ಮಂಗಳವಾರ, ಡಿಸೆಂಬರ್ 1, 2009

ಬಾಲ್ಕನಿಯಲ್ಲೊಂದು ಶವ (ಪುಟಾಣಿ ಕತೆ-12)

ಢಂ.... ಎನ್ನುವ ಶಬ್ದ ನಿಶ್ಯಬ್ದವನ್ನು ಸೀಳಿತು.
ಹಸಿ ಗೋಡೆ ಕುಸಿದು ಬಿದ್ದಂತೆ ಬಿದ್ದುಕೊಂಡ ಫುಟ್ಪಾತಿನಲ್ಲಿ ನಡೆಯುತ್ತಿದ್ದ ವ್ಯಕ್ತಿ.

ಆಗ ಬೆಳಿಗ್ಗೆ 1 ಗಂಟೆ. ಥಟ್ಟನೆ ಎಚ್ಚರವಾಯಿತು ಪ್ರದ್ಯುಮ್ನನಿಗೆ. ಆ ಘಟನೆ ಕನಸೋ, ನನಸೋ ಎಂದು ಅರೆಕ್ಷಣ ಗೊತ್ತಾಗಲಿಲ್ಲ ಆತನಿಗೆ. ಕನಸಿರಬಹುದು ಎನ್ನುವ ಅನುಮಾನ. ಅಲ್ಲ, ಖಂಡಿತಾ ಅದು ವಾಸ್ತವವೇ ಅಂದುಕೊಂಡ. ಸಿರಗೇಟು ಹಚ್ಚಿದ. ಹಿತವಾಯಿತು. ಬಾಲ್ಕನಿಯ ಬಾಗಿಲು ತೆರೆದ. ಆ ಬೆಳಿಗ್ಗೆ 1 ಗಂಟೆ ಏಳೂವರೆ ನಿಮಿಷಕ್ಕೆ ಪ್ರದ್ಯುಮ್ನನ ಅಪಾರ್ಟ್ಮೆಂಟಿನ ಆ ಹದಿಮೂರನೇ ಫ್ಲ್ಯಾಟಿನ ಬಾಗಿಲು ಕಿರ್ರಂತ ತೆರೆದುಕೊಂಡಿತು. ಬಾಲ್ಕನಿಯಲ್ಲಿ ನಿಂತುಕೊಂಡ. ನಿನ್ನೆ ರಾತ್ರಿ ಒಂಭತ್ತು ಗಂಟೆಗೆ ಬಂದ ಮಳೆಗೆ ತುಂಬಿಕೊಂಡ ಕೊಚ್ಚೆ ಕಾಣುತ್ತಿತ್ತು. ಅದರ ಮುಂದೊಂದು ಫುಟ್ಪಾತಿತ್ತು. ಅಲ್ಲೇ ಬಿದ್ದುಕೊಂಡಿತ್ತು ಅನಾಮಿಕ ವ್ಯಕ್ತಿಯ ದೇಹ. ಪ್ರಾಣವಿತ್ತೇನೋ...ಆಗಾಗ ಮಿಸುಕಾಡುತ್ತಿತ್ತು. ತನಗೆ ಕೆಲವಾರು ನಿಮಿಷಗಳ ಹಿಂದೆ ಕೇಳಿದ ಶಬ್ದ ಬಹುಷಃ ಈ ವ್ಯಕ್ತಿಗೆ ತಗುಲಿದ ಗುಂಡೇ ಎನ್ನುವ ಅನುಮಾನಗಳು ಶುರುವಾಯಿತು ಪ್ರದ್ಯುಮ್ನನಿಗೆ. ಇಷ್ಟಕ್ಕೂ ಆತ ಸತ್ತುಬಿದ್ದಿದ್ದನಾ ಅಥವಾ ಕುಡಿದು ಬಿದ್ದಿದ್ದಾನಾ? ಕುಡಿದು ಬಿದ್ದಿದ್ದರೆ ಮಧ್ಯರಾತ್ರಿ ಸುರಿದ ಮಳೆಗೆ ಎಲ್ಲವೂ ಕರಗಿ ಹೋಗಿ ಯಥಾ ಸ್ಥಿತಿಗೆ ಬರುತ್ತಿದ್ದ. ಇದು ಕೊಲೆಯೇ ಸರಿ ಎಂಬ ತೀರ್ಮಾನಕ್ಕೆ ಬಂದ ಆತ.

ತಾನು ಕಣ್ಣಾರೆ ಕಂಡ ಮೊದಲ ಸಾವು. ಒಂದರೆಕ್ಷಣ ಭಯವಾಯಿತು. ಮತ್ತೆರಡು ಕ್ಷಣದಲ್ಲಿ ಮೈಯೆಲ್ಲಾ ರೋಮಾಂಚನ. ತದೇಕಚಿತ್ತದಿಂದ ಅಲ್ಲಿ ಬಿದ್ದುಕೊಂಡ ವ್ಯಕ್ತಿಯನ್ನು ಮತ್ತೊಮ್ಮೆ ಗಮನಿಸುತ್ತಿದ್ದ ಪ್ರದ್ಯುಮ್ನನ ತುಟಿ ಸುಡುವಂತಾಯಿತು. ಸಿಗರೇಟು ಅದಾಗಲೇ ಉರಿದು ಹೋಗಿತ್ತು. ಏನ್ಮಾಡೋದೀಗ ಎಂದು ಆಲೋಚಿಸಿದ. ಏನೇನೂ ಹೊಳೆಯಲಿಲ್ಲ ಆತನಿಗೆ. ಎರಡೂವರೆ ದಿನದಿಂದ ಹಗಲೂ ರಾತ್ರಿ ಸೋನಿ ಕಂಪೆನಿಯ ಪ್ರಾಜೆಕ್ಟಿನ ತೊಂದರೆಯಿಂದಾಗಿ ಅದರ ಕ್ಲೈಂಟ್ ಮ್ಯಾಥ್ಯೂ ಜೊತೆ ಈಮೇಲು, ಮೀಟಿಂಗು, ಟೆಲಿ ಕಾನ್ಫರೆನ್ಸುಗಳಲ್ಲಿ ಸುಸ್ತಾಗಿದ್ದರಿಂದ ನಿದ್ದೆ ಎಳೆಯಿತು. ಹೋಗಿ ಬಿದ್ದುಕೊಂಡ ಬೆಡ್ ಮೇಲೆ.

ಬೆಳಿಗ್ಗೆ ಎದ್ದಾಗ ಗಂಟೆ ಹನ್ನೆರಡು. ಸ್ನಾನಕ್ಕೆ ಬೈರಾಸು ತೆಗೆದುಕೊಳ್ಳಲು ಬಾಲ್ಕನಿಗೆ ಬಂದಾಗ ಆ ಫುಟ್ಪಾತಿನಲ್ಲಿ ಬೋರಲು ಬಿದ್ದ ವ್ಯಕ್ತಿ ಇರಲಿಲ್ಲ. ಆ ವ್ಯಕ್ತಿ ಬಿದ್ದ ಜಾಗದಲ್ಲಿ ಬಿಳಿ ಬಣ್ಣದ ಚಾಕಿನಿಂದ ಮಾರ್ಕು ಮಾಡಿದ್ದರು. ಅಲ್ಲಿದ್ದ ಚಿತ್ರ ವ್ಯಕ್ತಿಯೊಬ್ಬ ಬೋರಲು ಬಿದ್ದಂತೆ ಕಾಣುತ್ತಿತ್ತು.

ಮರುಕ್ಷಣವೇ ಆ ವ್ಯಕ್ತಿಯ ಹೆಣ ಕಣ್ಣ ಮುಂದೆ ನೇತಾಡುತ್ತಿತ್ತು...ಪ್ರದ್ಯುಮ್ನ ಬಾಲ್ಕನಿಯಲ್ಲೇ ಕುಸಿದು ಕುಳಿತ..

5 ಕಾಮೆಂಟ್‌ಗಳು:

praveen kumar s ಹೇಳಿದರು...

ಕನಸು ಕಂಗಳ ಕರಾವಳಿ ಹುಡುಗ .........
ನೀ ನನ್ನ ಗೆಳೆಯ, ನಾ ಓದಿದೆ ಈ ನಿನ್ನ ಪುಟಾಣಿ ಕತೆಯ.
ಅದು ಕತೆಯ ? ಸಿನಿಮ ? ಏನದು , ಹೇಳುವೆಯ ಓ ನನ್ನ ಗೆಳೆಯ...
ಕಲ್ಪನೆಗೂ ತಾಕದಂತ ಎಂತಹ ಸ್ವಾರಸ್ಯ .........!
ಮಳೆಯ ನಡುವಲ್ಲಿ ನೀ ಕಟ್ಟಿರುವೆ ಕತೆಯ ಮನೆಯ ...!
ನಿನಗೆ ನಿನ್ನ ಬೆರಳಿಗೆ ಸೋತಿದೆ ಈ ನನ್ನ ಪುಟ್ಟ ಹೃದಯ ...

Sushrutha Dodderi ಹೇಳಿದರು...

ಇಂಥ ಪುಟ್ಟ ಕಥೆ ಬರೆಯೋದ್ರಲ್ಲಿ ನೀನು ನಿಸ್ಸೀಮ ಕಣೋ. ಗುಡ್ ವನ್.

ಅನಾಮಧೇಯ ಹೇಳಿದರು...

nice. one...
-alemari

Unknown ಹೇಳಿದರು...

ತುಂಬ ಟಚಿಂಗ್ ಇದೆ."ಅಲ್ಲಿದ್ದ ಚಿತ್ರ ವ್ಯಕ್ತಿಯೊಬ್ಬ ಬೋರಲು ಬಿದ್ದಂತೆ ಕಾಣುತ್ತಿತ್ತು" ಸಾಲು ಸೀದಾ ಮನಸ್ಸಿಗೇ ನಾಟುತ್ತದೆ. ಮೊದಲಿಗೆ ಫ್ಯಾಂಟಸಿ ಎನಿಸಿದರೂ ಈ ಪುಟಾಣಿ ಕಥೆ ಆ ಗಡಿಯನ್ನು ದಾಟುತ್ತದೆ. Good one

ಅನಾಮಧೇಯ ಹೇಳಿದರು...

nimma blog thumbaane chennagide