ಮಂಗಳವಾರ, ಜನವರಿ 20, 2009

ಚಿಕ್ಕಲಸಂದ್ರ TO ಕೆಂಪೇಗೌಡ ಬಸ್ ನಿಲ್ಡಾಣ (ಪುಟಾಣಿ ಕತೆ-11)

ನರೇಶ ಚಿಕ್ಕಲಸಂದ್ರ ಶನಿ ಮಹಾತ್ಮ ದೇವಸ್ಥಾನದ ಎದುರಿನ ಆಲದ ಮರದಡಿ ಬಸ್ಸಿಗೆ ಕಾಯುತ್ತಾ ನಿಂತಿದ್ದಾಗ ಬೆಳಿಗ್ಗೆ ಎಂಟೂಕಾಲು.

ಆಗ ತಾನೇ ಉತ್ತರಹಳ್ಳಿ-ಕೆಂಪೇಗೌಡ ಬಸ್ ನಿಲ್ದಾಣ ಬೋರ್ಡಿನ ಬಸ್ಸು ಬಂತು. ಆಫೀಸಿಗೆ ಹೋಗುವವರು, ಗಾರ್ಮೆಂಟ್ ಫ್ಯಾಕ್ಟರಿಯ ಹುಡುಗಿಯರು ಅದರೊಳಗಿದ್ದರು. ಗಾರೆ, ಕೂಲಿ ಕೆಲಸದವರು-ಅವರ ತೂಕದ ತುಂಡು, ತಾಪಿ ಅಲ್ಲಲ್ಲಿ ಸೀಟಿನ ಕೆಳ ಭಾಗದಲ್ಲಿ ಮಲಗಿದ್ದವು. ಡೋರ್ ಹಾಕಿರಲಿಲ್ಲ. ಕಾಲೇಜು ಹುಡುಗರು ನೇತಾಡುತ್ತಿದ್ದರು.

ಈ ಬಸ್ಸಲ್ಲಿ ಮೆಜೆಸ್ಟಿಕ್ ತಲುಪುವ ಹೊತ್ತಿಗೆ ಅಪ್ಪಚ್ಚಿ ಗ್ಯಾರೆಂಟಿ ಅಂತನ್ನಿಸಿತು ನರೇಶನಿಗೆ. ಹಿಂದೊಮ್ಮೆ ಇಂತದ್ದೇ ಬಸ್ಸು ಹತ್ತಿ ಆ ನೂಕು ನುಗ್ಗಲಿನಲ್ಲಿ ಹರಸಾಹಸ ಪಟ್ಟು ಒಂದೂವರೆ ಕಾಲು, ಬಾಗಿದ ಬೆನ್ನಿನ ಮುದುಕನ ಹಾಗೆ ನಿಂತು ಬದುಕಿದ್ದ. ಆಫೀಸಿಗಾಗಿ ಮುತುವರ್ಜಿ ವಹಿಸಿ ಅವನು ಮಾಡಿದ ಇಪ್ಪತ್ತು ನಿಮಿಷದ ಇನ್ ಶರ್ಟು, ಆ ರಷ್ನಲ್ಲಿ  ಔಟ್ ಶರ್ಟಾಗಿತ್ತು. ಆದ್ದರಿಂದ ಎಂಟರಿಂದ ಒಂಭತ್ತರ ಒಳಗೆ ಉತ್ತರಹಳ್ಳಿ-ಮೆಜೆಸ್ಟಿಕ್ ಬಸ್ಸುಗಳ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬಂದು ಬಿಟ್ಟಿದ್ದ..... ಇದೆಲ್ಲಕ್ಕಿಂತ ಚಿಕ್ಕಲಸಂದ್ರದಿಂದ ಬರುವ ಬಸ್ಸುಗಳೇ ವಾಸಿ ಅನ್ನಿಸಿತ್ತು.
ಅದಕ್ಕೆ ಇದ್ದ ಕಾರಣಗಳು ಎರಡು. ಚಿಕ್ಕಲಸಂದ್ರದಿಂದ ಬರುವ ಬಸ್ಸಲ್ಲಿ ಹೆಚ್ಚಾಗಿ ಸೀಟು ಸಿಗುತ್ತಿತ್ತು. ಒಂದು ವೇಳೆ ಸೀಟು ಸಿಗದಿದ್ದರೂ ಆರಾಮವಾಗಿ ಎರಡೂ ಕಾಲ ಮೇಲೆ ನಿಂತು ಮೆಜೆಸ್ಟಿಕ್ ವರೆಗೆ ಹೋಗಬಹುದಿತ್ತು. ನರೇಶ ಬಸ್ಸಲ್ಲಿ ಹೋಗಲು ಶುರು ಮಾಡಿದ ಎರಡನೇ ವಾರಕ್ಕೆ ಇದನ್ನೆಲ್ಲಾ ಗ್ರಹಿಸಿಬಿಟ್ಟಿದ್ದ.

ಗಂಟೆ 8.35...
ಮತ್ತೊಂದು ಬಸ್ಸು ಬಂತು. ಅದು ಉತ್ತರಹಳ್ಳಿ-ಕೆಂ.ಬಸ್ ನಿಲ್ದಾಣ. ಮಹಿಳಾ ವಿಶೇಷ. ಅದರ ಹಿಂದಿನ ಬಸ್ಸಿನಲ್ಲೂ ನೇತಾಡುವವರು ಕಂಡುಬಂದರು. ನಿಂತಲ್ಲೇ ನಿಟ್ಟುಸಿರು ಬಿಟ್ಟ ನರೇಶ. ಶರ್ಟಿನ  ಬಲ ಕೈಯ ಗುಂಡಿ ಬಿಚ್ಚಿದ. ಹಾಕಿದ. ಮೊಬೈಲಿಗೆ ಮೆಸೇಜು ಬಂದಿದೆಯಾ ನೋಡಿಕೊಂಡ.

ಗಂಟೆ ಎಂಟೂ ಮುಕ್ಕಾಲಾಗಿತ್ತು. ಅಷ್ಟರಲ್ಲಿ ಶನಿ ಮಹಾತ್ಮ ದೇವಸ್ಥಾನದ ಪಕ್ಕದ ರಸ್ತೆಯಿಂದ 210 z ಚಿಕ್ಕಲಸಂದ್ರ-ಪದ್ಮನಾಭನಗರ-ತ್ಯಾಗರಾಜನಗರ-ಮೆಜೆಸ್ಟಿಕ್ ಬಸ್ ಬಂತು. ಬಸ್ಸು ಹತ್ತಿರವಾಗುತ್ತಿದ್ದಂತೆ ಡೋರಿನ ಪಕ್ಕ ಹಾಗೂ ಹಿಂದುಗಡೆ ಕೆಲವು ಸೀಟುಗಳು ಖಾಲಿ ಇರುವುದು ನರೇಶನಿಗೆ , ಅವನ ಪಕ್ಕದಲ್ಲಿ ಬಸ್ಸು ಕಾಯುತ್ತಿದ್ದವರಿಗೆ ಕಂಡಿತು. ಪ್ರತಿಯೊಬ್ಬರೂ ನಿಂತಲ್ಲೇ ಅವಸರಿಸಿದರು. ಆ ಬಸ್ಸು ಶನಿ ಮಹಾತ್ಮ ದೇವಸ್ಥಾನದ ಎದುರುಗಡೆ ಬರುವ ಹೊತ್ತಿಗೆ ಉತ್ತರಹಳ್ಳಿ-ಉತ್ತರಹಳ್ಳಿ ಬಸ್ಸು ಬಂದು ಆಲದ ಮರದಡಿ ನಿಂತಿತು. ಕೆಲವು ಮಂದಿ ಆ ಕಡೆ ಓಡಿದರು. 
ಡೋರ್ ಓಪನ್ ಮಾಡಿದ ಚಿಕ್ಕಲಸಂದ್ರದ ಬಸ್ಸಿನಿಂದ ಇಬ್ಬರು ಇಳಿದರು, ನಾಲ್ಕು ಮಂದಿ ಹತ್ತಿದರು. ಬಸ್ಸು ಮುಂದಕ್ಕೆ ಚಲಿಸುವ ಹೊತ್ತಿಗೆ ನರೇಶ ಸೇರಿದಂತೆ ನಾಲ್ಕಾರು ಮಂದಿ ಹತ್ತಲು ಆಗದೆ ಓಡುತ್ತಿರಬೇಕಾದರೆ ಆ ಘಟನೆ ಸಂಭವಿಸಿದ್ದು. 

ಪಕ್ಕದಲ್ಲಿದ್ದ ಉತ್ತರಹಳ್ಳಿ-ಉತ್ತರಹಳ್ಳಿ ಬಸ್ಸನ್ನು ಓವರ್ಟೇಕ್ ಮಾಡಿತು ಚಿಕ್ಕಲಸಂದ್ರದ ಬಸ್ಸು. ಅದರ ಜೊತೆಗೇ ಸೀಟಿಗಾಗಿ ಜನ ಓಡುತ್ತಿದ್ದರು. ನರೇಶ ಕೂಡಾ ಓಡುತ್ತಾ ಡೋರಿನ ಹತ್ತಿರ ಬಂದಿದ್ದ. ಅಷ್ಟರಲ್ಲಿ ಬಸ್ಸಿನ ವೇಗ ಕಡಿಮೆಯಾಯಿತು. ನರೇಶ ಸೇರಿದಂತೆ ಅವನ ಹತ್ತಿರದಲ್ಲೇ ಓಡಿ ಬರುತ್ತಿದ್ದವರು ಹತ್ತಲು ಅವಸರ ಮಾಡಿದರು. ಅಷ್ಟರಲ್ಲಿ ಬಾಗಿಲಲ್ಲಿ ನಿಂತಿದ್ದ ಏಳು ವರ್ಷದ ಹುಡುಗಿ ಕಸಿವಿಸಿಗೊಂಡು ಇಳಿಯಲು ಫುಟ್ ಬೋರ್ಡಿನಿಂದ ಕಾಲು ಹೊರಗಿಟ್ಟಳು. ಸ್ವಲ್ಪ ಮುಂದಕ್ಕೆ ನಿಲ್ಲಿಸಲು ಡ್ರೈವರ್ ಮತ್ತೆ ಬಸ್ಸಿನ ವೇಗ ಹೆಚ್ಚಿಸಿದ. ಆಗ ಹುಡುಗಿ ಮುಖ ಗಾಬರಿಯಿಂದ ತುಂಬಿಕೊಂಡಿತು. ಇಡೀ ದೇಹ ಹಿಡಿತ ತಪ್ಪಿತು. 

ಬೀಳುತ್ತಿದ್ದ ಹುಡುಗಿ ಸಹಾಯಕ್ಕೆ ಕೈ ಚಾಚಿದಳು. ಸೀಟಿಗೆ ಓಡುತ್ತಿದ್ದವರು, ಬಸ್ಸಿನಲ್ಲಿದ್ದವರು ಎಲ್ಲ ನೋಡುತ್ತಿದ್ದರು. ಹಾಗೆ ಆಕೆ ಕೈ ಚಾಚುವ ಹೊತ್ತಿಗೆ ನರೇಶ ಆಕೆಯ ಹತ್ತಿರದಲ್ಲೇ ಓಡಿಕೊಂಡು ಮುಂದಕ್ಕೆ ಹೋಗುತ್ತಿದ್ದ. ಆಕೆಯನ್ನು ಎತ್ತಿಕೊಳ್ಳೋಣ ಅಂತ ಆತ ಅಂದುಕೊಳ್ಳುವ ಹೊತ್ತಿಗೆ ಬಸ್ಸಿನ ಬಾಗಿಲಿನ ಹತ್ತಿರ ಜನ ಹತ್ತಲು ಗಿಜಿಗುಡುತ್ತಿರುವುದನ್ನು ಕಂಡು ಸೀಟು ಸಿಗದಿದ್ದರೆ ಎಂದು ಗಾಬರಿಯಾಗಿ ಓಡಿದ.

ಆಗಲೇ ಬಸ್ಸಿನ ಹಿಂಬದಿ ಚಕ್ರ ಹುಡುಗಿಯ ದೇಹದ ಸಮೀಪ ಬಂದದ್ದು. ಆಕೆಯ ಚೀರುವಿಕೆಯಷ್ಟೇ ಕೇಳಿದ್ದು. ಹತ್ತುತ್ತಿದ್ದವರು, ಇಳಿಯುತ್ತಿದ್ದವರೆಲ್ಲ  ಏ.....ಅಯ್ಯೋ...ಎನ್ನುವಷ್ಟರಲ್ಲಿ ಇದೆಲ್ಲಾ ಮುಗಿದು ಹೋಗಿತ್ತು. ನರೇಶ ಬಸ್ಸು ಹತ್ತಿಯಾಗಿತ್ತು. ಅವನಿಗೆ ಸೀಟು ಸಿಕ್ಕಿತ್ತು. 

ಬಸ್ಸು ನಿಂತಿತು. ಜನ ಜಾತ್ರೆ ಸೇರಿತು. ಡ್ರೈವರ್ ಜೊತೆ ಅಲ್ಲಿದ್ದವರೆಲ್ಲ ಏರು ಧ್ವನಿಯಲ್ಲಿ ಮಾತಾಡುತ್ತಿದ್ದರು. ಕೆಲವರು ಎಳೆದಾಡಿದರು. ಒಂದಷ್ಟು ಮಂದಿ ಬಾರಿಸಿದರು. ಟ್ರಾಫಿಕ್ ಪೋಲೀಸರು ಬಂದರು. ಪಕ್ಕದಲ್ಲಿದ್ದ ಹೆಂಗಸು ಕೊಟ್ಟ ಸ್ವೆಟರನ್ನು ಮಗುವಿನ ದೇಹದ ಮೇಲೆ ಹೊದಿಸಿದರು. ಅರ್ಧ ಗಂಟೆಯೊಳಗೆ ಆಂಬುಲೆನ್ಸು, ಪೋಲೀಸರು ಎಲ್ಲರ ಕೆಲಸ ಮುಗಿದು ಹೋಯಿತು. ಮತ್ತೊಂದು ಬಸ್ಸು ಬಂತು. ಹೆಚ್ಚಿನವರೆಲ್ಲ ಹತ್ತಿದರು. ನರೇಶನೂ ಹತ್ತಿದ, ಕೊನೆಯಲ್ಲಿ. ಒಂದೂವರೆ ಕಾಲಲ್ಲಿ ನಿಂತ. ಒಂದೂ ಕಾಲು ಗಂಟೆ.

***********************
ಈ ಘಟನೆ ನಡೆದು ಎರಡು ತಿಂಗಳ ನಂತರ ಒಂದು ಮದ್ಯಾಹ್ನ " ಚಲಿಸುತ್ತಿದ್ದ ಬಸ್ಸಿನಿಂದ ಇಳಿಯಲು ಪ್ರಯತ್ನಿಸಿದ ವ್ಯಕ್ತಿ ಮೃತ್ಯು" ಎಂದು 24*7 ನ್ಯೂಸ್ ಚಾನೆಲ್ನಲ್ಲಿ  ಬ್ರೇಕಿಂಗ್ ನ್ಯೂಸ್ ಫ್ಲ್ಯಾಫ್ ಆಗಲು ಶುರುವಾಯಿತು. ನ್ಯೂಸ್ ರೀಡರ್ ನಿರ್ಲಿಪ್ತವಾಗಿ ಇದೀಗ ಬಂದ ಸುದ್ದಿ ಎಂದು ವಿವರಣೆ ನೀಡತೊಡಗಿದಳು. ಟಿವಿ ನೋಡುತ್ತಿದ್ದ ಮಂದಿ ಅಷ್ಟೇ ನಿರ್ಲಿಪ್ತವಾಗಿ ನೋಡುತ್ತಿದ್ದರು.


5 ಕಾಮೆಂಟ್‌ಗಳು:

Lakshmi Shashidhar Chaitanya ಹೇಳಿದರು...

very touchy...

Unknown ಹೇಳಿದರು...

ನಗರ ಬದುಕಿನ ಯಾಂತ್ರೀಕತೆಯೂ ನಮ್ಮಲ್ಲಿನ ಸಂವೇಡನಾಶೀಲತೆಯನ್ನು ತಿಂದು ಕೊಬ್ಬಿದುದರ ಒಂದು ಚಿತ್ರಣ, ಸಣ್ಣ ಸಂಕೇತಡ ಮೂಲಕ. ಇಷ್ಟವಾಯಿತು. ಕಡಿಮೆ ಪದಗಳಲ್ಲಿ ಹೆಚ್ಚಿನ ಅರ್ಥವನ್ನು ಕಟ್ಟಿಕೊಡಬಲ್ಲ ಸಾಮರ್ಥ್ಯ ನಿಮಗಿದೆ. ಇನ್ನೂ ಹೆಚ್ಚಿನ ಸಾಹಿತ್ಯ ಕಾರ್ಯಗಳು ನಿಮ್ಮಿಂಡಾಗಲಿ. ಆಲ್ ದಿ ಬೆಸ್ಟ್.

shivu.k ಹೇಳಿದರು...

ಸರ್,

ಬರಹ ಚಿಕ್ಕದಾದರೂ ತುಂಬಾ ಅರ್ಥಗರ್ಭಿತವಾಗಿದೆ....ಮತ್ತು ಓದುತ್ತಾ ಅಪ್ತವಾಗಿಬಿಡುತ್ತದೆ.....

ನಾನು ಹೀಗೆ ಅಲೆದಾಡುತ್ತಾ ನಿಮ್ಮ ಬ್ಲಾಗಿಗೆ ಬಂದೆ...ಖುಷಿಯಾಯಿತು.....

ನನ್ನ ಬ್ಲಾಗಿಗೊಮ್ಮೆ ಬನ್ನಿ....ಇತ್ತೀಚೆಗೆ ನಡೆದಾಡುವ ಭೂಪಟಗಳು ಬಂದಿವೆ.... ಮನಃಪೂರ್ವಕವಾಗಿ ನಗಲು ಬನ್ನಿ.....

http://chaayakannadi.blogspot.com/

ಮನೋರಮಾ.ಬಿ.ಎನ್ ಹೇಳಿದರು...

chennagide bendakaaloorina beyuva hasi manasugala sthiti....!

Vyanagyakkke idakintha olle udaharane bekilla.

ಅನಾಮಧೇಯ ಹೇಳಿದರು...

The story was great. Felt like I'm watching Hitchcock movie.