ಗುರುವಾರ, ಏಪ್ರಿಲ್ 1, 2010

ಬೆಂಗಳೂರೆಂದರೆ,,,,,,,,


ಬೆಂಗಳೂರೆಂದರೆ........

ಕುಡಿದು ಬಿಟ್ಟ ಬೈಟೂ ಕಾಫಿ, ಸಂಜೆಯ ಹೊತ್ತಿಗೆ ಹೆಚ್ಚಾಗಿ ಸುರಿಯುವ ಮಳೆ, ಪಿಡ್ಜಾ ಹಟ್ಟಿನ ಮುಂದುಗಡೆ ಹೋಂ ಡೆಲಿವರಿಗೆ ನಿಂತ ಹೀರೋ ಹೋಂಡಾ, ಪಲ್ಸರ್ಗಳು, ತಿಂಗಳಾಂತ್ಯದಲ್ಲೋ ವಾರಾಂತ್ಯದಲ್ಲೋ ಧಿಡೀರ್ ಹುರುಪುಗೊಂಡು ಕಾರ್ಯಾಚರಣೆಗೆ ಇಳಿಯುವ ಜ್ಞಾನೋದಯಗೊಂಡ ಬುದ್ಧಂತಹ ಟ್ರಾಫಿಕ್ಕು ಪೋಲೀಸರು, ಕೆಂಪು ಬಣ್ಣದ ಸಿಗ್ನಲ್ಲು ಬಿದ್ದಾಗ ನಿಂತ ಹೋಂಡಾ ಆಕ್ಟಿವಾದ ಹ್ಯಾಂಡಲನ್ನು ಏಕಾಗ್ರತೆಯಿಂದ ಹಿಡಿದು ಡ್ರೈವಿಂಗ್ ಸೀಟಿನಲ್ಲಿ ಕೂತ ಅಮ್ಮನ ಕತೆ ಕೇಳುತ್ತಿರುವ ಮುದ್ದು ಪುಟಾಣಿ, ಸತ್ತ ಮೀನನ್ನು ಚರಂಡಿಗೆ ಎಸೆಯುತ್ತಿರುವ ತ್ಯಾಗರಾಜನಗರದ ಅಕ್ವೇರಿಯಂ ಅಂಗಡಿಯ ಮಾಲೀಕ, ಜಗಮಗಿಸುವ
ಪಾರ್ಟಿ-ಮದುವೆ ಹಾಲ್, ದ್ವಾರದಲ್ಲೇ ಇಂಥೋರು ವೆಡ್ಸ್ ಇಂಥೋರನ್ನ ಅನ್ನೋ ಹೂವಿನ ಕಟೌಟ್, ಮೆಟ್ರೋಗೆ ಕಟ್ಟುತ್ತಿರುವ ಕಂಬ, ಸೇತುವೆ ಮೇಲೆ ಕುಳಿತ ವೆಲ್ಡರಿನ ಹಣೆಯಿಂದ ನೆಲ ಸೇರುತ್ತಿರುವ ಬೆವರಿನ ಹನಿ, ಸಿಟಿ ರೈಲ್ವೆ ಸ್ಟೇಶನ್ನಿನ ಅಂಡರ್ಪಾಸಿನ ಮೆಟ್ಟಿಲಿಳಿಯುವಾಗ ಪಕ್ಕದಲ್ಲೇ ನಡೆಯುತ್ತಾ "ಇನ್ನೂರು ಬರ್ತೀಯಾ" ಎಂದು ಕಿವಿ ಹತ್ತಿರ ಉಸುರಿದ ಹುಡುಗಿ, ಉತ್ತರ ಸಿಕ್ಕದೇ ಮುಂದಿನವನತ್ತ ಅದೇ ವೇಗದಲ್ಲಿ ನಡೆಯುವ ಆಕೆಯ ಹೆಜ್ಜೆಗಳು, "ಡಬ್ಬಾ ತರಹಾ ಇದೆ ಸಾರ್ ಸಿನ್ಮಾ. ಮಲ್ಕೊಳಿ ಮನೆಗ್ಹೋಗಿ" ಎನ್ನುತ್ತಾ ಬೈಕು ಪಾರ್ಕು ಮಾಡುವಾಗ ಬುದ್ದಿಮಾತು ಹೇಳುವ ಥಿಯೇಟರಿನ ವಾಚ್ಮನ್ನು, ಆಫ್ ಮಾಡಿದ ಬೈಕು ಸಿಗ್ನಲ್ಲು ಬಿದ್ದಾಗ ಹೊಡೆದ ಕಿಕ್ಕಿಗೆ ಸ್ಟಾರ್ಟ್ ಆಗದೇ ಇದ್ದೋರೆಲ್ಲಾ ಸಿಟ್ಟಿನಲ್ಲಿ, ರಣೋತ್ಸಾಹದಲ್ಲಿ ಹೊಡೆಯುತ್ತಿರುವ ವೆರೈಟಿ ಹಾರ್ನುಗಳು, ಮೆಜೆಸ್ಟಿಕ್ಕಿನ ಕಲ್ಲುಬೆಂಚಿನಲ್ಲಿ ತನ್ನ ಹುಡುಗ ಮಾಡುತ್ತಿರುವ ಚೇಷ್ಟೆಗಳಿಗೆ ಹುಸಿಮುನಿಸು ತೋರಿಸುತ್ತಾ, ಅಕ್ಕ ಪಕ್ಕದವರ ಪರಿವೆಯೇ ಇರದೇ ಜೋರಾಗಿ ಗದರುತ್ತಾ ನಗುತ್ತಿರುವ ಹುಡುಗಿ, ತಡೆಹಿಡಿದ ಮೂತ್ರವನ್ನು ವಿಸರ್ಜಿಸಲು ಬೇರ್ಯಾವುದೇ ಸೂಕ್ತ ಮಾರ್ಗ ಕಾಣದೇ ಮೂಗು ಹಿಡಿಯುತ್ತಾ, ಕಾಲಿನ ಪ್ಯಾಂಟನ್ನು ಎತ್ತಿಹಿಡಿಯುತ್ತಾ ಮೆಜೆಸ್ಟಿಕ್ಕಿನ ಜಗತ್ಪ್ರಸಿದ್ಧ ಸುವಾಸನೆ ಭರಿತ ಸಾರ್ವಜನಿಕ ಮೂತ್ರಾಲಯ ಹೊಕ್ಕ ಎಂಜಿನಿಯರಿಂಗ್ ಸ್ಟೂಡೆಂಟು, ಉತ್ತರ ಪ್ರದೇಶದ ಮೀಸೆ ಚಿಗುರದ ಹುಡುಗ ಫುಟ್ಪಾತಲ್ಲಿ ನಿಂತು ನೀಡುತ್ತಿರುವ ಪಾನಿಪುರಿಯನ್ನು ಚಪ್ಪರಿಸಿ ತಿನ್ನುತ್ತಿರುವ ಹರೆಯದ ಹುಡುಗಿ, ಅವಳನ್ನೇ ತದೇಕಚಿತ್ತದಿಂದ ಬಿಎಂಟಿಸಿ ಬಸ್ಸೊಳಗಿನ ರಶ್ಶನ್ನೂ ಲೆಕ್ಕಿಸದೇ ನೋಡುತ್ತಾ ತನ್ನ ಸುತ್ತ ವೃಂದಾವನ ಕಟ್ಟಿಕೊಳ್ಳುತ್ತಿರುವ ಹುಡುಗ, ತಮ್ಮತಮ್ಮೊಳಗೆ ಕನ್ನಡದಲ್ಲೇ ವ್ಯವಹರಿಸುತ್ತಾ ಬಂದ ಗಿರಾಕಿಗಳ ಮುಂದೆ ಮಾತ್ರ "ವಾಟ್ ಡು ಯು ವಾಂಟ್ ಸರ್" ಎನ್ನುತ್ತಿರುವ ಪಿಜ್ಜಾ ಕೌಂಟರಿನವರು, ಸಿಗ್ನಲ್ಲು ಬೀಳದಿದ್ದರೂ ತಟಕ್ಕನೆ ಕೆಜಿ ರೋಡು ದಾಟಲು ಹರಸಾಹಸ ಪಡುತ್ತಾ ವೇಗವಾಗಿ ಬರುವ ವಾಹನಗಳ ಬ್ರೇಕಿನ ಸದ್ದಿಗೆ ಹೆದರಿ ಮತ್ತೆ ರಸ್ತೆ ಪಕ್ಕಕ್ಕೆ ಬಂದು ನಿಲ್ಲುವ ಮಂದಿ, ಸೆಂಟ್ರಲ್ ಕಾಲೇಜಿನ ಕಂಪೌಡು ಹಾರಿ ಶಾರ್ಟ್ ಕಟ್ಟಿನಲ್ಲಿ ಲೇಟಾದ ಕ್ಲಾಸು ತಲುಪಲು ಹೊರಟ ಗುಜರಾತಿ, ಪಿಕ್ಪಾಕೇಟ್ ಆದ ಮೊಬೈಲಿನ ಬಗ್ಗೆ ಕಂಪ್ಲೇಂಟು ಕೊಡಲು ಜಯನಗರ ಸ್ಟೇಶನ್ನಿನ ಒಳಹೊಕ್ಕು ಪೋಲೀಸರನ್ನು ಕಂಡರೆ ನೆನಪಾಗುವ ಸಾಯಿಕುಮಾರ್ ಸಿನಿಮಾಗಳು, ಭಯಂಕರ ಭಯಂಕರ ಡೈಲಾಗುಗಳು, ಫುಟ್ಪಾತಿನಲ್ಲಿ ತೆಗೆದುಕೊಂಡ ಸಿನಿಮಾ ಡಿವಿಡಿ ಹೀರೋ ಇನ್ನೇನು ಮುತ್ತುಕೊಟ್ಟೇ ಬಿಡುತ್ತಾನೆ ಎನ್ನುವ ದೃಶ್ಯದಲ್ಲೇ ಸಿನಿಮಾದ ಕೊನೆಯ ದೃಶ್ಯದಂತೆ ನಿಂತುಹೋಗಿರುವ ದುರದೃಷ್ಟದ ಘಳಿಗೆ,  ಎರಡೆರಡು ಸಾರಿ ಪ್ರಯತ್ನಪಟ್ಟರೂ ಕಾರ್ಡು ಡಿಟೆಕ್ಟು ಮಾಡದ ಎಟಿಎಂ ಮೆಶಿನ್ನು, ಮಾರ್ಕೆಟ್ಟಿನಲ್ಲಿ ಭವಿಷ್ಯವೇ ಕೈಕೊಟ್ಟ ವ್ಯಕ್ತಿಯಿಂದ ಭವಿಷ್ಯ ಕೇಳುತ್ತಿರುವ ಬಡ ಹೆಂಗಸು, ಅದ್ಯಾವುದೋ ಘಳಿಗೆಯಲ್ಲಿ ಪೈಪು ಒಡೆದು ನದಿಯಂತೆ ಹರಿಯುತ್ತಿರುವ ಕಾವೇರಿ ನೀರು, ಕೈ ಕೋಳ ಹಾಕಿ ಹರೆಯದ ಹುಡುಗನೊಬ್ಬನನ್ನ ಚಿಕ್ಕಪೇಟೆಯ ದರ್ಗಾದ ಎದುರಿನ ಜನ ದಟ್ಟಣೆಯಲ್ಲಿ ಒಯ್ಯುತ್ತಿರುವ ಪೋಲೀಸ್ ಪೇದೆ, ಎಸ್ಪಿ ರೋಡಲ್ಲಿ 7 ರೂಪಾಯಿಗೆ ಸಿಗುವ ಬ್ಲ್ಯಾಂಕು ಡಿವಿಡಿ, ನಿಂತ ಬೈಕಿಗೆ ರಭಸದಿಂದ ಬಂದು ಗುದ್ದಿದ ಬಸ್ಸು, ಹಾರಿ ಮುಂದಿದ್ದ ಕಾರಿನ ಮೇಲೆ ಬಿದ್ದ ಟೈ ಹಾಕಿಕೊಂಡ ಮಧ್ಯವಯಸ್ಕ, ಹಿಂದೆ ಮುಂದೆ ನಡೆಯಲು ತಿರುಗಲೂ ಸಾಧ್ಯವಾಗದ ಬೆಳಿಗ್ಗಿನ-ಸಂಜೆಯ ಬಿಎಂಟಿಸಿಯಲ್ಲಿ ಮುಂದಕ್ಕೆ ಹೋಗಲಿಕ್ಕೆ ದಾರಿ ಬಿಡದಿದ್ದಕ್ಕೆ ತಾವು ತಾವೇ ಲಾಯರುಗಳೆಂಬಂತೆ ವಾದ ಮಾಡುತ್ತಾ, ಜಗಳ ಕಾಯುತ್ತಾ ಸುತ್ತಲಿನವರನ್ನು ಸಿಂಪತಿ, ಹೂಂಕಾರ, ಠೇಂಕಾರಗಳಿಗೆ ಎಳೆಯಲು ಯತ್ನಿಸುತ್ತಾ ಬಿಎಂಟಿಸಿಯಲ್ಲೇ ಕ್ರಾಂತಿ ಮಾಡಲು ಹೊರಟವರು, ಹೇ ಅವನೇ ಕಣೋ ಕೊತ್ವಾಲನ ರೈಟ್ ಹ್ಯಾಂಡು ಆಗಿದ್ದವ-ಶೆಟ್ಟಿ ಎನ್ನುತ್ತಾ ಕೌಂಟರಿನಲ್ಲಿರುವ ಬೋಳುತಲೆಯ ಕನ್ನಡಕದ ಆಸಾಮಿಯನ್ನು ಕ್ಯಾಂಟೀನಿನಲ್ಲಿ ತೋರಿಸುತ್ತಿರುವ ಕಾಲೇಜು ಹುಡುಗರು, "ಮಗಾ ಅವ್ಳ ಮನೆ ಹತ್ರ ಹೋಗಿದ್ಯಾ, ಏನಂದ್ಳೋ" ಎನ್ನುತ್ತಾ ಗೆಳೆಯನೊಬ್ಬನನ್ನು ಥೇಟು ಲೂಸು ಮಾದನ ಸಿನಿಮಾದ ದೃಶ್ಯದಂತೆ ಕೇಳುತ್ತಿರುವ ಹೈಸ್ಕೂಲು ಹುಡುಗ, ಕ್ರಿಕೆಟ್ ಆಡಿ ಕೊಳೆಯಾದ ಅವನ ಸಮವಸ್ತ್ರ, ಒಂದೆರಡು ಗಂಟೆ ಗಿಜಿಗುಡುವ ಮೆಜೆಸ್ಟಿಕ್ಕಿನಲ್ಲಿ ಸುಮ್ಮನೆ ಕೂತರೆ ಜೀವನ ನಶ್ವರ, ಕ್ಷಣಿಕ ಎನ್ನುವ ಸತ್ಯ ಗೊತ್ತಾಗಿ ಗಾಬರಿಯಿಂದ ಸನ್ಯಾಸಿಗಳಾಗುತ್ತೇವೋ ಎನ್ನುವ ಭಯದಿಂದ ಸಿಕ್ಕ ಬಸ್ಸು ಹತ್ತಿಬಿಡುವ ಧಾವಂತ, ಆನಂದ ರಾವ್ ಸರ್ಕಲ್ಲಿನ ಫ್ಲೈ ಓವರಿನಲ್ಲಿ ಟ್ರಾಫಿಕ್ ಜಾಮಾಗಿ ಅಟೇನ್ಶನ್ನಲ್ಲಿ ಅಡ್ಡಾ ದಿಡ್ಡಿ ನಿಂತ ಬಸ್ಸು, ಕಾರು, ಪ್ರವಾಸಕ್ಕೆ ಹೊರಟ ಟೆಂಪೋ ಟ್ರ್ಯಾಕ್ಸು, ದೊಡ್ಡ ನೀಲಿ ಡ್ರಮ್ಮು, ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಮಾಡಿಟ್ಟ ರಾಮನವಮಿಯ ಪಾನಕ ಫುಲ್ರಶ್ಶಿನ ಮಧ್ಯೆ ಅರೆ ಕಾಸಿನ ಮಜ್ಜಿಗೆ, ಪದ್ಮನಾಭನಗರದ ಬಸ್ಸ್ಟ್ಯಾಂಡಿನಲ್ಲಿ ಸಂಜೆ ಆರೂವರೆ ಹೊತ್ತಿಗೆ ತಪ್ಪಿಸದೇ ಬೇಟಿಯಾಗುವ ಎಂಟುಮಂದಿ ತಾತಂದಿರು, ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಪೇರಿಸಿಟ್ಟ ಮುದ್ದೆ, ಮಧ್ಯಾಹ್ನಗಳಲ್ಲಿ ಗಾಂಧೀನಗರದಲ್ಲಿ ಸಾಲಾಗಿ ಊಟಕ್ಕೆ ಬಂದು ನಿಲ್ಲುವ ಆಟೋರಿಕ್ಷಾದವರು, ರಿಕ್ಷಾದ ಮುಂದೆ ಹಿಂದೆ ಅಂಟಿಹೋದ ರಾಜ್ಕುಮಾರು, ಶಂಕರ್ನಾಗು..ಕನ್ನಡಿಯಲ್ಲಿ ಬರೆದಿಟ್ಟ ತಂದೆ ತಾಯಿ ಆಶೀರ್ವಾದ, ನಾರಿ ಮುನಿದರೆ ಮಾರಿ, ಎರಡು ಕಾರು ಬಸ್ಸುಗಳ ಮಧ್ಯೆ ಇರುವ ಹೊದ್ದು ಹಾಸಲಾಗುವಷ್ಟೇ ಇರುವ ಜಾಗದಲ್ಲಿ ಬೈಕು ನುಗ್ಗಿಸುತ್ತಾ ತುಂಬಾ ಮುಂದೆ ಬಂದೆ ಎಂದು ಖುಷಿಯಾಗಿ ಬೀಗಿ ಗತ್ತಿನಿಂದ ಹಿಂದಕ್ಕೆ ನೋಡುತ್ತಿರುವ ಬೈಕಿನವ, ಗಾಜಿನ ಕಟ್ಟಡಗಳ ಮೇಲೆ ಭಯಕ್ಕೋ ಭಕ್ತಿಗೋ ಕನ್ನಡದ ಧ್ವಜ, ರಾಜ್ಕುಮಾರು, ಇತ್ತೀಚೆಗೆ ವಿಷ್ಣುವರ್ಧನ್ನು, ಬೆಳಿಗ್ಗೆಗೆ ಮುಗಿದು ಹೋದ ಕರಗ, ಉಳಿದು ಹೋದ ಬಣ್ಣದ ಬಲೂನು, ಪ್ರಸಾದದ ಹೂ, ನಿಂತಲ್ಲೆಲ್ಲಾ ಕಸ ಲೋಡು ಮಾಡುತ್ತಾ ಅದೆಲ್ಲಾ ಓವರ್ ಲೋಡಾಗಿ ಕಸದ ವಾಹನ ಚಲಿಸುವಾಗ ಒಂದೋ ಎರಡೋ ಪರ್ಸೆಂಟು ಗಾಳಿಗೆ ಹಾರುತ್ತಾ ತನ್ನೆಲ್ಲಾ ಘಮಗಳನ್ನು ಹರಡುತ್ತಿರುವ ಬೆಳಿಗ್ಗಿನ ಹೊತ್ತು, ಹರಿದು ಹೋದ ಪೋಸ್ಟರಿನಲ್ಲಿ ನಿಂತು ನಗುತ್ತಿರುವ ನಾಯಕ, ಜಾಸ್ತಿ ವಾಹನಗಳು ಚಲಿಸಿದಾಗ ಸಣ್ಣಗೆ ನಡುಗುವ ಮಾರ್ಕೆಟ್ಟಿನ ಫ್ಲೈಓವರ್ರು, ದೇವೇಗೌಡ ಪೆಟ್ರೋಲ್ ಬಂಕಿನ ಸಿಗ್ನಲ್ಲಿನಲ್ಲಿ ಹೂ, ಹರಿವೆ ಸೊಪ್ಪನ್ನು ಮಾರುತ್ತಿರುವ ಹೈಸ್ಕೂಲು ಹುಡುಗಿಯ ಕಣ್ಣಲ್ಲಿ ಮಿನುಗುತ್ತಿರುವ ಸಂಜೆಯ ಉತ್ಸಾಹ......

ಹೀಗೆ.........

ಬೆಂಗಳೂರೆಂದರೆ ಪೂರ್ಣ ವಿರಾಮವಿಲ್ಲದ, ವಾಕ್ಯವಾಗಲು ಒದ್ದಾಡುವ ಕಾಮಾಗಳಿಂದಲೇ ತುಂಬುತ್ತಾ ಹೋಗುವ ಚಿತ್ರ ಪಟ....ಬಣ್ಣ ಬಣ್ಣದ ಗಾಳಿಪಟ....ಸೂತ್ರ ಹಿಡಿದು ನಿಯಂತ್ರಿಸುತ್ತಾ, ಸಣ್ಣವರಾಗುತ್ತಾ, ಸೂತ್ರ ಹರಿದಾಗ ಅಷ್ಟು ಹೊತ್ತು ಆಡಿದ ಆಟವನ್ನು ನೆನೆಯುತ್ತಾ ಬಿದ್ದ ಗಾಳಿಪಟವನ್ನು ಹುಡುಕುವುದು..ಸಿಗದಿದ್ದರೆ ಒಂದಿಷ್ಟು ಪರ್ಸಂಟೇಜು ದುಃಖಿಸುತ್ತಾ ಮತ್ತೊಂದಷ್ಟು ಪರ್ಸಂಟೇಜು ಆಶೋತ್ತರಗಳೊಂದಿಗೆ ಗೋಂದು, ಬಣ್ಣದ ಪೇಪರು, ಹಿಡಿಸುಡಿ ಕಡ್ಡಿ ಹಿಡಿದು ಮತ್ತೊಂದು ಗಾಳಿಪಟಕ್ಕೆ ರೆಡಿಯಾಗುವುದು.....

ಬೆಂಗಳೂರೆಂದರೆ ಹಾಗೇ......... 


ಚಿತ್ರ ಕೃಪೆ: ಬಾಲು ಮಂದರ್ತಿ 

16 ಕಾಮೆಂಟ್‌ಗಳು:

ಶ್ವೇತಾ ಹೆಗಡೆ ಹೇಳಿದರು...

ಬೆಂಗಳೂರನ್ನು ಹಿಡಿದು ಯಾವುದೋ ಪ್ರಾಜೆಕ್ಟ್ ವರ್ಕ್ ಮಾಡಿದಂತಿದೆ...! ನಿಜಕ್ಕೂ ಬೀದರಿನ ಒಣತನವೇ ರಾಚುವ ಬೆಂಗಳೂರು, ನಿನ್ನ ಭರಪೂರ ಗ್ರಹಿಕೆಯಲ್ಲಿ ಸಾಕಷ್ಟು ತೇವವಾಗಿದೆ.
- ಪ್ರವೀಣ್ ಬಣಗಿ

ಗಿರಿ ಹೇಳಿದರು...

"ಒಂದೆರಡು ಗಂಟೆ ಗಿಜಿಗುಡುವ ಮೆಜೆಸ್ಟಿಕ್ಕಿನಲ್ಲಿ ಸುಮ್ಮನೆ ಕೂತರೆ ಜೀವನ ನಶ್ವರ, ಕ್ಷಣಿಕ ಎನ್ನುವ ಸತ್ಯ ಗೊತ್ತಾಗಿ ಗಾಬರಿಯಿಂದ ಸನ್ಯಾಸಿಗಳಾಗುತ್ತೇವೋ ಎನ್ನುವ ಭಯದಿಂದ ಸಿಕ್ಕ ಬಸ್ಸು ಹತ್ತಿಬಿಡುವ ಧಾವಂತ..."

ಹ ಹ್ಹ... ಚೆನ್ನಾಗಿತ್ತು ಬರಹ..
ಬೆಂದಸಿಟಿ ಅನ್ನೋ ಪುನರ್ನಾಮಕರಣ ಮಾಡಿದರೆ ಚೆನ್ನಾಗಿರ್ತಿತ್ತು ಅನ್ನಿ..!

ಪ್ರೀತಿಯಿಂದ
-ಗಿರಿ

Unknown ಹೇಳಿದರು...

ಎಲ್ಲವೂ ಯೆಲ್ಲೋ ಪೇಜಿನ ಹಾಳೆಗಳಂತೆ..... ಪಾತ್ರಗಳೇ. ಬಣ್ಣಗಳಿವೆ. ಭ್ರಾತ್ರತ್ವವೇ ಇಲ್ಲ.....

ಎಲ್ಲವೂ ನಿಜ, ಕಾರ್ತಿಕ್.... ಆದ್ರೆ ತಾವೇನು ಮಾಡ್ತಿದೀರಿ ಈ ಬೆಂಗ್ಳೂರಲ್ಲಿ ಅನ್ನೋದನ್ನೂ ಸೇರಿಸ್ಬೇಕಾಗಿತ್ತು ?

ಮನೋರಮಾ.ಬಿ.ಎನ್ ಹೇಳಿದರು...

Enri? Yograj Bhatra Mungaru male dialogue gint UDDA IDYALLA...pASANDAGAITE..
fILM dIRECT MADOVAGA BALSAKONDRE INNU CHENNAGIRUTTE...:-)

ಶ್ರೀನಿಧಿ.ಡಿ.ಎಸ್ ಹೇಳಿದರು...

:):),

ಅನಾಮಧೇಯ ಹೇಳಿದರು...

chennagide grahike.
geervani

ವಿನಾಯಕ ಕೆ.ಎಸ್ ಹೇಳಿದರು...

neenu bittidannu naanu bardidini nodo...!!!
kodsara

nelamugilu ಹೇಳಿದರು...

finally two years of your stay in bangalore has made you come up with something thats very interesting.....
very nice and interesting write up... same time hard core truth....

ಅನಾಮಧೇಯ ಹೇಳಿದರು...

Interesting.....

ಅನಾಮಧೇಯ ಹೇಳಿದರು...

Interesting.....

ಅನಾಮಧೇಯ ಹೇಳಿದರು...

Interesting.....

ಅನಾಮಧೇಯ ಹೇಳಿದರು...

Interesting.....

ಸಾ. ಹೇಮಂತ ಕುಮಾರ ಹೇಳಿದರು...

bengalurina arda bhagada arda sathya..

Gangaraju B S ಹೇಳಿದರು...

ಹೇ ಅವನೇ ಕಣೋ ಕೊತ್ವಾಲನ ರೈಟ್ ಹ್ಯಾಂಡು ಆಗಿದ್ದವ-ಶೆಟ್ಟಿ ಎನ್ನುತ್ತಾ ಕೌಂಟರಿನಲ್ಲಿರುವ ಬೋಳುತಲೆಯ ಕನ್ನಡಕದ ಆಸಾಮಿಯನ್ನು ಕ್ಯಾಂಟೀನಿನಲ್ಲಿ ತೋರಿಸುತ್ತಿರುವ ಕಾಲೇಜು ಹುಡುಗರು......ನಮ್ಮ ಕೋರ್ಸ್ ಆರ್ಟಿಕಲ್ ಬರೆಯೋಕ್ಕಾದರೂ ಹೆಲ್ಪ್ ಆಯ್ತಲ್ಲಾ.....good one

ತಿಪ್ಪೇಸ್ವಾಮಿ ನಾಕೀಕೆರೆ ಹೇಳಿದರು...

ಪ್ರೀತಿಯ, ಕಾರ್ತಿಕ್ ಅಣ್ಣ, ಒಂದೇ ಉಸಿರಿಗೆ ಓದಿದೆ. ಓದುವಾಗಲೇ ಬೆಂಗಳೂರಿನ ಟ್ರಾಫಿಕ್ ಓಳಗೆ ಸಿಕ್ಕಿ ಹಾಕಿಕೊಂಡ ಅನುಭವ. ನೀವು ಯೋಚನೆ ಮಾಡಿ ರೀತಿ ಆಶ್ಚರ್ಯ ಅನ್ನಿಸುತ್ತೆ.....

ಅನಾಮಧೇಯ ಹೇಳಿದರು...

Good one, adre ello ond kade continuity miss agide.. bellige inda sanjege jaribidtira, majestic inda berekade hogi tirga majestc bartira, ond kade hodaga allina bhavane alle hididu bere kade hogidre adondu prayanada anubhva agtaittu..