"ಹೌದೌದು.ಮುಂದೊದು ದಿನ ಕರಗಿಯೇ ಹೋಗುತ್ತೇನೆ!"
ಅನುಮಾನವೇ ಇಲ್ಲ.ಅದು ಕಾಳಿಂಗ ಸರ್ಪ.ಗೊತ್ತಾಗುವಷ್ಟರಲ್ಲೇ ಕಚ್ಚಿಯಾಗಿತ್ತು. ಭಗ್ಗನೆ ಎದೆ ಭಯದಿಂದ ಹೊತ್ತಿಕೊಂಡಿತು. ಒಂದುಮಧ್ಯಾಹ್ನವಿರಬಹುದು,ಆ ಘಟನೆ ಸಂಭವಿಸಿದ್ದು. ಮನೆ ಕಡೆ ಹೆಜ್ಜೆ ಹಾಕಿದೆ. ಕಾಲುಗಳು ಬಸವಳಿಯುತ್ತಿವೆ ಎನಿಸಿತು. ಬಹುಷಃವಿಷವೇರುತ್ತಿರಬೇಕು. ಇನ್ನು ಐದೋ-ಆರೋ ನಿಮಿಷ. ಮತ್ತೆ ಮನೆ ಮುಂದೆ ವಿಷಾದದ ಛಾಯೆ. ಅಪ್ಪ ಗಾಡ ಮೌನಿಯಾಗುತ್ತಾನೆ. ಅಮ್ಮ ಕರಗಿ, ಕರಗಿ ಗೋಳಿಗೆ ಹಣೆ ಹಚ್ಚಿಕೊಳ್ಳುತ್ತಾಳೆ. ನಾನು ಸತ್ತು ನಾಲ್ಕೋ-ಐದು ಗಂಟೆಗಳಲ್ಲಿ ಸುಡಬಹುದು. ಹೆಚ್ಚೆಂದರೆದೊಡ್ಡಪ್ಪ ಬರುವವರೆಗೆ ಕಾಯಬಹುದೇನೋ. ಒಂಭತ್ತನೇ ದಿನಕ್ಕೆ ಹತ್ತಿರದವರು-ದೂರದವರು ಬರುತ್ತಾರೆ. ಊಟ ಮಾಡಿಹೋಗುತ್ತಾರೆ. ಇನ್ವಿಟೇಶನ್ ಕಾರ್ಡಲ್ಲಿ ರಾಹುಲ ಮೊಬೈಲ್ನಲ್ಲಿ ತೆಗೆದ ನನ್ನ ಫೋಟೋ ಹಾಕಬಹುದು. ಮನೆ ತಲುಪಿದರೆ ಅದನ್ನೇಹಾಕಬೇಕು ಅಂತ ಅವನಿಗೆ ಮೆಸೇಜು ಮಾಡಿಬಿಡಬೇಕು.
ಮನೆ ಹತ್ತಿರ ಬಂತು. ಛಾವಡಿಯಲ್ಲಿ ಕೂತೆ. ಫ್ಯಾನು ಅದುಮಿದೆ. ರೆಕ್ಕೆ ಬಡಿಯಲು ಪುರುಸೊತ್ತಿಲ್ಲದ ಪ್ರಾಣಪಕ್ಷಿಗೆ ಯಾಕೆ ಬೇಕುಫ್ಯಾನಿನ ಉಸಾಬರಿ?ಪ್ರಾಣ ದೇಹದಿಂದ ಕಳಚಿಕೊಂಡಾಗ ಮೈಯೆಲ್ಲ ಬೆವರುತ್ತದಾ? ಅಸಾಧ್ಯ ನೋವಾಗುತ್ತದಾ? ಗೊಂದಲಗಳಲ್ಲೇ ಕಣ್ಣು ಮುಚ್ಚಿದೆ.
ಫಕ್ಕನೆ ಎಚ್ಚರವಾಯ್ತು. ಕಣ್ಣು ಬಿಟ್ಟಾಗ ಬೆಳಿಗ್ಗೆ ಏಳು. ಇಷ್ಟಕ್ಕೂ ನಾನು ಈವರೆಗೆ ಅನುಭವಿಸಿದ್ದು ಕನಸೇ? ಕಾಳಿಂಗ ಸರ್ಪ ಕಚ್ಚಿದ್ದುನಿಜವಾ? ಕಚ್ಚಿದ್ದೇ ನಿಜವಾದರೆ ಅದು ನಿದ್ದೆಯಲ್ಲೋ,ಎಚ್ಚರದಲ್ಲೋ? ಇಷ್ಟೆಲ್ಲಾ ಆಗಿದ್ದರೂ ನಾನೇಕೆ ಸಾಯುತ್ತಿಲ್ಲ. ಸ್ಮೃತಿ-ವಿಸ್ಮೃತಿ
ಎದೆ ಶುಭ್ರವಾಗಿತ್ತು. ಮನಸ್ಸು ಗೊಂದಲಗಳ ಮೂಟೆ. ಮುಖಕ್ಕೆ ನೀರು ಚಿಮುಕಿಸಿದೆ. ಬಟ್ಟ ಬಯಲು ಅಪ್ಪಿಕೊಂಡ ಮೊದಲಮಳೆಯಂತೆ ಭಾಸವಾಯಿತು. ಉಲ್ಲಾಸ ಚಿಮ್ಮುತ್ತಿದೆಯೆನಿಸಿತು. ಎಂದಿನಂತೆ ಕನ್ನಡಿಯಲ್ಲಿ ಮುಖ ನೋಡಿಕೊಂಡೆ. ಬೆಚ್ಚಿಬಿದ್ದೆ. ಮೂರ್ಛೆ ಹೋಗುವುದೊಂದೇ ಬಾಕಿ. ಆಯಾಸಗಳೆಲ್ಲಾ ರಾತ್ರಿ ಕರಗಿ ನೆರಿಗೆಯಾಗಿ ಬಿದ್ದಿದೆಯೇನೋ ಎನ್ನುವಷ್ಟರ ಮಟ್ಟಿಗೆ ಮುಖದತುಂಬಾ ನೆರಿಗೆ. ಶುದ್ಧ ಬರಗೆಟ್ಟ ನೆಲದಂತಹ ಒಡೆದ ಮುಖ ವಿಕಾರವಾಗಿ ಆಕಳಿಸುತ್ತಿತ್ತು. ಬೆವರು ಕಟ್ಟೆ ಒಡೆಯಲು ಪ್ರಾರಂಭಿಸಿತು.ದೇಹ ಗಾಳಿಗೆ ಸಿಕ್ಕ ತರಗೆಲೆಯಂತೆ ಅಲ್ಲಾಡಿತು. ನನ್ನಲ್ಲಾದ ಬದಲಾವಣೆಯಿಂದ ಎದೆ, ಸಾವಿರ ಪಿಸ್ಟನ್ನಿನ ವೇಗದಂತೆಹೊಡೆದುಕೊಳ್ಳುತ್ತಿತ್ತು. ಸಾವು ರಕ್ತ ಹೀರಲು ಪ್ರಾರಂಭಿಸಿದೆಯೇ? ದಿನ ದಿನವೂ ಸ್ವಲ್ಪ ಸ್ವಲ್ಪವೇ ಸಾಯಲು ತಯಾರಿಮಾಡಿಕೊಳ್ಳಬೇಕೇ? ಇವತ್ತಂತೂ ಕಾಳೇಜಿಗೆ ಬೇಗ ಹೋಗಬೇಕು. ಅಸೈನ್ಮೆಂಟು ಬೇರೆ ಇಡಬೇಕು. ಸ್ನಾನಕ್ಕೆ ಬಚ್ಚಲಿಗೆ ಓಡಿದೆ. ಬೈರಾಸು ಜೊತೆಗಿತ್ತು. ಕರೆಂಟು ಬೇರೆ ಇರಲಿಲ್ಲ. ಹೊರಗೆ ಬೆಳಕಿದ್ದರೂ ಬಚ್ಚಲಿಗೆ ಯಾವತ್ತೂ ಸೂರ್ಯೋದಯವಾಗುತ್ತಿರಲಿಲ್ಲ. ಅಲ್ಲಿಬಲ್ಬೇ ಸೂರ್ಯ,ಚಂದ್ರ, ನಕ್ಷತ್ರ. ಇಲ್ಲದಿದ್ದರೆ ಅಮಾವಾಸ್ಯೆ ಕತ್ತಲು. ನಮ್ಮ ಮನೆಗೆ ಇದೊಂದು ಶಾಪ. ಬಾಲ್ದಿಗೆ ಹಂಡೆಯಿಂದ ಬಿಸಿನೀರು ತೋಡಿದೆ. ಸ್ವಲ್ಪ ತಣ್ಣೀರು ಹಾಕಿದೆ. ಉಗುರು ಬೆಚ್ಚಗಿನ ನೀರು ಅಂತ ಖಾತ್ರಿ ಮಾಡಿ, ಖುಷಿಯಿಂದ ಮೈಯ್ಗೆ ಸುರಿದಾಗ ಸುಟ್ಟುಹೋಗುವಷ್ಟು ಬಿಸಿ. ತಣ್ಣೀರು ಸಾಕಾಗಲಿಲ್ಲವೇನೋ. ಮತ್ತೆ ಬಾಲ್ದಿಗೆ ಸೇರಿಸಿದೆ. ಈಗಲೂ ಮೈ ತುಂಬಾ ಉರಿ, ಉರಿ. ಬಿಸಿ ನೀರಿನಸಹವಾಸ ಸಾಕಪ್ಪಾ ಸಾಕು ಅಂದುಕೊಂಡು ತಣ್ಣೀರನ್ನು ಮೈಗೆ ಹೊಯ್ದುಕೊಂಡೆ. ಯಾವತ್ತಿಗಿಂತಲೂ ನೀರು ತಂಪಾಗಿತ್ತು. ದೇಹಕ್ಕೂ ಹಿತ ಎನಿಸುತ್ತಿತ್ತು. ಮತ್ತೆರಡು ಬಾಲ್ದಿ ತಣ್ಣೀರು ಸುರಿದುಕೊಂಡೆ. ಜಲಪಾತವೊಂದರ ಕೆಳಗೆ ಬೆತ್ತಲೆ ನಿಂತ ಅನುಭವ. ಮನಸ್ಸು ಅರಳಲು ಪ್ರಾರಂಭವಾಯ್ತು. ಮೈಯೊರೆಸಲು ಬೈರಾಸು ತೆಗೆದಾಗ ಕರೆಂಟು ಬಂತು. ಒರಸುತ್ತಾ ಮೈ-ಕೈನೋಡಿಕೊಂಡಾಗ ಹೌಹಾರಿದೆ. ಎದೆಯ ಭಾಗದಲ್ಲಾಗಲೇ ಕೃಷ್ಣ ಕಪ್ಪು. ಕಪ್ಪುಪಟ್ಟೆ ಸುರುಳಿ ಬಿಚ್ಚಿತ್ತು. ಬಲಗೈಯ ಅರ್ಧಭಾಗದವರೆಗೆ ಹರಡಿ ಬೆಳೆಯುತ್ತಲೇ ಇತ್ತು. ನೋಡ ನೋಡುತ್ತಿದ್ದ ಹಾಗೆಯೇ ಸ್ವಲ್ಪ-ಸ್ವಲ್ಪವೇ ಆವರಿಸಿಕೊಳ್ಳುತ್ತಿತ್ತು. ಕಪ್ಪಾದಜಾಗದಲ್ಲೇನೋ ಮೃದುತ್ವ. ಮಿಂಚಿನ ಸಂಚಲನ.
ಅನುಮಾನವೇ ಇಲ್ಲ. ನಾನು ಸಾಯುತ್ತಿಲ್ಲ. ಹಾವಾಗಿ ಬದಲಾಗುತ್ತಿದ್ದೇನೆ. ಕಾಳಿಂಗ ಸರ್ಪವಾಗಿ ಬದಲಾಗುತ್ತಿದ್ದೇನೆ. ಸಾವು ಹೀಗೂಸಾಧ್ಯವಾ? ಪೂರ್ತಿ ಹಾವಾಗಿ ಹೆಡೆ ಬಿಚ್ಚಲು ಇನ್ನೆಷ್ಟು ಗಂಟೆ ಬೇಕು?ನಾನು ಹಾವಾಗಿ ಬದಲಾಗುತ್ತಿರುವುದು ವಾಸ್ತವವೇ ಅಥವಾನನ್ನ ಭ್ರಮೆಯ ಭಾಗವೇ? ಛೆ...ಛೆ... ಮನುಷ್ಯನೊಬ್ಬ ಹಾವಾಗುವುದು ಅಂದರೆ ನಂಬೋದಕ್ಕೆ ಸಾಧ್ಯಾನಾ? ಬಹುಷಃ ಸಾಯುವಮುಂಚೆ ಒಳ್ಳೆಯದೆಲ್ಲ ಕರಗಿ ಆವಿಯಾಗಿ ಕೆಟ್ಟದ್ದು ಕಪ್ಪಗಿ ಹೆಪ್ಪುಗಟ್ಟುತ್ತಿದೆಯೇ? ಗೊಂದಲದ ಕಡಲು ಉಕ್ಕುತ್ತಿತ್ತು.
ಕಾಳಿಂಗ ಕಚ್ಚಿದ ದಿನ ತೋಟದಿಂದ ಮನೆಗೆ ಬರುತ್ತಿದ್ದಾಗ ಗದ್ದೆ ಬದಿ ಅಚ್ಚಣ್ಣ ಸಿಕ್ಕಿದ್ದರು. ಮನೆಗೆ ಹೋಗಿದ್ದರಂತೆ. ನನ್ನನ್ನ ನೋಡಿತಿಂಗಳಾಯ್ತಲ್ಲೇನೋ ನಿನ್ನನ್ನ ನೋಡಿ. ದಿನೇ ದಿನೇ ತೆಳ್ಳಗಾಗುತ್ತಿದ್ದೀಯಾ ಮಾರಾಯ" ಅಂದರು. ನಾನು ನಗುತ್ತಾ "ಹೌದೌದುಮುಂದೊಂದು ದಿನ ಕರಗಿಯೇ ಹೋಗುತ್ತೇನೆ" ಎಂದಿದ್ದೆ. ಹಾಗಾದರೆ ನಾನು ಸಾಯುವ ವಿಚಾರ ನನಗೆ ಗೊತ್ತಿಲ್ಲದಿದ್ದರೂ, ನನ್ನಅರಿವಿಗೆ ಗೊತ್ತಿತ್ತಾ? ತಿಂಗಳಿನಿಂದ ಇಷ್ಟಿಷ್ಟೇ ಸಾಯುತ್ತಿದ್ದವನಿಗೆ ಸಾಯುತ್ತಿರುವ ಅನುಭವ ಕೊಟ್ಟದ್ದು ಕಾಳಿಂಗ ಸರ್ಪವಾ?
ಮೈ ಮುಚ್ಚಿಕೊಂಡು ಬಚ್ಚಲಿನಿಂದ ರೂಮಿಗೆ ದಡಬಡಿಸಿದೆ. ಉದ್ದನೆಯ ಕೈಯ ಅಂಗಿಯನ್ನು ಹುಡುಕಿ ಹಾಕಿದೆ. ಸರಸರ ನಡೆಯುತ್ತಾಗೇಟು ದಾಟಿದ ಮೇಲೆ 'ಅಮ್ಮ, ಕಾಲೇಜಿಗೆ ಹೋಗಿ ಬರ್ತೀನಿ' ಅಂತ ಕೂಗು ಹಾಕಿದೆ. 'ಕಾಲೇಜೂ ಬೇಡ. ಏನೂ ಬೇಡ. ಬೇಕಿದ್ದರೆಮಧ್ಯಾಹ್ನ ನಂತರ ಹೋದರಾಯಿತು' ಅಂತನ್ನಿಸುತ್ತಿತ್ತು. ಆದರೂ ಹೆಜ್ಜೆ ಸರಸರ ಸಾಗುತ್ತಿತ್ತು. ಮನೆಯಿಂದ ಎರಡು ಮೈಲಿ ನಡೆದರೆಸಾಕು. ಕಾಲೇಜಿಗೆ ಬಸ್ಸೋ, ಜೀಪೋ ಸಿಗುತ್ತಿತ್ತು. ಆದರೆ ಸಾಗುವ ಎರಡು ಮೈಲಿ ಮಾತ್ರ ನಿರ್ಜನ ಸಂತೆ. ಕಾಡು ಬೇರೆ. ಬಳುಕುವಹದಿಹರೆಯದ ಸುಂದರಿಯ ಹಾಗಿರುವ ಕಾಲುದಾರಿಯಲ್ಲಿ ನಡೆಯಬೇಕು.
ನಡೆಯುತ್ತಲೇ ಇದ್ದೆ. ಶ್ವಾಸಕೋಶಗಳನ್ನು ಮೊದಲ ಬಾರಿಗೆ ಹಿಂಡಿದಂತಾಯಿತು. ಕೆಮ್ಮು ಬಂತು ಅಂತ ಬಾಯಿ ತೆರೆದು ಕುಳಿತರೆಹೊರಬಿದ್ದದ್ದು ದೊಡ್ಡ ಶ್ವಾಸ. ನಂತರ ನಾನು ನಾನಾಗಿರಲಿಲ್ಲ. ಮೂಗಿನ ಹೊಳ್ಳೆ ಒಳಗೆ ಹೋದ ಗಾಳಿ ಹೊರ ಬಂದಾಗ ಬುಸ್ಎಂದು ಶಬ್ದ ಮಾಡುತ್ತಿತ್ತು. ಹೊರ ಬರುವ ಗಾಳಿಯಲ್ಲಿ ರೋಷವಿತ್ತೋ, ಆವೇಶವಿತ್ತೋ ಬಲ್ಲವರಾರು. ಅರ್ಧ ಮೈಲಿ ನಡೆದಿರಬಹುದು.
ನಡಿಗೆ ಮತ್ತೂ ವೇಗವಾಗುತ್ತಿದೆಯಲ್ಲ ಎಂದು ನನ್ನನ್ನ ನೋಡಿಕೊಂಡಾಗ ಆಶ್ಚರ್ಯವಾಯ್ತು. ನಾನು ನಡೆಯುತ್ತಿಲ್ಲ, ತೆವಳುತ್ತಿದ್ದೇನೆ. ಕೈ,ಕಾಲುಗಳೆಲ್ಲಾ ಅಂಟಿ ಆಗಲೇ ಹೊತ್ತಾಗಿತ್ತು. ಅಡ್ಡಡ್ಡ ಬೆಳೆದಿದ್ದವನು ದಾರಿಯುದ್ದಕ್ಕೂ ಉದ್ದುದ್ದ ಬೆಳೆದಿದ್ದೆ. ಆದರೆ ಎದೆಲ್ಲ ನನ್ನಗಮನಕ್ಕೇ ಬರಲಿಲ್ಲ. ಹಾಕಿದ್ದ ಜೀನ್ಸ್ ಪ್ಯಾಂಟು, ಅಂಗಿ ಪೊರೆ ಕಳಚಿದಂತೆ ದಾರಿಯಲ್ಲಿ ಕಳಚಿ ಬಿದ್ದಿತ್ತು. ನಗ್ನದೇಹಿ ನಾನೀಗ. ಸಾಯುವ ಪ್ರತೀ ಪ್ರಕ್ರಿಯೆಯೂ ಹೀಗೇನಾ? ನಡೆದೇ ಸಾಯಬೇಕಾ? ಕತ್ತು, ಮುಖ ಎರಡನ್ನು ಬಿಟ್ಟು ಇಡೀ ದೇಹ ಕಪ್ಪು ಕಪ್ಪಾಗಿತ್ತು. ಮೆತ್ತಗಾಗಿತ್ತು. ಸದ್ಯ, ಮಾತನಾಡಲಾದರೂ ಸ್ವಾತಂತ್ರ್ಯವಿದೆಯಲ್ಲ ಅಂದುಕೊಂಡೆ.
ಕ್ಲಾಸು ತಲುಪಿದೆ. ಆವತ್ತಿನ ಮೊದಲ ಪಿರೇಡು ಇಂಗ್ಲೀಷ್ ಲಿಟರೇಚರ್. ಕ್ಲಾಸಿಗೆ ಬಂದ ಪ್ರೊಫೆಸರ್ರು ಅಟೆಂಡೆನ್ಸು ಕರೆಯಲು ಶುರುಮಾಡಿದರು. ನನ್ನ ಹೆಸರು ಕರೆದರು. ಎಂದಿನಂತೆ 'ಎಸ್ ಸಾರ್' ಅಂದೆ. ಯಾವುದೋ ಅಗೋಚರ ಸಿಡಿಲ ಧ್ವನಿಸುಳಿಗಾಳಿಯೊಂದಿಗೆ ಹೊರಬಂದಂತಿತ್ತು, ಆ ನನ್ನ ಮಾತು. ನಾನು ಮಾತಾಡಿರಲಿಲ್ಲ, ಬುಸುಗುಟ್ಟಿದ್ದೆ. ನಾನು ಕುಳಿತುಕೊಳ್ಳುವಜಾಗದಲ್ಲಿ ನಾನಿರಲಿಲ್ಲ! 'ಸಾರ್ ನಾನು ಕಾಳಿಂಗ ಸರ್ಪವಾಗಿ ಬದಲಾಗಿದ್ದೇನೆ' ಎಂದು ಹೇಳಿದೆ. ಮೆಟಫಿಜಿಕಲ್ ಪೋಯೆಟ್ರಿಎಂದೆಲ್ಲಾ ಬಡಬಡಿಸುತ್ತಿದ್ದ ಪ್ರೊಫೆಸರಿಗೆ ನಾನವತ್ತು ಸೂಪರ್ ನ್ಯಾಚುರಲ್ ಎಲಿಮೆಂಟಿನಂತೆ ಕಂಡೆ. ಒಂದರೆಕ್ಷಣ ಇಡೀ ತರಗತಿಸ್ಥಬ್ದ. ನಂತರದ್ದು ಎದ್ದೆವೋ ಬಿದ್ದೆವೋ ಎಂಬ ಓಟ. ಜೊತೆಗೆ ಕಿರುಚಾಟ, ಅರಚಾಟ. ಕಾಳಿಂಗ....ಕಾಳಿಂಗ....ಸರ್ಪ....ಕಾ "
'ಥೂ ಇವರ ಸಹವಾಸವೇ ಬೇಡ. ಬದಲಾದವರು ಯಾವತ್ತಿಗೂ ಇವರಿಗೆ ಬೇಡ. ಮೊದಲ ನೋಟದಲ್ಲಿ ಅವರಿಗೆ ಕಂಡ ಹಾಗೇನಾವಿರಬೇಕು. ಹಾಗಿದ್ದರೆ ಮಾತ್ರ ಲೋಕಕ್ಕೆ ಪ್ರೀತಿ-ಪಾತ್ರ. ಇತರರಿಗೆ ಬೇಕಾದಂತೆ ಬದುಕಬೇಕು. ಆಗ ಬದಲಾಯಿತು ಮುಖಅಂಗೈಯಗಲದ ಹೆಡೆಯಂತೆ. ಮೂಡಿತು ರೋಷದ ಕಡಲು. ರಣಚಂಡಿ ಬುಸುಗುಡುವಿಕೆ.
ಸೀದಾ ತೆವಳುತ್ತಾ, ಓಡುತ್ತಾ ಗುಡ್ಡವೊಂದರ ತುದಿಗೆ ಹೋಗಿ ನಿಂತೆ. ತುಂಬಾ ಹೊತ್ತು ಒಂಟಿಯಾಗಿದ್ದೆ. ನಿರಾಶನಾಗಿದ್ದೆ. ನನ್ನಬುಸುಗುಡುವಿಕೆ ಮಾತ್ರ ಕೇಳಿಸುತ್ತಿತ್ತು. ಮುಂದೇನು? ತೋಚಲಿಲ್ಲ. ಆಗ ಬಂದದ್ದು ರಣಹದ್ದು. ಗುಡ್ಡದ ಏಕಾಂಗಿ ಬೋಳು ಮರದತುದಿಯಲ್ಲಿ ಕೂತು ನನ್ನನ್ನೇ ನೋಡುತ್ತಿತ್ತು. ನಾನೂ ಹೆಡೆಯರಳಿಸಿದೆ. 'ನಿನಗೆ ಆಗಸ ತೋರಿಸುತ್ತೇನೆ. ಕನಸು ಕಾಣಬೇಡ. ಭವಿಷ್ಯದ ಚಿಂತೆ ಬೇಡ. ನಾನೇ ನಿನ್ನ ಕನಸು. ಎತ್ತರಕ್ಕೇರಲು ಗೋಪುರ ಕಟ್ಟಿದರೆ ಸಾಲದು. ಧೈರ್ಯ ಬೇಕು, ಬಾ' ಎಂದಿತು. ಕೊಕ್ಕಿನಿಂದ ಕುಕ್ಕಿತು.
ಆಗ ನಾನಂತೂ ಪೂರ್ಣ ಶೂನ್ಯ.
(ಉದಯವಾಣಿಯಲ್ಲಿ ಪ್ರಕಟವಾದ ಕತೆ)
15 ಕಾಮೆಂಟ್ಗಳು:
kathe thumba chennagide karthik,
kafkana "roopantara" mattu ravi belagereya "vrunda" nenapaayitu.
yako swalpa dull annistu. niroopanaa shaili nice.
ನಂಗೂ ಇದು ಎಲ್ಲೋ ಕಾಫ್ಕನ ಕಥೆಯನ್ನು ಹೋಲುತ್ತದೆಯಲ್ಲಾ ಅನ್ನಿಸಿತು.ಚೆನ್ನಾಗಿದೆ ಕತೆ.
Superb..tumba chennagide. andhage nanna blog ondu open madiddene. sadya adre nodu.. gadibiyalli seari baredilla...
dear karthik,
hostagi ondu kthe brediddiya..chennagide. kafka,kamu ella avarapadige irali..ninu bredirodu mukhya.gud luk
super untu maraaya kathe.i like the way you write,which is toching my heart.
ಪುಟ್ಟ ಪುಟ್ಟ ವಾಕ್ಯಗಳಲ್ಲಿ ಕುತೂಹಲದಿಂದ ಬಿಚ್ಚಿಕೊಳ್ಳುವ ಕಥೆ ನಿಜಕ್ಕೂ ಚೆನ್ನಾಗಿದೆ ಕಾರ್ತಿಕ್
its really nice Kartik! I was amazed at the the way it opens up kand the power it has to keep the reder to hold in itself
ಕತೆ ಚೆನ್ನಾಗಿದೆ ಕಾರ್ತಿಕ್, ಓದಿದ ತಕ್ಷಣ ರವಿ ಬೆಳಗೆರೆಯವರ ’ವಿಂದ್ಯ’ ಕತೆ ನೆನಪಾಯಿತು.
ಆಕಸ್ಮಿಕವಾ?
- ಪಲ್ಲವಿ ಎಸ್.
ಚೆನ್ನಾಗಿದೆ.......... ಕುಂಟಿನಿ ಮಾತಿಗೆ ನನ್ನದೂ ಓಟ್
ಕಾರ್ತಿಕ್,
ಕಥೆ ತುಂಬ ಚೆನ್ನಾಗಿದೆ. ಬ್ಲಾಗಿಗೆ ಬಂದು ಖುಶಿ ಅನ್ನಿಸಿತು. ಚಂದ ಓದಿಸಿಕೊಂಡು ಹೋಗುತ್ತೆ ನಿಮ್ಮ ಬರವಣಿಗೆ.
ಅಕ್ಕರೆ, ಟೀನಾ.
ಕಾರ್ತೀಕ್ ನನಗೂ ಈ ಕಥೆ ಓದಿದ ತಕ್ಷಣ ರವಿ ಬೆಳೆಗೆರೆ ಬರೆದ ವಿಂದ್ಯಾ ನೆನಪಾಯಿತು. ಈ ಕಥೆ ಅದರ ಮತ್ತೊಂದು ರೂಪ ಅನ್ನಿಸುತ್ತಿದೆ. ಎನಿವೇ ನರೇಷನ್ ಸೊಗಸಾಗಿದೆ.
ವಿನಾಯಕ ಕೋಡ್ಸರ
ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?
can you email me: mcbratz-girl@hotmail.co.uk, i have some question wanna ask you.thanks
Yiwu is a famous international trade city, the yiwu market is the world's largest wholesale market of small commodities. Let us go to Yiwu city to buy China wholesale products.
ಕಾಮೆಂಟ್ ಪೋಸ್ಟ್ ಮಾಡಿ