ಶುಕ್ರವಾರ, ಜೂನ್ 6, 2008

ನೀರವ ರಾತ್ರಿಯಲ್ಲೊಂದು 'ಅಲೆ'ದಾಟ(ಒಂದು ಲಹರಿ)

ಯಾವ ದುಗುಡಗಳು ಬೇಡ. ನಿರುಮ್ಮಳವಾಗಬೇಕು. ಒಂಟಿಯಾಗಿ ನಡೆಯಬೇಕು, ಅಲೆಯಬೇಕು-ಬೆಳದಿಂಗಳಿಗೆ ಮುಖ ಮಾಡಿಕೊಂಡು. ಕಿರ ಕಿರ ಎನ್ನುವ ರಾತ್ರಿಯ ನಿಶಾಚಾರಿಕೆಯಲ್ಲೂ ಏನೋ ನಿಗೂಢ ಆನಂದವಿದೆ. ದಣಿದ ಜೀವಗಳಿಗೆ ನಿದ್ರೆಯಲ್ಲಿ ಬೆಳಕು ಕೊಡುತ್ತದಂತೆ ರಾತ್ರಿ. ಆದರೆ ನಾನು ಹುಡುಕ ಹೊರಟಿರುವುದು ನೀರವ ಮೌನವನ್ನ, ಗಾಢ ಕತ್ತಲೆಯನ್ನ. ಬದುಕಿನ ಎಲ್ಲಾ ಜಂಜಡಗಳನ್ನು ಕಳಚಿ ನಡೆಯಬೇಕು. ಬೆತ್ತಲೆಯಾಗಿ ಹಾದಿ ಸವೆಸಬೇಕು. ರಾತ್ರಿಗಳಲ್ಲಿ ದಾರಿ ಕಾಣುತ್ತದೋ ಇಲ್ಲವೋ ಆ ಮಾತು ಬೇರೆ.

ಎಲ್ಲದರಿಂದ ಮುಕ್ತಿ ಬೇಕು. ಇಷ್ಟಕ್ಕೂ ಎಲ್ಲವನ್ನೂ ನೇರವಾಗಿ ಹೇಳಿಬಿಡಬೇಕಾ?ಹಾಗಾದರೆ ಭಾವನೆಗಳಿಗೇನು ಅರ್ಥ? ಹೇಳಿಕೊಂಡು ನಿರಾಳವಾಗುವುದು ಸ್ವಾರ್ಥವಲ್ಲದೇ ಮತ್ತಿನ್ನೇನು? ಇದ್ಯಾವುದರ ಉಸಾಬರಿಯೇ ಬೇಡ. ಕಾಲುಗಳು ಸವೆಯುವವರೆಗೆ ನಡೆಯಬೇಕು. ಅದೂ ರಾತ್ರಿಗಳಲ್ಲಿ. ರೂಮು ಬಿಟ್ಟು, ಮನೆ ಬಿಟ್ಟು. ಡಾಂಬಾರು ರಸ್ತೆ, ಕೆಸರು ನೆಲ ಎಲ್ಲಾ ದಾಟಿ ನಡೆಯಬೇಕು. ಗಮ್ಯವಿಲ್ಲದೇ ನಡೆಯಬೇಕು. ಇಷ್ಟಕ್ಕೂ ಇಂಥ ಕಡೆಗೇ ಹೋಗಬೇಕು ಎಂಬ ಹಠ ನನಗೇಕೆ? ದಾರಿ ಎಲ್ಲಿಗೆ ಒಯ್ಯುತ್ತದೋ ಅಲ್ಲಿಗೆ ನಡೆದರೆ ಸಾಕು. ಯಾವುದೋ ತಿರುವು, ಮತ್ತ್ಯಾವುದೋ ಬೆಟ್ಟ ಸಿಗಬಹುದು. ನದಿ ಎದುರಾಗಬಹುದು. ಎಲ್ಲವನ್ನೂ ದಾಟಲು ನಡಿಗೆಗೆ ಮಾತ್ರ ಸಾಧ್ಯ. ಬದುಕ ಕಲಿಸುವುದೂ ಅದೇ, ನೋವ ಮರೆಸುವುದೂ ಅದೇ!

ಇದೆಲ್ಲಾ ಕತ್ತಲಲ್ಲೇ ಆಗಬೇಕು. ಬೆಳಕಿಗೆ ಕತ್ತಲಿಗಿರುವಷ್ಟು ನಿಯತ್ತಿಲ್ಲ. ಅದು ಮೌನಿಯೂ ಅಲ್ಲ. ಮೌನಿಯನ್ನು ಕಂಡರೆ ಆಗುವುದೂ ಇಲ್ಲ. ಆದರೆ ಕತ್ತಲು ಹಾಗಲ್ಲ. ಅರಳಲು ಕಲಿಸುತ್ತದೆ, ಮರಳಲು ಕಲಿಸುತ್ತದೆ. ಕತ್ತಲು ಕೊಡುವ ಬದ್ಧತೆಯನ್ನು ಬೆಳಕು ಕೊಡುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕತ್ತಲಿಗೆ ನನ್ನ ಪರಿಚಯವೇ ಇಲ್ಲ. ಅಲ್ಲಿ ಕಳೆದು ಹೋದರೂ, ಉಳಿದು ಹೋದರೂ ಚಿಂತೆಯಿಲ್ಲ. ನನ್ನೊಳಗಿನ ಕತ್ತಲು ಕೂಡಾ ಹೊರಗಿನ ಕತ್ತಲೊಂದಿಗೆ ಕೂಡಿಕೊಂಡರೆ ಸಾಕು. ಮನಸ್ಸು ಕಪಟಿಯಾಗುವುದಿಲ್ಲ.ಇಂಥದ್ದೇ ಬೇಕೆಂದು ಬೇಡುವುದಿಲ್ಲ! ಮಧ್ಯದಲ್ಲೆಲ್ಲೋ ಎಡವಿದರೆ ನಗುವುದಿಲ್ಲ. ಮುಂದಿನ ಹೆಜ್ಜೆಗಳಿಗೆ ಭಯ, ಭರವಸೆ ಎರಡನ್ನೂ ಕೊಡುತ್ತದೆ. ಹಿಂದೆ ತಿರುಗಿದರೆ ಕತ್ತಲು ಮಾತ್ರ ಕಾಣುತ್ತದೆ. ಬೆಳಕಿಗದು ಸಾಧ್ಯವಿಲ್ಲ.

ಇಷ್ಟಕ್ಕೂ ನಡೆಯುವುದು ಗೊತ್ತಿದ್ದರೆ ಸಾಕು. ಬುಡ್ಡಿ ಬೆಳಕು ಬೇಕಿಲ್ಲ. ನಡೆಯುತ್ತಾ ನಡೆಯುತ್ತಾ ಬೆಳಗಾದರೆ ಅಲ್ಲೇ ಕಲ್ಲಿನಂತೆ ಸ್ಥಂಭಿಸಿದರಾಯಿತು. ಸುತ್ತಮುತ್ತಲಿನವರೆಲ್ಲಾ ಓಡಾಡಲಿ, ಕಿರುಚಲಿ, ಡಾಲರುಗಟ್ಟಲೆ ಸಂಪಾದಿಸಲಿ, ನೇಜಿ ನಡಲಿ, ಟ್ರಾಫಿಕ್ಕು ಜಾಮಿನಲ್ಲಿ ಬೆವರು ಒರೆಸಿಕೊಳ್ಳಲಿ, ಪ್ರೀತಿಸಲಿ-ಹೇಳಲಾಗದೇ ಒದ್ದಾಡಲಿ. ನನಗೆ ಮತ್ತೆ ಕತ್ತಲಾಗುವುದು ಮಾತ್ರ ಮುಖ್ಯ. ದಿನಚರಿ ಮತ್ತೆ ಹುಟ್ಟಿಕೊಳ್ಳುವುದು ರಾತ್ರಿಯ ಮೊದಲ ಸೆಕೆಂಡಿನಲ್ಲೇ. ನಡೆಯಲು ಶುರುಮಾಡಲು ಅಷ್ಟು ಸಾಕು. ಜೊತೆಗೆ ಯಾರು ಬಂದರೇನು?ಬರದೇ ಕೈ ಚೆಲ್ಲಿ ಕುಳಿತರೇನು?

ನನಗೆ ಗೊತ್ತಿರುವುದು ಒಂದೇ-ಒಂಟಿಯಾಗಿ ಹೆಜ್ಜೆ ಹಾಕುವುದು ಮಾತ್ರ!