ಅದೊಂದು ಆತ್ಮೀಯ ಸಾಹಿತ್ಯ ಕಾರ್ಯಕ್ರಮ. ಸಾಮಾನ್ಯವಾಗಿ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಕಂಡುಬರುವ ಅಲಿಖಿತ ಘನಗಾಂಭೀರ್ಯ ಅಲ್ಲಿರಲಿಲ್ಲ. ಅಲ್ಲಿದ್ದದ್ದು ಗೆಳೆಯರಿಬ್ಬರ ನೆನಪಿನ ಬುತ್ತಿ, ಸಾಹಿತ್ಯದ ಓದಿನ ಬಗ್ಗೆ, ಬದಲಾದ ಯುವ ಜನಾಂಗದ ಬಗೆಗಿನ ಮಾತುಗಳು. ಸಂದರ್ಭ: ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ಅವರ "ಆಮೇಲೆ ಇವನು" ಕಥಾ ಸಂಕಲನ ಬಿಡುಗಡೆ ಸಮಾರಂಭ. ಏರ್ಪಾಡಾದದ್ದು ಪುತ್ತೂರಿನ ಅನುರಾಗ ವಠಾರದಲ್ಲಿ. ಈ ಸಂದರ್ಭದಲ್ಲಿ ಕಥೆಗಾರ,ಪತ್ರಕರ್ತ ಜೋಗಿ ಹಾಗೂ ನಾಗತಿಹಳ್ಳಿ ಆಡಿದ ಮಾತುಗಳು ಇವತ್ತಿನ ಸಾಹಿತ್ಯ ಓದಿನ ಕ್ರಿಯೆ-ಪ್ರಕ್ರಿಯೆಯ ವಾತಾವರಣದಲ್ಲಿ ಮಹತ್ವದ್ದು.
ಚಟಾಕಿ ಹಾರಿಸುತ್ತಾ ಜೋಗಿ ಮಾತನಾಡಿದ್ದು ಹೀಗೆ:
- ಇವತ್ತಿನ ಲೇಖಕ ನಾನು ತುಂಬಾ ಜನರಿಗಾಗಿ ಬರೆಯುತ್ತೇನೆ ಎಂಬ ಭ್ರಮೆಯಲ್ಲಿರುವುದು ಬೇಡ. ತಾನು ಬರೆದದ್ದು ನಾಲ್ಕೋ ಐದು ಜನಕ್ಕೆ ತಲುಪಿದರೆ ಸಾಕು ಎಂದು ಆಶಿಸಿದರೆ ಒಳ್ಳೆಯದು. ಲೇಖಕನಿಗೆ ಒಬ್ಬ ಓದುಗ ಸಿಕ್ಕರೂ ಸಾಕು! ಆತ ತಾನು ಓದಿದ್ದನ್ನು ಇನ್ನೊಬ್ಬನಿಗೆ ಹೇಳಿದರೆ ಸಾಕು.
- 3-4 ಪುಟದ ಚಿಕ್ಕ ಕಥೆಗಳನ್ನು ಬರೆಯುವುದು ಒಳ್ಳೆಯದು. 30-40 ಪುಟಗಳ ಕಥೆ ಬರೆದರೆ ಓದುವ ವ್ಯವಧಾನ ಇವತ್ತಿನ ಮಂದಿಗಿಲ್ಲ. ಜೊತೆಗೆ ಅಂತಹ ಕಥೆಗಳನ್ನು ಇವತ್ತು ಅರಗಿಸಿಕೊಳ್ಳಲೂ ಸಾಧ್ಯವಿಲ್ಲ.
- ಸಾಹಿತ್ಯದ ಓದು ಬಾಯಿಂದ ಬಾಯಿಗೆ, ಗೆಳೆಯರ ಮೂಲಕ ಹಬ್ಬಬೇಕು. ನಾನು ಗೆಳೆಯ ಹೇಳಿದ ಮಾತನ್ನು ನಂಬುತ್ತೇನೆಯೇ ಹೊರತು ವಿಮರ್ಶಕನ ಮಾತನ್ನಲ್ಲ. ಕಥಾ ಜಗತ್ತಿನಲ್ಲಿ ವಿಮರ್ಶಕರೇ ಸೃಷ್ಟಿಸಿದ ಪಂಗಡಗಳಿವೆ. ಯಾವುದೇ ಪಂಥಕ್ಕೆ ಸೇರದೆ ಬರೆದವರಿಗೆ ಜಾಗವೇ ಇಲ್ಲವೇ ಎಂಬ ಪ್ರಶ್ನೆ ನನ್ನನ್ನು ಕಾಡಿದೆ. ಉದಾಹರಣೆಗೆ ನಾಗತಿಹಳ್ಳಿ ಅವರ ನೀರಿನ ಮಟ್ಟ, ಸ್ಖಲನ ಕಥೆಗಳು ಇಂತಹ ಯಾವುದೇ ಪಂಥಕ್ಕೆ ಸೇರದವು. ಇಂತಹ ಕಥೆಗಳನ್ನು ಯಾವ ಪಂಥಕ್ಕೆ ಸೇರಿಸುವುದು ಎಂದು ವಿಮರ್ಶಕರೇ ಹೆಚ್ಚಾಗಿ ತಬ್ಬಿಬ್ಬಾಗುತ್ತಾರೆ.
- ಜಾಸ್ತಿ ಮಾತಾಡುವವರು ಕವಿತೆ ಬರೆಯಲ್ಲ ಎನ್ನುವ ನನ್ನ ನಂಬಿಕೆಯನ್ನು ಸುಳ್ಳು ಮಾಡಿದವರು ಇಬ್ಬರು: ಕುಂಟಿನಿ ಮತ್ತು ಕಾಯ್ಕಿಣಿ. ಅದನ್ನು ಸತ್ಯ ಮಾಡಿದವರು ಸುಮತೀಂದ್ರ ನಾಡಿಗರು!!
- ತೇಜಸ್ವಿ ಆಗಾಗ ಹೇಳುತ್ತಿದ್ದರು- "ಇಲ್ಲ ಸಲ್ಲದ ತರಲೆಗಳಲ್ಲಿ ಸಿಕ್ಕಿಕೊಂಡಾಗಲೇ ನನಗೆ ಕಥೆ ಹುಟ್ಟೋದು"
- ವಿದ್ಯಾರ್ಥಿಗಳಿಗೆ ಒಳ್ಳೆಯ ಮೇಷ್ಟ್ರುಗಳು ಸ್ಪೂರ್ತಿ ತುಂಬದೇ ಹೋದರೆ ಒಳ್ಳೆಯ ಸಾಹಿತ್ಯದ ಓದು ಸಾಧ್ಯವಿಲ್ಲ. ಕಿ.ರಂ.ನಾಗರಾಜ್, ಶಿವರುದ್ರಪ್ಪ ನಿವೃತ್ತರಾದರು. ಈಗ ಹೇಳಿಕೊಳ್ಳಲು ಒಳ್ಳೆಯ ಮೇಷ್ಟ್ರು ಅಂತ ಯಾರಿದ್ದಾರೆ?
- ಇಂಗ್ಲೀಷ್ ಮೇಷ್ಟ್ರುಗಳಿಗೆ ನನ್ನದೊಂದು ಪ್ರಶ್ನೆ. ಭಾರತದ ಲೇಖಕರೇ ಇಂಗ್ಲೀಷ್ನಲ್ಲಿ ಸಾಕಷ್ಟು ಚೆನ್ನಾಗಿ ಬರೆದಿರುವಾಗ ಬೈರನ್, ಶೆಲ್ಲಿ, ಮೆಟಫಿಜಿಕಲ್ ಪೋಯಟ್ರಿ ಅಂತ್ಹೇಳಿ ಯಾಕೆ ಇಂಗ್ಲೀಷ್ ಸಾಹಿತ್ಯದ ವಿದ್ಯಾರ್ಥಿಗಳನ್ನ ಸಾಯಿಸ್ತೀರ? ನಿಜಿಂ ಇಜೈಕಲ್ ಸೊಗಸಾಗಿ ಬರೆದಿದ್ದಾರೆ. ಎ.ಕೆ.ರಾಮಾನುಜಂ ಕನ್ನಡದಿಂದ ಅನುವಾದಿಸಿದ ಕವನಗಳಿವೆ. ಇದನ್ನೆಲ್ಲಾ ಯಾಕೆ ಗಂಭೀರವಾಗಿ ಪರಿಗಣಿಸುವುದಿಲ್ಲ?
- ಕುಂಟಿನಿಯ ಪುಸ್ತಕ "ಆಮೇಲೆ ಇವನು" ನೋಡಿ ಹಾಗಂದ್ರೆ ಏನು ಸಾರ್ ಅಂತ ಸಿನಿಮಾದವನೊಬ್ಬ ಕೇಳಿದ. ಆತನಿಗೆ ಹೇಗೆ ಅರ್ಥ ಮಾಡಿಸುವುದು ಅಂತ ಹೊಳೆಯಲಿಲ್ಲ. ಕೊನೆಗೆ ಖ್ಯಾತ ನಟನೊಬ್ಬನ ಮದುವೆ ಸನ್ನಿವೇಶ ಹೇಳಿದೆ. ಆಕೆಗೆ ಈ ಮೊದಲು ಮದ್ವೆ ಆಗಿತ್ತು. ಆದ್ದರಿಂದ ಆಕೆಗೆ ಆ ಖ್ಯಾತ ನಟ "ಆಮೇಲೆ ಇವನು" ಎಂದೆ. ಅವನಿಗೆ ಥಟ್ಟನೆ ಅರ್ಥವಾಯಿತು. "ಚೆನ್ನಾಗಿದೆ ಸಾರ್. ಇದೇ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡ್ಬಹುದಲ್ಲ ಸಾರ್" ಅಂದ!! (ಪುಸ್ತಕದ ಶೀರ್ಷಿಕೆ ಬಗ್ಗೆ ಮಾತನಾಡುತ್ತಾ ಹೇಳಿದ ಮಾತು).