ಭಾನುವಾರ, ಏಪ್ರಿಲ್ 5, 2009

ಬದುಕಿನ ಫುಟ್ಪಾತಿನಲ್ಲಿ ಭರವಸೆಯ ರಂಗೋಲಿ



ಚಿತ್ರ: "ದಿ ವೈಟ್ ಬಲೂನ್" 
                     ಭಾಷೆ: ಪರ್ಶಿಯನ್                        
ನಿರ್ದೇಶಕ: ಜಾಫರ್ ಪನಾಹಿ
ಅವಧಿ: 85 ನಿಮಿಷ

ರಾನ್ ಸಿನಿಮಾ ಅಂದ ತಕ್ಷಣ ಈಗಿನವರಿಗೆ ನೆನಪಾಗುವ ಹೆಸರುಗಳು ಮುಖ್ಯವಾಗಿ ಮೂರು. ಮೊಹ್ಸೀನ್ ಮಕ್ಮಲ್ಬಫ್, ಮಜಿದ್ ಮಜಿದಿ ಮತ್ತು ಜಾಫರ್ ಪನಾಹಿ. ಇವರೆಲ್ಲ ಹೊಸ ಅಲೆಯ ಇರಾನಿ ಸಿನಿಮಾ ನಿರ್ದೇಶನದ ಮೂಲಕ ಜಗತ್ತಿಗೆ ಹೆಚ್ಚು ಪರಿಚಿತರಾದವರು. 
ದರಿಯಸ್ ಮೆಹ್ರ್ಜುಯಿ 1969ರಲ್ಲಿ "ದಿ ಕೌ" ಸಿನಿಮಾ ನಿರ್ದೇಶಿಸುವುದರೊಂದಿಗೆ ಹೊಸ ಅಲೆಯ ಚಿತ್ರಗಳು ಇರಾನಿನಲ್ಲಿ ಪ್ರಾರಂಭವಾದವು.  ಈ ರೀತಿಯ ಸಿನಿಮಾ ನಿರ್ದೇಶಿಸುವವರ ಪಟ್ಟಿ ದೊಡ್ಡದಿದೆ. ನಿರ್ದೇಶಕ ಅಬ್ಬಾಸ್ ಕಿಯಾರೊಸ್ತಮಿ ಕೂಡಾ ದೊಡ್ಡ ಹೆಸರು. ಇವರೆಲ್ಲರ ನಿರ್ದೇಶನದ ಸಿನಿಮಾಗಳು ಜಗತ್ತಿಗೆ ಹೆಚ್ಚು ಪರಿಚಿತ.

ಇರಾನಿ ಸಿನಿಮಾಗಳೆಂದರೆ ಬದುಕಿನ ಸ್ಪಂದನೆಗಳ ಭಾವಕೋಶ.
ಅಸಹಾಯಕ ಅಪ್ಪ, ಕನಸು ಕಂಗಳ ಮುದ್ದು ಪುಟಾಣಿಗಳು....
ಜೊತೆ ಬಿಡಲೊಲ್ಲದ ಬಡತನ, ಅನಕ್ಷರತೆ, ಧಾರ್ಮಿಕ ಕಟ್ಟಳೆಗಳು. ಇದೆಲ್ಲಾ ಒಟ್ಟಿಗಿದ್ದರೂ ಅವರ ಸಿನಿಮಾ ಜಗತ್ತಿನ ಪಾತ್ರಗಳಿಗೆ ಬದುಕಲು ಕಲಿಯುವ ಉತ್ಸಾಹವಿದೆ. ಬದುಕಿನ ಸಣ್ಣ ಸಣ್ಣ ಖುಷಿಗಳೆಡೆಗೆ ಬೊಗಸೆ ತುಂಬುವಷ್ಟು ಅಕ್ಕರೆಯಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಪ್ರತಿ ಕ್ಷಣವನ್ನು ಆನಂದಿಸುವ, ಅದರೊಳಗೆ ಕರಗಿ ಒಂದಾಗಿ ವಾಸ್ತವವನ್ನು ಎದುರಿಸುವ ಛಲವಿದೆ. ಜಾಫರ್ ಪನಾಹಿ ನಿರ್ದೇಶನದ "ದಿ ವೈಟ್ ಬಲೂನ್" ಇಂತಹ ಸಂವೇದನೆಗಳನ್ನು ಒಳಗೊಂಡ ಸಿನಿಮಾ.

ಜಾಫರ್ ಪನಾಹಿ ಸಿನಿಮಾ ನಿರ್ದೇಶನದ ಜೊತೆ ಸ್ಕ್ರಿಪ್ಟ್ ಬರಹಗಾರನಾಗಿ, ಸಂಕಲನಕಾರನಾಗಿ ಛಾಪು ಮೂಡಿಸಿದಾತ. ಇರಾನಿ ಹೆಣ್ಮಕ್ಕಳ ಬವಣೆಯ ಕುರಿತು ಈತ ನಿರ್ದೇಶಿಸಿದ "ದಿ ಸರ್ಕಲ್" ಮತ್ತು "ಕ್ರಿಮ್ಸನ್ ಗೋಲ್ಡ್" ಚಲನಚಿತ್ರಗಳು ಇರಾನ್ ದೇಶದಲ್ಲೇ ಬ್ಯಾನ್ ಆಗಿವೆ. ಆತ ನಿರ್ದೇಶಿಸಿದ ಮೊದಲ ಸಿನಿಮಾ-"ದಿ ವೈಟ್ ಬಲೂನ್". ಈ ಸಿನಿಮಾ ನಿರ್ಮಾಣವಾದದ್ದು 1995ರಲ್ಲಿ. ದಿ ಗಾರ್ಡಿಯನ್ ಪತ್ರಿಕೆ ಹೆಸರಿಸಿದ ವಿಶ್ವದ 50 ಅತ್ಯುತ್ತಮ ಕೌಟುಂಬಿಕ ಸಿನಿಮಾಗಳಲ್ಲಿ "ದಿ  ವೈಟ್ ಬಲೂನ್" ಹೆಸರೂ ಸೇರಿದೆ.

ಏಳು ವರ್ಷದ ಪುಟಾಣಿ ರಜಿಯಾ ಹೊಸ ವರ್ಷಕ್ಕೆ ಗೋಲ್ಡ್ ಫಿಶ್ ತರಲು ಮಾರ್ಕೆಟಿಗೆ ಹೋಗುವುದು ಸಿನಿಮಾದ ಕತೆ.
ಮನೆಯಲ್ಲಿ ಎದುರಿನ ಕೊಳದಲ್ಲಿ ಮೀನುಗಳಿದ್ದರೂ ರಜಿಯಾಗೆ ಅದರಲ್ಲಿ ಅಷ್ಟು ಆಸಕ್ತಿ ಇಲ್ಲ. ದಪ್ಪಗೆ ಇರುವ ಗೋಲ್ಡ್ ಫಿಶ್ ನೀರಲ್ಲಿ ಚಲಿಸುವಾಗ ಡ್ಯಾನ್ಸ್ ಮಾಡಿದಂತೆ ಕಾಣುವುದರಿಂದ ರಜಿಯಾಗೆ ಅದೇ ಇಷ್ಟ. ಹೊಸ ವರ್ಷಕ್ಕೆ ಅದೇ ಬೇಕು ಅನ್ನುವ ಹಟ. ಅದಕ್ಕಾಗಿ ಅಮ್ಮನಿಗೆ ಬೆಣ್ಣೆ ಹಚ್ಚುವ ಕೆಲಸ. ಮೀನು 100 ಟೊಮನ್ನಷ್ಟು ದುಬಾರಿ ಅಂತ ತಿಳಿದಾಗ ಅಮ್ಮ ಹಣ ಕೊಡಲು ಒಪ್ಪುವುದಿಲ್ಲ. ರಜಿಯಾಳಿಗೆ ಗೋಲ್ಡ್ ಫಿಶ್ ಬೇಕೇ ಬೇಕು. ಅಮ್ಮನನ್ನು ಮನವೊಲಿಸುವ ಚಾಣಾಕ್ಷತೆಯೆಲ್ಲಾ ಖಾಲಿಯಾಗುವ ಹೊತ್ತಿಗೆ ಆಕೆಯ ಕಣ್ಣಲ್ಲಿ ಹನಿ ನೀರ ತೊರೆ. ಆಗ ಸಹಾಯಕ್ಕೆ ಬರುವುದು ಆಕೆಯ ಅಣ್ಣ ಅಲಿ. ಆತ ಅಮ್ಮನನ್ನು ಮನವೊಲಿಸಿ ಹಣ ಪಡೆಯುತ್ತಾನೆ. ತಂಗಿಯ ಮೊಗದಲ್ಲಿ ನಿರ್ಮಲ ನಗೆಯ ಕಡಲು.

ನಿರ್ದೇಶಕ ಜಾಫರ್ ಪನಾಹಿ

ಹಾಗೆ ಅಮ್ಮನಿಂದ 500 ಟೊಮನ್ ನೋಟನ್ನು ಪಡೆದು ಮೀನು ತರಲು ಓಡುವ ರಜಿಯಾ ದಾರಿಯಲ್ಲಿ ಹಣವನ್ನು ಕಳೆದುಕೊಳ್ಳುತ್ತಾಳೆ. ಹುಡುಕುತ್ತಾ ಮತ್ತೆ ಹಿಂದಕ್ಕೆ ಹೋದಾಗ ಅಂಗಡಿಯೊಂದರ ನೆಲಮಾಳಿಗೆಯಲ್ಲಿ ನೋಟು ಬಿದ್ದಿರುವುದು ಕಿಟಕಿಯಾಕಾರದ ಕಬ್ಬಿಣದ ಸರಳಿನ ಸಂದಿಯಿಂದ ಕಾಣುತ್ತದೆ. ಅಂಗಡಿಯಾತ ಹೊಸ ವರ್ಷಕ್ಕೆ ಊರಿಗೆ ಹೋಗಿರುವುದರಿಂದ ಹಿಂದಿರುಗುವುದು ಒಂದು ವಾರದ ನಂತರವೇ ಎನ್ನುತ್ತಾನೆ ಪಕ್ಕದ ಅಂಗಡಿಯ ಟೈಲರ್.
ರಜಿಯಾಳ ಮುಖ ಬಾಡುತ್ತದೆ. ಅಸಹಾಯಕತೆ ಕಾಡುತ್ತದೆ. 

ದಾರಿ ಕಾಣದೆ ಅಂಗಡಿಯ ಮುಂದೆ ರಜಿಯಾ ಕುಳಿತಿರುವಾಗ ಸೈನಿಕನೊಬ್ಬ ಬಂದು ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ಆತನಿಗೆ ಇಬ್ಬರು ತಂಗಿಯಂದಿರು. ಆಕೆಯ ಜೊತೆ ಅಕ್ಕರೆಯಿಂದ ಮಾತಾಡುತ್ತಾ ಹೋಗುತ್ತಾನೆ. ರಜಿಯಾಳ 
ಕಣ್ಣೆದುರು ದುಡ್ಡಿದ್ದರೂ ಕೈಗೆ ಸಿಕ್ಕದ ಆಸೆಪಟ್ಟ ಮೀನು, ಮನೆಗೆ ಹೋಗಲು ದುಡ್ಡಿಲ್ಲದಿದ್ದರೂ ರಜಿಯಾಳಲ್ಲಿ ತನ್ನ ಪ್ರೀತಿಯ ಐದು ವರ್ಷದ ಪುಟ್ಟ ತಂಗಿಯನ್ನು ಕಂಡುಕೊಳ್ಳುವ ಸೈನಿಕನ ಸಮಾಧಾನದಲ್ಲಿ, ಅಸಹಾಯಕತೆಯಲ್ಲೇ ಬದುಕುವ ದಾರಿ ಹುಡುಕುವ ಕಾತರವಿದೆ. ಸಿನಿಮಾದ ಮಹತ್ವದ ಸನ್ನಿವೇಶವಿದು.
ಕೊನೆಗೆ ಆಕೆಯನ್ನು ಹುಡುಕುತ್ತಾ ಬರುವ ಅಣ್ಣ ಅಲಿಯ ಜೊತೆ ಸೇರಿ ಹಣವನ್ನು ತೆಗೆಯಲು ಹರಸಾಹಸ ಪಡುತ್ತಾಳೆ ರಜಿಯಾ.
ನಾನಾ ಕಸರತ್ತುಗಳ ನಂತರ ಬಲೂನು ಮಾರುವ ಹುಡುಗನ ಕೋಲಿಗೆ ಚ್ಯೂಯಿಂಗಮ್ ಅಂಟಿಸಿ ನೋಟನ್ನು ಹೊರ ತೆಗೆಯುವಲ್ಲಿ ಕೊನೆಗೂ ಯಶಸ್ವಿಯಾಗುತ್ತಾರೆ ಅಣ್ಣ-ತಂಗಿ.

ರಜಿಯಾಳ ಪುಟ್ಟ ಆಸೆ ನಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತದೆ. ದೊಡ್ಡವರಾಗುತ್ತಾ ನಾವೇ ಬತ್ತಿಸಿಕೊಂಡ ಸಣ್ಣ ಪುಟ್ಟ ಸಂತೋಷಗಳ ಚಿಲುಮೆಗೆ ಜೀವ ಬಂದಂತಾಗುತ್ತದೆ.

6 ಕಾಮೆಂಟ್‌ಗಳು:

shivu.k ಹೇಳಿದರು...

ಕಾರ್ತಿಕ್

ಎಕ್ಸಲೆಂಟ್ ರಿವ್ಯೂ.....
ನಾನು ಈ ನಿರ್ದೇಶಕನ ಸಿನಿಮಾ ನೋಡಿಲ್ಲ...ಈತನ ಎಲ್ಲಾ ಸಿನಿಮಾಗಳನ್ನು ನೋಡಬೇಕೆನ್ನುವ ಆಸೆ...ಹುಡುಕುತ್ತಿದ್ದೇನೆ...

ಚಂದ್ರಕಾಂತ ಎಸ್ ಹೇಳಿದರು...

ಕಾರ್ತಿಕ್

ಈ ದಿನ ಬೆಳಿಗ್ಗೆಯಷ್ಟೇ ನಿಮ್ಮ ಈ ಲೇಖನವನ್ನು ಕನ್ನಡಪ್ರಭದಲ್ಲಿ ನೋಡಿದೆ. ಬಹಳ ಚೆನ್ನಾಗಿ ಚಿತ್ರದ ಪರಿಚಯ ಮಾಡಿಕೊಟ್ಟಿರುವಿರಿ

ಮಾ.ಸು.ಮಂಜುನಾಥ ಹೇಳಿದರು...

ನಿನ್ನೆಯಷ್ಟೆ ಈ ಸಿನಿಮಾವನ್ನ ವರ್ಲ್ಡ್ ಮೂವಿಸ್ ನಲ್ಲಿ ಈ ಸಿನಿಮಾ ನೋಡಿದೆ. ಆ ಪುಟ್ಟ ಹುಡುಗಿ ಮತ್ತು ಆಕೆಯ ಅಣ್ಣನ ಪಾತ್ರ ತುಂಬಾ ಚೆನ್ನಾಗಿದೆ, ಆ ಬಲೂನ್ ಹುಡುಗ ಆ ಪುಟ್ಟ ಜೀವಗಳ ಅಸಹಾಯಕತೆಗೆ ಮಿಡಿಯುವ ಏಕೈಕ ವ್ಯಕ್ತಿಯಾಗಿ ಇಷ್ಟವಾಗುತ್ತಾನೆ. ನನಗೆ ತುಂಬಾ ಇಷ್ಟವಾದ ಸಿನಿಮಾ ಇದು.ಧನ್ಯವಾದಗಳು ಕಾರ್ತಿಕ್.

sunaath ಹೇಳಿದರು...

ಒಂದು ಉತ್ತಮ ಸಿನೆಮಾದ ಪರಿಚಯ ಮಾಡಿಕೊಟ್ಟದ್ದಕ್ಕಾಗಿ ಧನ್ಯವಾದಗಳು

ಗಿರಿ ಹೇಳಿದರು...

karthik,
nice work...good review...
thanks for a good article, n good constructive critics.

-giri

Prasad Shetty ಹೇಳಿದರು...

I dont miss this perticular movie whenever it telecast in UTV world movies. Very well said about the Movie.