ಸೋಮವಾರ, ಏಪ್ರಿಲ್ 26, 2010

ಬಾಬಾ ರಾಂಚೋಡದಾಸನ ದೇಹ, ಡೆಡ್ ಪೋಯೆಟ್ಸ್ ಸೊಸೈಟಿಯ ಜೀವ, ಲೆಕ್ಕವಿಲ್ಲದಷ್ಟು ರೂಪಾಂತರಚಿತ್ರಕತೆಯ ಬರವಣಿಗೆ ದೃಶ್ಯ ಲೆಕ್ಕಾಚಾರದ ಬರವಣಿಗೆಯೇ. ಅಲ್ಲಿ ಬರಹಗಾರನಿಗೆ ಪ್ರತೀ ಪಾತ್ರದ ಪೂರ್ವಾಪರಗಳು ಗೊತ್ತಿರಬೇಕು. ಆ ಪಾತ್ರದ ಬಿಡಿ ಬಿಡಿ ವಿವರಗಳು ಕೂಡಾ ಸ್ಪಷ್ಟವಿರಬೇಕು. ಆತನೋ/ಆಕೆಯೋ ಮೊದಲ ದಿನ ಶಾಲೆಗೆ ಹೋಗಿದ್ದಾಗ ಇದ್ದಿದ್ದ ದುಗುಡ, ಹಿಂಜರಿಕೆ, ಮೊದಲ ಬರ್ತ್ ಡೇ ಸಂಭ್ರಮ ಎಲ್ಲವೂ ನೆನಪಿರಬೇಕು.ಅದನ್ನಾತ ಚಿತ್ರಕತೆಯಲ್ಲಿ ಸೇರಿಸದೇ ಹೋಗಬಹುದು. ಆದರೂ ತನ್ನ ಪಾತ್ರಗಳ ಪ್ರತಿ ಹೆಜ್ಜೆಯೂ ಸ್ಪಷ್ಟವಿರಬೇಕು. ಹಾಗಿದ್ದಾಗ ಮಾತ್ರ ಪಾತ್ರ, ಸನ್ನಿವೇಶ ಹೆಚ್ಚು ಪರಿಣಾಮಕಾರಿಯಾಗಿ ಬರೆಯಲ್ಪಡುತ್ತದೆ.

ಚಿತ್ರಕತೆಯೊಂದನ್ನು ಬರೆಯುವ ಹೊತ್ತಿಗೆ ಬರಹಗಾರನನ್ನು ಪ್ರಭಾವಿಸುವ ಅಂಶಗಳು ಹಲವಾರು. ಆತ ನೋಡಿದ ವಿಶ್ವದ ಯಾವುದೋ ಭಾಷೆಯ ಚಲನಚಿತ್ರ, ಓದಿದ ಕಾದಂಬರಿಯ ಪಾತ್ರವೊಂದರ ಗುಣ, ಅವಗುಣ, ಸ್ನೇಹಿತನ ಮದುವೆಯಲ್ಲಿ ಕಂಡ ದಬಾಯಿಸುವ ಹುಡುಗಿ ಕೂಡಾ ಪಾತ್ರವೊಂದನ್ನು, ಸನ್ನಿವೇಶವನ್ನು ಸೃಷ್ಟಿಸುವ ಸಂದರ್ಭದಲ್ಲಿ ಸಹಾಯಕ್ಕೆ ಬರಬಹುದು. ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಎಲ್ಲಾ ಅಂಶಗಳು ಚಿತ್ರಕತೆಯೊಳಗೆ ಸೇರಿಕೊಳ್ಳುತ್ತಾ ಹೋಗುತ್ತದೆ. ಅದೇ ಪಾತ್ರವನ್ನು, ಸನ್ನಿವೇಶವನ್ನು ಬೆಳೆಸಬಹುದು. ಆ ಮೂಲಕ ಪಾತ್ರ, ಸನ್ನಿವೇಶ ಮತ್ತಷ್ಟು ಗಟ್ಟಿಯಾಗುವ ಸಂದರ್ಭಗಳು ಜಾಸ್ತಿ. ಇಂತಹ ಗಮನಿಸುವಿಕೆ ಹಾಗೂ ಅಳವಡಿಸುವಿಕೆ ಚಿತ್ರಕತೆಯೊಂದನ್ನು ಬರೆಯುವ ಸಂದರ್ಭದಲ್ಲಿ ಬರಹಗಾರನಿಗೆ ಹೆಚ್ಚು ಸಹಕಾರಿ. ಅಂತಹದೊಂದು ಸಾಧ್ಯತೆಯನ್ನು ಚಿತ್ರಕತೆಯಲ್ಲಿ ಮಿಳಿತಗೊಳಿಸಲು ಬರಹಗಾರ ಪ್ರತೀ ಬಾರಿ ಪ್ರಯತ್ನಿಸುತ್ತಲೇ ಇರುತ್ತಾನೆ. ಈ ತರಹದ ರೂಪಾಂತರ ನಾವು ನೋಡುವ ಹೆಚ್ಚಿನ ಸಿನಿಮಾಗಳ ಚಿತ್ರಕತೆಯಲ್ಲಿ ಕಂಡುಬರುತ್ತದೆ. ಅದೇ ಕಾರಣಕ್ಕೆ ಯೋಗರಾಜ ಭಟ್ಟರ ಮನಸಾರೆಯಲ್ಲಿ "ಶ್ವಶಾಂಕ್ ರಿಡಂಪ್ಶನ್"ನ ರೆಡ್ ಮತ್ತು ಬ್ರೂಕ್ ಛಾಯೆ ಕಾಣುವುದು. ಆದ್ದರಿಂದಲೇ ಗಾಳಿಪಟದಲ್ಲಿ ಡೈಸಿ ಬೋಪಣ್ಣನ ಪಾತ್ರವನ್ನು ನೋಡಿದಾಗ ಶೋಲೆಯ ಜಯಾ ಬಾಧುರಿ ಪದೇ ಪದೇ ನೆನಪಾಗುವುದು. ಮಜಾ ಎಂದರೆ ಸಿನಿಮಾ ನೋಡುತ್ತಿರುವಾಗ ಕೆಲವೊಮ್ಮೆ ಇದು ನಮ್ಮ ಗಮನಕ್ಕೇ ಬರುವುದಿಲ್ಲ. ಇಲ್ಲೇ ಚಿತ್ರಕತೆಯನ್ನು ಬರೆದ ಬರಹಗಾರನ ಯಶಸ್ಸಿರುವುದು. ಯಾಕೆಂದರೆ ಆತ ಅಂತಹದೊಂದು ರೂಪಾಂತರವನ್ನು ಅಥವಾ ಹೊಂದಾಣಿಕೆಯನ್ನು ನಾಜೂಕಾಗಿ ಭಿನ್ನ ಸನ್ನಿವೇಶ, ವಾತಾವರಣದಲ್ಲಿ ಕೂರಿಸಿರುತ್ತಾನೆ. 


ಇತ್ತೀಚೆಗೆ ಬಂದ "ಥ್ರೀ ಈಡಿಯೇಟ್ಸ್" ಸಿನಿಮಾವನ್ನೇ ಬೇಕಿದ್ದರೆ ತೆಗೆದುಕೊಳ್ಳಿ. ಬಾಬಾ ರಾಂಚೋಡ್ ದಾಸ್  ಮೋಡಿಗೆ ಇಡೀ ದೇಶವೇ ಜಹಾಪನಾ ತುಸ್ಸೀ ಗ್ರೇಟ್ ಹೋ ಎಂದು ಸಲಾಮು ಹೊಡೆದದ್ದೇ ಹೊಡೆದದ್ದು. ಎಲ್ಲರಿಗೂ ಗೊತ್ತಿರುವಂತೆ ಥ್ರೀ ಈಡಿಯೆಟ್ಸ್ ಚೇತನ್ ಭಗತ್ ಬರೆದ "ಫೈವ್ ಪಾಯಿಂಟ್ ಸಮ್ವನ್" ಇಂಗ್ಲೀಷ್ ಕಾದಂಬರಿಯನ್ನು ಬಳಸಿಕೊಂಡಿದೆ. ಆದರೆ ನಿರ್ದೇಶಕ  ರಾಜ್ ಕುಮಾರ್ ಹಿರಾನಿ ಚಲನಚಿತ್ರದ ದೃಶ್ಯ ಅನುಕೂಲಕ್ಕೆ ತಕ್ಕ ಹಾಗೆ ಮೂಲ ಕಾದಂಬರಿಯ ಕಥಾ ಹಂದರದಲ್ಲಿ ಅನೇಕ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ. ಹೊಸ ಪಾತ್ರಗಳು ಬಂದಿವೆ. ಸನ್ನಿವೇಶಗಳು ಬದಲಾಗಿವೆ. ಮತ್ತೊಂದಷ್ಟು ಸೇರಿಕೊಂಡಿವೆ. ಆದರೂ ಬಾಬಾ ರಾಂಚೋಡ್ ದಾಸನನ್ನು  ನೋಡುತ್ತಿದ್ದ ಹಾಗೆ, "ಸಕ್ಸಸ್ ನ  ಹಿಂದೆ ಓಡಬೇಡಿ. ಎಕ್ಸಲೆನ್ಸ್ ಮುಖ್ಯ" ಎನ್ನುವಾಗಲೆಲ್ಲಾ ಹಾಗೂ ಅದನ್ನು ಸಾಧಿಸಲು ಆತ ಹೊರಡುವ ಸಂದರ್ಭಗಳನ್ನು ನೋಡುತ್ತಿದ್ದಂತೆ 1989ರಲ್ಲಿ ತೆರೆಕಂಡ ಪೀಟರ್ ವೇರ್ ನಿರ್ದೇಶನ ದ "ಡೆಡ್ ಪೋಯೆಟ್ಸ್ ಸೊಸೈಟಿ"ಯ ಇಂಗ್ಲೀಷ್ ಸಾಹಿತ್ಯದ ಮೇಷ್ಟ್ರು ಜಾನ್ ಕೀಟಿಂಗ್  ನೆನಪಾಗುತ್ತಾನೆ.  ಆತನೂ ಹಾಗೆಯೇ. ಕವಿತೆ ಬದುಕನ್ನು ಫ್ರಫುಲ್ಲವಾಗಿಡುತ್ತದೆ, ಎಲ್ಲಾ ನೋವುಗಳಿಗೆ ಬೊಗಸೆ ಹಿಡಿಯುತ್ತದೆ ಎಂದು ನಂಬಿಕೊಂಡವ. ಕವಿತೆಯನ್ನು ಸರಳವಾಗಿ ಅರ್ಥೈಸಿಕೊಳ್ಳುವಂತೆ ಮಾಡಲು ಪ್ರಯತ್ನ ಪಡುವವ. ಅದೇ ಕಾರಣಕ್ಕೆ ಆತ ಫುಟ್ಬಾಲಿನ ಜೊತೆ, ಶಾಲೆಯ ಹೊರಾಂಗಣದಲ್ಲಿ ಸ್ವಚ್ಛಂದವಾಗಿ ಹುಡುಗರನ್ನು ಬಿಟ್ಟು ಕವಿತೆಯನ್ನು ಆಸ್ವಾದಿಸುವುದನ್ನು ಕಲಿಸುತ್ತಾನೆ. "ಡೆಡ್ ಪೋಯೆಟ್ಸ್ ಸೊಸೈಟಿ"ಯಲ್ಲಿ ಬರುವ ಈ ಇಂಗ್ಲೀಷ್ ಮೇಷ್ಟ್ರ ರೂಪಾಂತರವೇ ನಮ್ಮ ರಾಂಚೋಡ್ದಾಸ್(ಆಮೀರ್ ಖಾನ್). ರಾಂಚೋ ಪಾತ್ರದ ನಡೆ-ನಡವಳಿಕೆ "ಫೈವ್ ಪಾಯಿಂಟ್ ಸಮ್ವನ್" ಕಾದಂಬರಿಯಲ್ಲಿರುವ ರೆಯಾನ್ನಂತೆಯೇ ಇದ್ದರೂ ಸಹ, ಆತ ಬದುಕನ್ನು, ಎದುರಾಗುವ ಪ್ರತೀ ಕೆಲಸವನ್ನು ಆಸ್ವಾದಿಸುವುದನ್ನು ಕಲಿಸಲು ಬಳಸಿಕೊಳ್ಳುವ ಫಿಲಾಸಫಿಯ ಹಿಂದಿರುವುದು ಇಂಗ್ಲೀಷ್ ಮೇಷ್ಟ್ರು ಕೀಟಿಂಗೇ. ಮೂಲ ಕಾದಂಬರಿಯಲ್ಲಿ ಬರುವ ರೆಯಾನ್(ಸಿನಿಮಾದಲ್ಲಿ ರಾಂಚೋ) ಪಾತ್ರಕ್ಕೊಂದು ಸರಿಯಾದ ಪಾತ್ರ ಚೌಕಟ್ಟೇ ಇಲ್ಲ. ಜನಪ್ರೀಯ ಇಂಗ್ಲೀಷ್ ಸಾಹಿತ್ಯದ ಮೂಲಕ ತಲುಪಬೇಕಿರುವ ಮೇಲ್ಮಧ್ಯಮ ವರ್ಗದ ಇಷ್ಟಾನುಸಾರದ ಟೈಂಪಾಸ್ ರೀಡಿಂಗಿಗೆ ಬೇಕಾದಷ್ಟೇ ಉದ್ದೇಶಗಳನ್ನಿಟ್ಟುಕೊಂಡು ಚೇತನ್ ಭಗತ್ ಇಡೀ ಕಾದಂಬರಿಯನ್ನು ಬರೆದಂತೆ ಅನ್ನಿಸುತ್ತದೆ. ಹಾಗಾಗಿ ರಾಂಚೋಗೆ ಒಂದು ಬಲವಾದ "ಮುಖ್ಯ ಪಾತ್ರಕ್ಕಿರುವ ಗುರಿ"ಯನ್ನು(ಚಿತ್ರಕತೆಯ ಬರವಣಿಗೆಯಲ್ಲಿ ಬಹುಮುಖ್ಯ ಅಂಶ) ನೀಡುವಲ್ಲಿ ಕೀಟಿಂಗ್ ಪಾತ್ರ ರಾಜ್ ಕುಮಾರ್ ಹಿರಾನಿ ಮತ್ತವರ ತಂಡಕ್ಕೆ ಸಹಾಯಕ್ಕೆ ಬಂದಿದೆ. ಗಮನಿಸಬೇಕಾದ ಇನ್ನೊಂದು ವಿಷಯವಿದೆ. ರಾಂಚೋನಷ್ಟೇ ಯಂತ್ರಗಳ ಮೇಲೆ ಹುಚ್ಚು ಪ್ರೀತಿಯನ್ನಿಟ್ಟುಕೊಂಡಿರುವ ಜೋಯ್ ಲೋಬೋ, ಡೆಡ್ ಪೋಯೆಟ್ ಸೊಸೈಟಿಯ ನೀಲ್ ಪೆರ್ರಿಯ ಪಾತ್ರದಂತೆ ಅಸಹಾಯನಾಗಿ, ಅವಸರಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಜಾಯ್ ಲೋಬೋ ಮತ್ತು ನೀಲ್ ಪೆರ್ರಿಯ ನಡೆ-ನಡವಳಿಕೆ ಒಂದೇ ರೀತಿಯಾದದ್ದು.


ಇಂತಹ ಅಳವಡಿಕೆಗಳನ್ನು ರಿಮೇಕು ಅಥವಾ ಯಥಾವತ್ತು ನಕಲು ಎಂದು  ನೇರವಾಗಿ ಆಪಾದಿಸಲಾಗುವುದಿಲ್ಲ. ಯಾಕೆಂದರೆ ಮೇಲೆ ಉದಾಹರಿಸಿದ ಎಲ್ಲಾ ಸಿನಿಮಾ ಅಳವಡಿಕೆಗಳು ಒಟ್ಟಾರೆಯಾಗಿ ಚಿತ್ರಕತಾ ಬರಹಗಾರನನ್ನು ಬಹಳಷ್ಟು ಪ್ರಭಾವಿಸಿದ ಸಿನಿಮಾ, ಕಾದಂಬರಿಯ ಯಾವುದೋ ಒಂದು ಪಾತ್ರ ಇವೆಲ್ಲವನ್ನೂ ಮಿಳಿತಗೊಳಿಸಿಕೊಂಡಿವೆ. ಒಟ್ಟು ಸಿನಿಮಾದ ಹೂರಣವನ್ನೋ, ಪಾತ್ರದ ಅಪರಿಮಿತ ಆತ್ಮವಿಶ್ವಾಸವನ್ನೋ ಬಳಸಿಕೊಂಡರೆ ತಪ್ಪಲ್ಲವಲ್ಲ. ಪಾಂಡವರ ಕಥೆಯನ್ನೇ ಇಟ್ಟುಕೊಂಡು ಕನ್ನಡದಲ್ಲಿ "ಹಬ್ಬ"  ಎನ್ನುವ ಸಿನಿಮಾ ಬಂದದ್ದು ನೆನಪಿದೆ ತಾನೇ. ಅದೇ ರೀತಿ ಪಾಂಚಾಲಿಯ ದೃಷ್ಟಾಂತವನ್ನು ಅಳವಡಿಸಿಕೊಂಡು ದಿನೇಶ್ ಬಾಬು ಕನ್ನಡದಲ್ಲಿ "ಪಾಂಚಾಲಿ" ಎನ್ನುವ ಸಿನಿಮಾ ಮಾಡಿರುವುದನ್ನೂ ಇದೇ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳಬಹುದು. ಜೂನ್ನಲ್ಲಿ ಬಿಡುಗಡೆಗೆ ಕಾಯುತ್ತಿರುವ ಮಣಿರತ್ನಂರ "ರಾವಣ"ದಲ್ಲೂ ರಾಮಾಯಣದ್ದೇ ಅಳವಡಿಕೆ ಇದೆ...ಆದರೆ ಇಲ್ಲೆಲ್ಲಾ ಗಮನಿಸಬೇಕಾದ ಮತ್ತೊಂದು ಅಂಶವಿದೆ...ಮೂಲ ಕತೆಯನ್ನು ಭಿನ್ನ ಕಥಾ ಆಯಾಮದೊಂದಿಗೆ ಬೆಳೆಸುತ್ತಾ ಹೋದ ಹಾಗೆ ಹೊಸದೊಂದು ಚಿತ್ರಕತೆ ಹುಟ್ಟುತ್ತಾ ಹೋಗುತ್ತದೆ... ಮಜಾ ಇರೋದು ಇಲ್ಲೇ..ಹೀಗೆ ಪುರಾಣದ್ದೋ, ಕಾದಂಬರಿಯದ್ದೋ ಒಂದು ಪಾತ್ರವನ್ನು ಆಯಾ ಲೇಖಕ ನಿರ್ಮಿಸಿದ ವಾತಾವರಣವನ್ನು ಮೀರಿ ಭಿನ್ನ ಸನ್ನಿವೇಶ, ಸಂದರ್ಭದಲ್ಲಿ ಯೋಚಿಸುತ್ತಾ ಹೊರಟರೆ ಸಿನಿಮಾಕ್ಕಾಗುವ ಚಿತ್ರಕತೆ ಬರವಣಿಗೆಗೆ ಕೂರಬಹುದು. ಚೀನೀ ಸಿನಿಮಾ "ಸಂಸಾರ"ವನ್ನೇ ಬೇಕಿದ್ದರೆ ಗಮನಿಸಿ... ಬುದ್ಧನ ಸಂಸಾರ ತ್ಯಜಿಸುವ ನಿರ್ಧಾರವನ್ನೇ ಪ್ರಶ್ನಿಸುವ, ಆ ಮೂಲಕ ಬುದ್ಧ ಹೆಣ್ಣೊಬ್ಬಳನ್ನು ಅತಂತ್ರಕ್ಕೆ ದೂಡುವುದನ್ನು ಒಂದು ವೇಳೆ ಯಶೋಧರೆ ದಿಟ್ಟತನದಿಂದ ಪ್ರಶ್ನಿಸಿದರೆ ಹೇಗಿರುತ್ತದೆ ಎನ್ನುವ ನೆಲೆಗಟ್ಟಿನಲ್ಲಿ ಬೌದ್ಧ ಭಿಕ್ಷುವಿನ ಕತೆಯ ಹಿನ್ನೆಲೆಯಲ್ಲಿ ಚಿತ್ರಕತೆಗಾರ ಹೆಣೆಯುತ್ತಾ ಹೋದಾಗ ಸೃಷ್ಟಿಯಾಗುವ ಸಮಸ್ಯೆ ಹಾಗೂ ಅದನ್ನು ಪರಿಹರಿಸಿಕೊಳ್ಳಲು ಪಾತ್ರಗಳು ಹುಡುಕುವ ದಾರಿಗಳೇ ಚಿತ್ರಕತೆಯ ಬರವಣಿಗೆಯ "ಸೆಟಪ್-ಕನ್ಫ್ರಂಟೇಶನ್-ರಿಜಲ್ಯೂಶನ್" ಎನ್ನುವ ಚಿತ್ರಕತೆಯ ಮೂಲ ಸೂತ್ರವಾಗುತ್ತದೆ(ಪ್ರತಿ ಸಿನಿಮಾದ ಚಿತ್ರಕತೆಯು ಕ್ರಮವಾಗಿ ಈ ಮೂರು ಅಂಶಗಳನ್ನು ಹೊಂದಿರುತ್ತದೆ).


ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಒಪ್ಪುತ್ತೇವೆ ತಾನೇ. ಬಿ.ಆರ್ ಅಂಬೇಡ್ಕರ್ ರಾಮನ ಬಗೆಗೊಂದು ಲೇಖನ ಬರೆದಿದ್ದಾರೆ(ಹಂಪಿ ವಿಶ್ವವಿದ್ಯಾಲಯ ಪ್ರಕಟಿಸಿರುವ "ದೇವರನ್ನು ಕುರಿತು ಒಂದು ಹಿನ್ನೋಟ" ಪುಸ್ತಕದಲ್ಲಿದೆ). ಅದೇ ರಾಮ ಸೀತೆಯನ್ನು ಜೀವಿತಾವಧಿಯಲ್ಲಿ ನಡೆಸಿಕೊಂಡ ರೀತಿ ಸರಿಯೇ ಎನ್ನುವುದು ಆ ಬರವಣಿಗೆಯ ಮೂಲ ತಿರುಳು. ಇದನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಮಾನವೀಯ ನೆಲೆಯಲ್ಲಿ ರಾಮನ ನೆಲೆಗಟ್ಟು ಎಷ್ಟರಮಟ್ಟಿಗೆ ಅಭದ್ರವಾದದ್ದು, ಸ್ವಾರ್ಥದಿಂದ ಕೂಡಿದ್ದು ಎನ್ನುವುದನ್ನು ಅಂಬೇಡ್ಕರ್ ಬರೆಯುತ್ತಾ ಹೋಗುತ್ತಾರೆ. ರಾಮನ ಬಗ್ಗೆ ಇರುವ ಈ ಜಿಜ್ಙಾಸೆಯೇ ಸಿನಿಮಾ ಚಿತ್ರಕಥೆಯ ಬರವಣಿಗೆಗೆ ಸಹಾಯಕ. ಇದೇ ವಿಷಯವನ್ನು ಇವತ್ತಿನ ಸಂದರ್ಭದ ಪಾತ್ರಗಳಿಗೆ ಅಳವಡಿಸಿದರೆ ಒಂದು ಸಿನಿಮಾದ ಚಿತ್ರಕತೆ ಖಂಡಿತಾ ಸಾಧ್ಯವಾಗುತ್ತದೆ. ಇದೇ ಗೊಂದಲಗಳಿಗೆ, ವೈರುಧ್ಯಗಳಿಗೆ ಇನ್ನಷ್ಟು ಸನ್ನಿವೇಶಗಳನ್ನು ಸೇರಿಸುತ್ತಾ ಹೋದಾಗ ಚಿತ್ರಕತೆಗೊಂದು ಸೂಕ್ತ ಚೌಕಟ್ಟು ನಿರ್ಮಾಣವಾಗುತ್ತದೆ. ತರ್ಕ, ಸಮಸ್ಯೆ, ಪರಿಹಾರ ಇವೆಲ್ಲಾ ಚಿತ್ರಕತೆಯ ಬರವಣಿಗೆಯ ಅಗತ್ಯಗಳು.ಮುಗಿಸುವ ಮುನ್ನ:

"ಸಕ್ಸೆಸ್ ಕೇ ಪೀಛೆ ಮತ್ ಭಾಗೋ, ಲೈಫ್ ಕಾ ಮಜಾ ಲೂಟ್ ಲೋ" ಎಂದು ರಾಂಚೋ ಹೇಳುವಾಗಲೆಲ್ಲಾ ಡೆಡ್ ಪೋಯೆಟ್ ಸೊಸೈಟಿಯ "I went to the woods because i wanted to live deliberately, i wanted to live deep and suck out all the morrow of life, to put to rout all that was not life and not when i had come to die discover that i had not lived " ಎನ್ನುವ ಸಾಲುಗಳೇ ಮತ್ತೆ ಮತ್ತೆ ನೆನಪಾಗುತ್ತವೆ. ಶಾಲೆಯಿಂದ ಹೊರಹಾಕಲ್ಪಟ್ಟ ಕೀಟಿಂಗ್ ತರಗತಿಯಿಂದ ಹೊರ ನಡೆಯುವಾಗ ಶಾಲಾ ಮುಖ್ಯಸ್ಥನ ಮಾತನ್ನು ಧಿಕ್ಕರಿಸಿ "ಕ್ಯಾಪ್ಟನ್ ಓ ಮೈ ಕ್ಯಾಪ್ಟನ್" ಎನ್ನುತ್ತಾ ವಿದ್ಯಾರ್ಥಿಗಳೆಲ್ಲಾ  ಒಬ್ಬೊಬ್ಬರೇ ಡೆಸ್ಕಿನ ಮೇಲೇರುವ ಸನ್ನಿವೇಶದ ಅಳವಡಿಕೆಯೇ ಥ್ರೀ ಈಡಿಯೆಟ್ಸ್ ನಲ್ಲಿ  ಕೆಲಸ ಸಿಕ್ಕ ಖುಷಿಯಲ್ಲಿ ಕಾರಿಡಾರಿನಲ್ಲೇ ಫರ್ಹಾನ್, ರಾಜು ಪ್ಯಾಂಟು ಬಿಚ್ಚಿ "ಜಹಾಪನಾ ತುಸ್ಸೀ ಗ್ರೇಟ್ ಹೋ" ಎನ್ನುತ್ತಾ ರಾಂಚೋಗೆ ಸಲಾಮು ಹೊಡೆಯುವ ಅಪೂರ್ವ ಸನ್ನಿವೇಶವಾಗಿದೆ. ಇನ್ನೊಮ್ಮೆ ಡೆಡ್ ಪೋಯೆಟ್ಸ್ ಸೊಸೈಟಿಯನ್ನೋ, ಥ್ರೀ ಈಡಿಯೆಟ್ಸ್ ಸಿನಿಮಾವನ್ನೋ ನೋಡುವಾಗ ಇದನ್ನೆಲ್ಲಾ ಹಾಗೇ ಸುಮ್ಮನೆ ಗಮನಿಸಿ.

("ಸಾಂಗತ್ಯ"ದ ಪ್ರಥಮ ಮುದ್ರಿತ  ಸಂಚಿಕೆಯಲ್ಲಿ ಪ್ರಕಟಗೊಂಡ ಬರಹ)

6 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

boss, ಇಷ್ಟ್ ಬೇಗ ಯಾಕ್ರೀ ಹಾಕಿದ್ರೀ ಬ್ಲಾಗಲ್ಲಿ?

Subrahmanya ಹೇಳಿದರು...

ಇಲ್ಲೂ ಹಾಕಿದ್ದಕ್ಕೆ ಥ್ಯಾಂಕ್ಯು.

ಸಂದೀಪ್ ಕಾಮತ್ ಹೇಳಿದರು...

"Characters can neither be created Nor be destroyed it can only be transformed from one language film to another"

Ravi ಹೇಳಿದರು...

Hey Karthik....good article keep it up....

ಚಕೋರ ಹೇಳಿದರು...

ಬರಹ ಚೆನ್ನಾಗಿದೆ. ಆದರೆ ಇಲ್ಲಿನ ಕಥೆಗಳ ಹೋಲಿಕೆ ಕುರಿತು ಬರೆದದ್ದು ಸರಿ ಬರಲಿಲ್ಲ. ಹಾಗೆ ನೋಡುತ್ತ ಹೋದರೆ ಯಾವುದೂ ಒರಿಜಿನಲ್ ಅಲ್ಲ. ಡೆಡ್ ಪೋಯೆಟ್ಸ್ ಸೊಸೈಟಿ ಕೂಡ ಯಾವುದೋ ಹಳೇ ಚಿತ್ರದ ಶೇಡ್ ಕಾಣಿಸಬಹುದು.

Unknown ಹೇಳಿದರು...

dear karthik,
good artical hage munduvarisi all the best

bojamma