ಭಾನುವಾರ, ಮಾರ್ಚ್ 20, 2011

ಗೆಳತಿಯೊಬ್ಬಳ ಒಂಟಿ ಮಾತು

ರಾತ್ರಿಯಾಗುತ್ತದೆ. ಕಂಪ್ಯೂಟರಿನ ಪರದೆಯ ಹಾಗೆ ಮನಸ್ಸಲ್ಲಿ ಬಣ್ಣ ಬಣ್ಣದ ವಾಲ್  ಪೇಪರುಗಳು . ಅದರಲ್ಲಿರುವುದು ಅವನ ಚಿತ್ರವೇ? ಗೊತ್ತಿಲ್ಲ. ನೆನಪಿನ ಕೊಂಡಿಗೆ ಅವನ ಹಂಗ್ಯಾಕೆ ಎಂದು ಅನೇಕ ಬಾರಿ ಅಂದುಕೊಂಡದ್ದಿದೆ. ಆದರೆ ಅವನ ಹಂಗಿಲ್ಲದೇ ನೆನಪಾದರೂ ಎಲ್ಲಿ ಮುಂದೆ ಸಾಗುತ್ತದೆ. ಕೃಷ್ಣನನ್ನು ಕುರುಕ್ಷೇತ್ರ ಯುದ್ಧದ ನಡುವೆಯೂ ಪೊರೆದದ್ದು ರಾಧೆಯ ನೆನಪಲ್ಲದೆ ಮತ್ತಿನ್ನೇನು?

ಹೇಳಬೇಕು ಅಂದುಕೊಂಡಿದ್ದೆ ಅವನಿಗೆ ಹಲವಾರು ಬಾರಿ. ಮೊನ್ನೆ ಮೊನ್ನೆ ಮದುವೆ ಮನೆಯಲ್ಲಿ ಸಿಕ್ಕಾಗಲೂ. ಅಳುಕು. ತಿರಸ್ಕರಿಸುತ್ತಾನೆ ಎನ್ನುವುದಕ್ಕಲ್ಲ. ತಿರಸ್ಕರಿಸಿದರೂ ಸಹಿಸಿಕೊಂಡೇನು. ಆದರೆ ಹೀಗೆ ಬರೀ ಶಬ್ದಗಳಲ್ಲಿ ನನ್ನ ಇಷ್ಟಾನಿಷ್ಟಗಳನ್ನು ಹೇಳುತ್ತಾ ಹೋದ ಹಾಗೆ ನನ್ನೆಲ್ಲಾ ಭಾವನೆಗಳು ಬಿಜಿನೆಸ್ ಪ್ರಪೋಜಲ್ನಂತೆ ಕಾಣುತ್ತವೆ. ನನಗೆ ಅವನ ಬಗ್ಗೆ ಇರುವ ಭಾವನೆಗಳನ್ನೆಲ್ಲಾ ಹೇಳಿಕೊಂಡರೆ ನನ್ನಲ್ಲೇನು ಉಳಿಯಿತು ಬಚ್ಚಿಟ್ಟುಕೊಳ್ಳುವುದಕ್ಕೆ. ಬಚ್ಚಿಟ್ಟುಕೊಳ್ಳುವುದರಲ್ಲೂ ಸುರೀಳಿತ ಸುಖವಿದೆ ಎನ್ನುವುದೂ ಗೊತ್ತಾಗಿದ್ದೂ ಇವತ್ತೇ. ಹಿಂದೆಲ್ಲಾ ಕಾಕಿ ಹಪ್ಪಳವೋ, ಸಂಡಿಗೆಯೋ ಕಾಯಲು ಹೇಳಿದಾಗ ಕದ್ದುಕೊಂಡು ಹೋಗಿ ತಿನ್ನುವಾಗ ಆಗುತ್ತಿದ್ದ ಭಯದ ಚೂರುಪಾರೂ ಈಗಲೂ ಆಗುತ್ತದೆ. ಹೇಳಿಬಿಟ್ಟರೆ ಆ ಭಯ ಇಮ್ಮಡಿಯಾಗಬಹುದು.

ಆತ ಹಾಗೆಯೇ ಇರಲಿ. ಆತನಿಗೆ ನಾನೂ ಆತನನ್ನು ಇಷ್ಟಪಡುತ್ತಿದ್ದೇನೆ ಎನ್ನುವ ಸಣ್ಣ ಅನುಮಾನವಿದೆ. ಅದು ಹಾಗೆಯೇ ಇರಲಿ. ಯಾಕಾದರೂ ಹೇಳಬೇಕು. ಹೀಗೇ ಬದುಕಬಹುದಲ್ಲ. ಹೇಳಿಕೊಳ್ಳದೇ ಇರುವುದರಲ್ಲಿ ಇರುವ ಸುಖ ಹೇಳಿಕೊಳ್ಳುವುದರಲ್ಲೇನಿದೆ? ಹೇಳಿದರೆ ಹೇಳಿಕೆ ಬೇಡಿಕೆಯಾಗುತ್ತದೆ. ಬೇಡಿಕೆ ಹುಕುಂ ಆಗುತ್ತದೆ. ಮತ್ತೆ ಬರುವುದು ಬಗರ್ ಹುಕುಂ...ಮತ್ತೆ ಹೂಂ ಅನ್ನುವಲ್ಲೆಲ್ಲಾ ಊಹೂಂ ಎನ್ನುತ್ತಾ ಕೂರಬೇಕು..ಊಹೂಂಗಳೆಲ್ಲಾ ಹೂಂಗಳಾಗುತ್ತವೆ. ಇಷ್ಟ ಬಲು ಕಷ್ಟ.

ಮೊಬೈಲಿಗೆ ಕಾಲ್ ಮಾಡಿದಾಗಲೆಲ್ಲಾ ಸಾವಿರಕ್ಕಾಗುವಷ್ಟು ಮಾತು ಆತನದ್ದು. ಎದುರು ಸಿಕ್ಕಾಗ ಮಾತೇ ಆಡುವುದಿಲ್ಲ. ನನ್ನ ಕಣ್ಣನ್ನೇ ನೋಡುತ್ತಾ ಆಹ್ಲಾದಕರ ದೃಶ್ಯವೊಂದನ್ನು ಮನದಲ್ಲಿ ಸಂಯೋಜಿಸುತ್ತಿರಬೇಕು. ಆತನ ತುಟಿಯಂಚು ನಕ್ಕಾಗ ಉಬ್ಬುತ್ತಾ ಉದ್ದವಾಗುವುದನ್ನೇ ನೋಡುವುದೇ ಒಂದು ಆನಂದ. ಮೊನ್ನೆ ಭೇಟಿಯಾಗಿದ್ದಾಗ ಆತ ಮಾಡಿದ್ದನ್ನು ನೋಡಬೇಕಿತ್ತು. ನಾನು ನಿತ್ಯದ ಅಪೂರ್ವ ಫಳಿಗೆಯ ದಿನಚರಿ ಒಪ್ಪಿಸುತ್ತಿದ್ದಾಗಲೇ ಆತ ಹಾಗೇ ಸುಮ್ಮನೆ ನನ್ನ ಕೈ ಹಿಡಿದುಕೊಂಡ. ನೈಲ್ ಪಾಲಿಶ್ ಹಾಕದೇ ಇದ್ದ ಉಗುರುಗಳನ್ನು ಮುಟ್ಟುತ್ತಾ ಸಾಗಿದ. ಸ್ಪರ್ಶದಲ್ಲೊಂದು ಪುಳಕವಿದೆ, ಉನ್ಮಾದವಿದೆ ಎಂದು ಗೊತ್ತಾದ ದಿನವದು. ಪ್ರತೀ ಸಲ ಸಿಕ್ಕಾಗ ಆತ ಇನ್ಯಾವುದೋ ರೀತಿಯಲ್ಲಿ ಸ್ಪರ್ಶಿಸುತ್ತಾ ಭೇಟಿಗಳನ್ನು ಮತ್ತಷ್ಟು ಬೇಗ ಸಾಧ್ಯವಾಗಲಿ ಎನ್ನುವಂತೆ ಮಾಡುತ್ತಾನೆ. ಹಿಂದೊಮ್ಮೆ ಕುತ್ತಿಗೆಯ ಹಿಂದಿನ ಬೆನ್ನ ಭಾಗವನ್ನಷ್ಟೇ ಸ್ಪರ್ಶಿಸಿ ನಗುತ್ತಾ ಎದ್ದುಹೋಗಿದ್ದ. ಮತ್ತೆ ಆಸಾಮಿಯದ್ದೂ ವಾರವಾದರೂ ಪತ್ತೆಯಿಲ್ಲ. ಎದುರು ಸಿಕ್ಕಾಗ ಮಾತಿಗಿಂತ ಆತನ ಮೌನದ ಜೊತೆಗಿನ ಇಂತಹ ತುಂಟತನಗಳೇ ನನ್ನನ್ನು ಬೆಳೆಸುತ್ತವೆ. ಸಣ್ಣ ಹೆಜ್ಜೆ, ಸಣ್ಣ ವಿಷಯ ಎಷ್ಟು ಖುಷಿಯ ಕ್ಷಣಗಳಲ್ಲಾ ಎನಿಸುತ್ತದೆ.

"ತಿಂಗಳ ರಾತ್ರಿ ತೊರೆಯ ಸಮೀಪ, ಉರಿದಿದೆ ಯಾವುದೋ ದೀಪ" ಎನ್ನುವ ಕವಿತೆಯ ಸಾಲು ಆತನಿಗೆ ಬಹಳ ಇಷ್ಟ..ಆ ಸಾಲುಗಳನ್ನು ಕೇಳುತ್ತಿದ್ದ ಹಾಗೇ ಆತ ಮೈ ಮರೆಯುತ್ತಾನೆ. ಉಲ್ಲಾಸದಿಂದ ಬದುಕಿನ ಬಗ್ಗೆ ಹೊಸ ಕನಸುಗಳನ್ನು ಹೆಣೆದುಕೊಳ್ಳುತ್ತಾನೆ. ಅಂತಹ ನೆನಪುಗಳನ್ನು ಮತ್ತೆ ಮತ್ತೆ ಕಣ್ತುಂಬಿಕೊಳ್ಳಲು ಸಾಧ್ಯವಾಗುವ ಸಮಯ, ನಿಮಿಷಗಳಲ್ಲೇ ಜಗತ್ತು ನಿಂತು ಬಿಡಬೇಕು ಅಂತ ಅನಿಸುತ್ತದಂತೆ ಆತನಿಗೆ. ಯಾಕೆ ಅನ್ನೋದು ಯಥಾ ಪ್ರಕಾರ ನನ್ನ ಪ್ರಶ್ನೆ. ಪ್ರಶ್ನೆಗಳನ್ನು ಹೆಣಿಯುತ್ತಾ ಉತ್ತರಗಳನ್ನೇ ಬಯಸುತ್ತಾ ಕೂತರೆ ನೆಮ್ಮದಿ ಸುಡುತ್ತದೆ ಎಂದ...ಅರ್ಥವಾಗಲಿಲ್ಲ...ಅವನಿಗದು ಅರ್ಥವಾಗಿ ನೀನು ಉದ್ಧಾರವಾದ ಹಾಗೇ ಅಂತ ರಕ್ಕಸ ನಗೆ ಬೀರಿದ...ಬೇಕಿತ್ತಾ ನಂಗೆ..ನಿಗೂಢವಾಗಿದ್ದಾಗಲೇ ವಿಸ್ಮಯ ಉಳಿದುಕೊಳ್ಳೋದು. ಪ್ರೀತಿ ಅರಳೋ ಸಮಯದಲ್ಲಿ ಅದೇ ಪಂಚಾಮೃತ. ಅದವನಿಗೆ ಚೆನ್ನಾಗಿ ಗೊತ್ತಿತ್ತು..

ಭಾವೋದ್ವೇಗದ ಚಕ್ರವ್ಯೂಹದಲ್ಲಿ ಸಿಕ್ಕುಬಿದ್ದವನಂತೆ ಮೆಸೇಜು ಮಾಡುತ್ತಿದ್ದ ಪ್ರತೀ ದಿನ..ದಿನಗಟ್ಲೆ, ವಾರಗಟ್ಲೆ..ಎಲ್ಲೋ ಮೆಸೇಜು ಮಾಡೋದು ತಪ್ಪಿಸಿದ ಅಂತಂದ್ರೆ ಮುಗೀತು ಕತೆ...ಮತ್ತೆ ವಾರಗಟ್ಲೆ ಪರಿಚಯವೇ ಇಲ್ಲದವರಂತೆ ಇದ್ದು ಬಿಡುತ್ತಿದ್ದ...ಮೊದ ಮೊದಲು ಜಗಳ ಕಾಯುತ್ತಿದ್ದೆ. ನಿನ್ನ ನೆನಪು ಕಾಡುತ್ತದೆ, ನಿನ್ನ ಮುಖ ಕಣ್ಣೆದುರಿನಿಂದ ಜಾರುವುದಿಲ್ಲ. ಕಡೇ ಪಕ್ಷ ಹಾಯ್ ಅಂತಾದ್ರೂ ಮೆಸೇಜು ಮಾಡೋ ಅಂದಿದ್ದಕ್ಕೆ "ಎಲ್ಲವೂ ಹಚ್ಚಿಕೊಂಡಾಗ ಮಾತ್ರ ಹುಚ್ಚಾಗುತ್ತದೆ. ಹುಚ್ಚು ಯಾವತ್ತೂ ಆರೋಗ್ಯಕರವಾಗಿರಬೇಕು" ಅಂತ ಹೇಳಿ ಪಕ್ಕದ ಗಾಡಿಯಲ್ಲಿ ಕೆಂಡದ ಮಧ್ಯೆ ಕಾಯುತ್ತಿದ್ದ ಜೋಳದ ಬೆನ್ನತ್ತಿ ಹೋಗಿದ್ದ..

ಈಗಲೂ ನೆನಪಿದೆ.
ಅವನಿಗೆ ಆ ತಿಂಗಳು ಮೊದಲ ಸಂಬ್ಳ..ವಿಪರೀತ ಖುಷಿ ಖುಷಿಯಾಗಿದ್ದ..ಮೊದಲ ಸಂಬಳ, ಮೊದಲ ತುತ್ತು, ಮೊದಲ ಸ್ವರ ಎಲ್ಲವೂ ಅಮೂಲ್ಯ ಎನ್ನುವಾಗಲೇ ನಾನು ತಮಾಷೆಗೆ ತಟಕ್ಕನೆ ಮೊದಲ ಮುತ್ತು? ಎನ್ನುವುದನ್ನು ಮುಗ್ಧವಾಗಿ ಪ್ರಶ್ನಾರ್ಥಕವಾಗಿ ಕೇಳಿ ಮರುಕ್ಷಣವೇ ಪ್ರಬುದ್ಧೆಯಂತೆ ನಾಲಿಗೆ ಕಚ್ಚಿಕೊಂಡೆ.. ಆತನಿಗೆ ಅದ್ಯಾವ ಸೂಚನೆಯನ್ನು ನೀಡಿತೋ...ಮುಖವನ್ನು ಹತ್ತಿರ ಹತ್ತಿರಕ್ಕೆ ತಂದ...ಇನ್ನೇನು ಮುತ್ತುಕೊಟ್ಟೇ ಬಿಡುತ್ತಾನೆ....

....

....

ಇನ್ನೂ ಕಾಯುತ್ತಿದ್ದೇನೆ.

3 ಕಾಮೆಂಟ್‌ಗಳು:

Narayan Bhat ಹೇಳಿದರು...

ತುಂಬಾ ಇಷ್ಟವಾಯಿತು.

minchulli ಹೇಳಿದರು...

Karthik, neenu ishtu chendage bareyutti antha ivathe gothagiddu.. bahalashtannu onde gukkinali odi mugiside.. gud luk to all ventures.

dheeru ಹೇಳಿದರು...

good one....odisikondu hoguttade.....keep it up..