ಮಂಗಳವಾರ, ಸೆಪ್ಟೆಂಬರ್ 8, 2009

ಕನ್ನಡದ ಗುಲಾಬಿಗೆ ರಾಷ್ಟ್ರಪ್ರಶಸ್ತಿ

|| ನಿನ್ನೆಯಷ್ಟೇ 2007ನೇ ಸಾಲಿನ ರಾಷ್ಟ್ರಪ್ರಶಸ್ತಿ ಪ್ರಕಟವಾಗಿದೆ. ಉಮಾಶ್ರೀ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಬಂದಿದೆ. ಕಾಸರವಳ್ಳಿಯವರ "ಗುಲಾಬಿ ಟಾಕೀಸು" ಅತ್ಯುತ್ತಮ ಕನ್ನಡ ಚಿತ್ರವೆಂದು ಆಯ್ಕೆಯಾಗಿದೆ. ಕಾಂಚೀವರಂನಲ್ಲಿನ ಅಭಿನಯಕ್ಕೆ ಪ್ರಕಾಶ್ ರೈ ಅತ್ಯುತ್ತಮ ನಟ ಎಂದು ಪುರಸ್ಕ್ರತರಾಗಿದ್ದಾರೆ. ಮೂವರಿಗೂ ಅಭಿನಂದನೆಗಳು. ||


ವಳು ಕನಸಿನ ಗುಲಾಬಿ. ಪ್ರತೀ ದಿನ ಸಾಯಂಕಾಲ ಸಿನಿಮಾ ನೋಡುವ ಹುಚ್ಚು. ಮೂಲಕ ಹೊಸ ಕನಸುಗಳನ್ನು ಕಾಣುವ
ಬಯಕೆ ಆಕೆಗೆ. ಕನಸುಗಳ ಮೂಲಕ ತನ್ನ ಸೀಮಿತ ಪರಿಧಿಯನ್ನು ಮೀರಿ ಮುನ್ನಡೆಯುವ ಆಸೆ. ಬಹುಷಃ ಅಂಶವೇ ಆಕೆಯನ್ನು ಪ್ರಫುಲ್ಲವಾಗಿಡುವುದು.

ಆಕೆ ನೋಡುವ ಸಿನಿಮಾದ ಬಿಡಿಬಿಡಿ ಚಿತ್ರಗಳಂತೆ ಬದುಕೂ ಹರಿದು ಹಂಚಿಹೋಗಿದೆ, ಹೋಗುತ್ತಿದೆ. ಹೆರಿಗೆ ಮಾಡಿಸಿದ ಸಲುವಾಗಿ
ಬರುವ ಟಿವಿ ಪ್ರಾರಂಭದಲ್ಲಿ ಅವಳಲ್ಲೊಂದು ಅಪೂರ್ವ ಘಳಿಗೆಗಳನ್ನು ಸೃಷ್ಠಿಸುತ್ತಾ ಹೋಗುತ್ತದೆ. ನಂತರದ ದಿನಗಳಲ್ಲಿ ಪಲ್ಲಟಗಳ ನಡುವೆ ಪಟಪಟಿಸುತ್ತದೆ. ಇದು ಗುಲಾಬಿ ಎಂಬ ಸೂಲಗಿತ್ತಿಯ "ಗುಲಾಬಿ ಟಾಕೀಸು"....

ಕನ್ನಡ ಸಿನಿಮಾದ ಗುಲಾಬಿ ಉಮಾಶ್ರೀಗೆ ರಾಷ್ಟ್ರಪ್ರಶಸ್ತಿ ಬಂದಿದೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ "ಗುಲಾಬಿ ಟಾಕೀಸು" ವೈದೇಹಿ ಅವರ ಕಥೆ ಆಧಾರಿತ ಸಿನಿಮಾ(ಸಿನಿಮಾ ಮಾಧ್ಯಮಕ್ಕೆ ಅನುಗುಣವಾಗಿ ಇಲ್ಲಿ ಕತೆ ಮಾರ್ಪಾಡಾಗಿದೆ). ಅದರಲ್ಲಿನ
ಮುಖ್ಯಪಾತ್ರವೇ ಗುಲಾಬಿಯದ್ದು.
ಉಮಾಶ್ರೀಯ ವೃತ್ತಿ ಜೀವನದ ಮೈಲಿಗಲ್ಲು ಗುಲಾಬಿ ಪಾತ್ರ. ಪಾತ್ರದ ಆಳ-ಅಗಲಗಳನ್ನು ತನ್ನ ಅಭಿನಯದಿಂದಲೇ ಹಿಗ್ಗಿಸಿದ್ದಾರೆ
ಆಕೆ. ಉಮಾಶ್ರೀಯದ್ದು ರಂಗಭೂಮಿಯ ಹಿನ್ನೆಲೆ. ಸಿನಿಮಾ ರಂಗಭೂಮಿ ಎರಡೂ ಭಿನ್ನ ಗುಣಗಳನ್ನು ಹೊಂದಿರುವ ಮಾಧ್ಯಮಗಳು.

ಬಹುಷಃ ರಂಗಭೂಮಿ ಉಮಾಶ್ರೀಯನ್ನು ಬಳಸಿಕೊಂಡಷ್ಟು ಸಶಕ್ತವಾಗಿ ಕನ್ನಡ ಸಿನಿಮಾ ತನ್ನ ಮಾಧ್ಯಮದಲ್ಲಿ ಬಳಸಿಕೊಂಡಿರಲಿಲ್ಲ. ಒಡಲಾಳ, ಹರಕೆಯ ಕುರಿ ನಾಟಕಗಳು ಆಕೆಯ ರಂಗಭೂಮಿಯ ಸಶಕ್ತ ಅಭಿವ್ಯಕ್ತಿಗಳು. ಕನ್ನಡ ಸಿನಿಮಾದಲ್ಲಿ ಉಮಾಶ್ರೀ ಅಂದರೆ
ಸಾಕು ಎನ್ನೆಸ್ ರಾವ್ ಕಾಂಬಿನೇಶನ್ನಿನ ಕಿಲಕಿಲದಂತಹ ಪಾತ್ರದ ಜೊತೆಗೆ ಜೋತು ಬೀಳುವ ಪಾತ್ರಗಳಂತಹವೇ ಹೆಚ್ಚು ಕಾಣುವುದು. ಇದೇ ಅತಿರೇಕದ ನಟನೆಗೆ ಉಮಾಶ್ರೀ ಮುಂದಿನ ದಿನಗಳಲ್ಲಿ ಬ್ರ್ಯಾಂಡ್ ಆಗಿದ್ದೂ ಉಂಟು. ಸಂಗ್ಯಾಬಾಳ್ಯ, ಮಣಿ ಸಿನಿಮಾಗಳಂತಹ ಬೆರಳೆಣಿಕೆಯ ಸಿನಿಮಾಗಳಷ್ಟೇ ಆಕೆಗೆ ವೈವಿಧ್ಯಮಯವಾದ ಪಾತ್ರಗಳನ್ನು ನೀಡಿದ್ದು. ಉಮಾಶ್ರೀಯ ಒಳಗಿದ್ದ ನಟಿ ಸಿನಿಮಾದಲ್ಲಿ ಪ್ರಖರವಾಗಿ ಕಾಣಿಸಿಕೊಂಡದ್ದು- ಕಾಸರವಳ್ಳಿಯವರ ಗುಲಾಬಿ ಟಾಕೀಸಿನಲ್ಲಿಯೇ.

ಗುಲಾಬಿಯ ಪಾತ್ರ ಸಿನಿಮಾದ ವಿವಿಧ ಹಂತಗಳಲ್ಲಿ ಸಂಕೀರ್ಣವಾಗುತ್ತಾ ಹೋಗುವ ಪರಿ ಪ್ರೇಕ್ಷಕನಿಗೆ ದಕ್ಕುವುದಕ್ಕೆ
ಸಾಧ್ಯವಾಗುವುದು ಉಮಾಶ್ರೀಯ ಅಭಿನಯದಲ್ಲಿ. ಅವಳಲ್ಲಿರುವ ಸ್ವಗತಗಳು, ಗಂಡನ ಎರಡನೇ ಹೆಂಡತಿಯ ಮಗ ಅದ್ದುವಿನೆಡೆಗಿರುವ ಪ್ರೀತಿ, ನೇತ್ರುವಿನ ಜೊತೆಗಿನ ಗೆಳೆತನ, ಟಿವಿ ಬಂದ ನಂತರ ಬದಲಾಗುವ ಸಂಬಂಧಗಳ ವ್ಯಾಪ್ತಿಯನ್ನು ಆಕೆ ಅರ್ಥೈಸಿಕೊಳ್ಳುವಲ್ಲಿ ಆಕೆ ಪಡುವ ಪಾಡನ್ನು, ಗುಲಾಬಿಯ ಸಂದಿಗ್ಧವನ್ನು ಉಮಾಶ್ರೀ ತೆರೆಮೇಲೆ ಬಿಚ್ಚಿಡುತ್ತಾರೆ. "ಮೊದಲಾದರೆ ವಾರಗಟ್ಟಲೆ ಸಿನಿಮಾ ನೋಡುತ್ತಿದ್ದೆ. ಬೇರೆ ಬೇರೆ ಕನಸುಗಳು ಬೀಳುತ್ತಿದ್ದವು. ಮನೆಯಲ್ಲೀಗ ಟಿವಿಯಿದೆ. ದಿನವೂ ಬೇರೆ ಬೇರೆ ಸಿನಿಮಾ ನೋಡುತ್ತೇನೆ. ಆದರೆ ಬೀಳುತ್ತಿರುವುದು ಒಂದೇ ಕನಸು" ಎನ್ನುವಾಗ ಉಮಾಶ್ರೀಯ ಮುಖದಲ್ಲಿನ ಒತ್ತಡ, ಕಣ್ಣಲ್ಲಿ ಕರಗುತ್ತಿರುವ ನೋವು ಪ್ರೇಕ್ಷಕನಿಗೆ ದಾಟುತ್ತದೆ.

ಉಮಾಶ್ರೀಯ ನಟನೆಯ ತೀವ್ರತೆಯ ಸನ್ನಿವೇಶಗಳು "ಗುಲಾಬಿ ಟಾಕೀಸು" ಸಿನಿಮಾದ ಹಲವೆಡೆ ಕಾಣುತ್ತದೆ. ಉಮಾಶ್ರೀಯ
ಅಭಿನಯಕ್ಕೊಂದು ಸಲಾಮು ಹೇಳಲು ಗುಲಾಬಿಯನ್ನು ಮನೆಯಿಂದ ಹೊರಕ್ಕೆ ಹಾಕುವ ಸನ್ನಿವೇಶವೊಂದೇ ಸಾಕು. ಸನ್ನಿವೇಶದಲ್ಲಿ ಗುಲಾಬಿಯ ಪ್ರತಿಭಟನೆಯ ಪರಿಯನ್ನೊಮ್ಮೆ ನೀವು ನೋಡಬೇಕು. ಪಾತ್ರೆಗಳನ್ನು ಮನೆಯಿಂದ ಹೊರಹಾಕುತ್ತಿರುವಾಗ ಅದನ್ನೆಲ್ಲಾ ಹೆಕ್ಕಿ ಮತ್ತೆ ಒಳಗಿಡಲು ಪ್ರಯತ್ನಿಸುವುದು, ಕಬ್ಬಿಣದ ಪೆಟ್ಟಿಗೆಯ ಮೇಲೆ ಜಗ್ಗದಂತೆ ಕೂರುವ ಪರಿಯನ್ನು ನೋಡಿದಾಗ ಉಮಾಶ್ರಿಯೊಳಗಿರುವ ಗುಲಾಬಿ ಅರ್ಥವಾಗುತ್ತಾ ಹೋಗುತ್ತಾಳೆ.


ಗುಲಾಬಿಯಂತಹ ಪಾತ್ರವನ್ನು ಉಮಾಶ್ರೀಯ ಮೂಲಕ ತೆರೆಗೆ ತಂದ ಗಿರೀಶ್ ಕಾಸರವಳ್ಳಿಯವರಿಗೆ ಅಭಿನಂದನೆಗಳು
ಸಲ್ಲಲೇಬೇಕು.....

ಮತ್ತಷ್ಟು ಒಳ್ಳೆಯ ಗುಲಾಬಿಗಳನ್ನು ಉಮಾಶ್ರೀ ಮುಂದೆಯೂ ಕಟ್ಟಿಕೊಡಲಿ.

||ಕಾಂಚೀವರಂ ಸಿನಿಮಾ ಬಗ್ಗೆ ಇದೇ ಬ್ಲಾಗಿನಲ್ಲಿ ಹಿಂದೊಮ್ಮೆ ಬರೆದಿದ್ದೆ.
ಓದಿಲ್ಲವಾದಲ್ಲಿ
ಕೆಳಗಿನ ಕೊಂಡಿ ಕ್ಲಿಕ್ ಮಾಡಿ. ||

5 ಕಾಮೆಂಟ್‌ಗಳು:

Unknown ಹೇಳಿದರು...

Kannadada halavu hiriya prathibhegalige Rashtra prashasti dorakisikotta Kasaravalliyavarige abhinandanegalu....

shivu.k ಹೇಳಿದರು...

ಖಂಡಿತ ಇದು ಖುಷಿ ವಿಚಾರವೇ ಸರಿ...

sunaath ಹೇಳಿದರು...

ಗುಲಾಬಿಯ ವಿಮರ್ಶೆಗಾಗಿ ಧನ್ಯವಾದಗಳು.

surekha ಹೇಳಿದರು...

cennagide kano. hos vishya kodu innu........ good luck

Siddalingayya ಹೇಳಿದರು...

Girish avare neeveno award mele award tagondu hesru basiru erdu madikondiri. aadare nimm citragalnnu estu jana nodtare? Nimma kanasemba... citradalli tumba manognay abhinaya madida Vishwanath Biradar papa avarige neevu goage yake kare taralilla? idenu nimma antastige todakayta? swamy dodda bande nilloke sanna kallu beke beku anno sanna vichara innu nimage holitilvalla? kevala nane belibeku anno aham bidi bada mttu pratibhavanta natarannu belesi. Papa Biradarge national award barabekittu, idu Goage banda international directorsu mattu actors ado matugalivu. Adare avranne bittu bandideerella ee nimma taratama neeti sarina? heegeke? nimmannu neeve prasne madikolloke pakva kala alva...