ಭಾನುವಾರ, ಅಕ್ಟೋಬರ್ 5, 2008

ವಿಧೇಯನಾಗಿ ಉಳಿದು ಹೋದ ಒಬ್ಬ ಸಾಮಾನ್ಯ ಮನುಷ್ಯನಮಗೆಲ್ಲಾ ರಾಜ್ ಕುಮಾರ್ ಇವತ್ತಿಗೂ ಇಷ್ಟವಾಗುವುದಕ್ಕೆ ಕಾರಣಗಳಿವೆ.

ನಾವ್ಯಾವತ್ತೂ ಆತನನ್ನು ಹೊರಗಿನವನು ಅಂತ ಪರಿಗಣಿಸಲೇ ಇಲ್ಲ. ಇವತ್ತಿಗೂ ಆ ರಾಜಕುಮಾರ ನಮ್ಮ ಮನೆಯವನೇ. ಅಕ್ಕರೆಯ ಅಣ್ಣ, ಒಲುಮೆಯ ಗಂಡ,ನಲ್ಮೆಯ ಗೆಳೆಯ, ವಿಧೇಯ ಮಗ, ಬುದ್ಧಿವಂತ, ಹೃದಯವಂತ ವ್ಯಕ್ತಿಯಾಗಿಯೇ ನಮ್ಮ ಭಾವಕೋಶದಲ್ಲಿ ಉಳಿದು ಬಿಟ್ಟಿದ್ದಾನೆ.

ಆತನ ಸಿನಿಮಾಗಳಿಂದ ನಾವು ಕಲಿತಿದ್ದನ್ನು ಮರೆಯಲು ಸಾಧ್ಯವೇ....?
ಅವರೊಂಥರಾ ನಮ್ಮೆಲ್ಲರ ಪ್ರೀತಿಯ ಮೇಷ್ಟ್ರು. ಅದೆಷ್ಟು ಬಾರಿ ತಿದ್ದಿ, ತೀಡಿದ್ದಾರೆ ಅಪ್ರತ್ಯಕ್ಷವಾಗಿ. ಅದಕ್ಕೇ ರಾಜ್ ಹೊರಗಿನವರಲ್ಲ. ನಮ್ಮ ಕುಟುಂಬದ ಸದಸ್ಯ ಎನ್ನಲು ಪ್ರತೀ ಬಾರಿ ಹೆಮ್ಮೆ ಎನಿಸುತ್ತದೆ.
ಈ ಭಾವನೆ ಕರ್ನಾಟಕದುದ್ದಕ್ಕೂ ಇದೆ. ತಮ್ಮ ಸರಳ, ಸಜ್ಜನ, ನಡೆ-ನುಡಿ, ಅಭಿನಯದ ಮೂಲಕ ಪ್ರೀತಿಯ,ಸಂವೇದನೆಯ ಕೋಟೆಯನ್ನು ನಮ್ಮೊಳಗೆ ಕಟ್ಟಿ ಹೋಗಿದ್ದಾರೆ ರಾಜ್. ಅಭಿಮಾನಿಗಳಿಗೆ ಆತ ನಟಸಾರ್ವಭೌಮ, ವರನಟ, ಕನ್ನಡ ಕಂಠೀರವ. ಆದರೆ ನಮ್ಮೆಲ್ಲರ ಪಾಲಿಗೆ ಆತ ಕೇವಲ ರಾಜಣ್ಣ. "ಅಭಿಮಾನಿ ದೇವರುಗಳೇ" ಎಂದು ಸಂಬೊಧಿಸುತ್ತಾ ವಿಧೇಯನಾಗಿ ಉಳಿದು ಹೋದ ಒಬ್ಬ ಸಾಮಾನ್ಯ ಮನುಷ್ಯ.


ಅತ್ಯಂತ ಹಿಂದುಳಿದ, ಬಡ, ರೈತಾಪಿ ಕುಟುಂಬದಿಂದ ಬಂದ ದೊಡ್ಡ ಗಾಜನೂರಿನ ಸಿಂಗಾನೆಲ್ಲೂರು ಪುಟ್ಟಸ್ವಾಮಯ್ಯನವರ ಮಗ ಮುತ್ತುರಾಜ್, ಯಾವ ಗಾಡ್ ಫಾದರುಗಳ ಹಂಗಿಲ್ಲದೆ ಕನ್ನಡಿಗರ ಕಣ್ಮಣಿಯಾಗಿ ಬೆಳೆದ ರೀತಿ ಕಣ್ಮನ ತಣಿಯುವಷ್ಟೇ ಅಪೂರ್ವ. ರಾಜ್ ಕುಮಾರ್ ಅಭಿನಯಿಸಿದಷ್ಟು ವೈವಿಧ್ಯಮಯ ಪಾತ್ರಗಳು ಬಹುಷಃ ಇನ್ಯಾವ ನಟನಿಗೂ ಒಲಿದಿಲ್ಲ. ಸಾಮಾಜಿಕ ಪಾತ್ರಗಳಿಗಿಂತ ಪೌರಾಣಿಕ, ಐತಿಹಾಸಿಕ ಪಾತ್ರಗಳಿಂದಲೇ ರಾಜ್ ಕುಮಾರ್ ಮನೆ-ಮನ ತಟ್ಟಿದವರು.
ಬಬ್ರುವಾಹನನ ಆ ಅಸ್ಖಲಿತ ಸಂಭಾಷಣೆ, ಆವೇಶ ಮರೆಯಲು ಸಾಧ್ಯವೇ?--"ಏನು ಪಾರ್ಥ, ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನ ಗೆಲ್ಲಲಾರೆ" ಎನ್ನುವ ಸಂಭಾಷಣೆ ರಾಜ್ ಬಾಯಿಂದ ಕೇಳಿದರೆ ಇವತ್ತಿಗೂ ರೋಮಾಂಚನ,ಮೈಯೆಲ್ಲ ಕಿವಿಯಾಗುತ್ತದೆ. ಅರ್ಜುನನ ಬಗ್ಗೆ ಅನುಮಾನಗಳೇಳುತ್ತವೆ. ಯಾವ ಪಾತ್ರ ಕೊಟ್ಟರೂ ಪರಕಾಯ ಪ್ರವೇಶವೇ. ಕನಕದಾಸ, ಪುರಂದರದಾಸ, ಪುಲಿಕೇಶಿ, ಕಾಳಿದಾಸ, ಮಯೂರ ,ಕೃಷ್ಣದೇವರಾಯ ಹೇಗಿದ್ದರೋ ಗೊತ್ತಿಲ್ಲ. ಆದರೆ ಅವರನ್ನೆಲ್ಲಾ ನಾವು ಸಾಕ್ಷಾತ್ ನೋಡುವಂತಾಗಿದ್ದು ರಾಜ್ ಕುಮಾರ್ ಮೂಲಕ."ಬಂಗಾರದ ಮನುಷ್ಯ" ರಾಜೀವನನ್ನು ಮರೆತೆನೆಂದರೂ ಮರೆಯಲಿ ಹ್ಯಾಂಗ?

ಇವತ್ತು ಚಲನಚಿತ್ರ ಎನ್ನುವುದು ಪಕ್ಕಾ ಉದ್ಯಮ. ವ್ಯಾಪಾರಿ ಮನಃಸ್ಥಿತಿ, ಲಾಭ-ನಷ್ಟಗಳ ಲೆಕ್ಕಾಚಾರಗಳೇ ಏಣಿಯ ಅಂತಿಮ ಮೆಟ್ಟಿಲುಗಳು. ಆದರೆ ಚಲನಚಿತ್ರ ಮಾಧ್ಯಮವನ್ನು ಸಾಂಸ್ಕೃತಿಕ ಮಾಧ್ಯಮವಾಗಿ ಜೀವಿತಾವಧಿವರೆಗೂ ಬೆಳೆಸಿದ, ಪೊರೆದುಕೊಂಡು ಬಂದವರಲ್ಲಿ ರಾಜ್ ಅಗ್ರಗಣ್ಯ. ಡಬ್ಬಿಂಗ್ ಹಾವಳಿ ತಪ್ಪಿಸಲು ಸ್ನೇಹಿತರ ಜೊತೆ ಸೇರಿಕೊಂಡು ನಿರ್ಮಿಸಿದ "ರಣಧೀರ ಕಂಠೀರವ" ಚಲನಚಿತ್ರ ರಾಜ್ ಕುಮಾರ್ ಅವರಿಗಿದ್ದ ಸಾಂಸ್ಕೃತಿಕ ಮಾಧ್ಯಮದೆಡೆಗಿನ ಕಾಳಜಿಯ ಮತ್ತೊಂದು ರೂಪ. ಅನ್ಯ ಭಾಷಾ ಚಿತ್ರಗಳಲ್ಲಿ ನಟಿಸುವುದಿಲ್ಲ ಎನ್ನುವ ತಮ್ಮ ನಿಲುವಿಗೆ ಬದ್ಧವಾಗಿದ್ದದ್ದು, ಇದೇ ಕಾರಣಕ್ಕಾಗಿ ಅಮಿತಾಭ್ "ಕೂಲಿ" ಚಿತ್ರದಲ್ಲೊಂದು ಪಾತ್ರ ನಿರ್ವಹಿಸಲು ವಿನಂತಿಸಿದಾಗ ತಿರಸ್ಕರಿಸಿದ್ದು....... ಗೋಕಾಕ್ ಚಳವಳಿ ರಾಜ್ ಕುಮಾರ್ ಪ್ರವೇಶದ ನಂತರ ಪಡೆದುಕೊಂಡ ಜನಬೆಂಬಲ, ಸ್ಪಂದನೆ ಅವರ ಸಿನಿಮಾಗಳಷ್ಟೇ ಅಪೂರ್ವ ದ್ರಶ್ಯಾವಳಿಗಳ ಸಂಕಲನ.

"ಯಾರೇ ಕೂಗಾಡಲಿ, ಊರೇ ಹೋರಾಡಲಿ" ಎಂದು ಹಾಡಲು ಶುರು ಮಾಡುತ್ತಾ, "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು", "ಜನರಿಂದ ನಾನು ಮೇಲೆ ಬಂದೆ" ಎನ್ನುತ್ತಾ ಹೊಸ ಸಂಕಲ್ಪಕ್ಕೆ, ದೀಕ್ಷೆಗೆ, ಬದ್ಧತೆಗೆ ಜನಸಾಮಾನ್ಯನನ್ನು ತೆರೆದುಕೊಳ್ಳುವಂತೆ ಮಾಡಿದ್ದು ನಮ್ಮ ರಾಜ್ ಕುಮಾರ್.
ಇವತ್ತಿಗೂ ಕೂಡಾ ಮುತ್ತುರಾಜನ "ರಾಜಕುಮಾರ" ಎನ್ನುವ ಚೇತನ ಅನೇಕರ ಬದುಕುಗಳನ್ನು ಕಟ್ಟಿಕೊಳ್ಳಲು ಸಹಾಯಮಾಡುತ್ತಿದೆ, ತಿದ್ದಿಕೊಳ್ಳಲು ನೆರವಾಗುತ್ತಿದೆ. ಕುಸಿದು ಬಿದ್ದ ಮನೆಯ ಒಂದೊಂದೇ ಇಟ್ಟಿಗೆ ಪೇರಿಸಲು ಸಹಾಯ ಮಾಡುತ್ತಿದೆ.

ಇದೆಲ್ಲವನ್ನು ಸಾಧ್ಯಮಾಡುವುದು ಮತ್ತದೇ ನಮ್ಮ ರಾಜ್ ಕುಮಾರ್ ಎಂಬ ಪ್ರೀತಿಯ ಮೇಷ್ಟ್ರು, ಅಕ್ಕರೆಯ ಅಣ್ಣ, ಒಲುಮೆಯ ಗಂಡ, ನಲ್ಮೆಯ ಗೆಳೆಯ, ವಿಧೇಯ ಮಗ, ಬುದ್ಧಿವಂತ, ಹೃದಯವಂತ .......

ಎಲ್ಲಕ್ಕಿಂತ ಹೆಚ್ಚಾಗಿ ವಿಧೇಯನಾಗಿ ಉಳಿದು ಹೋಗುವ ಮನುಷ್ಯ.


ಚಿತ್ರಕೃಪೆ :ಪಿಕಾಸ ವೆಬ್ ಆಲ್ಬಮ್

1 ಕಾಮೆಂಟ್‌:

Every Heart Beat Says ಹೇಳಿದರು...

The useage of words such as from the "bag of feeling" and few more really excellent, they appeal more and fit to the content.
But i have one more reservation about the article... why this article now. Is there any serious thing which made u write.
The amount of research that has gone behind this is huge and that is clearly seen in the write up.
well done