ಸೋಮವಾರ, ಫೆಬ್ರವರಿ 25, 2008

ನಾನು ಆತನಿಗೆ ಲಂಕೇಶ. ಆತ ನನ್ನ ಪಾಲಿನ ತೇಜಸ್ವಿ!






















ಜೋಗಿ, ಕುಂಟಿನಿ ಜೀವದ ಗೆಳೆಯರು. ಸಾಹಿತ್ಯದ ಬಗ್ಗೆ ಚರ್ಚಿಸುತ್ತಾ, ಲೇಖಕರನ್ನು ತಮ್ಮದೇ ದಾಟಿಯಲ್ಲಿ ಗೇಲಿ ಮಾಡುತ್ತಿದ್ದವರು. ಅದನ್ನೆಲ್ಲಾ ಹಂಚಿಕೊಳ್ಳಲು ವೇದಿಕೆ ಒದಗಿ ಬಂದದ್ದು ಕುಂಟಿನಿಯವರ ಪುಸ್ತಕ ಬಿಡುಗಡೆ ಸಮಾರಂಭ. ಆತ್ಮೀಯನ ಸಮಾರಂಭವಾದ್ದರಿಂದ ಜೋಗಿ, ಕಂಡಾಬಟ್ಟೆ ಲವಲವಿಕೆಯಿಂದ ಪುಟಿಯುತ್ತಿದ್ದರು. ಕುಂಟಿನಿ ಜೊತೆಗಿನ ಗೆಳೆತನದ ಸುವರ್ಣ ಘಳಿಗೆಗಳನ್ನು ಮಾತಿನ ತುಂಬೆಲ್ಲಾ ಮೆಲುಕು ಹಾಕಿದರು. ಅವರಿಬ್ಬರ ತರ್ಲೆಗಳನ್ನು ಕೇಳುತ್ತಾ ನೆರೆದವರು ನಕ್ಕರು, ಜೊತೆಗೆ ಅವರಿಬ್ಬರೂ ಪರಸ್ಪರ ಮುಖ ನೋಡಿ ಕಣ್ಣಲ್ಲೇ ಗಹಗಹಿಸಿ ನಕ್ಕರು.

ನೆನಪುಗಳ ಜೊತೆ ಆಡಿದ ಜೋಗಿಯವರ "ಮಾತಿನ ಝಲಕ್" ಇಲ್ಲಿದೆ:

  • ನಮ್ಮ ಜಗತ್ತಿಗೆ ಕೇವಲ ನಾವಿಬ್ಬರು ಮಾತ್ರ ಶ್ರೇಷ್ಠ ಬರಹಗಾರರು! ಆಗೆಲ್ಲಾ ನಾನು, ಕುಂಟಿನಿ ಬರಹಗಳ ಬಗ್ಗೆ 3 ಪುಟ ವಿಮರ್ಶೆ ಬರೆಯುತ್ತಿದ್ದೆ. ಅವನೋ ನನ್ನ ಬರಹಗಳ ಬಗ್ಗೆ 6 ಪುಟ ಬರೆದಿರುತ್ತಿದ್ದ. ಅದನ್ನು ಹಿಡಿದುಕೊಂಡು ನಮ್ಮ ಮಾಷ್ಟ್ರು ವೆಂಕಟ್ರಮಣ ಬಳ್ಳರ ಬಳಿಗೆ ಓಡುತ್ತಿದ್ದೆವು. ಅವರ ಇಂಗ್ಲೀಷ್ ಕ್ಲಾಸಿಗೆ ಸರಿಯಾಗಿ ಹೋಗುತ್ತಿದ್ದು ನಾವಿಬ್ಬರು ಮಾತ್ರ. ಬಹುಷಃ ಅವರಿಗೆ ನಮ್ಮಿಬ್ಬರನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲವೇನೋ. ಆ ಕಾರಣಕ್ಕಾಗಿ 3+6 ಪುಟದ ವಿಮರ್ಶೆ ಓದಿ, ಕೊನೆಗೆ 'ಇಲ್ಲೊಂದು ಮಿಂಚು ಇದೆ' ಎನ್ನುತ್ತಿದ್ದರು!

  • ನಾನು, ಕುಂಟಿನಿ ರಾಮಕುಂಜ ಶಾಲೆಗೆ ಸ್ಪರ್ಧೆಯೊಂದಕ್ಕೆ ಹೋಗಿದ್ದೆವು. ಅಲ್ಲಿ ಅಪಘಾತ ಒಂದರ ಚಿತ್ರ ಕೊಟ್ಟು ಏನಾದ್ರೂ ಬರೀರಿ ಅಂತ ಹೇಳಿದರು. ಅಪಘಾತ ಸಂದರ್ಭದಲ್ಲಿ ಅಲ್ಲಿದ್ದವರ ಪರಿಸ್ಥಿತಿ ಹೇಗಿರಬಹುದು ಅಂತ ವಿವರಿಸಿ ನಾನು 3 ಪುಟದ ಕರುಣಾಜನಕ ಲೇಖನ ಬರೆದೆ. ಆದ್ರೆ ಈ ಪಾಪಿ ಕುಂಟಿನಿ ಏನು ಮಾಡಿದ ಗೊತ್ತಾ? "ಸಾವು ಚಾಚಿಕೊಡಿದೆ ರಸ್ತೆಯಂತೆ" ಅಂತ ಕವನ ಬರೆದು ಪ್ರೈಜು ಪಡೆದುಕೊಂಡು ಬಿಟ್ಟ. ಕೊನೆಗೆ ನನ್ನ ಮುಖ ನೋಡಲಾಗದೆ "ಅವನಿಗೊಂದು ಸಮಾಧಾನಕರ ಬಹುಮಾನ ಕೊಡಿ" ಅಂತ ಹೇಳಿ ಕಳಿಸಿದ್ದ!

  • ನಂತರ ನಾನು ಬೆಂಗಳೂರು ಸೇರಿಕೊಂಡೆ, ನವ್ಯರ ಅಭ್ಯಾಸಗಳನ್ನು ಕಲಿತುಕೊಂಡೆ. ಕುಂಟಿನಿ ಕೃಷಿ ಮಾಡುತ್ತಾ, ಪತ್ರಕರ್ತನಾಗಿ ಹಳ್ಳಿಯಲ್ಲೇ ಉಳಿದ. ಅದಕ್ಕೇ ನಾನು ಆತನಿಗೆ ಲಂಕೇಶ. ಆತ ನನ್ನ ಪಾಲಿನ ತೇಜಸ್ವಿ!

ಕಾಮೆಂಟ್‌ಗಳಿಲ್ಲ: