ಊರಿಂದ ಪೇಟೆಗೆ ಹೊರಟಿದ್ದೆ.
ನನ್ನ ಸೀಟ್ ನಂಬರು:ಎ4, ಸ್ಲೀಪರ್ ಸೀಟು.
ಮೂಡುಬಿದಿರೆಯ ಏಕಾಂಗಿತನ, ಉಜಿರೆ ಪಕ್ಕದ ಕುಡುಮೌನಿ ಗಡಾಯಿಕಲ್ಲು, ಧರ್ಮಸ್ಥಳದ ದೀಪದ ಬೆಳಕು ದಾಟಿದಾಗ ಹತ್ತಿರ ಹತ್ತಿರ ಹನ್ನೆರಡು.
ಉಳುಕುತ್ತಾ,ಬಳುಕುತ್ತಾ ಬಸ್ಸು ಶಿರಾಡಿ ಘಾಟಿ ಏರುತ್ತಿದ್ದದ್ದು, ಬಲ ಬದಿಯಲ್ಲಿ ಜನರೇಟರಿನ ಬೆಳಕಲ್ಲಿ ರಾತ್ರಿ ಪಾಳಿಯ ಹೆಂಗಸರು, ಗಂಡಸರು ಗುಂಡ್ಯದ ಹೊಳೆಯ ಅಣೆಕಟ್ಟಿಗೆ ಕಾಂಕ್ರೀಟು ಹೊರುತ್ತಿದ್ದುದು ನೋಡಿದೆ. ನೋಡಿ ಆನಂದಿಸುವುದೋ, ದುಃಖಿಸುವುದೋ ಎಂದು ತಿಳಿಯುವ ಮೊದಲೇ ಮಂಪರು ನಿದ್ದೆ.
ಎದ್ದಾಗ ಬಸ್ಸು ಎಲ್ಲೋ ನಿಂತಿತ್ತು.
ಆಗ ಗಂಟೆ ಎರಡು. ಬಸ್ಸಿನಲ್ಲಿದ್ದವರಲ್ಲಿ ಬಹಳಷ್ಟು ಮಂದಿ ಹೊರಗೆ ಹೋಗಿದ್ದರು. ಉಳಿದವರು ಕೂತಲ್ಲಿ, ಕೆಲವರು ಮಲಗಿದಲ್ಲಿ ಚೆಲ್ಲಾಪಿಲ್ಲಿಯಾಗಿದ್ದರು.
ಅಷ್ಟು ಹೊತ್ತು ಬಲವಂತದಿಂದ ಕಟ್ಟಿಕೊಂಡಿದ್ದ ಉಚ್ಚೆಯನ್ನು ಹೊರಹಾಕಲು ಓಡಿದೆ. ಕೊರೆಯುವ ಚಳಿ. ಒಂದೈದು ನಿಮಿಷ ಒದ್ದಾಡಿದೆ.
ಒಂದರ ಪಕ್ಕ ಒಂದು. ಮಹಾನಗರದ ಕಡೆ ಹೊರಟ ಬಸ್ಸುಗಳು. ಕೆಲವರು ಹೊರಗಡೆ ಕಾಫಿ ಹೀರುತ್ತಿದ್ದರು. ಚಳಿಯಲ್ಲಿ ನಡುಗುತ್ತಿದ್ದರು. ಹೋಟೇಲಿನ ಸಿಡಿ ಪ್ಲೇಯರ್ "ಏನೋ ಒಂಥರಾ" ಎಂದು ಅರಚುತ್ತಿತ್ತು.
ಸ್ವಲ್ಪ ಹೊತ್ತಲ್ಲೇ
ಒಂದೊಂದೇ ಹೆಡ್ ಲೈಟುಗಳು ಬೆಳಗಿದವು.
ಬಸ್ಸಿನ ಡ್ರೈವರುಗಳು ಅಕ್ಸಿಲೇಟರಿನ ಮೇಲೆ ಕಾಲು ಅದುಮಲು ಶುರುಮಾಡಿದರು. ಸ್ಟೇರಿಂಗಿನ ಆಣತಿಯಂತೆ ಚಕ್ರಗಳು ತಿರುಗಿದವು ವೇಗವಾಗಿ, ಆಚೆ-ಈಚೆ.
ನನ್ನದು ಯಾವ ಬಸ್ ನಂಬರು?
C1, M,Y,Z,1,2,3.......??????????
ಆ ಕ್ಷಣಕ್ಕೆ ಹೊಳೆಯಲಿಲ್ಲ.
ಅಕ್ಸಿಲೇಟರಿನ ವೇಗಕ್ಕೆ ಬಸ್ಸಿನ ಟಯರುಗಳು ಸ್ಪೀಡಾಗಿ ನನ್ನಿಂದ ದೂರ ಓಡಲು ಶುರು ಮಾಡಿದವು.
ವೇಗವಾಗಿ ಮತ್ತೂ ವೇಗವಾಗಿ.
ಸೋಮವಾರ, ಅಕ್ಟೋಬರ್ 13, 2008
ಶುಕ್ರವಾರ, ಅಕ್ಟೋಬರ್ 10, 2008
ಸಿಗ್ನಲ್ಲು ಹಳದಿಯಿಂದ ಹಸಿರಿಗೆ ತಿರುಗುತ್ತಿದ್ದಾಗ...(ಪುಟಾಣಿ ಕತೆ-8)
ಮೊನ್ನೆ ಮೊನ್ನೆ ಜೆ.ಸಿ.ರೋಡ್ ಬ್ಲಾಕ್ ಆದಾಗ ಒಂದು ಮುಖ ಕಂಡಿತ್ತು, ಟ್ರಾಫಿಕ್ಕಿನ ಮಧ್ಯೆ.
ತುಂಬಾ ಪರಿಚಿತ ಮುಖ ಅದು.
ಸಿಗ್ನಲ್ ಹಳದಿ ದೀಪಕ್ಕೆ ತಿರುಗಿ ನಂತರ ಹಸಿರು ದೀಪವನ್ನು ತೋರಿಸುತ್ತಿದ್ದಾಗ ಈ ಘಟನೆ ಸಂಭವಿಸಿದ್ದು.
ಮತ್ತೆ ಜೆ.ಸಿ. ರೋಡ್ ಬ್ಲಾಕ್ ಆಗಲಿಲ್ಲ.
ಇವತ್ತು ಟ್ರಾಫಿಕ್ ಜಾಮ್ ಆಗಿದೆ.
ಸಿಗ್ನಲ್ಲು ಹಳದಿಯಿಂದ ಹಸಿರಿಗೆ ತಿರುಗುತ್ತಿದೆ.
ಟ್ರಾಫಿಕ್ಕಿನ ಮಧ್ಯೆ ಯಾವುದೋ ಮುಖ ಮತ್ತೆ ಮತ್ತೆ ಪರಿಚಿತ ಅನ್ನಿಸುತ್ತಿದೆ.
ಇದು ಅದೇ ಹಳೆಯ ಮುಖವಾ ಅಥವಾ ಹೊಸ ಮುಖವಾ?
ಭಾನುವಾರ, ಅಕ್ಟೋಬರ್ 5, 2008
ವಿಧೇಯನಾಗಿ ಉಳಿದು ಹೋದ ಒಬ್ಬ ಸಾಮಾನ್ಯ ಮನುಷ್ಯ
ನಮಗೆಲ್ಲಾ ರಾಜ್ ಕುಮಾರ್ ಇವತ್ತಿಗೂ ಇಷ್ಟವಾಗುವುದಕ್ಕೆ ಕಾರಣಗಳಿವೆ.
ನಾವ್ಯಾವತ್ತೂ ಆತನನ್ನು ಹೊರಗಿನವನು ಅಂತ ಪರಿಗಣಿಸಲೇ ಇಲ್ಲ. ಇವತ್ತಿಗೂ ಆ ರಾಜಕುಮಾರ ನಮ್ಮ ಮನೆಯವನೇ. ಅಕ್ಕರೆಯ ಅಣ್ಣ, ಒಲುಮೆಯ ಗಂಡ,ನಲ್ಮೆಯ ಗೆಳೆಯ, ವಿಧೇಯ ಮಗ, ಬುದ್ಧಿವಂತ, ಹೃದಯವಂತ ವ್ಯಕ್ತಿಯಾಗಿಯೇ ನಮ್ಮ ಭಾವಕೋಶದಲ್ಲಿ ಉಳಿದು ಬಿಟ್ಟಿದ್ದಾನೆ.
ಆತನ ಸಿನಿಮಾಗಳಿಂದ ನಾವು ಕಲಿತಿದ್ದನ್ನು ಮರೆಯಲು ಸಾಧ್ಯವೇ....?
ಅವರೊಂಥರಾ ನಮ್ಮೆಲ್ಲರ ಪ್ರೀತಿಯ ಮೇಷ್ಟ್ರು. ಅದೆಷ್ಟು ಬಾರಿ ತಿದ್ದಿ, ತೀಡಿದ್ದಾರೆ ಅಪ್ರತ್ಯಕ್ಷವಾಗಿ. ಅದಕ್ಕೇ ರಾಜ್ ಹೊರಗಿನವರಲ್ಲ. ನಮ್ಮ ಕುಟುಂಬದ ಸದಸ್ಯ ಎನ್ನಲು ಪ್ರತೀ ಬಾರಿ ಹೆಮ್ಮೆ ಎನಿಸುತ್ತದೆ.
ಈ ಭಾವನೆ ಕರ್ನಾಟಕದುದ್ದಕ್ಕೂ ಇದೆ. ತಮ್ಮ ಸರಳ, ಸಜ್ಜನ, ನಡೆ-ನುಡಿ, ಅಭಿನಯದ ಮೂಲಕ ಪ್ರೀತಿಯ,ಸಂವೇದನೆಯ ಕೋಟೆಯನ್ನು ನಮ್ಮೊಳಗೆ ಕಟ್ಟಿ ಹೋಗಿದ್ದಾರೆ ರಾಜ್. ಅಭಿಮಾನಿಗಳಿಗೆ ಆತ ನಟಸಾರ್ವಭೌಮ, ವರನಟ, ಕನ್ನಡ ಕಂಠೀರವ. ಆದರೆ ನಮ್ಮೆಲ್ಲರ ಪಾಲಿಗೆ ಆತ ಕೇವಲ ರಾಜಣ್ಣ. "ಅಭಿಮಾನಿ ದೇವರುಗಳೇ" ಎಂದು ಸಂಬೊಧಿಸುತ್ತಾ ವಿಧೇಯನಾಗಿ ಉಳಿದು ಹೋದ ಒಬ್ಬ ಸಾಮಾನ್ಯ ಮನುಷ್ಯ.
ಅತ್ಯಂತ ಹಿಂದುಳಿದ, ಬಡ, ರೈತಾಪಿ ಕುಟುಂಬದಿಂದ ಬಂದ ದೊಡ್ಡ ಗಾಜನೂರಿನ ಸಿಂಗಾನೆಲ್ಲೂರು ಪುಟ್ಟಸ್ವಾಮಯ್ಯನವರ ಮಗ ಮುತ್ತುರಾಜ್, ಯಾವ ಗಾಡ್ ಫಾದರುಗಳ ಹಂಗಿಲ್ಲದೆ ಕನ್ನಡಿಗರ ಕಣ್ಮಣಿಯಾಗಿ ಬೆಳೆದ ರೀತಿ ಕಣ್ಮನ ತಣಿಯುವಷ್ಟೇ ಅಪೂರ್ವ. ರಾಜ್ ಕುಮಾರ್ ಅಭಿನಯಿಸಿದಷ್ಟು ವೈವಿಧ್ಯಮಯ ಪಾತ್ರಗಳು ಬಹುಷಃ ಇನ್ಯಾವ ನಟನಿಗೂ ಒಲಿದಿಲ್ಲ. ಸಾಮಾಜಿಕ ಪಾತ್ರಗಳಿಗಿಂತ ಪೌರಾಣಿಕ, ಐತಿಹಾಸಿಕ ಪಾತ್ರಗಳಿಂದಲೇ ರಾಜ್ ಕುಮಾರ್ ಮನೆ-ಮನ ತಟ್ಟಿದವರು.
ಬಬ್ರುವಾಹನನ ಆ ಅಸ್ಖಲಿತ ಸಂಭಾಷಣೆ, ಆವೇಶ ಮರೆಯಲು ಸಾಧ್ಯವೇ?--"ಏನು ಪಾರ್ಥ, ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನ ಗೆಲ್ಲಲಾರೆ" ಎನ್ನುವ ಸಂಭಾಷಣೆ ರಾಜ್ ಬಾಯಿಂದ ಕೇಳಿದರೆ ಇವತ್ತಿಗೂ ರೋಮಾಂಚನ,ಮೈಯೆಲ್ಲ ಕಿವಿಯಾಗುತ್ತದೆ. ಅರ್ಜುನನ ಬಗ್ಗೆ ಅನುಮಾನಗಳೇಳುತ್ತವೆ. ಯಾವ ಪಾತ್ರ ಕೊಟ್ಟರೂ ಪರಕಾಯ ಪ್ರವೇಶವೇ. ಕನಕದಾಸ, ಪುರಂದರದಾಸ, ಪುಲಿಕೇಶಿ, ಕಾಳಿದಾಸ, ಮಯೂರ ,ಕೃಷ್ಣದೇವರಾಯ ಹೇಗಿದ್ದರೋ ಗೊತ್ತಿಲ್ಲ. ಆದರೆ ಅವರನ್ನೆಲ್ಲಾ ನಾವು ಸಾಕ್ಷಾತ್ ನೋಡುವಂತಾಗಿದ್ದು ರಾಜ್ ಕುಮಾರ್ ಮೂಲಕ."ಬಂಗಾರದ ಮನುಷ್ಯ" ರಾಜೀವನನ್ನು ಮರೆತೆನೆಂದರೂ ಮರೆಯಲಿ ಹ್ಯಾಂಗ?
ಇವತ್ತು ಚಲನಚಿತ್ರ ಎನ್ನುವುದು ಪಕ್ಕಾ ಉದ್ಯಮ. ವ್ಯಾಪಾರಿ ಮನಃಸ್ಥಿತಿ, ಲಾಭ-ನಷ್ಟಗಳ ಲೆಕ್ಕಾಚಾರಗಳೇ ಏಣಿಯ ಅಂತಿಮ ಮೆಟ್ಟಿಲುಗಳು. ಆದರೆ ಚಲನಚಿತ್ರ ಮಾಧ್ಯಮವನ್ನು ಸಾಂಸ್ಕೃತಿಕ ಮಾಧ್ಯಮವಾಗಿ ಜೀವಿತಾವಧಿವರೆಗೂ ಬೆಳೆಸಿದ, ಪೊರೆದುಕೊಂಡು ಬಂದವರಲ್ಲಿ ರಾಜ್ ಅಗ್ರಗಣ್ಯ. ಡಬ್ಬಿಂಗ್ ಹಾವಳಿ ತಪ್ಪಿಸಲು ಸ್ನೇಹಿತರ ಜೊತೆ ಸೇರಿಕೊಂಡು ನಿರ್ಮಿಸಿದ "ರಣಧೀರ ಕಂಠೀರವ" ಚಲನಚಿತ್ರ ರಾಜ್ ಕುಮಾರ್ ಅವರಿಗಿದ್ದ ಸಾಂಸ್ಕೃತಿಕ ಮಾಧ್ಯಮದೆಡೆಗಿನ ಕಾಳಜಿಯ ಮತ್ತೊಂದು ರೂಪ. ಅನ್ಯ ಭಾಷಾ ಚಿತ್ರಗಳಲ್ಲಿ ನಟಿಸುವುದಿಲ್ಲ ಎನ್ನುವ ತಮ್ಮ ನಿಲುವಿಗೆ ಬದ್ಧವಾಗಿದ್ದದ್ದು, ಇದೇ ಕಾರಣಕ್ಕಾಗಿ ಅಮಿತಾಭ್ "ಕೂಲಿ" ಚಿತ್ರದಲ್ಲೊಂದು ಪಾತ್ರ ನಿರ್ವಹಿಸಲು ವಿನಂತಿಸಿದಾಗ ತಿರಸ್ಕರಿಸಿದ್ದು....... ಗೋಕಾಕ್ ಚಳವಳಿ ರಾಜ್ ಕುಮಾರ್ ಪ್ರವೇಶದ ನಂತರ ಪಡೆದುಕೊಂಡ ಜನಬೆಂಬಲ, ಸ್ಪಂದನೆ ಅವರ ಸಿನಿಮಾಗಳಷ್ಟೇ ಅಪೂರ್ವ ದ್ರಶ್ಯಾವಳಿಗಳ ಸಂಕಲನ.
"ಯಾರೇ ಕೂಗಾಡಲಿ, ಊರೇ ಹೋರಾಡಲಿ" ಎಂದು ಹಾಡಲು ಶುರು ಮಾಡುತ್ತಾ, "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು", "ಜನರಿಂದ ನಾನು ಮೇಲೆ ಬಂದೆ" ಎನ್ನುತ್ತಾ ಹೊಸ ಸಂಕಲ್ಪಕ್ಕೆ, ದೀಕ್ಷೆಗೆ, ಬದ್ಧತೆಗೆ ಜನಸಾಮಾನ್ಯನನ್ನು ತೆರೆದುಕೊಳ್ಳುವಂತೆ ಮಾಡಿದ್ದು ನಮ್ಮ ರಾಜ್ ಕುಮಾರ್.
ಇವತ್ತಿಗೂ ಕೂಡಾ ಮುತ್ತುರಾಜನ "ರಾಜಕುಮಾರ" ಎನ್ನುವ ಚೇತನ ಅನೇಕರ ಬದುಕುಗಳನ್ನು ಕಟ್ಟಿಕೊಳ್ಳಲು ಸಹಾಯಮಾಡುತ್ತಿದೆ, ತಿದ್ದಿಕೊಳ್ಳಲು ನೆರವಾಗುತ್ತಿದೆ. ಕುಸಿದು ಬಿದ್ದ ಮನೆಯ ಒಂದೊಂದೇ ಇಟ್ಟಿಗೆ ಪೇರಿಸಲು ಸಹಾಯ ಮಾಡುತ್ತಿದೆ.
ಇದೆಲ್ಲವನ್ನು ಸಾಧ್ಯಮಾಡುವುದು ಮತ್ತದೇ ನಮ್ಮ ರಾಜ್ ಕುಮಾರ್ ಎಂಬ ಪ್ರೀತಿಯ ಮೇಷ್ಟ್ರು, ಅಕ್ಕರೆಯ ಅಣ್ಣ, ಒಲುಮೆಯ ಗಂಡ, ನಲ್ಮೆಯ ಗೆಳೆಯ, ವಿಧೇಯ ಮಗ, ಬುದ್ಧಿವಂತ, ಹೃದಯವಂತ .......
ಎಲ್ಲಕ್ಕಿಂತ ಹೆಚ್ಚಾಗಿ ವಿಧೇಯನಾಗಿ ಉಳಿದು ಹೋಗುವ ಮನುಷ್ಯ.
ಚಿತ್ರಕೃಪೆ :ಪಿಕಾಸ ವೆಬ್ ಆಲ್ಬಮ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)