ಶುಕ್ರವಾರ, ಫೆಬ್ರವರಿ 26, 2010

ಅಚಾನಕ್ಕಾಗಿ ದೇವರಂತೆ ಪ್ರತ್ಯಕ್ಷವಾಗಿಬಿಡಬೇಕು ಲೇಖಕ

ಓದುಗನಿಗೆ ಲೇಖಕ ಸುಲಭಕ್ಕೆ ಸಿಕ್ಕಬಾರದು.
ಯಾವುದೋ ಮದುವೆ ಸಮಾರಂಭದಲ್ಲಿ ಆಗಷ್ಟೇ ಪರಿಚಯವಾದ ವ್ಯಕ್ತಿಯ ಜೊತೆ ಶತಮಾನಗಳಷ್ಟು ಹಿಂದಿನ ಪರಿಚಯದಂತೆ ಮಾತನಾಡಲು ಶುರುಮಾಡಿಬಿಡುವಂತೆ ಲೇಖಕನ ಜೊತೆಗಿನ ಪರಿಚಯ ತಿರುಗಿಬಿಡಬಾರದು.

ಒಂದು ಕತೆಯೋ, ಪುಸ್ತಕವೋ ಓದಿದ ಕ್ಷಣಕ್ಕೆ ಕವಿ, ಕತೆಗಾರನ ವಿಳಾಸವೋ, ನಂಬರೋ ಈಗಂತೂ ಸುಲಭಕ್ಕೆ ಸಿಕ್ಕುಬಿಡುತ್ತದೆ. ಅಲ್ಲಿಗೆ ಓದುಗ ಹೊಗಳುಭಟನಾಗಿ ರೂಪಾಂತರ ಹೊಂದುವ ಪ್ರಕ್ರಿಯೆ ಅನಿವಾರ್ಯವಾಗಿ ಶುರುವಾಗುತ್ತದೆ. ಅಥವಾ ಲೇಖಕ ಅಂತಹದೊಂದು ಅನಿವಾರ್ಯತೆಯನ್ನು ಇವತ್ತಿನ ದಿನಮಾನದಲ್ಲಿ ಖಡಾಖಂಡಿತವಾಗಿ ನಿರೀಕ್ಷಿಸುತ್ತಿದ್ದಾನೆಯೇ? ಬೆಂಗಳೂರಿನಲ್ಲಿರುವ ಈ ಒಂದೂವರೆ ವರ್ಷದಲ್ಲಿ ಹಾಗನ್ನಿಸುತ್ತಿದೆ. ಯಾಕೋ..???

ನಮ್ಮಿಷ್ಟದ ಲೇಖಕ, ಕವಿ, ಕತೆಗಾರನ ಪರಿಚಯ ಮಾಡಿಕೊಳ್ಳಲೇಬಾರದು, ಪರಿಚಯವಿದ್ದರೂ ಆದಷ್ಟು ದೂರದಲ್ಲಿದ್ದು ಬಿಡಬೇಕು ಅಂತನ್ನಿಸುತ್ತದೆ. ಆತ ಭವಿಷ್ಯದಲ್ಲಿ ಸೊಗಸಾದ ಪದ್ಯ ಬರೆಯುತ್ತಾನೆ, ನನ್ನ ಬಾಲ್ಯವನ್ನು ಮತ್ತೆ ಹೆಣೆಯಲು, ನೆನೆಯಲು ಪೂರಕವಾಗುವಂತೆ ಅವನ ಬಾಲ್ಯವನ್ನು ಕಟ್ಟಿಕೊಡುವ ಕತೆಯೊಂದನ್ನು, ಅಥವಾ ನನಗೆ ಪರಿಚಯವಿರದ ವಾತಾವರಣವನ್ನು ಪರಿಚಯಿಸಿ ಕೊಡುತ್ತಾನೆ ಅಂತ ಕಾಯುತ್ತಾ ಕೂರಬೇಕು. ಮಳೆ, ವಿರಹ, ಪ್ರಿಯತಮೆಯ ಸಲ್ಲಾಪ, ಸಂಗೀತದಲ್ಲೇ ಕಳೆದು ಹೋಗಿರುವ ಜಯಂತ್ ಕಾಯ್ಕಿಣಿಯ ಹೊಸ ಕತೆಗೆ ಓದುಗ ಕಾದುಕೂತಂತೆ ಸನ್ನಿವೇಶ ಸೃಷ್ಟಿಯಾಗಿಬಿಡಬೇಕು. ದೇಶಕಾಲದಲ್ಲಿ ಪ್ರಿಂಟಾಗಿದ್ದ ಜಯಂತರ "ಚಾರ್ಮಿನಾರು" ನಂತರ ಹೊಸದ್ಯಾವ ಕತೆ ತೆರೆದುಕೊಳ್ಳುತ್ತದೆ ಎಂದು ವರ್ಷಗಳಿಂದ ಕಾದುಕುಳಿತಿದ್ದೇವಲ್ಲ ಹಾಗೇ ಇರಬೇಕು ಓದುಗ. ಅದೇ ಚಡಪಡಿಕೆ, ಅದೇ ಕಾತರ, ಅದೇ ನಿರೀಕ್ಷೆ. ಪರಿಚಯವಾಗಿಬಿಟ್ಟರೆ ಬಿಟ್ಟರೆ ಮುಗೀತು ಬಿಡಿ. ಹೊಸ ಕಥೆ ಯಾವಾಗ ಎಂದು ಜಯಂತ್ ಸಿಕ್ಕಾಗಲೆಲ್ಲಾ ಕೇಳಿ ಪ್ರಾಣ ತಿನ್ನುತ್ತೇವೆ. ಜೊತೆಗೆ ಹೊಸ ಕತೆ ಬರೆದಿಲ್ಲವಲ್ಲ ಎನ್ನುವ ಪಾಪಪ್ರಜ್ಙೆಯನ್ನೋ, ಧಿಡೀರ್ ಎಚ್ಚರವನ್ನೋ ಲೇಖಕಕನಲ್ಲಿ ಹುಟ್ಟುಹಾಕಿ ಭಯಂಕರ ಓದುಗರಾಗಿಬಿಡುತ್ತೇವೆ. ಅಲ್ಲಿಗೆ ನಮಗೂ ಸೋನಿ ಚಾನೆಲ್ಲಿನಲ್ಲಿ ಪ್ರಸಾರವಾಗುವ ಸಿಐಡಿ ಧಾರಾವಾಹಿಗೂ ಹೆಚ್ಚಿನ ವ್ಯತ್ಯಾಸ ಉಳಿದಿರುವುದಿಲ್ಲ.

ಲೇಖಕ ಓದುಗನಿಗೆ ಅಚಾನಕ್ಕಾಗಿ ಸಿಕ್ಕಿಬಿಡಬೇಕು, ಪ್ರತ್ಯಕ್ಷವಾಗಿಬಿಡಬೇಕು ದೇವರಂತೆ ಎನ್ನುವುದೇ ಇಲ್ಲಿನ ವಾದ. ಕತೆಯ ಮಧ್ಯದಲ್ಲೆಲ್ಲೋ ಅನಿರೀಕ್ಷಿತ ತಿರುವು ಗೋಚರಿಸಿದಾಗ "ಓ...ಮುಂದಿನ ಓದು ಇನ್ನೂ ಮಜಾ ಇದೆ" ಎಂದು ಆಸ್ಥೆಯಿಂದ ಉಳಿದ ಪುಟಗಳನ್ನು ಓದುತ್ತಾ ಕೂರುವಂತಹ ಕುತೂಹಲದಂತಿರಬೇಕು ಲೇಖಕನ ಅಚಾನಕ್ ಭೇಟಿ.

ಗಡಿಬಿಡಿಯ ಒಂಭತ್ತು ಗಂಟೆಯ ಹೊತ್ತಲ್ಲಿ ರಶ್ಶಾದ ಬಿಎಂಟಿಸಿಯಲ್ಲಿ ಒಂದೂವರೆ ಕಾಲಲ್ಲಿ ನಿಲ್ಲುತ್ತಾ ಮೆಜೆಸ್ಟಿಕ್ ಕಡೆಗೆ ಹೋಗಬೇಕಾದರೆ, ಬಸವನಗುಡಿ ಪೋಲೀಸ್ ಸ್ಟೇಶನ್ನಿಂದ ಗಾಂಧೀಬಜಾರಿನ ಕಡೆಗೆ ಹೋಗುವ ರಿಕ್ಷಾದ ಒಳಗಿರುವ ವ್ಯಕ್ತಿಯ ಕಂಡ ಕೂಡಲೇ "ಹೇ ಅದು ಕಿ.ರಂ ಅಲ್ವಾ" ಎಂದು ಮನಸ್ಸು ಗಟ್ಟಿಯಾಗಿ ಹೇಳಬೇಕು. ವಿಮರ್ಶೆ ನೆನಪಾಗಬೇಕು. ಕಾವ್ಯದ ಕುರಿತ ಅವರ ಮಾತುಗಳು ಥಟ್ ಅಂತ ಕಣ್ಣೆದುರು ಬಂದು ನಿಲ್ಲಬೇಕು.

ಎಸ್.ದಿವಾಕರ್ ಹೊಸ ಮಯೂರ ತಿರುವಿ ಹಾಕುತ್ತಾ ಸುಚಿತ್ರಾದ ಎದುರಿನ ಟೀ ಅಂಗಡಿ ಹತ್ರ ನಿಂತಿರಬೇಕಾದರೆ ಅವರನ್ನು ದೂರದಲ್ಲೇ ನಿಂತು ನೋಡಬೇಕು. ಅವರ ಒಂದಷ್ಟು ಉತ್ತಮ ಅನುವಾದಗಳು, ಕತೆಗಳು ನೆನಪಾಗುತ್ತಾ, ಮರೆತ ಮತ್ತೊಂದಷ್ಟನ್ನು ನೆನಪಿಸಬೇಕು. ಮರೆತು ಹೋದ ಅವರ ಕತೆಯೊಂದನ್ನು ಅದೇ ದಿನ ರೂಮಿಗೆ ಹೋದಾಗ ಹುಡುಕುತ್ತಾ ನಿದ್ದೆಯಿಲ್ಲದೇ ಕಳೆಯಬೇಕು. ಸಿಕ್ಕರೆ ಮತ್ತೊಮ್ಮೆ ಓದಿ ಖುಷಿಯಾಗಬೇಕು.

ಚಿಕ್ಕಲಸಂದ್ರ- ಉತ್ತರಹಳ್ಳಿ ರಸ್ತೆಯಲ್ಲಿ ರಾತ್ರಿ ಎಂಟರ ಹೊತ್ತಿಗೆ ಬಸ್ಸಿಳಿದು ರೂಂ ಕಡೆ ಹೊರಟಾಗ ಚಂದ್ರಶೇಖರ ಆಲೂರು ಟ್ರ್ಯಾಕ್ ಪ್ಯಾಂಟು ಹಾಕಿಕೊಂಡು ನಮ್ಮೆದುರೇ ಹಾದುಹೋದ ಹೊತ್ತಿನಲ್ಲಿ ನಮ್ಮೊಳಗೆ ಹುಟ್ಟುವ ಪುಳಕಕ್ಕೆ ಅಕ್ಷರಗಳ ಹಂಗಿಲ್ಲ. ಮಾತಿನ ಹಂಗಿಲ್ಲ. ಸ್ಮೃತಿಪಟಲದಲ್ಲಿ ವೆರೋನಿಕಾಳದ್ದೇ ಒಲಿದಂತೆ ಹಾಡುವ ಚಿತ್ರ.

ಈಗಂತೂ ಎಲ್ಲೆಡೆಯೂ ಲೇಖಕ ಸುಲಭಕ್ಕೆ ಸಿಕ್ಕುಬಿಡುತ್ತಾನೆ ಬಿಡಿ. ಬೆಂಗಳೂರಿನ ಪ್ರಶಸ್ತಿ, ಗೋಷ್ಠಿ, ಸೆಮಿನಾರು, ಸಾಹಿತ್ಯ ಚರ್ಚೆ, ಪುಸ್ತಕ ಬಿಡುಗಡೆಯ ನಿತ್ಯ ಗೊಂದಲಪುರಕ್ಕಿಂತ ಹೀಗೇ ಬೆಂಗಳೂರಿನ ಫುಟ್ಪಾತು, ಅನಾಮಿಕ ಅಂಗಡಿಯ ಮುಂಭಾಗ, ಯಾವುದೋ ನಾಟಕದ ಪ್ರದರ್ಶನದ ವೇಳೆ ಪ್ರೇಕ್ಷಕರ ನಡುವೆ ನಮ್ಮ ಪ್ರೀತಿಯ ಲೇಖಕ ಕಣ್ಣಿಗೆ ಕಾಣಿಸಿಕೊಂಡರೆ, ಓದುಗನಿಗೆ ಪ್ರಿಯತಮೆಯನ್ನೇ ಕಂಡಷ್ಟು ಪುಳಕವಾಗುತ್ತದೆ. ಆತನನ್ನು ಆ ಫಳಿಗೆಗಳಲ್ಲಿ ಓಡಿಹೋಗಿ ಮಾತಾಡಿಸೋಣ ಎನ್ನುವುದಕ್ಕಿಂತ ಸುಮ್ಮನೆ ನಿಂತು ನೋಡುವುದು, ಆತನ ಬರಹಗಳ ಮಳೆಯ ನೆನಪಲ್ಲಿ ನೆನೆಯುವುದೇ ಖುಷಿ. ಹಾಗೆ ಓದುಗ ಸುಮ್ಮನೆ ನಿಂತು ನೋಡುವ ಕ್ಷಣಗಳಲ್ಲೇ ಲೇಖಕನೊಬ್ಬನ ಬರಹದ ಶಕ್ತಿಯ ಸಾರ್ಥಕತೆಯೂ ಅಡಗಿದೆಯೇನೋ...ಯಾರಿಗೆ ಗೊತ್ತು. ಅದಕ್ಕೇ ಇರಬೇಕು ಅಕ್ಷರವೆಂಬ ಬಣ್ಣದ ಹುಡಿ ಒಮ್ಮೆ ಕೈ ತಾಕಿದರೆ ಸಾಕು, ಮೈಮನ ರಂಗೋಲಿಯಾಗುತ್ತದೆ.

ಕತೆಗಾರ ವ್ಯಾಸರು ಹೇಳುತ್ತಿದ್ದ ಥೇಟಾನುಥೇಟ್ "ಬೆಂಗಳೂರಿಗರ" ಎಲ್ಲಾ ಲಕ್ಷಣಗಳನ್ನು ಹೊಂದಿರುವ ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಕಂಡುಬರುವ ಅದದೇ ರಿಪೀಟೆಡ್ ಹೊಗಳಿಕೆ, ಉತ್ತಮ, ಅತ್ಯುತ್ತಮ ಎಂದು ಹೇಳಲೇ ಬೇಕಾದ ಅನಿವಾರ್ಯತೆ ಹಾಗೂ ಪ್ರೇಕ್ಷಕನಾಗಿ ಹೋದರೆ ಇಂಥದ್ದನ್ನೆಲ್ಲಾ ಕೇಳಲೇಬೇಕಾದ ರಿಯಾಲಿಟಿ ಶೋಗಳ ಫಾರ್ಮ್ಯಾಟ್ ಗಿಂತ ಓದುಗನಿಗೆ ದಾರಿ ಮಧ್ಯೆ ಅಚಾನಕ್ಕಾಗಿ ಪ್ರತ್ಯಕ್ಷನಾಗಿ ಕಣ್ಮರೆಯಾಗುವ ಲೇಖಕನೇ ವಾಸಿ. ಕಡೇ ಪಕ್ಷ ಆತನ ಕತೆಯ, ಕವಿತೆಯ ಪುನರ್ ಮನನ, ಪುನರ್ ಓದು ಓದುಗನಿಗೆ ಸಾಧ್ಯ.

ಅಂತಹ ಅನಾಮಿಕ ಭೇಟಿಗಳನ್ನು, ಪ್ರತ್ಯಕ್ಷಗಳನ್ನು ಸಾಧ್ಯವಾಗಿಸುವ ಬೆಂಗಳೂರಿನ ಟ್ರಾಫಿಕ್ಕು, ಬಿಎಂಟಿಸಿ, ಫುಟ್ಪಾತು, ಅಂಗಡಿ ಮುಂಭಾಗ ಇತ್ಯಾದಿಗಳಿಗೆ ಮನದುಂಬಿ ನಮಸ್ಕಾರ.

16 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

karthik channag bardidiya.... nice... kaleda ondu varada hinde aste naanu hige ondu ratri haadu keltha katleli kootiddaga ide vishya nan thaleli bandu hythu ninu aksharakkilsidiya oodi kushi aythu kanoo..naavu matadade adestu thingaladru aloochanegalu hege kelvomme onde dikkinalli chalisutte alva karhik? ee sambanda, gelethana, bandu balaga elvannu doora istattu hatra aguttante.... haudu ansthide...

SAVIMATHU

ಅನಾಮಧೇಯ ಹೇಳಿದರು...

tummmmmmba chennagi annisthu. hinde 'bogaseyalli male'yalli jayanth barediddaru, ide visheyavagi.
adre neenu baredaddu bere thara odiskolthu. nirupaneyindagi.
-vikas negiloni

Tina ಹೇಳಿದರು...

ನಿಜವೇನೆ ನೀವು ಹೇಳೋದು!! ಎಸ್ಪೆಶಲಿ ನಮ್ಮ ನೆಚ್ಚಿನ ಲೇಖಕ/ಲೇಖಕಿ ಕಂಡಾಗ ಉಂಟಾಗುವ ಪ್ರೇಮದಂತಹ ಪುಳಕದ ಬಗ್ಗೆ!! ನಾನು ಒಂದುಸಾರೆ ನೈಪಾಲರ ವೈಯುಕ್ತಿಕ ಜೀವನದ ಘಟನೆಯೊಂದನ್ನ ಕಡುವಾಗಿ ವಿರೋಧಿಸಿ ಬರೆದಿದ್ದೆ. ಆಮೇಲೆ ಅದನ್ನ ಇಬ್ಬರು ಸ್ನೇಹಿತರ ಜತೆ ಸೇರಿ ಚರ್ಚಿಸಿದ ನಂತರ ನಾನು ತಪ್ಪಿದೆ ಅನ್ನಿಸಿತು. ಕ್ಷಮೆ ಕೇಳಿದೆ. ಇದು ಬೇರೆಯೆ ಕಾಂಟೆಕ್ಸ್ಟ್ ಆದರು ನೀವು ಹೇಳುವುದು ಈ ನಿಟ್ಟಿನಲ್ಲು ಸರಿ. ಅವರ ಮನೆಯಲ್ಲೇನಾಗುತ್ತ ಇದೆ ಎಂದು ಇಣುಕಿ ನೋಡಿ ಕಾಡುವುದಕ್ಕಿಂತ ಅವರನ್ನು ಅವರ ಪಾಡಿಗೆ ಬರೆಯಲು ಬಿಡುವುದು ಒಳ್ಳೆಯದು. ಕಾಯುವುದು ಎಂತೆಂತಹ ಸಂತಸಗಳನ್ನ ಕೊಡುತ್ತೆ!!

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ನಿಜ,ಕಾರ್ತೀಕ್
ನಿಮ್ಮ ಅಭಿಪ್ರಾಯ ಸರಿಯಾಗಿದೆ.

ಸುಮ ಹೇಳಿದರು...

ನೀವೆನ್ನುವುದು ನಿಜ . ನಮ್ಮ ಮೆಚ್ಚಿನ ಲೇಖಕರು , ಕಲಾವಿದರು ನಮಗೆ ವಯಕ್ತಿಕವಾಗಿ ಪರಿಚಯವಾಗದಿದ್ದರೇ ಒಳ್ಳೆಯದು .

ಚಿತ್ರಾ ಹೇಳಿದರು...

ಕಾರ್ತೀಕ್,
ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಭೇಟಿ. ಶಾಂತಲಾರ ಬ್ಲಾಗ್ ನಲ್ಲಿ ನಿಮ್ಮ ಲೇಖನದ ಬಗ್ಗೆ ಓದಿ ಕುತೂಹಲದಿಂದ ಬಂದೆ.
ಬರಹ ಬಹಳ ಇಷ್ಟವಾಯ್ತು. ನಾವು ಇಷ್ಟ ಪಡುವ, ಆರಾಧಿಸುವ ಅದೆಷ್ಟೋ ಕಲಾವಿದರು , ಬರಹಗಾರರ ಬಗ್ಗೆ ನಮ್ಮದೇ ಆದ ಒಂದು ಕಲ್ಪನೆಯಿರುತ್ತದೆ, ಅವರ ವ್ಯಕ್ತಿತ್ವವನ್ನು , ಬಹಳವಾಗಿ ಗೌರವಿಸಿ ಎತ್ತರದ ಸ್ಥಾನದಲ್ಲಿ ಇಟ್ಟಿರುತ್ತೇವೆ. ಆದರೆ, ಅವರ ವೈಯುಕ್ತಿಕ ಜೀವನ ಅದೆಷ್ಟೋ ಸಲ , ನಮ್ಮ ಕಲ್ಪನೆಗೆ ವಿರುದ್ಧವಾಗಿರುತ್ತದೆ. ಅದು ತಿಳಿದಾಗ ನಮಗಾಗುವ ನಿರಾಶೆಗಿಂತ " ಛೆ, ಅವರ ವೈಯುಕ್ತಿಕ ಪರಿಚಯವಿಲ್ಲವಲ್ಲ" ಎಂದು ನಿರಾಶರಾಗುವುದೇ ಮೇಲು ಅಲ್ಲವೇ? ದೂರದಿಂದ ಕಂಡು ಪುಳಕಿತರಾಗುವುದೇ ಒಳ್ಳೆಯದು ! ನೆಚ್ಚಿನ ಸಿನಿಮಾ ತಾರೆಯನ್ನು ಸಿನಿಮಾದ ಪರದೆಯಲ್ಲಿ ನೋಡಿ ಅವಳ ಸೌಂದರ್ಯವನ್ನು ಮೆಚ್ಚುವವರಿಗೆ ಮೇಕಪ್ ಇಲ್ಲದಾಗ ಆಕೆ ಎದುರಿನಲ್ಲಿ ಬಂದು ' ಹಾಯ್ ' ಎಂದರೆ ಎಂಥಾ ನಿರಾಶೆಯಾಗಬಹುದು ? ಇದೂ ಒಂಥರಾ ಹಾಗೇ ! ನಿಮ್ಮ ಯೋಚನಾ ಲಹರಿ ಇಷ್ಟವಾಯ್ತು !

Sushrutha Dodderi ಹೇಳಿದರು...

ಲವ್ಯೂ!

ಸುಪ್ತವರ್ಣ ಹೇಳಿದರು...

ನಿಮ್ಮ ಅಭಿಪ್ರಾಯ ನನ್ನದೂ ಕೂಡ. 'ನೀ ನನಗಿದ್ದರೆ ನಾ ನಿನಗೆ' ಎಂಬ ಒಬ್ಬರಿಗೊಬ್ಬರು ಹೊಗಳಿಕೊಳ್ಳುವ ಪರಿಪಾಠ ಬ್ಲಾಗಿಗರಲ್ಲಿಯೂ ಪ್ರಾರಂಭವಾಗಿದೆಯೇ ಎಂಬ ಅನುಮಾನದ ಹುಳು ನನ್ನನ್ನು ಕೊರೆಯುತ್ತಿರುವಾಗಲೇ ನಿಮ್ಮ ಲೇಖನ ಓದಿದೆ!

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ಸುಪ್ತವರ್ಣರೇ,
ಕೆಲವು ಕಮೆಂಟ್ ಗಳನ್ನು ಓದುವಾಗ,
ನನ್ನನ್ನೂ ಇದೇ ಅನುಮಾನ ಹಲವುಬಾರಿ ಕಾಡಿದೆ.
ಇದಕ್ಕೆಲ್ಲ ಪರಿಹಾರ ಇಲ್ಲ ಬಿಡಿ.ಲೊಕ ಇರುವುದೇ ಹೀಗೆ.
ಅಷ್ಟೇ...

ಅನಾಮಧೇಯ ಹೇಳಿದರು...

true karthik... even i had thought abt it but the way u put it across is just amazing.. I do agree with Chitra's view on it!

Unknown ಹೇಳಿದರು...

namaste mr kartik.I am new to your mudbidre city. today i saw your wonderful artical in net.how can i get your e mail address ?please reply me.I have intrestin writing and i cant communicate you properly through this mail.
barahgaararu sahityad hesaralli shabdagala jaatre maaduttiruva hottalli nimma naija kakkulatiya baraha mana tattitu,baraha hige irabeku,durdallello putta hu arlidante,nishybdavaagi kamba pasarisidante,gottilade ede tattidante.......

ಕಾರ್ತಿಕ್ ಪರಾಡ್ಕರ್ ಹೇಳಿದರು...

@rajeshwari,

paradkarkarthik@gmail.com

Subrahmanya ಹೇಳಿದರು...

ಚೆನ್ನಾಗಿದೆ. ಶಾಂತಲಾ ಭಂಡಿಯವರ ಬ್ಲಾಗಿಂದ ನಿಮ್ಮ ತಾಣಕ್ಕೆ ಬಂದೆ. ನಿಮ್ಮ ಲೇಖನ ಮತ್ತು ಸುಪ್ತವರ್ಣರ ಕಾಮೆಂಟ್., ಎರಡೂ ಸರಿಯೆನಿಸಿತು. ..

ಗಿರಿ ಹೇಳಿದರು...

ತುಂಬ ಕೌತುಕಕರವಾಗಿ ಬರ್ದಿದ್ದೀರಿ...

ಧನ್ಯವಾದವಳು
-ಗಿರಿ

srujan ಹೇಳಿದರು...

ಕಾರ್ತಿಕ್
ನೋಡ ಬೇಕೆನ್ನುವ ನಿರೀಕ್ಷೆಯ ಖುಷಿ ಬಹುಶ: ಭೇಟಿ ನೀಡಲಾರದು .ನಿನ್ನ ಅಭಿಪ್ರಾಯ ನೂರು ಪಾಲು ನಿಜ.
ಅವತ್ತು ನಾವು ಮಾತನಾಡಿದ್ದು ಇದೆ ತಾನೇ.!
ಸೃಜನ್
ವೆಂಕಟೇಶ್ -ಪಲ್ಲವ ಪ್ರಕಾಶನ

Prax Siddakatte ಹೇಳಿದರು...

ಕಾತ್ರೀಕ ರವರೇ
ಇಂದಿನ ಲೇಖಕರು ಅಸ್ದಾನದ ವಿದೂಶಕರೂ ನಾ ಕಾಣೆ...
ಹೀಗೆನೇ ಬರೆಯಬೇಕು ಎಂಬ ಬೆಟ್ಟದಷ್ಟು ನಿಯಮಗಳ,
ಸಮಾಜದ ಜವಬ್ದಾರಿಗಳ ಬೇನ್ನೇರಿ ಬರೆಯಲು ಸಾದ್ಯಾನ ..?
ಹಾದುದೇಂದಾದರೆ..
ರವಿ ಕಾಣದನ್ನು ಕವಿ ಹೇಗೆ ಕಂಡಾನು..?
ಇಂತಿ
ಪ್ರಕಾಶ್ ಸಿದ್ದಕಟ್ಟೆ