ಆತ ಸಿಗರೇಟಿನ ತುದಿಗೆ ಬೆಂಕಿ ಹಚ್ಚಿದ್ದ. ಕಣ್ಣಲ್ಲೊಂದು ಮರುಭೂಮಿಯಿತ್ತು. ಓಯಸ್ಸಿಸ್ಸನ್ನು ಹುಡುಕಿ ಸುಸ್ತಾದವನ ದಣಿವಿತ್ತು. ಹಾಲ್ನ ಹೊರಗೆ ಮಳೆ ಸುರಿಯಲು ಶುರುವಿಟ್ಟಿತು. ಆದರೆ ತನ್ನ ಬದುಕಿನಲ್ಲಿ ಅಂತಹದೊಂದು ಮಳೆ ಬರಲೇ ಇಲ್ಲವಲ್ಲ ಎಂದುಕೊಂಡ.
ಎಲ್ಲಾ ವಿಷಾದಗಳು ಸಿಗರೇಟಿನ ತುದಿಗೆ ಸಿಕ್ಕು ಬೂದಿಯಾಗುತ್ತಿತ್ತು. ಆತ ತುಂಬಾ ಇಷ್ಟಪಟ್ಟಿದ್ದ ಅಮೃತಾ ಪ್ರೀತಂ ಬರೆದ ಸಾಲು ನೆನಪಾಯಿತು--
ಒಂದು ನೋವಿತ್ತು
ಸದ್ದಿಲ್ಲದೆ ನಾನದನು ಸಿಗರೇಟಿನ ಹಾಗೆ
ಸೇದಿಬಿಟ್ಟೆ
ಒಂದಷ್ಟು ಕವಿತೆಗಳು ಮಾತ್ರ ಉಳಿದಿವೆ
ಸಿಗರೇಟಿನಿಂದ ಹೊಮ್ಮಿದ ಬೂದಿಯನು
ಕೂಡಿಡುವಂತೆ ಕೂಡಿಸಿಟ್ಟಿಹೆನು ನಾನು
ನನ್ನಲ್ಲಿ ಎಷ್ಟು ವಿಷಾದಗಳಿವೆ? ನಾಲ್ಕೋ, ಐದೋ? ಡಜನ್ಗಾಗುವಷ್ಟೋ? ಎಷ್ಟು ಸಿಗರೇಟು ಸೇದಬೇಕು? ಮಳೆಯ ರಭಸ ಹೆಚ್ಚಾಯಿತು. ಸಿಗರೇಟು ಅರ್ಧ ಸುಟ್ಟಿತ್ತು. ರೈಲಿನ ಎಂಜಿನಿನಿಂದ ದುಸಮುಸ ಎಂದು ಆಕಾಶ ಸೇರುವ ಕಪ್ಪು-ಬಿಳಿ ಹೊಗೆ ಹಾಗಿತ್ತು ಅವನ ಬಾಯಿ. ಮನಸ್ಸಿಗೆ ಬೆಂಕಿ ಬಿದ್ದಿತ್ತು. ಬಯಕೆಗಳಿಗೆ, ಭರವಸೆಗಳಿಗೆ ಬಿಂಕಿ ಬಿದ್ದಿತ್ತು. ಮಳೆಯ ರಭಸಕ್ಕೆ ಶಟರ್ು ತೋಯ್ದು ತೊಟ್ಟಿಕ್ಕುತ್ತಿತ್ತು. ಕಾಲ ಬುಡದಲ್ಲಿ ಕೆಸರು. 'ಶೂ'ವಿನ ತುದಿ ಬುಡ ಎಲ್ಲವೂ ಕೆಂಪು,ಕೆಂಪು.
ಉದ್ದನೆಯ ದಾರಿ ಕಂಡಿತು. ಸುಮ್ಮನೆ ನಡೆಯಬೇಕು. ಯಾವುದೇ ಉದ್ದೇಶಗಳಿಲ್ಲದೆ, ಭರವಸೆಗಳಿಲ್ಲದೆ ಎಂದುಕೊಂಡ. ಗಾಳಿ ಬೀಸಲು ಪ್ರಾರಂಭವಾಯಿತು. ಮುನಿಸಿಕೊಂಡ ಹುಡುಗಿಯಂತೆ ಸರಸರನೆ ತರಗಲೆಗಳನ್ನೆಲ್ಲಾ ಎತ್ತಿ ಒಯ್ಯುತ್ತಿತ್ತು. ಈತನನ್ನೂ ಎಳೆದುಕೊಂಡು ಹೋಗಲು ಹುನ್ನಾರ ಮಾಡಿದಂತಿತ್ತು. 'ಬಾ ನನ್ನೊಂದಿಗೆ.ಎಲ್ಲವನ್ನೂ ಹೇಳಿ ನಿರಾಳವಾಗು. ಆಗೋದೆಲ್ಲಾ ಒಳ್ಳೇದಕ್ಕೆ' ಎನ್ನುವಂತಿತ್ತು ಅದರ ಧಾಟಿ. ಆದರೆ ಆತನಿಗೆ ಮಾತ್ರ ಗೊತ್ತು-ಪ್ರವಾಹದಲ್ಲಿ ಈಜುವ ಮಜವೇ ಬೇರೆ. ಧೈರ್ಯ ಒಂದೇ ಸಾಲದು. ಸ್ಥಿಮಿತವೂ ಇರಬೇಕು. ಉಳಿದವರಿಗೆಲ್ಲಾ ಗುರಿ ತಲುಪುವ ಧಾವಂತ. ಆದರೆ ತನಗೆ? ಗುರಿಯ ಆಸುಪಾಸಿನಲ್ಲಿದ್ದರೂ ಮತ್ತೆ ತಿರುಗಿ, ಮತ್ತೊಂದು ಗುರಿಯ ಗಮ್ಯದತ್ತ ನಡೆಯುವುದು ಅಭ್ಯಾಸ. ಅದು ಅಭ್ಯಾಸವೋ, ಅಭಾಸವೋ?ಆತನಿಗಿನ್ನೂ ಸ್ಪಷ್ಟವಿಲ್ಲ. ಕಣ್ಣಲ್ಲಿದ್ದ ಕನಸು ಕೈಗೂಡುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಈಡೇರುತ್ತದೆ ಎನ್ನುವ ಚಂಚಲತೆಯೊಂದಿಗೇ ಬದುಕಿದವನು ತಾನು. ಕಂಡ ಕನಸು ಹಾದಿಯಲ್ಲಿ ಸಾಗುವುದು ನಿತ್ಯವೂ ತನಗೆ ಪೂಜೆಯಿದ್ದಂತೆ.
ಇಂತಹ ಚಿತ್ರ-ವಿಚಿತ್ರ ಚದುರಿದ ಚಿತ್ರಗಳು ಅರೆಕ್ಷಣ ಕಣ್ಣಮುಂದೆ ಹಾದು ಹೋದವು. ತರ್ಕ ಏನೇ ಇರಬಹುದು. ಬುದ್ಧಿ ಮಾತ್ರ ಯಾವುದನ್ನೂ ಅಷ್ಟು ಬೇಗ ಒಪ್ಪಿಕೊಳ್ಳುವುದಿಲ್ಲ. ಬೇವರ್ಸಿ ಬದುಕು. ಅನುಭವ ತಗೊಳಯ್ಯ ಅಂತ್ಹೇಳಿ ಕೈ ತೊಳೆದುಕೊಳ್ಳುತ್ತೆ.
ಮಳೆ ರುದ್ರವಾಗುತ್ತಾ ಹೋಯಿತು. ಆಗಸದಲ್ಲಿ ಗುಡುಗು-ಸಿಡಿಲು. ಆದರೂ ಹೆಜ್ಜೆಗಳು ದೃಢವಾಗುತ್ತಿದ್ದವು. ನಡೆದ ಹೆಜ್ಜೆ ಗುರುತುಗಳಲ್ಲಿ ಮಳೆ ನೀರು ತುಂಬಿಕೊಳ್ಳುತ್ತಿತ್ತು. ಮುಂದೆ ನಡೆದಂತೆಲ್ಲಾ ಹಿಂದೆ ನಡೆದು ಬಂದ ಹೆಜ್ಜೆಗಳೇ ಕಾಣುತ್ತಿಲ್ಲ. ಹತ್ತೋ-ಹನ್ನೆರಡು ಹೆಜ್ಜೆ ಮುಂದಿಟ್ಟಿರಬೇಕು. ಹಾಲ್ನಲ್ಲಿ ಮಂಗಳವಾದ್ಯ ಮೊಳಗುವುದು ಕೇಳಿಸಿತು. ಅಲ್ಲೊಂದು ಸಂಭ್ರಮದ ಅಲೆ ಹೊರಬೀಳುತ್ತಿತ್ತು.
ಆತನಿಗೆ ತಿರುಗಿ ನೋಡಬೇಕೆನಿಸಲಿಲ್ಲ. ಅಕ್ಷತೆ ಕಾಳು ಕೈಯಿಂದ ಜಾರಿಬಿಟ್ಟಿತು. ಗಾಢ ನಿಟ್ಟುಸಿರೊಂದು ಹೊರಬಿತ್ತು. ಆದರೂ ಆತ ನಡೆಯುತ್ತಲೇ ಇದ್ದ. ಕೊನೆ ತಿರುವು ಕಾಣುವವರೆಗೂ....
3 ಕಾಮೆಂಟ್ಗಳು:
ಕಾರ್ತೀಕ್
ಸಿಗರೇಟು ಸೇದಿದವರಿಗಿಂತ ಚೆನ್ನಾಗಿ ಬರೆದಿರುವೆ.
ಹೊಸಬರು ಯಾರಾದರೂ ಇದನ್ನು ಓದಿದರೆ, ಕಾರ್ತಿಕ್ಗೆ ಹೊಗೆ ಕುಡಿದು(ಬಿಡುವ) ಅಭ್ಯಾಸವೂ ಇದೆ ಎಂಬ ಅನುಮಾನ ಬರದೇ ಇರದು. ಅದು ನಿಜಕ್ಕೂ ಪರಕಾಯ ಪ್ರವೇಶವೇ ಅಗಿದ್ದಲ್ಲಿ ಬಹಳ ಸಂತೋಷ. ಇಲ್ಲದಿದ್ದಲ್ಲಿ ಸ್ವಲ್ಪ ಬೇಸರ.
ನಿನ್ನ ಗೆಳೆಯ.
ಪ್ರೀತಿಯ ಗೆಳೆಯ
ನಾನು ಬಹುಪಾಲು ಸಿಗರೇಟ್ ಅನ್ನು ಕಥೆ,ಕವಿತೆಗಳ ಪಾತ್ರಗಳಿಗೆ ಸೇದಿಸಿ ಖುಷಿ ಪಡುತ್ತೇನೆ!!!
ಮನಸಿಗೆ ನಾಟುವ ಮನದಾಳದ ಮಾತಿನಂತಿದೆ ನಿಮ್ಮ ಬರಹ.... ಏನಾಗ್ತಿದೆ ಅನ್ನೋದ್ರಲ್ಲಿ ಅದೇನೆಂದು ಗೊತ್ತಾಗಿ ಹೋಯ್ತು....
ಕಾಮೆಂಟ್ ಪೋಸ್ಟ್ ಮಾಡಿ