ಸೋಮವಾರ, ಫೆಬ್ರವರಿ 25, 2008

ಲೇಖಕನಿಗೆ ಒಬ್ಬ ಓದುಗ ಸಿಕ್ಕರೆ ಸಾಕು!!ಅದೊಂದು ಆತ್ಮೀಯ ಸಾಹಿತ್ಯ ಕಾರ್ಯಕ್ರಮ. ಸಾಮಾನ್ಯವಾಗಿ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಕಂಡುಬರುವ ಅಲಿಖಿತ ಘನಗಾಂಭೀರ್ಯ ಅಲ್ಲಿರಲಿಲ್ಲ. ಅಲ್ಲಿದ್ದದ್ದು ಗೆಳೆಯರಿಬ್ಬರ ನೆನಪಿನ ಬುತ್ತಿ, ಸಾಹಿತ್ಯದ ಓದಿನ ಬಗ್ಗೆ, ಬದಲಾದ ಯುವ ಜನಾಂಗದ ಬಗೆಗಿನ ಮಾತುಗಳು. ಸಂದರ್ಭ: ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ಅವರ "ಆಮೇಲೆ ಇವನು" ಕಥಾ ಸಂಕಲನ ಬಿಡುಗಡೆ ಸಮಾರಂಭ. ಏರ್ಪಾಡಾದದ್ದು ಪುತ್ತೂರಿನ ಅನುರಾಗ ವಠಾರದಲ್ಲಿ. ಈ ಸಂದರ್ಭದಲ್ಲಿ ಕಥೆಗಾರ,ಪತ್ರಕರ್ತ ಜೋಗಿ ಹಾಗೂ ನಾಗತಿಹಳ್ಳಿ ಆಡಿದ ಮಾತುಗಳು ಇವತ್ತಿನ ಸಾಹಿತ್ಯ ಓದಿನ ಕ್ರಿಯೆ-ಪ್ರಕ್ರಿಯೆಯ ವಾತಾವರಣದಲ್ಲಿ ಮಹತ್ವದ್ದು.
ಚಟಾಕಿ ಹಾರಿಸುತ್ತಾ ಜೋಗಿ ಮಾತನಾಡಿದ್ದು ಹೀಗೆ:
 • ಇವತ್ತಿನ ಲೇಖಕ ನಾನು ತುಂಬಾ ಜನರಿಗಾಗಿ ಬರೆಯುತ್ತೇನೆ ಎಂಬ ಭ್ರಮೆಯಲ್ಲಿರುವುದು ಬೇಡ. ತಾನು ಬರೆದದ್ದು ನಾಲ್ಕೋ ಐದು ಜನಕ್ಕೆ ತಲುಪಿದರೆ ಸಾಕು ಎಂದು ಆಶಿಸಿದರೆ ಒಳ್ಳೆಯದು. ಲೇಖಕನಿಗೆ ಒಬ್ಬ ಓದುಗ ಸಿಕ್ಕರೂ ಸಾಕು! ಆತ ತಾನು ಓದಿದ್ದನ್ನು ಇನ್ನೊಬ್ಬನಿಗೆ ಹೇಳಿದರೆ ಸಾಕು.

 • 3-4 ಪುಟದ ಚಿಕ್ಕ ಕಥೆಗಳನ್ನು ಬರೆಯುವುದು ಒಳ್ಳೆಯದು. 30-40 ಪುಟಗಳ ಕಥೆ ಬರೆದರೆ ಓದುವ ವ್ಯವಧಾನ ಇವತ್ತಿನ ಮಂದಿಗಿಲ್ಲ. ಜೊತೆಗೆ ಅಂತಹ ಕಥೆಗಳನ್ನು ಇವತ್ತು ಅರಗಿಸಿಕೊಳ್ಳಲೂ ಸಾಧ್ಯವಿಲ್ಲ.

 • ಸಾಹಿತ್ಯದ ಓದು ಬಾಯಿಂದ ಬಾಯಿಗೆ, ಗೆಳೆಯರ ಮೂಲಕ ಹಬ್ಬಬೇಕು. ನಾನು ಗೆಳೆಯ ಹೇಳಿದ ಮಾತನ್ನು ನಂಬುತ್ತೇನೆಯೇ ಹೊರತು ವಿಮರ್ಶಕನ ಮಾತನ್ನಲ್ಲ. ಕಥಾ ಜಗತ್ತಿನಲ್ಲಿ ವಿಮರ್ಶಕರೇ ಸೃಷ್ಟಿಸಿದ ಪಂಗಡಗಳಿವೆ. ಯಾವುದೇ ಪಂಥಕ್ಕೆ ಸೇರದೆ ಬರೆದವರಿಗೆ ಜಾಗವೇ ಇಲ್ಲವೇ ಎಂಬ ಪ್ರಶ್ನೆ ನನ್ನನ್ನು ಕಾಡಿದೆ. ಉದಾಹರಣೆಗೆ ನಾಗತಿಹಳ್ಳಿ ಅವರ ನೀರಿನ ಮಟ್ಟ, ಸ್ಖಲನ ಕಥೆಗಳು ಇಂತಹ ಯಾವುದೇ ಪಂಥಕ್ಕೆ ಸೇರದವು. ಇಂತಹ ಕಥೆಗಳನ್ನು ಯಾವ ಪಂಥಕ್ಕೆ ಸೇರಿಸುವುದು ಎಂದು ವಿಮರ್ಶಕರೇ ಹೆಚ್ಚಾಗಿ ತಬ್ಬಿಬ್ಬಾಗುತ್ತಾರೆ.

 • ಜಾಸ್ತಿ ಮಾತಾಡುವವರು ಕವಿತೆ ಬರೆಯಲ್ಲ ಎನ್ನುವ ನನ್ನ ನಂಬಿಕೆಯನ್ನು ಸುಳ್ಳು ಮಾಡಿದವರು ಇಬ್ಬರು: ಕುಂಟಿನಿ ಮತ್ತು ಕಾಯ್ಕಿಣಿ. ಅದನ್ನು ಸತ್ಯ ಮಾಡಿದವರು ಸುಮತೀಂದ್ರ ನಾಡಿಗರು!!

 • ತೇಜಸ್ವಿ ಆಗಾಗ ಹೇಳುತ್ತಿದ್ದರು- "ಇಲ್ಲ ಸಲ್ಲದ ತರಲೆಗಳಲ್ಲಿ ಸಿಕ್ಕಿಕೊಂಡಾಗಲೇ ನನಗೆ ಕಥೆ ಹುಟ್ಟೋದು"

 • ವಿದ್ಯಾರ್ಥಿಗಳಿಗೆ ಒಳ್ಳೆಯ ಮೇಷ್ಟ್ರುಗಳು ಸ್ಪೂರ್ತಿ ತುಂಬದೇ ಹೋದರೆ ಒಳ್ಳೆಯ ಸಾಹಿತ್ಯದ ಓದು ಸಾಧ್ಯವಿಲ್ಲ. ಕಿ.ರಂ.ನಾಗರಾಜ್, ಶಿವರುದ್ರಪ್ಪ ನಿವೃತ್ತರಾದರು. ಈಗ ಹೇಳಿಕೊಳ್ಳಲು ಒಳ್ಳೆಯ ಮೇಷ್ಟ್ರು ಅಂತ ಯಾರಿದ್ದಾರೆ?

 • ಇಂಗ್ಲೀಷ್ ಮೇಷ್ಟ್ರುಗಳಿಗೆ ನನ್ನದೊಂದು ಪ್ರಶ್ನೆ. ಭಾರತದ ಲೇಖಕರೇ ಇಂಗ್ಲೀಷ್ನಲ್ಲಿ ಸಾಕಷ್ಟು ಚೆನ್ನಾಗಿ ಬರೆದಿರುವಾಗ ಬೈರನ್, ಶೆಲ್ಲಿ, ಮೆಟಫಿಜಿಕಲ್ ಪೋಯಟ್ರಿ ಅಂತ್ಹೇಳಿ ಯಾಕೆ ಇಂಗ್ಲೀಷ್ ಸಾಹಿತ್ಯದ ವಿದ್ಯಾರ್ಥಿಗಳನ್ನ ಸಾಯಿಸ್ತೀರ? ನಿಜಿಂ ಇಜೈಕಲ್ ಸೊಗಸಾಗಿ ಬರೆದಿದ್ದಾರೆ. ಎ.ಕೆ.ರಾಮಾನುಜಂ ಕನ್ನಡದಿಂದ ಅನುವಾದಿಸಿದ ಕವನಗಳಿವೆ. ಇದನ್ನೆಲ್ಲಾ ಯಾಕೆ ಗಂಭೀರವಾಗಿ ಪರಿಗಣಿಸುವುದಿಲ್ಲ?

 • ಕುಂಟಿನಿಯ ಪುಸ್ತಕ "ಆಮೇಲೆ ಇವನು" ನೋಡಿ ಹಾಗಂದ್ರೆ ಏನು ಸಾರ್ ಅಂತ ಸಿನಿಮಾದವನೊಬ್ಬ ಕೇಳಿದ. ಆತನಿಗೆ ಹೇಗೆ ಅರ್ಥ ಮಾಡಿಸುವುದು ಅಂತ ಹೊಳೆಯಲಿಲ್ಲ. ಕೊನೆಗೆ ಖ್ಯಾತ ನಟನೊಬ್ಬನ ಮದುವೆ ಸನ್ನಿವೇಶ ಹೇಳಿದೆ. ಆಕೆಗೆ ಈ ಮೊದಲು ಮದ್ವೆ ಆಗಿತ್ತು. ಆದ್ದರಿಂದ ಆಕೆಗೆ ಆ ಖ್ಯಾತ ನಟ "ಆಮೇಲೆ ಇವನು" ಎಂದೆ. ಅವನಿಗೆ ಥಟ್ಟನೆ ಅರ್ಥವಾಯಿತು. "ಚೆನ್ನಾಗಿದೆ ಸಾರ್. ಇದೇ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡ್ಬಹುದಲ್ಲ ಸಾರ್" ಅಂದ!! (ಪುಸ್ತಕದ ಶೀರ್ಷಿಕೆ ಬಗ್ಗೆ ಮಾತನಾಡುತ್ತಾ ಹೇಳಿದ ಮಾತು).
ಇವತ್ತಿನ ಮಕ್ಕಳಿಗೆ ಆಕಾಶವೇ ಉಸಿರುಗಟ್ಟಿಸುತ್ತಿದೆ!


ಕುಂಟಿನಿ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾಗತಿಹಳ್ಳಿ ಯುವಕರ ಬಗ್ಗೆ ಅರ್ಥಪೂರ್ಣವಾಗಿ ಮಾತನಾಡಿದ್ದು ಹೀಗೆ:


 • ಸಣ್ಣ ಊರುಗಳಲ್ಲಿ alert ಆಗಿ ಇಡಲು ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳು ಬೇಕೇ ಬೇಕು. ಇಂತಹ ಕಾರ್ಯಕ್ರಮಗಳಿಂದ ನಿರಾಕಾರವಾಗಿ ಬೆಳೆಯಲು ಸಾಧ್ಯ. ಇವತ್ತಿನ ಮಕ್ಕಳ ಬಗ್ಗೆ ತೀರಾ ನಿರಾಶಾದಾಯಕವಾಗಿ ಆಲೋಚಿಸುವುದು ಬೇಡ. ಹೊಸ ತಲೆಮಾರಿನ ಹುಡುಗರ ಅನ್ವೇಷಣೆಗಳೇ ಬಹಳ ಇವೆ.

 • ನನ್ನ ಮಗಳು ಒಂದು ಸಾರಿ ನನ್ಹತ್ರ ಹೇಳಿದ್ದಳು-" sky is suffocating ". ನಮಗೆಲ್ಲಾ ನಮ್ಮ ಸುತ್ತಲಿನ ವಾತಾವರಣ ಉಸಿರುಗಟ್ಟಿಸುತ್ತಿತ್ತು. ಆದರೆ ಇವತ್ತಿನ ಮಕ್ಕಳಿಗೆ ಆಕಾಶವೇ ಉಸಿರುಗಟ್ಟಿಸುತ್ತಿದೆಯಂತೆ. ಆಕಾಶದ ಆಚೆಗೂ ಹೊಸದನ್ನು ಹುಡುಕುವ ಅವರದ್ದು ಕಲ್ಪನಾ ಚಾವ್ಲಾ ಜಾತಿ.

 • ನಾಲ್ಕೋ ಐದು ಸಾಲಿನ ಎಸ್ಎಂಎಸ್ಗಳಲ್ಲೇ ಇಂದು ಯುವ ಜನಾಂಗದ ಮಹಾಕಾವ್ಯಗಳು ವಿನಿಮಯ ಆಗುತ್ತಿದೆ. ಅವರ ಆ ವೇಗವನ್ನು ಉಪಯೋಗಿಸಿಕೊಂಡು ನಮ್ಮ ಸಾಂಸ್ಕೃತಿಕ- ಸಾಹಿತ್ಯಿಕ ವಿಚಾರಗಳನ್ನು ಉಳಿಸುವತ್ತ ಆಲೋಚಿಸಬೇಕು.

 • ಇವತ್ತಿನ ಮಕ್ಕಳ ವೇಗವನ್ನು ಕಂಡರೆ ಅಚ್ಚರಿಯಾಗುತ್ತದೆ. ಬುದ್ಧ ಹುಟ್ಟಿದಲ್ಲಿಂದಲೇ ಯಾಕೆ ಪ್ರಾರಂಭಿಸಬೇಕು? ನಾವು ಬುದ್ಧನ ಕೊನೆಯಿಂದಲೇ ಆರಂಭ ಮಾಡೋಣ ಎನ್ನುವ ಧಾಟಿ ಅವರದು. ಆದ್ದರಿಂದ ಆ ವೇಗದ ಸಮರ್ಪಕ ಬಳಕೆಯಾಗಬೇಕು ಅಷ್ಟೇ.

ನಾನು ಆತನಿಗೆ ಲಂಕೇಶ. ಆತ ನನ್ನ ಪಾಲಿನ ತೇಜಸ್ವಿ!


ಜೋಗಿ, ಕುಂಟಿನಿ ಜೀವದ ಗೆಳೆಯರು. ಸಾಹಿತ್ಯದ ಬಗ್ಗೆ ಚರ್ಚಿಸುತ್ತಾ, ಲೇಖಕರನ್ನು ತಮ್ಮದೇ ದಾಟಿಯಲ್ಲಿ ಗೇಲಿ ಮಾಡುತ್ತಿದ್ದವರು. ಅದನ್ನೆಲ್ಲಾ ಹಂಚಿಕೊಳ್ಳಲು ವೇದಿಕೆ ಒದಗಿ ಬಂದದ್ದು ಕುಂಟಿನಿಯವರ ಪುಸ್ತಕ ಬಿಡುಗಡೆ ಸಮಾರಂಭ. ಆತ್ಮೀಯನ ಸಮಾರಂಭವಾದ್ದರಿಂದ ಜೋಗಿ, ಕಂಡಾಬಟ್ಟೆ ಲವಲವಿಕೆಯಿಂದ ಪುಟಿಯುತ್ತಿದ್ದರು. ಕುಂಟಿನಿ ಜೊತೆಗಿನ ಗೆಳೆತನದ ಸುವರ್ಣ ಘಳಿಗೆಗಳನ್ನು ಮಾತಿನ ತುಂಬೆಲ್ಲಾ ಮೆಲುಕು ಹಾಕಿದರು. ಅವರಿಬ್ಬರ ತರ್ಲೆಗಳನ್ನು ಕೇಳುತ್ತಾ ನೆರೆದವರು ನಕ್ಕರು, ಜೊತೆಗೆ ಅವರಿಬ್ಬರೂ ಪರಸ್ಪರ ಮುಖ ನೋಡಿ ಕಣ್ಣಲ್ಲೇ ಗಹಗಹಿಸಿ ನಕ್ಕರು.

ನೆನಪುಗಳ ಜೊತೆ ಆಡಿದ ಜೋಗಿಯವರ "ಮಾತಿನ ಝಲಕ್" ಇಲ್ಲಿದೆ:

 • ನಮ್ಮ ಜಗತ್ತಿಗೆ ಕೇವಲ ನಾವಿಬ್ಬರು ಮಾತ್ರ ಶ್ರೇಷ್ಠ ಬರಹಗಾರರು! ಆಗೆಲ್ಲಾ ನಾನು, ಕುಂಟಿನಿ ಬರಹಗಳ ಬಗ್ಗೆ 3 ಪುಟ ವಿಮರ್ಶೆ ಬರೆಯುತ್ತಿದ್ದೆ. ಅವನೋ ನನ್ನ ಬರಹಗಳ ಬಗ್ಗೆ 6 ಪುಟ ಬರೆದಿರುತ್ತಿದ್ದ. ಅದನ್ನು ಹಿಡಿದುಕೊಂಡು ನಮ್ಮ ಮಾಷ್ಟ್ರು ವೆಂಕಟ್ರಮಣ ಬಳ್ಳರ ಬಳಿಗೆ ಓಡುತ್ತಿದ್ದೆವು. ಅವರ ಇಂಗ್ಲೀಷ್ ಕ್ಲಾಸಿಗೆ ಸರಿಯಾಗಿ ಹೋಗುತ್ತಿದ್ದು ನಾವಿಬ್ಬರು ಮಾತ್ರ. ಬಹುಷಃ ಅವರಿಗೆ ನಮ್ಮಿಬ್ಬರನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲವೇನೋ. ಆ ಕಾರಣಕ್ಕಾಗಿ 3+6 ಪುಟದ ವಿಮರ್ಶೆ ಓದಿ, ಕೊನೆಗೆ 'ಇಲ್ಲೊಂದು ಮಿಂಚು ಇದೆ' ಎನ್ನುತ್ತಿದ್ದರು!

 • ನಾನು, ಕುಂಟಿನಿ ರಾಮಕುಂಜ ಶಾಲೆಗೆ ಸ್ಪರ್ಧೆಯೊಂದಕ್ಕೆ ಹೋಗಿದ್ದೆವು. ಅಲ್ಲಿ ಅಪಘಾತ ಒಂದರ ಚಿತ್ರ ಕೊಟ್ಟು ಏನಾದ್ರೂ ಬರೀರಿ ಅಂತ ಹೇಳಿದರು. ಅಪಘಾತ ಸಂದರ್ಭದಲ್ಲಿ ಅಲ್ಲಿದ್ದವರ ಪರಿಸ್ಥಿತಿ ಹೇಗಿರಬಹುದು ಅಂತ ವಿವರಿಸಿ ನಾನು 3 ಪುಟದ ಕರುಣಾಜನಕ ಲೇಖನ ಬರೆದೆ. ಆದ್ರೆ ಈ ಪಾಪಿ ಕುಂಟಿನಿ ಏನು ಮಾಡಿದ ಗೊತ್ತಾ? "ಸಾವು ಚಾಚಿಕೊಡಿದೆ ರಸ್ತೆಯಂತೆ" ಅಂತ ಕವನ ಬರೆದು ಪ್ರೈಜು ಪಡೆದುಕೊಂಡು ಬಿಟ್ಟ. ಕೊನೆಗೆ ನನ್ನ ಮುಖ ನೋಡಲಾಗದೆ "ಅವನಿಗೊಂದು ಸಮಾಧಾನಕರ ಬಹುಮಾನ ಕೊಡಿ" ಅಂತ ಹೇಳಿ ಕಳಿಸಿದ್ದ!

 • ನಂತರ ನಾನು ಬೆಂಗಳೂರು ಸೇರಿಕೊಂಡೆ, ನವ್ಯರ ಅಭ್ಯಾಸಗಳನ್ನು ಕಲಿತುಕೊಂಡೆ. ಕುಂಟಿನಿ ಕೃಷಿ ಮಾಡುತ್ತಾ, ಪತ್ರಕರ್ತನಾಗಿ ಹಳ್ಳಿಯಲ್ಲೇ ಉಳಿದ. ಅದಕ್ಕೇ ನಾನು ಆತನಿಗೆ ಲಂಕೇಶ. ಆತ ನನ್ನ ಪಾಲಿನ ತೇಜಸ್ವಿ!

ಒಂದು ವೃತ್ತಾಂತ


ವೃತ್ತದ ಬಳಿ ಬಂದು ನಿಂತೆ
ಭೋರೋ ಅನ್ನುವ ಮಳೆ
ನಾಲ್ಕಾರು ಕಡೆ ತೆರಳಲು ದಾರಿ
ಎಲ್ಲಿಗೆ ಹೋಗಬೇಕು?ತೋಯುವ ದೇಹದಲಿ
ನಡುಕ ಪ್ರಾರಂಭವಾಯಿತು
ರಕ್ಕಸ ಗುಡುಗು, ಸಿಡಿಲು
ನಾಲ್ಕೂ ಹಾದಿಯಿಂದ
ಒಂದೊಂದು ಶಕ್ತಿ ಎಳೆಯುತ್ತಿತ್ತು

ಮಳೆ ನಿಂತಿತು
ಎರಡು ರಸ್ತೆಗಳು
ಕೆಸರಿನಿಂದ ತುಂಬಿದವು
ಮತ್ತೆರಡು ಶುಭ್ರ
ಎಲ್ಲಿ ದಾರಿ ಹುಡುಕುವುದು
ಕೆಸರ ರಸ್ತೆ ಆಚೆ
ಕಮಲವಿದೆಯೇ?
ತಿಳಿ ಬಣ್ಣದ ರಸ್ತೆ
ದಾಟಿದರೆ ಕೆಸರಿದೆಯೇ?

ಮತ್ತೆ ಮಳೆ
ಸುರಿಯುತ್ತದೆಯೇ
ಎಂದು ಕಾದು ಕುಳಿತೆ!

ಶುಕ್ರವಾರ, ಫೆಬ್ರವರಿ 22, 2008

3 ಸಾಲಿನ ವಿಷಾದಗಳು


ಈಗೀಗ

ಕವನಗಳೇ

ಹುಟ್ಟುವುದಿಲ್ಲಸಂಗೀತದ

ಕಡಲಲಿ

ಪಲ್ಲವಿ ಪಲುಕಿಲ್ಲಮಳೆ ಬಿದ್ದರೆ

ಗಡಗಡ

ಚಳಿ ಮಾತ್ರರಾತ್ರಿಯ ಮೌನ

ಬೊಗಸೆಯಲಿ

ಬೆಂದ ಹಕ್ಕಿಮುದುಡುವ

ಹೂಗಳೇ

ಕಣ್ಣಿಗೆ ಕನಸು


ವಿಷಾದಗಳಿಗೀಗ ಎರಡು ಸಾಲು ಸಾಕು!


ನನ್ನಲಿ


ಉತ್ತರಗಳಿಲ್ಲ
ನೆನಪಿನ ಮುಡಿಗೆ


ಭರವಸೆಯ ಹೂವು
ಮನಸ್ಸು


ಮಗುಚಿ ಬಿದ್ದ ಮಗು
ವಿಸ್ಮಯ ಹಾರಿ


ಹದ್ದು ಬಂದಿದೆಮುಳ್ಳುಗಳೆದ್ದ ಮೈಯಲಿ


ಗುಲಾಬಿ ಅರಳುತ್ತಿಲ್ಲ
ನಿನ್ನೆ ಕಂಡ ಶುಭ್ರ


ಆಕಾಶದಲ್ಲಿ ಕಪ್ಪು ಮೋಡ
ಕನಸಿನ


ಬಣ್ಣಕೆ ಬದುಕಿಲ್ಲ
ಈಗೀಗ


ಪ್ರಶ್ನೆಗಳೇ ಇಲ್ಲ