ಬುಧವಾರ, ಮಾರ್ಚ್ 24, 2010

ನಗರದ ನಿಟ್ಟುಸಿರುಗಳ ನಡುವೆ ಒಂದು ಸಂಜೆ

ಅದೆಷ್ಟು ದಿನಗಳಾಯಿತೋ ಬಾಲ್ಕನಿಯಲ್ಲಿ ನಿಂತು ಚಂದ್ರನನ್ನು ನೋಡಿ...
ಮನೆಯ ಕಿಟಕಿಯೊಳಗಿನಿಂದ ಚಂದ್ರನ ಬೆಳಕು, ಸರಳುಗಳ ನೆರಳು ನೆಲದಲ್ಲಿ ಬೆಳಕಿನ ರಂಗೋಲಿ ಬಿಡಿಸಿದ್ದನ್ನು ನೋಡುತ್ತಾ ಮೈ ಮರೆತು ನಿದ್ದೆ ಹೋಗಿ. ರಾತ್ರಿ ನೈಟು ಶಿಫ್ಟು ಮಾಡಿ ಆಫೀಸಿನ ಕ್ಯಾಬುಗಳನ್ನು ಏರುವವರಿಗೆ ಹುಣ್ಣಿಮೆಯಿದ್ದರೂ, ಅಮಾವಾಸ್ಯೆ ಇದ್ದರೂ ತಲೆಕೆಡಿಸಿಕೊಳ್ಳುವ ಉಮೇದಿಲ್ಲ. ನಿದ್ದೆ ಕಣ್ಣಲ್ಲಿ ಕರಗುವುದಷ್ಟೇ ಗೊತ್ತು. ಕ್ಯಾಬಿನ ಕಿಟಕಿಯಿಂದ ಹೊರಕ್ಕೆ ಇಣುಕಿ ನೋಡುತ್ತಾ ಕುಳಿತುಕೊಳ್ಳುವುದರಲ್ಲಿ ಹೆಚ್ಚು ಆಸ್ಥೆಯಿಲ್ಲ. ಪ್ರತೀ ನೂರು ಮೀಟರಿಗೆ ಒಂದಕ್ಕೊಂದು ಅಪ್ಪಿಕೊಂಡಂತೆ ಇರುವ ನಿಯಾನು ದೀಪ, ಟ್ಯೂಬ್ಲೈಟುಗಳ ಮಧ್ಯೆ ನಗರದಲ್ಲಿರುವ ಚಂದ್ರ ಡೆಡ್ ಇನ್ವೆಸ್ಟ್ಮೆಂಟ್. ಅನಗತ್ಯ ಎನರ್ಜಿ
ವೇಸ್ಟು....ಸುಮ್ಮನೆ ಮಧ್ಯಾಹ್ನಗಳಲ್ಲಿ ಕಾರ್ಪೋರೇಷನ್ನಿನ ಆಫ್ ಮಾಡದ ಲೈಟುಗಳಂತೆ ಬೆಳಗುತ್ತಿರುವವ ಎನ್ನುವ ಭಾವನೆಯೇ ಆತನ ಬಗ್ಗೆ....

ಸದ್ಯಕ್ಕೆ ನಮಗೆಲ್ಲಾ ಚಂದ್ರನಿಲ್ಲದ ರಾತ್ರಿ, ನಿರ್ಜನ, ಏಕಾಂತ ಪ್ರದೇಶಗಳಲ್ಲಿ ಹುಟ್ಟುವ ಚಡಪಡಿಕೆ, ಕಾತರವನ್ನು ನಗರ ಉಳಿಸುವುದೇ ಇಲ್ಲ. ಅಷ್ಟರಮಟ್ಟಿಗೆ ಚಂದ್ರ ನಗರಗಳಲ್ಲಿ ಅಪ್ರಸ್ತುತ. ಆತನ ಗೈರು ಹಾಜರಿಯೂ ನಮಗೆಲ್ಲಾ ಒಪ್ಪಿತವಾಗುವ ವಿಷಯವೇ.

ನಮ್ಮ ನಗರದ ಅಪಾರ್ಟ್ಮೆಂಟಿನ
ಬಾಲ್ಕನಿ, ಮನೆಯ ಮಹಡಿಗಳಿಂದ ಕಾಣಲು ಹೊರಡುವ ಚಂದ್ರನಿಗೆ ಬೆಳಕಿನ ಸರಪಳಿ. ಯಾಕೆಂದರೆ ಉದ್ದುದ್ದ ಮಲಗಿದ ರಸ್ತೆಯಂತೆ ಬದುಕು ನೆರಳುಗಳಿಲ್ಲದ ಅಸ್ಥಿಪಂಜರ. ನಿತ್ಯದ ಸುಸ್ಥಿತಿಗೆ ನಮಗೆಲ್ಲಾ ಬೆಳಗಿನ ಸೂರ್ಯೋದಯ ಬೇಕು. ಟ್ರಾಫಿಕ್ಕು ಜಾಮು ಬೇಕು. ಜೊತೆಗೆ ಉಪಹಾರ ದರ್ಶಿನಿಯ ಬೈಟೂ ಕಾಫಿ. ಅಭ್ಯಾಸವಿದ್ದರೆ ಸೇದಲು ಚೋಟುದ್ದದ ಸಿಗರೇಟು. ಏಕಾಂತದ ರಾತ್ರಿ, ನಿಶ್ಯಬ್ದವಾಗಿರುವ ಸಂಜೆ, ರಾತ್ರಿ ಯಾರಿಗೂ ಬೇಡ. ಬೆಳಕಿಗೆ ಇರುವ ಅಗಾಧ ಮಾರ್ಕೆಟ್ಟು ಕತ್ತೆಲೆಗಿಲ್ಲ. ಬೆಳಕು ಇವತ್ತು ಬೆರಗಲ್ಲವೋ ಅಣ್ಣಾ...ಅದು ಕೇವಲ ಬೆಸ್ಕಾಂನ ಮಧ್ಯೆ ಮಧ್ಯೆ ಬಂದು ಹೋಗುವ ಲೋಡ್ಶೆಡ್ಡಿಂಗು, ಪವರ್ಕಟ್ಟು.

ರಾತ್ರಿಯಾಯಿತೆಂದರೆ ಸಾಕು ಜಗತ್ತಿಗೆ ನಿದ್ದೆಯ ನಾಟಕ. ಹೇಳಿಕೊಳ್ಳಲು ಆಯಾಸದ ಸಬೂಬು. ಚಳಿಗೆ ನಡೆಯುತ್ತಾ, ಒಂಟಿಯಾಗಿ ರಾತ್ರಿಗಳಲ್ಲಿ ಸುಮ್ಮನೆ ಕೂತುಕೊಳ್ಳಿ ಅಂತ ನೀವು ಹೇಳಿದರೆ ಹೇಗೆ ಸ್ವಾಮಿ ಎಂದು ದಬಾಯಿಸಲು ಸಾವಿರ ನಾಲಿಗೆಗಳಿವೆ. ನಮ್ಮದೇನಿದ್ದರೂ ಗಂಟೆಗೆ 24 ಡಾಲರು ದುಡಿಯುವವರ ದಂಡು. ತಪ್ಪದೇ ರಾತ್ರೆ ಇಡೀ ಕಂಪ್ಯೂಟರ್ ಮುಂದೆ ಸೈನ್ ಇನ್ ಆಗಿದ್ದರೆ ಮಾತ್ರ ಕೆಲಸ, ಆಕರ್ಷಕ ಸಂಬಳ ಉಳಿಯುತ್ತದೆ. ಅಷ್ಟರಮಟ್ಟಿಗೆ ರಾತ್ರಿ, ಕೊನೇ ಕ್ಷಣದ ಆಕ್ಸಿಜನ್ ಇದ್ದಂತೆ ಇವತ್ತಿನ ಆಧುನಿಕ ಜಗತ್ತಿಗೆ. ರಾತ್ರಿಯ ತಂಪು, ತಂಗಾಳಿ ಎನ್ನುವುದೆಲ್ಲಾ ಕವಿಗಳ ಗಿಮಿಕ್ಕು ಎನ್ನುವ ಅಸಡ್ಡೆ. ನಗರದ ರಾತ್ರಿಗಳಲ್ಲಿ ಹೆಚ್ಚೆಂದರೆ ಜೀವಭಯ, ನಡುಕ......ಹೆಚ್ಚೆಂದರೆ ವೀಕೆಂಡುಗಳಲ್ಲಿ ಶಾಪಿಂಗು, ಔಟಿಂಗು ಹೋಗಿ ಹಿಂತಿರುಗುವಾಗ ಆಗುವ ಸ್ಟುಪಿಡ್ ಚಳಿ. ಅದಕ್ಕಾಗಿ ಮೆಗಾ ಮಾಲ್ಗಳಲ್ಲಿ ತೆಗೆದುಕೊಂಡ ಬ್ರ್ಯಾಂಡೆಡ್ ಜರ್ಕಿನ್ನು
, ಸ್ವೆಟರು ಹಾಕಿಕೊಳ್ಳುತ್ತಾ ಕಟ ಕಟ ಎಂದು ಹಲ್ಲು ಕಡಿಯುವುದು.... ಯಾರಿಗೆ ಬೇಕು ಸ್ವಾಮಿ ರಾತ್ರಿಯ ಉಸಾಬರಿ...ಸಿಗ್ನಲ್ನಲ್ಲಿ ನಿಂತಾಗ ಚಂದ್ರ ಇದ್ದಾನೋ ಇಲ್ಲವೋ ಎಂದು ಆಕಾಶದತ್ತ ತಲೆ ಹಾಕುವ ಉಸಾಬರಿ. ಸಿಗ್ನಲ್ಲಿನ ಕೆಂಪು ದೀಪ ಹಸಿರಿಗೆ ತಿರುಗಿದರೆ ಸಾಕು...ಮನೆ ತಲುಪಿ ಉಸ್ಸಪ್ಪಾ ಎಂದು ಹಾಸಿಗೆಗೆ ಒರಗಿದರೆ ಸಾಕು....ಇಷ್ಟೇ ಸಾಧ್ಯತೆಗಳಿರುವುದು ಬಹುಷಃ ನಗರದ ರಾತ್ರಿಗಳಿಗೆ.
******************

ಮೌನವಾಗಿರುವ ನಗರ ಯಾರಿಗೂ ಬೇಡ. ಅದಕ್ಕೇ ಮಧ್ಯರಾತ್ರಿ, ತಡರಾತ್ರಿಯವರೆಗೂ ಮೆಸೇಜು ಬಂದು ಬೀಳುತ್ತದೆ ಇನ್ಬಾಕ್ಸಿಗೆ. ಮಾತನಾಡದೇ ಮೌನವಾಗಿರುವಾಗ ದುಡ್ಡು ಹುಟ್ಟಿಸುವುದನ್ನು ಇನ್ನೂ ಅನ್ವೇಶಿಸಿಲ್ಲ ಅಷ್ಟೇ. ಆದ್ದರಿಂದ ನಗರದಲ್ಲಿ ಕೆಲಸ ಸಿಗದವರು, ಕೆಲಸ ಕಳಕೊಂಡವರು ಹೀಗೆ ತಾತ್ಕಾಲಿಕ ನಗರ ತಿರಸ್ಕೃತರು ಮಾತ್ರ ಮೌನಕ್ಕೆ ಒಗ್ಗುವ ಮಂದಿ. ಮೌನದಲ್ಲೇ ಸೋಲನ್ನು ಪರಾಮರ್ಶಿಸುವ
ಮಂದಿ....ಒಂದು ವೇಳೆ ಮಧ್ಯರಾತ್ರಿ ಆತ/ ಆಕೆ ಎಚ್ಚರವಿದ್ದಾರೆ ಎಂದಿಟ್ಟುಕೊಳ್ಳಿ. ಒಂದೋ ಆತ ಆಕೆಯೊಂದಿಗೆ ಮಾತನಾಡುತ್ತಿರುತ್ತಾನೆ. ಇಲ್ಲವೇ ಆಕೆ ಆತನೊಂದಿಗೆ ಮಾತನಾಡುತ್ತಿರುತ್ತಾಳೆ. ಅವರಿಬ್ಬರೂ ಮೌನವಾಗಿರುವುದು ಒಬ್ಬರಿಗೊಬ್ಬರು ಕೈಕೊಟ್ಟು ಗುಡ್ಬೈ ಹೇಳಿದಾಗ ಮಾತ್ರ. ಆ ರಾತ್ರಿಗಳಲ್ಲೂ ಚಂದ್ರನಿಗಿಂತ, ಮೌನಕ್ಕಿಂತ ಕಾಫಿ ಡೇಗಳು ಪ್ರತೀ ಭೇಟಿಗಳಲ್ಲಿ ಹುಟ್ಟಿಸಿದ ತೆಳು ಬೆಳಕಿನ ಕುಂಡಗಳು ಹೆಚ್ಚು ಆಪ್ಯಾಯಮಾನವಾಗಿದ್ದು ಕಾಣುತ್ತವೆ ಪರಸ್ಪರರಿಗೆ. ಇದು ನಗರದ ಭಾಷೆ.

ಸುಮ್ಮನೆ ಕೂತು ಆಕೆಯ ಬೆನ್ನಿಗೆ ಒರಗಿ ಕೈಯೊಳಗೆ ಕೈ ಬೆಸೆದು ಇಬ್ಬರೂ ಒಂದಕ್ಷರವೂ ಮಾತಾಡದೇ ಇದ್ದದ್ದು, ಹಾಸ್ಟೆಲ್ನಲ್ಲಿದ್ದಾಗ ಮಧ್ಯರಾತ್ರಿ ರೂಮು ಬಿಟ್ಟು ನಡೆಯುತ್ತಾ ಹಾಸ್ಟೆಲಿನ ಹಿಂದಿದ್ದ ಬಂಡೆ ಏರಿ ಕುಳಿತದ್ದು ಇವೆಲ್ಲಾ ಸಮಯವಿದ್ದರೆ ಸಂತೋಷವನ್ನಷ್ಟೇ ಕೊಡುತ್ತದೆ ಎನ್ನುವುದು ಗೊತ್ತಾಗಿಬಿಟ್ಟಿದೆ. ಹಿಂದೆಲ್ಲಾ ಹಾಗೆ ಸುಮ್ಮನೆ ನಡೆಯಲು ಹೊರಟಾಗ ಯಾವುದೇ ಅಪೇಕ್ಷೆಗಳಿರುತ್ತಿರಲಿಲ್ಲ. ಆದರೀಗ ಅಪೇಕ್ಷೆಗಳಿಲ್ಲದೆ ಬದುಕಲು ಸಾಧ್ಯವಾಗುತ್ತಿಲ್ಲ. ಅಪೇಕ್ಷೆಯೇ ಗೆಲುವಿನ ಮೆಟ್ಟಿಲು ಎನ್ನುತ್ತಾ ಬಡಬಡಿಸುತ್ತಾರೆ ಮ್ಯಾನೇಜ್ಮೆಂಟ್ ಗುರುಗಳು. ಅವರ ಪ್ರಕಾರ ಎಲ್ಲಾ ಕ್ರಿಯೆಗಳಿಗೂ ಒಂದು ನಿರ್ದಿಷ್ಟ
ಉತ್ತರವಿರಲೇಬೇಕು. ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಇರಬೇಕೆಂದೇನೂ ಇಲ್ಲ ಎಂದರೆ ಸಾಕು ಸನಾತನಿಗಳಾಗಿಬಿಡುತ್ತೇವೆ. ಬಳಸಿ ಬಿಸಾಡುವ "ಕಮಾಡಿಟಿ" ನಾವೇ ಆಗಿಬಿಡುತ್ತೇವೆ. ಆದ್ದರಿಂದ ಇಲ್ಲಿ ಮಾರ್ಕೆಟ್ ಇಲ್ಲದ ವಸ್ತುಗಳೆಲ್ಲಾ ಉಪಯೋಗಕ್ಕೆ ಬಾರದ ವಸ್ತುಗಳು.

ಸುಮ್ಮನೆ ಕುಳಿತುಕೊಳ್ಳುವುದು ಎನ್ನುವ ಶಬ್ದವೇ ಸದ್ಯಕ್ಕೆ ಕಾಯಕ ವಿರೋಧಿ. ಋಷಿಗಳು ನೂರಾರು ದಿನ ಕುಳಿತು ತಪಸ್ಸು ಮಾಡಿದರು ಎನ್ನುವುದು ನಮಗಿವತ್ತು ಕೇವಲ ಕತೆಯಲ್ಲ....ಅದೊಂದು ಹುಚ್ಚು ಕಲ್ಪನೆಯ ಪರಮಾವಧಿ. ಯಾಕೆಂದರೆ ಮೂರೂವರೆ ನಿಮಿಷದ ಸಿಗ್ನಲ್ಲು ದಾಟಿ ಈಚೆಗೆ ಬರುವಾಗ ಒಂದು ಯುಗವೇ ಕಳೆಯುವಂತಹ ವಾಸ್ತವವಿರುವಾಗ ಹೇಗೆ ನಂಬುವುದು ಹೇಳಿ...ಹೇಳಿ ಕೇಳಿ ನಾವು ವಾಸ್ತವದ ಶಿಶುಗಳು.....ಅದಕ್ಕಿರುವ ಹಲವು ಸಾಧ್ಯತೆಗಳು ಸಹ ಸುಮ್ಮನೆ ಕುಳಿತುಕೊಳ್ಳುವುದು ಎನ್ನುವ ವಿಚಾರವನ್ನು ಕೆಲಸ ಕದಿಯುವ ಪಟ್ಟಿಗೆ ಸೇರಿಸಿಬಿಟ್ಟಿದೆ. ನಗರದ ಮನೆಗಳಲ್ಲಿದ್ದಾಗ ರಾತ್ರಿ ಹನ್ನೊಂದರ ನಂತರ ಕಪ್ಪು ಆಕಾಶ ನೋಡಲು ಹೊರಕ್ಕಿಣುಕುವ ವಿಚಾರ ಬರುವುದೇ ಕಡಿಮೆ. ಅದರಿಂದೇನು ಉಪಯೋಗ ಮೊದ್ಲು ಹೇಳಿ ಅನ್ನುವುದು ಮೊದಲ ಮತ್ತು ಕೊನೆಯ ಪ್ರಶ್ನೆ. ಕುವೆಂಪು ಪ್ರತಿದಿನ ಬೆಳಿಗ್ಗೆ ತಮ್ಮ ಮನೆಯ ಕಂಪೌಂಡಿನಲ್ಲಿದ್ದ ಮರದ ಎದುರು ಕುರ್ಚಿ
ಹಾಕಿ ಕುಳಿತುಕೊಂಡು ಹಕ್ಕಿಗಳ ಗೂಡನ್ನು ವೀಕ್ಷಿಸುತ್ತಿದ್ದರು ಎನ್ನುವುದು ಕವಿಗಳಿಗೆ ಮಾತ್ರ ಸಾಧ್ಯವಾಗುವ ನಮ್ಮ ಸದ್ಯದ ವಾಸ್ತವ...ತೇಜಸ್ವಿ ಹಕ್ಕಿ ಫೋಟೋ ಕ್ಲಿಕ್ಕಿಸಲು ಗಂಟೆಗಳಷ್ಟು ಕಾಯುತ್ತಾ ಕುಳಿತಿರುತ್ತಿದ್ದರು, ಮೀನಿಗೆ ಗಾಳ ಹಾಕುತ್ತಾ ತದೇಕಚಿತ್ತದಿಂದ ಕಾಯುತ್ತಿದ್ದರು ಎನ್ನುವುದು ಮೂಡಿಗೆರೆಯಲ್ಲೋ, ತೀರ್ಥಹಳ್ಳಿಯಲ್ಲೋ, ದಿಡುಪೆಯಲ್ಲೋ ಮಾತ್ರ ಸಾಧ್ಯವಾಗುವ ನಗರದ ವಾಸ್ತವ...ಹೇಗಿದ್ದರೂ ನಮಗಂತೂ ವೀಕೆಂಡಿನ ಒಂದೋ ಎರಡೋ ದಿನಕ್ಕೆ ಆಯಾಸ ಕಳೆಯಲು ನಿದ್ದೆಯಿದೆ, ಉತ್ಸಾಹವಿದ್ದರೆ ವಂಡರ್ ಲಾ, ತಪ್ಪಿದರೆ ಮಲ್ಟಿಪ್ಲೆಕ್ಸಿನಲ್ಲಿ ಸಿನಿಮಾದ ಊಲಾಲಾ...ಇಲ್ಲವೇ ಝಗಮಗಿಸುವ ಮಾಲುಗಳ ಆಫರುಗಳಲ್ಲಿ ಯಾವುದು ಬೆಟರು ಅಂತ ಮಹಡಿ ಮಹಡಿ ಹತ್ತಿ ಜಾಲಾಡುವ ಕ್ರೀಡಾಕೂಟ...!!!
******************

ಇದೆಲ್ಲವನ್ನೂ ನಿತ್ಯ ನೈಮಿತ್ತಿಕದಂತೆ ಗಮನಿಸುತ್ತಾ ಪ್ರತಿ ಸಂಜೆ ನಿಯಾನು ಬಲ್ಬುಗಳು ಉರಿಯಲು ಶುರುವಾಗುತ್ತವೆ. ಚಂದ್ರನಿದ್ದರೂ ಆ ಕಣ್ಣುಕುಕ್ಕುವ ಬೆಳಕಲ್ಲಿ ಮಬ್ಬು ಮಬ್ಬು. ನಗರದ ಜಗತ್ತಿಗೆ ಚಂದ್ರ ಬಂದರೂ ಹೋದರೂ ದೊಡ್ಡ ವಿಷಯವೇ ಅಲ್ಲ. ಇಲ್ಲಿ ಬೆಳಕೂ ಸಹ ಕಂಪ್ಯೂಟರು ಕುಟ್ಟುವಷ್ಟೇ ಯಾಂತ್ರಿಕ, ಸಾರ್ವತ್ರಿಕ.....!!!

ಎಲ್ಲರ ಭಾವನಾತ್ಮಕ ನೆಲೆಗಳನ್ನು ನಿರ್ಲಿಪ್ತತೆಯ
ಮಗ್ಗುಲಿಗೆ ಹಾಕಿಬಿಡಲು ನಗರದ ಬೆಳಕು ಸಾಕು...ಮೌನವಾಗಿರದ ಪ್ರತಿ ಕ್ಷಣವೂ ಸಾಕು.....ಚಂದ್ರನಿರುವ ನಗರದ ರಾತ್ರಿಯೂ ಸಾಕು.

ಅದಕ್ಕೇ ಹೇಳಿದ್ದು-ನಗರದ ಉದ್ದುದ್ದ ಮಲಗಿದ ರಸ್ತೆಯಂತೆ ಬದುಕು ನೆರಳುಗಳಿಲ್ಲದ ಅಸ್ಥಿಪಂಜರ...!!!

11 ಕಾಮೆಂಟ್‌ಗಳು:

Prasad ಹೇಳಿದರು...

Nice Observation Karthik!!! "ಸುಮ್ಮನೆ ಕೂತು ಆಕೆಯ ಬೆನ್ನಿಗೆ ಒರಗಿ ಕೈಯೊಳಗೆ ಕೈ ಬೆಸೆದು ಇಬ್ಬರೂ ಒಂದಕ್ಷರವೂ ಮಾತಾಡದೇ ಇದ್ದದ್ದು" Who is that AAke?? ;-)

ಗಿರಿ ಹೇಳಿದರು...

ಕಾರ್ತಿಕ್,

ತಮ್ಮ ಕ್ಲಾಸಿಕಲ್ ಬರಹಗಳ ಸಾಲಿಗೆ ಮತ್ತೊಂದು...
ವಾವ್.. ಬೆಳಕಿನಷ್ಟೇ, ಕತ್ತಲನ್ನು ಹಾಗೂ ಕತ್ತಲಿನ ಆಯಾಮಗಳನ್ನು ಪ್ರೀತಿಸಲು, ಅಂತಸ್ವತ್ವ ಇರಬೇಕು ಅನ್ನುವ ನಿಮ್ಮ ಬರಹದ ಕಾಂಸೆಪ್ಟ್.. ಆಪ್ತವಾಯಿತು.. ನಿಮ್ಮನ್ನು ಮುಖತಾ ಭೇಟಿ ಮಾಡಿ ಮಾತಾಡಬೇಕು ಅನ್ನುವ ಈ ಮೊದಲಿನ ವಾಂಛೆಯೂ ಜಾಸ್ತಿಯಾಯಿತು.

ಪ್ರೀತಿಯಿಂದ,
-ಗಿರಿ

ವಿ.ರಾ.ಹೆ. ಹೇಳಿದರು...

excellent !

ಹಿಂದೆಲ್ಲಾ ಹಾಗೆ ಸುಮ್ಮನೆ ನಡೆಯಲು ಹೊರಟಾಗ ಯಾವುದೇ ಅಪೇಕ್ಷೆಗಳಿರುತ್ತಿರಲಿಲ್ಲ. ಆದರೀಗ ಅಪೇಕ್ಷೆಗಳಿಲ್ಲದೆ ಬದುಕಲು ಸಾಧ್ಯವಾಗುತ್ತಿಲ್ಲ.

very much true..

Dr. rajatha ಹೇಳಿದರು...

Really true Karthik...........
GOOD ONE
It takes time to know the importance of "chandra"!!!!!!!!!!!!!

Sushrutha Dodderi ಹೇಳಿದರು...

Hmmm.. :( ನಿಯಾನ್ ದೀಪದ ಬೆಳಕಿನಲ್ಲಿ ನಗರದಲ್ಲಿ ಓಡಾಡಿ ಸುಸ್ತಾದೆ..

ಅನಾಮಧೇಯ ಹೇಳಿದರು...

Kudos Karthik... Wonderful..

ಬಿಸಿಲ ಹನಿ ಹೇಳಿದರು...

ಕಾರ್ತಿಕ್,
ನಗರದ ಕತ್ತಲೆಯಲ್ಲಿ ನಡೆಯುವ ಬೆಳಕಿನ ಬದುಕು ಮತ್ತು ಅದರಲ್ಲಿ ಮರೆಯಾಗುವ ಚಂದ್ರನ ಬೆಳಕು-ಇವೆರಡನ್ನೂ ತುಂಬಾ ಚನ್ನಾಗಿ ಹಿಡಿದಿಟ್ಟಿದ್ದೀರಿ. ನಿಮ್ಮ ಬರಹ ಮನಮುಟ್ಟುವಂತಿದೆ. ನಾನು ನಿಮ್ಮ ಬ್ಲಾಗನ್ನು ಓದುತ್ತಿರುವೆ. ತುಂಬಾ ಚನ್ನಾಗಿ ಬರೆಯುತ್ತೀರಿ. ಹಿಂದೆ ನೀವು “ಲೇಖಕನಾದವನು..........” ಎನ್ನುವ ಲೇಖನ ತುಂಬಾ ಚನ್ನಾಗಿ ಬರೆದಿದ್ದಿರಿ. ಆದರೆ ನನಗೆ ಕಾಮೆಂಟಿಸಲಾಗಲಿಲ್ಲ. ಆದರೆ ಈಗ ಇದನ್ನು ಓದಿ ತಡೆಯಲಾರದೆ ನಾಲ್ಕು ಸಾಲು ಬರೆದೆ. ನಿಮಗೆ ಬರವಣಿಗೆಯಲ್ಲಿ ಒಳ್ಳೆಯ ಭವಿಷ್ಯವಿದೆ. ಮುಂದುವರಿಸಿ. ಅಂದಹಾಗೆ ನಿಮ್ಮ ಲೇಖನಗಳನ್ನು ಓದಿ ನಿಮ್ಮನ್ನು ಭೇಟಿಮಾಡಬೆಕಿನಿಸುತ್ತದೆ. ಈ ಸಲ ಬೆಂಗಳೂರಿಗೆ ಬಂದಾಗ ನಿಮ್ಮನ್ನು ಭೇಟಿಯಾಗಲು ಪ್ರಯತ್ನಿಸುವೆ. uday_itagi@rediffmail.com ಇದಕ್ಕೊಂದು ನಿಮ್ಮ ಫೋನ್ ನಂಬರ್ ಕಳಿಸಿ. ಈ ಸಾರಿ ಅಗಸ್ಟ್ ತಿಂಗಳಲ್ಲಿ ಬಂದಾಗ ಭೇಟಿ ಮಾಡುವೆ.

ಶ್ರೀನಿಧಿ.ಡಿ.ಎಸ್ ಹೇಳಿದರು...

very touchy geLeya. nanu ide subject melondu ardambarda kavna baredittiddene.

Unknown ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Unknown ಹೇಳಿದರು...

ಕರ್ಪಡಕರ್ ರವರೇ
ನಿಮ್ಮ ಏಕತಾನತೆಯ ಅನಿಸಿಕೆಗಳು ಮತ್ತು ತುಂಬಾನೇ "ಹತ್ತಿರವಿವೆ" ಅನ್ನಿಸಿತು ,
ಓದುವಾಗ,ನಿತ್ಯ ನೂತನ, ಚಿರಂತನ,.
ವ್ಯಾಸರ ಚಿಂತನೆಗಳು ನನಗೂ ಈಗಲೂ ಸ್ತುತ್ಯಾರ್ಹ.
ಅವರ ಮೆಚ್ಚುಗೆಯ ಎಸ್ ಎಮ್ ಎಸ್ ಗಳು ಇನ್ನೂ ನನ್ನ ಮೊಬೈಲ್ ಪೆಟ್ಟಿಗೆಯಲ್ಲಿ ಭದ್ರವಾಗಿವೆ
ಒಳ್ಳೆಯ ಬ್ಲೋಗ್ , ಉಣಪಡಿಸಿದ ತಮಗೆ ಮತ್ತೊಮ್ಮೆ ಧನ್ಯವಾದಗಳು

ಅನಾಮಧೇಯ ಹೇಳಿದರು...

ಗಾಢವಾದ ಬರಹ. ಕ್ಲಾಸಿಕ್ :)