ಶನಿವಾರ, ಮಾರ್ಚ್ 27, 2010

ಅಡಿಕೆ ತೋಟಗಳಿಗೆ ಅಡರಿದೆ ಮುಪ್ಪು




ತೋಟದೊಡೆಯನೇ ಅಡಿಕೆ ಹೆಕ್ಕುವವನು, ಅಡಿಕೆ ಹೊರುವವನು. ರಟ್ಟೆಯಲ್ಲಿ ತಾಕತ್ತಿದ್ದರೆ ಮರದಿಂದ ಅಡಿಕೆ ಇಳಿಸುವವನು" ಎನ್ನುವಲ್ಲಿಗೆ ದಕ್ಷಿಣ ಕನ್ನಡದ ಅಡಿಕೆ ಕೃಷಿಕರ ಪರಿಸ್ಥಿತಿ ಬಂದು ನಿಂತಿದೆ(ಉಳಿದ ಭಾಗದ ಕೃಷಿಕರದ್ದೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ). "ದುಡ್ಡು ಕೇಳಿದಷ್ಟು ಕೊಡುವ. ಮಜಲಿನದ್ದು, ಬಾಕಿಮಾರಿನ ತೋಟದ ಅಡಿಕೆ ಇಳಿಸಿ ಕೊಡು. ಅಡಿಕೆ ಹೆಕ್ಲಿಕ್ಕೆ ಮುಂದಿನ ವಾರ ಒಂದು ದಿನ ಇಬ್ಬರು ಬರ್ತಾರಂತೆ. ಅಷ್ಟರೊಳಗೆ ಮುಗಿಸಿಕೊಡು ಮಾರಾಯ" ಎಂದು ಪರಿಚಯವಿರುವ ಕೆಲಸಗಾರರಿಗೆ ದಮ್ಮಯ್ಯ ಗುಡ್ಡೆ ಬಿದ್ದರೂ ಕೆಲಸಕ್ಕೆ ಜನ ಸಿಗುತ್ತಿಲ್ಲ. ನಾಳೆಯಿಂದ ನಾಲ್ಕು ದಿನ ನಿರಂತರವಾಗಿ ಕೆಲಸಕ್ಕೆ ಬರುತ್ತೇವೆ ಎಂದು ಹೇಳಿದ ಕೆಲಸದವರು ಆ ನಾಲ್ಕು ದಿನ ಕಳೆದು ವಾರವಾದರೂ ಪತ್ತೆಯಿಲ್ಲ. ಮೊಬೈಲಿಗೆ ಕಾಲ್ ಮಾಡಿದರೆ ರಿಂಗ್ ಮಾತ್ರ ಆಗುತ್ತದೆ. ರಿಸೀವ್ ಮಾಡುವವರಿಲ್ಲ.


"ನಿಮ್ಮಲ್ಲಿ ಕೆಲಸಕ್ಕೆ ಜನ ಸಿಗ್ತಾರಾ??" ಎನ್ನುವುದು ಪರಸ್ಪರ ಭೇಟಿಯಾಗುವ ಅಡಿಕೆ ಕೃಷಿಕರೆಲ್ಲರ ಮೊದಲ ಮುಖ್ಯ ಪ್ರಶ್ನೆ. ಮದುವೆ ಇರಲಿ, ಸಾರ್ವಜನಿಕ ಗಣೇಶೋತ್ಸವವಿರಲಿ, ತಾಲೂಕು ಪಂಚಾಯಿತಿ ಮೀಟಿಂಗ್ ಇರಲಿ, ರಶ್ಶಾದ ಖಾಸಗಿ ಬಸ್ಸಲ್ಲಿ ಪರಸ್ಪರರು ಸಿಕ್ಕಲಿ ಇದಂತೂ ನಿತ್ಯದ ಸುಪ್ರಭಾತ.

ಒಂದು ಕಾಲದಲ್ಲಿ ಅಂದರೆ ಹತ್ತೋ ಹದಿನೈದು ವರ್ಷಗಳ ಹಿಂದೆ ಎರಡೋ ಮೂರೋ ಎಕರೆಯಲ್ಲಿ ಅಡಿಕೆ ಸಸಿ ನೆಟ್ಟು ಅದನ್ನು ತನ್ನದೇ ಮಗುವೇನೋ ಎಂಬಂತೆ ಬೆಳೆಸಿದ ಅಡಿಕೆ ಕೃಷಿಕ ಇವತ್ತು ಕೆಲಸದವರಿಲ್ಲದೇ ಪೂರ್ತಿ
ಕಂಗಾಲು. ಜೊತೆಗೆ ಅವನ ತೋಟವೀಗ ಹತ್ತು ಎಕರೆಯಷ್ಟು ವಿಸ್ತಾರ ಬೇರೆ. ಪ್ರಾರಂಭದ ದಿನಗಳಲ್ಲಿ ತೋಟ ಮಾಡಬೇಕು ಎನ್ನುವ ಹುರುಪಿತ್ತು. ಸ್ವತಃ ಅಡಿಕೆ ಮರಕ್ಕೆ ಹತ್ತಿ ಅಡಿಕೆ ಇಳಿಸುವ ತಾಕತ್ತಿತ್ತು. ಮೊದಲೆರಡು ವರ್ಷಗಳಲ್ಲಿ ಬಂದ ಹಿಡಿ ಪಾವು ಲಾಭದಲ್ಲಿ ಹೆಂಡತಿಯ ಕೊರಳು ಖಾಲಿ ಖಾಲಿ ಕಾಣುವುದನ್ನು ಕಂಡು ಲಕ್ಷ್ಮಣ ಆಚಾರಿ ಹತ್ರ ಸಿಂಪಲ್ಲಾದ ಚಿನ್ನದ ಚೈನು ಮಾಡಿಸಬೇಕು ಎಂದುಕೊಂಡಿದ್ದ ತನ್ನ ಯೋಜನೆಯನ್ನೇ ಮುಂದೂಡಿ ಹೊಸದಾಗಿ ಬಂದ ಸ್ಪಿಂಕ್ಲರ್ ಹಾಕಿಸಿದರೆ ಕಡೇ ಪಕ್ಷ ಬೇಸಿಗೆಯಲ್ಲಿ ನೀರು ಸರಿಯಾಗಿ ಗಿಡಗಳಿಗೆ ಸಿಗುತ್ತದೆ ಎನ್ನುವಂತಹ ಅಭಿವೃದ್ಧಿ ಯೋಜನೆಗಳಿದ್ದವು. ಇದೆಲ್ಲದರ ಜೊತೆಗೆ ಮನೆಯಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ ಸಾಗುತ್ತಿತ್ತು. ಮಗನ ಆಸೆ ಪೂರೈಸಲಿ ಎನ್ನುವ ಏಕೈಕ ಉದ್ದೇಶದಿಂದ ತನ್ನ ಹಣಕಾಸಿನ ಇತಿಮಿತಿಗೆ ದುಬಾರಿಯಾದ ಮಗನ ಇಷ್ಟದ ಕೋರ್ಸಿಗೆ ಸೇರಿಸಿದ್ದ ಆತ. ಅದಕ್ಕೆ ತೆಗೆದ ಸಾಲವನ್ನು ಮುಂದಿನ ಕೆಲವಾರು ವರ್ಷಗಳಲ್ಲಿ ತೀರಿಸಿಕೊಂಡರಾಯಿತು ಎನ್ನುವ ದೂರಾಲೋಚನೆ ಆತನದ್ದು. ಇದೆಲ್ಲದರ ಮಧ್ಯೆ ಬೆಳೆದ ಮಗಳಿಗೆ ಮದುವೆ ಮಾಡಿರುತ್ತಾನೆ. ತೋಟವನ್ನು ಸಲಹುತ್ತಾ, ಸಂಬಂಧಿಗಳಿಗೆ ಬೇಜಾರಾಗಬಾರದು, ಸಂಬಂಧಗಳು ಉಳಿಯಬೇಕು ಎನ್ನುವ ಕಾಳಜಿಯಿಂದ  ಎಪ್ರೀಲ್ ಮೇಯ ಮದುವೆ ಸೀಜನ್ನಿನಲ್ಲಿ ಒಂದೇ ದಿನ ಮೂರು ಮೂರು ಮದುವೆ ಅಟೆಂಡು ಮಾಡುತ್ತಾ, ಮತ್ತೊಂದಕ್ಕೆ ಹೆಂಡತಿಯನ್ನು ಕಳಿಸಿ ಅಬ್ಬಾ ಅಂತೂ ಈ ವರ್ಷದ ಮದುವೆ ಕೋಟಾ ಮುಗಿಯಿತು ಎಂದು ಉಸಿರೆಳೆದುಕೊಂಡಿರುತ್ತಾನೆ.


"ನಿಮಗೇನು ಬಿಡೋ ಮಾರಾಯ. ಅಡಿಕೆ ತೋಟ ಇದೆ. ಮರದಲ್ಲಿ ಅಡಿಕೆ ಬೆಳೆಯುತ್ತದೆ. ಇಳಿಸಿ ಮಾರಿದರಾಯ್ತು. ಜೀವನ ಆರಾಮು" ಎನ್ನುವ ಉಡಾಫೆಯ ಮಾತುಗಳೇ ಸಂಬಂಧಿಕರದ್ದು. ಅವರಿಗಂತೂ "ತೋಟ ಮಾಡಿಕೊಂಡು ಇವನೊಬ್ಬ ಆರಾಮವಾಗಿ ದಿನದೂಡುತ್ತಿದ್ದಾನೆ. ನಮ್ಮಂತೆ ನಗರದಲ್ಲಿ ಒದ್ದಾಡುತ್ತಿಲ್ಲವಲ್ಲ" ಎನ್ನುವ ಭ್ರಮೆ. ಇನ್ನು ಊರಲ್ಲಿರುವ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಕಂಡು "ನಮಗೆ ಊರಲ್ಲಿ ಉಂಟು" ಎಂದು ನಗರದಲ್ಲಿ ತಮ್ಮ ಪ್ರೆಸ್ಟೀಜು ಹೆಚ್ಚಿಸಲು ಮಾತಾಡುವವರಿಗೇನು ಕಮ್ಮಿ ಇಲ್ಲ. ಇವರ್ಯಾರಿಗೂ ಅಡಿಕೆ ತೋಟವನ್ನು ಸಂಭಾಳಿಸುವುದು ಮೊದಲಿನಷ್ಟು ಸುಲಭವಲ್ಲ ಎನ್ನುವುದು ಗೊತ್ತಾಗುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಇವರಿಗೆಲ್ಲಾ ವರ್ಷಕ್ಕೊಮ್ಮೆ ಊರಿಗೆ ಬರುವಾಗ ಅಡಿಕೆ ತೋಟ ಅಡ್ಡಾಡಲು ಪಾರ್ಕಿನಂತೆ ಕಾಣುತ್ತದೆಯೇ ಹೊರತು ತೋಟದ ಜ್ವಲಂತ ಸಮಸ್ಯೆಗಳು ಬೇಕಿಲ್ಲ. ನಿಭಾಯಿಸುವವ ಅದನ್ನು ಹೇಳಲು ಹೊರಟರೂ ಅವರಿಗೆ ಕೇಳಲು ಆಸಕ್ತಿ ಇಲ್ಲ. ಇದೆಲ್ಲ ಸಾವಿರದೊಂಬೈನೂರ ಐವತ್ತನಾಲ್ಕನೇ ಇಸವಿಯ ಬ್ಲ್ಯಾಕ್ ಅಂಡ್ ವೈಟ್ ಸಿನಿಮಾದ ಅವ್ಯಾಹತ ಗೋಳಿನ ದೃಶ್ಯದಂತೆ ಕಾಣುವ ಮಟ್ಟಿಗಿನ ಸಿನಿಕತೆ ಅವರಲ್ಲಿ ತುಂಬಿ ತುಳುಕಾಡುತ್ತಿದೆ. ಅದನ್ನು ನಗರದ ವಾತಾವರಣ ಹುಟ್ಟು ಹಾಕಿದೆ. 

ಬೆಳಿಗ್ಗೆ, ಮಧ್ಯಾಹ್ನ, ಸಂಜೆ ತೋಟ ತೋಟ ಎಂದು ಓಡಾಡುತ್ತಿದ್ದಂತಹ ಜೀವಗಳಿಗಿವತ್ತು ವಯಸ್ಸಾಗಿದೆ. ಅಡಿಕೆ ರೇಟು ಪಾತಾಳದಲ್ಲಿ ನೇತಾಡಲು ಶುರು ಮಾಡಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಮಗ ಬೆಂಗ್ಳೂರು, ಮಂಗ್ಳೂರು ಸೇರಿಕೊಂಡು ಕೆಲಸ ಮಾಡಲು ಶುರು ಮಾಡಿ ಒಂದೆರಡು ವರ್ಷವಾಗಿದೆ. ಅವನಿಗೆ ತೋಟದಲ್ಲಿ ದೊಡ್ಡ ಮಟ್ಟಿನ ಇಂಟರೆಸ್ಟ್ ಇಲ್ಲ. ಹಾಕಿದ ಕಾಸೇ ಹುಟ್ಟದಿರುವ ಸನ್ನಿವೇಶವಿರುವಾಗ ಅಪ್ಪನೂ ಮಗನಿಗೆ ಒತ್ತಾಯ ಮಾಡುತ್ತಿಲ್ಲ. ಕೆಲಸಕ್ಕೆ ಜನ ಮೊದಲಿನಂತೆ ಸಿಗುತ್ತಿಲ್ಲ ಎನ್ನುವುದೇ ದೊಡ್ಡ ತಲೆನೋವು. ತಾನೇ ಕೆಲಸ ಮಾಡುವ ಎಂದರೆ ವಯಸ್ಸು ಕೇಳುತ್ತಿಲ್ಲ. ಯಾರಿಗೆ ಬೇಕು ಅಡಿಕೆ ಕೃಷಿ ಎನ್ನುವಂತಾಗಿದೆ. ಮೊದಲಿನಂತೆ ಈಗಿನ ಕೆಲಸಗಾರರು ಇಲ್ಲ. ಮಂಗ್ಳೂರು ಬೆಂಗ್ಳೂರು ಟ್ರೈನು ಶುರುವಾದ ಮೇಲೆ ಊರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಹುಡುಗರು, ಬೆಂಗ್ಳೂರಲ್ಲಿ ಮೇಸ್ತ್ರಿ ಕೆಲಸಕ್ಕೆ ಹೆಲ್ಪರ್ಗಳಾಗಿ ಸೇರಿಕೊಳ್ಳುವ ಸಂಖ್ಯೆ ಜಾಸ್ತಿಯಾಗಿದೆ. ಅವರಿಗೆ ಶೀಘ್ರವಾಗಿ "ನಗರದಲ್ಲಿ ಮೇಸ್ತ್ರಿ"ಗಳಾಗುವ ಹಂಬಲ. ಮತ್ತೆ ಕೆಲವರು ನಗರದಲ್ಲಿ ಒದ್ದಾಡಿ ಕೆಲಸ ಹುಡುಕಿಕೊಂಡಿದ್ದಾರೆ. ಊರಲ್ಲಿ ತೋಟದ ಕೆಲಸಕ್ಕೆ ಹೋದರೆ ಜೀವನ ಪರ್ಯಂತ ತಮ್ಮ ಅಪ್ಪ-ಅಮ್ಮಂದಿರಂತೆ ಹೊಟ್ಟೆಗಷ್ಟೇ ಮಾತ್ರ ದುಡಿಯುವ ಪರಿಸ್ಥಿತಿ ಮುಂದುವರಿಯುವುದು ಅವರಿಗೆಲ್ಲಾ ಬೇಕಾಗಿಲ್ಲ. ಬೆಂಗ್ಳೂರಲ್ಲಿ ತಿಂಗಳುಗಟ್ಟಲೆ ದುಡಿದರೆ ಉಳಿಸಬಹುದು ಎನ್ನುವ ಯೋಚನೆಯಿಂದ ಟ್ರೈನು ಹತ್ತುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ನಗರದಲ್ಲಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಗ್ರೇಡಿಂಗ್ ಸಿಸ್ಟಂ ಊರಿಗೆ ಬಂದಾಗಲೆಲ್ಲಾ ಚಲಾವಣೆಯಾಗುತ್ತದೆ ಎನ್ನುವ ತೀರ್ಮಾನಗಳಿವೆ
. "ಇಲ್ಲಿಗಿಂತ ಕಾಲು ವಾಶಿ ಜಾಸ್ತಿ ದುಡಿದರೂ, ಬೆಂಗ್ಳೂರಲ್ಲಿ ಕೈಯಲ್ಲಿ ದುಡ್ಡು ಉಳೀಲಿಕ್ಕೆ ಉಂಟಾ. ಇವರಿಗೆಲ್ಲ ಮರ್ಲ್(ಹುಚ್ಚು)" ಎಂದು ಊರ ಹಿರಿಯರು ಗೊಣಗುತ್ತಿರುತ್ತಾರೆ. ಇವರಲ್ಲಿ ಯಾರು ಸರಿ, ಯಾರು ತಪ್ಪು ಎಂದು ಜಡ್ಜ್ಮೆಂಟು ಪಾಸು ಮಾಡುವುದರಲ್ಲಿ ಹೆಚ್ಚಿನವರಿಗೆ ಆಸಕ್ತಿಯೇ ಉಳಿದಿಲ್ಲ. "ಎಲ್ಲಾ ನಮ್ಮ ಕರ್ಮ" ಎಂದು ಗೊಣಗುತ್ತಾರಷ್ಟೇ.

ಇನ್ನು ಖಾಯಮ್ಮಾಗಿ ಅಡಿಕೆ ಸುಲಿಯಲು ಬರುತ್ತಿದ್ದವರೂ ಸಹ ಕಳೆದ ವರ್ಷದಿಂದ ನಿಯಮಿತವಾಗಿ ಕೈ ಕೊಡಲು ಪ್ರಾರಂಭಿಸಿದ್ದಾರೆ. ಬಂಟ್ವಾಳ ತಾಲೂಕಿನ ರಾಯಿಯ ಅಡಿಕೆ ಸುಲಿಯುವ ಹುಡುಗರು ದೂರದ ಸುಬ್ರಮಣ್ಯಕ್ಕೆ ಹೋಗಿ ಒಂದೆರಡು ವಾರ ನಿಂತು ಅಡಿಕೆ ಸುಲಿದು ಕೊಟ್ಟು ಬಂದಿದ್ದಾರೆ. ಹಾಗೆ ಹೋಗಿದ್ದರಿಂದ ಊರಲ್ಲಿ ಅವರು ಖಾಯಮ್ಮಾಗಿ ಅಡಿಕೆ ಸುಲಿಯುತ್ತಿದ್ದ ಮನೆಗಳ ಅಡಿಕೆ ಸುಲಿಯುವವರಿಲ್ಲದೇ ಬಾಕಿಯಾಗಿದೆ. ಕೆಲಸಗಾರರಿಗೆ ಯಾವ ಪರಿ ತತ್ವಾರವೆಂದರೆ ಕೆಲವರಂತೂ ಕಳೆದ ವರ್ಷ ಅಡಿಕೆ ಸುಲಿಯಲು ಜನ ಸಿಕ್ಕದೇ ಆ ಅಡಿಕೆಯನ್ನು ಈ ವರ್ಷ ಸುಲಿಯಲು ಜನರನ್ನು ಹೊಂದಿಸಿಕೊಳ್ಳುವಷ್ಟರಲ್ಲೇ ಸುಸ್ತಾಗಿದ್ದಾರೆ. ದೂರದ ಸುಬ್ರಮಣ್ಯಕ್ಕೆ ರಾಯಿಯಿಂದ ಅಡಿಕೆ ಸುಲಿಯಲು ಜನ ಹೋಗಲು ಕಾರಣ ಸಹ ಕೆಲಸಗಾರರ ಕೊರತೆಯೇ. ಅಡಿಕೆ ಸುಲಿಯಲು, ಅಡಿಕೆ ತೆಗೆಯಲು ಗೊತ್ತಿರುವುದು ಸಹ ತುಂಬಾ ಕಡಿಮೆ ಮಂದಿಗೇನೇ. ಅವರೆಲ್ಲಾ ಹೆಚ್ಚು ಕಡಿಮೆ ಹತ್ತು ವರ್ಷದಿಂದ ಅದೇ ಕೆಲಸ ಮಾಡಿಕೊಂಡು ಬಂದಿದ್ದಾರೆ. 


ಅವರನ್ನು ಬಿಟ್ಟರೆ ಯುವಕರಲ್ಲಿ ಬಹುತೇಕರು ಈ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಅಡಿಕೆ ಸಂಬಂಧಿ ವೃತ್ತಿಗಿಂತ ಕಡಿಮೆ ದೈಹಿಕ ಶ್ರಮ ಹಾಗೂ ಹೆಚ್ಚು ಆಕರ್ಷಕವಾದ ಸ್ವಲ್ಪ ಅಧಿಕ ಸಂಬಳವನ್ನು ಕೊಡುವ ಕೆಲಸಗಳು ಹಲವಾರು ಕಣ್ಣೆದುರಿಗಿವೆ. ಜೊತೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಮಣ್ಣಿನಲ್ಲಿ, ಬಿಸಿಲಿನಲ್ಲಿ, ಕೆಸರಿನಲ್ಲಿ ಕೆಲಸ ಮಾಡುವ ಜರೂರತ್ತಿಲ್ಲ. ಟಿಪ್ಟಾಪಾಗಿ ಡ್ರೆಸ್ ಮಾಡಿಕೊಂಡು ಬಸ್ ಹತ್ತಿದರಾಯಿತು. ಹೇಗೆ ಅಡಿಕೆ ಕೃಷಿಕರು ತಮ್ಮ ಮಕ್ಕಳಿಗೆ ತೋಟದ ಉಸಾಬರಿ ಬೇಡ, ಚೆನ್ನಾಗಿ ಓದಿ ಕೆಲಸ ಹಿಡಿಯಲಿ ಎಂದು ಆಶಿಸುತ್ತಿದ್ದಾರೋ ಅದೇ ರೀತಿಯ ಆಸೆ ಕೆಲಸಗಾರರ ಕುಟುಂಬಗಳಲ್ಲೂ ಹೆಚ್ಚಾಗಿ ಕಾಣುತ್ತಿದೆ. ಜಾಗತೀಕರಣದಿಂದಾಗಿ ಮೊಬೈಲ್ ಮೂಲಕ ಹಳ್ಳಿಗಳಲ್ಲೂ ಸಾಧ್ಯವಾದ ಸಂಪರ್ಕ ಕ್ರಾಂತಿ, ಎರಡು ಸಾವಿರದ ಆಸುಪಾಸಿನಲ್ಲಿ ಸಿಗುವ ಡಿಟಿಹೆಚ್, ಕಡಿಮೆ ದರದಲ್ಲಿ ಕೈಗಟಕುವ ಎಲೆಕ್ಟ್ರಾನಿಕ್ ಉಪಕರಣಗಳು, ಡಿಸ್ಕೌಂಟಿನಲ್ಲಿ ಸಿಗುವ ಥರವೇಹಾರಿ ಬಟ್ಟೆಗಳು ಇತ್ಯಾದಿಗಳು ಸೇರಿ ಕೆಲಸಗಾರ ಕುಟುಂಬಗಳಿಗೆ ಮೊದಲಿಗಿಂತ ನೆಮ್ಮದಿಯ ನಿಟ್ಟುಸಿರು ಬಿಡಲು ಸಹಕರಿಸಿವೆ. ಇದೆಲ್ಲದರಿಂದಾಗಿ ಅಡಿಕೆ ಸುಲಿಯುವ, ತೋಟದ ಕೆಲಸಗಾರನಿಗೆ ಮಗ ತನಗಿಂತ ಅರೆಪಾವು ನೆಮ್ಮದಿಯ ಕೆಲಸ ಮಾಡಲಿ ಎನ್ನುವ ಆಸೆ ಇರುತ್ತದೆ. ಹಾಗಿದ್ದಾಗ ಮಗ ಗ್ಯಾರೇಜಿನಲ್ಲಿ ಕೆಲಸಕ್ಕೆ ಹೋದರೂ ಮುಪ್ಪಾದ ಅಪ್ಪನಿಗೆ ಸಂತೋಷವೇ. ಫ್ಯಾಶನೆಬಲ್   ಆಗಿ, ಕಂಫರ್ಟ್ ಜೋನ್ ನಲ್ಲಿ ಬದುಕುವುದು ಒಂದು ಕಾಲದಲ್ಲಿ ಮೇಲ್ವರ್ಗಕ್ಕೆ ಮಾತ್ರ ಸೀಮೀತವಾಗಿತ್ತು. ನಂತರ ಮಧ್ಯಮ ವರ್ಗಕ್ಕೆ ಬಂತು. ಇತ್ತೀಚೆಗಂತೂ ಅದು ದಕ್ಷಿಣ ಕನ್ನಡದ ಕೆಳ ಮಧ್ಯಮ ಹಾಗೂ ದುಡಿಯುವ ವರ್ಗದಲ್ಲಿ ಢಾಳಾಗಿ ಕಾಣಿಸುತ್ತಿದೆ.

ತೋಟದ ಕೆಲಸಕ್ಕೆ ಜನರನ್ನು ಒಟ್ಟು ಮಾಡುವುದಂತೂ ಕನಸಿನ ಮಾತೇ. ಹಟ್ಟಿಯ ಗೊಬ್ಬರ ಹೊರುವ ಕೆಲಸ ಅಂದ್ರೆ ಸಾಕು ಕೆಲಸಕ್ಕೆ ಬರುವವರೂ ದಿಢೀರ್ ಕಣ್ಮರೆಯಾಗುತ್ತಾರೆ. ಒಂದು ವೇಳೆ ನಿಮ್ಮ ಮನೆಗೆ ಖಾಯಮ್ಮಾಗಿ ಕೆಲಸಕ್ಕೆ ಬರುವವರು ತಪ್ಪಿಸಿಕೊಳ್ಳುತ್ತಿದ್ದಾರೆ ಅಂತ ಗೊತ್ತಾಗಿ ಮೆತ್ತಗೆ ಅಸಮಾಧಾನ ಹೊರಹಾಕಿದಿರೋ ನಿಮ್ಮ ಕತೆ ಮುಗಿದಂತೆಯೇ. ಅವರೆಲ್ಲಾ ಶಾಶ್ವತವಾಗಿ ನಿಮ್ಮ ತೋಟದ ಕಡೆ ಮುಖವೇ ಹಾಕುವುದಿಲ್ಲ. ಅವರಿಗಂತೂ ಕೆಲಸಕ್ಕೆ ಕರಿಯುವವರ ಕ್ಯೂ ಇದೆ. ಅಲ್ಲಿಗೆ ನಿಮ್ಮ ತೋಟದ ಕೆಲಸ ಪಡ್ಚಾ. ನೀವೂ ಪಡ್ಚಾ. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಅಡಿಕೆ ತೋಟ ಹೊಂದಿರುವವರು ಕೆಲಸಗಾರರ ಜೊತೆ ವ್ಯವಹರಿಸುವಾಗ, ಮಾತನಾಡುವಾಗ ಅಗತ್ಯಕ್ಕಿಂತ ಹೆಚ್ಚು ಜಾಗರೂಕತೆಯಿಂದ ವರ್ತಿಸುತ್ತಿದ್ದಾರೆ.

ಮಾತಿನಲ್ಲಿ ಕೃತಿಯಲ್ಲಿ ಯಡವಟ್ಟಾದರೆ ಸದ್ಯದ ಪರಿಸ್ಥಿತಿಯಲ್ಲಿ ದಕ್ಷಿಣ ಕನ್ನಡದ ಯಾವ ದೇವರೂ, ದೈವವೂ ಕಾಪಾಡುವುದಿಲ್ಲ. ಈಗಿರುವ ಕೆಲಸಗಾರರ ಕೊರತೆ, ಅವರಿಗಾಗಿ ಕಾದುಕುಳಿತುಕೊಳ್ಳುವ ಉಸಾಬರಿ ತಪ್ಪಿಸಲು ಪಡ್ರೆ ಸಮೀಪದ ಸಮಾನ ಪಂಗಡದ ಅದೇ ಊರಿನ ಕೆಲವು ಅಡಿಕೆ ತೋಟದವರು ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಸ್ವಸಹಾಯ ಗುಂಪುಗಳಂತೆ ಪಡ್ರೆಯ ಈ ಗುಂಪು ಕೆಲಸ ಮಾಡುತ್ತದೆ. ವಾರದಲ್ಲಿ ಒಂದೋ ಎರಡೋ ದಿನ ಆ ಗುಂಪಿನಲ್ಲಿರುವವರ ಮನೆಯಲ್ಲಿ ಕೆಲಸ ಮಾಡುವುದು. ಆ ಗುಂಪಿನಲ್ಲಿರುವ ಯಾರೇ ಕರೆದರೂ ಅವರಲ್ಲಿ ತೋಟದ ಕೆಲಸಕ್ಕೆ ಹೋಗಬೇಕು. ಅವರವರೇ ಗೊಬ್ಬರ ಹೊರುವುದರಿಂದ ಹಿಡಿದು ಅಡಿಕೆ ಕೊಯ್ಯುವವರೆಗೆ ಕೆಲಸ ಮಾಡುತ್ತಾರೆ. ಅಡಿಕೆ ಸುಲಿಯುತ್ತಾರೆ, ಮಳೆ ಸೂಚನೆ ಸಿಕ್ಕರೆ ಸಾಕು ಅಡಿಕೆ ರಾಶಿ ಮಾಡಲು ಓಡಿಬರುತ್ತಾರೆ. ಅಲ್ಲಿ ಮಾಡಿದ ಕೆಲಸಕ್ಕೆ ಸಂಬಳ ಇಲ್ಲ. ಆವತ್ತು ಕೆಲಸ ಮಾಡಿದ್ದಕ್ಕೆ ಅಲ್ಲೊಂದು ಗಡದ್ದು ಹಬ್ಬದ ಊಟ. ಹೀಗೆ ನಮ್ಮ ನಮ್ಮ ತೋಟದ ಕೆಲಸಗಳನ್ನು ನಾವೇ ಮಾಡಿದರೆ ಮಾತ್ರ ಊಟಕ್ಕುಂಟಷ್ಟೇ ಎನ್ನುವಲ್ಲಿಗೆ ಸಮಸ್ಯೆ ಬಂದು ನಿಂತಿದೆ.

ಕೆಲಸದವರನ್ನು ನಂಬಿಕೊಂಡು ಕೃಷಿ ಮಾಡುತ್ತೇವೆ ಎನ್ನುವ ಆತ್ಮವಿಶ್ವಾಸಕ್ಕೆ ಬೆಂಕಿ ಬಿದ್ದು ಕಾಲವಾಗಿದೆ. ಈಗಿರುವುದಂತೂ ಆದೇ ಆತ್ಮವಿಶ್ವಾಸದ ಬೂದಿ. ಅದನ್ನು ತೋಟದ ಮಾಲೀಕರೇ ಅಡಿಕೆ ಮರದ ಬುಡಕ್ಕೆ ಹಾಕಿದರೆ ಸ್ವಲ್ಪ ಹೆಚ್ಚು ದಿನ ಅಡಿಕೆ ಮರ ಬದುಕಬಹುದು. ಆದರೆ ಅದಕ್ಕೆ ತಕ್ಕ ಫಲ ನೀಡುತ್ತದೆ ಎನ್ನುವ ಗ್ಯಾರೆಂಟಿ ಇಲ್ಲ! ಅಡಿಕೆ ಕೃಷಿ ನಮ್ಮ ಕಾಲಕ್ಕಾಯಿತು ಎಂದು ಹಿರಿಯರು ಸ್ವಗತದಲ್ಲಿ ಮಾತಾಡಲು ಶುರುಮಾಡಿ ವರ್ಷಗಳೇ ಕಳೆದಿವೆ. ಆದರೂ ಆ ಹಿರಿ ಜೀವಗಳು ಪ್ರತೀ ವರ್ಷದ ಬಜೆಟ್ ನೋಡುವುದನ್ನು ಬಿಟ್ಟಿಲ್ಲ. ಅಲ್ಲೇನಾದರೂ ಪರ್ಯಾಯ ಕೃಷಿಗೆ ಉಪಯುಕ್ತವಾಗುವಂತಹ ಸವಲತ್ತುಗಳಿವೆಯಾ ಎಂದು ತಡಕಾಡುತ್ತಾ "ಎಂತ ಕರ್ಮ. ಎಲ್ಲಾ ಪಕ್ಷಗಳೂ ಒಂದೇ. ಎಲ್ಲರದ್ದೂ ಕಣ್ಣೊರೆಸುವ ತಂತ್ರ" ಎನ್ನುತ್ತಾ ಉಸಿರೆಳೆದುಕೊಳ್ಳುತ್ತಾರೆ.

ಗೋಪಾಲಕೃಷ್ಣ ಕುಂಟಿನಿ ಅವರ "ದೀಪದ ಕೆಳಗೆ ಕತ್ತಲು" ಎನ್ನುವ ಕತೆಯಲ್ಲಿ ಸಂಕಪ್ಪಯ್ಯ ಎನ್ನುವ ಪಾತ್ರವೊಂದು ಬರುತ್ತದೆ. ಸಂಕಪ್ಪಯ್ಯ ಕಷ್ಟಪಟ್ಟು ಮಾಡಿದ ತೋಟ ಹೊಸದಾಗಿ ನಿರ್ಮಿಸಲ್ಪಡುವ
ಅಣೆಕಟ್ಟಿನಿಂದಾಗಿ ಮುಳುಗುವ ಹಂತಕ್ಕೆ ಬಂದಿರುತ್ತದೆ. ಅದ್ದರಿಂದ ಊರು ಬಿಡುವ ಮೊದಲು ಸಂಕಪ್ಪಯ್ಯನ ಮಗ ತೋಟದ ಅಡಿಕೆ ಮರಗಳನ್ನು ಕಡಿಯಲು ಫೀಟಿಗೆ ಇಂತಿಷ್ಟು ಎಂದು ಕಂಟ್ರ್ಯಾಕ್ಟು ಕೊಡುತ್ತಾನೆ. ಇದನ್ನೆಲ್ಲಾ ಈಜಿ ಚೇರಿನ ಮೇಲೆ ಕುಳಿತು ವೃದ್ಧ ಸಂಕಪ್ಪಯ್ಯ ಕೇಳಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಈಗಾಗಲೇ ಕೆಲವು ಕಡೆ ಅಡಿಕೆ ಮರ ಕಡಿದು ರಬ್ಬರು ಹಾಕುತ್ತಿದ್ದಾರೆ. 

ಸಂಕಪ್ಪಯ್ಯನಂತಹ ವೃದ್ಧರು ದಕ್ಷಿಣ ಕನ್ನಡದಲ್ಲಿ ಸಾವಿರಾರು ಮಂದಿ ಈಜಿ ಚೇರಿನಲ್ಲಿ ಒಂಟಿಯಾಗಿ ಕುಳಿತಿದ್ದಾರೆ. ಅವರ ಕಣ್ಣ ಮುಂದೆ ಅವರೇ ಬೆಳೆಸಿದ ತೋಟ ಮೌನದಿಂದಿದೆ.



ಚಿತ್ರ ಕೃಪೆ: ಮಹೇಶ್ ಪಿ ಕುಂಬ್ಳೆ 

 

10 ಕಾಮೆಂಟ್‌ಗಳು:

ಗಿರಿ ಹೇಳಿದರು...

ಕಾರ್ತಿಕ್,

ಎಪ್ಪತ್ತರ-ಎಂಬತ್ತರ ದಶಕದ ನಂತರ ಬಂದ ಕಾಳು ಮೆಣಸು ಕೊಳೆರೋಗ, ವೆನಿಲ್ಲಾ ಹಗರಣ, ತೆಂಗಿನ ನುಸಿರೋಗ, ಕೆಲವೇ ಕೆಲವು ತಿಂಗಳಿಗೆ ಕೈ ಕೊಟ್ಟ ರಬ್ಬರ್ ಬೆಲೆ ಹೀಗೆ ವ್ಯವಹಾರದಲ್ಲಿ ಲವಲವಿಕೆಯನ್ನು ಕಳೆದುಕ್ಕೊಳ್ಳಲು ಕಾರಣವಿರಬಹುದೇನೋ.
ದ.ಕ.ದ ವ್ಯಾವಹಾರಿಕ ಕೃಷಿ(ಅಡಿಕೆ) ಪದ್ದತಿಯನ್ನು ಎಲ್ಲ ಮಜಲುಗಳಿಂದ, ದೃಷ್ಟಿಕೋನದಿಂದ ನೋಡಿ ತಿಳಿಸಿಕೊಟ್ಟಂತಿತ್ತು.

ಧನ್ಯವಾದಗಳೊಂದಿಗೆ,
-ಗಿರಿ

prakash ಹೇಳಿದರು...

ಕಳೆದ ಹತ್ತು ವರ್ಷಗಳಲ್ಲಿ ದಕ್ಷಿಣ ಕನ್ನಡದ ಕೆಲಸಗಾರ ತುಂಬಾ ಸಶಕ್ತನಾಗಿದ್ಧಾನೆ.ತೋಟದ ಮಾಲಿಕನಲ್ಲಿ ಸಾಲಕ್ಕಾಗಿ ಅಂಗಲಾಚಬೇಕಿಲ್ಲ .ಸ್ವಸಹಾಯ ಸಂಘಗಳು,ಗ್ರಾಮಾಭಿವ್ರಿದ್ಧಿ ಯೋಜನೆ ಸಾಕಷ್ಟು ಸಾಲ ಹರಿಸುತ್ತಿದೆ.ಮತ್ತೆ ಯಾರ ಹಂಗು ?ಮತ್ತೆ ಕೃಷಿಕ ಕೆಲಸ ಕಡಿಮೆ ಮಾಡಿಕೊಳ್ಳುವ ಭರದಲ್ಲಿ ಅಡಿಕೆ ನೆಟ್ಟ.ಮತ್ತಷ್ಟು ಕೆಲಸವನ್ನ ಮೇಲೆಳೆದುಕೊಂಡ.
90% ತೋಟಗಳು 1998 ರ ನಂತರದವು .ಒಮ್ಮೆಲೇ ಅಡಿಕೆಬೇಳೆ ಏರಿತು ಅಂತ ಎಲ್ಲೆಲ್ಲು ಅಡಿಕೆ ತೋಟ ,ಈಗ ರಬ್ಬರ್ .ನಾಳೆ ರಬ್ಬರ್ ನ ಕಥೆಯು ಅಸ್ಟೆ. ಕಷ್ಟಪಟ್ಟು ಹೇಗಾದರೂ ಬೆಳೆದರು ಕೂಡ ಬೆಲೆ ಇಲ್ಲ.
ಬರಹ ತುಂಬಾ ಚೆನ್ನಾಗಿತ್ತು.ಪ್ರಸ್ತುತದ ಸಮಸ್ಯೆ ಚೆನ್ನಾಗಿ ತೆರೆದಿಟ್ಟಿ.thank you

ಶಿವರಾಮ ಭಟ್ ಹೇಳಿದರು...

ನಿಮ್ಮ ಲೇಖನ ಅಡಿಕೆ ಕೃಷಿಕರ ಸಮಸ್ಯೆಗಳನ್ನು ಮನಮುಟ್ಟುವಂತೆ ಬಿಂಬಿಸಿದೆ.
ನಿಮ್ಮ ಎಲ್ಲ ವಿಚಾರಗಳು ಸತ್ಯ.ಸರಕಾರದ ಯೋಜನೆಗಳು ಕೃಷಿ ಕ್ಷೇತ್ರಕ್ಕೆ ಹೇಗೆ ಮಾರಕವಾಗಿದೆ ಅಲ್ಲವೇ? ದೂರದರ್ಶಿತ್ವವಿಲ್ಲದ ಸರಕಾರ
ಕೂಲಿಕಾರ್ಮಿಕರನ್ನು ಅಕ್ಷರಶಃ ಸಾಕುತ್ತಿದೆ. ಯೋಜನೆಗಳ ಹೆಸರಲ್ಲಿ ಜನ ಸೋಮಾರಿಗಲಾಗುತ್ತಿದ್ದಾರೆ.
ನಮ್ಮೂರಿನಲ್ಲೂ ಹೀಗೆ. ಕೃಷಿಕರು ಕೂಡ ಕೃಷಿ ಕೆಲಸ ಬಿಟ್ಟು ಸರಕಾರೀ ಯೋಜನೆಗಳ ಲಾಭಪಡೆಯಲು ದುಂಬಾಲು ಬಿದ್ದಿದ್ದಾರೆ.
ಕೂಲಿಗಾಗಿ ಕಾಳು, ಅದೆಂತದೋ ಗ್ರಾಮೋದ್ಯೋಗ ಯೋಜನೆಗಳು, ಮನೆ ಸಬ್ಸಿಡಿ, ಹೀಗೆ ಒಂದಲ್ಲ ಒಂದು ಸರಕಾರೀ ಯೋಜನೆಗಳ ಫಲಾನುಭಾವಿಗಳಾಗಿ
ವರ್ಷಕ್ಕೆ ೩೦-೪೦ ಸಾವಿರ ಗಳಿಸುತ್ತಿದ್ದಾರೆ. ಇದು ಒಂದು ಸಂಧಿಕಾಲ. ಅಡಿಕೆಯ ಬಳಕೆಯೂ ಇನ್ನು ೨೦-೩೫ ವರ್ಷಗಲ್ಲಿ ಕುಸಿಯಲಿದೆ.
ಮಾರುಕಟ್ಟೆ ವೃಧ್ಧಿ ಆಗದು. ಬೆಲೆಕುಸಿತ ಕೂಡ ಸಹಜ. ಅಷ್ಟರಲ್ಲಿ ಜನ ಕೂಡ ಆಸಕ್ತಿ ಕಳೆದುಕೊಳ್ಳುತ್ತಾರೆ.
ಆಗ ಅಳಿದುಳಿದ ಕೆಲವರಿಗೆ ಲಾಭವಾಗಬಹುದೇನೋ? ಅಥವಾ ನಗರಗಳಲ್ಲಿ ಹೊಸ ಸಮಸ್ಯೆ ಬರಬೇಕೇನೋ?
ನಾವು ನಮ್ಮನ್ನು ಹೊರಗಿಟ್ಟು ದೂರದಿಂದ ಸಮಸ್ಯೆಯನ್ನು ನೋಡಿದರೆ ಬೇರಿನ್ನೇನೋ ಗೋಚರವಾಗುತ್ತದೆ.
ನಮ್ಮ ದೇಶ IPL ಗುಂಗಿನಲ್ಲೋ, BBMP ಚುನಾವನೆಯಲ್ಲೋ, reality ಶೋ, ಬಿಪಾಶ ಬಸು ಸ್ವಯಂವರ, ಐಶ್ವರ್ಯಾಲ ಐಶ್ವರ್ಯಗಳು
ಮಾಯಾವತಿ, ಮೋದಿ, ನೈಸು, ಹೆಡ್ಲಿ, terrorism ನಲ್ಲಿ ಮುಳುಗಿರುವಾಗ ನೀವು ಅಡಿಕೆಯ ಬಗ್ಗೆ ಬರೆದಿದ್ದು ನಿಜಕ್ಕೂ ನನಗೆ ಸಂತೋಷ ಆಶ್ಚರ್ಯ ಮೂಡಿಸಿದೆ.
ನನ್ನ ಪ್ರಕಾರ ಅಡಿಕೆ ಕೃಷಿಕರು ಕೂಡ ಹೊಸ ಸಂಶೋಧನೆಗಳ ಮೊರೆ ಹೋಗುವುದು ಒಳಿತು.
ಅದು ಕೂಡ ಆಗುತ್ತದೆ. ಜನಸಂಖ್ಯೆ ಬೆಳೆದೀತು. ಆದರೆ ಭೂಮಿ ವಿಸ್ತಾರವಾಗದು. ಹಾಗಾಗಿ ಕೃಷಿ ಭೂಮಿ ಇದ್ದರೆ ಕೃಷಿಕ ಬಡವ ಆಗಲಾರ.
ಅದು ಮಲೆನಾಡಿನಲ್ಲಿ. ಮೊದಲೇ ಹೇಳಿದ ಹಾಗೆ ಇದು ಸಂಧಿಕಾಲ.

Sushrutha Dodderi ಹೇಳಿದರು...

ದಕ್ಷಿಣ ಕನ್ನಡ ಅಂತಲ್ಲ; ಮಲೆನಾಡಿನಲ್ಲೂ ಇದೇ ಸಮಸ್ಯೆ. ನಮ್ಮನೆ ತೋಟಕ್ಕೇ ಮಣ್ಣು ಹೊಯಿಸಲು ಎರಡು ವರ್ಷದಿಂದ ಆಳು ಹುಡುಕುತ್ತಿದ್ದೇವೆ; ಸಿಗುತ್ತಿಲ್ಲ. ನಮಗೆ ಅನ್ನ ಹಾಕಿದ, ನಮಗೆ ಬಟ್ಟೆ ಕೊಡಿಸಿದ, ನಮ್ಮನ್ನು ಓದಿಸಿದ -ಅಡಿಕೆ ಮರಗಳಿಗೆ ಹಿಡಿ ಆಹಾರವೀಯಲಿಕ್ಕೂ ನಮಗೆ ಸಾಧ್ಯವಾಗುತ್ತಿಲ್ಲ. ಮುಗಿಲೆತ್ತರಕ್ಕೆ ಬೆಳೆದು ಸೂರ್ಯನಿಗೆ ಕೈಮುಗಿದು ನಿಂತಿರುವ ಮರಗಳನ್ನು ನೋಡುವಾಗ ಅಯ್ಯೋ ಅನ್ನಿಸುತ್ತೆ, ಆದರೆ ಪರಿಹಾರವಂತೂ ಏನೂ ಕಾಣುತ್ತಿಲ್ಲ. :(

Unknown ಹೇಳಿದರು...

Sir, excellent writings!! all most ella barahagalu bahala chennagive!

vikas negiloni ಹೇಳಿದರು...

chennagide karthik,
yella sampradayika vruthi, achara, vicharagaligu ide sthithi, gathi. necessity is the mother of invention anthare. bhahushaha intha stithiyalle yenadaroo hosa anveshanegalu agodakke sadhya, allave?
-vikas negiloni

vinay ಹೇಳಿದರು...

Very nice one.. You have written everything what we are facing currently.. Nice one...:)

ಅನಾಮಧೇಯ ಹೇಳಿದರು...

very nice story.sariyada timege sariyaada lekhana.
geervani

ಅನಾಮಧೇಯ ಹೇಳಿದರು...

Excellent. You have given most accurate picture of arecanut growing farmers. Its tragedy of 99.99% of people including mine.

nenapina sanchy inda ಹೇಳಿದರು...

ಈ ಚಿತ್ರ ನಾನು ತೆಗೆದದ್ದು ಅಂದುಕೊಂಡು ನೋಡ್ತಾ ಪೂರ್ತಿ ಈ ಪೋಸ್ಟ್ ಓದಿದೆ.
ನಮಗೂ ಊರಲ್ಲಿ ಉಂಟು ಮಾರಾಯ್ರೆ..:-)ಸಧ್ಯ 22 ಏಕರ್ ನಲ್ಲಿ ಎರಡು ಏಕ್ರೆ ಅಡಿಕೆ ಮಾತ್ರ. ಮಳೆ ಇಲ್ಲದಿದ್ದರೂ ಎಲ್ಲಿಂದಲೋ ಬಂದ natural spring ನಮ್ಮ ಅಡಿಕೆ ತೋಟವನ್ನು ಹಚ್ಚ ಹಸುರಾಗಿಸಿದೆ. ಸಧ್ಯಕ್ಕೆ ಅಡಿಕೆ ಕೊಯ್ಲು ಮುಂತಾದವಕ್ಕೆ ಜನರು ಸಿಗ್ತಿದ್ದಾರೆ. ನಮ್ಮ ಪಕ್ಕದ ತೋಟದಲ್ಲಿರುವವರು ಸೀನಣ್ಣ. ದಷ್ಟ ಪುಷ್ಟ ಇಬ್ಬರು ಗಂಡು ಮಕ್ಕಳು. ತೋಟದಲ್ಲಿ interest ಇಲ್ಲ ಅಂತ ಇಲ್ಲಿ ಬೆಂಗಳೂರಿನಲ್ಲಿ ಹೋಟಲ್ ಒಂದರಲ್ಲಿ ತಟ್ಟೆ ಲೋಟ ತೋಳಿತಾರೆ...
ತುಂಬ ಚೆನ್ನಾಗಿ ಬರೆದಿದ್ದೀರಿ.
ಮಾಲತಿ ಎಸ್