ಶುಕ್ರವಾರ, ಮಾರ್ಚ್ 27, 2009

ಅಂಡರ್ ಪಾಸ್ ಬಯಲಾಟ

ವ್ಯಾನು ಬಂತು.
 
ಕೆಳಗಿಳಿದ ಪೋಲೀಸರು ಗಾಂಧೀನಗರದಿಂದ ಮೆಜೆಸ್ಟಿಕ್ಕಿಗೆ ಹೋಗುವ ಅಂಡರ್ ಪಾಸ್ ದಾರಿಯತ್ತ ನಡೆಯುತ್ತಿದ್ದಾರೆ. ಆ ದಾರಿಯಲ್ಲಿ ನೀಲಿ, ಕಪ್ಪು ಟರ್ಪಲ್ಲಿನ ಮೇಲೆ ಆಟಿಕೆ, ಗುಳಿಗೆ, ಸೊಳ್ಳೆ ಕೊಲ್ಲುವ ಎಲೆಕ್ಟ್ರಿಕ್ಕು ಬ್ಯಾಟು, ಇಪ್ಪತ್ತೈದು ರೂಪಾಯಿಗೆ ಶರ್ಟು, ಕಲರ್ ಕಲರ್ ಪ್ಲಾಸ್ಟಿಕ್ ಹೂವಿನ ಕುಂಡ ಮಾರುವವನು.......ಅನಾಮಿಕ ನಾಗರೀಕರ ದೊಡ್ಡ ಪಡೆಯಿದೆ.

ಪೋಲೀಸರು ಬರುತ್ತಿರುವುದನ್ನು ಕಂಡ ಕೂಡಲೇ ಅಂಡರ್ ಪಾಸಲ್ಲೇ ಇರುವ ಸಣ್ಣ ಕೋಣೆಯ ಬಾಗಿಲು ತೆಗೆಯಲು ಒದ್ದಾಡುತ್ತಿದ್ದಾನೆ ಮೀಸೆ ಚಿಗುರಿದ ಹುಡುಗ.  ಮತ್ತೊಬ್ಬ "ಬೇಗ ತೆಗಿ ಮಚ್ಚಾ" ಎಂದು ಕೂಗುತ್ತಿದ್ದಾನೆ. ಬಾಗಿಲು ತೆರೆಯುತ್ತದೆ. ಅವಸರದಿಂದ ಟರ್ಪಲ್ಲಿನ ಮೇಲೆ ಹಾಕಿರುವ ವಸ್ತುಗಳನ್ನೆಲ್ಲ ಒಂದೇ ಬಾರಿ ಎಳೆಯುತ್ತಿದ್ದಾರೆ ಅವರಿಬ್ಬರೂ.  ಹಾಗೆ ಎಳೆಯುವಾಗ ಒಂದೇ ಒಂದು ಆಟಿಕೆ, ಕಲರ್ ಕಲರ್ ಶರ್ಟು ಹೊರಗೆ ಬೀಳದಿರುವುದರ ಮೂಲಕ ಅವರ ಚಾಕಚಕ್ಯತೆ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೋಗುವವರಿಗೆ, ಅಲ್ಲಿಂದ ಹಿಂದಿರುಗಿ ಗಾಂಧೀನಗರ, ನ್ಯಾಶನಲ್ ಮಾರ್ಕೆಟಿನ ಕಡೆಗೆ ಹೊಗುವವರಿಗೆ ಕಾಣಿಸುತ್ತದೆ. ಆ ನಿಯಮಿತ ಸಮಯದಲ್ಲಿ ಮತ್ತೆ ಕೆಲವರಿಗೆ ತಮ್ಮ ಟರ್ಪಲನ್ನು ಎತ್ತಲು ಸಾಧ್ಯವಾಗುತ್ತಿಲ್ಲ ಎಂಬ ಕಳವಳ.

ವ್ಯಾನಿನಿಂದ ಇಳಿದ ಸಿಬ್ಬಂದಿಗೆ ಅಲ್ಲಿ ಅರೆ-ಬರೆ ಹರಡಿಕೊಂಡ ನಾಲ್ಕಾರು ಮಂದಿ ಗಂಟು ಮೂಟೆ ಕಟ್ಟುತ್ತಿರುವುದು ಕಣ್ಣಿಗೆ ಬಿದ್ದಿದೆ. ಅವರಿಗೆಲ್ಲ ವಾರ್ನ್ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ತಮ್ಮ ವಸ್ತುಗಳೊಂದಿಗೆ ಓಡಿ ಕೆಲವು ನಿಮಿಷಗಳಾಗಿದೆ. ಆಗಲೇ ಇಡೀ ಅಂಡರ್ ಪಾಸ್ ಟರ್ಪಲ್ಲಿನ ಮೇಲೆ ಮಾರುವ ಅಂಗಡಿಗಳಿಲ್ಲದೆ ಬಿಕೋ ಎನ್ನುತ್ತಿದೆ. ಕಪಾಲಿ, ತ್ರಿಭುವನ್ ಸಿನಿಮಾ ಥಿಯೇಟರ್ಗಳು ಅದೇ ಸಮಯಕ್ಕೆ ಮ್ಯಾಟನಿ ಶೋ ಬಿಟ್ಟಿರುವುದರಿಂದ ಅಂಡರ್ಪಾಸಲ್ಲಿ ವ್ಯಾಪಾರ ಮಾಡುತ್ತಿದ್ದ ಜಾಗದಲ್ಲಿ ಜನ ತುಂಬುತ್ತಿದ್ದಾರೆ. ಟರ್ಪಲ್ಲಿನ ಅಂಗಡಿ ಹರಡಿಕೊಂಡ ಜಾಗದಲ್ಲಿ ಕಿಲೋ ಮೀಟರ್ ವೇಗದ ಅವಸರವಿರುವವರಂತೆ ಹೆಜ್ಜೆ ಹಾಕುವ ಜನರ ಕಾಲು, ಚಪ್ಪಲಿಯ ದೊರಗು ಶಬ್ದ ತುಂಬುತ್ತಿದೆ.
ಪೋಲೀಸರು ಮತ್ತೆ ವ್ಯಾನಿನ ಕಡೆ ನಡೆಯುತ್ತಿದ್ದಾರೆ.

ಮೆಲ್ಲಗೆ ಅಂಡರ್ ಪಾಸಿನ ರೂಮಿನ ಅರೆ ಮುಚ್ಚಿದ ಬಾಗಿಲು ತೆರೆದುಕೊಳ್ಳುತ್ತದೆ. 
ಟರ್ಪಲ್ಲಿನ ಅಂಗಡಿ ಮಂದಿ ಮತ್ತೆ ಯಥಾ ಸ್ಥಳದತ್ತ ಹಿಂದಿರುಗುತ್ತಿದ್ದಾರೆ. ಅಂಡರ್ ಪಾಸ್ ಒಳಹೋಗುವ ಮೆಟ್ಟಿಲ ಹತ್ತಿರ ಟರ್ಪಲಿನ ಮೇಲೆ ಐದು- ಹತ್ತು ರುಪಾಯಿಗೆ ಬೆರಕೆ ವಸ್ತುಗಳನ್ನು ಮಾರುವ ಒಬ್ಬನನ್ನು ಪೋಲೀಸ್ ಪೇದೆ ಹಿಡಿದಿದ್ದಾನೆ. ಅವನ ಪಕ್ಕದವನತ್ತ ಗುರ್ರ್ ಎನ್ನುತ್ತಿದ್ದಾನೆ. ನಾಲ್ಕೈದು ಅಂಗಡಿ ಹಾಕುವಷ್ಟು ದೂರದಲ್ಲಿ ವ್ಯಕ್ತಿಯೊಬ್ಬ ಪ್ರತೀ ಟರ್ಪಲು ಹಾಸಿದ ಅಂಗಡಿಯವನಿಂದ ಹತ್ಹತ್ತು ರುಪಾಯಿ ವಸೂಲು ಮಾಡುತ್ತಿದ್ದಾನೆ. ಎಲ್ಲರಿಂದ ವಂತಿಗೆ ಸಂಗ್ರಹಿಸಿ ಅವನು ಪೋಲೀಸ್ ಪೇದೆಯತ್ತ ನಡೆಯುತ್ತಿದ್ದಾನೆ. ನಿತ್ಯ ನಡೆದುಕೊಂಡು ಹೋಗುವವರಿಗೆ ಅದು ಹಳಸಲು ಇಮೇಜು. ಅದಾಗ ತಾನೇ ಬೆಂಗಳೂರಿಗೆ ಬಂದ ಹಳ್ಳಿ ಹುಡುಗನಿಗೆ ಇದನ್ನೆಲ್ಲಾ ತೋರಿಸುತ್ತಾನೆ ಗೆಳೆಯ. ತನ್ನೂರಿನ ಬಯಲಾಟದ ಸಂದರ್ಭದಲ್ಲಿ ಕಂಡ ಇದಕ್ಕಿಂತ ಹೊರತಾದ ಬಣ್ಣ ಬಣ್ಣದ ಇಮೇಜು ನೆನಪಿಗೆ ಬರುತ್ತದೆ.

ತನ್ನ ಜೊತೆಗಿರುವ ಗೆಳೆಯ ಇದನ್ನೆಲ್ಲಾ ಸಿನಿಮಾದ ಸನ್ನಿವೇಶ ಎಂದು ವಿವರಿಸುತ್ತಾ ಮೆಜೆಸ್ಟಿಕ್ ತಲುಪಲು ಅಂಡರ್ ಪಾಸಿನ ಮೆಟ್ಟಿಲು ಹತ್ತುತ್ತಾನೆ. ಹತ್ತುವಾಗ ಮತ್ತೆ ತುಂಬಿರುವ ಅಂಡರ್ ಪಾಸಿನ ಜಗಲಿ, ಅದರಲ್ಲಿ ಅದಮ್ಯ ಗುರಿ ಇರುವವರಂತೆ ವೇಗವಾಗಿ ನಡೆಯುವವರ ಜೊತೆ ಚೌಕಾಸಿ ವ್ಯಾಪಾರ ಮಾಡುವ ಪರ್ಟಲ್ಲಿನ ಅಂಗಡಿಯ ಅನಾಮಿಕ ನಾಗರೀಕರನ್ನು ಕಂಡಾಗ ತನ್ನ ಬದುಕಿನ ಮೇಲೆ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತದೆ.

ಬೆಂಗಳೂರಿನಂತಹ ನಗರದೊಳಗೆ ಬದುಕಬೇಕು ಅಂತ ಅನ್ನಿಸುತ್ತದೆ!!!

 

6 ಕಾಮೆಂಟ್‌ಗಳು:

shivu.k ಹೇಳಿದರು...

ಕಾರ್ತಿಕ್..

ಕ್ಯಾಮೆರಾ ಕಣ್ಣು ನಿಮ್ಮದು....good keep it up!

ಅನಾಮಧೇಯ ಹೇಳಿದರು...

yee Bayalata da sutradhara yaru?

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ಜಯಂತರ ಬೊಗಸೆಯಲ್ಲಿ ಮಳೆ ನೆನಪಾಯ್ತು. ತುಂಬಾ ಚೆನ್ನಾಗಿ ಬರೆದಿರುವಿರಿ. ಅಂದರ್ ಪಾಸ್ ನ ಸೈಡ್ ವಿಂಗ್ ಕಣ್ಣಿಗೆ ಮನಸ್ಸಿಗೆ ತಟ್ಟುತ್ತದೆ.

ಸುಧನ್ವಾ ದೇರಾಜೆ. ಹೇಳಿದರು...

hi karthik, blog hithavagi kanuttide.

ರಾಕೇಶ್ ಕುಮಾರ್ ಕಮ್ಮಜೆ ಹೇಳಿದರು...

ಇದು ಸೂಕ್ಷ್ಮ ಗ್ರಹಿಕೆಯ ಪ್ರತಿಬಿಂಬ. ಚೆನ್ನಾಗಿದೆ.

VENU VINOD ಹೇಳಿದರು...

ಎಲ್ಲರಿಗೆ ನೋಡಿದರೂ ಮನಕ್ಕೆ ತಾಗದ ವಿಷಯ ನಿಮಗೆ ವಸ್ತುವಾಯಿತು...ಬರಹ, ಫೋಟೋ ಆಪ್ತವಾಯಿತು