ಶುಕ್ರವಾರ, ಮಾರ್ಚ್ 27, 2009

ಅಂಡರ್ ಪಾಸ್ ಬಯಲಾಟ

ವ್ಯಾನು ಬಂತು.
 
ಕೆಳಗಿಳಿದ ಪೋಲೀಸರು ಗಾಂಧೀನಗರದಿಂದ ಮೆಜೆಸ್ಟಿಕ್ಕಿಗೆ ಹೋಗುವ ಅಂಡರ್ ಪಾಸ್ ದಾರಿಯತ್ತ ನಡೆಯುತ್ತಿದ್ದಾರೆ. ಆ ದಾರಿಯಲ್ಲಿ ನೀಲಿ, ಕಪ್ಪು ಟರ್ಪಲ್ಲಿನ ಮೇಲೆ ಆಟಿಕೆ, ಗುಳಿಗೆ, ಸೊಳ್ಳೆ ಕೊಲ್ಲುವ ಎಲೆಕ್ಟ್ರಿಕ್ಕು ಬ್ಯಾಟು, ಇಪ್ಪತ್ತೈದು ರೂಪಾಯಿಗೆ ಶರ್ಟು, ಕಲರ್ ಕಲರ್ ಪ್ಲಾಸ್ಟಿಕ್ ಹೂವಿನ ಕುಂಡ ಮಾರುವವನು.......ಅನಾಮಿಕ ನಾಗರೀಕರ ದೊಡ್ಡ ಪಡೆಯಿದೆ.

ಪೋಲೀಸರು ಬರುತ್ತಿರುವುದನ್ನು ಕಂಡ ಕೂಡಲೇ ಅಂಡರ್ ಪಾಸಲ್ಲೇ ಇರುವ ಸಣ್ಣ ಕೋಣೆಯ ಬಾಗಿಲು ತೆಗೆಯಲು ಒದ್ದಾಡುತ್ತಿದ್ದಾನೆ ಮೀಸೆ ಚಿಗುರಿದ ಹುಡುಗ.  ಮತ್ತೊಬ್ಬ "ಬೇಗ ತೆಗಿ ಮಚ್ಚಾ" ಎಂದು ಕೂಗುತ್ತಿದ್ದಾನೆ. ಬಾಗಿಲು ತೆರೆಯುತ್ತದೆ. ಅವಸರದಿಂದ ಟರ್ಪಲ್ಲಿನ ಮೇಲೆ ಹಾಕಿರುವ ವಸ್ತುಗಳನ್ನೆಲ್ಲ ಒಂದೇ ಬಾರಿ ಎಳೆಯುತ್ತಿದ್ದಾರೆ ಅವರಿಬ್ಬರೂ.  ಹಾಗೆ ಎಳೆಯುವಾಗ ಒಂದೇ ಒಂದು ಆಟಿಕೆ, ಕಲರ್ ಕಲರ್ ಶರ್ಟು ಹೊರಗೆ ಬೀಳದಿರುವುದರ ಮೂಲಕ ಅವರ ಚಾಕಚಕ್ಯತೆ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೋಗುವವರಿಗೆ, ಅಲ್ಲಿಂದ ಹಿಂದಿರುಗಿ ಗಾಂಧೀನಗರ, ನ್ಯಾಶನಲ್ ಮಾರ್ಕೆಟಿನ ಕಡೆಗೆ ಹೊಗುವವರಿಗೆ ಕಾಣಿಸುತ್ತದೆ. ಆ ನಿಯಮಿತ ಸಮಯದಲ್ಲಿ ಮತ್ತೆ ಕೆಲವರಿಗೆ ತಮ್ಮ ಟರ್ಪಲನ್ನು ಎತ್ತಲು ಸಾಧ್ಯವಾಗುತ್ತಿಲ್ಲ ಎಂಬ ಕಳವಳ.

ವ್ಯಾನಿನಿಂದ ಇಳಿದ ಸಿಬ್ಬಂದಿಗೆ ಅಲ್ಲಿ ಅರೆ-ಬರೆ ಹರಡಿಕೊಂಡ ನಾಲ್ಕಾರು ಮಂದಿ ಗಂಟು ಮೂಟೆ ಕಟ್ಟುತ್ತಿರುವುದು ಕಣ್ಣಿಗೆ ಬಿದ್ದಿದೆ. ಅವರಿಗೆಲ್ಲ ವಾರ್ನ್ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ತಮ್ಮ ವಸ್ತುಗಳೊಂದಿಗೆ ಓಡಿ ಕೆಲವು ನಿಮಿಷಗಳಾಗಿದೆ. ಆಗಲೇ ಇಡೀ ಅಂಡರ್ ಪಾಸ್ ಟರ್ಪಲ್ಲಿನ ಮೇಲೆ ಮಾರುವ ಅಂಗಡಿಗಳಿಲ್ಲದೆ ಬಿಕೋ ಎನ್ನುತ್ತಿದೆ. ಕಪಾಲಿ, ತ್ರಿಭುವನ್ ಸಿನಿಮಾ ಥಿಯೇಟರ್ಗಳು ಅದೇ ಸಮಯಕ್ಕೆ ಮ್ಯಾಟನಿ ಶೋ ಬಿಟ್ಟಿರುವುದರಿಂದ ಅಂಡರ್ಪಾಸಲ್ಲಿ ವ್ಯಾಪಾರ ಮಾಡುತ್ತಿದ್ದ ಜಾಗದಲ್ಲಿ ಜನ ತುಂಬುತ್ತಿದ್ದಾರೆ. ಟರ್ಪಲ್ಲಿನ ಅಂಗಡಿ ಹರಡಿಕೊಂಡ ಜಾಗದಲ್ಲಿ ಕಿಲೋ ಮೀಟರ್ ವೇಗದ ಅವಸರವಿರುವವರಂತೆ ಹೆಜ್ಜೆ ಹಾಕುವ ಜನರ ಕಾಲು, ಚಪ್ಪಲಿಯ ದೊರಗು ಶಬ್ದ ತುಂಬುತ್ತಿದೆ.
ಪೋಲೀಸರು ಮತ್ತೆ ವ್ಯಾನಿನ ಕಡೆ ನಡೆಯುತ್ತಿದ್ದಾರೆ.

ಮೆಲ್ಲಗೆ ಅಂಡರ್ ಪಾಸಿನ ರೂಮಿನ ಅರೆ ಮುಚ್ಚಿದ ಬಾಗಿಲು ತೆರೆದುಕೊಳ್ಳುತ್ತದೆ. 
ಟರ್ಪಲ್ಲಿನ ಅಂಗಡಿ ಮಂದಿ ಮತ್ತೆ ಯಥಾ ಸ್ಥಳದತ್ತ ಹಿಂದಿರುಗುತ್ತಿದ್ದಾರೆ. ಅಂಡರ್ ಪಾಸ್ ಒಳಹೋಗುವ ಮೆಟ್ಟಿಲ ಹತ್ತಿರ ಟರ್ಪಲಿನ ಮೇಲೆ ಐದು- ಹತ್ತು ರುಪಾಯಿಗೆ ಬೆರಕೆ ವಸ್ತುಗಳನ್ನು ಮಾರುವ ಒಬ್ಬನನ್ನು ಪೋಲೀಸ್ ಪೇದೆ ಹಿಡಿದಿದ್ದಾನೆ. ಅವನ ಪಕ್ಕದವನತ್ತ ಗುರ್ರ್ ಎನ್ನುತ್ತಿದ್ದಾನೆ. ನಾಲ್ಕೈದು ಅಂಗಡಿ ಹಾಕುವಷ್ಟು ದೂರದಲ್ಲಿ ವ್ಯಕ್ತಿಯೊಬ್ಬ ಪ್ರತೀ ಟರ್ಪಲು ಹಾಸಿದ ಅಂಗಡಿಯವನಿಂದ ಹತ್ಹತ್ತು ರುಪಾಯಿ ವಸೂಲು ಮಾಡುತ್ತಿದ್ದಾನೆ. ಎಲ್ಲರಿಂದ ವಂತಿಗೆ ಸಂಗ್ರಹಿಸಿ ಅವನು ಪೋಲೀಸ್ ಪೇದೆಯತ್ತ ನಡೆಯುತ್ತಿದ್ದಾನೆ. ನಿತ್ಯ ನಡೆದುಕೊಂಡು ಹೋಗುವವರಿಗೆ ಅದು ಹಳಸಲು ಇಮೇಜು. ಅದಾಗ ತಾನೇ ಬೆಂಗಳೂರಿಗೆ ಬಂದ ಹಳ್ಳಿ ಹುಡುಗನಿಗೆ ಇದನ್ನೆಲ್ಲಾ ತೋರಿಸುತ್ತಾನೆ ಗೆಳೆಯ. ತನ್ನೂರಿನ ಬಯಲಾಟದ ಸಂದರ್ಭದಲ್ಲಿ ಕಂಡ ಇದಕ್ಕಿಂತ ಹೊರತಾದ ಬಣ್ಣ ಬಣ್ಣದ ಇಮೇಜು ನೆನಪಿಗೆ ಬರುತ್ತದೆ.

ತನ್ನ ಜೊತೆಗಿರುವ ಗೆಳೆಯ ಇದನ್ನೆಲ್ಲಾ ಸಿನಿಮಾದ ಸನ್ನಿವೇಶ ಎಂದು ವಿವರಿಸುತ್ತಾ ಮೆಜೆಸ್ಟಿಕ್ ತಲುಪಲು ಅಂಡರ್ ಪಾಸಿನ ಮೆಟ್ಟಿಲು ಹತ್ತುತ್ತಾನೆ. ಹತ್ತುವಾಗ ಮತ್ತೆ ತುಂಬಿರುವ ಅಂಡರ್ ಪಾಸಿನ ಜಗಲಿ, ಅದರಲ್ಲಿ ಅದಮ್ಯ ಗುರಿ ಇರುವವರಂತೆ ವೇಗವಾಗಿ ನಡೆಯುವವರ ಜೊತೆ ಚೌಕಾಸಿ ವ್ಯಾಪಾರ ಮಾಡುವ ಪರ್ಟಲ್ಲಿನ ಅಂಗಡಿಯ ಅನಾಮಿಕ ನಾಗರೀಕರನ್ನು ಕಂಡಾಗ ತನ್ನ ಬದುಕಿನ ಮೇಲೆ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತದೆ.

ಬೆಂಗಳೂರಿನಂತಹ ನಗರದೊಳಗೆ ಬದುಕಬೇಕು ಅಂತ ಅನ್ನಿಸುತ್ತದೆ!!!

 

ಭಾನುವಾರ, ಮಾರ್ಚ್ 22, 2009

"ಸಾವಿನ ಹೊಸ್ತಿಲಲ್ಲಿ ನಿಂತು ನಕ್ಕವರ ಕತೆ"



ಚಿತ್ರ: ಲೈಫ್ ಈಸ್ ಬ್ಯೂಟಿಫುಲ್
ಭಾಷೆ: ಇಟಾಲಿಯನ್
ನಿರ್ದೇಶಕರಾಬರ್ಟೋ ಬೆನಿನಿ
ಅವಧಿ: 116 ನಿಮಿಷ

"ಲೈಫ್ ಈಸ್ ಬ್ಯೂಟಿಫುಲ್" 1998ರಲ್ಲಿ ಬಿಡುಗಡೆಯಾದ ಇಟಾಲಿಯನ್ ಸಿನಿಮಾ. ಕಲ್ಪನೆಯೊಳಗೆ ನಿರ್ಮಿಸು ಪ್ರೀತಿಯ ಜಗತ್ತು ಈ ಸಿನಿಮಾದ ಜೀವಾಳ.

ನಾಯಕ ಗಿಡೋ ಯಹೂದಿ. ವೃತ್ತಿಯಲ್ಲಿ ವೈಟರ್. ಅಸಾಧಾರಣ ಹಾಸ್ಯಪ್ರಜ್ಞೆ, ಲವಲವಿಕೆಯ ವ್ಯಕ್ತಿತ್ವ ಆತನದ್ದು. ಸುಂದರಿ ದೋರಾಳನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಜೋಶ್ವಾ ಎನ್ನುವ ಪುಟ್ಟ ಮಗನ ಜೊತೆ ಈತನದ್ದು ಸುಖೀ ಸಂಸಾರ.

ಈ ನೆಮ್ಮದಿಯನ್ನು ಕಲಕಿಬಿಡುವುದು ಎರಡನೇ ಮಹಾಯುದ್ಧದ ಕರಿನೆರಳು. ಹಿಟ್ಲರ್ ಜ್ಯೂ (ಯಹೂದಿ)ಗಳನ್ನು ಬಂಧಿಸಿ ಅಮಾನವೀಯವಾಗಿ ನಡೆಸಿಕೊಳ್ಳುವ ಹೊತ್ತಿಗೇನೇ, ಗಿಡೋ ಯಹೂದಿ ಎನ್ನುವ ಕಾರಣಕ್ಕಾಗಿ ಆತನ ಜೊತೆ ಮಗ ಹಾಗೂ ಅಂಕಲ್ನನ್ನು ಬಂಧಿಸಿ ಕಾನ್ಸಂಟ್ರೇಶನ್ ಕ್ಯಾಂಪಿಗೆ ತಳ್ಳುತ್ತಾರೆ. ಹೆಂಡತಿ ಇಷ್ಟಪಟ್ಟು ಆತನಿಗೆ ಅಲ್ಲಿಯೂ ಜೊತೆಯಾಗುತ್ತಾಳೆ. ಅಲ್ಲಿ ಆತ ನಾಜಿಗಳ ಕೈಯಿಂದ ತನ್ನ ಮಗ ಮತ್ತು ಹೆಂಡತಿಯನ್ನು ಪಾರು ಮಾಡಲು ಹೋರಾಡುವ ಕತೆ "ಲೈಫ್ ಈಸ್ ಬ್ಯೂಟಿಫುಲ್" ಸಿನಿಮಾದ್ದು.

ಗಿಡೋ ಎನ್ನುವ ಪಾತ್ರವೇ ಅತ್ಯಂತ ಸಮರ್ಥವಾಗಿ ಚಿತ್ರಿತಗೊಂಡಿದೆ. ಸಿನಿಮಾದಲ್ಲಿ ಗಿಡೋ ನಗಿಸುತ್ತಾ, ನಗುತ್ತಾ ಸನ್ನಿವೇಶಗಳನ್ನು ಎದುರಿಸುತ್ತಾನೆ. ಆತನ ಹಾಸ್ಯಪ್ರಜ್ಞೆ ಕಾನ್ಸಂಟ್ರೇಶನ್ ಕ್ಯಾಂಪಿನ ಒಳಗೂ ಬತ್ತುವುದಿಲ್ಲ. ಪುಟ್ಟ ಮಗ ಜೋಶ್ವಾನಿಗೆ ತಾವಿಬ್ಬರೂ ಬದುಕುತ್ತಿರುವ ಕಾನ್ಸಂಟ್ರೇಶನ್ ಕ್ಯಾಂಪಿನ ಕ್ರೂರತೆಯನ್ನು ಆತ ಹೇಳುವುದಿಲ್ಲ. "ಈ ಕ್ಯಾಂಪಿನ ಒಳಗಡೆ ನಾವೆಲ್ಲಾ ಸ್ಪರ್ಧೆಯೊಂದರಲ್ಲಿ ಭಾಗವಹಿಸುತ್ತಿದ್ದೇವೆ. ಸಾವಿರ ಅಂಕ ಕೂಡಿಟ್ಟರೆ ಗೆಲ್ಲುತ್ತೇವೆ. ಮೊದಲ ಬಹುಮಾನ ನಿನ್ನಿಷ್ಟದ ಟ್ಯಾಂಕರ್" ಎಂದು ಆಸೆ ಹುಟ್ಟಿಸುತ್ತಾನೆ. ಮಗನಿಗದು ಸುಂದರ ಆಟವಾಗಿ ಕಾಣುತ್ತದೆ. ಮುಗ್ಧ ಮಗುವಿನ ಮನಸ್ಸು, ಬಾಲ್ಯ, ಕನಸು ವಾಸ್ತವದ ಸತ್ಯದ ಮಧ್ಯೆ ಕಳೆದು ಹೋಗಬಾರದು ಎನ್ನುವ ಅಪ್ಪನ ಕಾಳಜಿ ಎದ್ದು ಕಾಣುತ್ತದೆ.

ಈ ಆಟದ ನೆಪದಲ್ಲೇ ಮಗನನ್ನು ಸೈನಿಕರ ಕೈಗೆ ಸಿಗದಂತೆ ಬಚ್ಚಿಡುತ್ತಾನೆ ಗಿಡೋ. ನಿರ್ದಯ ವಾಸ್ತವ ಎದುರಿಗಿದ್ದರೂ ಸ್ಪರ್ಧೆ ಎನ್ನುವ ಕಲ್ಪನೆಯೊಳಗೆ ಮಗನ ಸಂವೇದನೆಗಳನ್ನು ಗಿಡೋ ಜೀವಂತವಾಗಿಡುತ್ತಾನೆ. ಕಾನ್ಸಂಟ್ರೇಶನ್ ಕ್ಯಾಂಪಿನ ಒಳಗಡೆ ಅವನು ಕೂಡಾ ಜೀವಂತವಾಗಿರಲು ಪ್ರಯತ್ನಿಸುವುದು ತಾನು ಸೃಷ್ಟಿಸಿದ ಸ್ಪರ್ಧೆಯ ಜಗತ್ತಿನಿಂದಾಗಿಯೇ.

ಆತ ಕೊನೆವರೆಗೂ ಉಳಿಸಿಕೊಳ್ಳುವ ನಗು, ಲವಲವಿಕೆ, ಸ್ಥಿಮಿತ ಮನಸ್ಥಿತಿ ನಮ್ಮನ್ನು ಸೆಳೆಯುತ್ತದೆ. ಗಿಡೋ ಮಗನೆದುರು ಮಾಡುವ ಮಾರ್ಚ್ ಫಾಸ್ಟ್, ಅದನ್ನು ಬಚ್ಚಿಟ್ಟುಕೊಂಡ ಡಬ್ಬಿಯೊಳಗಿನಿಂದ ನೋಡುವ ಮಗ ಸಿನಿಮಾವಾಗಿ ಕಾಡಲು ಈ ಒಂದು ಸನ್ನಿವೇಶ ಸಾಕು. ಲವಲವಿಕೆಯೊಂದಿಗೆ ಪ್ರಾರಂಭವಾಗುವ ಸಿನಿಮಾ ಕಾನ್ಸಂಟ್ರೇಶನ್ ಕ್ಯಾಂಪಿನೊಳಗಿದ್ದರೂ, ಲವಲವಿಕೆಯನ್ನು ಕಳೆದುಕೊಳ್ಳುವುದಿಲ್ಲ.
 
ಇಟೆಲಿಯ ಪ್ರಖ್ಯಾತ ಹಾಸ್ಯನಟ ರಾಬರ್ಟೋ  ಬೆನಿನಿ ನಟಿಸಿ, ನಿರ್ದೇಶಿಸಿರುವ ಸಿನಿಮಾವಿದು. ಐತಿಹಾಸಿಕ ಘಟನೆಯೊಂದನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಹೇಳುವ ಕತೆಯಲ್ಲಿ, ಕಾನ್ಸಂಟ್ರೇಶನ್ ಕ್ಯಾಂಪು ಕತೆಯ ಭಾಗವಾಗಿ ಬರುತ್ತದೆಯೇ ಹೊರತು ಇತಿಹಾಸದ ಅಂಕಿ-ಅಂಶಗಳ ಪಾಠಶಾಲೆಯಾಗುವುದಿಲ್ಲ. ಬಹುಶಃ ಇಲ್ಲೇ ನಿರ್ದೇಶಕನ ಗೆಲುವಿರುವುದು. ಚಿತ್ರಕತೆ, ಸಂಗೀತ, ಪಾತ್ರವರ್ಗದಲ್ಲಿ ಅಚ್ಚುಕಟ್ಟಿದೆ.  

ಲೈಫ್ ಈಸ್ ಬ್ಯೂಟಿಫುಲ್  ತಯಾರದದ್ದು 1997ರಲ್ಲಿ. ವಿವಿದೆಡೆ 52 ಪ್ರಶಸ್ತಿಗಳನ್ನು ಈ ಸಿನಿಮಾ ಚಾಚಿಕೊಂಡಿದೆ.  ಅತ್ಯುತ್ತಮ ನಟ(ರಾಬರ್ಟೋ  ಬೆನಿನಿ), ಅತ್ಯುತ್ತಮ ವಿದೇಶಿ ಸಿನಿಮಾ(ಇಟಲಿ), ಅತ್ಯುತ್ತಮ ಸಂಗೀತ(ನಿಕೋಲಾ ಪಯೋವನಿ) ಸೇರಿ ಒಟ್ಟು ಮೂರು ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.  

(ಕನ್ನಡ ಪ್ರಭದ "ಹೋಂ ಥಿಯೇಟರ್" ಅಂಕಣಕ್ಕೆ ಬರೆದ ಬರಹ. ಇದಕ್ಕೆ ಅಸಂಬದ್ಧ ಹೆಡ್ಡಿಂಗು ಕೊಟ್ಟಿದ್ದೆ. ಈಗಿರುವ ಆಕರ್ಷಕ ಶೀರ್ಷಿಕೆ ಕೊಟ್ಟವರು ಉದಯ ಮರಕಿಣಿ ಸರ್.)
 

ಭಾನುವಾರ, ಮಾರ್ಚ್ 15, 2009

ಪ್ರೀತಿಯ ರೇಷ್ಮೆ ನೇಯುವವನ ಕಥೆ...

ಕಾಂಚೀವರಂ ಸಿನಿಮಾ ಸ್ವಾತಂತ್ರ್ಯಪೂರ್ವದ ನೇಕಾರನ ಕಥೆ. ಮಗಳ ಮೇಲಿನ ಪ್ರೀತಿಗೆ ಆಕೆಗಾಗಿ ರೇಷ್ಮೆ ಸೀರೆ ನೇಯಲು ಪ್ರಯತ್ನಿಸುವ ಅಸಹಾಯಕ ಅಪ್ಪನ ಆತ್ಮೀಯ ಸ್ಪಂದನೆ.

ನೇಯುವುದು ರೇಷ್ಮೆಯಾದರೂ ಮನೆ ತುಂಬಾ ಬಡತನ. ಮಾಲೀಕ ಕೊಡುವ ಬಿಡಿಗಾಸಿಗೆ ತೃಪ್ತಿಪಟ್ಟುಕೊಳ್ಳಬೇಕು. ಅಕ್ಷರಶಃ ಜೀತದ ಬದುಕು. ಈ ನಿತ್ಯ ಜಂಜಡಗಳ ನಡುವೆ ಆತನಿಗೆ ಮದುವೆಯಾಗುತ್ತದೆ. ಮುದ್ದಾದ ಹೆಣ್ಣು ಮಗು ಹುಟ್ಟುತ್ತದೆ.  ಮಗುವಿಗೆ ಮೊದಲ ಸಲ ಒಳ್ಳೆಯಿಂದ ಹಾಲು ಕುಡಿಸುವಾಗ “ಭವಿಷ್ಯದಲ್ಲಿ ಮಗುವಿಗೆ ತಾನೇನು ನೀಡುತ್ತೇನೆ” ಎಂದು ಹೇಳಿಕೊಳ್ಳುವುದು ಸಂಪ್ರದಾಯ. ಆತ ಮಗುವಿನ ಕಿವಿಯಲ್ಲಿ “ರೇಷ್ಮೆ ಸೀರೆಯಲ್ಲೇ ನಿನ್ನ ಮದುವೆ ಮಾಡುತ್ತೇನೆ” ಎನ್ನುತ್ತಾನೆ.  ಮೈತುಂಬಾ ಬಡತನ ಎನ್ನುವುದು ಊರಿನವರಿಗೆಲ್ಲಾ ಗೊತ್ತು. ಹೆಂಡತಿ ಸೇರಿದಂತೆ ನೆರೆದಿದ್ದವರಿಗೆಲ್ಲಾ ಈತನ ಮಾತು ಕೇಳಿ ಆಶ್ಚರ್ಯ.



ಈ ಉದ್ದೇಶ ಈಡೇರಿಕೆಗೆ ಆತ ಕಳ್ಳನಾಗುತ್ತಾನೆ. ತಾನು ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಬಾಯಲ್ಲಿ ರೇಷ್ಮೆ ನೂಲಿನ ಉಂಡೆಯನ್ನು ಇಟ್ಟುಕೊಂಡು ಹೋಗುತ್ತಾನೆ. ರಾತ್ರೆಯಿಡೀ ಹೆಂಡತಿ ಮಕ್ಕಳಿಗೆ ಗೊತ್ತಾಗದಂತೆ ಮನೆ ಹಿಂಬದಿಯ ಶೆಡ್ಡಿನಲ್ಲಿ ಸೀರೆ ನೇಯುತ್ತಾ ಕೂರುತ್ತಾನೆ. ಸತತ ಹದಿನಾರು ವರ್ಷ ನಿತ್ಯ ಕಾಯಕವೆಂಬಂತೆ ಚಾಚೂ ತಪ್ಪದೇ ನಡೆಯುತ್ತದೆ ಈ ಪ್ರಕ್ರಿಯೆ.





ಈ ಮಧ್ಯೆ ಹೆಂಡತಿ ತೀರಿ ಹೋಗುತ್ತಾಳೆ. ಮಗಳು ಬೆಳೆದು ನಿಲ್ಲುತ್ತಾಳೆ. ತಮಗೆ ಸವಲತ್ತುಗಳನ್ನು ನೀಡಬೇಕೆಂದು ಮಾಲೀಕನ ವಿರುದ್ದ ಹೂಡುವ ಧರಣಿಯ ನೇತೃತ್ವ ವಹಿಸುತ್ತಾನೆ. ಅದೇ ಸಮಯದಲ್ಲಿ ಮಗಳ ಮದುವೆ ನಿಶ್ಚಯವಾಗುತ್ತದೆ.  ತಾನೇ ಧರಣಿ ಮುರಿಯುತ್ತಾನೆ. ಹದಿನಾರು ವರ್ಷಗಳಿಂದ ನೇಯುತ್ತಿರುವ ಸೀರೆ ಪೂರ್ತಿಯಾಗಲು ಇನ್ನು ಕೇವಲ ನಾಲ್ಕೇ ನಾಲ್ಕು ದಿನಗಳಿವೆ ಎನ್ನುವಾಗ ಆತ ಸಿಕ್ಕಿ ಬೀಳುತ್ತಾನೆ. ಜೈಲು ಸೇರುತ್ತಾನೆ. 



ಪೆರೋಲ್ ಮೇಲೆ ಆತ ಹೊರಬರುವಾಗ ಮಗಳಿಗೆ ಪ್ಯಾರಲಿಸಿಸ್. ಆಕೆಯನ್ನು ನೋಡಿಕೊಳ್ಳಲು ಯಾರೂ ದಿಕ್ಕಿಲ್ಲದ್ದರಿಂದ ಕೊನೆಗೆ ತಾನೇ ಕೈಯಾರೆ ವಿಷವುಣಿಸುತ್ತಾನೆ.



ಆಗ ಆತನಿಗೆ ನೆನಪಾಗುವುದು ಶೆಡ್ಡಿನಲ್ಲಿ ಆಕೆಗಾಗಿ ನೇಯ್ದು ಪೂರ್ತಿಯಾಗದ ರೇಷ್ಮೆ ಸೀರೆ. ಅದನ್ನು ಹರಿದು ತಂದು ಆಕೆಯ ದೇಹದ ಮೇಲೆ ಹೊದೆಸುತ್ತಾನೆ. ಪಾದ ಕಾಣುತ್ತದೆ. ಅದನ್ನು ಮುಚ್ಚಲು ಸೀರೆ ಎಳೆದಾಗ ತಲೆ ಸೀರೆಯಿಂದ ಹೊರಬರುತ್ತದೆ. ಆಕೆಯ ದೇಹವನ್ನು ಪೂರ್ತಿಯಾಗಿ ಮುಚ್ಚಿಕೊಳ್ಳದೆ ಸೀರೆ ರೇಷ್ಮೆಯಾಗಿ ಉಳಿದುಕೊಳ್ಳುತ್ತದೆ. 

 



ಇಂತಹದೊಂದು ಭಾವನಾತ್ಮಕ, ಸತ್ವಶಾಲಿ  ಚೌಕಟ್ಟಿನ ಕಥೆ ಬರೆದದ್ದು ನಿರ್ದೇಶಕ ಪ್ರಿಯದರ್ಶನ್. ಆದರಿದು ಸತ್ವಶಾಲಿ ಸಿನಿಮಾವಾಗುವಲ್ಲಿ ಸೊರಗಿದೆ. ನಿರೂಪಣೆ ಮುಖ್ಯ ಕಾರಣ. ಫ್ಲ್ಯಾಷ್ ಬ್ಯಾಕ್‌ನಲ್ಲಿ ಹೇಳುವ ನೇಕಾರನ ಕಥೆ ಸಿನಿಮಾ ನೋಡುತ್ತಿರುವಂತೆ ನಮ್ಮೊಳಗೆ ಬೆಳೆಯುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಅದೊಂದು ಗಿಮಿಕ್ಕಿನಂತೆ ಕಾಣುತ್ತದೆ.



ಸಿನಿಮಾದಲ್ಲಿರುವ ಆ ಕಾಲಘಟ್ಟದ ಸಾಮಾಜಿಕ ಘಟನೆಗಳು ನೇಕಾರನ ನಿತ್ಯ ಬದುಕಿನ ಜೊತೆ ಥಳುಕು ಹಾಕಿಕೊಂಡಾಗ ಗೊಂದಲ ಮೂಡಿಸುತ್ತವೆ. ಇದರ ಬದಲು ಪ್ರಿಯದರ್ಶನ್ ನೇಕಾರನೊಬ್ಬನ ಕಥೆಯನ್ನು ಇತಿಹಾಸದ ಗೋಜಲಿನಿಂದ ಹೊರಗಿಟ್ಟು ನಿರೂಪಿಸಬಹುದಿತ್ತು, ಅಥವಾ ಇತಿಹಾಸವನ್ನು ಸತ್ವಶಾಲಿಯಾಗಿ ಬಳಸಿ ಕಥೆ ಹೇಳಬಹುದಿತ್ತು.( ಇದಕ್ಕೆ ತಕ್ಕ ಉದಾಹರಣೆ ಇಟಾಲಿಯನ್ ಸಿನಿಮಾ “ಲೈಫ್ ಈಸ್ ಬ್ಯೂಟಿಫುಲ್”. ಅಲ್ಲಿ ನಿರ್ದೇಶಕ ರಾಬರ್ಟೋ ಬೆನಿನಿ, ಹಿಟ್ಲರ್‌ನ ನಾಜಿ ಕ್ಯಾಂಪನ್ನು ಜೊತೆಯಲ್ಲಿ ಇಟ್ಟುಕೊಂಡು ಸಿನಿಮಾದ ಕಥೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತಾನೆ). ಈ ಎರಡೂ ಕೆಲಸವನ್ನು ಅವರು ಮಾಡುವುದಿಲ್ಲ. ಇದರಿಂದ ಅನ್ಯಾಯವಾಗಿರುವುದು ನೇಕಾರನೊಬ್ಬನ ಕಥೆಗೆ.

 





ಸಿನಿಮಾದುದ್ದಕ್ಕೂ ಇಷ್ಟವಾಗುವುದು ಬ್ಲ್ಯಾಕ್ ಅಂಡ್ ವೈಟ್ ತರಹದ ಕಲರ್ ಫ್ರೇಮಿನಲ್ಲಿ ಕಥೆ ಹೇಳುವ ರೀತಿ. ಜೊತೆಗೆ ಸೀರೆ, ಹೊಲದ ಪೈರು ಹೀಗೆ ಕೆಲವೇ ಕೆಲವು ವಸ್ತುಗಳಿಗೆ ಬಣ್ಣ ತುಂಬಿರುವುದು. ಪ್ರತೀ ಫ್ರೇಮಿನ ವಿನ್ಯಾಸವೇ ಸಿನಿಮಾವನ್ನು ನೋಡುವಂತೆ ಮಾಡುತ್ತದೆ.  ಪ್ರಕಾಶ್ ರೈ ಇಡೀ ಸಿನಿಮಾವನ್ನು ತುಂಬಿಕೊಂಡಿದ್ದಾರೆ! ಈ ಮೊದಲು ತಮಿಳು ನೇಟಿವಿಟಿಯ ಪಾತ್ರಗಳನ್ನು ಅವರು ಮಾಡಿದ್ದರೂ ಇಲ್ಲಿ ಆ ಪಾತ್ರದಲ್ಲೇ ಸೋಲುತ್ತಾರೆ. ಬಹುಶ ಇದಕ್ಕೆ ಪ್ರಿಯದರ್ಶನ್ ಕಾರಣವಿದ್ದರೂ ಇರಬಹುದು!! ಬಾಡಿ ಲಾಂಗ್ವೇಜ್ ವಿಷಯದಲ್ಲಿ ಪ್ರಕಾಶ್ ರೈ ಯಾವತ್ತೂ ಅಚ್ಚುಕಟ್ಟು. ಆದರಿಲ್ಲಿ ಯುವಕ ಹಾಗೂ ವಯಸ್ಕ ನೇಕಾರನ ನಡುವೆ ಇರುವ ವ್ಯತ್ಯಾಸ ಕಂಡು ಹಿಡಿಯಲು ಸ್ವಲ್ಪ ಒದ್ದಾಡಬೇಕು.



ಕೆಲವೊಂದು ಸಣ್ಣ ಸಣ್ಣ ಸನ್ನಿವೇಶಗಳು ಖುಷಿ ಕೊಡುತ್ತವೆ. ಉದಾಹರಣೆಗೆ ಹಳ್ಳಿ ಮೊದಲ ಬಾರಿ ಬರುವ ಮೋಟಾರು ಕಾರನ್ನು ನೋಡಲು ಕಾಯುವಾಗ ನಾಯಕ, ಆತನ ಹೆಂಡತಿ, ಮಗಳು ದೂರದ ಗಿಡವೊಂದಕ್ಕೆ ಕಲ್ಲು ಹೊಡೆಯಲು ಪ್ರಯತ್ನಿಸುತ್ತಾ ಟೈಂಪಾಸ್ ಮಾಡುವುದು, ಮೋಟಾರು ನೋಡಲು ಹೋಗುವಾಗ ದಣಿದ ಹೆಂಡತಿಯನ್ನು ಎತ್ತಿಕೊಂಡು ಓಡುವುದು, ಬಸ್ಸಲ್ಲಿ ಪೋಲೀಸ್ ಪೇದೆ ಟೊಪ್ಪಿಗೆ ಲಾಂಛನ ಹಾಕಲು ಒದ್ದಾಡುವುದು. 

 



ನಿರ್ದೇಶಕ ಪ್ರಿಯದರ್ಶನ್ ನಾಯಕನಿಗೆ ವಿಪರೀತ ಗಮನ ಕೊಟ್ಟಿರುವುದರಿಂದ ಉಳಿದ ಪಾತ್ರಗಳಿಗೆ ಹೆಚ್ಚು ಕೆಲಸವಿಲ್ಲ. ಜೊತೆಗೆ ಅವುಗಳಿಗಿರುವ ಅವಕಾಶವೂ ಸೀಮಿತ. ನಾಯಕನ ಪಾತ್ರಕ್ಕೆ ಬೆಂಬಲ ಕೊಡಲು ಅಗತ್ಯವಿರುವಷ್ಟು ಮಾತ್ರ ಅವು ಕೆಲಸ ಮಾಡುತ್ತವೆಯೇ ಹೊರತು ಪಾತ್ರವಾಗಿ ಕತೆಯನ್ನು ಕಟ್ಟಿಕೊಡುವುದಿಲ್ಲ. 



ತಮಿಳಿನಲ್ಲಿ ಈ ತರಹದ ಸಿನಿಮಾ ಒಂದು ಅಪೂರ್ವ ಪ್ರಯೋಗ. ಸದಭಿರುಚಿಯ “ನೋಡಬಲ್ಲ”ಥ ಸಿನಿಮಾಗಳನ್ನು ನಿರ್ಮಿಸುತ್ತಿರುವ ಪ್ರಕಾಶ್ ರೈ ನಿರ್ಮಾಣದ ಸಿನಿಮಾ ಇದು. ಇಷ್ಟೆಲ್ಲಾ ಕೊರತೆಗಳ ಮಧ್ಯೆ ಸಿನಿಮಾ ನಿರ್ಮಾಣದ ಹಿಂದಿರುವ ಪ್ರಯತ್ನ ಇಷ್ಟವಾಗುತ್ತದೆ.



ಪ್ರಿಯದರ್ಶನ್ ಅವರ “ಜೀವನ ಶ್ರೇಷ್ಠ ಸಿನಿಮಾ”ವಾಗುವ ಅವಕಾಶ ಹಾಗೂ ಅಪಾಯ ಎರಡೂ ಕಾಂಚೀವರಂ ಸಿನಿಮಾಕ್ಕಿದೆ.

ಮಂಗಳವಾರ, ಮಾರ್ಚ್ 10, 2009

ನೂಪುರ ಭ್ರಮರಿಗೀಗ ಎರಡು ವರ್ಷ


ನೂಪುರ ಭ್ರಮರಿಗೀಗ ಎರಡು ವರ್ಷದ ಸಂಭ್ರಮ.

ನರ್ತನ ಜಗತ್ತಿಗೆ ಮೀಸಲಾದ ಪತ್ರಿಕೆ ಇದು. ಹೆಜ್ಜೆ-ಗೆಜ್ಜೆ, ಭಾವ-ಭಂಗಿಗಳ ಬಗ್ಗೆ ಚರ್ಚಿಸುತ್ತಾ ಬೆಳೆದು ಬಂದ ಖಾಸಗಿ ಪ್ರಸಾರದ ಪತ್ರಿಕೆ ನೂಪುರ ಭ್ರಮರಿ. ಎರಡು ವರ್ಷಗಳ ಹಿಂದೆ ಜೆರಾಕ್ಸ್ ಪ್ರತಿಯಾಗಿ ಪ್ರಾರಂಭವಾದ ಪತ್ರಿಕೆ ಇವತ್ತು ಮುದ್ರಣದ ಹಂತಕ್ಕೆ ಬಂದು ಗೆಜ್ಜೆ ಕಟ್ಟಿ ಕುಣಿತ ಮುಂದುವರಿಸಿದೆ. ಸ್ವಂತದ್ದೊಂದು ವೆಬ್ಸೈಟನ್ನೂ ಹೊಂದಿದೆ.

ನೂಪುರ ಭ್ರಮರಿಯನ್ನು ಹೊರತರುವಲ್ಲಿ ಎದ್ದು ಕಾಣುವುದು ಸಂಪಾದಕಿ ಮನೋರಮಾ ಬಿ.ಎನ್ ಅವರ ನೃತ್ಯ ಪ್ರೀತಿ. ಜೊತೆಗೆ ಪತ್ರಿಕೋದ್ಯಮ ಉಪನ್ಯಾಸಕಿಯಾಗಿರುವುದರಿಂದ ಬರಹವನ್ನು ನೃತ್ಯ ಪ್ರಸಾರಕ್ಕೆ ಆಯ್ದುಕೊಂಡಿದ್ದಾರೆ. 
ಈ ಪತ್ರಿಕೆಯ ಹಿಂದೆ ಲಾಭಕ್ಕಿಂತ ಹೆಚ್ಚಾಗಿ ಅಕ್ಕರೆಯಿದೆ. ಭಿನ್ನವಾಗಿ ಪತ್ರಿಕೆಯೊಂದನ್ನು ಮಾಡಬೇಕು ಎನ್ನುವ ಕಳಕಳಿಯಿದೆ. 
ಚಂದಾದಾರರು ಹಾಗೂ ಸ್ವಂತ ಖರ್ಚಿನಿಂದ ಪತ್ರಿಕೆ ನಡೆಸುತ್ತಿದ್ದಾರೆ.
ನೂಪುರದಂತಹ ಪುಟ್ಟ ಪ್ರಯತ್ನಗಳ ಹಿಂದೆ ಅದಮ್ಯ ಕನಸುಗಳಿರುತ್ತವೆ. ಈ ಪ್ರಯತ್ನವನ್ನು ಮುಂದುವರಿಸಲು ನಾವೂ ಅವರ ಬೆನ್ನಿಗಿರೋಣ, ಪ್ರೋತ್ಸಾಹ ತುಂಬೋಣ.  ಚಂದಾದಾರರಾಗುವ ಮೂಲಕ ಗೆಜ್ಜೆಯ ಜೊತೆ ನಮ್ಮದೊಂದು ಹೆಜ್ಜೆಯಿರಲಿ.

ಇದು ನೂಪುರ ಭ್ರಮರಿಯ ವೆಬ್ ಸೈಟ್ ಕೊಂಡಿ:

ಇ-ಮೈಲ್ ವಿಳಾಸ:
feedback@noopurabhramari.com
editor@noopurabhramari.com

ಮೊಬೈಲ್: 9964140927

 

ಭಾನುವಾರ, ಮಾರ್ಚ್ 8, 2009

ಸಿನಿಮಾ ರೀಲಿನಂತೆ ಸನ್ನಿವೇಶ ಬದಲಾಗಿದೆ!

ಇಂದು "ವಿಶ್ವ ಮಹಿಳಾ ದಿನ".ವಿಜಯ ಕರ್ನಾಟಕ ಸಾಪ್ತಾಹಿಕಕ್ಕಾಗಿ ಬರೆದ ಪುಟ್ಟ ಬರಹ ಇಲ್ಲಿದೆ.

"ನೀನು ಓದಿ ಏನ್ಮಾಡೋದಿದೆ?
ನರೇಶ ಮುಂದಕ್ಕೆ ಓದಿದರೆ ನಾಳೆ ನಮ್ಮ ಸಹಾಯಕ್ಕಾಗುತ್ತಾನೆ. 
ನೀನು ಮನೆಕೆಲಸ ಚೆನ್ನಾಗಿ ಕಲಿತರೆ ಸಾಕು"

ಹದಿನೈದು ವರ್ಷಗಳ ಹಿಂದಿನ ಬಹುತೇಕ ಸಿನಿಮಾಗಳಲ್ಲಿ ಅಪ್ಪ ತನ್ನ ಮಗಳಿಗೆ ಹೇಳುತ್ತಿದ್ದ ಡೈಲಾಗುಗಳ ಪೈಕಿ ಇದೂ ಒಂದು. ದರ್ಪ, ಅಹಂಕಾರ, ಅಸಹಾಯಕತೆಯೂ ಅಲ್ಲಿ ಕಾಣುತ್ತಿತ್ತು. "ಗಂಡು"ಗಲಿಗಳ ಸಮಾಜಮುಖಿ ನಿಲುವುಗಳು ಹಾಗಿದ್ದವು. ಗಂಡು-ಹೆಣ್ಣಿನ ನಡುವೆ ದೊಡ್ಡದೊಂದು ಕಂದಕ ಕಾಣುತ್ತಿತ್ತು. ಗಂಡಿಗೆ ಅವಕಾಶದ ಆಕಾಶ ತೆರೆದು ಕೂತಿತ್ತು. ಹೆಣ್ಣಿಗೆ ಒಲೆ ಮೇಲೆ ಬೇಯಲು ಇಟ್ಟ ಅನ್ನ ಕಾಯುತ್ತಿತ್ತು.

ಈ ಕಂದಕಕ್ಕೆ ಸೇತುವೆ ಕಟ್ಟುವ ಕೆಲಸ ಪ್ರಾರಂಭವಾಗಿ ವರ್ಷಗಳೇ ಕಳೆದಿವೆ. 

ಹೆಣ್ಣು ಮಗು ಹುಟ್ಟಿದರೆ ತಂದೆ-ತಾಯಿ ಅಕ್ಕರೆಯಿಂದ, ಸಂತಸದಿಂದ "ಖುಷಿ" ಎಂದು ಹೆಸರಿಡುವ ಕಾಲ ಇದು.
ಹೆಣ್ಣಿನ ಬೊಗಸೆಯಲ್ಲಿ ಭರವಸೆ, ಪ್ರೀತಿ ಜಾಸ್ತಿಯಾಗುತ್ತಿರುವ ಕಾಲ ಇದು. ಸನ್ನಿವೇಶಗಳು ಸಿನಿಮಾದ ರೀಲಿನ ಸೀನಿನಂತೆ ಬದಲಾಗಿವೆ. ಇವತ್ತಿನ ಸಿನಿಮಾ ರೀಲಲ್ಲಿ ಕಾಣುತ್ತಿರುವ ದೃಶ್ಯಗಳ ತುಣುಕುಗಳಲ್ಲಿ
ವಿಶಾಲಾಕ್ಷಿ ಬಿಎಂಟಿಸಿಯಲ್ಲಿ ಕಂಡಕ್ಟರ್ ಕೆಲಸವನ್ನು ದಿನನಿತ್ಯ ಶ್ರದ್ಧೆಯಿಂದ ಮಾಡುತ್ತಿದ್ದಾಳೆ. ವಿಮಾನ ಓಡಿಸುವುದನ್ನು ರೆನಿಟಾ ಕಲಿತುಕೊಂಡಿದ್ದಾಳೆ. ನಳಿನಿ ಪೆಟ್ರೋಲ್ ಬಂಕಿನಲ್ಲಿ ಗಂಡಸರಷ್ಟೇ ಆಸ್ಥೆಯಿಂದ ದುಡಿಯುತ್ತಾಳೆ. ಸಾಫ್ಟ್ವೇರ್ ನೌಕರಿಗೆ ಹೋಗುವ ಹೆಡ್ಮಾಸ್ಟರ್ ಹಿರೇಮಠರ ಮಗಳಿಗೆ ಕೈ ತುಂಬಾ ಸಂಬಳವಿದೆ. ಹೆಣ್ಣಿನ ಬದುಕಿನ ಸಿನಿಮಾ ರಂಗು ತುಂಬಿಕೊಂಡಿದೆ. 

ಗಂಡು-ಹೆಣ್ಣಿನ ನಡುವಿನ ತಾರತಮ್ಯ ಇವತ್ತು ನಿನ್ನೆಯದಲ್ಲ. ಜೊತೆಗೆ ಆ  ಬಗ್ಗೆ ಗಂಭೀರ ಚರ್ಚೆಗಳು ಸಹ ನಡೆದಿದ್ದವು. ಆದರೆ ಈ ತಾರತಮ್ಯವನ್ನು ಬಹುತೇಕ ನೀಗಿಸುವಲ್ಲಿ ಯಶಸ್ವಿಯಾದದ್ದು ಜಾಗತೀಕರಣ ಹುಟ್ಟಿಸಿದ ಅವಕಾಶಗಳ ಸಂತೆ.
ಜಾಗತೀಕರಣಕ್ಕೆ ಗಂಡು-ಹೆಣ್ಣು ಎನ್ನುವ ತಾರತಮ್ಯದಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲ. ಮಾಡುವ ಕೆಲಸದ ಅಂತಿಮ ಫಲಿತಾಂಶದ ಬಗ್ಗೆ ಮಾತ್ರ ಅದಕ್ಕೆ ಒಲವಿತ್ತು. ವಿ ನೀಡ್ ರಿಜಲ್ಟ್, ಗುಡ್ ಸರ್ವಿಸ್ ಎಂದಷ್ಟೇ ಹೇಳಿತು ಅದು.
ಜಾಗತೀಕರಣ ಹುಟ್ಟಿಸಿದ ಅವಕಾಶವೇ ಇಲ್ಲದೇ ಹೋಗಿದ್ದಿದ್ದರೆ ವೇಶ್ಯೆಯೊಬ್ಬಳ ಮಗಳು ಬಿಪಿಒ ಕಂಪೆನಿಯೊಂದರಲ್ಲಿ ಕೆಲಸ ಮಾಡಿ ಕೈತುಂಬಾ ಸಂಬಳ ಪಡೆಯುವುದು ಹೀಗೆ ಸಾಧ್ಯವಾಗುತ್ತಿತ್ತು? ಏನೇನೂ ಗೊತ್ತಿಲ್ಲದ ಕೆಳ ಮಧ್ಯಮ ವರ್ಗದ ಹುಡುಗಿಯೊಬ್ಬಳಿಗೆ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ವರ್ಷ ಪೂರ್ತಿ ಕೆಲಸ ಹೇಗೆ ಸಿಗುತ್ತಿತ್ತು?
ಹೆಣ್ಣು ಆರ್ಥಿಕವಾಗಿ ಸ್ವಾವಲಂಬಿಯಾಗುವುದರ ಜೊತೆಗೆ ಲಕ್ಷಗಳಲ್ಲಿ ಸಂಬಳ ತೆಗೆದುಕೊಳ್ಳಲಿಕ್ಕೆ, ಹಳ್ಳಿಯಲ್ಲಿದ್ದ ಮಹಿಳೆಯರಿಗೆ ನೂರರ ಹತ್ತಾರು ನೋಟು ಕೂಡಿಡುವುದಕ್ಕೆ ನಾಂದಿಯಾದದ್ದು ಕೂಡಾ ಇದೇ.


ಇವತ್ತಿನ ಯುವಕ-ಯುವತಿಯರನ್ನು ಮಾತನಾಡಿಸಿ ನೋಡಿ. ಅವರ್ಯಾರೂ ಗಂಡು-ಹೆಣ್ಣಿನ ನಡುವೆ ಅಡ್ಡ ಗೋಡೆ ಕಟ್ಟಿ ದೀಪವಿಡುವುದಿಲ್ಲ. ಇಬ್ಬರಿಗೂ ಸಮಾನರು, ಇಂದಿನ ವೇಗದ ಜಗತ್ತಿನಲ್ಲಿ ಗಂಡು-ಹೆಣ್ಣು ಎನ್ನುವುದಕ್ಕಿಂತ ಹೆಚ್ಚಾಗಿ ಪ್ರತಿಭೆಗೇ ಮನ್ನಣೆ ಎಂದೇ ಮಾತನಾಡುತ್ತಿದ್ದಾರೆ. 
ಹೆಣ್ಣು ಅಡಿಗೆ ಕೋಣೆಗೆ ಮಾತ್ರ ಎಂಬುದು ಹೆಚ್ಚುಕಮ್ಮಿ ಮುಗಿದ ಅಧ್ಯಾಯ. ಆ ಚ್ಯೂಯಿಂಗಮ್ ಎಪಿಸೋಡನ್ನು ಮತ್ತೆ ಕೆದಕಿ ಪ್ರಸಾರ ಮಾಡುವ ಅವಶ್ಯಕತೆ ಈಗಿಲ್ಲ ಎನ್ನುತ್ತಿದ್ದಾರೆ. ಅಡಿಗೆ ಕೆಲಸಕ್ಕೆ ಒಬ್ಬ ಅಡಿಗೆಯವನನ್ನು ಇಟ್ಟುಕೊಂಡರಾಯಿತು, ಹೋಟೆಲಿನಿಂದ ಕೆಲವು ದಿನ ಊಟ ತಂದರಾಯಿತು. ಕೇವಲ ಅಡಿಗೆಗೋಸ್ಕರ ಚೆನ್ನಾಗಿ ಓದಿರುವ ಹೆಂಡತಿ ಕೆಲಸಕ್ಕೆ ಹೋಗಬಾರದು ಅನ್ನುವುದು ಲಾಜಿಕ್ಕೇ ಇಲ್ಲದ ಮಾತು ಎನ್ನುವುದು ತರುಣ ಮದುಮಕ್ಕಳ, ಮದುವೆಯಾಗಲು ಬಾಕಿ ಇರುವವರ ಮಾತು. ಕಾರಣ ಸ್ಪಷ್ಟ. ಹೆಣ್ಣು ತನ್ನಷ್ಟೇ ಅಥವಾ ತನಗಿಂತ ಹೆಚ್ಚು ದುಡಿಯಬಲ್ಲಳು ಅನ್ನುವುದು ಗಂಡಿಗೆ ಅರ್ಥವಾಗಿಬಿಟ್ಟಿದೆ. ಹೆಣ್ಣು ಗಂಡಿನ ಆಸರೆಗಾಗಿ ಹಪಹಪಿಸುವ, ಮಾನಸಿಕವಾಗಿ ನರಳುವ ಕಾಲ ಅಸುನೀಗಿರುವುದರಿಂದ ದುಡಿಮೆ ಗಂಡಿಗೆ ಮಾತ್ರ ಸೀಮಿತವಾಗಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಹೆಣ್ಣನ್ನು ದುಡಿಯಲು ಕಳಿಸುವುದು ತಾನು ಆಕೆಯ ಸ್ವಾತಂತ್ರ್ಯವನ್ನು ಗೌರವಿಸುವ ಮನಃಸ್ಥಿತಿ ಎನ್ನುವ ಹಂತಕ್ಕೆ ತಲುಪಿದೆ. ಮುಂದೆ ಇದು ಗಂಡಿನ ಪ್ರೆಸ್ಟೀಜಿನ ಪ್ರಶ್ನೆಯಾಗಿ ಬದಲಾಗುವ ಕಾಲವೂ ದೂರವಿಲ್ಲ!!!