ಶನಿವಾರ, ಮಾರ್ಚ್ 27, 2010

ಅಡಿಕೆ ತೋಟಗಳಿಗೆ ಅಡರಿದೆ ಮುಪ್ಪು




ತೋಟದೊಡೆಯನೇ ಅಡಿಕೆ ಹೆಕ್ಕುವವನು, ಅಡಿಕೆ ಹೊರುವವನು. ರಟ್ಟೆಯಲ್ಲಿ ತಾಕತ್ತಿದ್ದರೆ ಮರದಿಂದ ಅಡಿಕೆ ಇಳಿಸುವವನು" ಎನ್ನುವಲ್ಲಿಗೆ ದಕ್ಷಿಣ ಕನ್ನಡದ ಅಡಿಕೆ ಕೃಷಿಕರ ಪರಿಸ್ಥಿತಿ ಬಂದು ನಿಂತಿದೆ(ಉಳಿದ ಭಾಗದ ಕೃಷಿಕರದ್ದೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ). "ದುಡ್ಡು ಕೇಳಿದಷ್ಟು ಕೊಡುವ. ಮಜಲಿನದ್ದು, ಬಾಕಿಮಾರಿನ ತೋಟದ ಅಡಿಕೆ ಇಳಿಸಿ ಕೊಡು. ಅಡಿಕೆ ಹೆಕ್ಲಿಕ್ಕೆ ಮುಂದಿನ ವಾರ ಒಂದು ದಿನ ಇಬ್ಬರು ಬರ್ತಾರಂತೆ. ಅಷ್ಟರೊಳಗೆ ಮುಗಿಸಿಕೊಡು ಮಾರಾಯ" ಎಂದು ಪರಿಚಯವಿರುವ ಕೆಲಸಗಾರರಿಗೆ ದಮ್ಮಯ್ಯ ಗುಡ್ಡೆ ಬಿದ್ದರೂ ಕೆಲಸಕ್ಕೆ ಜನ ಸಿಗುತ್ತಿಲ್ಲ. ನಾಳೆಯಿಂದ ನಾಲ್ಕು ದಿನ ನಿರಂತರವಾಗಿ ಕೆಲಸಕ್ಕೆ ಬರುತ್ತೇವೆ ಎಂದು ಹೇಳಿದ ಕೆಲಸದವರು ಆ ನಾಲ್ಕು ದಿನ ಕಳೆದು ವಾರವಾದರೂ ಪತ್ತೆಯಿಲ್ಲ. ಮೊಬೈಲಿಗೆ ಕಾಲ್ ಮಾಡಿದರೆ ರಿಂಗ್ ಮಾತ್ರ ಆಗುತ್ತದೆ. ರಿಸೀವ್ ಮಾಡುವವರಿಲ್ಲ.


"ನಿಮ್ಮಲ್ಲಿ ಕೆಲಸಕ್ಕೆ ಜನ ಸಿಗ್ತಾರಾ??" ಎನ್ನುವುದು ಪರಸ್ಪರ ಭೇಟಿಯಾಗುವ ಅಡಿಕೆ ಕೃಷಿಕರೆಲ್ಲರ ಮೊದಲ ಮುಖ್ಯ ಪ್ರಶ್ನೆ. ಮದುವೆ ಇರಲಿ, ಸಾರ್ವಜನಿಕ ಗಣೇಶೋತ್ಸವವಿರಲಿ, ತಾಲೂಕು ಪಂಚಾಯಿತಿ ಮೀಟಿಂಗ್ ಇರಲಿ, ರಶ್ಶಾದ ಖಾಸಗಿ ಬಸ್ಸಲ್ಲಿ ಪರಸ್ಪರರು ಸಿಕ್ಕಲಿ ಇದಂತೂ ನಿತ್ಯದ ಸುಪ್ರಭಾತ.

ಒಂದು ಕಾಲದಲ್ಲಿ ಅಂದರೆ ಹತ್ತೋ ಹದಿನೈದು ವರ್ಷಗಳ ಹಿಂದೆ ಎರಡೋ ಮೂರೋ ಎಕರೆಯಲ್ಲಿ ಅಡಿಕೆ ಸಸಿ ನೆಟ್ಟು ಅದನ್ನು ತನ್ನದೇ ಮಗುವೇನೋ ಎಂಬಂತೆ ಬೆಳೆಸಿದ ಅಡಿಕೆ ಕೃಷಿಕ ಇವತ್ತು ಕೆಲಸದವರಿಲ್ಲದೇ ಪೂರ್ತಿ
ಕಂಗಾಲು. ಜೊತೆಗೆ ಅವನ ತೋಟವೀಗ ಹತ್ತು ಎಕರೆಯಷ್ಟು ವಿಸ್ತಾರ ಬೇರೆ. ಪ್ರಾರಂಭದ ದಿನಗಳಲ್ಲಿ ತೋಟ ಮಾಡಬೇಕು ಎನ್ನುವ ಹುರುಪಿತ್ತು. ಸ್ವತಃ ಅಡಿಕೆ ಮರಕ್ಕೆ ಹತ್ತಿ ಅಡಿಕೆ ಇಳಿಸುವ ತಾಕತ್ತಿತ್ತು. ಮೊದಲೆರಡು ವರ್ಷಗಳಲ್ಲಿ ಬಂದ ಹಿಡಿ ಪಾವು ಲಾಭದಲ್ಲಿ ಹೆಂಡತಿಯ ಕೊರಳು ಖಾಲಿ ಖಾಲಿ ಕಾಣುವುದನ್ನು ಕಂಡು ಲಕ್ಷ್ಮಣ ಆಚಾರಿ ಹತ್ರ ಸಿಂಪಲ್ಲಾದ ಚಿನ್ನದ ಚೈನು ಮಾಡಿಸಬೇಕು ಎಂದುಕೊಂಡಿದ್ದ ತನ್ನ ಯೋಜನೆಯನ್ನೇ ಮುಂದೂಡಿ ಹೊಸದಾಗಿ ಬಂದ ಸ್ಪಿಂಕ್ಲರ್ ಹಾಕಿಸಿದರೆ ಕಡೇ ಪಕ್ಷ ಬೇಸಿಗೆಯಲ್ಲಿ ನೀರು ಸರಿಯಾಗಿ ಗಿಡಗಳಿಗೆ ಸಿಗುತ್ತದೆ ಎನ್ನುವಂತಹ ಅಭಿವೃದ್ಧಿ ಯೋಜನೆಗಳಿದ್ದವು. ಇದೆಲ್ಲದರ ಜೊತೆಗೆ ಮನೆಯಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ ಸಾಗುತ್ತಿತ್ತು. ಮಗನ ಆಸೆ ಪೂರೈಸಲಿ ಎನ್ನುವ ಏಕೈಕ ಉದ್ದೇಶದಿಂದ ತನ್ನ ಹಣಕಾಸಿನ ಇತಿಮಿತಿಗೆ ದುಬಾರಿಯಾದ ಮಗನ ಇಷ್ಟದ ಕೋರ್ಸಿಗೆ ಸೇರಿಸಿದ್ದ ಆತ. ಅದಕ್ಕೆ ತೆಗೆದ ಸಾಲವನ್ನು ಮುಂದಿನ ಕೆಲವಾರು ವರ್ಷಗಳಲ್ಲಿ ತೀರಿಸಿಕೊಂಡರಾಯಿತು ಎನ್ನುವ ದೂರಾಲೋಚನೆ ಆತನದ್ದು. ಇದೆಲ್ಲದರ ಮಧ್ಯೆ ಬೆಳೆದ ಮಗಳಿಗೆ ಮದುವೆ ಮಾಡಿರುತ್ತಾನೆ. ತೋಟವನ್ನು ಸಲಹುತ್ತಾ, ಸಂಬಂಧಿಗಳಿಗೆ ಬೇಜಾರಾಗಬಾರದು, ಸಂಬಂಧಗಳು ಉಳಿಯಬೇಕು ಎನ್ನುವ ಕಾಳಜಿಯಿಂದ  ಎಪ್ರೀಲ್ ಮೇಯ ಮದುವೆ ಸೀಜನ್ನಿನಲ್ಲಿ ಒಂದೇ ದಿನ ಮೂರು ಮೂರು ಮದುವೆ ಅಟೆಂಡು ಮಾಡುತ್ತಾ, ಮತ್ತೊಂದಕ್ಕೆ ಹೆಂಡತಿಯನ್ನು ಕಳಿಸಿ ಅಬ್ಬಾ ಅಂತೂ ಈ ವರ್ಷದ ಮದುವೆ ಕೋಟಾ ಮುಗಿಯಿತು ಎಂದು ಉಸಿರೆಳೆದುಕೊಂಡಿರುತ್ತಾನೆ.


"ನಿಮಗೇನು ಬಿಡೋ ಮಾರಾಯ. ಅಡಿಕೆ ತೋಟ ಇದೆ. ಮರದಲ್ಲಿ ಅಡಿಕೆ ಬೆಳೆಯುತ್ತದೆ. ಇಳಿಸಿ ಮಾರಿದರಾಯ್ತು. ಜೀವನ ಆರಾಮು" ಎನ್ನುವ ಉಡಾಫೆಯ ಮಾತುಗಳೇ ಸಂಬಂಧಿಕರದ್ದು. ಅವರಿಗಂತೂ "ತೋಟ ಮಾಡಿಕೊಂಡು ಇವನೊಬ್ಬ ಆರಾಮವಾಗಿ ದಿನದೂಡುತ್ತಿದ್ದಾನೆ. ನಮ್ಮಂತೆ ನಗರದಲ್ಲಿ ಒದ್ದಾಡುತ್ತಿಲ್ಲವಲ್ಲ" ಎನ್ನುವ ಭ್ರಮೆ. ಇನ್ನು ಊರಲ್ಲಿರುವ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಕಂಡು "ನಮಗೆ ಊರಲ್ಲಿ ಉಂಟು" ಎಂದು ನಗರದಲ್ಲಿ ತಮ್ಮ ಪ್ರೆಸ್ಟೀಜು ಹೆಚ್ಚಿಸಲು ಮಾತಾಡುವವರಿಗೇನು ಕಮ್ಮಿ ಇಲ್ಲ. ಇವರ್ಯಾರಿಗೂ ಅಡಿಕೆ ತೋಟವನ್ನು ಸಂಭಾಳಿಸುವುದು ಮೊದಲಿನಷ್ಟು ಸುಲಭವಲ್ಲ ಎನ್ನುವುದು ಗೊತ್ತಾಗುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಇವರಿಗೆಲ್ಲಾ ವರ್ಷಕ್ಕೊಮ್ಮೆ ಊರಿಗೆ ಬರುವಾಗ ಅಡಿಕೆ ತೋಟ ಅಡ್ಡಾಡಲು ಪಾರ್ಕಿನಂತೆ ಕಾಣುತ್ತದೆಯೇ ಹೊರತು ತೋಟದ ಜ್ವಲಂತ ಸಮಸ್ಯೆಗಳು ಬೇಕಿಲ್ಲ. ನಿಭಾಯಿಸುವವ ಅದನ್ನು ಹೇಳಲು ಹೊರಟರೂ ಅವರಿಗೆ ಕೇಳಲು ಆಸಕ್ತಿ ಇಲ್ಲ. ಇದೆಲ್ಲ ಸಾವಿರದೊಂಬೈನೂರ ಐವತ್ತನಾಲ್ಕನೇ ಇಸವಿಯ ಬ್ಲ್ಯಾಕ್ ಅಂಡ್ ವೈಟ್ ಸಿನಿಮಾದ ಅವ್ಯಾಹತ ಗೋಳಿನ ದೃಶ್ಯದಂತೆ ಕಾಣುವ ಮಟ್ಟಿಗಿನ ಸಿನಿಕತೆ ಅವರಲ್ಲಿ ತುಂಬಿ ತುಳುಕಾಡುತ್ತಿದೆ. ಅದನ್ನು ನಗರದ ವಾತಾವರಣ ಹುಟ್ಟು ಹಾಕಿದೆ. 

ಬೆಳಿಗ್ಗೆ, ಮಧ್ಯಾಹ್ನ, ಸಂಜೆ ತೋಟ ತೋಟ ಎಂದು ಓಡಾಡುತ್ತಿದ್ದಂತಹ ಜೀವಗಳಿಗಿವತ್ತು ವಯಸ್ಸಾಗಿದೆ. ಅಡಿಕೆ ರೇಟು ಪಾತಾಳದಲ್ಲಿ ನೇತಾಡಲು ಶುರು ಮಾಡಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಮಗ ಬೆಂಗ್ಳೂರು, ಮಂಗ್ಳೂರು ಸೇರಿಕೊಂಡು ಕೆಲಸ ಮಾಡಲು ಶುರು ಮಾಡಿ ಒಂದೆರಡು ವರ್ಷವಾಗಿದೆ. ಅವನಿಗೆ ತೋಟದಲ್ಲಿ ದೊಡ್ಡ ಮಟ್ಟಿನ ಇಂಟರೆಸ್ಟ್ ಇಲ್ಲ. ಹಾಕಿದ ಕಾಸೇ ಹುಟ್ಟದಿರುವ ಸನ್ನಿವೇಶವಿರುವಾಗ ಅಪ್ಪನೂ ಮಗನಿಗೆ ಒತ್ತಾಯ ಮಾಡುತ್ತಿಲ್ಲ. ಕೆಲಸಕ್ಕೆ ಜನ ಮೊದಲಿನಂತೆ ಸಿಗುತ್ತಿಲ್ಲ ಎನ್ನುವುದೇ ದೊಡ್ಡ ತಲೆನೋವು. ತಾನೇ ಕೆಲಸ ಮಾಡುವ ಎಂದರೆ ವಯಸ್ಸು ಕೇಳುತ್ತಿಲ್ಲ. ಯಾರಿಗೆ ಬೇಕು ಅಡಿಕೆ ಕೃಷಿ ಎನ್ನುವಂತಾಗಿದೆ. ಮೊದಲಿನಂತೆ ಈಗಿನ ಕೆಲಸಗಾರರು ಇಲ್ಲ. ಮಂಗ್ಳೂರು ಬೆಂಗ್ಳೂರು ಟ್ರೈನು ಶುರುವಾದ ಮೇಲೆ ಊರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಹುಡುಗರು, ಬೆಂಗ್ಳೂರಲ್ಲಿ ಮೇಸ್ತ್ರಿ ಕೆಲಸಕ್ಕೆ ಹೆಲ್ಪರ್ಗಳಾಗಿ ಸೇರಿಕೊಳ್ಳುವ ಸಂಖ್ಯೆ ಜಾಸ್ತಿಯಾಗಿದೆ. ಅವರಿಗೆ ಶೀಘ್ರವಾಗಿ "ನಗರದಲ್ಲಿ ಮೇಸ್ತ್ರಿ"ಗಳಾಗುವ ಹಂಬಲ. ಮತ್ತೆ ಕೆಲವರು ನಗರದಲ್ಲಿ ಒದ್ದಾಡಿ ಕೆಲಸ ಹುಡುಕಿಕೊಂಡಿದ್ದಾರೆ. ಊರಲ್ಲಿ ತೋಟದ ಕೆಲಸಕ್ಕೆ ಹೋದರೆ ಜೀವನ ಪರ್ಯಂತ ತಮ್ಮ ಅಪ್ಪ-ಅಮ್ಮಂದಿರಂತೆ ಹೊಟ್ಟೆಗಷ್ಟೇ ಮಾತ್ರ ದುಡಿಯುವ ಪರಿಸ್ಥಿತಿ ಮುಂದುವರಿಯುವುದು ಅವರಿಗೆಲ್ಲಾ ಬೇಕಾಗಿಲ್ಲ. ಬೆಂಗ್ಳೂರಲ್ಲಿ ತಿಂಗಳುಗಟ್ಟಲೆ ದುಡಿದರೆ ಉಳಿಸಬಹುದು ಎನ್ನುವ ಯೋಚನೆಯಿಂದ ಟ್ರೈನು ಹತ್ತುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ನಗರದಲ್ಲಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಗ್ರೇಡಿಂಗ್ ಸಿಸ್ಟಂ ಊರಿಗೆ ಬಂದಾಗಲೆಲ್ಲಾ ಚಲಾವಣೆಯಾಗುತ್ತದೆ ಎನ್ನುವ ತೀರ್ಮಾನಗಳಿವೆ
. "ಇಲ್ಲಿಗಿಂತ ಕಾಲು ವಾಶಿ ಜಾಸ್ತಿ ದುಡಿದರೂ, ಬೆಂಗ್ಳೂರಲ್ಲಿ ಕೈಯಲ್ಲಿ ದುಡ್ಡು ಉಳೀಲಿಕ್ಕೆ ಉಂಟಾ. ಇವರಿಗೆಲ್ಲ ಮರ್ಲ್(ಹುಚ್ಚು)" ಎಂದು ಊರ ಹಿರಿಯರು ಗೊಣಗುತ್ತಿರುತ್ತಾರೆ. ಇವರಲ್ಲಿ ಯಾರು ಸರಿ, ಯಾರು ತಪ್ಪು ಎಂದು ಜಡ್ಜ್ಮೆಂಟು ಪಾಸು ಮಾಡುವುದರಲ್ಲಿ ಹೆಚ್ಚಿನವರಿಗೆ ಆಸಕ್ತಿಯೇ ಉಳಿದಿಲ್ಲ. "ಎಲ್ಲಾ ನಮ್ಮ ಕರ್ಮ" ಎಂದು ಗೊಣಗುತ್ತಾರಷ್ಟೇ.

ಇನ್ನು ಖಾಯಮ್ಮಾಗಿ ಅಡಿಕೆ ಸುಲಿಯಲು ಬರುತ್ತಿದ್ದವರೂ ಸಹ ಕಳೆದ ವರ್ಷದಿಂದ ನಿಯಮಿತವಾಗಿ ಕೈ ಕೊಡಲು ಪ್ರಾರಂಭಿಸಿದ್ದಾರೆ. ಬಂಟ್ವಾಳ ತಾಲೂಕಿನ ರಾಯಿಯ ಅಡಿಕೆ ಸುಲಿಯುವ ಹುಡುಗರು ದೂರದ ಸುಬ್ರಮಣ್ಯಕ್ಕೆ ಹೋಗಿ ಒಂದೆರಡು ವಾರ ನಿಂತು ಅಡಿಕೆ ಸುಲಿದು ಕೊಟ್ಟು ಬಂದಿದ್ದಾರೆ. ಹಾಗೆ ಹೋಗಿದ್ದರಿಂದ ಊರಲ್ಲಿ ಅವರು ಖಾಯಮ್ಮಾಗಿ ಅಡಿಕೆ ಸುಲಿಯುತ್ತಿದ್ದ ಮನೆಗಳ ಅಡಿಕೆ ಸುಲಿಯುವವರಿಲ್ಲದೇ ಬಾಕಿಯಾಗಿದೆ. ಕೆಲಸಗಾರರಿಗೆ ಯಾವ ಪರಿ ತತ್ವಾರವೆಂದರೆ ಕೆಲವರಂತೂ ಕಳೆದ ವರ್ಷ ಅಡಿಕೆ ಸುಲಿಯಲು ಜನ ಸಿಕ್ಕದೇ ಆ ಅಡಿಕೆಯನ್ನು ಈ ವರ್ಷ ಸುಲಿಯಲು ಜನರನ್ನು ಹೊಂದಿಸಿಕೊಳ್ಳುವಷ್ಟರಲ್ಲೇ ಸುಸ್ತಾಗಿದ್ದಾರೆ. ದೂರದ ಸುಬ್ರಮಣ್ಯಕ್ಕೆ ರಾಯಿಯಿಂದ ಅಡಿಕೆ ಸುಲಿಯಲು ಜನ ಹೋಗಲು ಕಾರಣ ಸಹ ಕೆಲಸಗಾರರ ಕೊರತೆಯೇ. ಅಡಿಕೆ ಸುಲಿಯಲು, ಅಡಿಕೆ ತೆಗೆಯಲು ಗೊತ್ತಿರುವುದು ಸಹ ತುಂಬಾ ಕಡಿಮೆ ಮಂದಿಗೇನೇ. ಅವರೆಲ್ಲಾ ಹೆಚ್ಚು ಕಡಿಮೆ ಹತ್ತು ವರ್ಷದಿಂದ ಅದೇ ಕೆಲಸ ಮಾಡಿಕೊಂಡು ಬಂದಿದ್ದಾರೆ. 


ಅವರನ್ನು ಬಿಟ್ಟರೆ ಯುವಕರಲ್ಲಿ ಬಹುತೇಕರು ಈ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಅಡಿಕೆ ಸಂಬಂಧಿ ವೃತ್ತಿಗಿಂತ ಕಡಿಮೆ ದೈಹಿಕ ಶ್ರಮ ಹಾಗೂ ಹೆಚ್ಚು ಆಕರ್ಷಕವಾದ ಸ್ವಲ್ಪ ಅಧಿಕ ಸಂಬಳವನ್ನು ಕೊಡುವ ಕೆಲಸಗಳು ಹಲವಾರು ಕಣ್ಣೆದುರಿಗಿವೆ. ಜೊತೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಮಣ್ಣಿನಲ್ಲಿ, ಬಿಸಿಲಿನಲ್ಲಿ, ಕೆಸರಿನಲ್ಲಿ ಕೆಲಸ ಮಾಡುವ ಜರೂರತ್ತಿಲ್ಲ. ಟಿಪ್ಟಾಪಾಗಿ ಡ್ರೆಸ್ ಮಾಡಿಕೊಂಡು ಬಸ್ ಹತ್ತಿದರಾಯಿತು. ಹೇಗೆ ಅಡಿಕೆ ಕೃಷಿಕರು ತಮ್ಮ ಮಕ್ಕಳಿಗೆ ತೋಟದ ಉಸಾಬರಿ ಬೇಡ, ಚೆನ್ನಾಗಿ ಓದಿ ಕೆಲಸ ಹಿಡಿಯಲಿ ಎಂದು ಆಶಿಸುತ್ತಿದ್ದಾರೋ ಅದೇ ರೀತಿಯ ಆಸೆ ಕೆಲಸಗಾರರ ಕುಟುಂಬಗಳಲ್ಲೂ ಹೆಚ್ಚಾಗಿ ಕಾಣುತ್ತಿದೆ. ಜಾಗತೀಕರಣದಿಂದಾಗಿ ಮೊಬೈಲ್ ಮೂಲಕ ಹಳ್ಳಿಗಳಲ್ಲೂ ಸಾಧ್ಯವಾದ ಸಂಪರ್ಕ ಕ್ರಾಂತಿ, ಎರಡು ಸಾವಿರದ ಆಸುಪಾಸಿನಲ್ಲಿ ಸಿಗುವ ಡಿಟಿಹೆಚ್, ಕಡಿಮೆ ದರದಲ್ಲಿ ಕೈಗಟಕುವ ಎಲೆಕ್ಟ್ರಾನಿಕ್ ಉಪಕರಣಗಳು, ಡಿಸ್ಕೌಂಟಿನಲ್ಲಿ ಸಿಗುವ ಥರವೇಹಾರಿ ಬಟ್ಟೆಗಳು ಇತ್ಯಾದಿಗಳು ಸೇರಿ ಕೆಲಸಗಾರ ಕುಟುಂಬಗಳಿಗೆ ಮೊದಲಿಗಿಂತ ನೆಮ್ಮದಿಯ ನಿಟ್ಟುಸಿರು ಬಿಡಲು ಸಹಕರಿಸಿವೆ. ಇದೆಲ್ಲದರಿಂದಾಗಿ ಅಡಿಕೆ ಸುಲಿಯುವ, ತೋಟದ ಕೆಲಸಗಾರನಿಗೆ ಮಗ ತನಗಿಂತ ಅರೆಪಾವು ನೆಮ್ಮದಿಯ ಕೆಲಸ ಮಾಡಲಿ ಎನ್ನುವ ಆಸೆ ಇರುತ್ತದೆ. ಹಾಗಿದ್ದಾಗ ಮಗ ಗ್ಯಾರೇಜಿನಲ್ಲಿ ಕೆಲಸಕ್ಕೆ ಹೋದರೂ ಮುಪ್ಪಾದ ಅಪ್ಪನಿಗೆ ಸಂತೋಷವೇ. ಫ್ಯಾಶನೆಬಲ್   ಆಗಿ, ಕಂಫರ್ಟ್ ಜೋನ್ ನಲ್ಲಿ ಬದುಕುವುದು ಒಂದು ಕಾಲದಲ್ಲಿ ಮೇಲ್ವರ್ಗಕ್ಕೆ ಮಾತ್ರ ಸೀಮೀತವಾಗಿತ್ತು. ನಂತರ ಮಧ್ಯಮ ವರ್ಗಕ್ಕೆ ಬಂತು. ಇತ್ತೀಚೆಗಂತೂ ಅದು ದಕ್ಷಿಣ ಕನ್ನಡದ ಕೆಳ ಮಧ್ಯಮ ಹಾಗೂ ದುಡಿಯುವ ವರ್ಗದಲ್ಲಿ ಢಾಳಾಗಿ ಕಾಣಿಸುತ್ತಿದೆ.

ತೋಟದ ಕೆಲಸಕ್ಕೆ ಜನರನ್ನು ಒಟ್ಟು ಮಾಡುವುದಂತೂ ಕನಸಿನ ಮಾತೇ. ಹಟ್ಟಿಯ ಗೊಬ್ಬರ ಹೊರುವ ಕೆಲಸ ಅಂದ್ರೆ ಸಾಕು ಕೆಲಸಕ್ಕೆ ಬರುವವರೂ ದಿಢೀರ್ ಕಣ್ಮರೆಯಾಗುತ್ತಾರೆ. ಒಂದು ವೇಳೆ ನಿಮ್ಮ ಮನೆಗೆ ಖಾಯಮ್ಮಾಗಿ ಕೆಲಸಕ್ಕೆ ಬರುವವರು ತಪ್ಪಿಸಿಕೊಳ್ಳುತ್ತಿದ್ದಾರೆ ಅಂತ ಗೊತ್ತಾಗಿ ಮೆತ್ತಗೆ ಅಸಮಾಧಾನ ಹೊರಹಾಕಿದಿರೋ ನಿಮ್ಮ ಕತೆ ಮುಗಿದಂತೆಯೇ. ಅವರೆಲ್ಲಾ ಶಾಶ್ವತವಾಗಿ ನಿಮ್ಮ ತೋಟದ ಕಡೆ ಮುಖವೇ ಹಾಕುವುದಿಲ್ಲ. ಅವರಿಗಂತೂ ಕೆಲಸಕ್ಕೆ ಕರಿಯುವವರ ಕ್ಯೂ ಇದೆ. ಅಲ್ಲಿಗೆ ನಿಮ್ಮ ತೋಟದ ಕೆಲಸ ಪಡ್ಚಾ. ನೀವೂ ಪಡ್ಚಾ. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಅಡಿಕೆ ತೋಟ ಹೊಂದಿರುವವರು ಕೆಲಸಗಾರರ ಜೊತೆ ವ್ಯವಹರಿಸುವಾಗ, ಮಾತನಾಡುವಾಗ ಅಗತ್ಯಕ್ಕಿಂತ ಹೆಚ್ಚು ಜಾಗರೂಕತೆಯಿಂದ ವರ್ತಿಸುತ್ತಿದ್ದಾರೆ.

ಮಾತಿನಲ್ಲಿ ಕೃತಿಯಲ್ಲಿ ಯಡವಟ್ಟಾದರೆ ಸದ್ಯದ ಪರಿಸ್ಥಿತಿಯಲ್ಲಿ ದಕ್ಷಿಣ ಕನ್ನಡದ ಯಾವ ದೇವರೂ, ದೈವವೂ ಕಾಪಾಡುವುದಿಲ್ಲ. ಈಗಿರುವ ಕೆಲಸಗಾರರ ಕೊರತೆ, ಅವರಿಗಾಗಿ ಕಾದುಕುಳಿತುಕೊಳ್ಳುವ ಉಸಾಬರಿ ತಪ್ಪಿಸಲು ಪಡ್ರೆ ಸಮೀಪದ ಸಮಾನ ಪಂಗಡದ ಅದೇ ಊರಿನ ಕೆಲವು ಅಡಿಕೆ ತೋಟದವರು ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಸ್ವಸಹಾಯ ಗುಂಪುಗಳಂತೆ ಪಡ್ರೆಯ ಈ ಗುಂಪು ಕೆಲಸ ಮಾಡುತ್ತದೆ. ವಾರದಲ್ಲಿ ಒಂದೋ ಎರಡೋ ದಿನ ಆ ಗುಂಪಿನಲ್ಲಿರುವವರ ಮನೆಯಲ್ಲಿ ಕೆಲಸ ಮಾಡುವುದು. ಆ ಗುಂಪಿನಲ್ಲಿರುವ ಯಾರೇ ಕರೆದರೂ ಅವರಲ್ಲಿ ತೋಟದ ಕೆಲಸಕ್ಕೆ ಹೋಗಬೇಕು. ಅವರವರೇ ಗೊಬ್ಬರ ಹೊರುವುದರಿಂದ ಹಿಡಿದು ಅಡಿಕೆ ಕೊಯ್ಯುವವರೆಗೆ ಕೆಲಸ ಮಾಡುತ್ತಾರೆ. ಅಡಿಕೆ ಸುಲಿಯುತ್ತಾರೆ, ಮಳೆ ಸೂಚನೆ ಸಿಕ್ಕರೆ ಸಾಕು ಅಡಿಕೆ ರಾಶಿ ಮಾಡಲು ಓಡಿಬರುತ್ತಾರೆ. ಅಲ್ಲಿ ಮಾಡಿದ ಕೆಲಸಕ್ಕೆ ಸಂಬಳ ಇಲ್ಲ. ಆವತ್ತು ಕೆಲಸ ಮಾಡಿದ್ದಕ್ಕೆ ಅಲ್ಲೊಂದು ಗಡದ್ದು ಹಬ್ಬದ ಊಟ. ಹೀಗೆ ನಮ್ಮ ನಮ್ಮ ತೋಟದ ಕೆಲಸಗಳನ್ನು ನಾವೇ ಮಾಡಿದರೆ ಮಾತ್ರ ಊಟಕ್ಕುಂಟಷ್ಟೇ ಎನ್ನುವಲ್ಲಿಗೆ ಸಮಸ್ಯೆ ಬಂದು ನಿಂತಿದೆ.

ಕೆಲಸದವರನ್ನು ನಂಬಿಕೊಂಡು ಕೃಷಿ ಮಾಡುತ್ತೇವೆ ಎನ್ನುವ ಆತ್ಮವಿಶ್ವಾಸಕ್ಕೆ ಬೆಂಕಿ ಬಿದ್ದು ಕಾಲವಾಗಿದೆ. ಈಗಿರುವುದಂತೂ ಆದೇ ಆತ್ಮವಿಶ್ವಾಸದ ಬೂದಿ. ಅದನ್ನು ತೋಟದ ಮಾಲೀಕರೇ ಅಡಿಕೆ ಮರದ ಬುಡಕ್ಕೆ ಹಾಕಿದರೆ ಸ್ವಲ್ಪ ಹೆಚ್ಚು ದಿನ ಅಡಿಕೆ ಮರ ಬದುಕಬಹುದು. ಆದರೆ ಅದಕ್ಕೆ ತಕ್ಕ ಫಲ ನೀಡುತ್ತದೆ ಎನ್ನುವ ಗ್ಯಾರೆಂಟಿ ಇಲ್ಲ! ಅಡಿಕೆ ಕೃಷಿ ನಮ್ಮ ಕಾಲಕ್ಕಾಯಿತು ಎಂದು ಹಿರಿಯರು ಸ್ವಗತದಲ್ಲಿ ಮಾತಾಡಲು ಶುರುಮಾಡಿ ವರ್ಷಗಳೇ ಕಳೆದಿವೆ. ಆದರೂ ಆ ಹಿರಿ ಜೀವಗಳು ಪ್ರತೀ ವರ್ಷದ ಬಜೆಟ್ ನೋಡುವುದನ್ನು ಬಿಟ್ಟಿಲ್ಲ. ಅಲ್ಲೇನಾದರೂ ಪರ್ಯಾಯ ಕೃಷಿಗೆ ಉಪಯುಕ್ತವಾಗುವಂತಹ ಸವಲತ್ತುಗಳಿವೆಯಾ ಎಂದು ತಡಕಾಡುತ್ತಾ "ಎಂತ ಕರ್ಮ. ಎಲ್ಲಾ ಪಕ್ಷಗಳೂ ಒಂದೇ. ಎಲ್ಲರದ್ದೂ ಕಣ್ಣೊರೆಸುವ ತಂತ್ರ" ಎನ್ನುತ್ತಾ ಉಸಿರೆಳೆದುಕೊಳ್ಳುತ್ತಾರೆ.

ಗೋಪಾಲಕೃಷ್ಣ ಕುಂಟಿನಿ ಅವರ "ದೀಪದ ಕೆಳಗೆ ಕತ್ತಲು" ಎನ್ನುವ ಕತೆಯಲ್ಲಿ ಸಂಕಪ್ಪಯ್ಯ ಎನ್ನುವ ಪಾತ್ರವೊಂದು ಬರುತ್ತದೆ. ಸಂಕಪ್ಪಯ್ಯ ಕಷ್ಟಪಟ್ಟು ಮಾಡಿದ ತೋಟ ಹೊಸದಾಗಿ ನಿರ್ಮಿಸಲ್ಪಡುವ
ಅಣೆಕಟ್ಟಿನಿಂದಾಗಿ ಮುಳುಗುವ ಹಂತಕ್ಕೆ ಬಂದಿರುತ್ತದೆ. ಅದ್ದರಿಂದ ಊರು ಬಿಡುವ ಮೊದಲು ಸಂಕಪ್ಪಯ್ಯನ ಮಗ ತೋಟದ ಅಡಿಕೆ ಮರಗಳನ್ನು ಕಡಿಯಲು ಫೀಟಿಗೆ ಇಂತಿಷ್ಟು ಎಂದು ಕಂಟ್ರ್ಯಾಕ್ಟು ಕೊಡುತ್ತಾನೆ. ಇದನ್ನೆಲ್ಲಾ ಈಜಿ ಚೇರಿನ ಮೇಲೆ ಕುಳಿತು ವೃದ್ಧ ಸಂಕಪ್ಪಯ್ಯ ಕೇಳಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಈಗಾಗಲೇ ಕೆಲವು ಕಡೆ ಅಡಿಕೆ ಮರ ಕಡಿದು ರಬ್ಬರು ಹಾಕುತ್ತಿದ್ದಾರೆ. 

ಸಂಕಪ್ಪಯ್ಯನಂತಹ ವೃದ್ಧರು ದಕ್ಷಿಣ ಕನ್ನಡದಲ್ಲಿ ಸಾವಿರಾರು ಮಂದಿ ಈಜಿ ಚೇರಿನಲ್ಲಿ ಒಂಟಿಯಾಗಿ ಕುಳಿತಿದ್ದಾರೆ. ಅವರ ಕಣ್ಣ ಮುಂದೆ ಅವರೇ ಬೆಳೆಸಿದ ತೋಟ ಮೌನದಿಂದಿದೆ.



ಚಿತ್ರ ಕೃಪೆ: ಮಹೇಶ್ ಪಿ ಕುಂಬ್ಳೆ 

 

ಬುಧವಾರ, ಮಾರ್ಚ್ 24, 2010

ನಗರದ ನಿಟ್ಟುಸಿರುಗಳ ನಡುವೆ ಒಂದು ಸಂಜೆ

ಅದೆಷ್ಟು ದಿನಗಳಾಯಿತೋ ಬಾಲ್ಕನಿಯಲ್ಲಿ ನಿಂತು ಚಂದ್ರನನ್ನು ನೋಡಿ...
ಮನೆಯ ಕಿಟಕಿಯೊಳಗಿನಿಂದ ಚಂದ್ರನ ಬೆಳಕು, ಸರಳುಗಳ ನೆರಳು ನೆಲದಲ್ಲಿ ಬೆಳಕಿನ ರಂಗೋಲಿ ಬಿಡಿಸಿದ್ದನ್ನು ನೋಡುತ್ತಾ ಮೈ ಮರೆತು ನಿದ್ದೆ ಹೋಗಿ. ರಾತ್ರಿ ನೈಟು ಶಿಫ್ಟು ಮಾಡಿ ಆಫೀಸಿನ ಕ್ಯಾಬುಗಳನ್ನು ಏರುವವರಿಗೆ ಹುಣ್ಣಿಮೆಯಿದ್ದರೂ, ಅಮಾವಾಸ್ಯೆ ಇದ್ದರೂ ತಲೆಕೆಡಿಸಿಕೊಳ್ಳುವ ಉಮೇದಿಲ್ಲ. ನಿದ್ದೆ ಕಣ್ಣಲ್ಲಿ ಕರಗುವುದಷ್ಟೇ ಗೊತ್ತು. ಕ್ಯಾಬಿನ ಕಿಟಕಿಯಿಂದ ಹೊರಕ್ಕೆ ಇಣುಕಿ ನೋಡುತ್ತಾ ಕುಳಿತುಕೊಳ್ಳುವುದರಲ್ಲಿ ಹೆಚ್ಚು ಆಸ್ಥೆಯಿಲ್ಲ. ಪ್ರತೀ ನೂರು ಮೀಟರಿಗೆ ಒಂದಕ್ಕೊಂದು ಅಪ್ಪಿಕೊಂಡಂತೆ ಇರುವ ನಿಯಾನು ದೀಪ, ಟ್ಯೂಬ್ಲೈಟುಗಳ ಮಧ್ಯೆ ನಗರದಲ್ಲಿರುವ ಚಂದ್ರ ಡೆಡ್ ಇನ್ವೆಸ್ಟ್ಮೆಂಟ್. ಅನಗತ್ಯ ಎನರ್ಜಿ
ವೇಸ್ಟು....ಸುಮ್ಮನೆ ಮಧ್ಯಾಹ್ನಗಳಲ್ಲಿ ಕಾರ್ಪೋರೇಷನ್ನಿನ ಆಫ್ ಮಾಡದ ಲೈಟುಗಳಂತೆ ಬೆಳಗುತ್ತಿರುವವ ಎನ್ನುವ ಭಾವನೆಯೇ ಆತನ ಬಗ್ಗೆ....

ಸದ್ಯಕ್ಕೆ ನಮಗೆಲ್ಲಾ ಚಂದ್ರನಿಲ್ಲದ ರಾತ್ರಿ, ನಿರ್ಜನ, ಏಕಾಂತ ಪ್ರದೇಶಗಳಲ್ಲಿ ಹುಟ್ಟುವ ಚಡಪಡಿಕೆ, ಕಾತರವನ್ನು ನಗರ ಉಳಿಸುವುದೇ ಇಲ್ಲ. ಅಷ್ಟರಮಟ್ಟಿಗೆ ಚಂದ್ರ ನಗರಗಳಲ್ಲಿ ಅಪ್ರಸ್ತುತ. ಆತನ ಗೈರು ಹಾಜರಿಯೂ ನಮಗೆಲ್ಲಾ ಒಪ್ಪಿತವಾಗುವ ವಿಷಯವೇ.

ನಮ್ಮ ನಗರದ ಅಪಾರ್ಟ್ಮೆಂಟಿನ
ಬಾಲ್ಕನಿ, ಮನೆಯ ಮಹಡಿಗಳಿಂದ ಕಾಣಲು ಹೊರಡುವ ಚಂದ್ರನಿಗೆ ಬೆಳಕಿನ ಸರಪಳಿ. ಯಾಕೆಂದರೆ ಉದ್ದುದ್ದ ಮಲಗಿದ ರಸ್ತೆಯಂತೆ ಬದುಕು ನೆರಳುಗಳಿಲ್ಲದ ಅಸ್ಥಿಪಂಜರ. ನಿತ್ಯದ ಸುಸ್ಥಿತಿಗೆ ನಮಗೆಲ್ಲಾ ಬೆಳಗಿನ ಸೂರ್ಯೋದಯ ಬೇಕು. ಟ್ರಾಫಿಕ್ಕು ಜಾಮು ಬೇಕು. ಜೊತೆಗೆ ಉಪಹಾರ ದರ್ಶಿನಿಯ ಬೈಟೂ ಕಾಫಿ. ಅಭ್ಯಾಸವಿದ್ದರೆ ಸೇದಲು ಚೋಟುದ್ದದ ಸಿಗರೇಟು. ಏಕಾಂತದ ರಾತ್ರಿ, ನಿಶ್ಯಬ್ದವಾಗಿರುವ ಸಂಜೆ, ರಾತ್ರಿ ಯಾರಿಗೂ ಬೇಡ. ಬೆಳಕಿಗೆ ಇರುವ ಅಗಾಧ ಮಾರ್ಕೆಟ್ಟು ಕತ್ತೆಲೆಗಿಲ್ಲ. ಬೆಳಕು ಇವತ್ತು ಬೆರಗಲ್ಲವೋ ಅಣ್ಣಾ...ಅದು ಕೇವಲ ಬೆಸ್ಕಾಂನ ಮಧ್ಯೆ ಮಧ್ಯೆ ಬಂದು ಹೋಗುವ ಲೋಡ್ಶೆಡ್ಡಿಂಗು, ಪವರ್ಕಟ್ಟು.

ರಾತ್ರಿಯಾಯಿತೆಂದರೆ ಸಾಕು ಜಗತ್ತಿಗೆ ನಿದ್ದೆಯ ನಾಟಕ. ಹೇಳಿಕೊಳ್ಳಲು ಆಯಾಸದ ಸಬೂಬು. ಚಳಿಗೆ ನಡೆಯುತ್ತಾ, ಒಂಟಿಯಾಗಿ ರಾತ್ರಿಗಳಲ್ಲಿ ಸುಮ್ಮನೆ ಕೂತುಕೊಳ್ಳಿ ಅಂತ ನೀವು ಹೇಳಿದರೆ ಹೇಗೆ ಸ್ವಾಮಿ ಎಂದು ದಬಾಯಿಸಲು ಸಾವಿರ ನಾಲಿಗೆಗಳಿವೆ. ನಮ್ಮದೇನಿದ್ದರೂ ಗಂಟೆಗೆ 24 ಡಾಲರು ದುಡಿಯುವವರ ದಂಡು. ತಪ್ಪದೇ ರಾತ್ರೆ ಇಡೀ ಕಂಪ್ಯೂಟರ್ ಮುಂದೆ ಸೈನ್ ಇನ್ ಆಗಿದ್ದರೆ ಮಾತ್ರ ಕೆಲಸ, ಆಕರ್ಷಕ ಸಂಬಳ ಉಳಿಯುತ್ತದೆ. ಅಷ್ಟರಮಟ್ಟಿಗೆ ರಾತ್ರಿ, ಕೊನೇ ಕ್ಷಣದ ಆಕ್ಸಿಜನ್ ಇದ್ದಂತೆ ಇವತ್ತಿನ ಆಧುನಿಕ ಜಗತ್ತಿಗೆ. ರಾತ್ರಿಯ ತಂಪು, ತಂಗಾಳಿ ಎನ್ನುವುದೆಲ್ಲಾ ಕವಿಗಳ ಗಿಮಿಕ್ಕು ಎನ್ನುವ ಅಸಡ್ಡೆ. ನಗರದ ರಾತ್ರಿಗಳಲ್ಲಿ ಹೆಚ್ಚೆಂದರೆ ಜೀವಭಯ, ನಡುಕ......ಹೆಚ್ಚೆಂದರೆ ವೀಕೆಂಡುಗಳಲ್ಲಿ ಶಾಪಿಂಗು, ಔಟಿಂಗು ಹೋಗಿ ಹಿಂತಿರುಗುವಾಗ ಆಗುವ ಸ್ಟುಪಿಡ್ ಚಳಿ. ಅದಕ್ಕಾಗಿ ಮೆಗಾ ಮಾಲ್ಗಳಲ್ಲಿ ತೆಗೆದುಕೊಂಡ ಬ್ರ್ಯಾಂಡೆಡ್ ಜರ್ಕಿನ್ನು
, ಸ್ವೆಟರು ಹಾಕಿಕೊಳ್ಳುತ್ತಾ ಕಟ ಕಟ ಎಂದು ಹಲ್ಲು ಕಡಿಯುವುದು.... ಯಾರಿಗೆ ಬೇಕು ಸ್ವಾಮಿ ರಾತ್ರಿಯ ಉಸಾಬರಿ...ಸಿಗ್ನಲ್ನಲ್ಲಿ ನಿಂತಾಗ ಚಂದ್ರ ಇದ್ದಾನೋ ಇಲ್ಲವೋ ಎಂದು ಆಕಾಶದತ್ತ ತಲೆ ಹಾಕುವ ಉಸಾಬರಿ. ಸಿಗ್ನಲ್ಲಿನ ಕೆಂಪು ದೀಪ ಹಸಿರಿಗೆ ತಿರುಗಿದರೆ ಸಾಕು...ಮನೆ ತಲುಪಿ ಉಸ್ಸಪ್ಪಾ ಎಂದು ಹಾಸಿಗೆಗೆ ಒರಗಿದರೆ ಸಾಕು....ಇಷ್ಟೇ ಸಾಧ್ಯತೆಗಳಿರುವುದು ಬಹುಷಃ ನಗರದ ರಾತ್ರಿಗಳಿಗೆ.
******************

ಮೌನವಾಗಿರುವ ನಗರ ಯಾರಿಗೂ ಬೇಡ. ಅದಕ್ಕೇ ಮಧ್ಯರಾತ್ರಿ, ತಡರಾತ್ರಿಯವರೆಗೂ ಮೆಸೇಜು ಬಂದು ಬೀಳುತ್ತದೆ ಇನ್ಬಾಕ್ಸಿಗೆ. ಮಾತನಾಡದೇ ಮೌನವಾಗಿರುವಾಗ ದುಡ್ಡು ಹುಟ್ಟಿಸುವುದನ್ನು ಇನ್ನೂ ಅನ್ವೇಶಿಸಿಲ್ಲ ಅಷ್ಟೇ. ಆದ್ದರಿಂದ ನಗರದಲ್ಲಿ ಕೆಲಸ ಸಿಗದವರು, ಕೆಲಸ ಕಳಕೊಂಡವರು ಹೀಗೆ ತಾತ್ಕಾಲಿಕ ನಗರ ತಿರಸ್ಕೃತರು ಮಾತ್ರ ಮೌನಕ್ಕೆ ಒಗ್ಗುವ ಮಂದಿ. ಮೌನದಲ್ಲೇ ಸೋಲನ್ನು ಪರಾಮರ್ಶಿಸುವ
ಮಂದಿ....ಒಂದು ವೇಳೆ ಮಧ್ಯರಾತ್ರಿ ಆತ/ ಆಕೆ ಎಚ್ಚರವಿದ್ದಾರೆ ಎಂದಿಟ್ಟುಕೊಳ್ಳಿ. ಒಂದೋ ಆತ ಆಕೆಯೊಂದಿಗೆ ಮಾತನಾಡುತ್ತಿರುತ್ತಾನೆ. ಇಲ್ಲವೇ ಆಕೆ ಆತನೊಂದಿಗೆ ಮಾತನಾಡುತ್ತಿರುತ್ತಾಳೆ. ಅವರಿಬ್ಬರೂ ಮೌನವಾಗಿರುವುದು ಒಬ್ಬರಿಗೊಬ್ಬರು ಕೈಕೊಟ್ಟು ಗುಡ್ಬೈ ಹೇಳಿದಾಗ ಮಾತ್ರ. ಆ ರಾತ್ರಿಗಳಲ್ಲೂ ಚಂದ್ರನಿಗಿಂತ, ಮೌನಕ್ಕಿಂತ ಕಾಫಿ ಡೇಗಳು ಪ್ರತೀ ಭೇಟಿಗಳಲ್ಲಿ ಹುಟ್ಟಿಸಿದ ತೆಳು ಬೆಳಕಿನ ಕುಂಡಗಳು ಹೆಚ್ಚು ಆಪ್ಯಾಯಮಾನವಾಗಿದ್ದು ಕಾಣುತ್ತವೆ ಪರಸ್ಪರರಿಗೆ. ಇದು ನಗರದ ಭಾಷೆ.

ಸುಮ್ಮನೆ ಕೂತು ಆಕೆಯ ಬೆನ್ನಿಗೆ ಒರಗಿ ಕೈಯೊಳಗೆ ಕೈ ಬೆಸೆದು ಇಬ್ಬರೂ ಒಂದಕ್ಷರವೂ ಮಾತಾಡದೇ ಇದ್ದದ್ದು, ಹಾಸ್ಟೆಲ್ನಲ್ಲಿದ್ದಾಗ ಮಧ್ಯರಾತ್ರಿ ರೂಮು ಬಿಟ್ಟು ನಡೆಯುತ್ತಾ ಹಾಸ್ಟೆಲಿನ ಹಿಂದಿದ್ದ ಬಂಡೆ ಏರಿ ಕುಳಿತದ್ದು ಇವೆಲ್ಲಾ ಸಮಯವಿದ್ದರೆ ಸಂತೋಷವನ್ನಷ್ಟೇ ಕೊಡುತ್ತದೆ ಎನ್ನುವುದು ಗೊತ್ತಾಗಿಬಿಟ್ಟಿದೆ. ಹಿಂದೆಲ್ಲಾ ಹಾಗೆ ಸುಮ್ಮನೆ ನಡೆಯಲು ಹೊರಟಾಗ ಯಾವುದೇ ಅಪೇಕ್ಷೆಗಳಿರುತ್ತಿರಲಿಲ್ಲ. ಆದರೀಗ ಅಪೇಕ್ಷೆಗಳಿಲ್ಲದೆ ಬದುಕಲು ಸಾಧ್ಯವಾಗುತ್ತಿಲ್ಲ. ಅಪೇಕ್ಷೆಯೇ ಗೆಲುವಿನ ಮೆಟ್ಟಿಲು ಎನ್ನುತ್ತಾ ಬಡಬಡಿಸುತ್ತಾರೆ ಮ್ಯಾನೇಜ್ಮೆಂಟ್ ಗುರುಗಳು. ಅವರ ಪ್ರಕಾರ ಎಲ್ಲಾ ಕ್ರಿಯೆಗಳಿಗೂ ಒಂದು ನಿರ್ದಿಷ್ಟ
ಉತ್ತರವಿರಲೇಬೇಕು. ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಇರಬೇಕೆಂದೇನೂ ಇಲ್ಲ ಎಂದರೆ ಸಾಕು ಸನಾತನಿಗಳಾಗಿಬಿಡುತ್ತೇವೆ. ಬಳಸಿ ಬಿಸಾಡುವ "ಕಮಾಡಿಟಿ" ನಾವೇ ಆಗಿಬಿಡುತ್ತೇವೆ. ಆದ್ದರಿಂದ ಇಲ್ಲಿ ಮಾರ್ಕೆಟ್ ಇಲ್ಲದ ವಸ್ತುಗಳೆಲ್ಲಾ ಉಪಯೋಗಕ್ಕೆ ಬಾರದ ವಸ್ತುಗಳು.

ಸುಮ್ಮನೆ ಕುಳಿತುಕೊಳ್ಳುವುದು ಎನ್ನುವ ಶಬ್ದವೇ ಸದ್ಯಕ್ಕೆ ಕಾಯಕ ವಿರೋಧಿ. ಋಷಿಗಳು ನೂರಾರು ದಿನ ಕುಳಿತು ತಪಸ್ಸು ಮಾಡಿದರು ಎನ್ನುವುದು ನಮಗಿವತ್ತು ಕೇವಲ ಕತೆಯಲ್ಲ....ಅದೊಂದು ಹುಚ್ಚು ಕಲ್ಪನೆಯ ಪರಮಾವಧಿ. ಯಾಕೆಂದರೆ ಮೂರೂವರೆ ನಿಮಿಷದ ಸಿಗ್ನಲ್ಲು ದಾಟಿ ಈಚೆಗೆ ಬರುವಾಗ ಒಂದು ಯುಗವೇ ಕಳೆಯುವಂತಹ ವಾಸ್ತವವಿರುವಾಗ ಹೇಗೆ ನಂಬುವುದು ಹೇಳಿ...ಹೇಳಿ ಕೇಳಿ ನಾವು ವಾಸ್ತವದ ಶಿಶುಗಳು.....ಅದಕ್ಕಿರುವ ಹಲವು ಸಾಧ್ಯತೆಗಳು ಸಹ ಸುಮ್ಮನೆ ಕುಳಿತುಕೊಳ್ಳುವುದು ಎನ್ನುವ ವಿಚಾರವನ್ನು ಕೆಲಸ ಕದಿಯುವ ಪಟ್ಟಿಗೆ ಸೇರಿಸಿಬಿಟ್ಟಿದೆ. ನಗರದ ಮನೆಗಳಲ್ಲಿದ್ದಾಗ ರಾತ್ರಿ ಹನ್ನೊಂದರ ನಂತರ ಕಪ್ಪು ಆಕಾಶ ನೋಡಲು ಹೊರಕ್ಕಿಣುಕುವ ವಿಚಾರ ಬರುವುದೇ ಕಡಿಮೆ. ಅದರಿಂದೇನು ಉಪಯೋಗ ಮೊದ್ಲು ಹೇಳಿ ಅನ್ನುವುದು ಮೊದಲ ಮತ್ತು ಕೊನೆಯ ಪ್ರಶ್ನೆ. ಕುವೆಂಪು ಪ್ರತಿದಿನ ಬೆಳಿಗ್ಗೆ ತಮ್ಮ ಮನೆಯ ಕಂಪೌಂಡಿನಲ್ಲಿದ್ದ ಮರದ ಎದುರು ಕುರ್ಚಿ
ಹಾಕಿ ಕುಳಿತುಕೊಂಡು ಹಕ್ಕಿಗಳ ಗೂಡನ್ನು ವೀಕ್ಷಿಸುತ್ತಿದ್ದರು ಎನ್ನುವುದು ಕವಿಗಳಿಗೆ ಮಾತ್ರ ಸಾಧ್ಯವಾಗುವ ನಮ್ಮ ಸದ್ಯದ ವಾಸ್ತವ...ತೇಜಸ್ವಿ ಹಕ್ಕಿ ಫೋಟೋ ಕ್ಲಿಕ್ಕಿಸಲು ಗಂಟೆಗಳಷ್ಟು ಕಾಯುತ್ತಾ ಕುಳಿತಿರುತ್ತಿದ್ದರು, ಮೀನಿಗೆ ಗಾಳ ಹಾಕುತ್ತಾ ತದೇಕಚಿತ್ತದಿಂದ ಕಾಯುತ್ತಿದ್ದರು ಎನ್ನುವುದು ಮೂಡಿಗೆರೆಯಲ್ಲೋ, ತೀರ್ಥಹಳ್ಳಿಯಲ್ಲೋ, ದಿಡುಪೆಯಲ್ಲೋ ಮಾತ್ರ ಸಾಧ್ಯವಾಗುವ ನಗರದ ವಾಸ್ತವ...ಹೇಗಿದ್ದರೂ ನಮಗಂತೂ ವೀಕೆಂಡಿನ ಒಂದೋ ಎರಡೋ ದಿನಕ್ಕೆ ಆಯಾಸ ಕಳೆಯಲು ನಿದ್ದೆಯಿದೆ, ಉತ್ಸಾಹವಿದ್ದರೆ ವಂಡರ್ ಲಾ, ತಪ್ಪಿದರೆ ಮಲ್ಟಿಪ್ಲೆಕ್ಸಿನಲ್ಲಿ ಸಿನಿಮಾದ ಊಲಾಲಾ...ಇಲ್ಲವೇ ಝಗಮಗಿಸುವ ಮಾಲುಗಳ ಆಫರುಗಳಲ್ಲಿ ಯಾವುದು ಬೆಟರು ಅಂತ ಮಹಡಿ ಮಹಡಿ ಹತ್ತಿ ಜಾಲಾಡುವ ಕ್ರೀಡಾಕೂಟ...!!!
******************

ಇದೆಲ್ಲವನ್ನೂ ನಿತ್ಯ ನೈಮಿತ್ತಿಕದಂತೆ ಗಮನಿಸುತ್ತಾ ಪ್ರತಿ ಸಂಜೆ ನಿಯಾನು ಬಲ್ಬುಗಳು ಉರಿಯಲು ಶುರುವಾಗುತ್ತವೆ. ಚಂದ್ರನಿದ್ದರೂ ಆ ಕಣ್ಣುಕುಕ್ಕುವ ಬೆಳಕಲ್ಲಿ ಮಬ್ಬು ಮಬ್ಬು. ನಗರದ ಜಗತ್ತಿಗೆ ಚಂದ್ರ ಬಂದರೂ ಹೋದರೂ ದೊಡ್ಡ ವಿಷಯವೇ ಅಲ್ಲ. ಇಲ್ಲಿ ಬೆಳಕೂ ಸಹ ಕಂಪ್ಯೂಟರು ಕುಟ್ಟುವಷ್ಟೇ ಯಾಂತ್ರಿಕ, ಸಾರ್ವತ್ರಿಕ.....!!!

ಎಲ್ಲರ ಭಾವನಾತ್ಮಕ ನೆಲೆಗಳನ್ನು ನಿರ್ಲಿಪ್ತತೆಯ
ಮಗ್ಗುಲಿಗೆ ಹಾಕಿಬಿಡಲು ನಗರದ ಬೆಳಕು ಸಾಕು...ಮೌನವಾಗಿರದ ಪ್ರತಿ ಕ್ಷಣವೂ ಸಾಕು.....ಚಂದ್ರನಿರುವ ನಗರದ ರಾತ್ರಿಯೂ ಸಾಕು.

ಅದಕ್ಕೇ ಹೇಳಿದ್ದು-ನಗರದ ಉದ್ದುದ್ದ ಮಲಗಿದ ರಸ್ತೆಯಂತೆ ಬದುಕು ನೆರಳುಗಳಿಲ್ಲದ ಅಸ್ಥಿಪಂಜರ...!!!

ಶುಕ್ರವಾರ, ಮಾರ್ಚ್ 12, 2010

ಸ್ವಗತೋನ್ಮತ್ತ ತಲ್ಲಣಗಳು

ಇಲ್ಲಿರುವುದೆಲ್ಲಾ ಬಿಡಿ ಬಿಡಿ ಭಾವನೆಗಳು. ಹತ್ತಾರು ಕ್ಷಣಗಳಲ್ಲಿ ಹೊಳೆದದ್ದು, ಜುಮ್ಮೆನ್ನುವಂತೆ ಮಾಡಿದ್ದು. ಇಲ್ಲಿನ ಪ್ರತೀ ಶಬ್ದ, ಸಾಲು ಹಲವಾರು ಅರ್ಥದೊಂದಿಗೆ ಕಾಡಿವೆ. ಬಿಡಿ ಸಾಲುಗಳಲ್ಲಿ ಒಂದಕ್ಕಿಂತ ಹೆಚ್ಚಿನ ಕತೆಗಳಿವೆ. ಹಾಗಂತ ಅನ್ನಿಸಿದೆ ಬರೆದಾದ ಮೇಲೆ. ಹಾಗಲ್ಲ ಅಂತಾನೂ ಅನ್ನಿಸಿದೆ, "ಹಾಗನ್ನಿಸಿದ" ನಂತರದ ಫಳಿಗೆಗೆ. ನಿಮಗೇನು ಅನ್ನಿಸುತ್ತೋ...???

--
ಹೂ
ಮುತ್ತಿಟ್ಟರೆ
ಬಾಡುತ್ತಾಳೆ


--
ನಿನ್ನೆ
ಕಂಡ
ಸೂರ್ಯ
ಇವತ್ತಿಲ್ಲ
ಹಗಲು


--
ಕುಕ್ಕರಿನ
ವಿಶಿಲು
ಜೀವ
ತೇಗುತ್ತದೆ


--
ಕರಚಿದ
ಕರಿಬೇವಿನ
ಎಲೆಗಳಲಿ
ಒಗ್ಗರಣೆ
ಹಸಿರು


--
ಅಕ್ಷರ
ಮೂಡುತ್ತಿದೆ
ಕಂಪ್ಯೂಟರ್
ಪರದೆ
ಇನ್ನೂ
ಖಾಲಿ


--
ಹಳದಿ
ರಸೀತಿಯಲಿ
ಉಳಿದ
ಲೆಕ್ಕ
ಅರೆ
ಚುಕ್ತಾ


--
ಟೆರೇಸಿನಲಿ
ನಿಂತೆ
ನಾನು
ನಗರ
ಬೆತ್ತಲೆ


--
ನಾನಿದ್ದೇನೆ
ದೀಪದ
ಬುಡದಲ್ಲಿ
ಸತ್ತಿದೆ
ಹಾತೆ