ಮಂಗಳವಾರ, ಫೆಬ್ರವರಿ 16, 2010

ರಾಧೆಯ ಪ್ರೀತಿಯ ಕೃಷ್ಣನೂ ಜೊತೆಗೊಂದಿಷ್ಟು ಪ್ರಶ್ನೆಗಳೂ...

ಕೊಳಲ ತೊರೆದು ಹೋದ-ರಾಧೇ
ಮುರಳೀಧರ ಗೋಪಾಲಕೃಷ್ಣ
ಎಲ್ಲಿ ಇದ್ದೆಯೇ
ಎತ್ತ ಪೋದೆಯೇ
ಸಮಯದಿ ಕೃಷ್ಣನ ತಡೆಯದೇ ರಾಧೇ

ಎಂದು ದುಃಖಿಸುತ್ತಾ ನುಡಿಯುತ್ತಾರೆ ಸಖಿಯರು. ಕುಸಿದು ಕುಳಿತುಕೊಳ್ಳುತ್ತಾಳೆ ರಾಧೆ. ಕೃಷ್ಣನ ಈಗಿನ ಸುದೀರ್ಘ ಪಯಣ ತನ್ನನ್ನು ಆತನೊಂದಿಗೆ ಒಂದುಗೂಡಿಸುವುದಿಲ್ಲ ಎನ್ನುವುದು ರಾಧೆಗೆ ಬಹುಷಃ ಅರ್ಥವಾಗುತ್ತದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕೊಳಲ ತೊರೆದು ಹೋದ ರಾಧಾ ಮಾಧವ ಆಕೆಯಲ್ಲೊಂದು ವಿಷಾದ ವಾಸ್ತವಗಳನ್ನು ಸೃಷ್ಟಿಸುತ್ತಾನೆ. ಕೃಷ್ಣ ಯಾಕೆ ರಾಧೆಯ ಅನುಪಸ್ಥಿತಿಯಲ್ಲಿ ಆಕೆಯನ್ನು ತೊರೆದು, ಆಕೆಗೆ ಯಾವುದೇ ಸೂಚನೆಗಳನ್ನು, ಸಮಾಧಾನಗಳನ್ನು ನೀಡದೇ ಹೊರಟ. ಅಕ್ರೂರ ಬಂದು "ಬನ್ನಿ ಮಧುರೆಗೆ ಬಿಲ್ಲ ಹಬ್ಬಕೆ ಹೋಗುವಾ" ಎನ್ನುವಾಗ ರಾಧೆ ಕೃಷ್ಣನ ಎದುರಿದ್ದರೆ ಆತ ಅಕ್ರೂರನ ಆಹ್ವಾನವನ್ನು ತಿರಸ್ಕರಿಸುತ್ತಿದ್ದನೇ? ಪ್ರೀತಿಯ ಎದುರು ಆಹ್ವಾನ ಕರ್ತವ್ಯವಾಗಿ ಬದಲಾಗುವುದು ತಪ್ಪುತ್ತಿತ್ತೇ?

ಕೃಷ್ಣನಿಗೆ ಚೆನ್ನಾಗಿ ಗೊತ್ತಿತ್ತು. ರಾಧೆಯ ಉಪಸ್ಥಿತಿ ತನ್ನನ್ನು ತಾನೇ ಮರೆಯುವಂತೆ ಮಾಡುತ್ತದೆ. ಮಗುವಿನಂತೆ ನಲಿಯುವುದನ್ನು ಕಲಿಸುತ್ತದೆ. ಸಡಗರ, ಸಂಭ್ರಮದ ವಾಸ್ತವದಲ್ಲಿ ಬದುಕುತ್ತಾ ಇರುವಂತೆ ಮಾಡುತ್ತದೆ.ನಿತ್ಯದಲ್ಲಿ ಆಕೆ ಕಾಣದೇ ಹೋದರೆ ಆತನಿಗೆ ಅದೆಂತಹುದೋ ಚಡಪಡಿಕೆ. ತನ್ನೊಳಗೆ ತುಂಬಿಕೊಂಡ ರಾಧೆಯ ಬಿಂಬ ಸ್ಪಷ್ಟ-ಅಸ್ಪಷ್ಟಗಳ ಅಲುಗಿನ ಮೇಲೆ ತೂಗುತ್ತಿರಬೇಕಾದರೆ ಕೃಷ್ಣನಿಗೆ ರಾಧೆಯನ್ನು ಭೇಟಿಯಾಗಿ ಕಣ್ತುಂಬಿಕೊಳ್ಳಬೇಕು. ಆ ಭೇಟಿಯಲ್ಲೇ ಕಳೆದು ಹೋಗಬೇಕು.

ಸಖಿರಿಗೆಲ್ಲ ಕೃಷ್ಣ ದೇವರಾಗಿ ಕಾಣುತ್ತಾನೆ. ಅವನ ದೈವತ್ವ ಕಾಣುತ್ತದೆ. ಆದರೆ ರಾಧೆಗೆ ಆತ ಕೇವಲ ಪ್ರೇಮಿ. ತನ್ನೆಲ್ಲಾ ಭಾವನೆಗಳಿಗೆ ಸ್ಪಂದಿಸುವ ಗೆಳೆಯ. ಸಾದಾ ಸೀದಾ ನಮ್ಮಂತೆಯೇ ಇರುವ ಮನುಷ್ಯ. ಆದ್ದರಿಂದ ಆಕೆಗೆ ಕೃಷ್ಣನಲ್ಲಿರುವ ದೈವತ್ವ ಮುಖ್ಯವಾಗುವುದಿಲ್ಲ. ಆತ ಮುಖ್ಯವಾಗುತ್ತಾನೆ. ಆತನೊಳಗಿರುವ ಪ್ರೇಮಿ ಮುಖ್ಯವಾಗುತ್ತಾನೆ. ಅದೇ ಕಾರಣಕ್ಕೆ ಆಕೆಗೆ ಆತನ ಪಿಸುದನಿ ರೋಮಾಂಚನವನ್ನುಂಟು ಮಾಡುತ್ತದೆ. ಆತನಿಲ್ಲದೆ ವಾಸ್ತವ ವಿರಹವಾಗುತ್ತದೆ.

**************************************
ಮಾತೆತ್ತಿದರೆ ರಾಮ ದೈವತ್ವಕ್ಕಿಂತ ಹೆಚ್ಚು ಮಾನವೀಯ ವ್ಯಕ್ತಿತ್ವ ಎನ್ನುತ್ತೇವೆ. ಕೃಷ್ಣನಿಗೆ ಹೆಚ್ಚು ದೈವತ್ವದ ಅಂಶಗಳನ್ನು ಆರೋಪಿಸುತ್ತೇವೆ. ಕಪಟ ನಾಟಕ ಸೂತ್ರಧಾರಿ ಎಂದು ಲೇಬಲ್ ಅಂಟಿಸಿಬಿಡುತ್ತೇವೆ. ರಾಧೆಯ ವಿರಹ ದೊಡ್ಡದು ಎಂದು ಮರುಗುತ್ತೇವೆ, ಕೊಂಡಾಡುತ್ತೇವೆ. ಆದರೆ ರಾಧೆಯನ್ನು ಬಿಟ್ಟು ಮಧುರೆಯ ದಾರಿ ಹಿಡಿದ ಕೃಷ್ಣನ ಒಳಗಿನ ನೋವುಗಳನ್ನು ನಾವೆಂದಾದರೂ ಆಲೋಚಿಸಿದ್ದೇವೆಯೇ? ರಾಧೆಗಾಗಿ ತನ್ನ ಕೊಳಲನ್ನೇನೋ ಬಿಟ್ಟ. ಆತನ ಒಳಗೆ ಹುಟ್ಟಿಕೊಂಡ ರಾಧೆಯ ವಿರಹದ ಕಣ್ಣೀರನ್ನು ಯಾವಾಗ ಒರೆಸಿಕೊಂಡ? ಅದೆಷ್ಟು ನಿಟ್ಟುಸಿರುಗಳಿತ್ತೋ ಎನೋ ಅವನಲ್ಲಿ......ಆ ನೋವುಗಳನ್ನು ಆತ ರಾಮನಂತೆ ಎಲ್ಲೂ ಪ್ರದರ್ಶನಕ್ಕಿಡುವುದಿಲ್ಲ. ಅಥವಾ ಆತನ ನಡವಳಿಕೆಯಲ್ಲಿ ಪ್ರತಿಬಿಂಬಿತವಾಗುವುದಿಲ್ಲ. ನೋವನ್ನು ಏಕಾಂತದ ಹಾಡನ್ನಾಗಿ ಮಾಡಿಕೊಳ್ಳುತ್ತಾನೆ, ತನಗೆ ಮಾತ್ರ ಕೇಳಿಸಿಕೊಳ್ಳುವಂತೆ. ಪಾಂಡವರಿಗೆ ಬೇಕಾದವನಾಗುತ್ತಾ, ದೇವರಾಗುತ್ತಾ, ಕೌರವರಲ್ಲಿ ಅಸಹನೆ, ಭಯ ಎರಡನ್ನೂ ಹುಟ್ಟಿಸುತ್ತಾ ತನ್ನ ಖಾಸಗಿ ಮಾತುಗಳನ್ನು, ಮೌನವನ್ನು ಪ್ರೇಮಿಯಾಗಿ ಆತ ತನ್ನಲ್ಲೇ ಬಚ್ಚಿಡುತ್ತಾನೆ. ಅವನ ಅಕ್ಕ ಪಕ್ಕದಲ್ಲಿರುವ ಬಲರಾಮ, ಪಾಂಡವರು, ಕೌರವರು ಇವರ್ಯಾರಿಗೂ ಅದು ಮುಖ್ಯವಲ್ಲ.....ಕೆಲವೊಂದು ವಿಷಯಗಳು ಜಗತ್ತಿಗೆ ಅಮುಖ್ಯವಾಗುವ ಮೂಲಕವೇ ಏಕಾಂತಕ್ಕೆ ಹತ್ತಿರವಾಗುತ್ತವೆ ಎನ್ನುವುದರಲ್ಲಿ ಕೃಷ್ಣನ ವಿರಹದ ಪ್ರಕ್ರಿಯೆ ಇದೆ.

ಕೃಷ್ಣನೀಗ ಹೋಗಲೇಬೇಕಿದೆ. ಕುರುಕ್ಷೇತ್ರ ಯುದ್ಧಕ್ಕೊಂದು ವೇದಿಕೆ ಸಿದ್ಧ ಮಾಡಬೇಕಿದೆ. ಆತನಿಗೆ ಗೊತ್ತು. ಕೊಳಲು ಜೊತೆಗಿದ್ದರೆ ನೆನಪುಗಳ ಮೆರವಣಿಗೆ ಒತ್ತರಿಸಿಕೊಂಡು ಬರುತ್ತದೆ. ರಾಧೆಯೊಳಗೆ ಕಳೆದು ಹೋಗುತ್ತೇನೆ. ಅದಕ್ಕೇ ಆತ "ಹೊಳಲಿಗೆ ಕೊಳಲಿದು ತರವಲ್ಲ/ ಮಧುರೆಗೆ ಸವಿ ಸಲ್ಲ" ಎನ್ನುತ್ತಾ ತಾನು ಬಿಸುಟಿದ ವೃಂದಾವನದೊಳಗಿರುವ ಕೊಳಲನ್ನು ದಿಟ್ಟಿಸುತ್ತಾ ದೂರವಾಗುತ್ತಾನೆ."ಪೋಗದಿರಯ್ಯ ಪೋಗದಿರೈ ಮಾರಸುಂದರ/ ಗಿರಿಧರ ನೀ ಪೋಗದಿರಯ್ಯ" ಎನ್ನುವ ಗೋಪಿಕೆಯರ ವಿನಂತಿ, ಬಿನ್ನಹ ಎಲ್ಲವೂ ಅಕ್ರೂರ, ಬಲರಾಮರ ಜೊತೆಗೆ ಹೊರಟವನಿಗೆ ಕೇಳದೇ ಹೋಯಿತೇಕೇ? ಅಥವಾ ಕೇಳಿಯೂ ಕೇಳಿಸದಂತೆ ನಟಿಸಿದನೇ ಆತ. "ಪೋಗದಿರಯ್ಯಾ" ಎನ್ನುವ ಮಾತು ರಾಧೆಯ ಬಾಯಿಂದ ಹೊರಬಂದಿದ್ದರೆ ಕೃಷ್ಣ ಗೋಕುಲದಿಂದ ನಿರ್ಗಮಿಸದೇ ಉಳಿಯುತ್ತಿದ್ದನೇ? ಪಾಂಚಜನ್ಯ ಹಿಡಿಯುವ ಪ್ರಸಂಗ ಬರುತ್ತಿರಲಿಲ್ಲವೇ? ಅರ್ಜುನನಿಗೆ ವಿಶ್ವರೂಪ ದರ್ಶನದ ಅವಕಾಶ, ಮಾರ್ಗದರ್ಶನ ದಕ್ಕದೇ ಹೋಗುತ್ತಿತ್ತೇನೋ.

"ಎನ್ನೀ ಕೊಳಲಿದು ಕಾಡಿನ ಬಿದಿರು/ ಈ ಹುಲುಕಡ್ಡಿಗೆ ಎನಿತೋ ಚದುರು!" ಎಂದು ಪ್ರೀತಿಯಿಂದ ಪ್ರತೀ ಬಾರಿ ಕೊಳಲಿನ ಮೈದಡವಿ ಹರ್ಷಗೊಂಡಿದ್ದ ಕೃಷ್ಣನಿಗೇ ಸದ್ಯಕ್ಕೆ ಕೊಳಲು ಬೇಡ. ಕೊಳಲು ಹುಟ್ಟಿಸುವ ನೆನಪುಗಳು ಬೇಡ. ನೆನಪುಗಳ ಮೂಲಕ ತೆರೆದುಕೊಳ್ಳುವ ಬೃಂದಾವನವೂ ಬೇಡ. ಹಾಗಿದ್ದರೆ ಕೃಷ್ಣನಿಗೆ ರಾಧೆಯ ನೆನಪೂ ಬೇಡವಾಯಿತೇ?

"ಪೋ ರಾಧೆ ಬೇಗ ಪೋ ರಾಧೆ" ಎಂದು ಸಖಿಯರು ಅವಸರಿಸಿದರೂ ರಾಧೆಗೆ ಬಿಟ್ಟು ಹೋದ ಸಖನ ಬೆನ್ನತ್ತುವುದು ಬೇಕಿಲ್ಲ. ಆತನ ಪಯಣ ನಿಲ್ಲಿಸಿ ಗೋಗರೆದು ಕರೆ ತರಬೇಕೆನ್ನುವ ಬಯಕೆಯಿಲ್ಲ. " ಹಾ ತೊರೆದನೇ-ಕೊಳಲ ತೊರೆದನೇ" ಎನ್ನುವಲ್ಲಿ ಆಕೆಗೆ ಕೃಷ್ಣ ತನ್ನ ಸರ್ವಸ್ವವೇ ಆದ ಕೊಳಲನ್ನೂ, ತನ್ನನ್ನೂ ಬಿಟ್ಟುಹೋದ ದುಃಖವಿದೆ. ಅದರಿಂದ ಹೊರ ಹೊಮ್ಮದ ತನ್ನ-ಆತನ ಪ್ರೇಮದ ಉಸಿರಿನ ವೇದನೆಯ ಆತಂಕ ಅರ್ಥವಾದಂತಿದೆ. ಕೃಷ್ಣನಿಲ್ಲದ ರಾಧೆ ಪೂರ್ಣವಲ್ಲ ಎನ್ನುವ ಸತ್ಯ ಕೃಷ್ಣನಿಗೂ ಗೊತ್ತಿದೆ. ಅದಕ್ಕವನು ಕೊಳಲನ್ನೂ ಬಿಟ್ಟು ನಡೆದಿದ್ದಾನೆ. ಕೊಳಲೇ ಕೃಷ್ಣನಾಗುತ್ತಾ, ಕೃಷ್ಣನ ಜೊತೆ ನಲಿನಲಿದ, ಅಪ್ಪುಗೆಯಲಿ ಪರವಶವಾದ ದಿನಗಳನ್ನು ನೆನಪಿಸುತ್ತಾ ಕೃಷ್ಣನಂತೆಯೇ ರಾಧೆಯ ಬೊಗಸೆ ತುಂಬಿಕೊಳ್ಳುತ್ತದೆ. ರಾಧೆಯನ್ನೂ, ಕೊಳಲನ್ನೂ ಬಿಟ್ಟು ನಡೆದಿರುವುದರಿಂದ ಕೃಷ್ಣನೆಂಬ ನಿಷ್ಕಲ್ಮಶ ಪ್ರೇಮಿಯೂ ಒಂಟಿಯಾಗಿದ್ದಾನೆ. ಅಪೂರ್ಣವಾಗಿಯೇ ಉಳಿದುಕೊಳ್ಳುತ್ತಾನೆ. ಹಾಗೆ ಉಳಿದುಕೊಳ್ಳುವುದರಲ್ಲೇ ಆತನಿಗೆ ಹೆಚ್ಚು ಸುಖವಿದ್ದಂತೆ ತೋರುತ್ತದೆ. ಇಲ್ಲಿ ಕೃಷ್ಣನಿಗಾಗಿ ಕಾಯುತ್ತಿರುವ ರಾಧೆಯ ಪ್ರೀತಿ ದೊಡ್ಡದೇ ಅಥವಾ ಕೊಳಲನ್ನು ಬಿಟ್ಟು ಹೋಗುವ ಮೂಲಕ ರಾಧೆಗೆ ಸಮಾಧಾನ ಹೇಳಲು ಹೊರಟ ಕೃಷ್ಣನ ಪ್ರೀತಿಯ ಕಾಳಜಿ ಹೆಚ್ಚೇ?

ಆತ ಬಿಟ್ಟು ಹೋದ ಕೊಳಲೊಳಗಿರುವ ಆತನ ಉಸಿರಿನ ಬೆಚ್ಚನೆಯನ್ನು ತುಟಿಯ ಪ್ರಾಣರಸದಿಂದ ಹೀರುತ್ತಾ ಕೃಷ್ಣನಿಗಾಗಿ ಕಾಯುತ್ತಿದ್ದಾಳೆ ರಾಧೆ. ಕೊಳಲ ತೊರೆದು ಹೋದ ಎಂದು ಗೊತ್ತಾದ ಮರುಕ್ಷಣದಲ್ಲೇ ಆಕೆಯಲ್ಲಿ ಉಳಿಯುವುದು ಖಚಿತವಾಗಿ ಎರಡು ಪ್ರಶ್ನೆಗಳು

ನೆನೆದನೇ...ಎನ್ನ ನೆನೆದನೇ
ಮರಳನೇ....ಇನ್ನು ಮರಳನೇ

ಈ ಪ್ರಶ್ನೆಗಳಿಗೆ ಎರಡು ರೀತಿಯ ಉತ್ತರಗಳನ್ನು ಕಂಡುಕೊಳ್ಳುವ ಸಾಧ್ಯತೆ ಇದೆ...ಅದೆಲ್ಲಕ್ಕಿಂತ ಹೆಚ್ಚಾಗಿ ಮೌನವಾಗಿರುವುದಕ್ಕೂ ಅವಕಾಶವಿದೆ. ಅದಕ್ಕೇ ಇರಬೇಕು ರಾಧೆಗೆ ಸುದೀರ್ಘ ಮೌನವೂ ಪ್ರೀತಿಯಂತಹ ಸಹಜ ಭಾವ ಎಂದೆನಿಸುತ್ತದೆ.

ಯಾಕೆಂದರೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರವೇ ಅಂತಿಮವಲ್ಲ ಎನ್ನುವುದು ರಾಧೆಗೂ ಗೊತ್ತಿದೆ...!!

5 ಕಾಮೆಂಟ್‌ಗಳು:

nili ಹೇಳಿದರು...

Very nice. Kartik. U can write so many things about Radha and Krishna with different angels. nanagu e prashnegalu kaadive. olavu irade baduku saaguttade ennalu olle example alva? keep writing. good luck

Geervani.

sunaath ಹೇಳಿದರು...

ಬಹಳ ಚೆನ್ನಾಗಿ ಅರ್ಥೈಸಿ ವಿವರಿಸಿದ್ದೀರಿ. ಧನ್ಯವಾದಗಳು.

Dr Gnanadev ಹೇಳಿದರು...

really absorbing writeup krishna consciousness flows into us as we read the article. keep it up

akshatha ಹೇಳಿದರು...

chennada niroopane...ottige balalarada Krishna-Radheyare yavagaloo utkata pritige upameyagtare annodu intresting vishaya alve?

Unknown ಹೇಳಿದರು...

Madhye madhye balasikonda kavanada saalugalu sogasagive.Radha-krishnara premavannu mattondu drishtikonadinda nodiruvudu vishishtavenisuttale prashnegalagi kaaduttave...