ಭಾನುವಾರ, ಸೆಪ್ಟೆಂಬರ್ 25, 2011

ಬಿಡಿಸದ ಪ್ರೇಮಚಿತ್ರ


ಇಟೆಲಿಯ "ಸಿನಿಮಾ ಪ್ಯಾರಡಿಸೋ" ವನ್ನು ಮತ್ತೆ ಮತ್ತೆ ನೋಡುವುದರಲ್ಲೇ ಒಂದು ಸುಖವಿದೆ. ಅದರಲ್ಲಿ ಬರುವ ಥಿಯೇಟರಿನ ಪ್ರೊಜೆಕ್ಷನಿಸ್ಟ್ ಆಲ್ಫ್ರೆಡೋ, ಸಿನಿಮಾವೆಂಬ ವಿಸ್ಮಯದ ನೆರಳು ಬೆಳಕಿನಾಟವನ್ನು ಬೆರಗುಗಣ್ಣುಗಳಿಂದ ನೋಡುತ್ತಾ ಕರಗಿ ಹೋಗುವ ಟೋಟೋ, ಇವರಿಬ್ಬರೂ ನಮ್ಮೆಲ್ಲರ ಅರಿವಿನ ಪರಿಧಿಯನ್ನು ವಿಸ್ತರಿಸುತ್ತಲೇ ಇರುತ್ತಾರೆ. ಸಿನಿಮಾದಲ್ಲಿ ಆಲ್ಫ್ರೆಡೋ ಒಂದು ಸನ್ನಿವೇಶದಲ್ಲಿ  ಅಮರ ಪ್ರೇಮಿಗಳಾದ ಟೋಟೋ ಹಾಗೂ ನಾಯಕಿ ಒಂದಾಗಬೇಕಾದ ಕ್ಷಣವನ್ನು ತಪ್ಪಿಸುವ ಸನ್ನಿವೇಶವಿದೆ.. ಪ್ರೀತಿಯ ಮತ್ತಿನಲ್ಲಿ ಗುರಿಯನ್ನು ಮರೆಯುವ ಹಂತಕ್ಕೆ ಬಂದಿದ್ದ ಟೋಟೋಗೆ ವೃದ್ಧ ಆಲ್ಫ್ರೆಡೋ ನಿಜವಾದ ಗುರುವಾಗುತ್ತಾನೆ. ಗುರಿಯನ್ನು ಗುರುತಿಸಿ ಕೊಡುತ್ತಾನೆ. ಟೋಟೋಗೆ ಆ ಕ್ಷಣದಲ್ಲಿ ತನ್ನ ಪ್ರೇಯಸಿಯ ಭೇಟಿಯನ್ನು ಸಾಧ್ಯವಾಗಿಸದೇ ಹೋದ ಆಲ್ಫ್ರೆಡೋ ಬಗ್ಗೆ ಸಿಟ್ಟು, ಅಸಹನೆ...ಎಷ್ಟೇ ಹತಾಶೆ ಅನುಭವಿಸಿದರೂ ಆ ನೋವು ಆತನಿಗೆ ಗುರಿಯನ್ನು ದಿಟ್ಟಿಸಿ ನೋಡಲು ಸಹಕರಿಸುತ್ತದೆ. ಟೋಟೋಗದು ಅವನ ಮುಪ್ಪಿನ ಸಮಯದಲ್ಲಿ ಗೊತ್ತಾಗುತ್ತದೆ.
------------------------------
ಬಿಟ್ಟೂ ಬಿಡದೇ ಕಾಡುವ ಅವಳ ಮುಂಗುರುಳು, ಅದ್ಯಾವುದೋ ಅಪರ ಘಳಿಗೆಯಲ್ಲೂ ಮಾಸದೇ ಉಳಿದ ನಗು, ಮೊಬೈಲಿನ ಡ್ರಾಫ್ಟ್ ಬಾಕ್ಸಿನಲ್ಲಿ ಬಾಕಿ ಉಳಿದ ಸಿಹಿ ಸಂಕಟದ ಪುಟಾಣಿ ಸಾಲು. ಬಿಡದೇ ಸುರಿಯೋ ಜಡಿಮಳೆ, ರೈಡ್ಗಾಗೇ ಕಾದು ಕುಳಿತಂತೆ ಖಾಲಿಯಾಗಿರೋ ಜಂಟಿ ರಸ್ತೆ..ಉಫ್...ಸಾಕಪ್ಪಾ ಸಾಕು...ನೆನೆದಷ್ಟೂ ನೆನೆಯುತ್ತೇವೆ, ಕಾಡಿಸಿ ಕೊಲ್ಲಲ್ಪಡುತ್ತೇವೆ. ನಮಗೂ ಒಬ್ಬ ಆಲ್ಫ್ರೆಡೋ ಬೇಕು..
ಬಿಲ್ಕುಲ್ ಬೇಕೇ ಬೇಕು. ಅವನು ನಮ್ಮನ್ನು ದೇವದಾಸನನ್ನಾಗುವುದನ್ನು ತಪ್ಪಿಸುತ್ತಾನೆ, ವಿರಹಿಯಾಗಿಯೇ ಉಳಿಯುತ್ತಾ ಸವಿ ನೆನಪಿನಲ್ಲಿ ಅನೇಕಾರು ವರ್ಷಗಳ ನಂತರ ಪ್ರೀತಿಸಿದ ಮೊದಲ ಹುಡುಗಿಯನ್ನು ಬೆಂಬತ್ತುವಂತೆ ಮಾಡುತ್ತಾನೆ. ಅವಳನ್ನು ಮೊದಲ ಬಾರಿಗೆ ಚುಂಬಿಸಿದ ಸುಖದ ಘಳಿಗೆ, ಅವಳ ಮುಂಗುರುಳನ್ನು ಉಂಗುರವಾಗಿಸಿದ ಕ್ಷಣ, ಅವಳ ಹೆಜ್ಜೆ ಮೇಲೆ ಮೊತ್ತಮೊದಲು ಹೆಜ್ಜೆಯಿಟ್ಟ ಹುರುಪು ಎಲ್ಲವೂ ನಮ್ಮ ನೆನಪಿನ ಪರಿಧಿಯಲ್ಲೇ ಹೆಪ್ಪುಗಟ್ಟಿ ಬಿಡುವಂತೆ ಮಾಡಿಬಿಡುತ್ತಾನೆ ನಮಗೆ ಗೊತ್ತೇ ಆಗದಂತೆ. ಟೋಟೋಗೆ ಬೆನ್ನಿಗಿದ್ದು ಹೇಗೆ ಪೊರೆದನೋ ಹಾಗೆ; ಒಂದು ಒಳ್ಳೆಯ, ಸಾತ್ವಿಕ, ಆರೋಗ್ಯಕರ ಸುಳ್ಳನ್ನು ಸತ್ಯವಾಗಿಸುವ ಮೂಲಕ. ನಮ್ಮನ್ನು ಹಾಗೂ ನಮ್ಮ ಪ್ರೇಯಸಿಯನ್ನು ದೂರ ಮಾಡಿ, ಬದುಕಿಗೊಂದು ಮೋಕ್ಷ ಕರುಣಿಸುತ್ತಾನೆ. ಅದರಿಂದಾಗಿ ಆ ತಿರುವಿನ ನಂತರದ ದಾರಿಗೆ ಒಂದು ವಿಸ್ಮಯವೇ ಒದಗಿ ಬಂದಿರುತ್ತದೆ.
ನಮ್ಮ ಯೌವನದ ಪ್ರಣಯದ ಕ್ಷಣಗಳು ಜೀವನ ಸಾರ್ಥಕ್ಯದ ಮಹಾ ತ್ಯಾಗದ ಘಳಿಗೆಗಳು ಅಂತ ಕೊನೆಯವರೆಗೂ ಅನ್ನಿಸುವುದಕ್ಕಿಂತ ಹೆಚ್ಚಾಗಿ ಅಂತಹದೊಂದು ಸನ್ನಿವೇಶ ದಿವ್ಯವಾಗಿತ್ತು ಎನ್ನುವುದೇ ಅಳಿಸಲಾಗದ ಅಕ್ಷರ ಸ್ಪಂದನೆ. ಸದ್ಯದ ಪರಿಸ್ಥಿತಿಯಲ್ಲಿ ಅದನ್ನು ಸಾಧ್ಯವಾಗಿಸುವವನು ಅವನೊಬ್ಬನೇ--ಆಲ್ಫ್ರೆಡೋ. ಅವನಿಗೆ ನಮ್ಮ ಮೇಲಿರುವ ಪ್ರೀತಿ ಹೇಳಿಸುವ ಸುಳ್ಳು ಬೇಕು. ಅದರಿಂದಾಗೇ ಸಿನಿಮಾ ಪ್ರೋಜೆಕ್ಟರ್ನ ಕಿಂಡಿಯ ಮೂಲಕ ಪರದೆಯ ಮೇಲೆ ಹಾಯುವ ಬೆಳಕಿನ ಕಿರಣಗಳಲ್ಲಿ ನಮ್ಮ ಬಿಡಿ ಬಿಡಿ ಸ್ಥಬ್ದ ಚಿತ್ರಗಳಿಗೆ ಜೀವ, ಚಲನೆ ಬಂದು ಕೂರುತ್ತದೆ. ಬತ್ತಿದ ಜೀವ ಸೆಲೆ ಮತ್ತೆ ಪುಟಿದುಕೊಂಡಂತೆ, ಚಿಕ್ಕ ಮಕ್ಕಳಂತೆಯೇ ಗಾಳಿಪಟ ಹಿಡಿದು ಓಡುತ್ತೇವೆ. ಮುಸ್ಸಂಜೆಯ ಗದ್ದೆ ಬದುವಿನಲ್ಲಿ.
------------
ನೋಡ ನೋಡುತ್ತಲೇ ಮಳೆಗಾಲ. ಬೆನ್ನತ್ತುತ್ತೆ ಚಳಿಗಾಲ. ಹೊದ್ದು ಮಲಗಿದರೆ ತೂರಿಕೊಳ್ಳುತ್ತೆ ಬೇಸಿಗೆಗಾಲ. ಕಾವು ಏರುವಷ್ಟರಲ್ಲಿ ಮತ್ತೆ ಮಳೆಗಾಲ...ಮಳೆಯಷ್ಟೇ ದಟ್ಟ ದರಿದ್ರ ನೆನಪೂ ಕೂಡಾ. ಅವಳೇ ಸಿಕ್ಕದಿದ್ದ ಮೇಲೆ ನೆನಪುಗಳೇ ಎಲ್ಲಾ ತಾನೇ. ಬೇಡ ಬೇಡ ಎಂದು ಬಚ್ಚಿಟ್ಟ ಆಕೆಯ ನೆನಪಿನ ಚಿಪ್ಪು ಜೀವನದ ಅದ್ಯಾವುದೋ ಘಳಿಗೆಯಲ್ಲಿ ಒಡೆದು ಬಿಡುತ್ತದೆ. ಆಗ ನಮ್ಮಲ್ಲಿ ಎಲ್ಲವೂ ಇರುತ್ತದೆ. ಒಂದು ಕಾಲದಲ್ಲಿ ನಮ್ಮಲ್ಲಿ ಇಲ್ಲ ಅಂತಂದುಕೊಂಡಿದ್ದು...30 ಸೆಕೆಂಡಿನ ಟಿವಿ ಆಡ್ನಂತೆ. ಆದರೆ ಆಕೆಯಿಲ್ಲ. ಅದೆಷ್ಟೋ ವರ್ಷಗಳ ನಂತರ ನೆನಪು ವಾಸ್ತವವಾಗಿ ಬಿಡುತ್ತದೆ. ಬೆಚ್ಚಿಬೀಳುವಂತಾಗುವುದು ಆಗಲೇ. ಹುಚ್ಚೇ ಹಿಡಿದಂತಾಗುತ್ತದೆ. ಬೇಕಿದ್ದೋ ಬೇಡದೆಯೋ ಎಲ್ಲಾ ಜಂಜಡಗಳಿಂದ ಮುಕ್ತವಾಗಿ ಓಡುತ್ತೇವೆ. ಬೆತ್ತಲೆ ಓಡಿದಂತೆ. ಇಷ್ಟರವರೆಗೆ ಮಾಡಿಕೊಂಡಿದ್ದು ಹೊಂದಾಣಿಕೆ ಎನ್ನುವ ನಿಟ್ಟುಸಿರಿನೊಂದಿಗೆ. ಮತ್ತೊಮ್ಮೆ ಅಸಹ್ಯದೊಂದಿಗೆ...ಅದೇ ಹಳೇ ಗೆಳತಿಯ, ಪ್ರೇಯಸಿಯ ಮುಖವನ್ನು, ವಿಳಾಸಗಳನ್ನು ಅರಸುತ್ತಾ. ಒಂದೇ ಒಂದು ಕಿರುನಗೆಗೆ, ಒಂದೇ ಒಂದು ಬಿಸಿಯುಸಿರಿಗೆ, ಒಂದೇ ಒಂದು ಅಪ್ಪುಗೆಗೆ. ನಮ್ಮದಲ್ಲದ ಘಳಿಗೆಗಳನ್ನು ನಮ್ಮದಾಗಿಸಿಕೊಳ್ಳುವ ತವಕದ ಮುದಿ ತಲ್ಲಣಗಳಿಗೆ...
ಅದೆಷ್ಟೋ ಕನಸುಗಳನ್ನು, ಕನವರಿಕೆಗಳನ್ನು ಹಾಗೆಯೇ ಬಿಟ್ಟು ಬಂದ್ದೇವೆ ನಾವು. ಮತ್ತೆ ಅವೆಲ್ಲವನ್ನೂ ಹೆಕ್ಕಿಕೊಳ್ಳಬೇಕು ಕಾಲನ ತೆಕ್ಕೆಯಿಂದ. ನೆಮ್ಮದಿಯ ಗೂಡು ಕಟ್ಟಲು ಆಕೆಯೂ ಜೊತೆಗಿರುತ್ತಾಳೆಯೇ ಎನ್ನುವುದಷ್ಟೇ ಪ್ರಶ್ನೆ...ನೆನಪು ಮೆರವಣಿಗೆಯಲ್ಲ. ನಲಿವಿದೆ ಅಂತ ಭಾವಿಸೋ ನೋವಿನ ಸಂತೆ ಅಥವಾ ನೋವೆಂದು ಭಾವಿಸುವ ನಲಿವಿನ ಸಂತೆ. ಕತ್ತಲಲ್ಲಿ ಬಣ್ಣ ಬಣ್ಣದ ಚಿತ್ರಗಳನ್ನು ವ್ಯಕ್ತಿಗಳಿಗೆ ರೂಪ ಕೊಡುತ್ತಾ ನಲಿವು ಕೊಡುತ್ತಾ ಮತ್ತೆ ಕೆಲವೇ ಕ್ಷಣಗಳಿಗೆ ಇರುವ ಬಣ್ಣಗಳನ್ನೆಲ್ಲಾ ಕರಗಿಸಿಕೊಂಡು ಬಿಳಿ ಬಣ್ಣಕ್ಕೆ ತಿರುಗಿದಂತೆ ಭಾಸವಾಗುವ ಸಿನಿಮಾ ಥಿಯೇಟರಿನ ಸ್ಕ್ರೀನಿನಂತೆ. ಅಂತಹ ಹುಚ್ಚುಗಳನ್ನು ಸಾಕಾರಗೊಳಿಸಿಕೊಳ್ಳಲು ನಮಗೆ ಎಲ್ಲವೂ ಬೇಕು.

ಇಷ್ಟೆಲ್ಲಾ ಸಾಕ್ಷತ್ಕಾರವಾಗಲಾದರೂ ನಮಗೊಬ್ಬ ಆಲ್ಫ್ರೆಡೋ ಸಿಕ್ಕಬೇಕು! ನಾವೂ ಟೋಟೋನಂತೆ ಇಷ್ಟದ ಬಗೆಗೊಂದು ಹುಚ್ಚನ್ನಿಟ್ಟುಕೊಂಡು ಓಡಬೇಕು. ಯಾರದೋ ನೆನಪಿನ ಮುಡಿಯಲ್ಲಿ ನೇತಾಡುವ ಸಂಪಿಗೆ ನಮ್ಮದಾಗುವ ಸಮಯಕ್ಕೆ ಹಂಗಿಲ್ಲ...