"ಈ ಪುಸ್ತಕ ಚಿತ್ರ ತಯಾರಿಕೆಗಾಗಲಿ, ಚಿತ್ರ ತಂತ್ರಜ್ಞರಾಗಲಿ ಅಥವಾ ಚಿತ್ರ ವಿದ್ಯಾರ್ಥಿಗಳಿಗಾಗಲಿ ರಚಿತವಾದ ಕೈಪಿಡಿ ಅಥವಾ ಪಠ್ಯವಲ್ಲ; ಚಲನಚಿತ್ರವೆಂಬ ಹೊಸ ಯಂತ್ರ ಭಾಷೆಯ ಪ್ರಕ್ರಿಯೆಗಳನ್ನು ಸ್ಥೂಲವಾಗಿ ಅರಿವುಗೊಳಿಸಿಕೊಂಡು ಚಲನಚಿತ್ರ ಸಹೃದಯತೆಯನ್ನು ರೂಢಿಸಿಕೊಳ್ಳಲು ಬಯಸುವ ಸಾಮಾನ್ಯ ಓದುಗರಿಗೊಂದು ಪರಿಚಯ ಪುಸ್ತಕ" ಎಂದು "ಸಿನಿಮಾದ ಯಂತ್ರಭಾಷೆ" ಪುಸ್ತಕದ ಪ್ರಾರಂಭದ ಪುಟಗಳಲ್ಲೇ ಸ್ಪಷ್ಟಪಡಿಸುತ್ತಾರೆ ಲೇಖಕರಾದ ಕೆ.ವಿ ಸುಬ್ಬಣ್ಣ ಮತ್ತು ಅಕ್ಷರ. 1981ರಲ್ಲಿ ಪ್ರಥಮ ಮುದ್ರಣ ಈ ಪುಸ್ತಕ ಕನ್ನಡದಲ್ಲಿ ಸಿನಿಮಾದ ತಾಂತ್ರಿಕತೆ ಕುರಿತು ಓದಲು ಸಿಗುವ ಅಪೂರ್ವ ಪುಸ್ತಕಗಳಲ್ಲೊಂದು(ಈಗ ಪ್ರತಿಗಳು ಲಭ್ಯವಿಲ್ಲ). ಇದಕ್ಕಿಂತ ಮೊದಲು ಬಿ ಪುಟ್ಟಸ್ವಾಮಿ, ಅಬ್ದುಲ್ ರೆಹಮಾನ್ ಪಾಶಾ ಸಿನಿಮಾ ತಾಂತ್ರಿಕತೆ ಕುರಿತು ಬರೆದಿದ್ದರೂ ಅದು ತಾಂತ್ರಿಕತೆಯ ಅಂಶಗಳನ್ನು ಒಳಗೊಂಡ ವ್ಯಾಪ್ತಿ ಬಹಳ ಸಣ್ಣದಿತ್ತು. ನಂತರದ ದಿನಗಳಲ್ಲಿ ಕನ್ನಡದಲ್ಲಿ ಸಿನಿಮಾ ತಾಂತ್ರಿಕತೆಯ ಕುರಿತು ಬಂದ ಪುಸ್ತಕವೇ ವಿರಳ. ಅದರಲ್ಲಿ ನೆನಪಿನಲ್ಲುಳಿಯುವ ಪುಸ್ತಕ "ಸಿನಿಮಾದ ಯಂತ್ರ ಭಾಷೆ". ಹೆಗ್ಗೋಡಿನ ನೀನಾಸಂ ಚಿತ್ರ ಸಮಾಜದ ಪರವಾಗಿ ಅಕ್ಷರ ಪ್ರಕಾಶನ ಇದನ್ನು ಪ್ರಕಟಿಸಿದೆ.
224 ಪುಟಗಳ ಈ ಪುಸ್ತಕ ಸಿನಿಮಾವನ್ನು ಕೇವಲ ಕತೆಯ ಅಥವಾ ಭಾವನಾತ್ಮಕ ನೆಲೆಯಲ್ಲಿ ಮಾತ್ರವಲ್ಲದೆ ತಾಂತ್ರಿಕವಾಗಿ ಅರ್ಥೈಸಿಕೊಳ್ಳಲು ಸಹಕಾರಿ. ಸಿನಿಮಾದ ತಾಂತ್ರಿಕ ಅಂಶಗಳನ್ನು ಸಾಮಾನ್ಯನಿಗೆ ಅರ್ಥವಾಗುವ ಭಾಷೆಯಲ್ಲಿ ವಿವರಿಸಿರುವುದು ಈ ಪುಸ್ತಕದ ಬಹುದೊಡ್ಡ ಶಕ್ತಿ. ಪುಸ್ತಕವನ್ನು 5 ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದೆ. ಸಿನಿಮಾದ ಹಿನ್ನೆಲೆ-ಹುಟ್ಟು, ಯಂತ್ರ ಪ್ರಕ್ರಿಯೆ, ತಂತ್ರ ಪ್ರಕ್ರಿಯೆ, ನಿರ್ಮಾಣ ಪ್ರಕ್ರಿಯೆ, ಭಾಷಾ ಪ್ರಕ್ರಿಯೆ ಎನ್ನುವ ವಿಭಾಗಗಳಲ್ಲಿ ಒಟ್ಟು ಸಿನಿಮಾ ತಾಂತ್ರಿಕವಾಗಿ ನಿರ್ಮಾಣವಾಗುವ ವಿವಿಧ ಹಂತಗಳ ಸ್ಥೂಲ ನೋಟವಿದೆ. ಸಿನಿಮಾದ ಜೀವಾಳವಾದ ದೃಷ್ಟಿ ವಿಶೇಷ ತತ್ವ(persistence of vision) ಕುರಿತ ವಿವರಣೆ, ಕ್ಯಾಮರಾ ಕೆಲಸ ಮಾಡುವ ರೀತಿ, ಲೆನ್ಸ್, ರೀಲ್, ಕ್ಯಾಮೆರಾ ಚಲನೆ, ಸಂಕಲನ ಹಾಗೂ ತಾಂತ್ರಿಕ ಜವಾಬ್ದಾರಿಗಳನ್ನು ನಿಭಾಯಿಸುವವರ ಹೊಣೆ ಮತ್ತು ಕೆಲಸಗಳ ವಿವರಗಳಿವೆ. 1981ರಲ್ಲಿ ಪ್ರಕಟವಾಗಿರುವುದರಿಂದ ಸಂಕಲನ ವಿಭಾಗದಲ್ಲಿ ಇತ್ತೀಚಿನ ಡಿಜಿಟಲ್ ತಾಂತ್ರಿಕತೆ ಕುರಿತು ಪ್ರಸ್ತಾಪವಿಲ್ಲ.
ಚಿತ್ರೀಕರಣ ಪೂರ್ವ, ಚಿತ್ರೀಕರಣ ಸಂದರ್ಭ ಹಾಗೂ ಚಿತ್ರೀಕರಣೋತ್ತರ ಸಂದರ್ಭದಲ್ಲಿ ಘಟಿಸಬೇಕಾದ ತಾಂತ್ರಿಕ ಅವಶ್ಯಕತೆಗಳ ಮಹತ್ವವನ್ನು ಸಾಮಾನ್ಯ ಓದುಗನ ಮನದಲ್ಲಿ ದಾಖಲು ಮಾಡಲು ಲೇಖಕರು ಪ್ರಯತ್ನಪಟ್ಟಿದ್ದಾರೆ. ದೃಶ್ಯ ಮತ್ತು ಧ್ವನಿಯ ಸಮ್ಮಿಲನದ ಸೂಕ್ಮ್ಷತೆ, ಸಿನಿಮಾದ ನಿರ್ಮಾಣದ ಅಂತಿಮ ಫಲಿತಾಂಶದಲ್ಲಿ ಆಗುವ ಬದಲಾವಣೆಗಳನ್ನು ಹೇಳಿದ್ದಾರೆ. ಪುಸ್ತಕದ ಕೊನೆಯಲ್ಲಿ ಕೊಟ್ಟಿರುವ ಪಾರಿಭಾಷಿಕ ಪದಗಳ ವಿವರಣೆ ತಾಂತ್ರಿಕ ಶಬ್ದಗಳನ್ನು ಓದುಗನಿಗೆ ಇರುವ ಅನುಮಾನಗಳನ್ನು ಪರಿಹರಿಸಿ, ಇನ್ನಷ್ಟು ಸ್ಪಷ್ಟ ಚಿತ್ರಣವನ್ನು ಕೊಡುತ್ತದೆ.
ಸಿನಿಮಾವನ್ನು ಬೆರಗಿನಿಂದ ನೋಡುತ್ತಾ, ಸಿನಿಮಾದ ಕತೆಯ ಭಾವನಾತ್ಮಕ ಸಾಧ್ಯತೆಗಳನ್ನು ಮಾತ್ರ ಚಚರ್ಿಸುವ ಸಿನಿಮಾ ಪ್ರಿಯರಿಗೆ "ಸಿನಿಮಾದ ಯಂತ್ರಭಾಷೆ" ತಾಂತ್ರಿಕ ಅಂಶಗಳ ಮೂಲಕ ಸಾಧ್ಯವಾಗುವ ದೃಶ್ಯ ಶಕ್ತಿಯನ್ನು ತಿಳಿದುಕೊಳ್ಳಲು ಉಪಯುಕ್ತ. ಕಥೆ ಮತ್ತು ಚಿತ್ರನಾಟಕದಲ್ಲಿ ತಾಂತ್ರಿಕ ಅಂಶಗಳನ್ನು ಬಳಸಿಕೊಂಡು ದೃಶ್ಯವೊಂದನ್ನು ಸೃಷ್ಟಿಸುವ ಹಿಂದಿನ ಸುದೀರ್ಘ ಪ್ರಯಾಣವನ್ನು ಅರ್ಥಮಾಡಿಸುತ್ತದೆ. ಈ ಮೂಲಕ ಸಿನಿಮಾದ ತಾಂತ್ರಿಕತೆ ಕುರಿತು ಇನ್ನಷ್ಟು ಆಸಕ್ತಿಯಿಂದ ಹೆಚ್ಚಿನ ಮಾಹಿತಿಯನ್ನು ವಿವಿಧ ಕಡೆಯಿಂದ ಕಲೆ ಹಾಕಲು ಈ ಪುಸ್ತಕವೊಂದು ನೆಪವಾಗುತ್ತದೆ.
"ಸಿನಿಮಾದ ಯಂತ್ರಭಾಷೆ" ಯ ನಂತರ ಸಿನಿಮಾ ತಾಂತ್ರಿಕತೆಯನ್ನು ಮನದಟ್ಟು ಮಾಡಿಸುವ ಯಶಸ್ವಿ ಪುಸ್ತಕ ಪ್ರಯತ್ನ ಕನ್ನಡಲ್ಲಿ ಆಗಿಲ್ಲ. ಜೊತೆಗೆ ಕನ್ನಡದಲ್ಲಿ ಸಿನಿಮಾದ ಚಿತ್ರ ನಾಟಕ ರಚನೆ, ಕಡಿಮೆ ತಾಂತ್ರಿಕೆ ಸಾಧ್ಯತೆಗಳೊಂದಿಗೆ ಸಾಧ್ಯವಾಗಬಹುದಾದ ಸಿನಿಮಾ ನಿರ್ಮಾಣ ಕುರಿತು ಪುಸ್ತಕಗಳೇ ಇಲ್ಲ. ಬದಲಾಗುತ್ತಿರುವ ತಾಂತ್ರಿಕ ಆವಿಷ್ಕಾರ, ಸುಲಭಕ್ಕೆ ಜನಸಾಮಾನ್ಯನ ಕೈಗೆಟಕುತ್ತಿರುವ ವಿಡಿಯೋ ಕ್ಯಾಮೆರಾಗಳು, ಸಾಮಾನ್ಯವಾಗಿರುವ ಕಂಪ್ಯೂಟರ್ ಬಳಕೆ, ಸರಳ ಸಂಕಲನ ತಂತ್ರಾಂಶಗಳ ಲಭ್ಯತೆ ಇವೆಲ್ಲಾ ಇವತ್ತು ಮನೆಯಲ್ಲಿದ್ದುಕೊಂಡೇ ಡಿಜಿಟಲ್ ಸಿನಿಮಾ ನಿರ್ಮಾಣವನ್ನು ಸಾಧ್ಯವಾಗಿಸಿವೆ. ಅಂತಹ ಸಾಧ್ಯತೆಗಳಿಗೆ ಪೂರಕವಾಗುವ, ಉತ್ತೇಜಿಸುವಂತಹ "ಸಿನಿಮಾದ ಯಂತ್ರಭಾಷೆ"ಯಂತಹ ಪುಸ್ತಕಗಳ ಅವಶ್ಯಕತೆ ಇವತ್ತಿನ ಕನ್ನಡದ ಸಾಮಾನ್ಯನಿಗಿದೆ.
2 ಕಾಮೆಂಟ್ಗಳು:
ಚೆನ್ನಾಗಿ ಬರೆದಿದ್ದೀರಿ. ಇವತ್ತು ಕನಿಷ್ಟ ಇಂಗ್ಲೀಷ್ ನಲ್ಲಿ ಒಳ್ಳೊಳ್ಳೆಯ ಪುಸ್ತಕಗಳಿವೆ. ನನಗೆ ನನ್ನ ಚಿಕ್ಕಂದಿನ ದಿನಗಳ ನೆನಪಾಯಿತು; ಅಬ್ದುಲ್ ರೆಹಮಾನ್ ಪಾಷಾ ಸಿನೆಮಾ ತಯಾರಿಕೆಯ ವಿವಿಧ ಗುಟ್ಟುಗಳನ್ನು ಅತ್ಯಂತ ಸರಳ ಭಾಷೆಯಲ್ಲಿ ವಿವರಿಸುತ್ತಿದ್ದರು. ಬಹುಶಃ ವಿಜಯಚಿತ್ರದಲ್ಲಿರಬೇಕು. ದ್ವಿಪಾತ್ರಗಳನ್ನು ಹೇಗೆ ಸೃಷ್ಟಿಸುವುದೆಂಬ ವಿಷಯದಿಂದ ಹಿಡಿದು, ಮೂಲಭೂತ ಬೆಳಕಿನ ಸಂಯೋಜನೆವರೆಗೆ ಅವರು ಬರೆದಿದ್ದರು. ಇವತ್ತಿನ ಡಿಜಿಟಲ್ ದಿನಮಾನಗಳಲ್ಲಿ ಅವುಗಳಲ್ಲಿ ಹೆಚ್ಚಿನವು ಈಗ ಇರಲಾರವು. ಆದರೂ ಅವತ್ತಿನ ಕುತೂಹಲದ ಹಸಿವನ್ನು ಪಾಷಾ ನೀಗಿಸಿದ್ದು ಸುಳ್ಳಲ್ಲ!
ತುಂಬಾ ಖುಷಿಯಾಯ್ತು ನಿಮ್ಮ ಆರ್ಟಿಕಲ್ ಓದಿ.
"ಸಿನಿಮಾದ ಯಂತ್ರಭಾಷೆ"ಪುಸ್ತಕದ ಹೆಸರನ್ನೇ ಕೇಳಿರಲಿಲ್ಲ.
ಪುಸ್ತಕದ ಬಗ್ಗೆ ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ .
ನಿಜ, ಈ ರೀತಿಯ ಪುಸ್ತಕಗಳ ಅವಶ್ಯಕತೆ ಇದೆ ಕನ್ನಡದ ಜನಸಾಮಾನ್ಯರಿಗೆ.
ಕಾಮೆಂಟ್ ಪೋಸ್ಟ್ ಮಾಡಿ