ಬುಧವಾರ, ಸೆಪ್ಟೆಂಬರ್ 30, 2009

ಮನಸಾರೆ ಪರವಾಗಿಲ್ಲ : ಭಟ್ಟರ ನಿಜವಾದ ಸಿನಿಮಾ ಇನ್ನೂ ಬಂದಿಲ್ಲ !

ಹೊರಗಿರುವ ಜಗತ್ತಿಗಿಂತ ಜೈಲಿನ ಒಳಗಿರುವ ಜಗತ್ತೇ ಉಲ್ಲಾಸದಾಯಕವಾಗಿದೆ ಅಂತನ್ನಿಸುತ್ತದೆ ಆತನಿಗೆ.

ಸದ್ಯಕ್ಕಿರುವ ಜಗತ್ತಿನ ವೇಗಕ್ಕೆ ತನಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮನವರಿಕೆಯ ನಡುವೆ ತಾನು ಜೈಲಿನಿಂದ ಹೊರಬಂದು ಕಳೆದುಕೊಂಡಿರುವ ಸ್ವಾತಂತ್ರ್ಯದ ಮನವರಿಕೆಯಾಗುತ್ತದೆ. ಜೀವಮಾನದ ಬಹುತೇಕ ವರ್ಷಗಳನ್ನು ಜೈಲಿನಲ್ಲಿ ಕಳೆದ ಆ ಸುಕ್ಕು ಮುಖದ ಮುದುಕನಿಗೆ ಹಾಗನ್ನಿಸುವುದರ ಹಿಂದೆ ಬದುಕಿನ ಆಧ್ಯಾತ್ಮವಿದೆ. ತಾನೇ ಕಂಡುಕೊಂಡ ತಾತ್ವಿಕತೆಯಿದೆ. ಜೈಲಿನ ಒಳಗೊಂದು ಆಪ್ತ ವಾತಾವರಣವನ್ನು ಸೃಷ್ಥಿಸಿಕೊಂಡ ಆತನಿಗೆ ಹೊರಜಗತ್ತು ಉಸಿರು ಕಟ್ಟಿಸುತ್ತದೆ. ಅಸ್ವಸ್ಥನಾಗುವಂತೆ ಮಾಡುತ್ತದೆ.ಅದಕ್ಕೇ ಇರಬೇಕು ಆ ಸುಕ್ಕು ಮುಖದ ಮುಸ್ಸಂಜೆಯ ಮುದುಕ, ಹೊರ ಜಗತ್ತಿನಲ್ಲಿ ತಾನು ವಾಸಿಸುವ ಕೋಣೆಯಲ್ಲೇ ನೇಣು ಹಾಕಿಕೊಳ್ಳುತ್ತಾನೆ..

ಆತನ ಹೆಸರು ಬ್ರೂಕ್.


ರೆಡ್ಡಿಂಗ್ನದ್ದೂ ಇದೇ ಸ್ಥಿತಿ. ಆತ ಬಿಡುಗಡೆಯಾಗಿ ಜೈಲಿನಿಂದ ಹೊರಕ್ಕೆ ಬಂದಾಗಲೂ ಆತನಿಗೆ ಹೊರಜಗತ್ತಿನಲ್ಲಿ ವಾಸಿಸಲು ಸಿಗುವುದು ಅದೇ ಬ್ರೂಕ್ ವಾಸ
ಕ್ಕಿದ್ದ ರೂಮು. ಆತನಿಗೂ ಹೊರಜಗತ್ತಿನ ಸತ್ತುಹೋದ ಸುದೀರ್ಘ ಹಗಲುಗಳು ಅಕ್ಷರಶಃ ನರಳಾಡಿಸುತ್ತವೆ.

1994ರಲ್ಲಿ ತೆರೆಕಂಡ "ಶ್ವಶಾಂಕ್ ರಿಡಂಪ್ಶನ್" ಸಿನಿಮಾದಲ್ಲಿ ಬರುವ ಅತಿ ಮುಖ್ಯ ಎಳೆಯಿದು.

"ಮನಸಾರೆ" ನೋಡಿದಾಗ ಇದೇ ಎಳೆ ಭಿನ್ನ ಹಿನ್ನೆಲೆ ಪರಿಸರದೊಂದಿಗೆ ಶಂಕ್ರ
ಪ್ಪ, ಡಾಲರ್ ಹಾಗೂ ನಾಯಕ ಮನೋಹರನ ಮೂಲಕ ಹೆಣೆದಂತೆ ಕಾಣುತ್ತದೆ. ನೇರಾ ನೇರ ಅದೇ ಸಿನಿಮಾದ ಸನ್ನಿವೇಶಗಳಿಲ್ಲದಿದ್ದರೂ, ಯೋಚನಾ ಲಹರಿ "ಶ್ವಶಾಂಕ್ ರಿಡಂಪ್ಶನ್"ನೊಂದಿಗೆ ತಾಳೆಯಾಗುತ್ತದೆ. ಇಷ್ಟಕ್ಕೂ ಮನಸಾರೆ ಆ ಸಿನಿಮಾದ ರಿಮೇಕೂ ಅಲ್ಲ, ಭಟ್ಟಿ ಇಳಿಸುವಿಕೆಯೂ ಅಲ್ಲ.(ಆಂಟೆನ್ ಚೆಕಾಫ್ ನ ವಾರ್ಡ್ ನಂ.6 ಕತೆ ಮನಸಾರೆಗೆ ಪ್ರೇರಣೆ ಎಂದು ಭಟ್ಟರು ಹಿಂದೆಲ್ಲೋ ಹೇಳಿದ ನೆನಪು.)

ಯೋಗರಾಜ ಭಟ್ಟರ ಸಿನಿಮಾ ಅಂದರೆ ಸಾಕು ಸದ್ಯಕ್ಕಂತೂ ಎಲ್ಲರದ್ದೂ ಕಾತರದ ಕಣ್ಣು. ಮನಸಾರೆಯನ್ನು ಮಾಮೂಲಿ ಪ್ರೇಮ ಕತೆಯೇ. ಅದರ ಜೊತೆಗೆ "ಯಾರ ತಲೆ ರಿಪೇರಿ ಮಾಡಕ್ಕಗಲ್ವೋ ಅವ್ರು ಹೊರಗಿರ್ತಾರೆ..ರಿಪೇರಿಯಾಗೋ ಮಂದಿ ಈ ಹುಚ್ಚಾಸ್ಪತ್ರೇಲಿ ಇರ್ತಾರೆ" ಎನ್ನುವ ಶಂಕ್ರಪ್ಪನ ಮಾತಿದೆ. ಅದೇ ಸಿನಿಮಾದ ಮೂಲ. ಮುಂಗಾರು ಮಳೆ, ಗಾಳಿಪಟದಂತೆ ಇಲ್ಲೂ ನಾಯಕ ಪಟಪಟ ಮಾತಾಡುತ್ತಾನೆ. ಅವನ ಮಾತಿಗೆ ಮರುಳಾಗುವ ನಾಯಕಿ ಇದ್ದಾಳೆ. ಚೆಂದದ ಸಾಹಿತ್ಯವಿರುವ ಹಾಡುಗಳಿವೆ. ಸತ್ಯ ಹೆಗಡೆಯ ಕ್ಯಾಮೆರಾ ಕಣ್ಣಿದೆ. ಒಂದು ಯಶಸ್ವಿ ವ್ಯಾಪಾರಿ ಸಿನಿಮಾಕ್ಕೆ ಬೇಕಾದ ಎಲ್ಲಾ ಅಂಶಗಳು ಇಲ್ಲಿವೆ.


ಆದರೂ ಭಟ್ಟರು "ಮನಸಾರೆ"ಯಲ್ಲಿ ಮುಂಗಾರು ಮಳೆ, ಗಾಳಿಪಟದ ಏಕತಾನತೆಯನ್ನು ಮೀರುವ ಪ್ರಯತ್ನವನ್ನು ಮಾಡಿದ್ದಾರೆ. ಪ್ರೇಮ ಕತೆಯೊಳಗೇ " ಕಿತ್ತೋಗಿರೋ ಹವಾಯಿ ಚಪ್ಪಲಿ ತರಹಾ ಆಗೋಯ್ತು, ಬದುಕು" ಎನ್ನುತ್ತಾ ಅಂತರ್ಮುಖಿಯಾಗುತ್ತಾರೆ...ಈ ಅಂತರ್ಮುಖಿ ನಡೆ ಅವರ ಹಿಂದಿನ ಸಿನಿಮಾಗಳಲ್ಲಿ ಬದುಕಿನ ಅಸಾಧ್ಯ ಹುಚ್ಚುತನಗಳನ್ನು ತೋರಿಸುವ ಭರದಲ್ಲಿ ಮರೆಯಲ್ಲಿತ್ತು...ಬದುಕಿನ ಸಾಮಾನ್ಯ ಅಂಶಗಳಲ್ಲೂ ಮನೆಮಾಡಿರುವ ತಾತ್ವಿಕತೆ ಬಗ್ಗೆ ಅವರಿಗೆ ಹೆಚ್ಚು ಮೋಹ. ಇದೇ ಮೋಹ ಅವರನ್ನು ಅಂತರ್ಮುಖಿಯಾಗುವಂತೆ ಮಾಡುತ್ತದೆ..

ಯೋಗರಾಜ್ ಭಟ್ ನಿರ್ದೇಶನದ ಒಳ್ಳೆಯ ಚಿತ್ರ ಯಾವುದು?....ಸದ್ಯಕ್ಕೆ ನನ್ನ ಉತ್ತರ ಒಂದೇ-"ಮಣಿ". ತನ್ನ ಮೊದಲ ಪ್ರಯತ್ನದಲ್ಲಿ ಅವರು ಕತೆಯನ್ನು ನಿಭಾಯಿಸಿದ ರೀತಿ, ಪಾತ್ರಗಳನ್ನು ತೆರೆಯ ಮೇಲೆ ತೋರಿಸಿದ ರೀತಿ ಎಲ್ಲವೂ ಗಮನ ಸೆಳೆದಿದ್ದವು. ಮಣಿಯ ನಾಯಕನಿಗೆ ನಮ್ಮೊಂದಿಗೆ ಅನೇಕ ಸಾಮ್ಯತೆಗಳಿದ್ದವು. ಮುಂಗಾರು ಮಳೆಯ ಪ್ರೀತುನಂತೆ, ಗಾಳಿಪಟದ ಗಣಿಯಂತೆ, ರಂಗ ಎಸ್ಸೆಸ್ಸೆಲ್ಸಿಯ ರಂಗನಂತೆ ಆತನಿಗೆ ವಿಪರೀತ ಮಾತಿನ ಚಟವಿರಲಿಲ್ಲ. ಸೈಕಲ್ ಜೊತೆಗೆ ನಡೆಯೋದು, ಸಮುದ್ರದ ದಂಡೆಯಲ್ಲಿ ಪರಿತಪಿಸಿದವನಂತೆ ಓಡುವುದರಲ್ಲೇ ಅವನಿಗೆ ಸುಖ. ಪ್ರೀತಿಯ ನಿವೇದನೆ ಆತನಿಗೆ ನಿಜಕ್ಕೂ ಬಿಸಿ ಕೆಂಡ. ಭಟ್ಟರ ಉಳಿದ ಸಿನಿಮಾಗಳ ನಾಯಕನಂತೆ "ನಿಮ್ಮೇಲೆ ಯದ್ವಾ-ತದ್ವಾ ಲವ್ವಾಗ್ಬಿಟ್ಟಿದೆ" ಅಂತ ಭೇಟಿಯಾದ ಕೆಲವೇ ದಿನಗಳಲ್ಲಿ ಉಸುರುತ್ತಿರಲಿಲ್ಲ ಆತ. ನಾಯಕನ ಮೌನವೇ ಪ್ರೇಕ್ಷಕನನ್ನು ಅಸಾಧ್ಯವಾಗಿ ಕಾಡಿಸುವ ಶಕ್ತಿ ಹೊಂದಿತ್ತು. ಮನೆಮಂದಿ ಕೂತು ನೋಡುವಾಗ ಮುಜುಗರವಾಗುವ ಕೆಲವಾರು ಡೈಲಾಗ್ಗಳಿವೆ ಅನ್ನುವುದನ್ನು ಬಿಟ್ಟರೆ ಸಿನಿಮಾವೇನೋ ಚೆನ್ನಾಗಿತ್ತು. ಅವತ್ತು "ಮಣಿ" ಯಶಸ್ವಿಯಾಗಿದ್ದರೆ "ಮುಂಗಾರು ಮಳೆ" ಖಂಡಿತಾ ಬರುತ್ತಿರಲಿಲ್ಲ. ಆ ಸಿನಿಮಾ ಗೆದ್ದಿದ್ದರೆ ಭಟ್ಟರು ಯಾವ ರೀತಿಯ ಸಿನಿಮಾ ಮಾಡುತ್ತಿದ್ದರು ಎನ್ನುವ ಕೂತೂಹಲ ನನಗಿವತ್ತಿಗೂ ಇದೆ.

ನಿರ್ದೇಶನನೊಬ್ಬನ ಸಿನಿಮಾವೊಂದರ ಯಶಸ್ಸು, ಆತನ ಮುಂದಿನ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಕಾತರವನ್ನು ಹುಟ್ಟುಹಾಕುತ್ತದೆ. ಜೊತೆಗೆ ಆತ ಪ್ರತೀ ಚಿತ್ರದಲ್ಲೂ ಬೆಳೆಯುತ್ತಾ ಹೋಗುವ ಪ್ರಕ್ರಿಯೆಯನ್ನು ನಾವು ಕಾಣಬಹುದು. ಅದು ಕತೆ ಹೇಳುವ ಶೈಲಿ ಇರಬಹುದು, ಸನ್ನಿವೇಶಗಳಿಗೆ ಬಳಸುವ ಚಿತ್ರಿಕೆಗಳು, ಅವುಗಳ ವಿನ್ಯಾಸ, ಸನ್ನಿವೇಶವನ್ನು ದೃಶ್ಯವಾಗಿ ಕಟ್ಟುವ ಬಗೆ ಹೀಗೆ ಎಲ್ಲಾ ಹಂತದಲ್ಲೂ ಬೆಳವಣಿಗೆಯನ್ನು ಪ್ರೇಕ್ಷಕ ಕಂಡುಕೊಳ್ಳುತ್ತಾನೆ...."ಮುಂಗಾರು ಮಳೆ"ಯ ಯಶಸ್ಸಿನ ನಂತರ "ಗಾಳಿಪಟ" ಬಂದಾಗ ಭಟ್ಟರು ತಮ್ಮದೇ ಫಾರ್ಮುಲಾಗಳನ್ನು ಮೀರಿ ಬೆಳೆಯುತ್ತಿಲ್ಲ ಅಂತ ಅನ್ನಿಸಿದ್ದಂತೂ ನಿಜ. ಅದಾಗಲೇ ಭಟ್ಟರು ಸಿನಿಮಾ ನಿರ್ಮಾಣ ಪ್ರಕ್ರಿಯೆಯಲ್ಲಿ ತಮ್ಮದೇ ಆದ "ಕಂಫರ್ಟ್ ಜೋನ್" ಒಂದನ್ನು ನಿರ್ಮಿಸಿಕೊಂಡಂತಿತ್ತು. ಅದನ್ನು ಮೀರುವ ಹಂತದ ಪ್ರಾರಂಭವಾಗಿ "ಮನಸಾರೆ" ಕಾಣಿಸುತ್ತದೆ.


ಅವರ ಹಿಂದಿನ ಸಿನಿಮಾಗಳಲ್ಲಿ ನಾಯಕನೊಂದಿಗೆ ಪೈಪೋಟಿಗೆ ಬಿದ್ದು ವಟಗುಟ್ಟುತ್ತಿದ್ದ ನಾಯಕಿ ಇಲ್ಲಿಲ್ಲ. ಸಿನಿಮಾದ ಮೊದಲಾರ್ಧದಲ್ಲಿ ಆಕೆಯ ಪ್ರವೇಶವೇ ಬಹಳ ತಡವಾಗಿ ಆಗುತ್ತದೆ. ಜೊತೆಗೆ ಆಕೆ ಮಾತನಾಡುವ ಮಾತುಗಳು ಸಹ ಎಣಿಸಬಹುದಷ್ಟಿವೆ. ಶಂಕರಪ್ಪನ ಮೂಲಕ ಧಾರವಾಡ ಕನ್ನಡವನ್ನು ಸತ್ವಪೂರ್ಣವಾಗಿ ಹೇಳಿಸಿದ್ದಾರೆ ಯೋಗರಾಜ್ ಭಟ್. ಬಹುತೇಕ ವ್ಯಾಪಾರಿ ಚಿತ್ರಗಳಲ್ಲಿ ಮಂಗ್ಳೂರು, ಉತ್ತರ ಕರ್ನಾಟಕದ ಕನ್ನಡ ಗೇಲಿ ಮಾಡಲು ಬಳಕೆಯಾದದ್ದೇ ಹೆಚ್ಚು. "ಎಂಥದು ಮಾರ್ರೆ", "ಲೇ ಮಂಗ್ಯಾ" ಗಿಂತ ಮುಂದೆ ಮುಂದೆ ಹೋದ ಉದಾಹರಣೆ ಇಲ್ಲ.
"ಹಾಳಾಗ್ ಹೋಗು. ನಡುರಾತ್ರೀಲಿ ದೆವ್ ಡ್ಯಾನ್ಸ್ ಮಾಡೂ ವೇಳೆ ಈ ಮಂಗ್ಯಾನಾ ಲವ್ ಸ್ಟೋರಿ ಕೇಳಿ ಬರೂ ಉಚ್ವಿ ಬರ್ಲಂಗದಾತು. ಈ ಕಡೀ ಸಲೀಮ. ಆ ಕಡೀ ಅನಾರ್ಕಲಿ. ಮುಘಲೇ ಆಜಂ ಸೆಕೆಂಡ್ ಶೋ ಇಂಟರ್ವಲ್ ಬಿಟ್ಟಂಗಾತು" ಎಂದು ಶಂಕ್ರಪ್ಪ ಪಾತ್ರಧಾರಿ ರಾಜು ತಾಳಿಕೋಟೆ ಸಂ
ಭಾಷಣೆ ಹೇಳುವಾಗ ಥಿಯೇಟರ್ ಭರ್ತಿ ಸೀಟಿ. ಇತ್ತೀಚಿನ ಕನ್ನಡ ಸಿನಿಮಾಗಳಲ್ಲಿ ವಿಪರೀತವೆಂಬಷ್ಟು ಒಂದೇ ಶೇಡ್ ಇರುವ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಪ್ರತಿಭಾವಂತ ಪೋಷಕ ನಟ ರಂಗಾಯಣ ರಘು ಅವರನ್ನು ನೋಡಿ ಸುಸ್ತಾಗಿರುವವರಿಗೆ ರಾಜು ತಾಳಿಕೋಟೆ ಧಾರವಾಡ ಪೇಡಾದಷ್ಟೇ ಸಿಹಿ. ಸಂಭಾಷಣೆಯಲ್ಲಿ ಭಟ್ಟರಿಗೆ ಫುಲ್ ಮಾರ್ಕ್ಸ್. ಅದೇ ಕಾಲೆಳೆತ, ಚ್ಯಾಷ್ಟಿ ಎಲ್ಲವೂ ಇದೆ.

ಬಟ್ಟೆ ಕಂಡ್ರೆ ಮಾರುದೂರ ಓಡುವ ಪಾತ್ರವೊಂದಿದೆ. ಅವನ ಒದ್ದಾಟ, ಗುದ್ದಾಟನ್ನು ತೆರೆ ಮೇಲೆ ನೋಡಿಯೇ ಆನಂದಿಸಬೇಕು.. ಆತ "ಬಟ್ಟೆ ಬೇಡ" ಎನ್ನುತ್ತಾ ಓಡಾಡುತ್ತಿದ್ದರೆ ನಗು ನಡೆಯುವುದಿಲ್ಲ. ನಾಯಕನ ಚಿರವಿರಹಿ ಗೆಳೆಯನ ಪಾತ್ರಕ್ಕೆ "ಅಯ್ಯೋ...ಅಯ್ಯೋ" ಎನ್ನುವ ಕೋರಸ್ ಕೊಡುತ್ತಾ ಭರಪೂರ್ತಿ ನಗಿಸುತ್ತಾರೆ ಭಟ್ಟರು.

ಸತ್ಯ ಹೆಗಡೆಯ ಕ್ಯಾಮರಾ ಕಣ್ಣಿಗೊಂದು ನಮಸ್ಕಾರ ಹೇಳಲೇಬೇಕು. "ದುನಿಯಾ", "ಇಂತಿ ನಿನ್ನ ಪ್ರೀತಿಯ.." ಸಿನಿಮಾದ ಚಿತ್ರಿಕೆಗಳಲ್ಲಿ ಬೆಳಕಿನ ಬಳಕೆಯ ಪ್ರಮಾಣ, ಅದನ್ನು ಕಾರ್ಯಗತಗೊಳಿಸುವಲ್ಲಿ ಅವರ ಚಾಕಚಕ್ಯತೆ ಎದ್ದುಕಾಣುತ್ತಿತ್ತು. "ಮನಸಾರೆ"ಯಲ್ಲೂ ಕೆಲವೊಂದು ಕಡೆ, ವಿಶೇಷವಾಗಿ ಹಾಡುಗಳಲ್ಲಿ ಸತ್ಯ ಹೆಗಡೆಯ ಕ್ರಿಯಾಶೀಲ ಮನಸ್ಸು ಹೆಚ್ಚಿದೆ. ಪವನ್ ಕುಮಾರ್ ಬರೆದ ಚಿತ್ರಕತೆ ದ್ವಿತೀಯಾರ್ಧದಲ್ಲಿ ಮತ್ತಷ್ಟು ಬಿಗಿಯಾಗಬೇಕಿತ್ತು.


ದಿಗಂತ್ ಅಭಿನಯ ಸುಮಾರು. ಮೊದಲ ಬಾರಿಗೆ ಸೋಲೋ ಹೀರೋ ಆಗುತ್ತಿರುವ ಆತಂಕ ಅವರ ಮುಖದಲ್ಲಿ ಕಾಣುತ್ತದೆ!!! ದ್ವಿತೀಯಾರ್ಧದಲ್ಲಿ ತನ್ನ ಅಭಿನಯದ ಮೂಲಕ ಇಡೀ ಕಥೆಯ ಗಂಭೀರತೆಯನ್ನು ಮುಟ್ಟಿಸುವ ಜವಾಬ್ದಾರಿಯನ್ನು ಆತ ಸರಿಯಾಗಿ ನಿರ್ವಹಿಸುವುದಿಲ್ಲ. ಕತ್ರಿನಾ ಕೈಫ್ ಅಭಿನಯಿಸಬೇಕು ಎಂದು ಹೇಳುವುದು ಹಳಸಲು ಸ್ಟೇಟ್ಮೆಂಟು. ಐಂದ್ರಿತಾ ರೇಗೂ ಇದು ಅನ್ವಯವಾಗುತ್ತದೆ..ತೆರೆ ಮೇಲಿರುವ ಮುದ್ದಾದ ದಸರಾ ಗೊಂಬೆಗಳವು...ನೋಡೋದಕ್ಕಷ್ಟೇ ಚೆಂದ!

ಜಯಂತ್ ಕಾಯ್ಕಿಣಿ ಪ್ರೇಮ ನಿವೇದನೆಗಳನ್ನೇ ಬರೆದು ಬರೆದು ಬರಿದಾಗುತ್ತಿರುವುದಕ್ಕೆ ಸ್ಷಷ್ಟ ಸೂಚನೆ ಸೋನು ನಿಗಂ ಹಾಡಿರುವ ಆಲ್ಬಂ "ನೀನೇ ನೀನೇ". ಅದರ ಮುಂದುವರಿದ ಭಾಗ "ಮನಸಾರೆ. ಅದೇ ಮಳೆ, ಅದೇ ಮೌನ, ಅದೇ ಮಾತು, ಅದೇ ಒಲವು......"ಮುಂಗಾರು ಮಳೆ" ಸಮಯದಲ್ಲಿ ಜನಸಾಮಾನ್ಯನಿಗೆ ರೋಮಾಂಚನ ಹುಟ್ಟಿಸಿದ್ದ ಶಬ್ದಗಳೆಲ್ಲ ಇವತ್ತು ಹಳೆ ಪಾತ್ರೆ, ಹಳೆ ಕಬ್ಬಿಣದಂತಾಗಿವೆ. ಸದ್ಯಕ್ಕೆ ಕಾಯ್ಕಿಣಿಗೊಂದು ಬ್ರೇಕ್ ಬೇಕಾಗಿದೆ. ಯೋಗರಾಜ್ ಭಟ್ ಬರೆದಿರುವ " ನಾ ನಗುವ ಮೊದಲೇನೇ", "ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ" ಕಿವಿಗಿಂಪು, ಸಾಹಿತ್ಯದ ಕಂಪು. ತಮ್ಮದೇ ಹಳೆಯ ಹಾಡುಗಳನ್ನು ಮತ್ತೆ ಬಳಸಿಕೊಂಡಂತೆ ಅನಿಸುತ್ತದೆ ಎನ್ನುವುದು ಮನೋಮೂರ್ತಿ ಮೇಲಿರುವ ಹಳೆಯ ಆರೋಪ. ಮೆಲೋಡಿಯ ಏಕತಾನತೆಯನ್ನು ಅವರಿಲ್ಲಿ ಯಶಸ್ವಿಯಾಗಿ ಮುಂದುವರಿಸುತ್ತಾರೆ .

ಮಳೆಯ ಸುದ್ದಿಗೆ ಹೋಗದೆ ಉತ್ತರ ಕರ್ನಾಟಕದ ಬಿಸಿಲನ್ನು ತಬ್ಬಿಕೊಂಡಿದ್ದಾರೆ ಭಟ್ಟರು...
ಅದಕ್ಕೇ ಇರಬೇಕು ಕಾಯ್ಕಿಣಿ ಬರೆದದ್ದು- "ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ"...

ಪ್ರೀತಿಯೆಂಬ ಕೆನೆ, ಹುಚ್ಚುನತವೆಂಬ ಕಾಫಿ ಕುಡಿಯಬೇಕಿದ್ದರೆ "ಮನಸಾರೆ" ನೋಡಬೇಕಿರುವುದು ಸದ್ಯಕ್ಕಿರುವ ಅಗತ್ಯ...!!!!

13 ಕಾಮೆಂಟ್‌ಗಳು:

Ittigecement ಹೇಳಿದರು...

ಕಾರ್ತೀಕ್...

ಹಾಡುಗಳನ್ನು ಕೇಳಿ ಸಿನೇಮಾ ನೋಡುವ ಆಸೆಯಾಗಿತ್ತು...
ನಿಮ್ಮ ಲೇಖನ ಓದಿ ಇವತ್ತೇ ಟಿಕೆಟ್ ಬುಕ್ ಮಾಡಿಸ್ತಾ ಇದ್ದೀನಿ...

ಸೊಗಸಾಗಿ ಬರೆಯುತ್ತೀರಿ...

ಸಿನೇಮಾ ನೋಡಿದ ಮೇಲೆ ಮತ್ತೆ ನನ್ನ ಅನಿಸಿಕೆ ಹಾಕುವೆ...

Sushrutha Dodderi ಹೇಳಿದರು...

ತುಂಬಾ ಒಳ್ಳೆಯ ರಿವ್ಯೂ ಕಾರ್ತಿಕ್.. ಪೂರ್ತಿಯಾಗಿ ಒಪ್ತೀನಿ ನೀನು ಬರೆದದ್ದು. ನಾನೂ ನಿನ್ನೆಯಷ್ಟೇ ನೋಡ್ದೆ ಮನಸಾರೆ. ಮನಸಾರೆ ಮೆಚ್ಚಿಕೊಂಡೆ ಸಹ. ಥ್ಯಾಂಕ್ಯೂ. :-)

ಬಿ.ಸುರೇಶ ಹೇಳಿದರು...

ಲೇಖನ ಚೆನ್ನಾಗಿದೆ.
ಸಿನಿಮಾ ನೋಡಿದ ನಂತರ ನಿಮ್ಮ ಅಭಿಪ್ರಾಯ ಕುರಿತು ಚರ್ಚಿಸುತ್ತೇನೆ.
ಆದರೆ ಒಂದು ಸತ್ಯ ಹೇಳಬೇಕು.
ನಾನು ೨೦೦೦ದ ಇಸವಿಯಲ್ಲಿ ಆದರ್ಶ ಫಿಲಂ ಇನ್ಸ್ಟಿಟ್ಯೂಟ್‌ನ ಹುಡುಗರಿಗೆ ಎಂದು ‘ಹುಚ್ಚರ ನಾಡಲ್ಲಿ’ ಎಂಬ ಸಿನಿಮಾ ನಿರ‍್ದೇಶಿಸಿದ್ದೆ. ಅದರಲ್ಲಿ ಗಣೇಶ, ಪ್ರೀತಂ ಎಲ್ಲರೂ ಪಾತ್ರಧಾರಿಗಳಾಗಿದ್ದರು. ಆ ಕತೆಗೆ ವಾರ್ಡ್ ನಂಬರ‍್ ೬ ಪ್ರೇರಣೆಯಾಗಿತ್ತು. ಜೊತೆಗೆ ಕತ್ತಲೆ ದಾರಿ ದೂರ’ ಎಂಬ ನಾಟಕವೂ ಪ್ರೇರಣೆಯಾಗಿತ್ತು.
ಅದೆ ಸಿನಿಮಾಗೆ ಯೋಗರಾಜ ಸಹಾಯಕನಾಗಿದ್ದ.
ಅಲ್ಲಿ ನಾನು ಬರೆದ ಮಾತನ್ನೇ ಇಲ್ಲಿ ತಾಳೀಕೋಟೆ ಪಾತ್ರಕ್ಕೆ ಬಳಸಿದ್ದಾರೆ.
ಇದು ಸುಮ್ಮನೆ ನಿಮ್ಮ ಕಿವಿಗೆ ಮಾತ್ರ ತಾಗಬೇಕಾದ ವಿವರ ಅಷ್ಟೆ.

Pramod ಹೇಳಿದರು...

ರಿವ್ಯೂ ಸೂಪರ್. ಚಿತ್ರ ನೋಡೋಣ ಅ೦ತ ಪ್ಲಾನ್ ಇದೆ. ನೆಕ್ಸ್ಟ್ ವೀಕ್ .. ಊರಿ೦ದ ಬ೦ದ ಮೇಲೆ :)

Unknown ಹೇಳಿದರು...

Karthik review sari yaagi ide haadu gallu sogasagi ide aadre Diganth solo hero aagi ashtu javabdari inda abhinayasilla. Bhattara Direction haagu sambashane bagey comments e illa. Andrita abhinaya parvagilla ashte. Pavan kathey ge ina otthu koda bahudagithu. Manasare ondu sari matra noda bahudu.

ಅನಾಮಧೇಯ ಹೇಳಿದರು...

Hi very nice review, i'm very eager to watch the movie...SHREESHA PUNACHA,Mascat,OMAN

ಗೌತಮ್ ಹೆಗಡೆ ಹೇಳಿದರು...

mast re doasta. naale hogta iddeeni manasaare ge. paper li baruva kelavara vimarshe talebuda artha aagolla. eshtu sogassagi barediddeeya. ninna cinema knowledge ge nanna salaam.:)

Ittigecement ಹೇಳಿದರು...

ಕಾರ್ತಿಕ್...

ಸಿನೇಮಾ ಚೆನ್ನಾಗಿದೆ..
ನಿಮ್ಮ ರಿವ್ಯೂ ಕೂಡ ಚೆನ್ನಾಗಿದೆ...

ದಿಗಂತ್ ಅಭಿನಯ..
ಧಾರವಾಡ ಭಾಷೆ ಆಡುವ ನಟ..
ಆಂದ್ರಿತಾ ರೈ ಚೆಲುವು, ಅಭಿನಯ..
ಇವರಿಂದಾಗಿ ಸಿನೇಮಾ ಓಡುತ್ತಿದೆ...

ಹಾಡುಗಳ ಲಿರಿಕ್ಸ್ ಕೇಳುವದಿಲ್ಲ ಸರಿಯಾಗಿ...

ಸರಿಯಾಗಿ ಬಳಸಿಕೊಂಡರೆ "ದಿಗಂತ್" ಭರವಸೆಯ ನಾಯಕ ನಟ ಆಗಬಲ್ಲ.

ಯೋಗರಾಜ ಭಟ್ಟರಿಗೆ ನಮೋನ್ನಮಃ..

ಇದು ಜನಸಾಮಾನ್ಯನಾದ ನನ್ನ ಅಭಿಪ್ರಾಯ..

ಗೌತಮ್ ಹೆಗಡೆ ಹೇಳಿದರು...

manasaare noadko bande dosta. matondsala hogbeku . e sala sumne study material thara noadko bande film na. next time sumne enjoy maadoke hogbeku;)

ಶ್ರೀನಿಧಿ.ಡಿ.ಎಸ್ ಹೇಳಿದರು...

nice! cinma chanagide..

Unknown ಹೇಳಿದರು...

ಮನಸಾರೆ ನೋಡಿದೆ .ಚೆನ್ನಾಗಿದೆ .ಆದ್ರೆ ವೆರುನಿಕದ ಛಾಯೆ ಕಾಣುತಿತ್ತು

ಅನಾಮಧೇಯ ಹೇಳಿದರು...

ಕಾರ್ತಿಕ್,
ಬರಹ ಚೆನ್ನಾಗಿದೆ.
ಸಿನೆಮಾ ಮುಗಿಯುವವರೆಗೂ ಒಳಗಿರುವ ಜಗತ್ತಿನಲ್ಲಿ! ಆರಾಮಾಗಿ ಕುಳಿತಿರಬಹುದು ಅನ್ನುವುದು ಹೊರಬಂದ ನಂತರ ಖಂಡಿತವಾಗಿಯೂ ಹೇಳಬಹುದಾದ ಮಾತು. ಒಮ್ಮೆ ನೋಡುವುದಕ್ಕೆ ಸರಿ. ಅದಕ್ಕೆ, ನಿರೂಪಣೆ, ಸಂಭಾಷಣೆ, ಛಾಯಾಗ್ರಹಣ, ಹಾಡು, ಹಾಗೂ ಕೆಲವೊಂದೆಡೆ ಅಭಿನಯ ಕಾರಣವಾಗುತ್ತದೆ. ಉಳಿದಂತೆ ಮನಸಾರೆ ವಿಶೇಷ ಅಂತೇನೂ ಅನ್ನಿಸುವುದಿಲ್ಲ. ಕಥೆಯ ವಿಷಯದಲ್ಲಿ ಮನಸಾರೆ ಸೋಲುತ್ತದೆ. ನಾಯಕ ನಾಯಕಿ ಅಭಿನಯದಲ್ಲಿ ಬೆರ್ಚಪ್ಪಗಳು ಅನ್ನುವುದರಲ್ಲಿ ಸಂಶಯವಿಲ್ಲ. ಅವರಿಗೆ ವ್ಯಾಮೋಹವನ್ನು ಮಾತಿನಲ್ಲೇ ಹೇಳುವುದು ಅನಿವಾರ್ಯ.
ಒಟ್ಟಿನಲ್ಲಿ ಮನಸಾರೆ ಭಟ್ಟರ ಕಣ್ಣ ಹನಿ ಉದುರಿಸಿಲ್ಲವಾದರೂ ಆನಂದಭಾಷ್ಪ ತರಿಸಿದ್ದಂತೂ ಸುಳ್ಳು!!

ಸಿಬಂತಿ ಪದ್ಮನಾಭ Sibanthi Padmanabha ಹೇಳಿದರು...

ಸಾರಿ ಕಾರ್ತಿಕ್, ತುಂಬಾ ದಿನದಿಂದ ನಿನ್ನ ಬ್ಲಾಗ್ ನೋಡೋದಿಕ್ಕೆ ಆಗ್ಲಿಲ್ಲ. ತುಂಬಾ ಓದುವುದಕ್ಕೆ ಇದೆ. ನೀನು ಚೆನ್ನಾಗಿ ಬರೀತಿ. ಮನಸಾರೆ ಯ ಬಗ್ಗೆ ಬರೆದುದು ಚೆನ್ನಾಗಿದೆ. ನಾನಿನ್ನು ಫಿಲಂ ನೋಡಿಲ್ಲ. ಹೀಗೆ ಬರೀತಿರು -ಸಿಬಂತಿ