ಭಾನುವಾರ, ಮಾರ್ಚ್ 22, 2009

"ಸಾವಿನ ಹೊಸ್ತಿಲಲ್ಲಿ ನಿಂತು ನಕ್ಕವರ ಕತೆ"



ಚಿತ್ರ: ಲೈಫ್ ಈಸ್ ಬ್ಯೂಟಿಫುಲ್
ಭಾಷೆ: ಇಟಾಲಿಯನ್
ನಿರ್ದೇಶಕರಾಬರ್ಟೋ ಬೆನಿನಿ
ಅವಧಿ: 116 ನಿಮಿಷ

"ಲೈಫ್ ಈಸ್ ಬ್ಯೂಟಿಫುಲ್" 1998ರಲ್ಲಿ ಬಿಡುಗಡೆಯಾದ ಇಟಾಲಿಯನ್ ಸಿನಿಮಾ. ಕಲ್ಪನೆಯೊಳಗೆ ನಿರ್ಮಿಸು ಪ್ರೀತಿಯ ಜಗತ್ತು ಈ ಸಿನಿಮಾದ ಜೀವಾಳ.

ನಾಯಕ ಗಿಡೋ ಯಹೂದಿ. ವೃತ್ತಿಯಲ್ಲಿ ವೈಟರ್. ಅಸಾಧಾರಣ ಹಾಸ್ಯಪ್ರಜ್ಞೆ, ಲವಲವಿಕೆಯ ವ್ಯಕ್ತಿತ್ವ ಆತನದ್ದು. ಸುಂದರಿ ದೋರಾಳನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಜೋಶ್ವಾ ಎನ್ನುವ ಪುಟ್ಟ ಮಗನ ಜೊತೆ ಈತನದ್ದು ಸುಖೀ ಸಂಸಾರ.

ಈ ನೆಮ್ಮದಿಯನ್ನು ಕಲಕಿಬಿಡುವುದು ಎರಡನೇ ಮಹಾಯುದ್ಧದ ಕರಿನೆರಳು. ಹಿಟ್ಲರ್ ಜ್ಯೂ (ಯಹೂದಿ)ಗಳನ್ನು ಬಂಧಿಸಿ ಅಮಾನವೀಯವಾಗಿ ನಡೆಸಿಕೊಳ್ಳುವ ಹೊತ್ತಿಗೇನೇ, ಗಿಡೋ ಯಹೂದಿ ಎನ್ನುವ ಕಾರಣಕ್ಕಾಗಿ ಆತನ ಜೊತೆ ಮಗ ಹಾಗೂ ಅಂಕಲ್ನನ್ನು ಬಂಧಿಸಿ ಕಾನ್ಸಂಟ್ರೇಶನ್ ಕ್ಯಾಂಪಿಗೆ ತಳ್ಳುತ್ತಾರೆ. ಹೆಂಡತಿ ಇಷ್ಟಪಟ್ಟು ಆತನಿಗೆ ಅಲ್ಲಿಯೂ ಜೊತೆಯಾಗುತ್ತಾಳೆ. ಅಲ್ಲಿ ಆತ ನಾಜಿಗಳ ಕೈಯಿಂದ ತನ್ನ ಮಗ ಮತ್ತು ಹೆಂಡತಿಯನ್ನು ಪಾರು ಮಾಡಲು ಹೋರಾಡುವ ಕತೆ "ಲೈಫ್ ಈಸ್ ಬ್ಯೂಟಿಫುಲ್" ಸಿನಿಮಾದ್ದು.

ಗಿಡೋ ಎನ್ನುವ ಪಾತ್ರವೇ ಅತ್ಯಂತ ಸಮರ್ಥವಾಗಿ ಚಿತ್ರಿತಗೊಂಡಿದೆ. ಸಿನಿಮಾದಲ್ಲಿ ಗಿಡೋ ನಗಿಸುತ್ತಾ, ನಗುತ್ತಾ ಸನ್ನಿವೇಶಗಳನ್ನು ಎದುರಿಸುತ್ತಾನೆ. ಆತನ ಹಾಸ್ಯಪ್ರಜ್ಞೆ ಕಾನ್ಸಂಟ್ರೇಶನ್ ಕ್ಯಾಂಪಿನ ಒಳಗೂ ಬತ್ತುವುದಿಲ್ಲ. ಪುಟ್ಟ ಮಗ ಜೋಶ್ವಾನಿಗೆ ತಾವಿಬ್ಬರೂ ಬದುಕುತ್ತಿರುವ ಕಾನ್ಸಂಟ್ರೇಶನ್ ಕ್ಯಾಂಪಿನ ಕ್ರೂರತೆಯನ್ನು ಆತ ಹೇಳುವುದಿಲ್ಲ. "ಈ ಕ್ಯಾಂಪಿನ ಒಳಗಡೆ ನಾವೆಲ್ಲಾ ಸ್ಪರ್ಧೆಯೊಂದರಲ್ಲಿ ಭಾಗವಹಿಸುತ್ತಿದ್ದೇವೆ. ಸಾವಿರ ಅಂಕ ಕೂಡಿಟ್ಟರೆ ಗೆಲ್ಲುತ್ತೇವೆ. ಮೊದಲ ಬಹುಮಾನ ನಿನ್ನಿಷ್ಟದ ಟ್ಯಾಂಕರ್" ಎಂದು ಆಸೆ ಹುಟ್ಟಿಸುತ್ತಾನೆ. ಮಗನಿಗದು ಸುಂದರ ಆಟವಾಗಿ ಕಾಣುತ್ತದೆ. ಮುಗ್ಧ ಮಗುವಿನ ಮನಸ್ಸು, ಬಾಲ್ಯ, ಕನಸು ವಾಸ್ತವದ ಸತ್ಯದ ಮಧ್ಯೆ ಕಳೆದು ಹೋಗಬಾರದು ಎನ್ನುವ ಅಪ್ಪನ ಕಾಳಜಿ ಎದ್ದು ಕಾಣುತ್ತದೆ.

ಈ ಆಟದ ನೆಪದಲ್ಲೇ ಮಗನನ್ನು ಸೈನಿಕರ ಕೈಗೆ ಸಿಗದಂತೆ ಬಚ್ಚಿಡುತ್ತಾನೆ ಗಿಡೋ. ನಿರ್ದಯ ವಾಸ್ತವ ಎದುರಿಗಿದ್ದರೂ ಸ್ಪರ್ಧೆ ಎನ್ನುವ ಕಲ್ಪನೆಯೊಳಗೆ ಮಗನ ಸಂವೇದನೆಗಳನ್ನು ಗಿಡೋ ಜೀವಂತವಾಗಿಡುತ್ತಾನೆ. ಕಾನ್ಸಂಟ್ರೇಶನ್ ಕ್ಯಾಂಪಿನ ಒಳಗಡೆ ಅವನು ಕೂಡಾ ಜೀವಂತವಾಗಿರಲು ಪ್ರಯತ್ನಿಸುವುದು ತಾನು ಸೃಷ್ಟಿಸಿದ ಸ್ಪರ್ಧೆಯ ಜಗತ್ತಿನಿಂದಾಗಿಯೇ.

ಆತ ಕೊನೆವರೆಗೂ ಉಳಿಸಿಕೊಳ್ಳುವ ನಗು, ಲವಲವಿಕೆ, ಸ್ಥಿಮಿತ ಮನಸ್ಥಿತಿ ನಮ್ಮನ್ನು ಸೆಳೆಯುತ್ತದೆ. ಗಿಡೋ ಮಗನೆದುರು ಮಾಡುವ ಮಾರ್ಚ್ ಫಾಸ್ಟ್, ಅದನ್ನು ಬಚ್ಚಿಟ್ಟುಕೊಂಡ ಡಬ್ಬಿಯೊಳಗಿನಿಂದ ನೋಡುವ ಮಗ ಸಿನಿಮಾವಾಗಿ ಕಾಡಲು ಈ ಒಂದು ಸನ್ನಿವೇಶ ಸಾಕು. ಲವಲವಿಕೆಯೊಂದಿಗೆ ಪ್ರಾರಂಭವಾಗುವ ಸಿನಿಮಾ ಕಾನ್ಸಂಟ್ರೇಶನ್ ಕ್ಯಾಂಪಿನೊಳಗಿದ್ದರೂ, ಲವಲವಿಕೆಯನ್ನು ಕಳೆದುಕೊಳ್ಳುವುದಿಲ್ಲ.
 
ಇಟೆಲಿಯ ಪ್ರಖ್ಯಾತ ಹಾಸ್ಯನಟ ರಾಬರ್ಟೋ  ಬೆನಿನಿ ನಟಿಸಿ, ನಿರ್ದೇಶಿಸಿರುವ ಸಿನಿಮಾವಿದು. ಐತಿಹಾಸಿಕ ಘಟನೆಯೊಂದನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಹೇಳುವ ಕತೆಯಲ್ಲಿ, ಕಾನ್ಸಂಟ್ರೇಶನ್ ಕ್ಯಾಂಪು ಕತೆಯ ಭಾಗವಾಗಿ ಬರುತ್ತದೆಯೇ ಹೊರತು ಇತಿಹಾಸದ ಅಂಕಿ-ಅಂಶಗಳ ಪಾಠಶಾಲೆಯಾಗುವುದಿಲ್ಲ. ಬಹುಶಃ ಇಲ್ಲೇ ನಿರ್ದೇಶಕನ ಗೆಲುವಿರುವುದು. ಚಿತ್ರಕತೆ, ಸಂಗೀತ, ಪಾತ್ರವರ್ಗದಲ್ಲಿ ಅಚ್ಚುಕಟ್ಟಿದೆ.  

ಲೈಫ್ ಈಸ್ ಬ್ಯೂಟಿಫುಲ್  ತಯಾರದದ್ದು 1997ರಲ್ಲಿ. ವಿವಿದೆಡೆ 52 ಪ್ರಶಸ್ತಿಗಳನ್ನು ಈ ಸಿನಿಮಾ ಚಾಚಿಕೊಂಡಿದೆ.  ಅತ್ಯುತ್ತಮ ನಟ(ರಾಬರ್ಟೋ  ಬೆನಿನಿ), ಅತ್ಯುತ್ತಮ ವಿದೇಶಿ ಸಿನಿಮಾ(ಇಟಲಿ), ಅತ್ಯುತ್ತಮ ಸಂಗೀತ(ನಿಕೋಲಾ ಪಯೋವನಿ) ಸೇರಿ ಒಟ್ಟು ಮೂರು ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.  

(ಕನ್ನಡ ಪ್ರಭದ "ಹೋಂ ಥಿಯೇಟರ್" ಅಂಕಣಕ್ಕೆ ಬರೆದ ಬರಹ. ಇದಕ್ಕೆ ಅಸಂಬದ್ಧ ಹೆಡ್ಡಿಂಗು ಕೊಟ್ಟಿದ್ದೆ. ಈಗಿರುವ ಆಕರ್ಷಕ ಶೀರ್ಷಿಕೆ ಕೊಟ್ಟವರು ಉದಯ ಮರಕಿಣಿ ಸರ್.)
 

6 ಕಾಮೆಂಟ್‌ಗಳು:

shivu.k ಹೇಳಿದರು...

ಕಾರ್ತಿಕ್,

ತುಂಬಾ ಚೆನ್ನಾದ ವಿಮರ್ಶೆ...ಈ ಸಿನಿಮಾವನ್ನು ನಾನು ನೋಡಿದ್ದೇನೆ...ಮತ್ತು ಕನ್ನಡಪ್ರಭದಲ್ಲೂ ಓದಿದ್ದೇನೆ.....

ವಸ್ತುನಿಷ್ಟವಾಗಿ ವಿಮರ್ಶಿಸಿದ್ದೀರಿ.....ಮುಂದುವರಿಸಿ...
ಧನ್ಯವಾದಗಳೂ....

ವಿ.ರಾ.ಹೆ. ಹೇಳಿದರು...

ಕಾರ್ತಿಕ್, ಕಾಕತಾಳೀಯವೋ ಎಂಬಂತೆ ನಿನ್ನೆ ರಾತ್ರಿಯಷ್ಟೆ ಈ ಸಿನೆಮಾ ನೋಡಿದೆ. ನಿಜಕ್ಕೂ wonderful !

ನಿಮ್ಮ review ಕೂಡ ವಸ್ತುನಿಷ್ಠವಾಗಿದೆ.

Sushrutha Dodderi ಹೇಳಿದರು...

ನಂಗಿನ್ನೂ ಸಿಕ್ಕಿಲ್ಲ ಸಿಡಿ.. :(

ಆದ್ರೆ ನಿನ್ನೆ ರಾತ್ರಿ ನಾನು ’The Curious Case of Benjamin Button' ನೋಡಿದೆ.. ತುಂಬಾ ಚಂದದ ಮೂವಿ..

ಶ್ರೀನಿಧಿ.ಡಿ.ಎಸ್ ಹೇಳಿದರು...

sush,
nanna baLi cinema labhavide:)

ಸುನಿಲ್ ಹೆಗ್ಡೆ ಹೇಳಿದರು...

ಕಾರ್ತಿಕ್...
ಕಾಲೇಜಿನ 'ಮೂವಿ ಕ್ಲಬ್'ನಲ್ಲಿ ಸೂರ್ಯ ಸರ್ ಈ ಸಿನಿಮಾವನ್ನು ಪ್ರದರ್ಶಿಸಿದ್ದರು. ನೀವು ಹೇಳಿದಂತೆ `Life is beautiful' is really a beautiful movie. ಸಿನಿಮಾದೊಳಗೆ ನಿರ್ದೇಶಕ ಕಟ್ಟಿಕೊಡುವ ಸಂವೇದನೆ, ತಲ್ಲಣ, ಆ ಮಾನವೀಯ ತುಡಿತಗಳು ಸಿನಿಮಾ ಮುಗಿದ ನಂತರವೂ ನಮ್ಮನ್ನ ಕಾಡುತ್ತವೆ...

sunaath ಹೇಳಿದರು...

ಕಾರ್ತೀಕ,
ಸಿನೆಮಾದ ಬಗೆಗೆ ವಿವರಿಸಿದ್ದಕ್ಕಾಗಿ ಧನ್ಯವಾದಗಳು.