ಬುಧವಾರ, ಜೂನ್ 18, 2008

ಕಾಡೋ ಬೆಳದಿಂಗಳ ತಂಪು!

(ಕಳೆದ ವಾರವಷ್ಟೇ "ಕಾಡ ಬೆಳದಿಂಗಳು" ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಪ್ರಶಸ್ತಿ ಸಿಕ್ಕಿದ್ದು ಕನ್ನಡಕ್ಕೆ ಸಂಭ್ರಮದ ವಿಷಯ. ಕಳೆದ ವರ್ಷ ಮೂಡುಬಿದಿರೆಯಲ್ಲಿ "ಕಾಡಬೆಳದಿಂಗಳು" ಸಿನಿಮಾ ಪ್ರದರ್ಶನ ನೋಡಿ ಬಂದು, ಖುಷಿಯಿಂದ ಸಿನಿಮಾ ಕುರಿತು ಬರಹವೊಂದನ್ನು ಬರೆದಿದ್ದೆ. ಅದೇ ಬರಹ ಪ್ರಶಸ್ತಿ ಬಂದ ಸಂತಸದಲ್ಲಿ- ಕಾರ್ತಿಕ್ )


ಗರ ಬಿಡಲು ಒಲ್ಲದ ಮಕ್ಕಳು, ಹಳ್ಳಿಯೇ ಮೂಲ ಬೇರು, ನೆಮ್ಮದಿಯ ಬೀಡು ಎಂದು ನಂಬಿಕೊಂಡ ತಂದೆ-ತಾಯಿ, ಅರ್ಥ ಕಳೆದುಕೊಳ್ಳುತ್ತಿರುವ ಸಂಬಂಧಗಳು, ಉರುಳಾಗುವ ನಂಬಿಕೆಗಳು. "ಕಾಡ ಬೆಳದಿಂಗಳು" ಸಿನಿಮಾ ನೋಡಿ ಹೊರಬಂದ ಮೇಲೂ ಕಾಡುವುದು ಹೀಗೆ.

ಹೆಸರಿಗೆ ತಕ್ಕಂತೆ ಅದು 'ಪುಟ್ಟ'ಳ್ಳಿ. ಅಲ್ಲಿ ಸದಾಶಿವ(ಲೋಕನಾಥ್) ಮೇಷ್ಟ್ರು. ಅವರಿಗೆ ಚಂದ್ರಶೇಖರಯ್ಯ(ದತ್ತಣ್ಣ) ಆತ್ಮೀಯ. ಇಬ್ಬರೂ ಮಕ್ಕಳಿಂದ ಮರುಗಿದವರೇ. ಅವರ ಹಿಡಿ ಪ್ರೀತಿಗೆ, ಸಾಂತ್ವನಕ್ಕೆ ಇಷ್ಟಪಟ್ಟವರು. ಆದರೆ ಅದ್ಯಾವುದೂ ಬಾಳ ಮುಸ್ಸಂಜೆಯಲ್ಲಿ ಬೆಳದಿಂಗಳಾಗುವುದಿಲ್ಲ. ಕಾಡುವುದು ಮಾತ್ರ ಒಂಟಿತನ. ಬಾಂಬ್ ಬ್ಲಾಸ್ಟ್ನಲ್ಲಿ ಮಗನನ್ನು ಕಳೆದುಕೊಳ್ಳುವ ಸದಾಶಿವಯ್ಯ, ಮಗನಿದ್ದರೂ ಸತ್ತಂತಿರುವ ಚಂದ್ರಶೇಖರಯ್ಯ ಇಬ್ಬರ ಪರಿಸ್ಥಿತಿಯೂ ಒಂದೇ.

ಪುಟ್ಟಳ್ಳಿಯ ಡಾಕ್ಯುಮೆಂಟರಿ ಮಾಡಲು ಬೆಂಗಳೂರಿನಿಂದ ಬರುವ ಟಿವಿ ರಿಪೋರ್ಟರ್ ಸುದೀಷ್ಣೆ(ಅನನ್ಯಾ ಕಾಸರವಳ್ಳಿ)ಯೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಹಳ್ಳಿ ಜನರೊಂದಿಗೆ ಬೆರೆಯುತ್ತಾ ಆಕೆಯೆದುರು ಹಳ್ಳಿಯ ಸಮಸ್ಯೆಗಳ ವಿಶ್ವರೂಪ ತೆರೆದುಕೊಳ್ಳುತ್ತದೆ. ಇಲ್ಲಿ ಬಹಳ ಮುಖ್ಯವಾಗಿ ಚರ್ಚಿತವಾಗಿರುವುದು ಸುದ್ದಿಯ ನೈಜತೆಯನ್ನು ತಮಗೆ ಬೇಕಾದಂತೆ ತಿರುಚುವ ಇವತ್ತಿನ ಟಿವಿ ಮಾಧ್ಯಮಗಳ ಎಡಬಿಡಂಗಿತನ. ತನ್ನ ಸ್ವಂತಿಕೆಗೆ ಅಂಟಿಕೊಳ್ಳಬೇಕೋ ಅಥವಾ ಟಿವಿ ಆಫೀಸಿನ ಮರ್ಜಿಗೆ ಬಲಿ ಬೀಳಬೇಕೋ ಎಂದು ಒದ್ದಾಡುವ ಸುದೀಷ್ಣೆಯ ತಾಕಲಾಟ ಇವತ್ತಿನ ಮಾಧ್ಯಮ ಮಂದಿಯ ನಾಡಿಮಿಡಿತ ಹಿಡಿವ ಹಂಬಲ. ನಾವು ಹೇಳಿದ್ದೇ ಸತ್ಯ ಎಂದು ಡಂಗುರ ಹೊಡೆವ ಟಿವಿ ಚಾನೆಲ್ಗಳ ಉದ್ಧಟತನ ಚಿತ್ರದಲ್ಲಿ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ಜಾಗತೀಕರಣದ ಈ ಕಾಲಘಟ್ಟದಲ್ಲಿ ಹಳ್ಳಿ, ನಗರಗಳ ನಡುವೆ ಹೆಚ್ಚುತ್ತಿರುವ ಅಂತರ, ಅದಕ್ಕೆ ಬಲಿಯಾಗುವ ಜನಾಂಗದ ಕಥೆಯನ್ನು "ಕಾಡ ಬೆಳದಿಂಗಳು" ಪ್ರಸ್ತುತಪಡಿಸುವ ರೀತಿ ಅನನ್ಯ. ಸಂಬಂಧಗಳಿಗಿಂತ ಸ್ವಾರ್ಥ ಮುಖ್ಯ ಹಾಗೂ ಅನಿವಾರ್ಯವಾಗುವುದು ಇಡೀ ಚಿತ್ರದಲ್ಲಿ ಕಂಡುಬರುವ ಅಂಶ.



ಇಂತಹದೊಂದು ಸೂಕ್ಷ್ಮ ಕಥೆ ಬರೆದವರು ಪತ್ರಕರ್ತ ಜೋಗಿ. ಅಂಕಣವೊಂದರಲ್ಲಿ ಪ್ರಕಟವಾಗಿದ್ದ ಅವರ "ಚಂದ್ರಹಾಸ,32" ಕಥೆಯ ಎಳೆಯನ್ನು ಚಿತ್ರಕ್ಕೆ ಬಳಸಲಾಗಿದೆ. ಚಿತ್ರಕಥೆ ಮತ್ತು ಸಂಭಾಷಣೆಗೆ ಜೋಗಿ ಜೊತೆ ಪತ್ರಕರ್ತ ಉದಯ ಮರಕಿಣಿ ಸೇರಿಕೊಂಡಿದ್ದಾರೆ. ಇಡೀ ಚಿತ್ರವನ್ನು ಎತ್ತಿ ಹಿಡಿಯುವುದೇ ಈ ಮೂರು ಅಂಶಗಳು. ಅದರಲ್ಲೂ ಬಿಗಿ ಚಿತ್ರಕಥೆ ಸಿನಿಮಾಕ್ಕೊಂದು ಓಘವನ್ನು ನೀಡುತ್ತದೆ. ಸದಾಶಿವಯ್ಯ ಮಗ ಸತ್ತ ಸಂದರ್ಭದಲ್ಲಿ ಮಣ್ಣು ಕಿತ್ತು ಹೋಗಿರುವ ಬೇರನ್ನು ದಿಟ್ಟಿಸುವುದು, ಸುದೀಷ್ಣೆ ಕೆಲಸ ಬಿಡುತ್ತೇನೆ ಎನ್ನುವಾಗ ಜೋರಾಗಿ ಬೀಸುವ ಗಾಳಿ ಇಂತಹ ಅನೇಕ ಸಾಂಕೇತಿಕ ಸೂಕ್ಷ್ಮಗಳು ಚಿತ್ರಕಥೆಯಲ್ಲಿವೆ. "ಅವ್ರ ಪಾಲಿಗೆ ಹಳ್ಳಿ ಸತ್ತಿದೆ. ಹಳ್ಳಿ ಪಾಲಿಗೆ ಅವ್ರು ಸತ್ತಿದ್ದಾರೆ", "ಹುಲಿ ಇಲ್ಲ. ಆದ್ರೂ ಹೊರಕ್ಕೆ ಹೋಗೋದಿಕ್ಕೆ ಆಗೋದಿಲ್ಲ" ಮುಂತಾದ ಅಪೂರ್ವ ಸಂವೇದನಾಶೀಲ ಸಾಲುಗಳು ಚಿತ್ರಕ್ಕೆ ಪ್ಲಸ್ಪಾಯಿಂಟ್. ಜಾಗತೀಕರಣದಿಂದಾಗಿ ಹಳ್ಳಿಗಳ ಸ್ಥಿತ್ಯಂತರದ ನಡುವೆ ಆಶಾವಾದದ ಬದುಕು ಇನ್ನೂ ಜೀವಂತವಾಗಿರುವುದು ಪಾತ್ರಗಳ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಆದರೆ ಸಂಭಾಷಣೆಗಳಲ್ಲಿ ಹಳ್ಳಿಯ ಭಾಷಾ ಸೊಗಡಿನ ಕೊರತೆ ಎದ್ದು ಕಾಣುತ್ತದೆ. ಇದು ಸಂಭಾಷಣೆಕಾರರಿಗೆ ತಟ್ಟಿದ ಜಾಗತೀಕರಣದ ಪ್ರಭಾವವೇನೋ!

ಎಚ್.ಎಂ.ರಾಮಚಂದ್ರ ಸಿಕ್ಕ ಬೆಳಕಲ್ಲೇ ಮೋಡಿ ಮಾಡಿದ್ದಾರೆ. ಚಿತ್ರದ ಪ್ರತಿ ಫ್ರೇಮನ್ನು ಪ್ರೀತಿಸಲು ಸಾಧ್ಯವಾದರೆ ಅದಕ್ಕೆ ಅವರ ಕ್ಯಾಮರಾ ಕಣ್ಣು ಕಾರಣ. ಕಾಡ ಬೆಳದಿಂಗಳಿಗೆ ನಿಜವಾದ 'ಅಮಾವಾಸ್ಯೆ' ರಾಜೇಶ್ ರಾಮನಾಥ್!! ಅವರ ಹಿನ್ನೆಲೆ ಸಂಗೀತವನ್ನು ಮೊದಲ 20 ನಿಮಿಷ ಸಹಿಸಿಕೊಳ್ಳಬೇಕಷ್ಟೇ. ನಂತರದ್ದು ಸರಿ-ಸುಮಾರು. ಕೆಲವೊಂದು ಸನ್ನಿವೇಶಗಳಲ್ಲಿ ಮೌನ ಮಾತಾಗಬೇಕಿತ್ತು. ಆದರೆ ಹಿನ್ನೆಲೆ ಸಂಗೀತ ಅದಕ್ಕೆ ಅವಕಾಶವನ್ನೇ ಕೊಡುವುದಿಲ್ಲ. ಕೆಲವು ಫ್ರೇಮುಗಳು ರಾಮನಾಥ್ ಸಂಗೀತದಲ್ಲಿ ಮರುಗುತ್ತವೆ. ಕೊರಗುವ ಸರದಿ ಪ್ರೇಕ್ಷಕನದ್ದು! ಇಡೀ ಚಿತ್ರದಲ್ಲಿ ಗಮನ ಸೆಳೆಯುವುದು ದೃಶ್ಯ ಜೋಡಣೆ ಮತ್ತು ನಿರೂಪಣೆ. ಕಮರ್ಶಿಯಲ್ ಸಿನಿಮಾಗಳ ನಿರೂಪಣಾ ವೇಗ ಸ್ವಲ್ಪ ಮಟ್ಟಿಗೆ ಎದ್ದು ಕಾಣುತ್ತದೆ. ಅನಿಲ್ ನಾಯ್ಡು ಸಂಕಲನ ಅದಕ್ಕೆ ತಕ್ಕಮಟ್ಟಿಗೆ ಸಹಕರಿಸಿದೆ.

ನಟನೆಯಲ್ಲಿ ಗೆಲ್ಲುವುದು ದತ್ತಣ್ಣ ಹಾಗೂ ಲೋಕನಾಥ್. ಇಬ್ಬರದ್ದೂ ಪೈಪೋಟಿಯ ಅಭಿನಯ. ಸತ್ತ ಕಪ್ಪೆಯನ್ನು ತದೇಕಚಿತ್ತದಿಂದ ದಿಟ್ಟಿಸುತ್ತಾ ಕಣ್ಣಾಲಿಗಳಲ್ಲಿ ವಿಶಾದವನ್ನು ಕರಗಿಸುವ ಲೋಕನಾಥ್ಗೆ ಲೋಕನಾಥೇ ಸರಿಸಾಟಿ. ಇವರಿಬ್ಬರ ನಡುವೆ ಅನನ್ಯಾ ಕಾಸರವಳ್ಳಿ ಪೇಲವ. ನಟನೆಯ ಲೋಪಗಳನ್ನು ಆಕೆಯ ಬೊಗಸೆ ಕಣ್ಣುಗಳು ಬ್ಯಾಲೆನ್ಸ್ ಮಾಡುತ್ತವೆ! ಲಿಂಗದೇವರು ನಿರ್ದೇಶನ ಹಳಿ ತಪ್ಪಿದ ರೈಲಿನಂತೆ ಅಲ್ಲಲ್ಲಿ ಹಿಡಿತ ಕಳೆದುಕೊಂಡಿದೆ. ಕೆಲವೆಡೆ ಅವಸರ ಎದ್ದು ಕಾಣುತ್ತದೆ. ಟಿವಿ ರಿಪೋರ್ಟರೇ ಟೀಂ ಲೀಡರ್, ಕ್ಯಾಮರಾಮೆನ್ ಲೆಕ್ಕಕ್ಕಿಲ್ಲ ಅಂತ ನಿರ್ದೇಶಕರಿಗೆ ಯಾಕನ್ನಿಸಿತೋ ದೇವರೇ ಬಲ್ಲ. ಚಿತ್ರದಲ್ಲಿ ಕ್ಯಾಮರಾಮೆನ್ಗೆ ಕೂಡಿಸಿ, ಕಳೆದು ಅವಕಾಶ ಕೊಟ್ಟಿದ್ದಾರೆ ಲಿಂಗದೇವರು. ಕೆಲವು ಸನ್ನಿವೇಶಗಳಲ್ಲಿ ಮುಂದಿನ ಡೈಲಾಗ್ ಏನು ಅನ್ನೋದು ಪ್ರೇಕ್ಷಕನಿಗೇ ಗೊತ್ತಾಗಿಬಿಡುತ್ತದೆ. ಉದಾಹರಣೆಗೆ; ಹಳ್ಳಿ ಹುಡುಗನೊಬ್ಬ ಪೇಟೆಗೆ ಹೋಗಲು ಬಸ್ಸು ಹತ್ತುವುದು. ಆ ಸಂದರ್ಭದಲ್ಲಿ ಸುದೀಷ್ಣೆ ಮಾತಾಡದಿದ್ದರೇನೇ ಒಳ್ಳೆಯದಿತ್ತು. ಲಿಂಗದೇವರು ಧಾರಾವಾಹಿ ನಿರ್ದೇಶನದ ಹ್ಯಾಂಗೋವರ್ನಿಂದ ಇನ್ನೂ ಹೊರಬಂದಿಲ್ಲ ಎನ್ನುವುದಂತೂ ಕಠೋರ ಸತ್ಯ. ಆದರೂ ತಮಗಿರುವ ಸೀಮಿತ ಅವಕಾಶದಲ್ಲೇ ಕಥೆಯನ್ನು ಸತ್ವಶಾಲಿಯಾಗಿ ಹೇಳಲು ಪ್ರಯತ್ನಪಟ್ಟಿದ್ದಾರೆ. ಆಯ್ದುಕೊಂಡ ಬಸರೀಕಟ್ಟೆ ಪಕ್ಕದ ಲೊಕೇಶನ್ಗಳು ಸಹ ಕಥೆಗೆ ಬೆನ್ನೆಲುಬು. ಕ್ಲೈಮ್ಯಾಕ್ಸ್ ಪ್ರೇಕ್ಷಕ ಊಹಿಸುವುದಕ್ಕಿಂತ ಮೊದಲೇ ಬಂದು ಅಚ್ಚರಿ ಹುಟ್ಟಿಸುತ್ತದೆ. ಇಷ್ಟವಾಗುತ್ತದೆ ಕೂಡಾ. ನಕ್ಸಲಿಸಂ ಸಮಸ್ಯೆಯೂ ಚಿತ್ರದಲ್ಲಿ ಬಂದು ಹೋಗುತ್ತದೆ. ಅಂದ ಹಾಗೆ ಸಿನಿಮಾ ನಿರ್ಮಿಸಿರುವುದು 'ಬೆಂಗಳೂರು ಕಂಪೆನಿ'.



ಸಿನಿಮಾ ಮುಗಿದ ನಂತರವೂ ನಮ್ಮೊಳಗೆ ಬೆಳೆಯುತ್ತಾ, ಕಾಡುವ ದೃಶ್ಯವೆಂದರೆ ಸುದೀಷ್ಣೆ ಕೊನೆಯಲ್ಲಿ ಬೆಟ್ಟದ ಮೇಲಿಂದ ಮೊಬೈಲ್ ಎಸೆಯುವುದು. ಜೊತೆಗೆ ಆ ಎಸೆತ ಹುಟ್ಟುಹಾಕುವ ಪ್ರಶ್ನೆಗಳು ಸಹ ಹಲವು. ಆ ಎಸೆತ ಜಾಗತೀಕರಣ ಹುಟ್ಟಿಸಿದ ನಿರ್ಲಿಪ್ತತೆಯ ಸಂಕೇತವಾ? ನಂಬಿಕೊಂಡ ನಂಬಿಕೆಗಳು ಕುಸಿದಾಗ ಅದರಿಂದ ಹೊರಬಂದು ನಿರುಮ್ಮಳವಾಗಿ ಸ್ವತಂತ್ರಗೊಳ್ಳುವ ತವಕವಾ? ಪರಿಸ್ಥಿತಿಯ ಒತ್ತಡಕ್ಕೆ ಜೈ ಎನ್ನದೆ ತನ್ನತನವನ್ನು ಹುಡುಕಿಕೊಂಡು ಹೊರಟವಳ ಹಾದಿಯಾ? ತನ್ನ ನಿತ್ಯ ನೈಮಿತ್ತಿಕಗಳ ಹೊರತಾಗಿ ತನಗಿರುವ ನೈಜ ಬದುಕು ಬೇರೆಯೇ ಎನ್ನುವ ಸ್ಪಷ್ಟನೆ ಆಕೆಗೆ ಸಿಕ್ಕಿತಾ? ಪ್ರತೀ ಬದಲಾವಣೆ ಗಾಳಿಯೂ ಇದೇ ರೀತಿ ಇರುತ್ತದೆಯಾ? ಜಾಗತೀಕರಣದ ಗೊಂದಲದ ಗೂಡಲ್ಲಿ ಸಿಕ್ಕಿ ಹಾಕಿಕೊಂಡ ನಮ್ಮ ಗೊಂದಲಗಳು ಇವೇ ಇರಬಹುದೇ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹುಟ್ಟಿಸುತ್ತಾ ಗೊಂದಲದ ಗೂಡು ನಮ್ಮಲ್ಲಿ ಉಳಿಯುತ್ತದೆ, ಬೆಳೆಯುತ್ತದೆ.

ಬೆಳದಿಂಗಳ ತಂಪು ಕಾಡುವುದು ಇದೇ ಕಾರಣಕ್ಕೆ!


ಚಿತ್ರ ಕೃಪೆ-ಜೋಗಿ ಮನೆ

3 ಕಾಮೆಂಟ್‌ಗಳು:

ರಾಧಿಕಾ ವಿಟ್ಲ ಹೇಳಿದರು...

ಗುಡ್‌.

ನಿನ್ನ ಬರಹ ಇಷ್ಟವಾಯ್ತು. ಆದರೆ, ಚಿತ್ರ ನೋಡಿಲ್ಲ ನಾನು. ಚಂದ್ರಹಾಸ,೩೨ ಓದಿದ್ದೆ.

ಬ್ಲಾಗಲ್ಲಿ ಇಂತಹ ಬರಹ ಮುಂದುವರಿಸು.
- ರಾಧಿಕಾ

ಅನಾಮಧೇಯ ಹೇಳಿದರು...

hi dis is gowri here.. i went through ur write ups it was excellent reading it.... im sure u have a bright future as a writer & one day u wil b surely successful.... all d best 4 ur future endevour...

ಮನೋರಮಾ.ಬಿ.ಎನ್ ಹೇಳಿದರು...

ishta aitu nimma vimarshe..