ಅಮೇರಿಕಾ ಅಧ್ಯಕ್ಷ ಟ್ರೂಮನ್ ಪೋಸ್ಟ್ಡ್ಯಾಂ ಗೋಷ್ಠಿಯಲ್ಲಿದ್ದ. ಜಪಾನಿಗೆ ಎಚ್ಚರಿಕೆ ನೀಡಲು ಮಿತ್ರ ರಾಷ್ಟ್ರಗಳು ಅಂದು ನಿರ್ಣಯ ಕೈಗೊಳ್ಳುವುದರಲ್ಲಿದ್ದವು. ಆದರೆ ಟ್ರೂಮನ್ಗೆ ನ್ಯೂ ಮೆಕ್ಸಿಕೋದ ಆಲ್ಮೋಗಾರ್ಡ್ನಲ್ಲಿ ನಡೆಯುತ್ತಿದ್ದ ಪರೀಕ್ಷೆಯ ಫಲಿತಾಂಶದ ಬಗ್ಗೆ ಕಾತರವಿತ್ತು. ಆಗ ಟ್ರೂಮನ್ ಕೈಗೊಂದು ಚೀಟಿ ಬಂತು. ಅದರಲ್ಲಿ ಸ್ಪಷ್ಟವಾಗಿ ಬರೆದಿತ್ತು-"It is a boy". ಅದರರ್ಥ ಇಷ್ಟೇ-ಪರೀಕ್ಷಾರ್ಥ ನಡೆಸಿದ ಅಣುಬಾಂಬಿನ ಸ್ಪೋಟ ಯಶಸ್ವಿ.
ಪೋಸ್ಟ್ಡ್ಯಾಂ ಗೋಷ್ಠಿಯನ್ನು ಜಪಾನಿನ ಪ್ರಧಾನಿ ಕಂಟಾಕೋ ಸುಜುಕಿ ನಿರ್ಲಕ್ಷಿಸಿ ಬಿಟ್ಟ. ಅಮೇರಿಕಾಕ್ಕೆ ಮಹಾಯುದ್ಧವನ್ನು ಹತ್ತಿಕ್ಕಲೇಬೇಕಾಗಿತ್ತು. ಅದಕ್ಕಾಗಿ ಅಗಸ್ಟ್ 6ರಂದು ಅಣು ಬಾಂಬ್ ಸ್ಪೋಟಕ್ಕೆ ಆಂಯ್ದುಕೊಂಡದ್ದು ಹಿರೋಷಿಮಾ ನಗರವನ್ನು.
ಎರಡೂವರೆ ಲಕ್ಷಕ್ಕೂ ಅಧಿಕ ನಾಗರೀಕರಿದ್ದ ಹಿರೋಷಿಮಾದಲ್ಲಿ ಮಿಲಿಟರಿ ಕೇಂದ್ರವಿತ್ತು. ಒಂದು ಲಕ್ಷಕ್ಕೂ ಅಧಿಕ ಸೈನಿಕರು ಅಲ್ಲಿದ್ದರು. ಜೊತೆಗೆ ಜಪಾನಿನ ಮದ್ದುಗುಂಡುಗಳ ದಾಸ್ತಾನು ಅಲ್ಲಿತ್ತು. ಇವೆಲ್ಲವನ್ನು ಗಮನಿಸಿಯೇ ಅಮೇರಿಕಾ 'ಲಿಟ್ಲ್ ಬಾಯ್' ಸ್ಪೋಟಕ್ಕೆ ಹಿರೋಷಿಮಾವನ್ನು ಆಯ್ದುಕೊಂಡದ್ದು.
ವಿಷಘಳಿಗೆ
ಅವತ್ತು ಅಗಸ್ಟ್ 6ರ ಬೆಳಗು.
ಹಿರೋಷಿಮಾ ಎಂದಿನಂತೆ ಕಾರ್ಯನಿರತವಾಗಿತ್ತು. ಕೆಲಸದ ಗಡಿಬಿಡಿಯಲ್ಲಿ 9 ಬಾರಿ ಎಚ್ಚರಿಕೆಯ ಗಂಟೆ ಮೊಳಗಿದ್ದನ್ನು ಯಾರೂ ಅಷ್ಟಾಗಿ ಗಮನಿಸಲಿಲ್ಲ. ಆಗಸದಲ್ಲಿ ಕ್ಷೀಣವಾಗಿ ಸದ್ದು ಮಾಡುತ್ತಾ ಅಮೇರಿಕಾದ ಬಿ-29 ವಿಮಾನ ಹಾರುತ್ತಿತ್ತು. ಎರಡು ಬಾರಿ ಹಿರೋಷಿಮಾವನ್ನು ಸುತ್ತು ಹಾಕಿ ಏಳೂವರೆ ಹೊತ್ತಿಗೆ ಸಮುದ್ರದ ದಿಕ್ಕಿನಲ್ಲಿ ಕಣ್ಮರೆಯಾಯಿತು. ದಿನವೂ ಇಂತಹ ದೃಶ್ಯಗಳು ಸಾಮಾನ್ಯವಾದ್ದರಿಂದ ಯಾರೂ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಅವರ್ಯಾರ ಕಲ್ಪನೆಗೂ ನಿಲುಕದ ಸತ್ಯವೊಂದಿತ್ತು. ಬಿ-29 ಸುಮ್ಮನೆ ಗಸ್ತು ಹೊಡೆಯಲು ಮಾತ್ರ ಬಂದಿರಲಿಲ್ಲ. ಬಾಂಬ್ ಸ್ಪೋಟಕ್ಕೆ ಮುಹೂರ್ತವಿಡಲು ಹಿರೋಷಿಮಾದ ಹವಾಮಾನ ಪರೀಕ್ಷಿಸಲು ಬಂದಿತ್ತು!
ಮುಂದೆ ನಡೆದದ್ದು ಕರಾಳ ದುಸ್ವಪ್ನ.
ನಾಲ್ಕೂವರೆ ಟನ್ ತೂಕದ ಅಣುಬಾಂಬ್ ಹೊತ್ತ 'ಎನೋಲಾ ಗೇ' ವಿಮಾನ 8.09ರ ಹೊತ್ತಿಗೆ ಕಾಣಿಸಲು ಶುರುವಾಯಿತು. ಭೂ ಮಟ್ಟದಿಂದ 1850 ಅಡಿ ತಲುಪಿದಾಗ ಬಾಂಬ್ ಸ್ಪೋಟಗೊಳ್ಳಬೇಕು. ಇದು ವಿಜ್ಞಾನಿಗಳ ಯೋಜನೆ. ಆದರೆ ಅವರಿಗೆಲ್ಲ ಬಾಂಬ್ ಸ್ಪೋಟಗೊಳ್ಳುವಾಗ ಭೂಮಿಯ ಮೇಲ್ಪದರವೇ ಬಿರುಕು ಬೀಳಬಹುದೆಂಬ ಆತಂಕವಿತ್ತು.
'ನಾವೀಗ ಬಾಂಬ್ ಕೆಳಗೆಸೆಯಲಿದ್ದೇವೆ. ನಾನು ಸಿಗ್ನಲ್ ಕೊಟ್ಟ ಕೂಡಲೇ ನೀವೆಲ್ಲಾ ಕ್ವಿನೀನ್ ಹರಳುಗಳಿಂದ ಮಾಡಿದ ಗಾಜಿನ ಕನ್ನಡಕ ಹಾಕಿಕೊಳ್ಳಿ. ಸ್ಪೋಟ ಮುಗಿಯುವವರೆಗೂ ತೆಗೆಯಕೂಡದು',ಹಾಗಂತ ಆಜ್ಞೆ ಮಾಡಿದವನ ಹೆಸರು ಕ್ಯಾಪ್ಟನ್ ಟಿಬೇಟ್ಸ್. ಅಷ್ಟರಲ್ಲಿ ನನ್ನ ಗುರಿ ಹತ್ತಿರಾಗುತ್ತಿದೆ ಎನ್ನುತ್ತಾ ಬಾಂಬ್ ಎಸೆಯುವ ವ್ಯವಸ್ಥೆ ಚಾಲೂ ಮಾಡಿದ ಥಾಮಸ್ ಫರ್ಬಿ. ಆಗ ಸಮಯ 8.15.
ವಿಮಾನದಡಿಯಿಂದ 3 ಪ್ಯಾರಾಚೂಟ್ಗಳು ಒಂದಾದ ಮೇಲೊಂದರಂತೆ ಹೂವು ಅರಳಿದಂತೆ ಕೆಳಗಿಳಿಯತೊಡಗಿದವು. ಒಂದು ಪ್ಯಾರಾಚೂಟ್ನಲ್ಲಿ ಬಾಂಬ್ ಕೆಳಗಿಳಿಯುತ್ತಿದ್ದರೆ, ಮಿಕ್ಕವೆರಡರಲ್ಲಿ ರೇಡಿಯೇಷನ್ ಮತ್ತು ತಾಪಮಾನ ಅಳೆದು ರೇಡಿಯೋ ಮುಖಾಂತರ ತಿಳಿಸುವ ಯಂತ್ರಗಳಿದ್ದವು.
ಲಿಟ್ಲ್ ಬಾಯ್ 1850 ಅಡಿ ತಲುಪಿದಾಗ ಗಡಿಯಾರದ ಮುಳ್ಳು 8.16ರ ಹತ್ತಿರವಿತ್ತು. ಆಗ ನಡೆದದ್ದು ಕಿವಿಗಡಚಿಕ್ಕುವ ಸ್ಪೋಟ. 20,000 ಟನ್ಗೂ ಅಧಿಕ ಟಿ.ಎನ್.ಟಿ ಶಕ್ತಿಯೊಂದಿಗೆ ಸ್ಪೋಟ ಸಂಭವಿಸಿಯೇ ಬಿಟ್ಟಿತು. ಕ್ಷಣಾರ್ಧದಲ್ಲೇ ಅಣಬೆಯಾಕಾರದ ಮೋಡ ಸೃಷ್ಟಿಯಾಗಿ, ಕೆಲವೇ ನಿಮಿಷಗಳಲ್ಲಿ 40,000 ಅಡಿ ಎತ್ತರಕ್ಕೇರಿತು. ಕೂಡಲೇ ಹಿರೋಷಿಮಾದ ಸುಮಾರು 10 ಚದರ ಮೈಲಿ ಸುತ್ತಳತೆಯ ಪ್ರದೇಶ ಅತ್ಯುಷ್ಣದ ಅಗ್ಗಿಷ್ಟಿಕೆಯಾಯಿತು. ಸಾವಿರಾರು ಜನರು ಕೆಲವೇ ಸೆಕೆಂಡ್ ಬದುಕಿದ್ದಿರಬಹುದು. ಬಾಂಬ್ ಸಿಡಿದ 10 ಮೈಲಿ ಪ್ರದೇಶದಲ್ಲಿದ್ದ ಯಾವ ಮನೆಯೂ ಉಳಿಯಲಿಲ್ಲ. ಅಲ್ಲಿದ್ದವರ ಚರ್ಮ ಶಾಖಕ್ಕೆ ಕಪ್ಪಾಗಿ ಹೋಯಿತು. ಶಾಖದ ಪ್ರಖರತೆ ಎಷ್ಟಿತ್ತೆಂದರೆ ಉರುಳಿದ ಮನೆಗಳ ಕಾಂಕ್ರೀಟು ಮತ್ತು ಕಲ್ಲುಗಳು ಕರಗಿ ಗಾಜಿನ ಮಾದರಿಯಲ್ಲಿ ಒಂದಕ್ಕೊಂದು ಅಂಟಿ ಬಿಟ್ಟಿದ್ದವು. ಟಾರಿನಂತೆ ದೇಹಗಳು ಕರಗಿ ನೀರು ನೀರಾಯಿತು. 68,000 ಮಂದಿ ಒಮ್ಮೆಗೆ ಬೆಂದು ಹೋದರು. ಇಡೀ ಹಿರೋಷಿಮಾ ಜಾಜ್ವಲ್ಯಮಾನ ಚಿತೆಯಾಯಿತು. ಅಗಾಧ ಉಷ್ಣತೆಯ ಪರಿಣಾಮದಿಂದಾಗಿ ಕೆಲಕಾಲದಲ್ಲೇ ಕರಿ ನೀರಿನ ಮಳೆ ಹಿರೋಷಿಮಾದಲ್ಲಿ ಸುರಿಯಿತು.
ಇಷ್ಟೆಲ್ಲಾ ಆದರೂ ಅಮೇರಿಕಾ ಅಧ್ಯಕ್ಷ ಟ್ರೂಮನ್ ಖಿನ್ನನಾಗಿ ಕುಳಿತಿದ್ದ. ಜಪಾನ್ ಸರ್ಕಾರ ಆಂತರಿಕ ಗೊಂದಲದಿಂದಾಗಿ ಶರಣಾತಿ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಲಿಲ್ಲ. ಆದ್ದರಿಂದ ಅಮೇರಿಕಾ, ಕೊಕುರಾ ಎಂಬ ಪಟ್ಟಣದ ಮೇಲೆ ಅಗಸ್ಟ್ 9ರಂದು 'ಫ್ಯಾಟ್ಮನ್' ಎಂಬ ಮತ್ತೊಂದು ಅಣುಬಾಂಬ್ ದಾಳಿ ನಡೆಸಲು ನಿರ್ಧರಿಸಿತು. ಕೊಕುರಾದಲ್ಲಿ ಮೋಡ ಮುಸುಕಿದ ವಾತಾವರಣವಿದ್ದುದರಿಂದ ನಾಗಾಸಾಕಿ ಪಟ್ಟಣ ಬಾಂಬ್ ದಾಳಿಗೆ ತುತ್ತಾಯಿತು. ಇಲ್ಲಿ ಸಜೀವವಾಗಿ ಬೆಂದು ಹೋದವರ ಸಂಖ್ಯೆ 60,000.
ಶತಮಾನದ ಅಮಾನವೀಯ ಘಟನೆ ನಡೆದದ್ದು ಹೀಗೆ.
ಇಂದಿಗೂ ಈ ಎರಡೂ ಪಟ್ಟಣಗಳಲ್ಲಿ ರಕ್ತದ ಕ್ಯಾನ್ಸರ್, ಅಂಗವೈಕಲ್ಯ ತಲೆಮಾರುಗಳಿಂದ ಬಂದ ಬಳುವಳಿಯಂತೆ ಮುಂದುವರಿಯುತ್ತಿದೆ. ಅಣುಬಾಂಬ್ ಬಿದ್ದ ವರ್ಷದ ಕೊನೆಗೆ ಹಿರೋಷಿಮಾ ಒಂದರಲ್ಲೇ ಬೆಂಕಿಯಿಂದ ಬೆಂದು, ವಿಕಿರಣಕ್ಕೆ ತುತ್ತಾದವರು 1 ಲಕ್ಷದ 40 ಸಾವಿರ ಮಂದಿ.
ಇಂತಹದೊಂದು ಪೈಶಾಚಿಕ ಕೃತ್ಯ ನಡೆಸಿದ್ದಕ್ಕೆ ಯಾರನ್ನು ದೂರಬೇಕು, ನೀವೇ ಹೇಳಿ? ಬಾಂಬ್ ಹಾಕಲು ಅನುಮತಿ ಕೊಟ್ಟು ಆಮೇಲೆ ಮರುಗಿದ ಅಮೇರಿಕಾದ 33ನೇ ಅಧ್ಯಕ್ಷ ಟ್ರೂಮನ್ನನ್ನೇ? ಬಾಂಬ್ ತಯಾರಿಯ ನೇತೃತ್ವ ವಹಿಸಿದ್ದ ಬಾರ್ನ್ ಓಪೆನ್ಹೈಮರ್ ಎಂಬ ವಿಜ್ಞಾನಿಯನ್ನೇ? ಇಂತಹದೊಂದು ಅಸ್ತ್ರ ಸಾಧ್ಯವೆಂದು ಸೈದ್ಧಾಂತಿಕವಾಗಿ ತೋರಿಸಿಕೊಟ್ಟ ಆಲ್ಬರ್ಟ್ ಐನ್ಸ್ಟಿನ್ ಬರೆದ ಪತ್ರವನ್ನೇ? ನಿರುದ್ವಿಗ್ನವಾಗಿ ಹಿರೋಷಿಮಾ ಮೇಲೆ ಬಾಂಬ್ ಉದುರಿಸಿದ ಥಾಮಸ್ ಫರ್ಬಿಯನ್ನೇ? ಅಥವಾ ಯುದ್ಧವಾಗಲೇಬೇಕೆಂದು ಮೊಂಡು ಹಿಡಿದಿದ್ದ ಜಪಾನಿನ ರಕ್ಷಣಾ ಅಧಿಕಾರಿಗಳನ್ನೇ?
ಅಗಸ್ಟ್ 6 ಹಾಗೂ 9ನೇ ತಾರೀಕು ಬಂತೆಂದರೆ ಸಾಕು, ಪ್ರತೀ ವರ್ಷ ಈ ಪ್ರಶ್ನೆಗಳೆಲ್ಲಾ ಮತ್ತೆ ಮತ್ತೆ ಕಾಡುತ್ತವೆ.
ಇತಿಹಾಸವೇ ಹಾಗೆ!
4 ಕಾಮೆಂಟ್ಗಳು:
ಭಾವಪೂರ್ಣ ಲೇಖನ. ನೀವು ಕೇಳಿರುವ ಪ್ರಶ್ನೆ ನಿಜವಾಗಿಯೂ ಚಿಂತಾರ್ಹ: ದೂರುವುದು ಯಾರನ್ನ ? ಸಿದ್ಧಾಂತ ಸರಿಯಿದೆ ಎಂದು ತೋರುವ ಉತ್ಕಟತೆಯಲ್ಲಿ ಇದರ ಉಪಯೋಗ ಒಳಿತಿಗಿಂತ ಕೆಡುಕಿಗೇ ಹೆಚ್ಚೆಂದು ಯೋಚಿಸದ ಐನ್ಸ್ಟೈನರ ಚಿತ್ತವಿಕಾರವನ್ನೋ ( ನಂತರ ಯೋಚಿಸಿರಬಹುದೇನೊ...ನನಗೆ ಗೊತ್ತಿಲ್ಲ ),ದೇಶ ಏನು ಕೆಲಸ ಕೊಟ್ಟರೂ ಸಾಧಿಸಿ ತೋರಿಸುವೆವು ಎಂಬ ಛಲದಲ್ಲಿ ತಾವೇನು ಮಾಡುತ್ತಿದ್ದೇವೆಂದು ವಿಶ್ಲೇಷಿಸದ ಓಪ್ಪೆನ್ಹೈಮರರ ದೇಶಭಕ್ತಿಯನ್ನೋ್? ದೇಶ ತಾನು ಸರ್ವಶಕ್ತವಾಗಬೇಕೆಂಬ ಟ್ರೂಮರ್ನ ಮಹತ್ವಾಕಾಂಕ್ಷೆಯನ್ನೋ ಮತ್ತು ಜಪಾನಿನ ಪ್ರಧಾನಿಯ ಯುದ್ಢಪಿಪಾಸುವನ್ನೋ ?
ಲೇಖನದಲ್ಲಿನ ಒಂದು ಸಣ್ಣ ತಪ್ಪನ್ನು ದಯಮಾಡಿ ಸರಿಪಡಿಸಿಕೊಂಡುಬಿಡಿ...ಆ ವಿಜ್ಞಾನಿಯ ಹೆಸರು ಬಾರ್ನ್ ಓಪೆನ್ಹೈಮರ್ ಅಂತ.[Born Oppenheimer]
@ಲಕ್ಷ್ಮಿ
ಬರಹದಲ್ಲಿದ್ದ ತಪ್ಪನ್ನ ತಿಳಿಸಿದ್ದಕ್ಕೆ ಧನ್ಯವಾದ.
Good article overall.
Under various circumstances, the bombings on Japan might have taken place at that time.
I feel from history we can learn the mistakes done in the past and correct ourselves.
I am of the opinion that we have something to learn from the Atomic bomb blasts in Japan. Now we are aware of the what a atomic bomb can do and how it can harm our world. And also the efforts are always going on at UN level to prevent any country from owning this technology for the destruction purpose.
Just imagine using the bomb at present time with so much advancement in technology. The destruction might be many times more than what happened in Japan. We have taken so many steps to avoid such weapon because we can remember what Japan went through those days.
ಕಾರ್ತಿಕ್ ಅವರೆ,
ಮನುಷ್ಯನ ಪೈಶಾಚಿಕತೆಗೆ ಸಾಕ್ಷಿಯಾದ ದಾರುಣ ಘಟನೆಯಿದು. ಯುಗಗಳ ಹಿಂದೆ ದಾನವರು ಬೇರೆ ಮಾನವರು ಬೇರೆಯಾಗಿದ್ದರು. ಆದರೆ ಈ ಕಲಿಯುಗದಲ್ಲಿ ಮಾನವರೊಳಗೆ ದಾನವರೋ ಇಲ್ಲಾ ದಾನವರೊಳಗೆ ಕೆಲವರು ಮಾನವರಾಗಿರುವರೋ ಎಂದೇ ತಿಳಿಯುತ್ತಿಲ್ಲ!!? ಊತ್ತಮ ಲೇಖನ.
ಕಾಮೆಂಟ್ ಪೋಸ್ಟ್ ಮಾಡಿ