ಭಾನುವಾರ, ಮಾರ್ಚ್ 8, 2009

ಸಿನಿಮಾ ರೀಲಿನಂತೆ ಸನ್ನಿವೇಶ ಬದಲಾಗಿದೆ!

ಇಂದು "ವಿಶ್ವ ಮಹಿಳಾ ದಿನ".ವಿಜಯ ಕರ್ನಾಟಕ ಸಾಪ್ತಾಹಿಕಕ್ಕಾಗಿ ಬರೆದ ಪುಟ್ಟ ಬರಹ ಇಲ್ಲಿದೆ.

"ನೀನು ಓದಿ ಏನ್ಮಾಡೋದಿದೆ?
ನರೇಶ ಮುಂದಕ್ಕೆ ಓದಿದರೆ ನಾಳೆ ನಮ್ಮ ಸಹಾಯಕ್ಕಾಗುತ್ತಾನೆ. 
ನೀನು ಮನೆಕೆಲಸ ಚೆನ್ನಾಗಿ ಕಲಿತರೆ ಸಾಕು"

ಹದಿನೈದು ವರ್ಷಗಳ ಹಿಂದಿನ ಬಹುತೇಕ ಸಿನಿಮಾಗಳಲ್ಲಿ ಅಪ್ಪ ತನ್ನ ಮಗಳಿಗೆ ಹೇಳುತ್ತಿದ್ದ ಡೈಲಾಗುಗಳ ಪೈಕಿ ಇದೂ ಒಂದು. ದರ್ಪ, ಅಹಂಕಾರ, ಅಸಹಾಯಕತೆಯೂ ಅಲ್ಲಿ ಕಾಣುತ್ತಿತ್ತು. "ಗಂಡು"ಗಲಿಗಳ ಸಮಾಜಮುಖಿ ನಿಲುವುಗಳು ಹಾಗಿದ್ದವು. ಗಂಡು-ಹೆಣ್ಣಿನ ನಡುವೆ ದೊಡ್ಡದೊಂದು ಕಂದಕ ಕಾಣುತ್ತಿತ್ತು. ಗಂಡಿಗೆ ಅವಕಾಶದ ಆಕಾಶ ತೆರೆದು ಕೂತಿತ್ತು. ಹೆಣ್ಣಿಗೆ ಒಲೆ ಮೇಲೆ ಬೇಯಲು ಇಟ್ಟ ಅನ್ನ ಕಾಯುತ್ತಿತ್ತು.

ಈ ಕಂದಕಕ್ಕೆ ಸೇತುವೆ ಕಟ್ಟುವ ಕೆಲಸ ಪ್ರಾರಂಭವಾಗಿ ವರ್ಷಗಳೇ ಕಳೆದಿವೆ. 

ಹೆಣ್ಣು ಮಗು ಹುಟ್ಟಿದರೆ ತಂದೆ-ತಾಯಿ ಅಕ್ಕರೆಯಿಂದ, ಸಂತಸದಿಂದ "ಖುಷಿ" ಎಂದು ಹೆಸರಿಡುವ ಕಾಲ ಇದು.
ಹೆಣ್ಣಿನ ಬೊಗಸೆಯಲ್ಲಿ ಭರವಸೆ, ಪ್ರೀತಿ ಜಾಸ್ತಿಯಾಗುತ್ತಿರುವ ಕಾಲ ಇದು. ಸನ್ನಿವೇಶಗಳು ಸಿನಿಮಾದ ರೀಲಿನ ಸೀನಿನಂತೆ ಬದಲಾಗಿವೆ. ಇವತ್ತಿನ ಸಿನಿಮಾ ರೀಲಲ್ಲಿ ಕಾಣುತ್ತಿರುವ ದೃಶ್ಯಗಳ ತುಣುಕುಗಳಲ್ಲಿ
ವಿಶಾಲಾಕ್ಷಿ ಬಿಎಂಟಿಸಿಯಲ್ಲಿ ಕಂಡಕ್ಟರ್ ಕೆಲಸವನ್ನು ದಿನನಿತ್ಯ ಶ್ರದ್ಧೆಯಿಂದ ಮಾಡುತ್ತಿದ್ದಾಳೆ. ವಿಮಾನ ಓಡಿಸುವುದನ್ನು ರೆನಿಟಾ ಕಲಿತುಕೊಂಡಿದ್ದಾಳೆ. ನಳಿನಿ ಪೆಟ್ರೋಲ್ ಬಂಕಿನಲ್ಲಿ ಗಂಡಸರಷ್ಟೇ ಆಸ್ಥೆಯಿಂದ ದುಡಿಯುತ್ತಾಳೆ. ಸಾಫ್ಟ್ವೇರ್ ನೌಕರಿಗೆ ಹೋಗುವ ಹೆಡ್ಮಾಸ್ಟರ್ ಹಿರೇಮಠರ ಮಗಳಿಗೆ ಕೈ ತುಂಬಾ ಸಂಬಳವಿದೆ. ಹೆಣ್ಣಿನ ಬದುಕಿನ ಸಿನಿಮಾ ರಂಗು ತುಂಬಿಕೊಂಡಿದೆ. 

ಗಂಡು-ಹೆಣ್ಣಿನ ನಡುವಿನ ತಾರತಮ್ಯ ಇವತ್ತು ನಿನ್ನೆಯದಲ್ಲ. ಜೊತೆಗೆ ಆ  ಬಗ್ಗೆ ಗಂಭೀರ ಚರ್ಚೆಗಳು ಸಹ ನಡೆದಿದ್ದವು. ಆದರೆ ಈ ತಾರತಮ್ಯವನ್ನು ಬಹುತೇಕ ನೀಗಿಸುವಲ್ಲಿ ಯಶಸ್ವಿಯಾದದ್ದು ಜಾಗತೀಕರಣ ಹುಟ್ಟಿಸಿದ ಅವಕಾಶಗಳ ಸಂತೆ.
ಜಾಗತೀಕರಣಕ್ಕೆ ಗಂಡು-ಹೆಣ್ಣು ಎನ್ನುವ ತಾರತಮ್ಯದಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲ. ಮಾಡುವ ಕೆಲಸದ ಅಂತಿಮ ಫಲಿತಾಂಶದ ಬಗ್ಗೆ ಮಾತ್ರ ಅದಕ್ಕೆ ಒಲವಿತ್ತು. ವಿ ನೀಡ್ ರಿಜಲ್ಟ್, ಗುಡ್ ಸರ್ವಿಸ್ ಎಂದಷ್ಟೇ ಹೇಳಿತು ಅದು.
ಜಾಗತೀಕರಣ ಹುಟ್ಟಿಸಿದ ಅವಕಾಶವೇ ಇಲ್ಲದೇ ಹೋಗಿದ್ದಿದ್ದರೆ ವೇಶ್ಯೆಯೊಬ್ಬಳ ಮಗಳು ಬಿಪಿಒ ಕಂಪೆನಿಯೊಂದರಲ್ಲಿ ಕೆಲಸ ಮಾಡಿ ಕೈತುಂಬಾ ಸಂಬಳ ಪಡೆಯುವುದು ಹೀಗೆ ಸಾಧ್ಯವಾಗುತ್ತಿತ್ತು? ಏನೇನೂ ಗೊತ್ತಿಲ್ಲದ ಕೆಳ ಮಧ್ಯಮ ವರ್ಗದ ಹುಡುಗಿಯೊಬ್ಬಳಿಗೆ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ವರ್ಷ ಪೂರ್ತಿ ಕೆಲಸ ಹೇಗೆ ಸಿಗುತ್ತಿತ್ತು?
ಹೆಣ್ಣು ಆರ್ಥಿಕವಾಗಿ ಸ್ವಾವಲಂಬಿಯಾಗುವುದರ ಜೊತೆಗೆ ಲಕ್ಷಗಳಲ್ಲಿ ಸಂಬಳ ತೆಗೆದುಕೊಳ್ಳಲಿಕ್ಕೆ, ಹಳ್ಳಿಯಲ್ಲಿದ್ದ ಮಹಿಳೆಯರಿಗೆ ನೂರರ ಹತ್ತಾರು ನೋಟು ಕೂಡಿಡುವುದಕ್ಕೆ ನಾಂದಿಯಾದದ್ದು ಕೂಡಾ ಇದೇ.


ಇವತ್ತಿನ ಯುವಕ-ಯುವತಿಯರನ್ನು ಮಾತನಾಡಿಸಿ ನೋಡಿ. ಅವರ್ಯಾರೂ ಗಂಡು-ಹೆಣ್ಣಿನ ನಡುವೆ ಅಡ್ಡ ಗೋಡೆ ಕಟ್ಟಿ ದೀಪವಿಡುವುದಿಲ್ಲ. ಇಬ್ಬರಿಗೂ ಸಮಾನರು, ಇಂದಿನ ವೇಗದ ಜಗತ್ತಿನಲ್ಲಿ ಗಂಡು-ಹೆಣ್ಣು ಎನ್ನುವುದಕ್ಕಿಂತ ಹೆಚ್ಚಾಗಿ ಪ್ರತಿಭೆಗೇ ಮನ್ನಣೆ ಎಂದೇ ಮಾತನಾಡುತ್ತಿದ್ದಾರೆ. 
ಹೆಣ್ಣು ಅಡಿಗೆ ಕೋಣೆಗೆ ಮಾತ್ರ ಎಂಬುದು ಹೆಚ್ಚುಕಮ್ಮಿ ಮುಗಿದ ಅಧ್ಯಾಯ. ಆ ಚ್ಯೂಯಿಂಗಮ್ ಎಪಿಸೋಡನ್ನು ಮತ್ತೆ ಕೆದಕಿ ಪ್ರಸಾರ ಮಾಡುವ ಅವಶ್ಯಕತೆ ಈಗಿಲ್ಲ ಎನ್ನುತ್ತಿದ್ದಾರೆ. ಅಡಿಗೆ ಕೆಲಸಕ್ಕೆ ಒಬ್ಬ ಅಡಿಗೆಯವನನ್ನು ಇಟ್ಟುಕೊಂಡರಾಯಿತು, ಹೋಟೆಲಿನಿಂದ ಕೆಲವು ದಿನ ಊಟ ತಂದರಾಯಿತು. ಕೇವಲ ಅಡಿಗೆಗೋಸ್ಕರ ಚೆನ್ನಾಗಿ ಓದಿರುವ ಹೆಂಡತಿ ಕೆಲಸಕ್ಕೆ ಹೋಗಬಾರದು ಅನ್ನುವುದು ಲಾಜಿಕ್ಕೇ ಇಲ್ಲದ ಮಾತು ಎನ್ನುವುದು ತರುಣ ಮದುಮಕ್ಕಳ, ಮದುವೆಯಾಗಲು ಬಾಕಿ ಇರುವವರ ಮಾತು. ಕಾರಣ ಸ್ಪಷ್ಟ. ಹೆಣ್ಣು ತನ್ನಷ್ಟೇ ಅಥವಾ ತನಗಿಂತ ಹೆಚ್ಚು ದುಡಿಯಬಲ್ಲಳು ಅನ್ನುವುದು ಗಂಡಿಗೆ ಅರ್ಥವಾಗಿಬಿಟ್ಟಿದೆ. ಹೆಣ್ಣು ಗಂಡಿನ ಆಸರೆಗಾಗಿ ಹಪಹಪಿಸುವ, ಮಾನಸಿಕವಾಗಿ ನರಳುವ ಕಾಲ ಅಸುನೀಗಿರುವುದರಿಂದ ದುಡಿಮೆ ಗಂಡಿಗೆ ಮಾತ್ರ ಸೀಮಿತವಾಗಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಹೆಣ್ಣನ್ನು ದುಡಿಯಲು ಕಳಿಸುವುದು ತಾನು ಆಕೆಯ ಸ್ವಾತಂತ್ರ್ಯವನ್ನು ಗೌರವಿಸುವ ಮನಃಸ್ಥಿತಿ ಎನ್ನುವ ಹಂತಕ್ಕೆ ತಲುಪಿದೆ. ಮುಂದೆ ಇದು ಗಂಡಿನ ಪ್ರೆಸ್ಟೀಜಿನ ಪ್ರಶ್ನೆಯಾಗಿ ಬದಲಾಗುವ ಕಾಲವೂ ದೂರವಿಲ್ಲ!!!

7 ಕಾಮೆಂಟ್‌ಗಳು:

ವಿಜಯ್ ಜೋಶಿ ಹೇಳಿದರು...

article chennagide guruve..

Dr. Udayana Hegde ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Dr. Udayana Hegde ಹೇಳಿದರು...

nimma lekhana arthapoornvaagi moodi bandide

nanna nenapideye ?

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ಬೆಳೆಗ್ಗೆ ವಿಜಯಕರ್ನಾಟಕದಲ್ಲೇ ನಿಮ್ಮ ಲೇಖನ ಓದಿದೆ. ತುಂಬಾ ಚೆನ್ನಾಗಿದೆ. ಕೆಲವು ನನ್ನ ಸ್ನೇಹಿತರಿಗೂ ಕೊಟ್ಟು ಓದಿಸಿದೆ. ಇನ್ನು ಮೇಲೆ regular ಆಗಿ ನಿಮ್ಮ ಬ್ಲಾಗ್ ಓದಬೇಕೆಂದು ನನ್ನ ಬ್ಲಾಗಲ್ಲಿ ಲಿಂಕ್ ಮಾಡಿಕೊಂಡಿರುವೆ.

ಗಿರಿ ಹೇಳಿದರು...

ವಿಜಯ ಕರ್ನಾಟಕದಲ್ಲಿ ತಲೆಬರಹ ತುಂಬಾ ಆಕರ್ಷಿಸಿತು. ಚೊಕ್ಕದಾಗಿ, ಪ್ರಸಕ್ತ ಸನ್ನಿವೆಷದೊಳಗೆ ಸೂಕ್ತವಾಗಿ ಬರೆದಿದ್ದೀರಾ...ಅಭಿನಂದನೆಗಳು...

ಶ್ರೀನಿಧಿ.ಡಿ.ಎಸ್ ಹೇಳಿದರು...

gud one!

ಕಾರ್ತಿಕ್ ಪರಾಡ್ಕರ್ ಹೇಳಿದರು...

--ಜೋಷಿ, ಗಿರೀಶ್, ಶ್ರೀನಿಧಿ--ನಿಮ್ಮೆಲ್ಲರ ಪ್ರತಿಕ್ರಿಯೆಗೆ ಧನ್ಯವಾದ.

--ಮಲ್ಲಿಕಾರ್ಜುನ್ ಸರ್ ನಿಮ್ಮ ಪ್ರೀತಿಗೆ ಆಭಾರಿ. ನಿಮ್ಮ ಬ್ಲಾಗ್ ನಲ್ಲಿ ಲಿಂಕ್ ಹಾಕಿರುವುದಕ್ಕೆ ಥ್ಯಾಂಕ್ಸ್.

--ಉದಯನ ನಿಮ್ಮನ್ನು ಭೇಟಿಯಾದದ್ದು ನೆನಪಿದೆ. ಪ್ರತಿಕ್ರಿಯೆಗೆ ಧನ್ಯವಾದ.