ಬುಧವಾರ, ಸೆಪ್ಟೆಂಬರ್ 30, 2009

ಮನಸಾರೆ ಪರವಾಗಿಲ್ಲ : ಭಟ್ಟರ ನಿಜವಾದ ಸಿನಿಮಾ ಇನ್ನೂ ಬಂದಿಲ್ಲ !

ಹೊರಗಿರುವ ಜಗತ್ತಿಗಿಂತ ಜೈಲಿನ ಒಳಗಿರುವ ಜಗತ್ತೇ ಉಲ್ಲಾಸದಾಯಕವಾಗಿದೆ ಅಂತನ್ನಿಸುತ್ತದೆ ಆತನಿಗೆ.

ಸದ್ಯಕ್ಕಿರುವ ಜಗತ್ತಿನ ವೇಗಕ್ಕೆ ತನಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮನವರಿಕೆಯ ನಡುವೆ ತಾನು ಜೈಲಿನಿಂದ ಹೊರಬಂದು ಕಳೆದುಕೊಂಡಿರುವ ಸ್ವಾತಂತ್ರ್ಯದ ಮನವರಿಕೆಯಾಗುತ್ತದೆ. ಜೀವಮಾನದ ಬಹುತೇಕ ವರ್ಷಗಳನ್ನು ಜೈಲಿನಲ್ಲಿ ಕಳೆದ ಆ ಸುಕ್ಕು ಮುಖದ ಮುದುಕನಿಗೆ ಹಾಗನ್ನಿಸುವುದರ ಹಿಂದೆ ಬದುಕಿನ ಆಧ್ಯಾತ್ಮವಿದೆ. ತಾನೇ ಕಂಡುಕೊಂಡ ತಾತ್ವಿಕತೆಯಿದೆ. ಜೈಲಿನ ಒಳಗೊಂದು ಆಪ್ತ ವಾತಾವರಣವನ್ನು ಸೃಷ್ಥಿಸಿಕೊಂಡ ಆತನಿಗೆ ಹೊರಜಗತ್ತು ಉಸಿರು ಕಟ್ಟಿಸುತ್ತದೆ. ಅಸ್ವಸ್ಥನಾಗುವಂತೆ ಮಾಡುತ್ತದೆ.ಅದಕ್ಕೇ ಇರಬೇಕು ಆ ಸುಕ್ಕು ಮುಖದ ಮುಸ್ಸಂಜೆಯ ಮುದುಕ, ಹೊರ ಜಗತ್ತಿನಲ್ಲಿ ತಾನು ವಾಸಿಸುವ ಕೋಣೆಯಲ್ಲೇ ನೇಣು ಹಾಕಿಕೊಳ್ಳುತ್ತಾನೆ..

ಆತನ ಹೆಸರು ಬ್ರೂಕ್.


ರೆಡ್ಡಿಂಗ್ನದ್ದೂ ಇದೇ ಸ್ಥಿತಿ. ಆತ ಬಿಡುಗಡೆಯಾಗಿ ಜೈಲಿನಿಂದ ಹೊರಕ್ಕೆ ಬಂದಾಗಲೂ ಆತನಿಗೆ ಹೊರಜಗತ್ತಿನಲ್ಲಿ ವಾಸಿಸಲು ಸಿಗುವುದು ಅದೇ ಬ್ರೂಕ್ ವಾಸ
ಕ್ಕಿದ್ದ ರೂಮು. ಆತನಿಗೂ ಹೊರಜಗತ್ತಿನ ಸತ್ತುಹೋದ ಸುದೀರ್ಘ ಹಗಲುಗಳು ಅಕ್ಷರಶಃ ನರಳಾಡಿಸುತ್ತವೆ.

1994ರಲ್ಲಿ ತೆರೆಕಂಡ "ಶ್ವಶಾಂಕ್ ರಿಡಂಪ್ಶನ್" ಸಿನಿಮಾದಲ್ಲಿ ಬರುವ ಅತಿ ಮುಖ್ಯ ಎಳೆಯಿದು.

"ಮನಸಾರೆ" ನೋಡಿದಾಗ ಇದೇ ಎಳೆ ಭಿನ್ನ ಹಿನ್ನೆಲೆ ಪರಿಸರದೊಂದಿಗೆ ಶಂಕ್ರ
ಪ್ಪ, ಡಾಲರ್ ಹಾಗೂ ನಾಯಕ ಮನೋಹರನ ಮೂಲಕ ಹೆಣೆದಂತೆ ಕಾಣುತ್ತದೆ. ನೇರಾ ನೇರ ಅದೇ ಸಿನಿಮಾದ ಸನ್ನಿವೇಶಗಳಿಲ್ಲದಿದ್ದರೂ, ಯೋಚನಾ ಲಹರಿ "ಶ್ವಶಾಂಕ್ ರಿಡಂಪ್ಶನ್"ನೊಂದಿಗೆ ತಾಳೆಯಾಗುತ್ತದೆ. ಇಷ್ಟಕ್ಕೂ ಮನಸಾರೆ ಆ ಸಿನಿಮಾದ ರಿಮೇಕೂ ಅಲ್ಲ, ಭಟ್ಟಿ ಇಳಿಸುವಿಕೆಯೂ ಅಲ್ಲ.(ಆಂಟೆನ್ ಚೆಕಾಫ್ ನ ವಾರ್ಡ್ ನಂ.6 ಕತೆ ಮನಸಾರೆಗೆ ಪ್ರೇರಣೆ ಎಂದು ಭಟ್ಟರು ಹಿಂದೆಲ್ಲೋ ಹೇಳಿದ ನೆನಪು.)

ಯೋಗರಾಜ ಭಟ್ಟರ ಸಿನಿಮಾ ಅಂದರೆ ಸಾಕು ಸದ್ಯಕ್ಕಂತೂ ಎಲ್ಲರದ್ದೂ ಕಾತರದ ಕಣ್ಣು. ಮನಸಾರೆಯನ್ನು ಮಾಮೂಲಿ ಪ್ರೇಮ ಕತೆಯೇ. ಅದರ ಜೊತೆಗೆ "ಯಾರ ತಲೆ ರಿಪೇರಿ ಮಾಡಕ್ಕಗಲ್ವೋ ಅವ್ರು ಹೊರಗಿರ್ತಾರೆ..ರಿಪೇರಿಯಾಗೋ ಮಂದಿ ಈ ಹುಚ್ಚಾಸ್ಪತ್ರೇಲಿ ಇರ್ತಾರೆ" ಎನ್ನುವ ಶಂಕ್ರಪ್ಪನ ಮಾತಿದೆ. ಅದೇ ಸಿನಿಮಾದ ಮೂಲ. ಮುಂಗಾರು ಮಳೆ, ಗಾಳಿಪಟದಂತೆ ಇಲ್ಲೂ ನಾಯಕ ಪಟಪಟ ಮಾತಾಡುತ್ತಾನೆ. ಅವನ ಮಾತಿಗೆ ಮರುಳಾಗುವ ನಾಯಕಿ ಇದ್ದಾಳೆ. ಚೆಂದದ ಸಾಹಿತ್ಯವಿರುವ ಹಾಡುಗಳಿವೆ. ಸತ್ಯ ಹೆಗಡೆಯ ಕ್ಯಾಮೆರಾ ಕಣ್ಣಿದೆ. ಒಂದು ಯಶಸ್ವಿ ವ್ಯಾಪಾರಿ ಸಿನಿಮಾಕ್ಕೆ ಬೇಕಾದ ಎಲ್ಲಾ ಅಂಶಗಳು ಇಲ್ಲಿವೆ.


ಆದರೂ ಭಟ್ಟರು "ಮನಸಾರೆ"ಯಲ್ಲಿ ಮುಂಗಾರು ಮಳೆ, ಗಾಳಿಪಟದ ಏಕತಾನತೆಯನ್ನು ಮೀರುವ ಪ್ರಯತ್ನವನ್ನು ಮಾಡಿದ್ದಾರೆ. ಪ್ರೇಮ ಕತೆಯೊಳಗೇ " ಕಿತ್ತೋಗಿರೋ ಹವಾಯಿ ಚಪ್ಪಲಿ ತರಹಾ ಆಗೋಯ್ತು, ಬದುಕು" ಎನ್ನುತ್ತಾ ಅಂತರ್ಮುಖಿಯಾಗುತ್ತಾರೆ...ಈ ಅಂತರ್ಮುಖಿ ನಡೆ ಅವರ ಹಿಂದಿನ ಸಿನಿಮಾಗಳಲ್ಲಿ ಬದುಕಿನ ಅಸಾಧ್ಯ ಹುಚ್ಚುತನಗಳನ್ನು ತೋರಿಸುವ ಭರದಲ್ಲಿ ಮರೆಯಲ್ಲಿತ್ತು...ಬದುಕಿನ ಸಾಮಾನ್ಯ ಅಂಶಗಳಲ್ಲೂ ಮನೆಮಾಡಿರುವ ತಾತ್ವಿಕತೆ ಬಗ್ಗೆ ಅವರಿಗೆ ಹೆಚ್ಚು ಮೋಹ. ಇದೇ ಮೋಹ ಅವರನ್ನು ಅಂತರ್ಮುಖಿಯಾಗುವಂತೆ ಮಾಡುತ್ತದೆ..

ಯೋಗರಾಜ್ ಭಟ್ ನಿರ್ದೇಶನದ ಒಳ್ಳೆಯ ಚಿತ್ರ ಯಾವುದು?....ಸದ್ಯಕ್ಕೆ ನನ್ನ ಉತ್ತರ ಒಂದೇ-"ಮಣಿ". ತನ್ನ ಮೊದಲ ಪ್ರಯತ್ನದಲ್ಲಿ ಅವರು ಕತೆಯನ್ನು ನಿಭಾಯಿಸಿದ ರೀತಿ, ಪಾತ್ರಗಳನ್ನು ತೆರೆಯ ಮೇಲೆ ತೋರಿಸಿದ ರೀತಿ ಎಲ್ಲವೂ ಗಮನ ಸೆಳೆದಿದ್ದವು. ಮಣಿಯ ನಾಯಕನಿಗೆ ನಮ್ಮೊಂದಿಗೆ ಅನೇಕ ಸಾಮ್ಯತೆಗಳಿದ್ದವು. ಮುಂಗಾರು ಮಳೆಯ ಪ್ರೀತುನಂತೆ, ಗಾಳಿಪಟದ ಗಣಿಯಂತೆ, ರಂಗ ಎಸ್ಸೆಸ್ಸೆಲ್ಸಿಯ ರಂಗನಂತೆ ಆತನಿಗೆ ವಿಪರೀತ ಮಾತಿನ ಚಟವಿರಲಿಲ್ಲ. ಸೈಕಲ್ ಜೊತೆಗೆ ನಡೆಯೋದು, ಸಮುದ್ರದ ದಂಡೆಯಲ್ಲಿ ಪರಿತಪಿಸಿದವನಂತೆ ಓಡುವುದರಲ್ಲೇ ಅವನಿಗೆ ಸುಖ. ಪ್ರೀತಿಯ ನಿವೇದನೆ ಆತನಿಗೆ ನಿಜಕ್ಕೂ ಬಿಸಿ ಕೆಂಡ. ಭಟ್ಟರ ಉಳಿದ ಸಿನಿಮಾಗಳ ನಾಯಕನಂತೆ "ನಿಮ್ಮೇಲೆ ಯದ್ವಾ-ತದ್ವಾ ಲವ್ವಾಗ್ಬಿಟ್ಟಿದೆ" ಅಂತ ಭೇಟಿಯಾದ ಕೆಲವೇ ದಿನಗಳಲ್ಲಿ ಉಸುರುತ್ತಿರಲಿಲ್ಲ ಆತ. ನಾಯಕನ ಮೌನವೇ ಪ್ರೇಕ್ಷಕನನ್ನು ಅಸಾಧ್ಯವಾಗಿ ಕಾಡಿಸುವ ಶಕ್ತಿ ಹೊಂದಿತ್ತು. ಮನೆಮಂದಿ ಕೂತು ನೋಡುವಾಗ ಮುಜುಗರವಾಗುವ ಕೆಲವಾರು ಡೈಲಾಗ್ಗಳಿವೆ ಅನ್ನುವುದನ್ನು ಬಿಟ್ಟರೆ ಸಿನಿಮಾವೇನೋ ಚೆನ್ನಾಗಿತ್ತು. ಅವತ್ತು "ಮಣಿ" ಯಶಸ್ವಿಯಾಗಿದ್ದರೆ "ಮುಂಗಾರು ಮಳೆ" ಖಂಡಿತಾ ಬರುತ್ತಿರಲಿಲ್ಲ. ಆ ಸಿನಿಮಾ ಗೆದ್ದಿದ್ದರೆ ಭಟ್ಟರು ಯಾವ ರೀತಿಯ ಸಿನಿಮಾ ಮಾಡುತ್ತಿದ್ದರು ಎನ್ನುವ ಕೂತೂಹಲ ನನಗಿವತ್ತಿಗೂ ಇದೆ.

ನಿರ್ದೇಶನನೊಬ್ಬನ ಸಿನಿಮಾವೊಂದರ ಯಶಸ್ಸು, ಆತನ ಮುಂದಿನ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಕಾತರವನ್ನು ಹುಟ್ಟುಹಾಕುತ್ತದೆ. ಜೊತೆಗೆ ಆತ ಪ್ರತೀ ಚಿತ್ರದಲ್ಲೂ ಬೆಳೆಯುತ್ತಾ ಹೋಗುವ ಪ್ರಕ್ರಿಯೆಯನ್ನು ನಾವು ಕಾಣಬಹುದು. ಅದು ಕತೆ ಹೇಳುವ ಶೈಲಿ ಇರಬಹುದು, ಸನ್ನಿವೇಶಗಳಿಗೆ ಬಳಸುವ ಚಿತ್ರಿಕೆಗಳು, ಅವುಗಳ ವಿನ್ಯಾಸ, ಸನ್ನಿವೇಶವನ್ನು ದೃಶ್ಯವಾಗಿ ಕಟ್ಟುವ ಬಗೆ ಹೀಗೆ ಎಲ್ಲಾ ಹಂತದಲ್ಲೂ ಬೆಳವಣಿಗೆಯನ್ನು ಪ್ರೇಕ್ಷಕ ಕಂಡುಕೊಳ್ಳುತ್ತಾನೆ...."ಮುಂಗಾರು ಮಳೆ"ಯ ಯಶಸ್ಸಿನ ನಂತರ "ಗಾಳಿಪಟ" ಬಂದಾಗ ಭಟ್ಟರು ತಮ್ಮದೇ ಫಾರ್ಮುಲಾಗಳನ್ನು ಮೀರಿ ಬೆಳೆಯುತ್ತಿಲ್ಲ ಅಂತ ಅನ್ನಿಸಿದ್ದಂತೂ ನಿಜ. ಅದಾಗಲೇ ಭಟ್ಟರು ಸಿನಿಮಾ ನಿರ್ಮಾಣ ಪ್ರಕ್ರಿಯೆಯಲ್ಲಿ ತಮ್ಮದೇ ಆದ "ಕಂಫರ್ಟ್ ಜೋನ್" ಒಂದನ್ನು ನಿರ್ಮಿಸಿಕೊಂಡಂತಿತ್ತು. ಅದನ್ನು ಮೀರುವ ಹಂತದ ಪ್ರಾರಂಭವಾಗಿ "ಮನಸಾರೆ" ಕಾಣಿಸುತ್ತದೆ.


ಅವರ ಹಿಂದಿನ ಸಿನಿಮಾಗಳಲ್ಲಿ ನಾಯಕನೊಂದಿಗೆ ಪೈಪೋಟಿಗೆ ಬಿದ್ದು ವಟಗುಟ್ಟುತ್ತಿದ್ದ ನಾಯಕಿ ಇಲ್ಲಿಲ್ಲ. ಸಿನಿಮಾದ ಮೊದಲಾರ್ಧದಲ್ಲಿ ಆಕೆಯ ಪ್ರವೇಶವೇ ಬಹಳ ತಡವಾಗಿ ಆಗುತ್ತದೆ. ಜೊತೆಗೆ ಆಕೆ ಮಾತನಾಡುವ ಮಾತುಗಳು ಸಹ ಎಣಿಸಬಹುದಷ್ಟಿವೆ. ಶಂಕರಪ್ಪನ ಮೂಲಕ ಧಾರವಾಡ ಕನ್ನಡವನ್ನು ಸತ್ವಪೂರ್ಣವಾಗಿ ಹೇಳಿಸಿದ್ದಾರೆ ಯೋಗರಾಜ್ ಭಟ್. ಬಹುತೇಕ ವ್ಯಾಪಾರಿ ಚಿತ್ರಗಳಲ್ಲಿ ಮಂಗ್ಳೂರು, ಉತ್ತರ ಕರ್ನಾಟಕದ ಕನ್ನಡ ಗೇಲಿ ಮಾಡಲು ಬಳಕೆಯಾದದ್ದೇ ಹೆಚ್ಚು. "ಎಂಥದು ಮಾರ್ರೆ", "ಲೇ ಮಂಗ್ಯಾ" ಗಿಂತ ಮುಂದೆ ಮುಂದೆ ಹೋದ ಉದಾಹರಣೆ ಇಲ್ಲ.
"ಹಾಳಾಗ್ ಹೋಗು. ನಡುರಾತ್ರೀಲಿ ದೆವ್ ಡ್ಯಾನ್ಸ್ ಮಾಡೂ ವೇಳೆ ಈ ಮಂಗ್ಯಾನಾ ಲವ್ ಸ್ಟೋರಿ ಕೇಳಿ ಬರೂ ಉಚ್ವಿ ಬರ್ಲಂಗದಾತು. ಈ ಕಡೀ ಸಲೀಮ. ಆ ಕಡೀ ಅನಾರ್ಕಲಿ. ಮುಘಲೇ ಆಜಂ ಸೆಕೆಂಡ್ ಶೋ ಇಂಟರ್ವಲ್ ಬಿಟ್ಟಂಗಾತು" ಎಂದು ಶಂಕ್ರಪ್ಪ ಪಾತ್ರಧಾರಿ ರಾಜು ತಾಳಿಕೋಟೆ ಸಂ
ಭಾಷಣೆ ಹೇಳುವಾಗ ಥಿಯೇಟರ್ ಭರ್ತಿ ಸೀಟಿ. ಇತ್ತೀಚಿನ ಕನ್ನಡ ಸಿನಿಮಾಗಳಲ್ಲಿ ವಿಪರೀತವೆಂಬಷ್ಟು ಒಂದೇ ಶೇಡ್ ಇರುವ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಪ್ರತಿಭಾವಂತ ಪೋಷಕ ನಟ ರಂಗಾಯಣ ರಘು ಅವರನ್ನು ನೋಡಿ ಸುಸ್ತಾಗಿರುವವರಿಗೆ ರಾಜು ತಾಳಿಕೋಟೆ ಧಾರವಾಡ ಪೇಡಾದಷ್ಟೇ ಸಿಹಿ. ಸಂಭಾಷಣೆಯಲ್ಲಿ ಭಟ್ಟರಿಗೆ ಫುಲ್ ಮಾರ್ಕ್ಸ್. ಅದೇ ಕಾಲೆಳೆತ, ಚ್ಯಾಷ್ಟಿ ಎಲ್ಲವೂ ಇದೆ.

ಬಟ್ಟೆ ಕಂಡ್ರೆ ಮಾರುದೂರ ಓಡುವ ಪಾತ್ರವೊಂದಿದೆ. ಅವನ ಒದ್ದಾಟ, ಗುದ್ದಾಟನ್ನು ತೆರೆ ಮೇಲೆ ನೋಡಿಯೇ ಆನಂದಿಸಬೇಕು.. ಆತ "ಬಟ್ಟೆ ಬೇಡ" ಎನ್ನುತ್ತಾ ಓಡಾಡುತ್ತಿದ್ದರೆ ನಗು ನಡೆಯುವುದಿಲ್ಲ. ನಾಯಕನ ಚಿರವಿರಹಿ ಗೆಳೆಯನ ಪಾತ್ರಕ್ಕೆ "ಅಯ್ಯೋ...ಅಯ್ಯೋ" ಎನ್ನುವ ಕೋರಸ್ ಕೊಡುತ್ತಾ ಭರಪೂರ್ತಿ ನಗಿಸುತ್ತಾರೆ ಭಟ್ಟರು.

ಸತ್ಯ ಹೆಗಡೆಯ ಕ್ಯಾಮರಾ ಕಣ್ಣಿಗೊಂದು ನಮಸ್ಕಾರ ಹೇಳಲೇಬೇಕು. "ದುನಿಯಾ", "ಇಂತಿ ನಿನ್ನ ಪ್ರೀತಿಯ.." ಸಿನಿಮಾದ ಚಿತ್ರಿಕೆಗಳಲ್ಲಿ ಬೆಳಕಿನ ಬಳಕೆಯ ಪ್ರಮಾಣ, ಅದನ್ನು ಕಾರ್ಯಗತಗೊಳಿಸುವಲ್ಲಿ ಅವರ ಚಾಕಚಕ್ಯತೆ ಎದ್ದುಕಾಣುತ್ತಿತ್ತು. "ಮನಸಾರೆ"ಯಲ್ಲೂ ಕೆಲವೊಂದು ಕಡೆ, ವಿಶೇಷವಾಗಿ ಹಾಡುಗಳಲ್ಲಿ ಸತ್ಯ ಹೆಗಡೆಯ ಕ್ರಿಯಾಶೀಲ ಮನಸ್ಸು ಹೆಚ್ಚಿದೆ. ಪವನ್ ಕುಮಾರ್ ಬರೆದ ಚಿತ್ರಕತೆ ದ್ವಿತೀಯಾರ್ಧದಲ್ಲಿ ಮತ್ತಷ್ಟು ಬಿಗಿಯಾಗಬೇಕಿತ್ತು.


ದಿಗಂತ್ ಅಭಿನಯ ಸುಮಾರು. ಮೊದಲ ಬಾರಿಗೆ ಸೋಲೋ ಹೀರೋ ಆಗುತ್ತಿರುವ ಆತಂಕ ಅವರ ಮುಖದಲ್ಲಿ ಕಾಣುತ್ತದೆ!!! ದ್ವಿತೀಯಾರ್ಧದಲ್ಲಿ ತನ್ನ ಅಭಿನಯದ ಮೂಲಕ ಇಡೀ ಕಥೆಯ ಗಂಭೀರತೆಯನ್ನು ಮುಟ್ಟಿಸುವ ಜವಾಬ್ದಾರಿಯನ್ನು ಆತ ಸರಿಯಾಗಿ ನಿರ್ವಹಿಸುವುದಿಲ್ಲ. ಕತ್ರಿನಾ ಕೈಫ್ ಅಭಿನಯಿಸಬೇಕು ಎಂದು ಹೇಳುವುದು ಹಳಸಲು ಸ್ಟೇಟ್ಮೆಂಟು. ಐಂದ್ರಿತಾ ರೇಗೂ ಇದು ಅನ್ವಯವಾಗುತ್ತದೆ..ತೆರೆ ಮೇಲಿರುವ ಮುದ್ದಾದ ದಸರಾ ಗೊಂಬೆಗಳವು...ನೋಡೋದಕ್ಕಷ್ಟೇ ಚೆಂದ!

ಜಯಂತ್ ಕಾಯ್ಕಿಣಿ ಪ್ರೇಮ ನಿವೇದನೆಗಳನ್ನೇ ಬರೆದು ಬರೆದು ಬರಿದಾಗುತ್ತಿರುವುದಕ್ಕೆ ಸ್ಷಷ್ಟ ಸೂಚನೆ ಸೋನು ನಿಗಂ ಹಾಡಿರುವ ಆಲ್ಬಂ "ನೀನೇ ನೀನೇ". ಅದರ ಮುಂದುವರಿದ ಭಾಗ "ಮನಸಾರೆ. ಅದೇ ಮಳೆ, ಅದೇ ಮೌನ, ಅದೇ ಮಾತು, ಅದೇ ಒಲವು......"ಮುಂಗಾರು ಮಳೆ" ಸಮಯದಲ್ಲಿ ಜನಸಾಮಾನ್ಯನಿಗೆ ರೋಮಾಂಚನ ಹುಟ್ಟಿಸಿದ್ದ ಶಬ್ದಗಳೆಲ್ಲ ಇವತ್ತು ಹಳೆ ಪಾತ್ರೆ, ಹಳೆ ಕಬ್ಬಿಣದಂತಾಗಿವೆ. ಸದ್ಯಕ್ಕೆ ಕಾಯ್ಕಿಣಿಗೊಂದು ಬ್ರೇಕ್ ಬೇಕಾಗಿದೆ. ಯೋಗರಾಜ್ ಭಟ್ ಬರೆದಿರುವ " ನಾ ನಗುವ ಮೊದಲೇನೇ", "ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ" ಕಿವಿಗಿಂಪು, ಸಾಹಿತ್ಯದ ಕಂಪು. ತಮ್ಮದೇ ಹಳೆಯ ಹಾಡುಗಳನ್ನು ಮತ್ತೆ ಬಳಸಿಕೊಂಡಂತೆ ಅನಿಸುತ್ತದೆ ಎನ್ನುವುದು ಮನೋಮೂರ್ತಿ ಮೇಲಿರುವ ಹಳೆಯ ಆರೋಪ. ಮೆಲೋಡಿಯ ಏಕತಾನತೆಯನ್ನು ಅವರಿಲ್ಲಿ ಯಶಸ್ವಿಯಾಗಿ ಮುಂದುವರಿಸುತ್ತಾರೆ .

ಮಳೆಯ ಸುದ್ದಿಗೆ ಹೋಗದೆ ಉತ್ತರ ಕರ್ನಾಟಕದ ಬಿಸಿಲನ್ನು ತಬ್ಬಿಕೊಂಡಿದ್ದಾರೆ ಭಟ್ಟರು...
ಅದಕ್ಕೇ ಇರಬೇಕು ಕಾಯ್ಕಿಣಿ ಬರೆದದ್ದು- "ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ"...

ಪ್ರೀತಿಯೆಂಬ ಕೆನೆ, ಹುಚ್ಚುನತವೆಂಬ ಕಾಫಿ ಕುಡಿಯಬೇಕಿದ್ದರೆ "ಮನಸಾರೆ" ನೋಡಬೇಕಿರುವುದು ಸದ್ಯಕ್ಕಿರುವ ಅಗತ್ಯ...!!!!

ಗುರುವಾರ, ಸೆಪ್ಟೆಂಬರ್ 10, 2009

ದ.ರಾ. ಬೇಂದ್ರೆ ಕವನ ವಾಚಿಸುತ್ತಾರೆ ಕೇಳಿ

.ರಾ.ಬೇಂದ್ರೆ ಕುರಿತು ಗಿರೀಶ್ ಕಾರ್ನಾಡ್ ನಿರ್ಮಿಸಿದ ಸಾಕ್ಷ್ಯಚಿತ್ರ ಇವತ್ತಿಗೂ ನೆನಪಾದಾಗ ಪುಳಕವಾಗುತ್ತದೆ..

ಸಾಕ್ಷ್ಯಚಿತ್ರವೊಂದನ್ನು ಅದೆಷ್ಟು ಆತ್ಮೀಯವಾಗಿ ತೆರೆಯ ಮೇಲೆ ತೆರೆದಿಡಬಹುದು ಎನ್ನುವುದನ್ನು ತೋರಿಸಿಕೊಡುತ್ತದೆ ಅವರ
ಪ್ರಯತ್ನ. ಕಪ್ಪು-ಬಿಳುಪಿನ ಬಣ್ಣಗಳಲ್ಲಿ ಕವಿಯ ಅತೀ ಚಿಕ್ಕ ವಿವರವನ್ನೂ ಕೂಡಾ ಅವರು ದಾಖಲಿಸುತ್ತಾರೆ (ಉದಾ:.ರಾ. ಬೇಂದ್ರೆ ಯಾವಾಗಲೂ ತಮ್ಮ ಕೋಣೆಯಲ್ಲಿ ಪುಸ್ತಕಗಳನ್ನು ಹರಡಿಕೊಂಡಿರುತ್ತಿದ್ದದ್ದು).

ಧಾರವಾಡದ
ಹಾದಿಗಳಲ್ಲಿ ಬೇಂದ್ರೆ ಸಾಗುತ್ತಿದ್ದರೆ
ನೋಡುಗನಿಗೆ ರೋಮಾಂಚನ. ವರ ನಡಿಗೆ, ಕೊಡೆ, ಮಳೆ, ಹಣ್ಣು ಮಾರುವವರ ಜೊತೆ ಒಡನಾಡುವ ರೀತಿ ಎಲ್ಲವನ್ನು ಯಾವುದೇ ಕ್ರತ್ರಿಮತೆ ಇಲ್ಲದೆ ಗಿರೀಶ್ ಕಾರ್ನಾಡ್ ದ್ರಶ್ಯದಲ್ಲಿ ದಾಖಲು ಮಾಡುತ್ತಾರೆ. ಸಾಕ್ಶ್ಯಚಿತ್ರದಲ್ಲಿರುವ ಕೆಲವೊಂದು ಶಾಟ್ ಗಳು ವಾರೆವ್ವಾ ಎನ್ನುವಂತಿವೆ. ಸಾಕ್ಶ್ಯಚಿತ್ರಗಳ ನಿರ್ಮಾಣದ ಬಗ್ಗೆ ಆಸಕ್ತಿ ಇರುವವರು ಇದನ್ನು ತಪ್ಪದೇ ನೋಡಬೇಕು..



ಇದೆಲ್ಲಕ್ಕಿಂತ ಹೆಚ್ಚಾಗಿ ಸಾಕ್ಷ್ಯಚಿತ್ರದಲ್ಲಿ ನಮ್ಮೆಲ್ಲರನ್ನು ಪುಳಕಿತರನ್ನಾಗಿ ಮಾಡುವ ಅಂಶವೊಂದಿದೆ. ಸ್ವತಃ .ರಾ. ಬೇಂದ್ರೆ ಇಲ್ಲಿ ತಮ್ಮ " ವಿಶ್ವಮಾತೆಯ ಗರ್ಭ ಕಮಲಜಾತ..." ಕವನವನ್ನು ವಾಚನ ಮಾಡಿದ್ದಾರೆ.

ಈಗಂತೂ ಕವನ ವಾಚನವೇ ಅಪರೂಪ. ಇಂತಹ ಸಂದರ್ಭದಲ್ಲಿ ಬೇಂದ್ರೆಯಂತಹ ಕವಿಯ ಸಾಲುಗಳನ್ನು ಅವರ ಬಾಯಲ್ಲಿ ಕೇಳಿ
ಪಡೆದುಕೊಳ್ಳುವ ಸುಖಕ್ಕೆ ಸಾಟಿ ಯಾವುದಿದೆ ನೀವೇ ಹೇಳಿ.

ಕವನ ವಾಚನದ ದ್ರಶ್ಯ ತುಣುಕು ನಿಮಗಾಗಿ....(ಕೆಳಗಿನ ಕೊಂಡಿ ಕ್ಲಿಕ್ ಮಾಡಿ)

// ವಿಶ್ವಮಾತೆಯ
ಗರ್ಭ ಕಮಲಜಾತ ಪರಾಗ ಪರಮಾಣು ಕೀರ್ತಿ ನಾನು //



ವಿಶ್ವಮಾತೆಯ ಗರ್ಭಕಮಲಜಾತ-ಪರಾಗ-
ಪರಮಾಣು ಕೀರ್ತಿ ನಾನು |
ಭೂಮಿತಾಯಿಯ ಮೈಯ ಹಿಡಿಮಣ್ಣು ಗುಡಿಗಟ್ಟಿ
ನಿಂತಂಥ ಮೂರ್ತಿ ನಾನು !


ಭರತಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ
ಮಿನುಗುತಿಹ ಜ್ಯೋತಿ ನಾನು !
ಕನ್ನಡದ ತಾಯಿ ತಾವರೆಯ ಪರಿಮಳವುಂಡು
ಬೀರುತಿಹ ಗಾಳಿ ನಾನು !

ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ
ಜೀವಂತ ಮಮತೆ ನಾನು !
ಈ ಐದು ಐದೆಯರೆ ಪಂಚಪ್ರಾಣಗಳಾಗಿ
ಈ ಜೀವ ದೇಹನಿಹನು !

ಹೃದಯಾರವಿಂದದಲ್ಲಿರುವ ನಾರಾಯಣನೆ
ತಾನಾಗಿ ದತ್ತ ನರನು !
ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ
ಅಂಬಿಕಾತನಯನಿವನು !

http://www.darabendre.org/ ನಲ್ಲಿ ಸಿಕ್ಕ ದ್ರಶ್ಯ ತುಣುಕಿದು.

ಮಂಗಳವಾರ, ಸೆಪ್ಟೆಂಬರ್ 8, 2009

ಕನ್ನಡದ ಗುಲಾಬಿಗೆ ರಾಷ್ಟ್ರಪ್ರಶಸ್ತಿ

|| ನಿನ್ನೆಯಷ್ಟೇ 2007ನೇ ಸಾಲಿನ ರಾಷ್ಟ್ರಪ್ರಶಸ್ತಿ ಪ್ರಕಟವಾಗಿದೆ. ಉಮಾಶ್ರೀ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಬಂದಿದೆ. ಕಾಸರವಳ್ಳಿಯವರ "ಗುಲಾಬಿ ಟಾಕೀಸು" ಅತ್ಯುತ್ತಮ ಕನ್ನಡ ಚಿತ್ರವೆಂದು ಆಯ್ಕೆಯಾಗಿದೆ. ಕಾಂಚೀವರಂನಲ್ಲಿನ ಅಭಿನಯಕ್ಕೆ ಪ್ರಕಾಶ್ ರೈ ಅತ್ಯುತ್ತಮ ನಟ ಎಂದು ಪುರಸ್ಕ್ರತರಾಗಿದ್ದಾರೆ. ಮೂವರಿಗೂ ಅಭಿನಂದನೆಗಳು. ||


ವಳು ಕನಸಿನ ಗುಲಾಬಿ. ಪ್ರತೀ ದಿನ ಸಾಯಂಕಾಲ ಸಿನಿಮಾ ನೋಡುವ ಹುಚ್ಚು. ಮೂಲಕ ಹೊಸ ಕನಸುಗಳನ್ನು ಕಾಣುವ
ಬಯಕೆ ಆಕೆಗೆ. ಕನಸುಗಳ ಮೂಲಕ ತನ್ನ ಸೀಮಿತ ಪರಿಧಿಯನ್ನು ಮೀರಿ ಮುನ್ನಡೆಯುವ ಆಸೆ. ಬಹುಷಃ ಅಂಶವೇ ಆಕೆಯನ್ನು ಪ್ರಫುಲ್ಲವಾಗಿಡುವುದು.

ಆಕೆ ನೋಡುವ ಸಿನಿಮಾದ ಬಿಡಿಬಿಡಿ ಚಿತ್ರಗಳಂತೆ ಬದುಕೂ ಹರಿದು ಹಂಚಿಹೋಗಿದೆ, ಹೋಗುತ್ತಿದೆ. ಹೆರಿಗೆ ಮಾಡಿಸಿದ ಸಲುವಾಗಿ
ಬರುವ ಟಿವಿ ಪ್ರಾರಂಭದಲ್ಲಿ ಅವಳಲ್ಲೊಂದು ಅಪೂರ್ವ ಘಳಿಗೆಗಳನ್ನು ಸೃಷ್ಠಿಸುತ್ತಾ ಹೋಗುತ್ತದೆ. ನಂತರದ ದಿನಗಳಲ್ಲಿ ಪಲ್ಲಟಗಳ ನಡುವೆ ಪಟಪಟಿಸುತ್ತದೆ. ಇದು ಗುಲಾಬಿ ಎಂಬ ಸೂಲಗಿತ್ತಿಯ "ಗುಲಾಬಿ ಟಾಕೀಸು"....

ಕನ್ನಡ ಸಿನಿಮಾದ ಗುಲಾಬಿ ಉಮಾಶ್ರೀಗೆ ರಾಷ್ಟ್ರಪ್ರಶಸ್ತಿ ಬಂದಿದೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ "ಗುಲಾಬಿ ಟಾಕೀಸು" ವೈದೇಹಿ ಅವರ ಕಥೆ ಆಧಾರಿತ ಸಿನಿಮಾ(ಸಿನಿಮಾ ಮಾಧ್ಯಮಕ್ಕೆ ಅನುಗುಣವಾಗಿ ಇಲ್ಲಿ ಕತೆ ಮಾರ್ಪಾಡಾಗಿದೆ). ಅದರಲ್ಲಿನ
ಮುಖ್ಯಪಾತ್ರವೇ ಗುಲಾಬಿಯದ್ದು.
ಉಮಾಶ್ರೀಯ ವೃತ್ತಿ ಜೀವನದ ಮೈಲಿಗಲ್ಲು ಗುಲಾಬಿ ಪಾತ್ರ. ಪಾತ್ರದ ಆಳ-ಅಗಲಗಳನ್ನು ತನ್ನ ಅಭಿನಯದಿಂದಲೇ ಹಿಗ್ಗಿಸಿದ್ದಾರೆ
ಆಕೆ. ಉಮಾಶ್ರೀಯದ್ದು ರಂಗಭೂಮಿಯ ಹಿನ್ನೆಲೆ. ಸಿನಿಮಾ ರಂಗಭೂಮಿ ಎರಡೂ ಭಿನ್ನ ಗುಣಗಳನ್ನು ಹೊಂದಿರುವ ಮಾಧ್ಯಮಗಳು.

ಬಹುಷಃ ರಂಗಭೂಮಿ ಉಮಾಶ್ರೀಯನ್ನು ಬಳಸಿಕೊಂಡಷ್ಟು ಸಶಕ್ತವಾಗಿ ಕನ್ನಡ ಸಿನಿಮಾ ತನ್ನ ಮಾಧ್ಯಮದಲ್ಲಿ ಬಳಸಿಕೊಂಡಿರಲಿಲ್ಲ. ಒಡಲಾಳ, ಹರಕೆಯ ಕುರಿ ನಾಟಕಗಳು ಆಕೆಯ ರಂಗಭೂಮಿಯ ಸಶಕ್ತ ಅಭಿವ್ಯಕ್ತಿಗಳು. ಕನ್ನಡ ಸಿನಿಮಾದಲ್ಲಿ ಉಮಾಶ್ರೀ ಅಂದರೆ
ಸಾಕು ಎನ್ನೆಸ್ ರಾವ್ ಕಾಂಬಿನೇಶನ್ನಿನ ಕಿಲಕಿಲದಂತಹ ಪಾತ್ರದ ಜೊತೆಗೆ ಜೋತು ಬೀಳುವ ಪಾತ್ರಗಳಂತಹವೇ ಹೆಚ್ಚು ಕಾಣುವುದು. ಇದೇ ಅತಿರೇಕದ ನಟನೆಗೆ ಉಮಾಶ್ರೀ ಮುಂದಿನ ದಿನಗಳಲ್ಲಿ ಬ್ರ್ಯಾಂಡ್ ಆಗಿದ್ದೂ ಉಂಟು. ಸಂಗ್ಯಾಬಾಳ್ಯ, ಮಣಿ ಸಿನಿಮಾಗಳಂತಹ ಬೆರಳೆಣಿಕೆಯ ಸಿನಿಮಾಗಳಷ್ಟೇ ಆಕೆಗೆ ವೈವಿಧ್ಯಮಯವಾದ ಪಾತ್ರಗಳನ್ನು ನೀಡಿದ್ದು. ಉಮಾಶ್ರೀಯ ಒಳಗಿದ್ದ ನಟಿ ಸಿನಿಮಾದಲ್ಲಿ ಪ್ರಖರವಾಗಿ ಕಾಣಿಸಿಕೊಂಡದ್ದು- ಕಾಸರವಳ್ಳಿಯವರ ಗುಲಾಬಿ ಟಾಕೀಸಿನಲ್ಲಿಯೇ.

ಗುಲಾಬಿಯ ಪಾತ್ರ ಸಿನಿಮಾದ ವಿವಿಧ ಹಂತಗಳಲ್ಲಿ ಸಂಕೀರ್ಣವಾಗುತ್ತಾ ಹೋಗುವ ಪರಿ ಪ್ರೇಕ್ಷಕನಿಗೆ ದಕ್ಕುವುದಕ್ಕೆ
ಸಾಧ್ಯವಾಗುವುದು ಉಮಾಶ್ರೀಯ ಅಭಿನಯದಲ್ಲಿ. ಅವಳಲ್ಲಿರುವ ಸ್ವಗತಗಳು, ಗಂಡನ ಎರಡನೇ ಹೆಂಡತಿಯ ಮಗ ಅದ್ದುವಿನೆಡೆಗಿರುವ ಪ್ರೀತಿ, ನೇತ್ರುವಿನ ಜೊತೆಗಿನ ಗೆಳೆತನ, ಟಿವಿ ಬಂದ ನಂತರ ಬದಲಾಗುವ ಸಂಬಂಧಗಳ ವ್ಯಾಪ್ತಿಯನ್ನು ಆಕೆ ಅರ್ಥೈಸಿಕೊಳ್ಳುವಲ್ಲಿ ಆಕೆ ಪಡುವ ಪಾಡನ್ನು, ಗುಲಾಬಿಯ ಸಂದಿಗ್ಧವನ್ನು ಉಮಾಶ್ರೀ ತೆರೆಮೇಲೆ ಬಿಚ್ಚಿಡುತ್ತಾರೆ. "ಮೊದಲಾದರೆ ವಾರಗಟ್ಟಲೆ ಸಿನಿಮಾ ನೋಡುತ್ತಿದ್ದೆ. ಬೇರೆ ಬೇರೆ ಕನಸುಗಳು ಬೀಳುತ್ತಿದ್ದವು. ಮನೆಯಲ್ಲೀಗ ಟಿವಿಯಿದೆ. ದಿನವೂ ಬೇರೆ ಬೇರೆ ಸಿನಿಮಾ ನೋಡುತ್ತೇನೆ. ಆದರೆ ಬೀಳುತ್ತಿರುವುದು ಒಂದೇ ಕನಸು" ಎನ್ನುವಾಗ ಉಮಾಶ್ರೀಯ ಮುಖದಲ್ಲಿನ ಒತ್ತಡ, ಕಣ್ಣಲ್ಲಿ ಕರಗುತ್ತಿರುವ ನೋವು ಪ್ರೇಕ್ಷಕನಿಗೆ ದಾಟುತ್ತದೆ.

ಉಮಾಶ್ರೀಯ ನಟನೆಯ ತೀವ್ರತೆಯ ಸನ್ನಿವೇಶಗಳು "ಗುಲಾಬಿ ಟಾಕೀಸು" ಸಿನಿಮಾದ ಹಲವೆಡೆ ಕಾಣುತ್ತದೆ. ಉಮಾಶ್ರೀಯ
ಅಭಿನಯಕ್ಕೊಂದು ಸಲಾಮು ಹೇಳಲು ಗುಲಾಬಿಯನ್ನು ಮನೆಯಿಂದ ಹೊರಕ್ಕೆ ಹಾಕುವ ಸನ್ನಿವೇಶವೊಂದೇ ಸಾಕು. ಸನ್ನಿವೇಶದಲ್ಲಿ ಗುಲಾಬಿಯ ಪ್ರತಿಭಟನೆಯ ಪರಿಯನ್ನೊಮ್ಮೆ ನೀವು ನೋಡಬೇಕು. ಪಾತ್ರೆಗಳನ್ನು ಮನೆಯಿಂದ ಹೊರಹಾಕುತ್ತಿರುವಾಗ ಅದನ್ನೆಲ್ಲಾ ಹೆಕ್ಕಿ ಮತ್ತೆ ಒಳಗಿಡಲು ಪ್ರಯತ್ನಿಸುವುದು, ಕಬ್ಬಿಣದ ಪೆಟ್ಟಿಗೆಯ ಮೇಲೆ ಜಗ್ಗದಂತೆ ಕೂರುವ ಪರಿಯನ್ನು ನೋಡಿದಾಗ ಉಮಾಶ್ರಿಯೊಳಗಿರುವ ಗುಲಾಬಿ ಅರ್ಥವಾಗುತ್ತಾ ಹೋಗುತ್ತಾಳೆ.


ಗುಲಾಬಿಯಂತಹ ಪಾತ್ರವನ್ನು ಉಮಾಶ್ರೀಯ ಮೂಲಕ ತೆರೆಗೆ ತಂದ ಗಿರೀಶ್ ಕಾಸರವಳ್ಳಿಯವರಿಗೆ ಅಭಿನಂದನೆಗಳು
ಸಲ್ಲಲೇಬೇಕು.....

ಮತ್ತಷ್ಟು ಒಳ್ಳೆಯ ಗುಲಾಬಿಗಳನ್ನು ಉಮಾಶ್ರೀ ಮುಂದೆಯೂ ಕಟ್ಟಿಕೊಡಲಿ.

||ಕಾಂಚೀವರಂ ಸಿನಿಮಾ ಬಗ್ಗೆ ಇದೇ ಬ್ಲಾಗಿನಲ್ಲಿ ಹಿಂದೊಮ್ಮೆ ಬರೆದಿದ್ದೆ.
ಓದಿಲ್ಲವಾದಲ್ಲಿ
ಕೆಳಗಿನ ಕೊಂಡಿ ಕ್ಲಿಕ್ ಮಾಡಿ. ||