ಗುರುವಾರ, ಸೆಪ್ಟೆಂಬರ್ 2, 2010

ಸಂತೆಯಲಿ ನಿಂತಂತೆ, ಪ್ರೀತಿ ಕತೆಯಲ್ಲೊಂದು ಗೊಂದಲಾಪುರ

(ಸೆಪ್ಟೆಂಬರ್ ತಿಂಗಳ "ರೂಪತಾರಾ"ದ ಸಂವಾದ ವಿಭಾಗದಲ್ಲಿ ಪ್ರಕಟವಾದ ಬರಹ)

ಹೆಸರೇ ಹೇಳುವಂತೆ ಇದು ಕೃಷ್ಣನ್ ಲವ್ ಸ್ಟೋರಿ..ಒಂದು ಪ್ರೀತಿಯ ಕತೆಗೆ ಬೇಕಾದ ಎಲ್ಲವೂ ಇಲ್ಲಿದೆ. ನಾಯಕಿಯ ಪ್ರೀತಿಯ ಮೋಡಿಗೆ ಒಳಗಾಗುವ ನಾಯಕ, ಬಡತನದಲ್ಲಿದ್ದೂ ಮಹಾತ್ವಾಕಾಂಕ್ಷೆಯ ಮೆಟ್ಟಿಲು ಹತ್ತಲು ರೆಡಿಯಾಗಿ ನಿಂತಿರುವ ಘಾಟಿ ನಾಯಕಿ, ಕುಡುಕ ಅಣ್ಣ, ಪ್ರೀತಿಯ ಅಪ್ಪ ಹೀಗೆ ಎಲ್ಲರಿಗೂ ಅವರದ್ದೇ ಆದ ವಿಸ್ತಾರವಿದೆ, ಮಿತಿಯಿದೆ..ಒಂದು ಪ್ರೇಮಕತೆಯ ಚಿತ್ರದಲ್ಲಿ ಏನೆಲ್ಲಾ ಇರಬಹುದು ಎಂದು ನಾವೆಲ್ಲಾ ನಿರೀಕ್ಷಿಸಬಹುದೋ ಅದೆಲ್ಲಾ ಇದೆ...ಅದಕ್ಕಿಂತ ಹೊರತಾಗಿ ಹದಿಹರೆಯದ ಹುಡುಗರ ಭಾಷೆಯಲ್ಲಿ ಹೇಳಬಹುದಾದ ಫುಲ್ ಫೀಲಿಂಗಿದೆ!....ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ನಿರ್ದೇಶಕನೆಂಬ ನಿಜವಾದ ನಾಯಕನಿದ್ದಾನೆ.



ಉತ್ತಮವಾದ ಪ್ರತೀ ದೃಶ್ಯಕ್ಕೂ ಒಂದು ಆರಂಭ, ಮಧ್ಯಂತರ ಹಾಗೂ ಕೊನೆ ಇದ್ದೇ ಇರುತ್ತದೆ. ನಾಯಕ ನಾಯಕಿಯೆದುರು ಪ್ರೀತಿ ನಿವೇದನೆ ಮಾಡುವ  ದೃಶ್ಯವೇ ಇರಲಿ, ಅಥವಾ ನಾಯಕಿ ನಾಯಕನನ್ನು ತಿರಸ್ಕರಿಸುವ ದೃಶ್ಯವೇ ಇರಲಿ, ಮೇಲೆ ಹೇಳಿದ 3 ಹಂತಗಳು ಇದ್ದೇ ಇರುತ್ತವೆ. ಇದೆಲ್ಲಾ ಪರಿಣಾಮಕಾರಿಯಾಗಿದ್ದಾಗ ಮಾತ್ರ ದೃಶ್ಯವೊಂದರ ತೀವ್ರತೆಯನ್ನು, ಆದ್ರತೆಯನ್ನು, ನಲಿವನ್ನು ಕಟ್ಟಿಕೊಡಲು ಸಾಧ್ಯ. ಯೋಗರಾಜ್ ಭಟ್ಟರ ಮುಂಗಾರು ಮಳೆ ಗೆಲ್ಲಲು, ಜನಸಾಮಾನ್ಯನಲ್ಲಿ ನೆಲೆ ನಿಲ್ಲಲು ಚಿತ್ರಕತೆಯಲ್ಲಿ ಬರುವ ಇಂತಹ ಅಂಶಗಳ ಯಶಸ್ವಿ ಅಳವಡಿಕೆಯೇ ಕಾರಣ. ಈ ಸಿನಿಮಾಕ್ಕೆ ಶಶಾಂಕ್ ಆಯ್ದುಕೊಂಡ ಕತೆ ತುಂಬಾ ಸರಳವಾದದ್ದು. ಆದರೆ ಅದನ್ನು ಒಂದು ಚಿತ್ರವಾಗಿ ತೆರೆ ಮೇಲೆ ನಿರೂಪಿಸುವ ರೀತಿಯಿಂದ ಗಮನ ಸೆಳೆಯುತ್ತದೆ. ಚಿತ್ರಕ್ಕಿರುವ ಸಮಸ್ಯೆ ಪ್ರಥಮಾರ್ಧ. ಆರ್ಡಿನರಿ ಅಂತನ್ನಿಸುವ ವಿಷಯವನ್ನು ಆಪ್ತವಾಗಿ ಚಿತ್ರಿಸುವಂತೆ ಮಾಡುವ ಶಕ್ತಿ ಪ್ರತೀ ದೃಶ್ಯಕ್ಕಿದೆ. ಆದರೆ ಕೃಷ್ಣನ ಲವ್ ಸ್ಟೋರಿಯ ಪ್ರಥಮಾರ್ಧ ದೃಶ್ಯದ ಮಿಸ್ ಮ್ಯಾನೇಜ್ಮೆಂಟಿನಲ್ಲೇ ಬೋರ್ ಹೊಡೆಸುತ್ತದೆ. ಚಿತ್ರ ಶುರುವಾಗುವಾಗಲೇ ಚಿತ್ರಕತೆಗೆ ಧಾವಂತವಿದೆ. ಎಲ್ಲಾ ಪಾತ್ರಗಳನ್ನು ಆದಷ್ಟು ಬೇಗ ಎಸ್ಟಾಬ್ಲಿಶ್ ಮಾಡಿಬಿಡಬೇಕೆಂಬ ಅವಸರ ಯಾಕೋ ನೋಡುಗನಲ್ಲಿ ಅಸಹನೆ ಹೆಚ್ಚಿಸುತ್ತದೆ. ಇಂತಹ ಧಾವಂತದಿಂದಾಗಿಯೇ ಅರ್ಧಕ್ಕೇ ಕಟ್ಟಾಗುವ ದೃಶ್ಯದ ಫ್ಲೋ ಲೆವೆಲ್ನಿಂದ ಕಿರಿಕಿರಿ ಮತ್ತಷ್ಟು ಹೆಚ್ಚುತ್ತದೆ. ಸಂಕಲನದ ಸಂದರ್ಭದಲ್ಲಿ ಕತ್ತರಿಯಾಡಿಸುವಾಗ ಎಡವಟ್ಟಾಗಿದೆಯಾ ಎನ್ನುವ ಅನುಮಾನ ಬರುತ್ತದೆ. ಗಲ್ಲಿ ಕ್ರಿಕೆಟ್ಗೆ ಸಂಬಂಧಿಸಿದ ದೃಶ್ಯಗಳಲ್ಲಿ ಇವೆಲ್ಲಾ ಎದ್ದು ಕಾಣುತ್ತದೆ.  

ಇಂಟರ್ವಲ್ನ ನಂತರದ ದ್ವಿತೀಯಾರ್ಥ ಸರಾಗವಾಗಿದೆ. ಕತೆಯ ಜೀವಾಳವಿರುವುದು ದ್ವಿತೀಯಾರ್ಧವನ್ನು ಶಶಾಂಕ್ ನಿಭಾಯಿಸುವ ರೀತಿಯಲ್ಲಿ. ಒಂದು ವಾದವಾಗುವ ಎಲ್ಲಾ ಅಪಾಯಗಳಿದ್ದ ದೃಷ್ಟಿಕೋನವನ್ನು ದೃಶ್ಯವಾಗಿ ಸೆರೆಹಿಡಿಯುವಲ್ಲಿ ಅವರ ಜಾಣ್ಮೆ ಕೆಲಸ ಮಾಡಿದೆ. ನಾಯಕಿಯ ದೃಷ್ಟಿಕೋನದಲ್ಲಿ ಕತೆಯನ್ನು ಬೆಳೆಸುವ, ನೋಡುವ ಶಶಾಂಕ್ ಶೈಲಿ ಕನ್ನಡಕ್ಕೆ ಹೊಸತೇನೂ ಅಲ್ಲದಿದ್ದರೂ ಇವತ್ತಿನ ಕಮರ್ಶಿಯಲ್ ಅಂಶಗಳ ನಡುವೆ ಅದನ್ನವರು ನಿಭಾಯಿಸುವ ರೀತಿ ಖುಷಿ ಕೊಡುತ್ತದೆ. ಇಡೀ ಚಿತ್ರವನ್ನು ಸಹ್ಯಗೊಳಿಸಿರುವುದು ರಾಧಿಕಾ ಪಂಡಿತ್ ಅಭಿನಯ..ದ್ವಿತೀಯಾರ್ಧದಲ್ಲಿ ಆಕೆ ಇಡೀ ಚಿತ್ರವನ್ನು ಆವರಿಸಿಕೊಂಡು ಬಿಡುತ್ತಾಳೆ.. ಗೀತಾಳ ಸಿಟ್ಟು, ಅಸಹಾಯಕತೆ, ಪಾಪಪ್ರಜ್ಞೆ ಎಲ್ಲವನ್ನೂ ಶಶಾಂಕ್ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ...ಆಕೆಯ ಪ್ರತೀ ನಡಿಗೆ, ಚಲನೆ, ನೋಟ, ಮಾತಿನ ಧಾಟಿ ಎಲ್ಲದರಲ್ಲೂ ಪಾತ್ರದ ಬೇಗುದಿಯಿದೆ....ನಾಯಕನನ್ನು ಬಿಟ್ಟು ಹೋಗಿ ಆಕೆ ವಾಪಾಸ್ ಬಂದಾಗ ಸೃಷ್ಟಿಯಾಗುವ ಮುಜುಗರ, ಅವಮಾನ, ಹಿಂಸೆ, ಅಕ್ಕರೆ, ಅಸಹಾಯಕತೆಯ ವಾತಾವರಣ ಎಲ್ಲವನ್ನೂ ವ್ಯವಸ್ಥಿತವಾಗೇ ನಿಭಾಯಿಸಿದ್ದಾರೆ.

ನಾಯಕಿಯ ಭಾವನೆಗಳನ್ನು ತುಂಬಾ ಸೂಕ್ಷ್ಮವಾಗಿ ಕಮರ್ಶಿಯಲ್ ಸೂಕ್ಷ್ಮಗಳನ್ನೊಳಗೊಂಡು ಕಟ್ಟಿಕೊಡುವ ಶಶಾಂಕ್ ಇತರೇ ಪಾತ್ರಗಳ ಇರುವಿಕೆಯನ್ನು ಪೇಲವ ಮಾಡಿಬಿಡುತ್ತಾರೆ ಕೆಲವೊಮ್ಮೆ...ಚಿಕ್ಕಪುಟ್ಟ ಪಾತ್ರಗಳನ್ನು ಮೇಲ್ಮೈಯಲ್ಲೇ ಅವಸರದಲ್ಲಿ ಚಿತ್ರಿಸಿ ಓಡುತ್ತಾರೆ. ಬೈಕನ್ನು ಸಿನಿಮಾದ ಚಿತ್ರಕತೆಯ ಟೂಲ್ ಆಗಿ ಬಳಸಿಕೊಂಡಂತೆ ನಾಯಕನ ಗೆಳೆಯರನ್ನು ನಿರೂಪಿಸುವಲ್ಲಿ ಇನ್ನಷ್ಟು ತಯಾರಿಗಳು ಬೇಕಿತ್ತು. ಚಿಕ್ಕ ಪಾತ್ರಕ್ಕೂ ನಾಯಕನಂತೆಯೇ ಸ್ವತಂತ್ರ ವ್ಯಕ್ತಿತ್ವವಿದೆ ಎನ್ನುತ್ತಾ ಪಾತ್ರಗಳನ್ನು ಕಟ್ಟುತ್ತಾ ಹೋದಾಗಲೇ ಚಿತ್ರಕತೆ, ಸಿನಿಮಾ ಇನ್ನಷ್ಟು ಗಟ್ಟಿಯಾಗೋದು...

ಕೃಷ್ಣನ್ ಲವ್ ಸ್ಟೋರಿಯ ಕಾಮಿಡಿ ದೃಶ್ಯಗಳಲ್ಲಿ ಲವಲವಿಕೆ ಕಾಣವುದಿಲ್ಲ. ಕಾಸಿಲ್ಲದ ನಾಯಕನ ಎದುರು ಪಿಜ್ಜಾ ಕಾರ್ನರ್, ಕಾಫಿ ಡೇ ಇದೆ. ನಾಯಕನ ಪರಿಸ್ಥಿತಿಯನ್ನು ನೋಡಿ ವೆಂಕಟ್ರಮಣಾ ಗೋವಿಂದಾ, ಗೋವಿಂದಾ ಎನ್ನಲು ಶರಣ್ ಇದ್ದಾರಷ್ಟೇ....ಮೊಗ್ಗಿನ ಮನಸಿನಲ್ಲಿ ಶರಣ್ನನ್ನು ನಾಯಕರು ಹೇಳುವ ಕತೆಯ ಭಾಗವಾಗಿ ಮಾಡುವ ಮೂಲಕ ಹಾಸ್ಯವನ್ನು ನಿರೂಪಿಸುವ ತಂತ್ರವೇ ಆಕರ್ಷಕವಾಗಿ ಕಂಡಿತ್ತು ಪ್ರೇಕ್ಷಕನಿಗೆ. ಹಾಗಿದ್ದಾಗ ಮಾತ್ರ ಸಾಮಾನ್ಯವಾದ ಕಾಮಿಡಿ ಟ್ರ್ಯಾಕ್ ಕೂಡಾ ನೋಡಿಸಿಕೊಂಡು ಹೋಗುತ್ತದೆ. ನಗೆಯುಕ್ಕಿಸಲು ಒದ್ದಾಡಬೇಕಾದ ಕಾಲಘಟ್ಟದಲ್ಲಿ ನಾವೆಲ್ಲಾ ಇದ್ದೇವೆ ಎನ್ನುವುದನ್ನು ನಿರ್ದೇಶಕ ಅರಿಯದೇ ಹೋದರೆ ಪ್ರೇಕ್ಷಕನೂ ವೆಂಕಟ್ರಮಣಾ ಗೋವಿಂದ ಅನ್ನುತ್ತಾನಷ್ಟೇ..

ಪೋಷಕ ಪಾತ್ರಗಳನ್ನು ನಿಭಾಯಿಸುವುದರಲ್ಲಿ ಶಶಾಂಕ್ರಲ್ಲೊಂದು ಮೋಡಿಯಿದೆ. ಅಪ್ಪನ ಸಂವೇದನೆಯನ್ನು ತುಂಬಾ ಆಸ್ಥೆಯಿಂದ ಕಟ್ಟಿಕೊಡುತ್ತಾರವರು. ಮೊಗ್ಗಿನ ಮನಸ್ಸಿನ ನಂತರ ಕೃಷ್ಣನ್ ಲವ್ ಸ್ಟೋರಿಯಲ್ಲೂ ಇದು ಪ್ರೂವ್ ಆಗಿದೆ. ಪ್ರೀತಿಯಿಂದ ಮೋಸ ಹೋದ ನಾಯಕ ಪ್ರೀತಿಯ ಉರಿಕೆಂಡವನ್ನು ಮನಸ್ಸಲ್ಲಿಟ್ಟುಕೊಂಡು ನರಳುತ್ತಾ, ಕೊನೆಗೆ ಬಾರಿಗೆ ಹೋಗಿ ಕುಡಿಯುತ್ತಾ ಕೂತಿರಬೇಕಾದರೆ ಎದುರುಗಡೆ ಆತನ ಅಪ್ಪನೂ ಕೂತಿರುವ ದೃಶ್ಯವೇ ಸಾಕು ಸಾಮಾನ್ಯನನ್ನು ತಟ್ಟಿಬಿಡುತ್ತದೆ. ಇತರ ಪಾತ್ರಗಳ ಬಗ್ಗೆ ಅಂತಹ ಆಸ್ಥೆ ಮುಂದಿನ ಚಿತ್ರಗಳಲ್ಲಿ ಇನ್ನಷ್ಟು ಹೆಚ್ಚಾದರೆ ಒಳ್ಳೇದು.

ಇಡೀ ಸಿನಿಮಾದಲ್ಲಿ ಭಯಂಕರ ಕಿರಿಕಿರಿ ಉಂಟುಮಾಡುವುದು ಅಜೇಯ್ ರಾವ್ ಅಭಿನಯ...ಅಸಹಾಯಕ ಸನ್ನಿವೇಶಗಳಲ್ಲಿ ಅವರ ಅಸಹಾಯಕತೆಯೇ ಎದ್ದು ಕಾಣುತ್ತದೆ!...ನಾಯಕನ ಬೇಗುದಿಯನ್ನು, ಚಿರ ವ್ಯಾಮೋಹಿಯಾಗಿ ಬದುಕುವ ಕ್ಷಣಗಳನ್ನು ಜೀವಂತವಾಗಿ ಹಿಡಿದಿಡಲು ಅವರಿಗೆ ಸಾಧ್ಯವಾಗಿಲ್ಲ...ಮತ್ತೊಬ್ಬ ನಟ ಪ್ರದೀಪ್ ಎದುರು ನಟಿಸುವಾಗಲಂತೂ ಇದು ಕಣ್ಣೆದುರು ಕನ್ನಡಿ!.. ಅಜೇಯ್ ಅಭಿನಯದಲ್ಲಿ ಇನ್ನಷ್ಟು ಮಾಗಬೇಕು...ದ್ವಿತೀಯಾರ್ಧವನ್ನು ರಾಧಿಕಾ ಪಂಡಿತ್ ಆವರಿಸಿಕೊಂಡು ಬಿಡುತ್ತಾರಾದ್ದರಿಂದ ಸಮಸ್ಯೆಗೆ ಅಲ್ಪಮಟ್ಟಿನ ಪರಿಹಾರ ಸಿಕ್ಕಿದೆ. ಅಚ್ಯುತ್ರಾವ್, ಉಮಾಶ್ರಿ ಎಂದಿನಂತೆ ವಂಡರ್ಫುಲ್. ಸ್ವಯಂವರ ಮಂಜು ಅಣ್ಣನಾಗಿ, ಸಿಡುಕನಾಗಿ, ಕುಡುಕನಾಗಿ ಅಭಿನಯದಲ್ಲಿ ಗುರುತಿಸಿಕೊಳ್ಳುತ್ತಾರೆ. ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆಯುವುದು ಪ್ರದೀಪ್. ಇತ್ತೀಚೆಗಷ್ಟೇ ಸ್ಟಿಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದ "ನವಿಲಾದವರು" ಎನ್ನುವ ಸಿನಿಮಾದಲ್ಲಿ ಆಪ್ತವಾಗಿ ಅಭಿನಯಿಸಿದ್ದ ಪ್ರದೀಪ್, ಕೃಷ್ಣನ್ ಲವ್ ಸ್ಟೋರಿಯ ಮೂಲಕ ಮತ್ತೊಮ್ಮೆ ಭವಿಷ್ಯದ ಭರವಸೆಯ ಸೋಲೋ ನಾಯಕನಾಗುವ ಎಲ್ಲಾ ಲಕ್ಷಣಗಳನ್ನು ತೋರಿಸಿದ್ದಾರೆ..... 

ಹಾಡುಗಳ ಚಿತ್ರೀಕರಣ, ವಿನ್ಯಾಸ ಎಲ್ಲವೂ ಮುದ ನೀಡುತ್ತದೆ... ಜಯಂತ್ ಕಾಯ್ಕಿಣಿ ಬರೆದ ಸಂತೆಯಲ್ಲಿ ನಿಂತರೂನೂ ನೋಡು ನೀನು ನನ್ನನ್ನೇ ಪ್ರೇಮೋತ್ಸವಕ್ಕೆ ನಂದಾ ದೀಪವಾದರೆ, ಮೋಸ ಮಾಡಲೆಂದು ಸದ್ಯದ ವಿರಹ ಗೀತೆ. ನೀನಾಡದ ಮಾತು ನನ್ನಲಿದೆ ಮಾಧುರ್ಯಕ್ಕೆ ಇಷ್ಟವಾಗುತ್ತದೆ. ಹಚ್ಚಿಕೊಂಡಷ್ಟು ಪ್ರೇಮಿಗಳಿಗೆ ಬದುಕು ಕಷ್ಟವಾಗುತ್ತದೆ!.. ಮುಸ್ಸಂಜೆ ಮಾತಿನ ನಂತರ ವಿ.ಶ್ರೀಧರ್ ಕೃಷ್ಣನ್ ಲವ್ ಸ್ಟೋರಿಯಲ್ಲಿ ಸಂಭ್ರಮದ ರಾಗವನ್ನು ಸರಾಗವಾಗಿಸಿದ್ದಾರೆ. ಕೃಷ್ಣರ ಕ್ಯಾಮರಾ ಕೆಲಸ ಮತ್ತೆ ಸೆಳೆಯುತ್ತದೆ..ಸನ್ನಿವೇಶಗಳನ್ನು ಬೆಳಕು, ನೆರಳಿನ ನೆರಳಲ್ಲಿ ಕಟ್ಟಿಕೊಡುವಾಗಿನ ಕುಸುರಿ ಚಿತ್ರದ ಫ್ರೇಮುಗಳತ್ತ ಪ್ರೇಕ್ಷಕನಿಗೆ ಲವ್ ಅಟ್ ಫಸ್ಟ್ ಸೈಟ್!

ಕೃಷ್ಣನ್ ಲವ್ ಸ್ಟೋರಿ ಒಮ್ಮೆ ನೋಡೋದಿಕ್ಕೆ ಓಕೆ. ಮತ್ತೊಮ್ಮೆಗೂ ಓಕೆ ಅಂತ್ಹೇಳಿ ಪ್ರೇಕ್ಷಕ ಹೋಗುತ್ತಾನಾದರೆ ಅದಕ್ಕೆ ಕಾರಣ ರಾಧಿಕಾ ಪಂಡಿತ್, ಶಶಾಂಕ್ ಮತ್ತು ಹಾಡುಗಳು!!!!