ಸೀಕ್ವೆಲ್ಗಳಿಗೆ ಕೈ ಹಾಕಿದರೆ ವೀಕ್ಷಕರ ಮಂತ್ರ-ತಂತ್ರಗಳಿಗಂತೂ ಅಗ್ನಿ ಪರೀಕ್ಷೆ ಗ್ಯಾರೆಂಟಿ!

ಬುಧವಾರ, ಜೂನ್ 18, 2008

ಕಾಮನಬಿಲ್ಲಿನ ಕಣ್ಣುಗಳಿಗೆಯಾಕೋ ನಿನ್ನ
ಕಣ್ಣುಗಳು
ಹೊಸ ಕಾಮನಬಿಲ್ಲನ್ನು
ಹುಟ್ಟಿಸುತ್ತವೆ
ನನಗೊಂದು
ಹೊಸ ದಿಗಂತ
ತೆರೆದುಕೊಳ್ಳುತ್ತದೆ
ಮನಸ್ಸು ಹಕ್ಕಿಯಾಗಿ
ಕಾಮನಬಿಲ್ಲನ್ನು
ಚುಂಬಿಸಿ
ಪುಳಕಗೊಳ್ಳುತ್ತದೆ

ದಿನವೂ
ಸಿಗುತ್ತಿರು ಹೀಗೆ
ಕಾಮನಬಿಲ್ಲಿನ
ಮೆರವಣಿಗೆಯಲ್ಲಿ
ಪ್ರತಿ ನಿತ್ಯ
ಕಳೆದು ಹೋಗುವ
ಪುಣ್ಯವನ್ನು ನನಗೆ
ದಯಪಾಲಿಸು
!

ಕಾಡೋ ಬೆಳದಿಂಗಳ ತಂಪು!

(ಕಳೆದ ವಾರವಷ್ಟೇ "ಕಾಡ ಬೆಳದಿಂಗಳು" ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಪ್ರಶಸ್ತಿ ಸಿಕ್ಕಿದ್ದು ಕನ್ನಡಕ್ಕೆ ಸಂಭ್ರಮದ ವಿಷಯ. ಕಳೆದ ವರ್ಷ ಮೂಡುಬಿದಿರೆಯಲ್ಲಿ "ಕಾಡಬೆಳದಿಂಗಳು" ಸಿನಿಮಾ ಪ್ರದರ್ಶನ ನೋಡಿ ಬಂದು, ಖುಷಿಯಿಂದ ಸಿನಿಮಾ ಕುರಿತು ಬರಹವೊಂದನ್ನು ಬರೆದಿದ್ದೆ. ಅದೇ ಬರಹ ಪ್ರಶಸ್ತಿ ಬಂದ ಸಂತಸದಲ್ಲಿ- ಕಾರ್ತಿಕ್ )


ಗರ ಬಿಡಲು ಒಲ್ಲದ ಮಕ್ಕಳು, ಹಳ್ಳಿಯೇ ಮೂಲ ಬೇರು, ನೆಮ್ಮದಿಯ ಬೀಡು ಎಂದು ನಂಬಿಕೊಂಡ ತಂದೆ-ತಾಯಿ, ಅರ್ಥ ಕಳೆದುಕೊಳ್ಳುತ್ತಿರುವ ಸಂಬಂಧಗಳು, ಉರುಳಾಗುವ ನಂಬಿಕೆಗಳು. "ಕಾಡ ಬೆಳದಿಂಗಳು" ಸಿನಿಮಾ ನೋಡಿ ಹೊರಬಂದ ಮೇಲೂ ಕಾಡುವುದು ಹೀಗೆ.

ಹೆಸರಿಗೆ ತಕ್ಕಂತೆ ಅದು 'ಪುಟ್ಟ'ಳ್ಳಿ. ಅಲ್ಲಿ ಸದಾಶಿವ(ಲೋಕನಾಥ್) ಮೇಷ್ಟ್ರು. ಅವರಿಗೆ ಚಂದ್ರಶೇಖರಯ್ಯ(ದತ್ತಣ್ಣ) ಆತ್ಮೀಯ. ಇಬ್ಬರೂ ಮಕ್ಕಳಿಂದ ಮರುಗಿದವರೇ. ಅವರ ಹಿಡಿ ಪ್ರೀತಿಗೆ, ಸಾಂತ್ವನಕ್ಕೆ ಇಷ್ಟಪಟ್ಟವರು. ಆದರೆ ಅದ್ಯಾವುದೂ ಬಾಳ ಮುಸ್ಸಂಜೆಯಲ್ಲಿ ಬೆಳದಿಂಗಳಾಗುವುದಿಲ್ಲ. ಕಾಡುವುದು ಮಾತ್ರ ಒಂಟಿತನ. ಬಾಂಬ್ ಬ್ಲಾಸ್ಟ್ನಲ್ಲಿ ಮಗನನ್ನು ಕಳೆದುಕೊಳ್ಳುವ ಸದಾಶಿವಯ್ಯ, ಮಗನಿದ್ದರೂ ಸತ್ತಂತಿರುವ ಚಂದ್ರಶೇಖರಯ್ಯ ಇಬ್ಬರ ಪರಿಸ್ಥಿತಿಯೂ ಒಂದೇ.

ಪುಟ್ಟಳ್ಳಿಯ ಡಾಕ್ಯುಮೆಂಟರಿ ಮಾಡಲು ಬೆಂಗಳೂರಿನಿಂದ ಬರುವ ಟಿವಿ ರಿಪೋರ್ಟರ್ ಸುದೀಷ್ಣೆ(ಅನನ್ಯಾ ಕಾಸರವಳ್ಳಿ)ಯೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಹಳ್ಳಿ ಜನರೊಂದಿಗೆ ಬೆರೆಯುತ್ತಾ ಆಕೆಯೆದುರು ಹಳ್ಳಿಯ ಸಮಸ್ಯೆಗಳ ವಿಶ್ವರೂಪ ತೆರೆದುಕೊಳ್ಳುತ್ತದೆ. ಇಲ್ಲಿ ಬಹಳ ಮುಖ್ಯವಾಗಿ ಚರ್ಚಿತವಾಗಿರುವುದು ಸುದ್ದಿಯ ನೈಜತೆಯನ್ನು ತಮಗೆ ಬೇಕಾದಂತೆ ತಿರುಚುವ ಇವತ್ತಿನ ಟಿವಿ ಮಾಧ್ಯಮಗಳ ಎಡಬಿಡಂಗಿತನ. ತನ್ನ ಸ್ವಂತಿಕೆಗೆ ಅಂಟಿಕೊಳ್ಳಬೇಕೋ ಅಥವಾ ಟಿವಿ ಆಫೀಸಿನ ಮರ್ಜಿಗೆ ಬಲಿ ಬೀಳಬೇಕೋ ಎಂದು ಒದ್ದಾಡುವ ಸುದೀಷ್ಣೆಯ ತಾಕಲಾಟ ಇವತ್ತಿನ ಮಾಧ್ಯಮ ಮಂದಿಯ ನಾಡಿಮಿಡಿತ ಹಿಡಿವ ಹಂಬಲ. ನಾವು ಹೇಳಿದ್ದೇ ಸತ್ಯ ಎಂದು ಡಂಗುರ ಹೊಡೆವ ಟಿವಿ ಚಾನೆಲ್ಗಳ ಉದ್ಧಟತನ ಚಿತ್ರದಲ್ಲಿ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ಜಾಗತೀಕರಣದ ಈ ಕಾಲಘಟ್ಟದಲ್ಲಿ ಹಳ್ಳಿ, ನಗರಗಳ ನಡುವೆ ಹೆಚ್ಚುತ್ತಿರುವ ಅಂತರ, ಅದಕ್ಕೆ ಬಲಿಯಾಗುವ ಜನಾಂಗದ ಕಥೆಯನ್ನು "ಕಾಡ ಬೆಳದಿಂಗಳು" ಪ್ರಸ್ತುತಪಡಿಸುವ ರೀತಿ ಅನನ್ಯ. ಸಂಬಂಧಗಳಿಗಿಂತ ಸ್ವಾರ್ಥ ಮುಖ್ಯ ಹಾಗೂ ಅನಿವಾರ್ಯವಾಗುವುದು ಇಡೀ ಚಿತ್ರದಲ್ಲಿ ಕಂಡುಬರುವ ಅಂಶ.ಇಂತಹದೊಂದು ಸೂಕ್ಷ್ಮ ಕಥೆ ಬರೆದವರು ಪತ್ರಕರ್ತ ಜೋಗಿ. ಅಂಕಣವೊಂದರಲ್ಲಿ ಪ್ರಕಟವಾಗಿದ್ದ ಅವರ "ಚಂದ್ರಹಾಸ,32" ಕಥೆಯ ಎಳೆಯನ್ನು ಚಿತ್ರಕ್ಕೆ ಬಳಸಲಾಗಿದೆ. ಚಿತ್ರಕಥೆ ಮತ್ತು ಸಂಭಾಷಣೆಗೆ ಜೋಗಿ ಜೊತೆ ಪತ್ರಕರ್ತ ಉದಯ ಮರಕಿಣಿ ಸೇರಿಕೊಂಡಿದ್ದಾರೆ. ಇಡೀ ಚಿತ್ರವನ್ನು ಎತ್ತಿ ಹಿಡಿಯುವುದೇ ಈ ಮೂರು ಅಂಶಗಳು. ಅದರಲ್ಲೂ ಬಿಗಿ ಚಿತ್ರಕಥೆ ಸಿನಿಮಾಕ್ಕೊಂದು ಓಘವನ್ನು ನೀಡುತ್ತದೆ. ಸದಾಶಿವಯ್ಯ ಮಗ ಸತ್ತ ಸಂದರ್ಭದಲ್ಲಿ ಮಣ್ಣು ಕಿತ್ತು ಹೋಗಿರುವ ಬೇರನ್ನು ದಿಟ್ಟಿಸುವುದು, ಸುದೀಷ್ಣೆ ಕೆಲಸ ಬಿಡುತ್ತೇನೆ ಎನ್ನುವಾಗ ಜೋರಾಗಿ ಬೀಸುವ ಗಾಳಿ ಇಂತಹ ಅನೇಕ ಸಾಂಕೇತಿಕ ಸೂಕ್ಷ್ಮಗಳು ಚಿತ್ರಕಥೆಯಲ್ಲಿವೆ. "ಅವ್ರ ಪಾಲಿಗೆ ಹಳ್ಳಿ ಸತ್ತಿದೆ. ಹಳ್ಳಿ ಪಾಲಿಗೆ ಅವ್ರು ಸತ್ತಿದ್ದಾರೆ", "ಹುಲಿ ಇಲ್ಲ. ಆದ್ರೂ ಹೊರಕ್ಕೆ ಹೋಗೋದಿಕ್ಕೆ ಆಗೋದಿಲ್ಲ" ಮುಂತಾದ ಅಪೂರ್ವ ಸಂವೇದನಾಶೀಲ ಸಾಲುಗಳು ಚಿತ್ರಕ್ಕೆ ಪ್ಲಸ್ಪಾಯಿಂಟ್. ಜಾಗತೀಕರಣದಿಂದಾಗಿ ಹಳ್ಳಿಗಳ ಸ್ಥಿತ್ಯಂತರದ ನಡುವೆ ಆಶಾವಾದದ ಬದುಕು ಇನ್ನೂ ಜೀವಂತವಾಗಿರುವುದು ಪಾತ್ರಗಳ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಆದರೆ ಸಂಭಾಷಣೆಗಳಲ್ಲಿ ಹಳ್ಳಿಯ ಭಾಷಾ ಸೊಗಡಿನ ಕೊರತೆ ಎದ್ದು ಕಾಣುತ್ತದೆ. ಇದು ಸಂಭಾಷಣೆಕಾರರಿಗೆ ತಟ್ಟಿದ ಜಾಗತೀಕರಣದ ಪ್ರಭಾವವೇನೋ!

ಎಚ್.ಎಂ.ರಾಮಚಂದ್ರ ಸಿಕ್ಕ ಬೆಳಕಲ್ಲೇ ಮೋಡಿ ಮಾಡಿದ್ದಾರೆ. ಚಿತ್ರದ ಪ್ರತಿ ಫ್ರೇಮನ್ನು ಪ್ರೀತಿಸಲು ಸಾಧ್ಯವಾದರೆ ಅದಕ್ಕೆ ಅವರ ಕ್ಯಾಮರಾ ಕಣ್ಣು ಕಾರಣ. ಕಾಡ ಬೆಳದಿಂಗಳಿಗೆ ನಿಜವಾದ 'ಅಮಾವಾಸ್ಯೆ' ರಾಜೇಶ್ ರಾಮನಾಥ್!! ಅವರ ಹಿನ್ನೆಲೆ ಸಂಗೀತವನ್ನು ಮೊದಲ 20 ನಿಮಿಷ ಸಹಿಸಿಕೊಳ್ಳಬೇಕಷ್ಟೇ. ನಂತರದ್ದು ಸರಿ-ಸುಮಾರು. ಕೆಲವೊಂದು ಸನ್ನಿವೇಶಗಳಲ್ಲಿ ಮೌನ ಮಾತಾಗಬೇಕಿತ್ತು. ಆದರೆ ಹಿನ್ನೆಲೆ ಸಂಗೀತ ಅದಕ್ಕೆ ಅವಕಾಶವನ್ನೇ ಕೊಡುವುದಿಲ್ಲ. ಕೆಲವು ಫ್ರೇಮುಗಳು ರಾಮನಾಥ್ ಸಂಗೀತದಲ್ಲಿ ಮರುಗುತ್ತವೆ. ಕೊರಗುವ ಸರದಿ ಪ್ರೇಕ್ಷಕನದ್ದು! ಇಡೀ ಚಿತ್ರದಲ್ಲಿ ಗಮನ ಸೆಳೆಯುವುದು ದೃಶ್ಯ ಜೋಡಣೆ ಮತ್ತು ನಿರೂಪಣೆ. ಕಮರ್ಶಿಯಲ್ ಸಿನಿಮಾಗಳ ನಿರೂಪಣಾ ವೇಗ ಸ್ವಲ್ಪ ಮಟ್ಟಿಗೆ ಎದ್ದು ಕಾಣುತ್ತದೆ. ಅನಿಲ್ ನಾಯ್ಡು ಸಂಕಲನ ಅದಕ್ಕೆ ತಕ್ಕಮಟ್ಟಿಗೆ ಸಹಕರಿಸಿದೆ.

ನಟನೆಯಲ್ಲಿ ಗೆಲ್ಲುವುದು ದತ್ತಣ್ಣ ಹಾಗೂ ಲೋಕನಾಥ್. ಇಬ್ಬರದ್ದೂ ಪೈಪೋಟಿಯ ಅಭಿನಯ. ಸತ್ತ ಕಪ್ಪೆಯನ್ನು ತದೇಕಚಿತ್ತದಿಂದ ದಿಟ್ಟಿಸುತ್ತಾ ಕಣ್ಣಾಲಿಗಳಲ್ಲಿ ವಿಶಾದವನ್ನು ಕರಗಿಸುವ ಲೋಕನಾಥ್ಗೆ ಲೋಕನಾಥೇ ಸರಿಸಾಟಿ. ಇವರಿಬ್ಬರ ನಡುವೆ ಅನನ್ಯಾ ಕಾಸರವಳ್ಳಿ ಪೇಲವ. ನಟನೆಯ ಲೋಪಗಳನ್ನು ಆಕೆಯ ಬೊಗಸೆ ಕಣ್ಣುಗಳು ಬ್ಯಾಲೆನ್ಸ್ ಮಾಡುತ್ತವೆ! ಲಿಂಗದೇವರು ನಿರ್ದೇಶನ ಹಳಿ ತಪ್ಪಿದ ರೈಲಿನಂತೆ ಅಲ್ಲಲ್ಲಿ ಹಿಡಿತ ಕಳೆದುಕೊಂಡಿದೆ. ಕೆಲವೆಡೆ ಅವಸರ ಎದ್ದು ಕಾಣುತ್ತದೆ. ಟಿವಿ ರಿಪೋರ್ಟರೇ ಟೀಂ ಲೀಡರ್, ಕ್ಯಾಮರಾಮೆನ್ ಲೆಕ್ಕಕ್ಕಿಲ್ಲ ಅಂತ ನಿರ್ದೇಶಕರಿಗೆ ಯಾಕನ್ನಿಸಿತೋ ದೇವರೇ ಬಲ್ಲ. ಚಿತ್ರದಲ್ಲಿ ಕ್ಯಾಮರಾಮೆನ್ಗೆ ಕೂಡಿಸಿ, ಕಳೆದು ಅವಕಾಶ ಕೊಟ್ಟಿದ್ದಾರೆ ಲಿಂಗದೇವರು. ಕೆಲವು ಸನ್ನಿವೇಶಗಳಲ್ಲಿ ಮುಂದಿನ ಡೈಲಾಗ್ ಏನು ಅನ್ನೋದು ಪ್ರೇಕ್ಷಕನಿಗೇ ಗೊತ್ತಾಗಿಬಿಡುತ್ತದೆ. ಉದಾಹರಣೆಗೆ; ಹಳ್ಳಿ ಹುಡುಗನೊಬ್ಬ ಪೇಟೆಗೆ ಹೋಗಲು ಬಸ್ಸು ಹತ್ತುವುದು. ಆ ಸಂದರ್ಭದಲ್ಲಿ ಸುದೀಷ್ಣೆ ಮಾತಾಡದಿದ್ದರೇನೇ ಒಳ್ಳೆಯದಿತ್ತು. ಲಿಂಗದೇವರು ಧಾರಾವಾಹಿ ನಿರ್ದೇಶನದ ಹ್ಯಾಂಗೋವರ್ನಿಂದ ಇನ್ನೂ ಹೊರಬಂದಿಲ್ಲ ಎನ್ನುವುದಂತೂ ಕಠೋರ ಸತ್ಯ. ಆದರೂ ತಮಗಿರುವ ಸೀಮಿತ ಅವಕಾಶದಲ್ಲೇ ಕಥೆಯನ್ನು ಸತ್ವಶಾಲಿಯಾಗಿ ಹೇಳಲು ಪ್ರಯತ್ನಪಟ್ಟಿದ್ದಾರೆ. ಆಯ್ದುಕೊಂಡ ಬಸರೀಕಟ್ಟೆ ಪಕ್ಕದ ಲೊಕೇಶನ್ಗಳು ಸಹ ಕಥೆಗೆ ಬೆನ್ನೆಲುಬು. ಕ್ಲೈಮ್ಯಾಕ್ಸ್ ಪ್ರೇಕ್ಷಕ ಊಹಿಸುವುದಕ್ಕಿಂತ ಮೊದಲೇ ಬಂದು ಅಚ್ಚರಿ ಹುಟ್ಟಿಸುತ್ತದೆ. ಇಷ್ಟವಾಗುತ್ತದೆ ಕೂಡಾ. ನಕ್ಸಲಿಸಂ ಸಮಸ್ಯೆಯೂ ಚಿತ್ರದಲ್ಲಿ ಬಂದು ಹೋಗುತ್ತದೆ. ಅಂದ ಹಾಗೆ ಸಿನಿಮಾ ನಿರ್ಮಿಸಿರುವುದು 'ಬೆಂಗಳೂರು ಕಂಪೆನಿ'.ಸಿನಿಮಾ ಮುಗಿದ ನಂತರವೂ ನಮ್ಮೊಳಗೆ ಬೆಳೆಯುತ್ತಾ, ಕಾಡುವ ದೃಶ್ಯವೆಂದರೆ ಸುದೀಷ್ಣೆ ಕೊನೆಯಲ್ಲಿ ಬೆಟ್ಟದ ಮೇಲಿಂದ ಮೊಬೈಲ್ ಎಸೆಯುವುದು. ಜೊತೆಗೆ ಆ ಎಸೆತ ಹುಟ್ಟುಹಾಕುವ ಪ್ರಶ್ನೆಗಳು ಸಹ ಹಲವು. ಆ ಎಸೆತ ಜಾಗತೀಕರಣ ಹುಟ್ಟಿಸಿದ ನಿರ್ಲಿಪ್ತತೆಯ ಸಂಕೇತವಾ? ನಂಬಿಕೊಂಡ ನಂಬಿಕೆಗಳು ಕುಸಿದಾಗ ಅದರಿಂದ ಹೊರಬಂದು ನಿರುಮ್ಮಳವಾಗಿ ಸ್ವತಂತ್ರಗೊಳ್ಳುವ ತವಕವಾ? ಪರಿಸ್ಥಿತಿಯ ಒತ್ತಡಕ್ಕೆ ಜೈ ಎನ್ನದೆ ತನ್ನತನವನ್ನು ಹುಡುಕಿಕೊಂಡು ಹೊರಟವಳ ಹಾದಿಯಾ? ತನ್ನ ನಿತ್ಯ ನೈಮಿತ್ತಿಕಗಳ ಹೊರತಾಗಿ ತನಗಿರುವ ನೈಜ ಬದುಕು ಬೇರೆಯೇ ಎನ್ನುವ ಸ್ಪಷ್ಟನೆ ಆಕೆಗೆ ಸಿಕ್ಕಿತಾ? ಪ್ರತೀ ಬದಲಾವಣೆ ಗಾಳಿಯೂ ಇದೇ ರೀತಿ ಇರುತ್ತದೆಯಾ? ಜಾಗತೀಕರಣದ ಗೊಂದಲದ ಗೂಡಲ್ಲಿ ಸಿಕ್ಕಿ ಹಾಕಿಕೊಂಡ ನಮ್ಮ ಗೊಂದಲಗಳು ಇವೇ ಇರಬಹುದೇ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹುಟ್ಟಿಸುತ್ತಾ ಗೊಂದಲದ ಗೂಡು ನಮ್ಮಲ್ಲಿ ಉಳಿಯುತ್ತದೆ, ಬೆಳೆಯುತ್ತದೆ.

ಬೆಳದಿಂಗಳ ತಂಪು ಕಾಡುವುದು ಇದೇ ಕಾರಣಕ್ಕೆ!


ಚಿತ್ರ ಕೃಪೆ-ಜೋಗಿ ಮನೆ

ನಡೆದದ್ದು ಇಷ್ಟೇ

ಅದು ನಡೆದು
ಎಷ್ಟು ದಿನಗಳಾಯಿತೋ
ವರ್ಷಗಳಾಯಿತೋ


ಕೋಣೆ ಒಳಗೆ ನಾನಿದ್ದೆ
ಕತ್ತಲು ಚಾಚಿತ್ತು
ಯಾರೋ ಗೋಡೆಯಲ್ಲಿದ್ದ
ಕಿಟಕಿ ಗಾತ್ರದ ಬಿರುಕು
ಮುಚ್ಚುತ್ತಿದ್ದರು


ನಾನು ದಮ್ಮಯ್ಯಗುಡ್ಡೆ ಬಿದ್ದೆ
ಕೇಳಿಸಿರಬೇಕು ಅವರಿಗೆ...
ಆದರೂ ಅವರ್ಯಾರೂ
ಕಾಣುತ್ತಿರಲಿಲ್ಲ ನನಗೆ
ಕೇಳುತ್ತಿದ್ದದ್ದು ತಾಪಿಯ

ಕರ್ಕಶ ಶಬ್ದ, ಸಿಮೆಂಟಿನ ಅಮಲು
ಏರುತ್ತಿದ್ದ ಇಟ್ಟಿಗೆಗಳ
ಸಾಲು ಮೆರವಣಿಗೆ
ಅವರೆಲ್ಲಾ ಬೆಳಕಿನಲ್ಲಿದ್ದರು


ಮೊದ ಮೊದಲೆಲ್ಲಾ ಕಿಟಕಿ ಕಿಂಡಿ
ಮುಚ್ಚುತ್ತಾರೆ ಅಂದುಕೊಂಡಿದ್ದೆ
ದಿನಗಳು ಉರುಳಿದರೂ
ಕೆಲಸ ನಿಲ್ಲಲಿಲ್ಲ
ಕೊನೆ ಕೊನೆಗೆ ಹೊರಗೂ
ಕತ್ತಲಾಗುತ್ತಾ ಬಂತು


ನಡೆದದ್ದು ಇಷ್ಟೇ

ಶುಕ್ರವಾರ, ಜೂನ್ 6, 2008

ನೀರವ ರಾತ್ರಿಯಲ್ಲೊಂದು 'ಅಲೆ'ದಾಟ(ಒಂದು ಲಹರಿ)

ಯಾವ ದುಗುಡಗಳು ಬೇಡ. ನಿರುಮ್ಮಳವಾಗಬೇಕು. ಒಂಟಿಯಾಗಿ ನಡೆಯಬೇಕು, ಅಲೆಯಬೇಕು-ಬೆಳದಿಂಗಳಿಗೆ ಮುಖ ಮಾಡಿಕೊಂಡು. ಕಿರ ಕಿರ ಎನ್ನುವ ರಾತ್ರಿಯ ನಿಶಾಚಾರಿಕೆಯಲ್ಲೂ ಏನೋ ನಿಗೂಢ ಆನಂದವಿದೆ. ದಣಿದ ಜೀವಗಳಿಗೆ ನಿದ್ರೆಯಲ್ಲಿ ಬೆಳಕು ಕೊಡುತ್ತದಂತೆ ರಾತ್ರಿ. ಆದರೆ ನಾನು ಹುಡುಕ ಹೊರಟಿರುವುದು ನೀರವ ಮೌನವನ್ನ, ಗಾಢ ಕತ್ತಲೆಯನ್ನ. ಬದುಕಿನ ಎಲ್ಲಾ ಜಂಜಡಗಳನ್ನು ಕಳಚಿ ನಡೆಯಬೇಕು. ಬೆತ್ತಲೆಯಾಗಿ ಹಾದಿ ಸವೆಸಬೇಕು. ರಾತ್ರಿಗಳಲ್ಲಿ ದಾರಿ ಕಾಣುತ್ತದೋ ಇಲ್ಲವೋ ಆ ಮಾತು ಬೇರೆ.

ಎಲ್ಲದರಿಂದ ಮುಕ್ತಿ ಬೇಕು. ಇಷ್ಟಕ್ಕೂ ಎಲ್ಲವನ್ನೂ ನೇರವಾಗಿ ಹೇಳಿಬಿಡಬೇಕಾ?ಹಾಗಾದರೆ ಭಾವನೆಗಳಿಗೇನು ಅರ್ಥ? ಹೇಳಿಕೊಂಡು ನಿರಾಳವಾಗುವುದು ಸ್ವಾರ್ಥವಲ್ಲದೇ ಮತ್ತಿನ್ನೇನು? ಇದ್ಯಾವುದರ ಉಸಾಬರಿಯೇ ಬೇಡ. ಕಾಲುಗಳು ಸವೆಯುವವರೆಗೆ ನಡೆಯಬೇಕು. ಅದೂ ರಾತ್ರಿಗಳಲ್ಲಿ. ರೂಮು ಬಿಟ್ಟು, ಮನೆ ಬಿಟ್ಟು. ಡಾಂಬಾರು ರಸ್ತೆ, ಕೆಸರು ನೆಲ ಎಲ್ಲಾ ದಾಟಿ ನಡೆಯಬೇಕು. ಗಮ್ಯವಿಲ್ಲದೇ ನಡೆಯಬೇಕು. ಇಷ್ಟಕ್ಕೂ ಇಂಥ ಕಡೆಗೇ ಹೋಗಬೇಕು ಎಂಬ ಹಠ ನನಗೇಕೆ? ದಾರಿ ಎಲ್ಲಿಗೆ ಒಯ್ಯುತ್ತದೋ ಅಲ್ಲಿಗೆ ನಡೆದರೆ ಸಾಕು. ಯಾವುದೋ ತಿರುವು, ಮತ್ತ್ಯಾವುದೋ ಬೆಟ್ಟ ಸಿಗಬಹುದು. ನದಿ ಎದುರಾಗಬಹುದು. ಎಲ್ಲವನ್ನೂ ದಾಟಲು ನಡಿಗೆಗೆ ಮಾತ್ರ ಸಾಧ್ಯ. ಬದುಕ ಕಲಿಸುವುದೂ ಅದೇ, ನೋವ ಮರೆಸುವುದೂ ಅದೇ!

ಇದೆಲ್ಲಾ ಕತ್ತಲಲ್ಲೇ ಆಗಬೇಕು. ಬೆಳಕಿಗೆ ಕತ್ತಲಿಗಿರುವಷ್ಟು ನಿಯತ್ತಿಲ್ಲ. ಅದು ಮೌನಿಯೂ ಅಲ್ಲ. ಮೌನಿಯನ್ನು ಕಂಡರೆ ಆಗುವುದೂ ಇಲ್ಲ. ಆದರೆ ಕತ್ತಲು ಹಾಗಲ್ಲ. ಅರಳಲು ಕಲಿಸುತ್ತದೆ, ಮರಳಲು ಕಲಿಸುತ್ತದೆ. ಕತ್ತಲು ಕೊಡುವ ಬದ್ಧತೆಯನ್ನು ಬೆಳಕು ಕೊಡುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕತ್ತಲಿಗೆ ನನ್ನ ಪರಿಚಯವೇ ಇಲ್ಲ. ಅಲ್ಲಿ ಕಳೆದು ಹೋದರೂ, ಉಳಿದು ಹೋದರೂ ಚಿಂತೆಯಿಲ್ಲ. ನನ್ನೊಳಗಿನ ಕತ್ತಲು ಕೂಡಾ ಹೊರಗಿನ ಕತ್ತಲೊಂದಿಗೆ ಕೂಡಿಕೊಂಡರೆ ಸಾಕು. ಮನಸ್ಸು ಕಪಟಿಯಾಗುವುದಿಲ್ಲ.ಇಂಥದ್ದೇ ಬೇಕೆಂದು ಬೇಡುವುದಿಲ್ಲ! ಮಧ್ಯದಲ್ಲೆಲ್ಲೋ ಎಡವಿದರೆ ನಗುವುದಿಲ್ಲ. ಮುಂದಿನ ಹೆಜ್ಜೆಗಳಿಗೆ ಭಯ, ಭರವಸೆ ಎರಡನ್ನೂ ಕೊಡುತ್ತದೆ. ಹಿಂದೆ ತಿರುಗಿದರೆ ಕತ್ತಲು ಮಾತ್ರ ಕಾಣುತ್ತದೆ. ಬೆಳಕಿಗದು ಸಾಧ್ಯವಿಲ್ಲ.

ಇಷ್ಟಕ್ಕೂ ನಡೆಯುವುದು ಗೊತ್ತಿದ್ದರೆ ಸಾಕು. ಬುಡ್ಡಿ ಬೆಳಕು ಬೇಕಿಲ್ಲ. ನಡೆಯುತ್ತಾ ನಡೆಯುತ್ತಾ ಬೆಳಗಾದರೆ ಅಲ್ಲೇ ಕಲ್ಲಿನಂತೆ ಸ್ಥಂಭಿಸಿದರಾಯಿತು. ಸುತ್ತಮುತ್ತಲಿನವರೆಲ್ಲಾ ಓಡಾಡಲಿ, ಕಿರುಚಲಿ, ಡಾಲರುಗಟ್ಟಲೆ ಸಂಪಾದಿಸಲಿ, ನೇಜಿ ನಡಲಿ, ಟ್ರಾಫಿಕ್ಕು ಜಾಮಿನಲ್ಲಿ ಬೆವರು ಒರೆಸಿಕೊಳ್ಳಲಿ, ಪ್ರೀತಿಸಲಿ-ಹೇಳಲಾಗದೇ ಒದ್ದಾಡಲಿ. ನನಗೆ ಮತ್ತೆ ಕತ್ತಲಾಗುವುದು ಮಾತ್ರ ಮುಖ್ಯ. ದಿನಚರಿ ಮತ್ತೆ ಹುಟ್ಟಿಕೊಳ್ಳುವುದು ರಾತ್ರಿಯ ಮೊದಲ ಸೆಕೆಂಡಿನಲ್ಲೇ. ನಡೆಯಲು ಶುರುಮಾಡಲು ಅಷ್ಟು ಸಾಕು. ಜೊತೆಗೆ ಯಾರು ಬಂದರೇನು?ಬರದೇ ಕೈ ಚೆಲ್ಲಿ ಕುಳಿತರೇನು?

ನನಗೆ ಗೊತ್ತಿರುವುದು ಒಂದೇ-ಒಂಟಿಯಾಗಿ ಹೆಜ್ಜೆ ಹಾಕುವುದು ಮಾತ್ರ!

ನಿತ್ಯಮುತ್ತೈದೆ

ನಾನು ನಿತ್ಯಮುತ್ತೈದೆ
ಚಿರಯೌವ್ವನೆ, ಬತ್ತದ ದೇವಯಾನಿ
ಸೊಂಟದ ಬದುವಿನಲ್ಲಿ
ಉದ್ದುದ್ದ ನೆರಿಗೆಗಳು
ಸರಸರನೆ ಸರಿಯೋ ಸೆರಗು
ಎಲ್ಲರಿಗೂ ಮಾದಕ ತಾಜಮಹಲ್ ನಾನಂತೆ


ಬಿಳಿ ಬಣ್ಣದ ಸೀರೆಗೆ
ಮನಸೋತು ಬಣ್ಣ ಹಚ್ಚಲು
ಓಡಿಹೋದ ಆ ಅಪ್ಪ
ಲೆಫ್ಟು, ರೈಟು ಸಿದ್ಧಾಂತಗಳೆನ್ನುತ್ತಾ
ಕರಗಿ ಹೋದ ಅಣ್ಣ
ಇಂತಹ ಫುಟ್ಪಾತಿನ ವಂಚಕರ
ನಡುವೆ ನಾನು, ತಾಯಿ ಇಬ್ಬರೇ ಉಳಿದದ್ದು ಕೊನೆಗೆ


ಬದುಕಿದ್ದಷ್ಟೂ ದಿನ ಆಕೆ ಸಲಹಿದಳು
ಸಂತಾಪದ ಹೆಸರಲ್ಲಿ ದೇಹ ತುಂಬಾ
ಮುತ್ತಿಕೊಂಡವು ಬೀದಿ ನಾಯಿಗಳು
ಅರೆಬೆಂದ ರೊಟ್ಟಿಯೆಂದರೆ
ಚಪ್ಪರಿಸಿ ತಿನ್ನುವ ಆಸೆ ಅವಕ್ಕೆ


ಈಗ ಉಳಿದಿರುವುದು
ಮಾಸಲು ಬಣ್ಣದ ಕೋಣೆ,
ಕಿರ ಕಿರ ಶಬ್ದದ ಬೀಟೆ ಮಂಚ
ಹಸಿರು ದೀಪ, ನಿಟ್ಟುಸಿರು ಮಾತ್ರ
ಕತ್ತಲೆಯೊಳಗೆ ಯಾರೋ ಬರುತ್ತಾನೆ
ಸರಸ, ಸಲ್ಲಾಪ, ಪ್ರೀತಿಯ ಕಚಗುಳಿ
ಆತನಿಗೆ ಬೇಡ
ದೇಹ ನೀಡಬೇಕು ಅಷ್ಟೇ
ಭಾವನೆಗಳೆಲ್ಲಾ ಬೆತ್ತಲೆ
ಉರುಳಾಡುತ್ತಾನೆ, ಹೊರಳಾಡುತ್ತಾನೆ
ಖುಷಿಯಾದರೆ ನಾಲ್ಕೈದು ನೋಟು ಎಸೆಯುತ್ತಾನೆ
"ವಿಶ್ವದ ಎಂಟನೇ ಅದ್ಭುತವಂತೆ" ಆತನಿಗೆ ನಾನು
ಎದ್ದಾಗ ಬೆನ್ನೆಲ್ಲಾ ಹುರಿ


ರೌರವ ನರಕದಲ್ಲಿದ್ದರೂ
ಮತ್ತೆ ಮುಡಿಯಬೇಕು ಮಲ್ಲಿಗೆ
ಆಗ ಬರುತ್ತಾನೆ ಮತ್ತೊಬ್ಬ
ಕಣ್ಣ ತುಂಬಾ ಮಾದಕತೆ ತುಂಬಬೇಕು
ಆತನಿಗೂ ನಾನು "ವಿಶ್ವದ ಎಂಟನೇ ಅದ್ಭುತ"!


ಎಲ್ಲರೂ ಬರುತ್ತಾರೆ
ಆಗೊಮ್ಮೆ-ಈಗೊಮ್ಮೆ ನನ್ನಲ್ಲಿಗೆ
ಬಂಧಗಳು ಸ್ವರ್ಗದಲ್ಲಿ ಬೆಸೆಯುತ್ತವೆ
ಅಂತಾರೆ ಹಿರಿಯರು
ಆದರೂ ನನ್ನವನೆನ್ನುವವನು
ಯಾಕೆ ಬರುವುದಿಲ್ಲ, ಒಮ್ಮೆಯೂ.....?


(ಬೆಂಗಳೂರಿನ ಕ್ರೈಸ್ಟ್ ಕಾಲೇಜು 2006-07 ಸಾಲಿನಲ್ಲಿ ನಡೆಸಿದ ದ.ರಾ.ಬೇಂದ್ರೆ ಸ್ಮ್ರತಿ ಅಂತರ್ ಕಾಲೇಜು ಕವನ ಸ್ಪರ್ಧೆಯಲ್ಲಿ ಬಹುಮಾನಿತ ಕವನ)

ಶುಕ್ರವಾರ, ಏಪ್ರಿಲ್ 4, 2008

ಸತ್ತು ಅಭ್ಯಾಸವಾದವರೊಂದಿಗೆ ಸಂಭಾಷಣೆ

ಸತ್ತು ಅಭ್ಯಾಸ

ಇದ್ದವರು ಯಾರಾದರೂ

ಇದ್ದರೆ ಕರೆಯಿರಿ...

ನನಗೆ ಅವರ

ಜೊತೆ ಮಾತನಾಡಬೇಕು
ಕೇಳಲು ಪ್ರಶ್ನೆಗಳಿವೆ

ಹಲವು

ಹೇಗೆ ಅಭ್ಯಾಸ
ಮಾಡಿಕೊಂಡಿರಿ ಸಾಯಲು

ಸತ್ತು ಸತ್ತು

ಸಾವಿಗೂ ಅಭ್ಯಾಸವಾಗಿದೆಯಾ

ನೀವು ಅನಿವಾರ್ಯವಾಗಿ

ಸತ್ತಿರೋ

ಅನುಭವ ಗಳಿಸಲು

ಸತ್ತಿರೋ

ಅಥವಾ ಅನುಭವಿಸಿ

ಸತ್ತಿರೋ

ಸಾವಿನಲ್ಲಿ ಎಷ್ಟು ವಿಧ

ಯಾವುದು ಪ್ರಮುಖ

ಯಾವುದು ಗೌಣ

ಅದೆಲ್ಲಾ 'ಸಾಯಲಿ' ಬಿಡಿ

ಹೇಗೆ ಸತ್ತರೆ ಒಳ್ಳೆಯದು

ಅನ್ನೋದನ್ನ ಮೊದಲು

ನನಗೆ ತಿಳಿಸಿ!

ಭಾನುವಾರ, ಮಾರ್ಚ್ 9, 2008

ಬೊಗಸೆ ಕಂಗಳಿಗೊಂದು ಬಿನ್ನಹ

ನನಗೆ
ಉತ್ತರಗಳು ಬೇಡ
ಪ್ರಶ್ನೆಗಳಲ್ಲೇ
ಬದುಕಿ ಗೊತ್ತಿದೆಪ್ರತೀ ಪ್ರಶ್ನೆಯು
ಇರಿದಾಗ
ಕುಟುಕಿದಾಗ
ನರಳಿ ಗೊತ್ತಿದೆಬೀದಿ ದೀಪದ
ಬೆಳಕಲ್ಲಿ
ಪ್ರಶ್ನೆಗಳಲ್ಲೇ
ಮನೆ ಕಟ್ಟಿ
ಅಭ್ಯಾಸವಾಗಿದೆಪ್ರತೀ ಮುಂಜಾನೆ
ನೆಲ ಸಾರಿಸಿ
ರಂಗವಲ್ಲಿ ಚುಕ್ಕಿ ಇಡುತ್ತಿ
ಎಂದು ಹಂಬಲಿಸಿ
ಮುಸ್ಸಂಜೆ ಹತ್ತಿರಾಗುತ್ತಿದೆ
ಮತ್ತೇಕೆ ಬೇಕು ಹೇಳು
ನಿನ್ನ ಉತ್ತರದ ಚಿ()ತೆ?ಪ್ರಶ್ನೆಗಳ
ಶೂನ್ಯದಲ್ಲಿ
ವೃಂದಾವನ ಕಟ್ಟಲು
ಗೊತ್ತಿರುವ ನನಗೆ
ನೀನಿಲ್ಲದೆ ಬದುಕಬಹುದು
ಆದರೆ ನಿನ್ನ ಪ್ರೀತಿ
ಹುಟ್ಟಿಸಿದ ಪ್ರಶ್ನೆ ಇಲ್ಲದೆ
ಬದುಕಲು ಗೊತ್ತಿಲ್ಲ!
(ಬೆಂಗಳೂರಿನಕ್ರೈಸ್ಟ್ ಕಾಲೇಜು ನಡೆಸಿದ 2007-08ನೇ ಸಾಲಿನ ಡಾ..ರಾ.ಬೇಂದ್ರೆ ಸ್ಮೃತಿ ಅಂತರ್ಕಾಲೇಜು ಕವನ ಸ್ಪರ್ಧೆಯಲ್ಲಿ ಬಹುಮಾನಿತ ಕವನ)

ಸೋಮವಾರ, ಮಾರ್ಚ್ 3, 2008

'ಬೆಂದ'ಕಾಳೂರಿನ ಸ್ವಗತ

ಮಾತು

ಕಡಿಮೆ ಮಾಡು

ಕಂಪ್ಯೂಟರ್ರು ಕುಟ್ಟುತ್ತಾ


ಕುಟ್ಟುತ್ತಾ ವೈರಸ್ಸು

ಶಾಪಿಂಗು ಮಾಲುಗಳಲಿ

ಬಿಕರಿ ಎಂಟಾಣೆಗೆ

ತಪ್ಪಿದರೆ ಒಂದೂವರೆಗೆ

ಫುಟ್ಪಾತು ರಾತ್ರಿಗಳಲಿ


ನಗುವ ಎದೆ ತೆರೆದ ಸುಂದ್ರಿ

ಟಾಕೀಸಿನ ಮೂರಿ ಟಾಯ್ಲೆಟ್ಟು

ಮಾತು ಮಾತಿಗೂ ಚೌಕಾಸಿ'

ಆತನೊಬ್ಬ ಬಿಕ್ನಾಸಿ'

ಗೊಣಗುವ ಹಣ್ಣಿನ ಹುಡುಗಿ

ಇಲ್ಲ ಟು ಲೆಟ್ ಬೋರ್ಡ್

ಮನೆ ಮುಂದೆ ಮಾತ್ರ

'ನಾಯಿ ಇದೆ ಎಚ್ಚರಿಕೆ'!!

ಸಿಟಿ ಬಸ್ಸಲ್ಲಿ ಕಾಲು ತಾಕಿದ್ರೆ


ನಿನ್ನಮ್ಮನ್........ ಕಾಣಲ್ವಾ ಕಣ್ಣು

ಮುಂದಿನ ಸೀಟಲ್ಲಿ

ಹ್ಯಾರಿಪಾಟರ್ ಓದೋ ಕಾರ್ಮಲ್ ಪೆಣ್ಣು!!

ಟೈಮ್ಸ್ ನೋಡಿದರೆ

'ಸಿಟಿ ಬೆಳೆಯುತ್ತಿದೆ,

ನಾರಾಯಣ ಮೂರ್ತಿ ಗರಂ,

ಗೌಡ ಖತಂ,

ಭೂಲ್ ಭುಲಯ್ಯಾ- ನಾಟ್ ಎ ವರ್ತಿ

ಟು ವಾಚ್-ನಾನ್`ಸೆನ್ಸ್'!!

ಕಾರಲ್ಲಿ ಕೂತರೆ

ಎಫೆಮ್ಮು-ಸಖತ್ ಹಾಟ್ ಮಗಾ!

ಅದಕ್ಕೇ ಹೇಳಿದ್ದು


ಮಾತು ಕಡಿಮೆ ಮಾಡು

ಸೋಮವಾರ, ಫೆಬ್ರವರಿ 25, 2008

ಲೇಖಕನಿಗೆ ಒಬ್ಬ ಓದುಗ ಸಿಕ್ಕರೆ ಸಾಕು!!ಅದೊಂದು ಆತ್ಮೀಯ ಸಾಹಿತ್ಯ ಕಾರ್ಯಕ್ರಮ. ಸಾಮಾನ್ಯವಾಗಿ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಕಂಡುಬರುವ ಅಲಿಖಿತ ಘನಗಾಂಭೀರ್ಯ ಅಲ್ಲಿರಲಿಲ್ಲ. ಅಲ್ಲಿದ್ದದ್ದು ಗೆಳೆಯರಿಬ್ಬರ ನೆನಪಿನ ಬುತ್ತಿ, ಸಾಹಿತ್ಯದ ಓದಿನ ಬಗ್ಗೆ, ಬದಲಾದ ಯುವ ಜನಾಂಗದ ಬಗೆಗಿನ ಮಾತುಗಳು. ಸಂದರ್ಭ: ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ಅವರ "ಆಮೇಲೆ ಇವನು" ಕಥಾ ಸಂಕಲನ ಬಿಡುಗಡೆ ಸಮಾರಂಭ. ಏರ್ಪಾಡಾದದ್ದು ಪುತ್ತೂರಿನ ಅನುರಾಗ ವಠಾರದಲ್ಲಿ. ಈ ಸಂದರ್ಭದಲ್ಲಿ ಕಥೆಗಾರ,ಪತ್ರಕರ್ತ ಜೋಗಿ ಹಾಗೂ ನಾಗತಿಹಳ್ಳಿ ಆಡಿದ ಮಾತುಗಳು ಇವತ್ತಿನ ಸಾಹಿತ್ಯ ಓದಿನ ಕ್ರಿಯೆ-ಪ್ರಕ್ರಿಯೆಯ ವಾತಾವರಣದಲ್ಲಿ ಮಹತ್ವದ್ದು.
ಚಟಾಕಿ ಹಾರಿಸುತ್ತಾ ಜೋಗಿ ಮಾತನಾಡಿದ್ದು ಹೀಗೆ:
 • ಇವತ್ತಿನ ಲೇಖಕ ನಾನು ತುಂಬಾ ಜನರಿಗಾಗಿ ಬರೆಯುತ್ತೇನೆ ಎಂಬ ಭ್ರಮೆಯಲ್ಲಿರುವುದು ಬೇಡ. ತಾನು ಬರೆದದ್ದು ನಾಲ್ಕೋ ಐದು ಜನಕ್ಕೆ ತಲುಪಿದರೆ ಸಾಕು ಎಂದು ಆಶಿಸಿದರೆ ಒಳ್ಳೆಯದು. ಲೇಖಕನಿಗೆ ಒಬ್ಬ ಓದುಗ ಸಿಕ್ಕರೂ ಸಾಕು! ಆತ ತಾನು ಓದಿದ್ದನ್ನು ಇನ್ನೊಬ್ಬನಿಗೆ ಹೇಳಿದರೆ ಸಾಕು.

 • 3-4 ಪುಟದ ಚಿಕ್ಕ ಕಥೆಗಳನ್ನು ಬರೆಯುವುದು ಒಳ್ಳೆಯದು. 30-40 ಪುಟಗಳ ಕಥೆ ಬರೆದರೆ ಓದುವ ವ್ಯವಧಾನ ಇವತ್ತಿನ ಮಂದಿಗಿಲ್ಲ. ಜೊತೆಗೆ ಅಂತಹ ಕಥೆಗಳನ್ನು ಇವತ್ತು ಅರಗಿಸಿಕೊಳ್ಳಲೂ ಸಾಧ್ಯವಿಲ್ಲ.

 • ಸಾಹಿತ್ಯದ ಓದು ಬಾಯಿಂದ ಬಾಯಿಗೆ, ಗೆಳೆಯರ ಮೂಲಕ ಹಬ್ಬಬೇಕು. ನಾನು ಗೆಳೆಯ ಹೇಳಿದ ಮಾತನ್ನು ನಂಬುತ್ತೇನೆಯೇ ಹೊರತು ವಿಮರ್ಶಕನ ಮಾತನ್ನಲ್ಲ. ಕಥಾ ಜಗತ್ತಿನಲ್ಲಿ ವಿಮರ್ಶಕರೇ ಸೃಷ್ಟಿಸಿದ ಪಂಗಡಗಳಿವೆ. ಯಾವುದೇ ಪಂಥಕ್ಕೆ ಸೇರದೆ ಬರೆದವರಿಗೆ ಜಾಗವೇ ಇಲ್ಲವೇ ಎಂಬ ಪ್ರಶ್ನೆ ನನ್ನನ್ನು ಕಾಡಿದೆ. ಉದಾಹರಣೆಗೆ ನಾಗತಿಹಳ್ಳಿ ಅವರ ನೀರಿನ ಮಟ್ಟ, ಸ್ಖಲನ ಕಥೆಗಳು ಇಂತಹ ಯಾವುದೇ ಪಂಥಕ್ಕೆ ಸೇರದವು. ಇಂತಹ ಕಥೆಗಳನ್ನು ಯಾವ ಪಂಥಕ್ಕೆ ಸೇರಿಸುವುದು ಎಂದು ವಿಮರ್ಶಕರೇ ಹೆಚ್ಚಾಗಿ ತಬ್ಬಿಬ್ಬಾಗುತ್ತಾರೆ.

 • ಜಾಸ್ತಿ ಮಾತಾಡುವವರು ಕವಿತೆ ಬರೆಯಲ್ಲ ಎನ್ನುವ ನನ್ನ ನಂಬಿಕೆಯನ್ನು ಸುಳ್ಳು ಮಾಡಿದವರು ಇಬ್ಬರು: ಕುಂಟಿನಿ ಮತ್ತು ಕಾಯ್ಕಿಣಿ. ಅದನ್ನು ಸತ್ಯ ಮಾಡಿದವರು ಸುಮತೀಂದ್ರ ನಾಡಿಗರು!!

 • ತೇಜಸ್ವಿ ಆಗಾಗ ಹೇಳುತ್ತಿದ್ದರು- "ಇಲ್ಲ ಸಲ್ಲದ ತರಲೆಗಳಲ್ಲಿ ಸಿಕ್ಕಿಕೊಂಡಾಗಲೇ ನನಗೆ ಕಥೆ ಹುಟ್ಟೋದು"

 • ವಿದ್ಯಾರ್ಥಿಗಳಿಗೆ ಒಳ್ಳೆಯ ಮೇಷ್ಟ್ರುಗಳು ಸ್ಪೂರ್ತಿ ತುಂಬದೇ ಹೋದರೆ ಒಳ್ಳೆಯ ಸಾಹಿತ್ಯದ ಓದು ಸಾಧ್ಯವಿಲ್ಲ. ಕಿ.ರಂ.ನಾಗರಾಜ್, ಶಿವರುದ್ರಪ್ಪ ನಿವೃತ್ತರಾದರು. ಈಗ ಹೇಳಿಕೊಳ್ಳಲು ಒಳ್ಳೆಯ ಮೇಷ್ಟ್ರು ಅಂತ ಯಾರಿದ್ದಾರೆ?

 • ಇಂಗ್ಲೀಷ್ ಮೇಷ್ಟ್ರುಗಳಿಗೆ ನನ್ನದೊಂದು ಪ್ರಶ್ನೆ. ಭಾರತದ ಲೇಖಕರೇ ಇಂಗ್ಲೀಷ್ನಲ್ಲಿ ಸಾಕಷ್ಟು ಚೆನ್ನಾಗಿ ಬರೆದಿರುವಾಗ ಬೈರನ್, ಶೆಲ್ಲಿ, ಮೆಟಫಿಜಿಕಲ್ ಪೋಯಟ್ರಿ ಅಂತ್ಹೇಳಿ ಯಾಕೆ ಇಂಗ್ಲೀಷ್ ಸಾಹಿತ್ಯದ ವಿದ್ಯಾರ್ಥಿಗಳನ್ನ ಸಾಯಿಸ್ತೀರ? ನಿಜಿಂ ಇಜೈಕಲ್ ಸೊಗಸಾಗಿ ಬರೆದಿದ್ದಾರೆ. ಎ.ಕೆ.ರಾಮಾನುಜಂ ಕನ್ನಡದಿಂದ ಅನುವಾದಿಸಿದ ಕವನಗಳಿವೆ. ಇದನ್ನೆಲ್ಲಾ ಯಾಕೆ ಗಂಭೀರವಾಗಿ ಪರಿಗಣಿಸುವುದಿಲ್ಲ?

 • ಕುಂಟಿನಿಯ ಪುಸ್ತಕ "ಆಮೇಲೆ ಇವನು" ನೋಡಿ ಹಾಗಂದ್ರೆ ಏನು ಸಾರ್ ಅಂತ ಸಿನಿಮಾದವನೊಬ್ಬ ಕೇಳಿದ. ಆತನಿಗೆ ಹೇಗೆ ಅರ್ಥ ಮಾಡಿಸುವುದು ಅಂತ ಹೊಳೆಯಲಿಲ್ಲ. ಕೊನೆಗೆ ಖ್ಯಾತ ನಟನೊಬ್ಬನ ಮದುವೆ ಸನ್ನಿವೇಶ ಹೇಳಿದೆ. ಆಕೆಗೆ ಈ ಮೊದಲು ಮದ್ವೆ ಆಗಿತ್ತು. ಆದ್ದರಿಂದ ಆಕೆಗೆ ಆ ಖ್ಯಾತ ನಟ "ಆಮೇಲೆ ಇವನು" ಎಂದೆ. ಅವನಿಗೆ ಥಟ್ಟನೆ ಅರ್ಥವಾಯಿತು. "ಚೆನ್ನಾಗಿದೆ ಸಾರ್. ಇದೇ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡ್ಬಹುದಲ್ಲ ಸಾರ್" ಅಂದ!! (ಪುಸ್ತಕದ ಶೀರ್ಷಿಕೆ ಬಗ್ಗೆ ಮಾತನಾಡುತ್ತಾ ಹೇಳಿದ ಮಾತು).
ಇವತ್ತಿನ ಮಕ್ಕಳಿಗೆ ಆಕಾಶವೇ ಉಸಿರುಗಟ್ಟಿಸುತ್ತಿದೆ!


ಕುಂಟಿನಿ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾಗತಿಹಳ್ಳಿ ಯುವಕರ ಬಗ್ಗೆ ಅರ್ಥಪೂರ್ಣವಾಗಿ ಮಾತನಾಡಿದ್ದು ಹೀಗೆ:


 • ಸಣ್ಣ ಊರುಗಳಲ್ಲಿ alert ಆಗಿ ಇಡಲು ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳು ಬೇಕೇ ಬೇಕು. ಇಂತಹ ಕಾರ್ಯಕ್ರಮಗಳಿಂದ ನಿರಾಕಾರವಾಗಿ ಬೆಳೆಯಲು ಸಾಧ್ಯ. ಇವತ್ತಿನ ಮಕ್ಕಳ ಬಗ್ಗೆ ತೀರಾ ನಿರಾಶಾದಾಯಕವಾಗಿ ಆಲೋಚಿಸುವುದು ಬೇಡ. ಹೊಸ ತಲೆಮಾರಿನ ಹುಡುಗರ ಅನ್ವೇಷಣೆಗಳೇ ಬಹಳ ಇವೆ.

 • ನನ್ನ ಮಗಳು ಒಂದು ಸಾರಿ ನನ್ಹತ್ರ ಹೇಳಿದ್ದಳು-" sky is suffocating ". ನಮಗೆಲ್ಲಾ ನಮ್ಮ ಸುತ್ತಲಿನ ವಾತಾವರಣ ಉಸಿರುಗಟ್ಟಿಸುತ್ತಿತ್ತು. ಆದರೆ ಇವತ್ತಿನ ಮಕ್ಕಳಿಗೆ ಆಕಾಶವೇ ಉಸಿರುಗಟ್ಟಿಸುತ್ತಿದೆಯಂತೆ. ಆಕಾಶದ ಆಚೆಗೂ ಹೊಸದನ್ನು ಹುಡುಕುವ ಅವರದ್ದು ಕಲ್ಪನಾ ಚಾವ್ಲಾ ಜಾತಿ.

 • ನಾಲ್ಕೋ ಐದು ಸಾಲಿನ ಎಸ್ಎಂಎಸ್ಗಳಲ್ಲೇ ಇಂದು ಯುವ ಜನಾಂಗದ ಮಹಾಕಾವ್ಯಗಳು ವಿನಿಮಯ ಆಗುತ್ತಿದೆ. ಅವರ ಆ ವೇಗವನ್ನು ಉಪಯೋಗಿಸಿಕೊಂಡು ನಮ್ಮ ಸಾಂಸ್ಕೃತಿಕ- ಸಾಹಿತ್ಯಿಕ ವಿಚಾರಗಳನ್ನು ಉಳಿಸುವತ್ತ ಆಲೋಚಿಸಬೇಕು.

 • ಇವತ್ತಿನ ಮಕ್ಕಳ ವೇಗವನ್ನು ಕಂಡರೆ ಅಚ್ಚರಿಯಾಗುತ್ತದೆ. ಬುದ್ಧ ಹುಟ್ಟಿದಲ್ಲಿಂದಲೇ ಯಾಕೆ ಪ್ರಾರಂಭಿಸಬೇಕು? ನಾವು ಬುದ್ಧನ ಕೊನೆಯಿಂದಲೇ ಆರಂಭ ಮಾಡೋಣ ಎನ್ನುವ ಧಾಟಿ ಅವರದು. ಆದ್ದರಿಂದ ಆ ವೇಗದ ಸಮರ್ಪಕ ಬಳಕೆಯಾಗಬೇಕು ಅಷ್ಟೇ.