ನನಗೆ
ಉತ್ತರಗಳು ಬೇಡ
ಪ್ರಶ್ನೆಗಳಲ್ಲೇ
ಬದುಕಿ ಗೊತ್ತಿದೆ
ಪ್ರತೀ ಪ್ರಶ್ನೆಯು
ಇರಿದಾಗ
ಕುಟುಕಿದಾಗ
ನರಳಿ ಗೊತ್ತಿದೆ
ಬೀದಿ ದೀಪದ
ಬೆಳಕಲ್ಲಿ
ಪ್ರಶ್ನೆಗಳಲ್ಲೇ
ಮನೆ ಕಟ್ಟಿ
ಅಭ್ಯಾಸವಾಗಿದೆ
ಪ್ರತೀ ಮುಂಜಾನೆ
ನೆಲ ಸಾರಿಸಿ
ರಂಗವಲ್ಲಿ ಚುಕ್ಕಿ ಇಡುತ್ತಿ
ಎಂದು ಹಂಬಲಿಸಿ
ಮುಸ್ಸಂಜೆ ಹತ್ತಿರಾಗುತ್ತಿದೆ
ಮತ್ತೇಕೆ ಬೇಕು ಹೇಳು
ನಿನ್ನ ಉತ್ತರದ ಚಿ(ಂ)ತೆ?
ಪ್ರಶ್ನೆಗಳ
ಶೂನ್ಯದಲ್ಲಿ
ವೃಂದಾವನ ಕಟ್ಟಲು
ಗೊತ್ತಿರುವ ನನಗೆ
ನೀನಿಲ್ಲದೆ ಬದುಕಬಹುದು
ಆದರೆ ನಿನ್ನ ಪ್ರೀತಿ
ಹುಟ್ಟಿಸಿದ ಪ್ರಶ್ನೆ ಇಲ್ಲದೆ
ಬದುಕಲು ಗೊತ್ತಿಲ್ಲ!