ಭಾನುವಾರ, ಏಪ್ರಿಲ್ 12, 2009

ಮಜಿದಿಗೆ 50: "ಚಿತ್ರ-ಕತೆ"


ಜಿದಿಯ ಸಿನಿಮಾ ಜಗತ್ತಿನ ಪಾತ್ರಗಳು ಹೆಚ್ಚು ಮಾನವೀಯವಾಗಿ ಸ್ಪಂದಿಸುವಂತಹದ್ದು. ಅವರೆಲ್ಲಾ ಬಹುತೇಕ ನಮ್ಮ ಪಕ್ಕದ ಮನೆ, ಬೀದಿಯವರೇ. "ಕಲರ್ ಆಫ್ ಪ್ಯಾರಡೈಸ್"ನಲ್ಲಿ ಬರುವ ದೈಹಿಕವಾಗಿ ವಿಕಲಾಂಗ ಕಣ್ಣು ಕಾಣದ ಮಗ ಮೊಹಮ್ಮದ್, ಮಾನಸಿಕವಾಗಿ ವಿಕಲಾಂಗನಾಗುತ್ತಾ ಹೋಗುವ ಅಪ್ಪ ಇಬ್ಬರೂ ನಮ್ಮದೇ ಜಗತ್ತಿನ ಪಾತ್ರಗಳಾಗುತ್ತವೆ. "ಬರನ್" ಸಿನಿಮಾದಲ್ಲಿ ಹುಡುಗಿಯ ಚಪ್ಪಲಿ ಹೆಜ್ಜೆಗುರುತಲ್ಲಿ ನೀರು ತುಂಬಿಕೊಳ್ಳುವಾಗ ತದೇಕಚಿತ್ತದಿಂದ ನೋಡುವ ಲತೀಫ್ನ ನಿಷ್ಕಲ್ಮಷ ಪ್ರೀತಿ ಕೂಡ 
ನಮ್ಮ ಜಗತ್ತಿನ ಒಂದು ಭಾಗವೇ
.
 
ಅಲ್ಲೊಂದು ಅಸಹಾಯಕತೆಯಿದೆ. ಬಡತನದ ಬವಣೆಯಿದ್ದರೂ ಅದರೊಳಗೆ ಬೇಯುತ್ತಾ ಮೆದುವಾಗುವ ಸಹನೆಯಿದೆ. ವಾಸ್ತವದಲ್ಲಿ ಬದುಕುವ ಹುಮ್ಮಸ್ಸು ಎಲ್ಲಕ್ಕಿಂತ ಹೆಚ್ಚು ಎದ್ದು ಕಾಣುತ್ತದೆ. ಒಂದು ಕುಟುಂಬದ ಅಪ್ಪನೋ, ಅಣ್ಣನೋ ಚಿಕ್ಕ ಚಿಕ್ಕ ಸಂತೋಷಗಳನ್ನು ಗಳಿಸಿಕೊಳ್ಳುವಲ್ಲಿ, ಉಳಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಮಾನಸಿಕ ತುಮುಲಗಳು, ಬದುಕಿನ ಸಣ್ಣ ಸಣ್ಣ ವೈರುಧ್ಯಗಳು ಮಜಿದಿಗೆ ಮಹತ್ವದ್ದಾಗಿ ಕಾಣುತ್ತದೆ.  ಮಜಿದಿಯ ಸಿನಿಮಾಗಳಲ್ಲಿ ಜನಸಾಮಾನ್ಯನ ದಿನನಿತ್ಯದ ಬದುಕಿನ ಕಾವ್ಯ ಮತ್ತು ವಾಸ್ತವ ಒಟ್ಟಿಗೆ ಚಿತ್ರಿತವಾಗುತ್ತಾ ಹೋಗುತ್ತದೆ. ಮಾನವೀಯ ಸ್ಪಂದನೆ ಮನುಷ್ಯನ ಮೂಲಭೂತ ಕ್ರಿಯೆಯಾಗಿರುವುದರ ಜೊತೆಗೆ ಸಾರ್ವತ್ರಿಕವಾಗಿರುವುದರಿಂದ ಜನಸಾಮಾನ್ಯನ ಸಾಂಸ್ಕೃತಿಕ ಸಂಫರ್ಷಳು ಸಹ ಸೂಕ್ಷ್ಮವಾಗಿ ದಾಖಲಾಗುತ್ತವೆ. ಕೊಲ್ಲುವ ಕ್ರಿಯೆ ಹೆಚ್ಚು ಜೀವಂತವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇಂತಹ ಸಿನಿಮಾಗಳು ಹೆಚ್ಚು ಅರ್ಥಪೂರ್ಣ. ಇರಾನ್ ಕವಿಗಳಾದ ಹಫೀಸ್, ಸಾದಿ, ರೂಮಿ ಕಾವ್ಯ ಮಾನವೀಯತೆಯನ್ನು ಎತ್ತಿ ಹಿಡಿದಿತ್ತು. ಸಿನಿಮಾಗಳಲ್ಲಿರುವ ಮಾನವೀಯ ನೆಲೆಗಳಿಗೆ 
ಇದೇ ಮೂಲ ಎನ್ನುತ್ತಾರೆ ಮಜಿದಿ.
 
ಮಜಿದ್ ಮಜಿದಿಯ ಸಿನಿಮಾಗಳಲ್ಲಿನ ಮುಸ್ಲಿಂ ಹೆಣ್ಣು ಪಾತ್ರಗಳಿಗೆ ಹೆಚ್ಚು ಜೀವಂತಿಕೆಯಿದೆ. "ದಿ ಫಾದರ್" ಚಿತ್ರದಲ್ಲಿ ಬರುವ ತಾಯಿಯ ಪಾತ್ರ ತನ್ನ ಮಕ್ಕಳಿಗಾಗಿ ಮಾಡಿಕೊಳ್ಳುವ ಎರಡನೇ ಮದುವೆ, "ಬರನ್" ಚಿತ್ರದಲ್ಲಿ ಹುಡುಗಿ ಹುಡುಗನಂತೆ ವೇಷ ಧರಿಸಿ ದುಡಿಯುವ ಕತೆ, ವ್ಯಕ್ತಿತ್ವ ಎಲ್ಲದರಲ್ಲೂ ಡೈನಮಿಕ್ ಅಂಶಗಳು ಕಾಣುತ್ತವೆ. ಆದರೆ ಪಾಶ್ಚಿಮಾತ್ಯ ಸಿನಿಮಾ ನಿರ್ಮಾಪಕರು ಮುಸ್ಲಿಂ ಮಹಿಳೆಯರನ್ನು ದೈಹಿಕ ಮತ್ತು ಮಾನಸಿಕವಾಗಿ ಬಲಹೀನ ಎಂದು ಚಿತ್ರಿಸುವುದಲ್ಲಿ ಪೂರ್ವಾಗ್ರಹಗಳಿವೆ, ದುರುದ್ದೇಶಗಳಿವೆ ಎನ್ನುವ ತಕರಾರು ಮಜಿದಿಯದ್ದು.

"ನನ್ನ ಸಿನಿಮಾಗಳಲ್ಲಿ ಭೂತ ಮತ್ತು ಭವಿಷ್ಯದ ಮಧ್ಯೆ ಸೇತುವೆ ಕಟ್ಟಲು ಪ್ರಯತ್ನಿಸುತ್ತಿರುತ್ತೇನೆ. ನಾನು ನಿನ್ನೆ ಬದುಕಿದ, ಕಲಿತ ಅನುಭವಗಳಿಂದ ಸತ್ಯ ಮತ್ತು ವಾಸ್ತವದ ಕಡೆಗೆ ಚಲಿಸುತ್ತಿರುತ್ತೇನೆ. ನನ್ನ ಸಿನಿಮಾ ಮೇಕಿಂಗ್ ಎಲ್ಲರೂ ಬೆರೆತು ಚಿತ್ರೀಕರಿಸುವ ರೀತಿಯದ್ದು" ಎನ್ನುತ್ತಾರೆ ಮಜಿದ್ ಮಜಿದಿ. ನೈಜವಾಗಿ ಸಿನಿಮಾದ ದೃಶ್ಯಗಳನ್ನು ಸೆರೆ ಹಿಡಿಯುವಲ್ಲಿ ಮಜಿದಿಗೆ ಕಾಳಜಿ ಜಾಸ್ತಿ. ಅದಕ್ಕಾಗಿಯೇ ಕ್ಯಾಮರಾವನ್ನು ಗುಪ್ತವಾಗಿ ಇಟ್ಟು ಚಿತ್ರೀಕರಿಸುತ್ತಾರೆ.

ಜನರ ನಿತ್ಯಜೀವನವನ್ನು ಯಾವುದೇ ಕೃತಕತೆಯಿಲ್ಲದೇ ಸೆರೆ ಹಿಡಿಯಲು ಇದು ಸಹಕಾರಿ ಎನ್ನುವ ಅಭಿಪ್ರಾಯ ಅವರದ್ದು.  "ಚಿಲ್ಡ್ರನ್ ಆಫ್ ಹೆವನ್" ಚಿತ್ರದಲ್ಲಿ ಶೂ ಹಾಕಿಕೊಂಡು ಅಲಿ, ಜಾರಾ ಓಣಿಯೊಳಗಿನಿಂದ ಓಡಿ ಶಾಲೆಗೆ ಹೋಗುವ ದೃಶ್ಯವಿದೆಯಲ್ಲ ಅದನ್ನು ಗುಪ್ತ ಸ್ಥಳದಲ್ಲಿ ಕ್ಯಾಮರಾವನ್ನು ಇಟ್ಟು ಚಿತ್ರೀಕರಿಸಿದ್ದು. ಶೂಟಿಂಗ್ ನಡೆಯುತ್ತಿದೆ ಅಂತ ಸುತ್ತಮುತ್ತಲಿನ ಜನರಿಗೆ ಗೊತ್ತಿರುವುದಿಲ್ಲ. ಸಿನಿಮಾದ ಮುಖ್ಯ ಪಾತ್ರಗಳಿಗೆ ಸಹ ಕೆಲವೊಮ್ಮೆ ಯಾವ ಕಡೆಯಿಂದ ಚಿತ್ರಿಸುತ್ತಾರೆ ಎನ್ನುವ ಮಾಹಿತಿಯಿರುವುದಿಲ್ಲ. ಇದು ಸಿನಿಮಾವನ್ನು ಮತ್ತಷ್ಟು ನಿಖರವಾಗಿಸುತ್ತದೆ.
"ಮಕ್ಕಳು ಮತ್ತು ಅಪ್ರಾಪ್ತ ವಯಸ್ಸಿನ ನಟರು ಯಾವುದೇ ರೀತಿಯ ಪೂರ್ವ ನಿರ್ಧರಿತ ನಟನೆಗೆ ಮೊರೆ ಹೋಗುವುದಿಲ್ಲ. ಆದ್ದರಿಂದ ಮುಗ್ಧ ಪ್ರಪಂಚ ಕ್ಯಾಮರಾ ಮುಂದೆ ನೈಜವಾಗಿ, ನಿಖರವಾಗಿ ಸೃಷ್ಟಿಯಾಗುತ್ತದೆ". ಇದು ಮಜಿದಿಯ ಅನಿಸಿಕೆ. "ಬರನ್", "ಚಿಲ್ಡ್ರನ್ ಆಫ್ ಹೆವನ್" ಇದಕ್ಕೆ ಉದಾಹರಣೆ.  ಇವೆಲ್ಲಾ ಮಜಿದಿಯ ಸಿನಿಮಾ ನಿರ್ಮಾಣದ ಹಿಂದಿರುವ ಶೃದ್ಧೆಗೆ ಸಾಕ್ಷಿ.
 

"ಸಿನಿಮಾ ನಿರ್ಮಾಣದಲ್ಲಿ ಅಡೆತಡೆಗಳು ಇದ್ದೇ ಇವೆ... ಆದರೆ ಬಲಹೀನ ಸಿನಿಮಾ ಸೃಷ್ಟಿಸಲು ಯಾವುದೇ ರಿಯಾಯಿತಿಗಳಿಲ್ಲ" ಎನ್ನುವುದು ಮಜಿದಿ ನಂಬಿಕೊಂಡು ಬಂದ ಸಿದ್ಧಾಂತ. ಬದುಕಿನ ಬವಣೆಗಳ ನಡುವೆ ಮಸುಕಾಗದ ಜೀವನ ಪ್ರೀತಿಯ ಬಣ್ಣವನ್ನು ತೆರೆಯಲ್ಲಿ ನೋಡಿ ಕಣ್ತುಂಬಿಕೊಳ್ಳಲು ಎಲ್ಲರೂ ಹಪಹಪಿಸುತ್ತಾರೆ. "ಚಿಲ್ಡ್ರನ್ ಆಫ್ ಹೆವನ್" ಕೊನೆಯಲ್ಲಿ ಅಲಿ ಗುಳ್ಳೆಗಳೆದ್ದ ಕಾಲನ್ನು ನೀರಿನ ಕೊಳದಲ್ಲಿ ಅದ್ದುತ್ತಾನಲ್ಲ, ಆಗ ಮೀನುಗಳು ಆತನ ಪಾದದ ಬಳಿ ಹರಿದಾಡುತ್ತಾ ಮುತ್ತನ್ನಿಡುತ್ತವಲ್ಲ ಅಂತಹ ಸಾಂತ್ವನ ಎಲ್ಲರಿಗೂ ಬೇಕಾಗಿದೆ. ಆದ್ದರಿಂದ ಪ್ರತೀ ಸಿನಿಮಾ ನಿರ್ದೇಶಿಸಲು ಹೊರಟಾಗಲೂ ಜಗತ್ತು ಮಜಿದಿಯತ್ತ ಕೌತುಕದ ಕಣ್ಣನ್ನು ತೆರೆದಿರುತ್ತದೆ.

ಕಾಮೆಂಟ್‌ಗಳಿಲ್ಲ: