ಬುಧವಾರ, ಡಿಸೆಂಬರ್ 14, 2011

ಮೌನದೊಳಗಿನ ಶಬ್ದವನ್ನು ಹುಡುಕುತ್ತಾ




ಸಿನಿಮಾ: ಇಟ್ಸ್ ಆಲ್ ಗಾನ್ ಪೀಟ್ ಟಾಂಗ್
ಭಾಷೆ: ಇಂಗ್ಲೀಷ್/ಸ್ಪಾನಿಶ್
ನಿರ್ದೇಶಕ: ಮೈಕೆಲ್ ಡೋಸ್
ಅವಧಿ: 90 ನಿಮಿಷ

ಪಬ್ಬಿನ ತಿಳಿ ನೀಲ ಬೆಳಕು, ಲೇಸರ್ ಕಿರಣಗಳ ಬಳುಕು, ಮತ್ತಿನಲ್ಲಿ ಜಗತ್ತನ್ನೇ ಮರೆತ ಯುವ ಜನ. ಅವರೆಲ್ಲರಿಗೂ ಇವ ಬಂದ್ರೆ ಮತ್ತೆ ಮತ್ತೇರುತ್ತೆ. ಸಂಗೀತವನ್ನು ರೀ-ಮಿಕ್ಸ್ ಮಾಡುತ್ತಾ ಹೊಸದನ್ನ ಆ ಕ್ಷಣಕ್ಕೆ ಸೃಷ್ಟಿಸುತ್ತಾ ಯುವಕರನ್ನು ಹುಚ್ಚೆದ್ದು ಕುಣಿಯುವಂತೆ ರೋಮಾಂಚಿತಗೊಳಿಸುತ್ತಾನೆ. ಅವನ ಬದುಕಿಗಿರೋ ಹೈ ಫ್ರೀಕ್ವೆನ್ಸಿ ಒಂದೇ. ಅವನಿಗೆ ಶಬ್ದವೇ ಜೀವ, ಜಗತ್ತು. ಇದು ಫ್ರ್ಯಾಂಕಿ ವೈಲ್ಡ್ ಅನ್ನೋ ಡಿಜೆಯೊಬ್ಬ ಬದುಕಿದ ಸಿನಿಮಾ- "ಇಟ್ಸ್ ಆಲ್ ಗಾನ್ ಪೀಟ್ ಟಾಂಗ್".


ಅವನಲ್ಲಿ ಎಲ್ಲವೂ ಇದೆ. ಯಶಸ್ಸು, ಕೀರ್ತಿ, ಹಣ, ಹೆಣ್ಣು, ಹೆಂಡ...ಮತ್ತಷ್ಟು ಮತ್ತೇರಲು ಡ್ರಗ್ಸು...ಪ್ರಸಿದ್ಧ ಡಿಜೆ ಬೇರೆ. ಕಾಲಿಟ್ಟಲ್ಲೆಲ್ಲಾ ಜನ ಮುತ್ತುತ್ತಾರೆ. ಕ್ಯಾಮರಾಗಳು ಕ್ಲಿಕ್ಕಾಗುತ್ತವೆ. ಮ್ಯಾಗಜೀನುಗಳು ಪುಟಗಟ್ಟಲೆ ಬರೆಯುತ್ತವೆ. ಪ್ರತೀ ಕ್ಷಣವನ್ನು ತೀವ್ರವಾಗಿ ತನಗಿಷ್ಟ ಬಂದಂತೆ ಬದುಕುತ್ತಾ ಹೋಗುತ್ತಾನೆ ಫ್ರ್ಯಾಂಕಿ. ಶಬ್ದ ಕರ್ಕಶವಾದರೆ, ಹಾದಿ ತಪ್ಪಿದರೆ ಫ್ರ್ಯಾಂಕಿ ನಿಗಿನಿಗಿ ಕೆಂಡ. ಅವನಿಗೆ ಫ್ರೀಕ್ವೆನ್ಸಿ ಯಾವತ್ತೂ ಮ್ಯಾಚಾಗ್ಬೇಕು.


ಎಲ್ಲಾ ಸರಿಯಾಗಿದ್ದ ಘಳಿಗೆಗಳಲ್ಲೇ ಫ್ರ್ಯಾಂಕಿ ನೀನಿನ್ನೂ ಸಂಪೂರ್ಣ ಕಿವುಡ ಅಂತ್ಹೇಳಿ ಅಗತ್ಯವಾಗಿದ್ದಾಗ ಮಾತ್ರ ಬಳಸಲು ಹಿಯರಿಂಗ್ ಕೈಗಿಡುತ್ತಾನೆ ಡಾಕ್ಟರ್. ಕುಡಿತ ಬಿಡು, ಇರೋವಷ್ಟು ದಿನ ಬದುಕಿಗೆ ಕಂಟ್ರೋಲ್ ಇರಲಿ ಅಂತ ಕಿವಿಮಾತು ಹೇಳುತ್ತಾನೆ. ಅಕ್ಷರಶಃ ನಡುಗಿ ಹೋಗುತ್ತಾನೆ ಫ್ರ್ಯಾಂಕಿ. ಬರ ಬರುತ್ತಾ ಶಬ್ದ ಕಿವಿಗಳೊಳಗೆ ಇಳಿಯದೇ ಹೋದಾಗ ಸೃಷ್ಟಿಯಾಗುವ ಮೌನಕ್ಕೆ, ನೀರವತೆಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಅನ್ನೋದು ಗೊತ್ತಾಗದೇ ಅನಾಥನಾಗುತ್ತಾನೆ. ಪಬ್ಬಿನೊಳ ಹೊಕ್ಕಿ ಮ್ಯೂಸಿಕ್ನ ಮಿಕ್ಸ್ ಮಾಡೋಕೆ ಕೂತರೆ ಅದ್ಯಾವುದೂ ಅಲ್ಲಿರೋರನ್ನ ತಣಿಸುತ್ತಿಲ್ಲ. ತಾನು ಸೃಷ್ಟಿಸುತ್ತಿರುವ ಸಂಗೀತ ಕೇಳುಗನನ್ನು ಪುನೀತಗೊಳಿಸುತ್ತಿಲ್ಲ ಅಂತನ್ನಿಸೋ ಕ್ಷಣವಿದೆಯಲ್ಲ, ಅದು ಸೃಜನಶೀಲ ವ್ಯಕ್ತಿಯೊಬ್ಬನ ಸಾವು. ಅಂತಹ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಫ್ರ್ಯಾಂಕಿಗೆ. ತುರ್ತಾಗಿ ಬದುಕಬೇಕಿದೆ ಫ್ರ್ಯಾಂಕಿಗೆ. ಆದ್ರೇನು ಮಾಡೋದು ಕಿವಿಗೆ ಬೀಳ್ತಿರೋ ಅರೆ ಬರೆ ಸಂಗೀತವೂ ಕರ್ಕಶ. ಸ್ಥಿತಿ ನರಕ. ಎಲ್ಲವನ್ನೂ ಕಿತ್ತು ಎಸೀಬೇಕು ಅನ್ನೋ ಹತಾಶೆ. ಜೊತೆಗಿದ್ದ ಮ್ಯೂಸಿಕ್ ಕಂಪೆನಿ ಕೈ ಬಿಡುತ್ತೆ. ಸಹಚರರು ಮುಖ ತಿರುಗಿಸ್ತಾರೆ. ಮಾಡೆಲ್ ಹೆಂಡ್ತಿ ಮತ್ತೊಬ್ನ ಹಿಂದೆ ಹೋಗ್ತಾಳೆ. ಯಶಸ್ಸು, ಕೀರ್ತಿ  ಎಲ್ಲಾ ಜರ್ರಂತ ಇಳಿದು ಹೋಗುತ್ತೆ. ನಿನ್ನೆ ತನಕ ಸ್ಟಾರ್ ಆಗಿದ್ದೋನು ಇವತ್ತು ಬೆಳಗಾಗೋದ್ರೊಳಗೆ ಕಿವಿ ಕೇಳದ ಡಿಜೆ. ದಿಕ್ಕೇ ತೋಚಲ್ಲ. ಅಕ್ಷರಶಃ ಹುಚ್ಚು ಹಿಡಿದವನಂತೆ ಬೆಟ್ಟವೊಂದರ ಮೇಲೆ ನಿಂತು ಕಿವಿಗಳೆರಡನ್ನು ಮುಚ್ಚಿ ಜೋರಾಗಿ ಚೀರುತ್ತಾನೆ, ಅಸಹಾಯಕನಾಗಿ...ನೋವಲ್ಲಿ ಬೆಂದು ಹಣ್ಣಾದವನಂತೆ.


ಏಕಾಂತ ಕೊಲ್ಲುತ್ತದೆ. ಶಬ್ದವಿಲ್ಲದ ಮೌನ ಹಿಂಡಿ ಹಿಪ್ಪೆ ಮಾಡುತ್ತದೆ. ಶಬ್ದವಿಲ್ಲದ ಜಗತ್ತು ಫ್ರ್ಯಾಂಕಿಗೆ ಸಾವು. ಬಿಟ್ಟೂ ಬಿಡದೇ ಕಾಡುವ ಮೌನವನ್ನು ಕೊಲ್ಲಲು, ಮುಕ್ತಿ ಪಡೆಯಲು ಕಿವಿಗಳೆರಡಕ್ಕೆ ಬ್ಯಾಂಡೇಜು ಸುತ್ತಿ ಮಲಗಿಬಿಡುತ್ತಾನೆ, ದಿನಗಟ್ಟಲೆ. ಕೋಣೆಯೊಳಗೆ ಬರೋ ಬೆಳಕು ಕಳೆದುಕೊಂಡಿರುವ ಅಸ್ಥಿತ್ವವನ್ನು ಪ್ರಶ್ನಿಸುತ್ತದೆ ಅಂತನ್ನಿಸಿ ಕಿಟಕಿಗಳನ್ನು ಪಿಲ್ಲೋಗಳಿಂದ ಮುಚ್ಚುತ್ತಾ ಹೋಗುತ್ತಾನೆ. ನಿಶ್ಯಬ್ದದೊಳಗೆ ಸಾಯುತ್ತಾ, ಕತ್ತಲೊಳಗೆ ಅರಳಲು ಬೆಳಕು ಹುಡುಕುತ್ತಾ ಬಿದ್ದು ಒದ್ದಾಡುತ್ತಾನೆ.


ನಾಲ್ಕಾರು ತಿಂಗಳು ಅಜ್ಞಾತವಾಗಿ ಕತ್ತಲ ಕೋಣೆಯಲ್ಲೇ ಬದುಕೋ ಫ್ರ್ಯಾಂಕಿ, ತಪಸ್ಸು ಮುಗಿಸಿದ ಸನ್ಯಾಸಿಯಂತೆ ಧಿಡೀರನೆ ಎದ್ದು ಬರುತ್ತಾನೆ. ನೀಟಾಗಿ ಶೇವ್ ಮಾಡ್ಕೋತಾನೆ. ತಿಂಗಳ ಮೌನ ಜೀವನೋತ್ಸಾಹವನ್ನು ತುಂಬಿರುತ್ತೆ. ಮತ್ತೆ ತನಗಿಷ್ಟ ಬಂದಂತೆ ಬದುಕೋದಿಕ್ಕೆ ನಿರ್ಧರಿಸುತ್ತಾನೆ ಫ್ರ್ಯಾಂಕಿ. ಆಗವ್ನು ಮಾಡೋ ಮೊತ್ತ ಮೊದಲ ಕೆಲ್ಸ-ಲಿಪ್ ರೀಡಿಂಗ್ ಕಲಿಕೆ. ಇಲ್ಲೇ ಅವನ ಬದುಕಿಗೊಂದು ತಿರುವು. ಕಲಿಸೋ ಹುಡುಗಿಗೂ ಕಿವಿ ಕೇಳಲ್ಲ. ತುಟಿಗಳ ನಡುವಿನ ಚಲನೆಯ ನಡುವೆ ಬದುಕು ಮತ್ತೆ ಚಲಿಸಲು ಪ್ರಾರಂಭಿಸುತ್ತೆ. ತುಟಿಗಳ ಚಲನೆಯೊಳಗೆ ಮೌನದೊಳಗಿನ ಶಬ್ದಗಳನ್ನು ಅರಿಯಲು ಶುರು ಮಾಡುತ್ತಾನೆ. ಅರಿವೇ ಗುರುವಾಗುತ್ತೆ. ತುಟಿ ಮತ್ತು ನಾಲಗೆ ಹುಟ್ಟಿಸುವ ಶಬ್ದದ ನಡುವೆ ಬತ್ತಿ ಹೋಗಿರೋ ಪ್ರೀತಿಗೆ ಮತ್ತೆ ಜೀವ ಬರುತ್ತೆ. ಕಿವಿ ಕೇಳದ ಆ ಹುಡುಗಿ ಸಂಗಾತಿಯಾಗಲು ಫ್ರ್ಯಾಂಕಿಗೆ ಕಾರಣಗಳೇ ಬೇಕಿಲ್ಲ.


ಕಿವುಡುತನದಿಂದ ಸಂಗೀತದ ಲಯವನ್ನ ಹಿಡಿಯಲು ಸಾಧ್ಯವಿಲ್ಲ, ಅದಕ್ಕೊಂದು ಕಿವಿ ಬೇಕೇ ಬೇಕು ಅನ್ನೋ ಭ್ರಮೆಯಲ್ಲೇ ದಿನ ದೂಡುತ್ತಿರುತ್ತಾನೆ ಫ್ರ್ಯಾಂಕಿ ವೈಲ್ಡ್. ಅದೊಂದು ಸಂಜೆ, ಸಂಗಾತಿ ಸ್ಪೀಕರಿನ ಪಕ್ಕ ಕೈ ಹಿಡಿದು ಶಬ್ದದ ರಿದಂನ ಕೇಳಲು ಕಿವಿಯಿಲ್ಲದಿದ್ದರೇನಾಯ್ತು, ಸ್ಪರ್ಶದ ಮೂಲಕ ರಿದಂನ ಹಿಡಿಯೋದು ಸುಲಭ ಅಂತ ತೋರಿಸಿಕೊಡುತ್ತಾಳೆ. ಡ್ಯಾನ್ಸರ್ಳ ಹೆಜ್ಜೆಯ ತಾಳವನ್ನು ಹಿಡಿ ಅಂತ ಹುರಿದುಂಬಿಸುತ್ತಾಳೆ. ಆಗಲೇ ಫ್ರ್ಯಾಂಕಿ ನಿಜವಾಗಿಯೂ ತೆರೆದುಕೊಳ್ಳೋದು. ತನಗೆ ಶಬ್ದದೊಂದಿಗೆ ದಾಂಪತ್ಯ ಸಾಧ್ಯವಿದೆ ಅಂತ ಮನವರಿಕೆಯಾಗೋದೇ ಸಿನಿಮಾದ ಅಪೂರ್ವ ಸನ್ನಿವೇಶ.




ಆಮೇಲಿನದು ವ್ಯಕ್ತಿಯೊಬ್ಬ ಎಲ್ಲಾ ಅಡೆತಡೆಗಳ ಮಧ್ಯೆ ಜೀನಿಯಸ್ ಹೇಗಾಗ್ತಾನೆ ಅನ್ನೋ ಕತೆ. ಸ್ಪೀಕರ್ಗಳ ಮೇಲೆ ಕಾಲಿಟ್ಟು ಶಬ್ದದ ಲಯ ಹಿಡಿಯುತ್ತಾ, ಫ್ರೀಕ್ವೆನ್ಸಿಗಳ ಜೊತೆ ಕುಂಟೆಬಿಲ್ಲೆ ಆಡುತ್ತಾ ಹೋಗುತ್ತಾನೆ. ಹೊಸ ಶಬ್ದ ತರಂಗಗಳು ಅರಳುತ್ತವೆ. ಕಿವಿ ಕೇಳದಿದ್ದರೂ ಸಂಗೀತ ನರನಾಡಿಗಳಲ್ಲಿ ಸಂಚರಿಸುತ್ತೆ. ಕಿವುಡ ಡಿಜೆ ಫ್ರ್ಯಾಂಕಿ ವೈಲ್ಡ್ ತನ್ನ ಸಂಗೀತದಿಂದಾಗಿ ಮತ್ತೆ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗ್ತಾನೆ. ಯುವ ಜನತೆಯ ಐಕಾನ್ ಆಗಿ ಬದ್ಲಾಗ್ತಾನೆ. ಹಾಗೇ ಯಶಸ್ಸಿನ ತುತ್ತ ತುದಿಯಲ್ಲಿರೋವಾಗ್ಲೇ ತನ್ನ ಗೆಳೆಯನಿಗೂ ಹೇಳದೇ ಫ್ರ್ಯಾಂಕಿ ಗೆಳತಿಯೊಂದಿಗೆ ಮರೆಯಾಗುತ್ತಾನೆ. ಬುದ್ಧನಂತೆ ಮೌನಿಯಾಗಿ ನಡೆಯುತ್ತಾನೆ. ಜ್ಞಾನೋದಯಕ್ಕೆ ಮುಖ ಮಾಡಿದಂತೆ.


ಯಶಸ್ಸು, ಕೀರ್ತಿ, ಹಣ ಎಲ್ಲವೂ ಮತ್ತೆ ಮತ್ತೇರಿಸಲು ರೆಡಿಯಾಗಿವೆ. ಆದರೆ ಫ್ರ್ಯಾಂಕಿ ಮಾತ್ರ ಇಲ್ಲ. ಕೊನೆಗೂ ಫ್ರ್ಯಾಂಕಿ ವೈಲ್ಡ್ಗೆ ಪ್ರತೀ ಕ್ಷಣವನ್ನು ತೀವ್ರವಾಗಿ ಅನುಭವಿಸ್ತಾ ಬದುಕೋದೇ ಮುಖ್ಯವಾಗುತ್ತದೆ. ಇವತ್ತಿನ ವರ್ತಮಾನದ ವೇಗ, ಜೊತೆಗೆ ಮೂಟೆಯಷ್ಟು ಗೊಂದಲದ ಗೂಡೊಳಗೆ ಬೇಯುತ್ತಿರೋ ನಾವೆಲ್ಲಾ ಒಂದಿಲ್ಲೊಂದು ಕ್ಷಣದಲ್ಲಿ ಫ್ರಾಂಕಿಯಂತೆಯೇ; ಶಬ್ದವನ್ನು ಗ್ರಹಿಸಿಯೂ ಕಿವುಡರಾಗುವ ಪರಮ ಶಾಪ ನಮ್ಮದು ಕೂಡ. ಸದ್ಯಕ್ಕೆ ನಮಗೆಲ್ಲಾ ಅರ್ಥವಾದರೂ, ನಾವೇ ಪಾತ್ರವಾಗದೇ ಉಳಿಯೋ ಸಿನಿಮಾ ನಮ್ಮ ನಿತ್ಯದ್ದು.


ಪೌಲ್ ಕೈಲ್ ಅನ್ನೋ ನಟ ಫ್ರ್ಯಾಂಕಿ ವೈಲ್ಡ್ ಪಾತ್ರವನ್ನ ಮೈಮೇಲೆ ಅವಾಹಿಸಿಕೊಂಡವನಂತೆ ಅಭಿನಯಿಸಿದ್ದಾನೆ. ಅವನ ನಗೆ, ಅತೀ ಚೆಲ್ಲುತನ, ಹೊಳೆಯೋ ಚಿನ್ನ ಹಲ್ಲು ಎಲ್ಲವನ್ನೂ ನೋಡಿಯೇ ಆನಂದಿಸಬೇಕು. ತಾನಿನ್ನು ಕಿವುಡ ಅಂತ ಗೊತ್ತಾಗಿ ಕ್ರಮೇಣ ಶಬ್ದ ಕಿವಿಯೊಳಗಿಳಿಯದೇ ಬರೀ ಮೌನ ಆವರಿಸೋ ಕ್ಷಣದಿಂದ ಅವನ ಅಭಿನಯ ದಂಗುಬಡಿಸುತ್ತದೆ. ಒಮ್ಮೆ ದಿಕ್ಕೆಟ್ಟವನಂತೆ, ಮತ್ತೊಮ್ಮೆ ಸಂತನಂತೆ, ಅರ್ಥವೇ ಆಗದ ಅಮೂರ್ತ ಕ್ಷಣದೊಳಗೆ ಬದುಕಿ ಕಂಗಾಲಾಗೋ ದೃಶ್ಯಗಳಲ್ಲಿ ನಮ್ಮ ಬದುಕಿನ ಘೋರ ಘಳಿಗೆಗಳೂ ಸೇರಿಕೊಂಡಿವೆಯೇನೋ ಅಂತನ್ನಿಸುತ್ತೆ. ಒಂದರೆಕ್ಷಣ ನಾವೇ ಫ್ಯ್ರಾಂಕಿಯೇನೋ ಅನ್ನೋವಷ್ಟು ತಲ್ಲಣ ಹುಟ್ಟಿಬಿಡುತ್ತೆ. ಪಿಲ್ಲೋಗಳಿಂದ ಮುಚ್ಚಿರೋ ರೂಮಿನ ಗೋಡೆಗಳಿಗೆ ಆತ ಸಿಟ್ಟು, ಅಸಹಾಯಕತೆಯಿಂದ ಹಾರಿ ಹಾರಿ ಒದೆಯುತ್ತಿದ್ದರೆ ಮನಸ್ಸು ಮರುಗುತ್ತದೆ. ಇಡೀ ಸಿನಿಮಾವನ್ನು, ಅದರ ಮುಖ್ಯ ಪಾತ್ರವನ್ನು ನಮ್ಮ ಬದುಕಿನ ಭಾಗವೇನೋ ಅಂತ ಮಾಡಿಬಿಡೋದು ಪೌಲ್ ಕೈಲ್. ಬಿಟ್ಟೂಬಿಡದೇ ಕಾಡುವಂತೆ ಮಾಡೋದು ಅವನೇ. ಯಶಸ್ಸಿನ ಅಮಲು, ಸೋಲಿನ ಘೋರ ಕ್ಷಣಗಳು, ಏಕಾಂತದೊಳಗೆ ಸತ್ತು ಮತ್ತೆ ಹುಟ್ಟುವಲ್ಲೆಲ್ಲಾ ಪೌಲ್ ಒಂದಿಂಚೂ ಅವನೆಡೆಯಿಂದ ದೃಷ್ಟಿ ಹಾಯಿಸದಂತೆ ಅಭಿನಯಿಸಿದ್ದಾನೆ.


ಸಿನಿಮಾದ ಮಧ್ಯೆ ಮಧ್ಯೆ ಡಿಜೆಗಳು, ಫ್ರ್ಯಾಂಕಿ ವೈಲ್ಡ್ ಜೊತೆ ಒಡನಾಡಿದೋರ ಬಿಡಿ ಬಿಡಿ ಸಂದರ್ಶನದ ತುಣುಕುಗಳು ಸಿನಿಮಾಕ್ಕೆ ದೊಡ್ಡ ತಡೆ. ಫ್ರ್ಯಾಂಕಿಯಾಗಿರೋ ಪೌಲ್ ಕೈಲ್ ಮಾಡಿರೋ ಮೋಡಿಯದು. ಫ್ರ್ಯಾಂಕಿಯ ಬದುಕಿನ ಕಾಲ ಘಟ್ಟ ಮತ್ತು ಭಾವನಾತ್ಮಕತೆಯ ಗ್ರಾಫನ್ನು ಚಿತ್ರಕತೆಯಲ್ಲಿ ಜಾಣ್ಮೆಯಿಂದ ಹೆಣಿಯುತ್ತಾ ಹೋಗುತ್ತಾನೆ ನಿರ್ದೇಶಕ-ಮೈಕೆಲ್ ಡೌಸ್. ನೋಡಲೇ ಬೇಕಾದ ಸಿನಿಮಾವಿದು.


ಇದೇ ಸಿನಿಮಾವನ್ನು ಇತ್ತೀಚೆಗೆ ನೀರವ್ ಘೋಷ್ "ಸೌಂಡ್ ಟ್ರ್ಯಾಕ್" ಹೆಸರಲ್ಲಿ ಹಿಂದಿಗೆ ಭಟ್ಟಿ ಇಳಿಸಿದ್ದಾರೆ.


(ಕುಡಿತ, ಡ್ರಗ್ಸ್ ಮತ್ತು ಬೈಗುಳದ ಭಾಷೆ ಬಳಕೆಯಾಗಿರೋದ್ರಿಂದ ಮಕ್ಕಳೊಂದಿಗೆ ಕೂತು ಈ ಸಿನಿಮಾ ದಯವಿಟ್ಟು ನೋಡ್ಬೇಡಿ.)

ಶನಿವಾರ, ಅಕ್ಟೋಬರ್ 1, 2011

ಅನಾ"ಮತ್ತು"ಗಳು....

ಕುಣಿಯುತ್ತಿಲ್ಲ ನವಿಲು
ಹಣತೆ ಕಿಡಿಗೆ ಕೀಟಗಳ ಮುತ್ತು
ಮತ್ತು
ವರ್ಷಕ್ಕೆ ಒಂದೇ ಆಶಾಢ, ಒಂದೇ ಶ್ರಾವಣ.


ಚಿಗುರುವ ಎಲೆಗಳಲಿ ಮುದಿ ಮಾಯೆ
ಕಣ್ಣೀರ ಹನಿಗಳಲಿ ರೆಪ್ಪೆ ಬಯಲು
ಕಟ್ಟಡಗಳು ಏರುತ್ತಾ ನೆಮ್ಮದಿ ಸಾವು.
ಹೆಣೆದ ಜೇಡರ ಬಲೆಯಂತೆ ವಿದ್ಯುತ್ ತಂತಿ
ಮತ್ತು
ತಿಂಗಳಿಗೊಂದೇ ಸಂಬ್ಳ, ಒಂದೇ ನೌಕ್ರಿ.


ಇಟ್ಟ ಕಣ್ಣಲ್ಲಿ ನೆಟ್ಟ ನೋಟದಲಿ
ಸರ್ಕಾರಿ ಬಸ್ಸಿನ ಕನ್ನಡಿ ಹೊಳಪು
ದರ್ಶಿನಿಯ ಬೈಟೂ ಕಾಫಿ
ಟೂ ಬಿಟ್ಟ ಮಗಳು
ಶಾಪಿಂಗಿನಲ್ಲೇ ಕಳೆದು ಕೂಡಿಸಿ ಗುಣಿಸಿದ
ಸಮಯ ಡಿಸ್ಕೌಂಟ್ ಫ್ರೀ..
ಫೋಟೋಶಾಪಿನಲ್ಲೇ ಹೂ ಅರಳಿ
ಘಮ್, ಘಮ್
ದರಿದ್ರ ಕರೆಂಟು..
ಲ್ಯಾಪ್ಟಾಪ್ ಬೆಳಕಲ್ಲೇ ಉಣ್ಣಬೇಕು


ಬರಲಿ ಮತ್ತೊಂದು ಚತುರ್ಥಿ, ದೀಪಾವಳಿ
ಮೆತ್ತಲು ಬೇಕು ದೇಸಿ ಪೌಡರು
ಟೆರೇಸಿನ ಮೇಲೇ ಮಾದರಿ ಕೃಷಿ: ಒಂದು ಚಿಂತನೆ
...ಮರೆತೇ ಹೋಗಿತ್ತು
ಇಂಟರ್ನೆಟ್ಟು ಕಟ್ಟಾಗಿದೆ, ಬಿಲ್ಲು ಪಾವತಿಯಾಗಿಲ್ಲ.
ಗೂಗಲ್, ಫೇಸ್ಬುಕ್, ಆರ್ಕುಟ್ 
ಸಾಕಷ್ಟು ಪರಿಚಯಗಳನ್ನು ಅಪ್ರೂವ್
ಮಾಡಬೇಕು.
ದರಿದ್ರದ್ದು ಫ್ಲೈಓವರ್ ಕೂಡಾ ಜಾಮು.


ಬನ್ನಿ ಸ್ವಲ್ಪ ದಿನ ರೆಸಾರ್ಟಿಗೆ 
ಪ್ರಕೃತಿ ಚಿಕಿತ್ಸೆಯ ನೆಮ್ಮದಿ
ಎರಡೇ ದಿನ
ಫ್ರೀ ಪ್ಯಾಕೇಜ್ ಬೇರೆ.
ಅಪ್ಪ-ಅಮ್ಮನನ್ನೂ ನೋಡಿದ ಹಾಗಾಯ್ತು
ಬನ್ನಿ, ಬನ್ನಿ..

ಭಾನುವಾರ, ಸೆಪ್ಟೆಂಬರ್ 25, 2011

ಬಿಡಿಸದ ಪ್ರೇಮಚಿತ್ರ


ಇಟೆಲಿಯ "ಸಿನಿಮಾ ಪ್ಯಾರಡಿಸೋ" ವನ್ನು ಮತ್ತೆ ಮತ್ತೆ ನೋಡುವುದರಲ್ಲೇ ಒಂದು ಸುಖವಿದೆ. ಅದರಲ್ಲಿ ಬರುವ ಥಿಯೇಟರಿನ ಪ್ರೊಜೆಕ್ಷನಿಸ್ಟ್ ಆಲ್ಫ್ರೆಡೋ, ಸಿನಿಮಾವೆಂಬ ವಿಸ್ಮಯದ ನೆರಳು ಬೆಳಕಿನಾಟವನ್ನು ಬೆರಗುಗಣ್ಣುಗಳಿಂದ ನೋಡುತ್ತಾ ಕರಗಿ ಹೋಗುವ ಟೋಟೋ, ಇವರಿಬ್ಬರೂ ನಮ್ಮೆಲ್ಲರ ಅರಿವಿನ ಪರಿಧಿಯನ್ನು ವಿಸ್ತರಿಸುತ್ತಲೇ ಇರುತ್ತಾರೆ. ಸಿನಿಮಾದಲ್ಲಿ ಆಲ್ಫ್ರೆಡೋ ಒಂದು ಸನ್ನಿವೇಶದಲ್ಲಿ  ಅಮರ ಪ್ರೇಮಿಗಳಾದ ಟೋಟೋ ಹಾಗೂ ನಾಯಕಿ ಒಂದಾಗಬೇಕಾದ ಕ್ಷಣವನ್ನು ತಪ್ಪಿಸುವ ಸನ್ನಿವೇಶವಿದೆ.. ಪ್ರೀತಿಯ ಮತ್ತಿನಲ್ಲಿ ಗುರಿಯನ್ನು ಮರೆಯುವ ಹಂತಕ್ಕೆ ಬಂದಿದ್ದ ಟೋಟೋಗೆ ವೃದ್ಧ ಆಲ್ಫ್ರೆಡೋ ನಿಜವಾದ ಗುರುವಾಗುತ್ತಾನೆ. ಗುರಿಯನ್ನು ಗುರುತಿಸಿ ಕೊಡುತ್ತಾನೆ. ಟೋಟೋಗೆ ಆ ಕ್ಷಣದಲ್ಲಿ ತನ್ನ ಪ್ರೇಯಸಿಯ ಭೇಟಿಯನ್ನು ಸಾಧ್ಯವಾಗಿಸದೇ ಹೋದ ಆಲ್ಫ್ರೆಡೋ ಬಗ್ಗೆ ಸಿಟ್ಟು, ಅಸಹನೆ...ಎಷ್ಟೇ ಹತಾಶೆ ಅನುಭವಿಸಿದರೂ ಆ ನೋವು ಆತನಿಗೆ ಗುರಿಯನ್ನು ದಿಟ್ಟಿಸಿ ನೋಡಲು ಸಹಕರಿಸುತ್ತದೆ. ಟೋಟೋಗದು ಅವನ ಮುಪ್ಪಿನ ಸಮಯದಲ್ಲಿ ಗೊತ್ತಾಗುತ್ತದೆ.
------------------------------
ಬಿಟ್ಟೂ ಬಿಡದೇ ಕಾಡುವ ಅವಳ ಮುಂಗುರುಳು, ಅದ್ಯಾವುದೋ ಅಪರ ಘಳಿಗೆಯಲ್ಲೂ ಮಾಸದೇ ಉಳಿದ ನಗು, ಮೊಬೈಲಿನ ಡ್ರಾಫ್ಟ್ ಬಾಕ್ಸಿನಲ್ಲಿ ಬಾಕಿ ಉಳಿದ ಸಿಹಿ ಸಂಕಟದ ಪುಟಾಣಿ ಸಾಲು. ಬಿಡದೇ ಸುರಿಯೋ ಜಡಿಮಳೆ, ರೈಡ್ಗಾಗೇ ಕಾದು ಕುಳಿತಂತೆ ಖಾಲಿಯಾಗಿರೋ ಜಂಟಿ ರಸ್ತೆ..ಉಫ್...ಸಾಕಪ್ಪಾ ಸಾಕು...ನೆನೆದಷ್ಟೂ ನೆನೆಯುತ್ತೇವೆ, ಕಾಡಿಸಿ ಕೊಲ್ಲಲ್ಪಡುತ್ತೇವೆ. ನಮಗೂ ಒಬ್ಬ ಆಲ್ಫ್ರೆಡೋ ಬೇಕು..
ಬಿಲ್ಕುಲ್ ಬೇಕೇ ಬೇಕು. ಅವನು ನಮ್ಮನ್ನು ದೇವದಾಸನನ್ನಾಗುವುದನ್ನು ತಪ್ಪಿಸುತ್ತಾನೆ, ವಿರಹಿಯಾಗಿಯೇ ಉಳಿಯುತ್ತಾ ಸವಿ ನೆನಪಿನಲ್ಲಿ ಅನೇಕಾರು ವರ್ಷಗಳ ನಂತರ ಪ್ರೀತಿಸಿದ ಮೊದಲ ಹುಡುಗಿಯನ್ನು ಬೆಂಬತ್ತುವಂತೆ ಮಾಡುತ್ತಾನೆ. ಅವಳನ್ನು ಮೊದಲ ಬಾರಿಗೆ ಚುಂಬಿಸಿದ ಸುಖದ ಘಳಿಗೆ, ಅವಳ ಮುಂಗುರುಳನ್ನು ಉಂಗುರವಾಗಿಸಿದ ಕ್ಷಣ, ಅವಳ ಹೆಜ್ಜೆ ಮೇಲೆ ಮೊತ್ತಮೊದಲು ಹೆಜ್ಜೆಯಿಟ್ಟ ಹುರುಪು ಎಲ್ಲವೂ ನಮ್ಮ ನೆನಪಿನ ಪರಿಧಿಯಲ್ಲೇ ಹೆಪ್ಪುಗಟ್ಟಿ ಬಿಡುವಂತೆ ಮಾಡಿಬಿಡುತ್ತಾನೆ ನಮಗೆ ಗೊತ್ತೇ ಆಗದಂತೆ. ಟೋಟೋಗೆ ಬೆನ್ನಿಗಿದ್ದು ಹೇಗೆ ಪೊರೆದನೋ ಹಾಗೆ; ಒಂದು ಒಳ್ಳೆಯ, ಸಾತ್ವಿಕ, ಆರೋಗ್ಯಕರ ಸುಳ್ಳನ್ನು ಸತ್ಯವಾಗಿಸುವ ಮೂಲಕ. ನಮ್ಮನ್ನು ಹಾಗೂ ನಮ್ಮ ಪ್ರೇಯಸಿಯನ್ನು ದೂರ ಮಾಡಿ, ಬದುಕಿಗೊಂದು ಮೋಕ್ಷ ಕರುಣಿಸುತ್ತಾನೆ. ಅದರಿಂದಾಗಿ ಆ ತಿರುವಿನ ನಂತರದ ದಾರಿಗೆ ಒಂದು ವಿಸ್ಮಯವೇ ಒದಗಿ ಬಂದಿರುತ್ತದೆ.
ನಮ್ಮ ಯೌವನದ ಪ್ರಣಯದ ಕ್ಷಣಗಳು ಜೀವನ ಸಾರ್ಥಕ್ಯದ ಮಹಾ ತ್ಯಾಗದ ಘಳಿಗೆಗಳು ಅಂತ ಕೊನೆಯವರೆಗೂ ಅನ್ನಿಸುವುದಕ್ಕಿಂತ ಹೆಚ್ಚಾಗಿ ಅಂತಹದೊಂದು ಸನ್ನಿವೇಶ ದಿವ್ಯವಾಗಿತ್ತು ಎನ್ನುವುದೇ ಅಳಿಸಲಾಗದ ಅಕ್ಷರ ಸ್ಪಂದನೆ. ಸದ್ಯದ ಪರಿಸ್ಥಿತಿಯಲ್ಲಿ ಅದನ್ನು ಸಾಧ್ಯವಾಗಿಸುವವನು ಅವನೊಬ್ಬನೇ--ಆಲ್ಫ್ರೆಡೋ. ಅವನಿಗೆ ನಮ್ಮ ಮೇಲಿರುವ ಪ್ರೀತಿ ಹೇಳಿಸುವ ಸುಳ್ಳು ಬೇಕು. ಅದರಿಂದಾಗೇ ಸಿನಿಮಾ ಪ್ರೋಜೆಕ್ಟರ್ನ ಕಿಂಡಿಯ ಮೂಲಕ ಪರದೆಯ ಮೇಲೆ ಹಾಯುವ ಬೆಳಕಿನ ಕಿರಣಗಳಲ್ಲಿ ನಮ್ಮ ಬಿಡಿ ಬಿಡಿ ಸ್ಥಬ್ದ ಚಿತ್ರಗಳಿಗೆ ಜೀವ, ಚಲನೆ ಬಂದು ಕೂರುತ್ತದೆ. ಬತ್ತಿದ ಜೀವ ಸೆಲೆ ಮತ್ತೆ ಪುಟಿದುಕೊಂಡಂತೆ, ಚಿಕ್ಕ ಮಕ್ಕಳಂತೆಯೇ ಗಾಳಿಪಟ ಹಿಡಿದು ಓಡುತ್ತೇವೆ. ಮುಸ್ಸಂಜೆಯ ಗದ್ದೆ ಬದುವಿನಲ್ಲಿ.
------------
ನೋಡ ನೋಡುತ್ತಲೇ ಮಳೆಗಾಲ. ಬೆನ್ನತ್ತುತ್ತೆ ಚಳಿಗಾಲ. ಹೊದ್ದು ಮಲಗಿದರೆ ತೂರಿಕೊಳ್ಳುತ್ತೆ ಬೇಸಿಗೆಗಾಲ. ಕಾವು ಏರುವಷ್ಟರಲ್ಲಿ ಮತ್ತೆ ಮಳೆಗಾಲ...ಮಳೆಯಷ್ಟೇ ದಟ್ಟ ದರಿದ್ರ ನೆನಪೂ ಕೂಡಾ. ಅವಳೇ ಸಿಕ್ಕದಿದ್ದ ಮೇಲೆ ನೆನಪುಗಳೇ ಎಲ್ಲಾ ತಾನೇ. ಬೇಡ ಬೇಡ ಎಂದು ಬಚ್ಚಿಟ್ಟ ಆಕೆಯ ನೆನಪಿನ ಚಿಪ್ಪು ಜೀವನದ ಅದ್ಯಾವುದೋ ಘಳಿಗೆಯಲ್ಲಿ ಒಡೆದು ಬಿಡುತ್ತದೆ. ಆಗ ನಮ್ಮಲ್ಲಿ ಎಲ್ಲವೂ ಇರುತ್ತದೆ. ಒಂದು ಕಾಲದಲ್ಲಿ ನಮ್ಮಲ್ಲಿ ಇಲ್ಲ ಅಂತಂದುಕೊಂಡಿದ್ದು...30 ಸೆಕೆಂಡಿನ ಟಿವಿ ಆಡ್ನಂತೆ. ಆದರೆ ಆಕೆಯಿಲ್ಲ. ಅದೆಷ್ಟೋ ವರ್ಷಗಳ ನಂತರ ನೆನಪು ವಾಸ್ತವವಾಗಿ ಬಿಡುತ್ತದೆ. ಬೆಚ್ಚಿಬೀಳುವಂತಾಗುವುದು ಆಗಲೇ. ಹುಚ್ಚೇ ಹಿಡಿದಂತಾಗುತ್ತದೆ. ಬೇಕಿದ್ದೋ ಬೇಡದೆಯೋ ಎಲ್ಲಾ ಜಂಜಡಗಳಿಂದ ಮುಕ್ತವಾಗಿ ಓಡುತ್ತೇವೆ. ಬೆತ್ತಲೆ ಓಡಿದಂತೆ. ಇಷ್ಟರವರೆಗೆ ಮಾಡಿಕೊಂಡಿದ್ದು ಹೊಂದಾಣಿಕೆ ಎನ್ನುವ ನಿಟ್ಟುಸಿರಿನೊಂದಿಗೆ. ಮತ್ತೊಮ್ಮೆ ಅಸಹ್ಯದೊಂದಿಗೆ...ಅದೇ ಹಳೇ ಗೆಳತಿಯ, ಪ್ರೇಯಸಿಯ ಮುಖವನ್ನು, ವಿಳಾಸಗಳನ್ನು ಅರಸುತ್ತಾ. ಒಂದೇ ಒಂದು ಕಿರುನಗೆಗೆ, ಒಂದೇ ಒಂದು ಬಿಸಿಯುಸಿರಿಗೆ, ಒಂದೇ ಒಂದು ಅಪ್ಪುಗೆಗೆ. ನಮ್ಮದಲ್ಲದ ಘಳಿಗೆಗಳನ್ನು ನಮ್ಮದಾಗಿಸಿಕೊಳ್ಳುವ ತವಕದ ಮುದಿ ತಲ್ಲಣಗಳಿಗೆ...
ಅದೆಷ್ಟೋ ಕನಸುಗಳನ್ನು, ಕನವರಿಕೆಗಳನ್ನು ಹಾಗೆಯೇ ಬಿಟ್ಟು ಬಂದ್ದೇವೆ ನಾವು. ಮತ್ತೆ ಅವೆಲ್ಲವನ್ನೂ ಹೆಕ್ಕಿಕೊಳ್ಳಬೇಕು ಕಾಲನ ತೆಕ್ಕೆಯಿಂದ. ನೆಮ್ಮದಿಯ ಗೂಡು ಕಟ್ಟಲು ಆಕೆಯೂ ಜೊತೆಗಿರುತ್ತಾಳೆಯೇ ಎನ್ನುವುದಷ್ಟೇ ಪ್ರಶ್ನೆ...ನೆನಪು ಮೆರವಣಿಗೆಯಲ್ಲ. ನಲಿವಿದೆ ಅಂತ ಭಾವಿಸೋ ನೋವಿನ ಸಂತೆ ಅಥವಾ ನೋವೆಂದು ಭಾವಿಸುವ ನಲಿವಿನ ಸಂತೆ. ಕತ್ತಲಲ್ಲಿ ಬಣ್ಣ ಬಣ್ಣದ ಚಿತ್ರಗಳನ್ನು ವ್ಯಕ್ತಿಗಳಿಗೆ ರೂಪ ಕೊಡುತ್ತಾ ನಲಿವು ಕೊಡುತ್ತಾ ಮತ್ತೆ ಕೆಲವೇ ಕ್ಷಣಗಳಿಗೆ ಇರುವ ಬಣ್ಣಗಳನ್ನೆಲ್ಲಾ ಕರಗಿಸಿಕೊಂಡು ಬಿಳಿ ಬಣ್ಣಕ್ಕೆ ತಿರುಗಿದಂತೆ ಭಾಸವಾಗುವ ಸಿನಿಮಾ ಥಿಯೇಟರಿನ ಸ್ಕ್ರೀನಿನಂತೆ. ಅಂತಹ ಹುಚ್ಚುಗಳನ್ನು ಸಾಕಾರಗೊಳಿಸಿಕೊಳ್ಳಲು ನಮಗೆ ಎಲ್ಲವೂ ಬೇಕು.

ಇಷ್ಟೆಲ್ಲಾ ಸಾಕ್ಷತ್ಕಾರವಾಗಲಾದರೂ ನಮಗೊಬ್ಬ ಆಲ್ಫ್ರೆಡೋ ಸಿಕ್ಕಬೇಕು! ನಾವೂ ಟೋಟೋನಂತೆ ಇಷ್ಟದ ಬಗೆಗೊಂದು ಹುಚ್ಚನ್ನಿಟ್ಟುಕೊಂಡು ಓಡಬೇಕು. ಯಾರದೋ ನೆನಪಿನ ಮುಡಿಯಲ್ಲಿ ನೇತಾಡುವ ಸಂಪಿಗೆ ನಮ್ಮದಾಗುವ ಸಮಯಕ್ಕೆ ಹಂಗಿಲ್ಲ...

ಭಾನುವಾರ, ಮಾರ್ಚ್ 20, 2011

ಗೆಳತಿಯೊಬ್ಬಳ ಒಂಟಿ ಮಾತು

ರಾತ್ರಿಯಾಗುತ್ತದೆ. ಕಂಪ್ಯೂಟರಿನ ಪರದೆಯ ಹಾಗೆ ಮನಸ್ಸಲ್ಲಿ ಬಣ್ಣ ಬಣ್ಣದ ವಾಲ್  ಪೇಪರುಗಳು . ಅದರಲ್ಲಿರುವುದು ಅವನ ಚಿತ್ರವೇ? ಗೊತ್ತಿಲ್ಲ. ನೆನಪಿನ ಕೊಂಡಿಗೆ ಅವನ ಹಂಗ್ಯಾಕೆ ಎಂದು ಅನೇಕ ಬಾರಿ ಅಂದುಕೊಂಡದ್ದಿದೆ. ಆದರೆ ಅವನ ಹಂಗಿಲ್ಲದೇ ನೆನಪಾದರೂ ಎಲ್ಲಿ ಮುಂದೆ ಸಾಗುತ್ತದೆ. ಕೃಷ್ಣನನ್ನು ಕುರುಕ್ಷೇತ್ರ ಯುದ್ಧದ ನಡುವೆಯೂ ಪೊರೆದದ್ದು ರಾಧೆಯ ನೆನಪಲ್ಲದೆ ಮತ್ತಿನ್ನೇನು?

ಹೇಳಬೇಕು ಅಂದುಕೊಂಡಿದ್ದೆ ಅವನಿಗೆ ಹಲವಾರು ಬಾರಿ. ಮೊನ್ನೆ ಮೊನ್ನೆ ಮದುವೆ ಮನೆಯಲ್ಲಿ ಸಿಕ್ಕಾಗಲೂ. ಅಳುಕು. ತಿರಸ್ಕರಿಸುತ್ತಾನೆ ಎನ್ನುವುದಕ್ಕಲ್ಲ. ತಿರಸ್ಕರಿಸಿದರೂ ಸಹಿಸಿಕೊಂಡೇನು. ಆದರೆ ಹೀಗೆ ಬರೀ ಶಬ್ದಗಳಲ್ಲಿ ನನ್ನ ಇಷ್ಟಾನಿಷ್ಟಗಳನ್ನು ಹೇಳುತ್ತಾ ಹೋದ ಹಾಗೆ ನನ್ನೆಲ್ಲಾ ಭಾವನೆಗಳು ಬಿಜಿನೆಸ್ ಪ್ರಪೋಜಲ್ನಂತೆ ಕಾಣುತ್ತವೆ. ನನಗೆ ಅವನ ಬಗ್ಗೆ ಇರುವ ಭಾವನೆಗಳನ್ನೆಲ್ಲಾ ಹೇಳಿಕೊಂಡರೆ ನನ್ನಲ್ಲೇನು ಉಳಿಯಿತು ಬಚ್ಚಿಟ್ಟುಕೊಳ್ಳುವುದಕ್ಕೆ. ಬಚ್ಚಿಟ್ಟುಕೊಳ್ಳುವುದರಲ್ಲೂ ಸುರೀಳಿತ ಸುಖವಿದೆ ಎನ್ನುವುದೂ ಗೊತ್ತಾಗಿದ್ದೂ ಇವತ್ತೇ. ಹಿಂದೆಲ್ಲಾ ಕಾಕಿ ಹಪ್ಪಳವೋ, ಸಂಡಿಗೆಯೋ ಕಾಯಲು ಹೇಳಿದಾಗ ಕದ್ದುಕೊಂಡು ಹೋಗಿ ತಿನ್ನುವಾಗ ಆಗುತ್ತಿದ್ದ ಭಯದ ಚೂರುಪಾರೂ ಈಗಲೂ ಆಗುತ್ತದೆ. ಹೇಳಿಬಿಟ್ಟರೆ ಆ ಭಯ ಇಮ್ಮಡಿಯಾಗಬಹುದು.

ಆತ ಹಾಗೆಯೇ ಇರಲಿ. ಆತನಿಗೆ ನಾನೂ ಆತನನ್ನು ಇಷ್ಟಪಡುತ್ತಿದ್ದೇನೆ ಎನ್ನುವ ಸಣ್ಣ ಅನುಮಾನವಿದೆ. ಅದು ಹಾಗೆಯೇ ಇರಲಿ. ಯಾಕಾದರೂ ಹೇಳಬೇಕು. ಹೀಗೇ ಬದುಕಬಹುದಲ್ಲ. ಹೇಳಿಕೊಳ್ಳದೇ ಇರುವುದರಲ್ಲಿ ಇರುವ ಸುಖ ಹೇಳಿಕೊಳ್ಳುವುದರಲ್ಲೇನಿದೆ? ಹೇಳಿದರೆ ಹೇಳಿಕೆ ಬೇಡಿಕೆಯಾಗುತ್ತದೆ. ಬೇಡಿಕೆ ಹುಕುಂ ಆಗುತ್ತದೆ. ಮತ್ತೆ ಬರುವುದು ಬಗರ್ ಹುಕುಂ...ಮತ್ತೆ ಹೂಂ ಅನ್ನುವಲ್ಲೆಲ್ಲಾ ಊಹೂಂ ಎನ್ನುತ್ತಾ ಕೂರಬೇಕು..ಊಹೂಂಗಳೆಲ್ಲಾ ಹೂಂಗಳಾಗುತ್ತವೆ. ಇಷ್ಟ ಬಲು ಕಷ್ಟ.

ಮೊಬೈಲಿಗೆ ಕಾಲ್ ಮಾಡಿದಾಗಲೆಲ್ಲಾ ಸಾವಿರಕ್ಕಾಗುವಷ್ಟು ಮಾತು ಆತನದ್ದು. ಎದುರು ಸಿಕ್ಕಾಗ ಮಾತೇ ಆಡುವುದಿಲ್ಲ. ನನ್ನ ಕಣ್ಣನ್ನೇ ನೋಡುತ್ತಾ ಆಹ್ಲಾದಕರ ದೃಶ್ಯವೊಂದನ್ನು ಮನದಲ್ಲಿ ಸಂಯೋಜಿಸುತ್ತಿರಬೇಕು. ಆತನ ತುಟಿಯಂಚು ನಕ್ಕಾಗ ಉಬ್ಬುತ್ತಾ ಉದ್ದವಾಗುವುದನ್ನೇ ನೋಡುವುದೇ ಒಂದು ಆನಂದ. ಮೊನ್ನೆ ಭೇಟಿಯಾಗಿದ್ದಾಗ ಆತ ಮಾಡಿದ್ದನ್ನು ನೋಡಬೇಕಿತ್ತು. ನಾನು ನಿತ್ಯದ ಅಪೂರ್ವ ಫಳಿಗೆಯ ದಿನಚರಿ ಒಪ್ಪಿಸುತ್ತಿದ್ದಾಗಲೇ ಆತ ಹಾಗೇ ಸುಮ್ಮನೆ ನನ್ನ ಕೈ ಹಿಡಿದುಕೊಂಡ. ನೈಲ್ ಪಾಲಿಶ್ ಹಾಕದೇ ಇದ್ದ ಉಗುರುಗಳನ್ನು ಮುಟ್ಟುತ್ತಾ ಸಾಗಿದ. ಸ್ಪರ್ಶದಲ್ಲೊಂದು ಪುಳಕವಿದೆ, ಉನ್ಮಾದವಿದೆ ಎಂದು ಗೊತ್ತಾದ ದಿನವದು. ಪ್ರತೀ ಸಲ ಸಿಕ್ಕಾಗ ಆತ ಇನ್ಯಾವುದೋ ರೀತಿಯಲ್ಲಿ ಸ್ಪರ್ಶಿಸುತ್ತಾ ಭೇಟಿಗಳನ್ನು ಮತ್ತಷ್ಟು ಬೇಗ ಸಾಧ್ಯವಾಗಲಿ ಎನ್ನುವಂತೆ ಮಾಡುತ್ತಾನೆ. ಹಿಂದೊಮ್ಮೆ ಕುತ್ತಿಗೆಯ ಹಿಂದಿನ ಬೆನ್ನ ಭಾಗವನ್ನಷ್ಟೇ ಸ್ಪರ್ಶಿಸಿ ನಗುತ್ತಾ ಎದ್ದುಹೋಗಿದ್ದ. ಮತ್ತೆ ಆಸಾಮಿಯದ್ದೂ ವಾರವಾದರೂ ಪತ್ತೆಯಿಲ್ಲ. ಎದುರು ಸಿಕ್ಕಾಗ ಮಾತಿಗಿಂತ ಆತನ ಮೌನದ ಜೊತೆಗಿನ ಇಂತಹ ತುಂಟತನಗಳೇ ನನ್ನನ್ನು ಬೆಳೆಸುತ್ತವೆ. ಸಣ್ಣ ಹೆಜ್ಜೆ, ಸಣ್ಣ ವಿಷಯ ಎಷ್ಟು ಖುಷಿಯ ಕ್ಷಣಗಳಲ್ಲಾ ಎನಿಸುತ್ತದೆ.

"ತಿಂಗಳ ರಾತ್ರಿ ತೊರೆಯ ಸಮೀಪ, ಉರಿದಿದೆ ಯಾವುದೋ ದೀಪ" ಎನ್ನುವ ಕವಿತೆಯ ಸಾಲು ಆತನಿಗೆ ಬಹಳ ಇಷ್ಟ..ಆ ಸಾಲುಗಳನ್ನು ಕೇಳುತ್ತಿದ್ದ ಹಾಗೇ ಆತ ಮೈ ಮರೆಯುತ್ತಾನೆ. ಉಲ್ಲಾಸದಿಂದ ಬದುಕಿನ ಬಗ್ಗೆ ಹೊಸ ಕನಸುಗಳನ್ನು ಹೆಣೆದುಕೊಳ್ಳುತ್ತಾನೆ. ಅಂತಹ ನೆನಪುಗಳನ್ನು ಮತ್ತೆ ಮತ್ತೆ ಕಣ್ತುಂಬಿಕೊಳ್ಳಲು ಸಾಧ್ಯವಾಗುವ ಸಮಯ, ನಿಮಿಷಗಳಲ್ಲೇ ಜಗತ್ತು ನಿಂತು ಬಿಡಬೇಕು ಅಂತ ಅನಿಸುತ್ತದಂತೆ ಆತನಿಗೆ. ಯಾಕೆ ಅನ್ನೋದು ಯಥಾ ಪ್ರಕಾರ ನನ್ನ ಪ್ರಶ್ನೆ. ಪ್ರಶ್ನೆಗಳನ್ನು ಹೆಣಿಯುತ್ತಾ ಉತ್ತರಗಳನ್ನೇ ಬಯಸುತ್ತಾ ಕೂತರೆ ನೆಮ್ಮದಿ ಸುಡುತ್ತದೆ ಎಂದ...ಅರ್ಥವಾಗಲಿಲ್ಲ...ಅವನಿಗದು ಅರ್ಥವಾಗಿ ನೀನು ಉದ್ಧಾರವಾದ ಹಾಗೇ ಅಂತ ರಕ್ಕಸ ನಗೆ ಬೀರಿದ...ಬೇಕಿತ್ತಾ ನಂಗೆ..ನಿಗೂಢವಾಗಿದ್ದಾಗಲೇ ವಿಸ್ಮಯ ಉಳಿದುಕೊಳ್ಳೋದು. ಪ್ರೀತಿ ಅರಳೋ ಸಮಯದಲ್ಲಿ ಅದೇ ಪಂಚಾಮೃತ. ಅದವನಿಗೆ ಚೆನ್ನಾಗಿ ಗೊತ್ತಿತ್ತು..

ಭಾವೋದ್ವೇಗದ ಚಕ್ರವ್ಯೂಹದಲ್ಲಿ ಸಿಕ್ಕುಬಿದ್ದವನಂತೆ ಮೆಸೇಜು ಮಾಡುತ್ತಿದ್ದ ಪ್ರತೀ ದಿನ..ದಿನಗಟ್ಲೆ, ವಾರಗಟ್ಲೆ..ಎಲ್ಲೋ ಮೆಸೇಜು ಮಾಡೋದು ತಪ್ಪಿಸಿದ ಅಂತಂದ್ರೆ ಮುಗೀತು ಕತೆ...ಮತ್ತೆ ವಾರಗಟ್ಲೆ ಪರಿಚಯವೇ ಇಲ್ಲದವರಂತೆ ಇದ್ದು ಬಿಡುತ್ತಿದ್ದ...ಮೊದ ಮೊದಲು ಜಗಳ ಕಾಯುತ್ತಿದ್ದೆ. ನಿನ್ನ ನೆನಪು ಕಾಡುತ್ತದೆ, ನಿನ್ನ ಮುಖ ಕಣ್ಣೆದುರಿನಿಂದ ಜಾರುವುದಿಲ್ಲ. ಕಡೇ ಪಕ್ಷ ಹಾಯ್ ಅಂತಾದ್ರೂ ಮೆಸೇಜು ಮಾಡೋ ಅಂದಿದ್ದಕ್ಕೆ "ಎಲ್ಲವೂ ಹಚ್ಚಿಕೊಂಡಾಗ ಮಾತ್ರ ಹುಚ್ಚಾಗುತ್ತದೆ. ಹುಚ್ಚು ಯಾವತ್ತೂ ಆರೋಗ್ಯಕರವಾಗಿರಬೇಕು" ಅಂತ ಹೇಳಿ ಪಕ್ಕದ ಗಾಡಿಯಲ್ಲಿ ಕೆಂಡದ ಮಧ್ಯೆ ಕಾಯುತ್ತಿದ್ದ ಜೋಳದ ಬೆನ್ನತ್ತಿ ಹೋಗಿದ್ದ..

ಈಗಲೂ ನೆನಪಿದೆ.
ಅವನಿಗೆ ಆ ತಿಂಗಳು ಮೊದಲ ಸಂಬ್ಳ..ವಿಪರೀತ ಖುಷಿ ಖುಷಿಯಾಗಿದ್ದ..ಮೊದಲ ಸಂಬಳ, ಮೊದಲ ತುತ್ತು, ಮೊದಲ ಸ್ವರ ಎಲ್ಲವೂ ಅಮೂಲ್ಯ ಎನ್ನುವಾಗಲೇ ನಾನು ತಮಾಷೆಗೆ ತಟಕ್ಕನೆ ಮೊದಲ ಮುತ್ತು? ಎನ್ನುವುದನ್ನು ಮುಗ್ಧವಾಗಿ ಪ್ರಶ್ನಾರ್ಥಕವಾಗಿ ಕೇಳಿ ಮರುಕ್ಷಣವೇ ಪ್ರಬುದ್ಧೆಯಂತೆ ನಾಲಿಗೆ ಕಚ್ಚಿಕೊಂಡೆ.. ಆತನಿಗೆ ಅದ್ಯಾವ ಸೂಚನೆಯನ್ನು ನೀಡಿತೋ...ಮುಖವನ್ನು ಹತ್ತಿರ ಹತ್ತಿರಕ್ಕೆ ತಂದ...ಇನ್ನೇನು ಮುತ್ತುಕೊಟ್ಟೇ ಬಿಡುತ್ತಾನೆ....

....

....

ಇನ್ನೂ ಕಾಯುತ್ತಿದ್ದೇನೆ.

ಗುರುವಾರ, ಮಾರ್ಚ್ 17, 2011

ನನ್ನ ಬೆಡ್ರೂಮಿನ ಗೋಡೆಗಳಿಗೆ ಪೈಂಟ್ ಮಾಡಿಸಬೇಕಾಗಿದೆ


ನನ್ನ ಬೆಡ್ರೂಮಿನ
ಗೋಡೆಗಳಿಗೆ
ಪೈಂಟ್ ಮಾಡಿಸಬೇಕಾಗಿದೆ

ಇಡೀ ಚಿತ್ರಗಳೆಲ್ಲಾ
ಹುಡಿ ಹುಡಿ
ಹುಡುಗಿಯ ಕಣ್ಣು
ಒಂದೂವರೆ ಕಾಲಿನ ಮುದುಕಪ್ಪ
ಹಾರಿ ಹೋಗಲಿಕ್ಕೆ
ರೆಕ್ಕೆ ಬಡಿದ ಹಕ್ಕಿ...ಓಫ್
ಉಳಿದದ್ದು ದೀರ್ಘ ಹಗಲು

ನಾಚುತ್ತಾ ನೀರು
ತರಲು ನಿಂತ
ಹೆಣ್ಣಿನ ಚಿತ್ರ
ಮಗ್ಗುಲಲಿ
ದಿಬ್ಬಣದ ಅಬ್ಬರ
ಮೇಲೆ ಕೆಳಗೆ
ಬರಿದಾದದ್ದು
ಉಸಿರೆಳೆದ ಹೆಣ್ಣು
ಉಳಿದದ್ದು ಸಾಯುತ್ತಿರುವ
ರಾತ್ರಿ

ನನ್ನ ಬೆಡ್ರೂಮಿನ
ಗೋಡೆಗಳಿಗೆ
ಪೈಂಟ್ ಮಾಡಿಸಬೇಕಾಗಿದೆ

ಮಂಗಳವಾರ, ಜನವರಿ 11, 2011

ಗುರುತೇ ಇರದ ಸಾಲುಗಳು

1
ಜರೂರತ್ತು
ಜವಾಬ್ದಾರಿ
ಜಮಾನ
ಜನ
ಜಾತ್ರೆ
ಜೈ ಹೋ

2
ಮಳೆಯ
ಮೊದಲ ಹನಿಗೆ
ದನಿಗೂಡಿಸಿ ಹಾಡಿದ
ಬೀಜದಲ್ಲಿ ಬದುಕು

3
ಮುತ್ತೆಲ್ಲಾ
ಮೌನವಾಗಿ
ಮೌನ ಬಸಿರಾಗಿ
ಮುಂಜಾನೆಯಾಗುವ ಹೊತ್ತು

4
ಛಾಯೆ ಬಿಟ್ಟು ಹೋದ ಚಿತ್ರ
ಬಿಸಿಲಲ್ಲೇ ಮನೆ ಮಾಡಿತು.

5
ತುಟಿಯಲ್ಲಿ ಉಳಿದ ಪ್ರಶ್ನೆಗಳು
ಉತ್ತರಗಳಿಗೆ ಚುಂಬಿಸುವ ಮನಸ್ಸಿಲ್ಲ

6
ಹೇಳಿ ಹೋಗದ ಕಾರಣ
ಒಡೆದ ಬಿಂಬವ ಸೂಸುವ ಕನ್ನಡಿ

7
ಅವಳ ತುಟಿಯಂಚಿನ ನಗೆಯಲ್ಲಿ
ಹುಟ್ಟಿದ ಯೌವನಕ್ಕೆ
ವಯಸ್ಸಿಲ್ಲ.

8
ಮುಟ್ಟಿದರೆ ಮುನಿಯುತ್ತಾಳೆ
ದೂರ ಸರಿದರೆ ತೆಕ್ಕೆಗೆಳೆಯುತ್ತಾಳೆ
ಹರೆಯಕ್ಕೆ ಉಸಿರಿದೆ
ಅನ್ನೋದೇ ಮರೆತು ಹೋಗಿದೆ

9
ಅವಳ ಕೈಯಲ್ಲಿ
ಉಳಿದು ಹೋದ
ರಂಗೋಲಿ ಹುಡಿಯಲ್ಲಿ
ನನ್ನ ಮದರಂಗಿ

10
ಕೊಡೆಯ ತುದಿಯಿಂದ
ಕವಲೊಡೆದ ನೀರ ಹನಿಗಳಲ್ಲಿ
ಸಾವಿರ ಬಿಸಿ ನಿಟ್ಟುಸಿರು

11
ಅವಳ ಹೆಜ್ಜೆಯ ಗುರುತಿನಡಿ
ಹಾರಿದ ಗಾಳಿಪಟಕ್ಕೆ
ನೆನಪಿನ ಹಂಗಿಲ್ಲ!


12
ನಿನ್ನ ತುಟಿಯ
ಜೇನ ಹೀರುವ ಹೊತ್ತಿಗೆ
ನಾನು
ಗುಲಾಬಿಯ ಪಕಳೆ

13
ನಿನ್ನ ಕಂಗಳಲ್ಲಿ
ಅರಳುತ್ತಿರುವ
ಹೂವಿಗೆ
ನನ್ನ
ಪರಿಮಳ

14
ಮುಖ ಮೂಕ!

15
ಪ್ರಶ್ನೆಗಳಿರುವುದೇ ಸುಮ್ಮನೆ!

16
ಒಪ್ಪಿಗೆ ಒಲವಲ್ಲ
ನಗು ನಲಿವಲ್ಲ

17
ಕರುಣೆ ಇರಲಿ!

18
ದನಿ ನಡುಗುತ್ತಾ
ಕಣ್ಣು ಜಲಪಾತವಾಗುವ ಹೊತ್ತಿಗೆ
ನೀನು ನೆನಪಿನ ಹಂಗು ತೊರೆದ
ಸಮುದ್ರ


19
ಬೆಟ್ಟದ ಮೇಲೆ
ನಿಂತ ಒಂಟಿ ಶವಕ್ಕೆ
ಹಾರಾಡುವ
ಉಸಿರು

20
ನೋವು
ಅಭ್ಯಾಸವಾದರೆ
ಜೇನ
ಹನಿ
ಕಹಿ

21
ಪಟಪಟಿಸುವ
ನಿನ್ನ
ಸೀರೆ ಸೆರಗೊಳಗೆ
ನನ್ನ
ಬೆವರು ಹಸಿರು

22
ಅವಳ
ಮುಖದ
ನೆರಿಗೆಗಳಲ್ಲಿ
ವಿರಮಿಸದ
ನಾನು

23
ಎಲ್ಲಾ
ಕಳೆದ ಮೇಲೆ
ಉಳಿದಿರುವುದರ
ಲೆಕ್ಕ
ಏತಕ್ಕೆ?

24
ಕಣ್ಣ
ಒಳಗೆ ಬಿದ್ದ
ಕಾಮನಬಿಲ್ಲು
ನೋವುಗಳೆಲ್ಲಾ
ನಕ್ಕ
ಕ್ಷಣ

25
ಮುಂಗುರುಳ
ತುದಿಯಲ್ಲಿ
ಅಂಟಿದ
ವಿಶಾದಕ್ಕೆ
ಗುರುತೇ ಇರದ
ಮುಖವಾಡ

26
ಕಾಲವಾಗಿರುವ
ಸತ್ಯಗಳ
ಗೋರಿಯ ಮೇಲೆ
ನಾಳೆಯ ಹಾಡು

27
ಮೊಳಕೆ
ಮರವಾಗುವ ಹೊತ್ತಿಗೆ
ಬಾಳ ಮುಸ್ಸಂಜೆಯಲ್ಲಿ
ಅವಳು.