ಬುಧವಾರ, ಆಗಸ್ಟ್ 20, 2008

ಚಿ(ಂ)ತೆ

ಚಿತೆ ಧಗಧಗ ಉರಿಯುತ್ತಿತ್ತು


ವಿಕಾರಗಳೆಲ್ಲಾ ಆಕಾರಗಳಾಗುತ್ತಿದ್ದವು


ತಣ್ಣನೆಯ ತಿಳಿಗಾಳಿ ತುಂಬಾ


ಕಾಮಪಿಪಾಸು ಬೆವರು, ವಿಷಣ್ಣ ನಗೆ


ಕ್ರೌರ್ಯದ ಉತ್ತುಂಗದಿ


ನಾನು ಸಾಯುತ್ತಿದ್ದೆ




ದೃಷ್ಠಿಯ ಚಿಗುರುಗಳು


ಚಿತೆಯ ಬೆಂಕಿಯೊಳು ಸ್ಖಲಿಸುತ್ತಾ


ಆಲದ ಮರಕ್ಕೆ ನೇಣು ಬಿಗಿದಿತ್ತು


ಹಿತ್ತಲ ಗಿಡಗಳೆಲ್ಲಾ ಓಯಸ್ಸಿಸ್ಸಾಗಿದ್ದವು


ಪ್ರತಿಮೆಗಳು ಅದರೊಳಗೆ ಮುದುಡಿದ್ದವು




ಬಲವಂತದ ಸ್ವಪ್ನಗಳು


ಬಸಿರಿನ ಧ್ವನಿಗಳು


ಎಲ್ಲಕ್ಕೂ ಉಸಿರೊಂದೇ ಇರಲಿಲ್ಲ


ಚಾಚಿದ ಹೆಬ್ಬಾವಿನ ಕೈಗಳು ವಾಚಾಳಿಯಾಗುತ್ತಿದ್ದವು


ಕೆಂಡದ ಕಣ್ಣುಗಳ ರಕ್ತದಿ


ಹಸಿವು ಧುಮುಕುತ್ತಿತ್ತು




ಚರ್ಚಿನ ಗಂಟೆಯ ನಾಲಗೆ


ಕಪಟಿಯ ಕೆಮ್ಮು


ಹದ್ದಿನ ಕಣ್ಣಿನ ಕಾಮ, ನಪುಂಸಕ ಕ್ರೋಧ


ಈ ಎಲ್ಲಾ ಕ್ರಿಯೆ-ಪ್ರಕ್ರಿಯೆಯೊಳಗೆ


ಅರ್ಥವಾಯಿತು ನನಗೆ


ನಾನಿನ್ನೂ ಸತ್ತಿಲ್ಲ, ಬದುಕುತ್ತಿದ್ದೇನೆ!

ಮಂಗಳವಾರ, ಆಗಸ್ಟ್ 12, 2008

ಅರ್ಥವಾಗದೆ ಹೋದವರು...(ಪುಟಾಣಿ ಕತೆ-3)

"ಇಷ್ಟು ವರ್ಷ ಪರಿಚಯವಿದ್ದರೂ ನೀನಿನ್ನೂ ಅರ್ಥವಾದದ್ದು ಅಲ್ಪ-ಸ್ವಲ್ಪ ಕಣೋ" ಎಂದಳು ಆಕೆ.
ಆತ ಸುಮ್ಮನೆ ನಕ್ಕ.
ತನ್ನ ಬಗ್ಗೆ ತಾನೇ ಹೇಳಿಕೊಳ್ಳುವುದು ಒಂಥರಾ ಹೇಸಿಗೆ. ಮಾತಲ್ಲಿ ಹೇಳುವುದೆಲ್ಲ ಅತ್ಯಂತ ಸುಂದರ ಕಥೆಯ ಬರ್ಬರ ಅಂತ್ಯ ಅಂತನ್ನಿಸಿತ್ತು ಆತನಿಗೆ, ಅನೇಕ ಬಾರಿ.
ಆಕೆ ಹೊರಟು ನಿಂತಳು.
ಸಂಜೆ ಕೆಂಪಾಯಿತು.

ಒಂದು ದಿನ:
"ಆತ ಆಸ್ಪತ್ರೆಯಲ್ಲಿದ್ದಾನೆ. ಸಾಯಲು ಇನ್ನು ಕೆಲವೇ ಕ್ಷಣ" ಹಾಗಂತ ಸುದ್ದಿ ಸಿಕ್ಕಿತು, ಆಕೆಗೆ.
ಓಡೋಡಿ ಬಂದಳು.
ಆತನ ಸ್ಥಿತಿ ನೋಡಿ ಆಕೆಯ ಕಣ್ಣುಗಳು ಮಂಜು, ಮಂಜು.
ದುಃಖವನ್ನು ತಡೆ ಹಿಡಿಯುತ್ತಾ, ಆತನ ತಲೆ ನೇವರಿಸಿದಳು.
ಕಣ್ಣ ಹನಿಗಳು ಸಾಲಾಗಿ ಆತನ ಕೈಯ ಮೇಲೆ ಬಿದ್ದವು.
ಆತನಿಗೆ ಅದೇನನ್ನಿಸಿತೋ ಏನೋ.
ತುಂಬ ಅಕ್ಕರೆಯಿಂದ ಒಂದೊಂದೇ ಹನಿಗಳಿಗೆ ಮುತ್ತಿಡುತ್ತಾ ಹೋದ.
ನಿಟ್ಟುಸಿರಿನೊಂದಿಗೆ ಆಕೆ ನಕ್ಕಳು.
ಆತನ ಕಣ್ಣು ಮಂಜು,ಮಂಜು!!

ಶುಕ್ರವಾರ, ಆಗಸ್ಟ್ 1, 2008

ಹೊತ್ತಿ ಉರಿಯಿತು ಧರೆ!

1945 ಜುಲೈ 16....
ಅಮೇರಿಕಾ ಅಧ್ಯಕ್ಷ ಟ್ರೂಮನ್ ಪೋಸ್ಟ್ಡ್ಯಾಂ ಗೋಷ್ಠಿಯಲ್ಲಿದ್ದ. ಜಪಾನಿಗೆ ಎಚ್ಚರಿಕೆ ನೀಡಲು ಮಿತ್ರ ರಾಷ್ಟ್ರಗಳು ಅಂದು ನಿರ್ಣಯ ಕೈಗೊಳ್ಳುವುದರಲ್ಲಿದ್ದವು. ಆದರೆ ಟ್ರೂಮನ್ಗೆ ನ್ಯೂ ಮೆಕ್ಸಿಕೋದ ಆಲ್ಮೋಗಾರ್ಡ್ನಲ್ಲಿ ನಡೆಯುತ್ತಿದ್ದ ಪರೀಕ್ಷೆಯ ಫಲಿತಾಂಶದ ಬಗ್ಗೆ ಕಾತರವಿತ್ತು. ಆಗ ಟ್ರೂಮನ್ ಕೈಗೊಂದು ಚೀಟಿ ಬಂತು. ಅದರಲ್ಲಿ ಸ್ಪಷ್ಟವಾಗಿ ಬರೆದಿತ್ತು-"It is a boy". ಅದರರ್ಥ ಇಷ್ಟೇ-ಪರೀಕ್ಷಾರ್ಥ ನಡೆಸಿದ ಅಣುಬಾಂಬಿನ ಸ್ಪೋಟ ಯಶಸ್ವಿ.

ಪೋಸ್ಟ್ಡ್ಯಾಂ ಗೋಷ್ಠಿಯನ್ನು ಜಪಾನಿನ ಪ್ರಧಾನಿ ಕಂಟಾಕೋ ಸುಜುಕಿ ನಿರ್ಲಕ್ಷಿಸಿ ಬಿಟ್ಟ. ಅಮೇರಿಕಾಕ್ಕೆ ಮಹಾಯುದ್ಧವನ್ನು ಹತ್ತಿಕ್ಕಲೇಬೇಕಾಗಿತ್ತು. ಅದಕ್ಕಾಗಿ ಅಗಸ್ಟ್ 6ರಂದು ಅಣು ಬಾಂಬ್ ಸ್ಪೋಟಕ್ಕೆ ಆಂಯ್ದುಕೊಂಡದ್ದು ಹಿರೋಷಿಮಾ ನಗರವನ್ನು.
ಎರಡೂವರೆ ಲಕ್ಷಕ್ಕೂ ಅಧಿಕ ನಾಗರೀಕರಿದ್ದ ಹಿರೋಷಿಮಾದಲ್ಲಿ ಮಿಲಿಟರಿ ಕೇಂದ್ರವಿತ್ತು. ಒಂದು ಲಕ್ಷಕ್ಕೂ ಅಧಿಕ ಸೈನಿಕರು ಅಲ್ಲಿದ್ದರು. ಜೊತೆಗೆ ಜಪಾನಿನ ಮದ್ದುಗುಂಡುಗಳ ದಾಸ್ತಾನು ಅಲ್ಲಿತ್ತು. ಇವೆಲ್ಲವನ್ನು ಗಮನಿಸಿಯೇ ಅಮೇರಿಕಾ 'ಲಿಟ್ಲ್ ಬಾಯ್' ಸ್ಪೋಟಕ್ಕೆ ಹಿರೋಷಿಮಾವನ್ನು ಆಯ್ದುಕೊಂಡದ್ದು.

ವಿಷಘಳಿಗೆ
ಅವತ್ತು ಅಗಸ್ಟ್ 6ರ ಬೆಳಗು.
ಹಿರೋಷಿಮಾ ಎಂದಿನಂತೆ ಕಾರ್ಯನಿರತವಾಗಿತ್ತು. ಕೆಲಸದ ಗಡಿಬಿಡಿಯಲ್ಲಿ 9 ಬಾರಿ ಎಚ್ಚರಿಕೆಯ ಗಂಟೆ ಮೊಳಗಿದ್ದನ್ನು ಯಾರೂ ಅಷ್ಟಾಗಿ ಗಮನಿಸಲಿಲ್ಲ. ಆಗಸದಲ್ಲಿ ಕ್ಷೀಣವಾಗಿ ಸದ್ದು ಮಾಡುತ್ತಾ ಅಮೇರಿಕಾದ ಬಿ-29 ವಿಮಾನ ಹಾರುತ್ತಿತ್ತು. ಎರಡು ಬಾರಿ ಹಿರೋಷಿಮಾವನ್ನು ಸುತ್ತು ಹಾಕಿ ಏಳೂವರೆ ಹೊತ್ತಿಗೆ ಸಮುದ್ರದ ದಿಕ್ಕಿನಲ್ಲಿ ಕಣ್ಮರೆಯಾಯಿತು. ದಿನವೂ ಇಂತಹ ದೃಶ್ಯಗಳು ಸಾಮಾನ್ಯವಾದ್ದರಿಂದ ಯಾರೂ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಅವರ್ಯಾರ ಕಲ್ಪನೆಗೂ ನಿಲುಕದ ಸತ್ಯವೊಂದಿತ್ತು. ಬಿ-29 ಸುಮ್ಮನೆ ಗಸ್ತು ಹೊಡೆಯಲು ಮಾತ್ರ ಬಂದಿರಲಿಲ್ಲ. ಬಾಂಬ್ ಸ್ಪೋಟಕ್ಕೆ ಮುಹೂರ್ತವಿಡಲು ಹಿರೋಷಿಮಾದ ಹವಾಮಾನ ಪರೀಕ್ಷಿಸಲು ಬಂದಿತ್ತು!

ಮುಂದೆ ನಡೆದದ್ದು ಕರಾಳ ದುಸ್ವಪ್ನ.
ನಾಲ್ಕೂವರೆ ಟನ್ ತೂಕದ ಅಣುಬಾಂಬ್ ಹೊತ್ತ 'ಎನೋಲಾ ಗೇ' ವಿಮಾನ 8.09ರ ಹೊತ್ತಿಗೆ ಕಾಣಿಸಲು ಶುರುವಾಯಿತು. ಭೂ ಮಟ್ಟದಿಂದ 1850 ಅಡಿ ತಲುಪಿದಾಗ ಬಾಂಬ್ ಸ್ಪೋಟಗೊಳ್ಳಬೇಕು. ಇದು ವಿಜ್ಞಾನಿಗಳ ಯೋಜನೆ. ಆದರೆ ಅವರಿಗೆಲ್ಲ ಬಾಂಬ್ ಸ್ಪೋಟಗೊಳ್ಳುವಾಗ ಭೂಮಿಯ ಮೇಲ್ಪದರವೇ ಬಿರುಕು ಬೀಳಬಹುದೆಂಬ ಆತಂಕವಿತ್ತು.
'ನಾವೀಗ ಬಾಂಬ್ ಕೆಳಗೆಸೆಯಲಿದ್ದೇವೆ. ನಾನು ಸಿಗ್ನಲ್ ಕೊಟ್ಟ ಕೂಡಲೇ ನೀವೆಲ್ಲಾ ಕ್ವಿನೀನ್ ಹರಳುಗಳಿಂದ ಮಾಡಿದ ಗಾಜಿನ ಕನ್ನಡಕ ಹಾಕಿಕೊಳ್ಳಿ. ಸ್ಪೋಟ ಮುಗಿಯುವವರೆಗೂ ತೆಗೆಯಕೂಡದು',ಹಾಗಂತ ಆಜ್ಞೆ ಮಾಡಿದವನ ಹೆಸರು ಕ್ಯಾಪ್ಟನ್ ಟಿಬೇಟ್ಸ್. ಅಷ್ಟರಲ್ಲಿ ನನ್ನ ಗುರಿ ಹತ್ತಿರಾಗುತ್ತಿದೆ ಎನ್ನುತ್ತಾ ಬಾಂಬ್ ಎಸೆಯುವ ವ್ಯವಸ್ಥೆ ಚಾಲೂ ಮಾಡಿದ ಥಾಮಸ್ ಫರ್ಬಿ. ಆಗ ಸಮಯ 8.15.

ವಿಮಾನದಡಿಯಿಂದ 3 ಪ್ಯಾರಾಚೂಟ್ಗಳು ಒಂದಾದ ಮೇಲೊಂದರಂತೆ ಹೂವು ಅರಳಿದಂತೆ ಕೆಳಗಿಳಿಯತೊಡಗಿದವು. ಒಂದು ಪ್ಯಾರಾಚೂಟ್ನಲ್ಲಿ ಬಾಂಬ್ ಕೆಳಗಿಳಿಯುತ್ತಿದ್ದರೆ, ಮಿಕ್ಕವೆರಡರಲ್ಲಿ ರೇಡಿಯೇಷನ್ ಮತ್ತು ತಾಪಮಾನ ಅಳೆದು ರೇಡಿಯೋ ಮುಖಾಂತರ ತಿಳಿಸುವ ಯಂತ್ರಗಳಿದ್ದವು.

ಲಿಟ್ಲ್ ಬಾಯ್ 1850 ಅಡಿ ತಲುಪಿದಾಗ ಗಡಿಯಾರದ ಮುಳ್ಳು 8.16ರ ಹತ್ತಿರವಿತ್ತು. ಆಗ ನಡೆದದ್ದು ಕಿವಿಗಡಚಿಕ್ಕುವ ಸ್ಪೋಟ. 20,000 ಟನ್ಗೂ ಅಧಿಕ ಟಿ.ಎನ್.ಟಿ ಶಕ್ತಿಯೊಂದಿಗೆ ಸ್ಪೋಟ ಸಂಭವಿಸಿಯೇ ಬಿಟ್ಟಿತು. ಕ್ಷಣಾರ್ಧದಲ್ಲೇ ಅಣಬೆಯಾಕಾರದ ಮೋಡ ಸೃಷ್ಟಿಯಾಗಿ, ಕೆಲವೇ ನಿಮಿಷಗಳಲ್ಲಿ 40,000 ಅಡಿ ಎತ್ತರಕ್ಕೇರಿತು. ಕೂಡಲೇ ಹಿರೋಷಿಮಾದ ಸುಮಾರು 10 ಚದರ ಮೈಲಿ ಸುತ್ತಳತೆಯ ಪ್ರದೇಶ ಅತ್ಯುಷ್ಣದ ಅಗ್ಗಿಷ್ಟಿಕೆಯಾಯಿತು. ಸಾವಿರಾರು ಜನರು ಕೆಲವೇ ಸೆಕೆಂಡ್ ಬದುಕಿದ್ದಿರಬಹುದು. ಬಾಂಬ್ ಸಿಡಿದ 10 ಮೈಲಿ ಪ್ರದೇಶದಲ್ಲಿದ್ದ ಯಾವ ಮನೆಯೂ ಉಳಿಯಲಿಲ್ಲ. ಅಲ್ಲಿದ್ದವರ ಚರ್ಮ ಶಾಖಕ್ಕೆ ಕಪ್ಪಾಗಿ ಹೋಯಿತು. ಶಾಖದ ಪ್ರಖರತೆ ಎಷ್ಟಿತ್ತೆಂದರೆ ಉರುಳಿದ ಮನೆಗಳ ಕಾಂಕ್ರೀಟು ಮತ್ತು ಕಲ್ಲುಗಳು ಕರಗಿ ಗಾಜಿನ ಮಾದರಿಯಲ್ಲಿ ಒಂದಕ್ಕೊಂದು ಅಂಟಿ ಬಿಟ್ಟಿದ್ದವು. ಟಾರಿನಂತೆ ದೇಹಗಳು ಕರಗಿ ನೀರು ನೀರಾಯಿತು. 68,000 ಮಂದಿ ಒಮ್ಮೆಗೆ ಬೆಂದು ಹೋದರು. ಇಡೀ ಹಿರೋಷಿಮಾ ಜಾಜ್ವಲ್ಯಮಾನ ಚಿತೆಯಾಯಿತು. ಅಗಾಧ ಉಷ್ಣತೆಯ ಪರಿಣಾಮದಿಂದಾಗಿ ಕೆಲಕಾಲದಲ್ಲೇ ಕರಿ ನೀರಿನ ಮಳೆ ಹಿರೋಷಿಮಾದಲ್ಲಿ ಸುರಿಯಿತು.




ಇಷ್ಟೆಲ್ಲಾ ಆದರೂ ಅಮೇರಿಕಾ ಅಧ್ಯಕ್ಷ ಟ್ರೂಮನ್ ಖಿನ್ನನಾಗಿ ಕುಳಿತಿದ್ದ. ಜಪಾನ್ ಸರ್ಕಾರ ಆಂತರಿಕ ಗೊಂದಲದಿಂದಾಗಿ ಶರಣಾತಿ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಲಿಲ್ಲ. ಆದ್ದರಿಂದ ಅಮೇರಿಕಾ, ಕೊಕುರಾ ಎಂಬ ಪಟ್ಟಣದ ಮೇಲೆ ಅಗಸ್ಟ್ 9ರಂದು 'ಫ್ಯಾಟ್ಮನ್' ಎಂಬ ಮತ್ತೊಂದು ಅಣುಬಾಂಬ್ ದಾಳಿ ನಡೆಸಲು ನಿರ್ಧರಿಸಿತು. ಕೊಕುರಾದಲ್ಲಿ ಮೋಡ ಮುಸುಕಿದ ವಾತಾವರಣವಿದ್ದುದರಿಂದ ನಾಗಾಸಾಕಿ ಪಟ್ಟಣ ಬಾಂಬ್ ದಾಳಿಗೆ ತುತ್ತಾಯಿತು. ಇಲ್ಲಿ ಸಜೀವವಾಗಿ ಬೆಂದು ಹೋದವರ ಸಂಖ್ಯೆ 60,000.

ಶತಮಾನದ ಅಮಾನವೀಯ ಘಟನೆ ನಡೆದದ್ದು ಹೀಗೆ.
ಇಂದಿಗೂ ಈ ಎರಡೂ ಪಟ್ಟಣಗಳಲ್ಲಿ ರಕ್ತದ ಕ್ಯಾನ್ಸರ್, ಅಂಗವೈಕಲ್ಯ ತಲೆಮಾರುಗಳಿಂದ ಬಂದ ಬಳುವಳಿಯಂತೆ ಮುಂದುವರಿಯುತ್ತಿದೆ. ಅಣುಬಾಂಬ್ ಬಿದ್ದ ವರ್ಷದ ಕೊನೆಗೆ ಹಿರೋಷಿಮಾ ಒಂದರಲ್ಲೇ ಬೆಂಕಿಯಿಂದ ಬೆಂದು, ವಿಕಿರಣಕ್ಕೆ ತುತ್ತಾದವರು 1 ಲಕ್ಷದ 40 ಸಾವಿರ ಮಂದಿ.

ಇಂತಹದೊಂದು ಪೈಶಾಚಿಕ ಕೃತ್ಯ ನಡೆಸಿದ್ದಕ್ಕೆ ಯಾರನ್ನು ದೂರಬೇಕು, ನೀವೇ ಹೇಳಿ? ಬಾಂಬ್ ಹಾಕಲು ಅನುಮತಿ ಕೊಟ್ಟು ಆಮೇಲೆ ಮರುಗಿದ ಅಮೇರಿಕಾದ 33ನೇ ಅಧ್ಯಕ್ಷ ಟ್ರೂಮನ್ನನ್ನೇ? ಬಾಂಬ್ ತಯಾರಿಯ ನೇತೃತ್ವ ವಹಿಸಿದ್ದ ಬಾರ್ನ್ ಓಪೆನ್ಹೈಮರ್ ಎಂಬ ವಿಜ್ಞಾನಿಯನ್ನೇ? ಇಂತಹದೊಂದು ಅಸ್ತ್ರ ಸಾಧ್ಯವೆಂದು ಸೈದ್ಧಾಂತಿಕವಾಗಿ ತೋರಿಸಿಕೊಟ್ಟ ಆಲ್ಬರ್ಟ್ ಐನ್ಸ್ಟಿನ್ ಬರೆದ ಪತ್ರವನ್ನೇ? ನಿರುದ್ವಿಗ್ನವಾಗಿ ಹಿರೋಷಿಮಾ ಮೇಲೆ ಬಾಂಬ್ ಉದುರಿಸಿದ ಥಾಮಸ್ ಫರ್ಬಿಯನ್ನೇ? ಅಥವಾ ಯುದ್ಧವಾಗಲೇಬೇಕೆಂದು ಮೊಂಡು ಹಿಡಿದಿದ್ದ ಜಪಾನಿನ ರಕ್ಷಣಾ ಅಧಿಕಾರಿಗಳನ್ನೇ?

ಅಗಸ್ಟ್ 6 ಹಾಗೂ 9ನೇ ತಾರೀಕು ಬಂತೆಂದರೆ ಸಾಕು, ಪ್ರತೀ ವರ್ಷ ಈ ಪ್ರಶ್ನೆಗಳೆಲ್ಲಾ ಮತ್ತೆ ಮತ್ತೆ ಕಾಡುತ್ತವೆ.
ಇತಿಹಾಸವೇ ಹಾಗೆ!