(ಕಳೆದ ಫೆಬ್ರವರಿಯಲ್ಲಿ ಬರೆದ ಕತೆಯಿದು...ಕತೆ ಎನ್ನುವುದಕ್ಕಿಂತ ಇದು ನನ್ನ ಸುತ್ತಲಿನ ಪರಿಸರದ ಸ್ವಗತವೆಂದರೆ ತಪ್ಪಾಗಲಾರದು)
"ನಾನಿನ್ನು ದೇವರ ಪೂಜೆ ಮಾಡಬಾರದು"- ಹಾಗಂತ ಅಂದುಕೊಂಡರು ಗೋವಿಂದ ಭಟ್ಟರು.
ಅವರದ್ದು ಹತ್ತು ಖಂಡಿ ಅಡಿಕೆಯ ಮನೆತನ. ಜೊತೆಗೆ ಪರಂಪರಾಗತವಾಗಿ ಬಂದ ದೇವರಪೂಜೆ. ನಾಗ, ಸಾಲಿಗ್ರಾಮ, ಭೂತ, ಆಶ್ವತ್ಥ ಎಲ್ಲದಕ್ಕೂ ಅವರ ಅಪ್ಪ, ಅಜ್ಜ ಪೂಜೆ ಮಾಡಿಕೊಂಡು ಬಂದಿದ್ದರು. ಪ್ರತಿದಿನ ಒಂದು ಕಾಯಿ ಗಣ ಹೋಮ ನಡೆಯುತ್ತಿತ್ತು. ಚಿಕ್ಕಂದಿನಲ್ಲೇ ಮನೆಗೋಸ್ಕರ ಓದು ಅರ್ಧಕ್ಕೆ ಬಿಟ್ಟ ಗೋವಿಂದ ಭಟ್ಟರಿಗೆ ಆಸ್ತಿ ಜೊತೆ ಬಳುವಳಿಯಾಗಿ ಬಂದಿದ್ದೇ ದೇವರ ಪೂಜೆ.
ಅವರಿಗೆ ಹತ್ತು ವರ್ಷವಿದ್ದಾಗಲೇ ಪೂಜೆ ಮಾಡುವ ಕಾರ್ಯಕ್ರಮ ಶುರು ಮಾಡಿದ್ದರು. ಎಡಕೈಯಲ್ಲಿ ಸ್ಟೀಲಿನ ಬಾಲ್ದಿ, ಅದರಲ್ಲಿ ಹಳದಿ, ಬಿಳಿ ಹೂವು. ಬಾಲ್ದಿಯ ಒಂದು ಬದಿಯಲ್ಲಿ ಅರೆದು ತೆಗೆದ ಗಂಧ, ಜೊತೆಗೆ ಅರಶಿನ. ಮತ್ತೊಂದು ಕೈಯಲ್ಲಿ ಅರ್ಧ ಲೋಟೆ ದನದ ಹಾಲು. ಇಷ್ಟನ್ನು ಹಿಡಿದುಕೊಂಡು ಬೆಳಿಗ್ಗೆ ಏಳರ ಹೊತ್ತಿಗೆ ಸಂಧ್ಯಾವಂದನೆ ಮಾಡಿ ಕೆಂಪು ಮಡಿ ಉಟ್ಟುಕೊಂಡು ಹಟ್ಟಿ ದಾಟಿ, ಪಾಪಿನ ಪಾಚಿಯ ಮೇಲೆ ಜಾರದಂತೆ ನಡೆಯುತ್ತಾ, ತಮ್ಮನ್ನು ತಾವೇ ಬ್ಯಾಲೆನ್ಸ್ ಮಾಡಿಕೊಳ್ಳುತ್ತಾ ಬುಡ ಬಿಡಿಸಿದ ಅಡಿಕೆ ಮರಗಳ ಮಧ್ಯೆ ಬಿಳಿ ಹಾಳೆಗಳಲ್ಲಿ ನಿಂತ ನೀರು, ಬೆಳೆಯುತ್ತಿರುವ ಸೊಳ್ಳೆಗಳನ್ನು ಗಮನಿಸುತ್ತಾ ನಾಗನ ಕಟ್ಟೆ ತಲುಪುವುದೆಂದರೇನೇ ಬಾಲಕ ಗೋವಿಂದ ಭಟ್ಟರಿಗೆ ಅದೆಂತಹುದೋ ಹುರುಪು.
ತನ್ನ ಪುಟ್ಟ ಕೈಗಳಿಂದ ನಿನ್ನೆ ತಾನೇ ನಾಗನ ಹೆಡೆಯ ಮೇಲೆ ಅಲಂಕಾರ ಮಾಡಿದ ಹೂವುಗಳನ್ನು ತೆಗೆದು, ಅಲ್ಲೇ ಪಕ್ಕದ ಕೆರೆಯಿಂದ ನೀರು ತಂದು, ಹೆಡೆಗೆ ಅಂಟಿಕೊಂಡಿದ್ದ ನಿನ್ನೆಯ ಗಂಧವನ್ನು ತೊಳೆದು ಹೆಡೆಯ ಮೇಲೆ ಹಾಲು ಹೊಯ್ಯುತ್ತಿದ್ದರು. ಪಕ್ಕನೆ ಅದೇ ಖಾಲಿಯಾದ ಲೋಟೆಯನ್ನು ನಾಗನ ಹೆಡೆಯ ಕೆಳಗೆ ಹಿಡಿದು ಅಭಿಷೇಕವಾದ ಹಾಲನ್ನು ತೀರ್ಥರೂಪದಲ್ಲಿ ಹಿಡಿಯಲು ಹರಸಾಹಸ ಪಡುತ್ತಿದ್ದರು. ನಂತರ ನೀರು ಹಾಕಿ ಹೆಡೆ ಸ್ವಚ್ಛ ಮಾಡಿ, ಅರಶಿನ ಮಿಶ್ರಿತ ಗಂಧವನ್ನು ಹೆಡೆಗೆ ಪೂರ್ತಿ ಹಚ್ಚುತ್ತಿದ್ದರು. ತಲೆಯ ಮೇಲೆ ಹಳದಿ ಶಂಖಪುಷ್ಪ ಇಟ್ಟು, ಬಾಳೆಹಣ್ಣು ನೈವೇದ್ಯ ಮಾಡುತ್ತಾ "ಓಂ ಶ್ರೀ ಸುಬ್ರಹ್ಮಣ್ಯಾಯ ನಮಃ", "ಓಂ ಶ್ರೀ ಸುಬ್ರಹ್ಮಣ್ಯಾಯ ನಮಃ" ಎಂದು ಎಂಟ್ಹತ್ತು ಸರ್ತಿ ಹೇಳುವಾಗ ಪೂಜೆ ಮುಗಿಯುತ್ತಿತ್ತು. ಅರಶಿನ ಮಿಶ್ರಿತ ನಾಗನನ್ನು ನೋಡಿದಾಗ ಕುಕ್ಕೇ ಸುಬ್ರಹ್ಮಣ್ಯದ ಗರ್ಭಗುಡಿಯಲ್ಲಿ ಕಂಡ ನಾಗ ದೇವರು ನೆನಪಾಗುತ್ತಿದ್ದರು. ತೋಟಕ್ಕೆ ಸಂಜೆ ಕಾಕನ ಜೊತೆ ಹೋಗುವಾಗ ಅಪರೂಪಕ್ಕೊಮ್ಮೆ ನಾಗರಹಾವು ಸರಸರ ಹಾದುಹೋಗುವಾಗ "ನಾಗರಹಾವು" ಎಂದು ಉದ್ಗಾರ ತೆಗೆಯುತ್ತಾ ಮತ್ತೆ ಪಟಕ್ಕನೆ ನಾಲಿಗೆ ಕಚ್ಚಿ " ಒಳ್ಳೇ ಹಾವು" ಎಂದು ಹೇಳುತ್ತಾ "ಓಂ ಶ್ರೀ ಸುಬ್ರಹ್ಮಣ್ಯಾಯ ನಮಃ" ಎಂದು ಬಡಬಡಿಸುತ್ತಿದ್ದರು ಬಾಲಕ ಗೋವಿಂದ ಭಟ್ಟರು.
ಎಂಟನೇ ವಯಸ್ಸಿಗೇ ಗೋವಿಂದ ಭಟ್ಟರಿಗೆ ಉಪನಯನ ಮಾಡಿದ್ದರಿಂದ ಇದೆಲ್ಲಾ ಪ್ರಾರಂಭವಾಗಿತ್ತು. ಹತ್ತರಿಂದ ಹದಿನೈದು ವರ್ಷದೊಳಗೆ ಕಾಕನ ಜೊತೆ ಕೂತು ದೇವರ ಪೂಜೆ ಮಾಡಿಕೊಳ್ಳುವುದು ಹೇಗೆ, ನೈವೇದ್ಯಕ್ಕೆ ತುಳಸಿ ಎಷ್ಟು ಹಾಕಬೇಕು, ಎಲ್ಲೆಲ್ಲಿ ಯಾವಾಗ್ಯಾವಾಗ ಆಚಮನ್ಯ ಮಾಡಿಕೊಳ್ಳಬೇಕು ಎನ್ನುವ ವಿಷಯಗಳನ್ನೆಲ್ಲಾ ಮನದಟ್ಟು ಮಾಡಿಕೊಂಡರು.
ಹತ್ತನೇ ಕ್ಲಾಸು ತಲುಪುವ ಹೊತ್ತಿಗೆ ಗಣಹೋಮ ಮಾಡುವ ಉಪದೇಶವೂ ಸಿಕ್ಕಿತು. ಅದೇ ಸಮಯಕ್ಕೆ ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳಲು ಯಾರೂ ದಿಕ್ಕಿಲ್ಲದ್ದರಿಂದ, ಗೋವಿಂದ ಭಟ್ಟರ ಅಮ್ಮನಿಗೂ ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿದಿದ್ದರಿಂದ ತಮ್ಮಂದಿರ, ತಂಗಿಯಂದಿರ ಪ್ರಾಥಮಿಕ ಓದು, ಪ್ರೌಢ ಓದು, ಮದುವೆ, ಹೈಯರ್ ಎಜುಕೇಶನ್ನುಗಳ ಜವಾಬ್ದಾರಿಯೆಲ್ಲ ಗೋವಿಂದ ಭಟ್ಟರ ಹೆಗಲಿಗೇ ಬಿತ್ತು. ಇದೆಲ್ಲದರ ಜೊತೆಗೆ ಪ್ರತಿನಿತ್ಯ ಒಂದೂವರೆ ಗಂಟೆಗಳ ದೇವರ ಪೂಜೆ, ಗಣ ಹೋಮ, ನಾಗನ ಪೂಜೆ, ಶನಿವಾರದ ಅಶ್ವತ್ಥಪೂಜೆ ಚಾಚೂ ತಪ್ಪದೇ ನಡೆಯುತ್ತಿತ್ತು.
ತಮ್ಮಂದಿರು ಒಳ್ಳೆಯ ಕೆಲಸ ಹುಡುಕಿಕೊಂಡರು. ತಂಗಿಯಂದಿರಿಗೆ ಮುದ್ದಾದ ಮಕ್ಕಳಾದವು. ಎಲ್ಲರ ಸಂಸಾರ ಸುಖಮಯವಾಗಿದೆ ಎನ್ನುವ ಹೊತ್ತಿಗೆ ಗೋವಿಂದ ಭಟ್ಟರ ಜಗತ್ತಿನೊಳಗೆ ಅಲ್ಲೋಲ ಕಲ್ಲೋಲ ಶುರುವಾಯಿತು.
ಈಚೀಚೆಗೆ "ಶುಕ್ಲಾಂಭರದರಂ.... "ಎನ್ನುತ್ತಾ ಶುರು ಮಾಡುತ್ತಿದ್ದ ಶ್ಲೋಕ ಮಧ್ಯದಲ್ಲೆಲ್ಲೋ ತಲುಪುವ ಹೊತ್ತಿಗೆ ಮರೆತು ಹೋಗುತ್ತಿತ್ತು. ಯಾವ ಭಾಗದ ಶ್ಲೋಕವನ್ನು ಮುಂದುವರಿಸಬೇಕೆಂಬ ಗೊಂದಲ ಕಾಡುತ್ತಿತ್ತು. ದಟ್ಟ ಅರಣ್ಯವನ್ನು ಹೊಕ್ಕಿ ಮಧ್ಯೆ ಒಂಟಿಯಾಗಿ ಹೋದ ಅನುಭವವಾಗುತ್ತಿತ್ತು. ಸಾಲಿಗ್ರಾಮಗಳ ನೈಸಾದ ಮೇಲ್ಮೈಯನ್ನು ತೊಳೆದು ಅದಕ್ಕೆ ಹಾಲಿನ ಅಭಿಷೇಕ ಮಾಡಿ ಗಂಧ ಹಚ್ಚಿ ಪೆಟ್ಟಿಗೆಯೊಳಗೆ ಇಡುವಾಗ ರೋಮಾಂಚನವಾಗುತ್ತಿರಲಿಲ್ಲ. ಹಚ್ಚಿ ಬಿಟ್ಟ ಆರತಿಗೂ, ಕರೆಂಟು ಹೋದಾಗ ಹಚ್ಚುವ ಚಿಮಿಣಿ ಎಣ್ಣೆ ದೀಪಕ್ಕೂ ವ್ಯತ್ಯಾಸವೇ ಇಲ್ಲವಲ್ಲ ಅಂತನ್ನಿಸಲು ಶುರುವಾಯಿತು.
ತನಗೆ ಕಷ್ಟಗಳು, ಗೊಂದಲಗಳು ಮಾತ್ರ ಜಾಸ್ತಿ ಆದಾಗ ದೇವರ ಮೇಲೆ ಪ್ರೀತಿ ಉಕ್ಕುತ್ತದೆ. ಉಳಿದ ಸಂದರ್ಭಗಳಲ್ಲಿ ದೇವರು, ದೇವರ ಪೂಜೆ ಬಾಲ್ಯದಲ್ಲಿ ಹುಟ್ಟುಹಾಕುತ್ತಿದ್ದ ಮುಗ್ಧ ಪ್ರೀತಿ, ತನ್ಮಯತೆ, ಖುಷಿ ಈಗ ಸಿಗುತ್ತಿಲ್ಲ ಎನಿಸಲು ಶುರುವಾಯಿತು. ತನ್ನ ತಮ್ಮ ರಾಮಚಂದ್ರನ ಮಗ ಅಕ್ಷಯ ಬೆಂಗ್ಳೂರಲ್ಲಿ ಬೆಳಿಗ್ಗೆ ಎದ್ದು ಕಂಪ್ಯೂಟರು ಕುಟ್ಟುತ್ತಾನಲ್ಲ, ಪ್ರತೀ ದಿನವೂ ತನ್ನದೂ ಸಹ ಹಾಗೇ ತಾನೇ ಅಂದುಕೊಂಡರು. ತನ್ನದು ಹಾಗಿರುವ ಬದುಕಲ್ಲ ಎಂದು ಗಟ್ಟಿ ನಿರ್ಧಾರ ಮಾಡಿಕೊಳ್ಳಲು ಅವರಿಗೆ ಯಾವುದೇ ಉತ್ತರಗಳು ಸಿಗಲಿಲ್ಲ.
ತಾತ ಮಾಡಿದ್ದಕ್ಕೆ ಅಪ್ಪ ಪೂಜೆ ಮಾಡಿದರು. ಅವರು ಮಾಡಿದರು ಅನ್ನೋ ಕಾರಣಕ್ಕೆ ತಾನೂ ಮಾಡಿದೆ. ಹಾಗಾದರೆ ಯಾರೂ ತಮಗೋಸ್ಕರ ಪೂಜೆ ಮಾಡಲಿಲ್ಲವೇ? ಮಾಡಬೇಕು ಅನಿವಾರ್ಯ ಅನ್ನೋದೇ ಎಲ್ಲರಿಗೂ ಮುಖ್ಯವಾಗಿತ್ತು ಎನ್ನುವ ವಿಷಯಕ್ಕೆ ಅವರಿಗೆ ಸಾವಿರ ಕಾರಣಗಳು ಹೊಳೆದವು.
ಪೂಜೆಗೆ ಕುಳಿತಾಗ ದೇವರಂತಹ ದೇವರು ಕಾಣುತ್ತಾನೆಯೇ ಹೊರತು ತನಗೆ ತಾನು ಕಾಣುವುದಿಲ್ಲವಲ್ಲ ಎನ್ನುವ ವಿಷಯ ಅವರನ್ನು ಗಾಢವಾಗಿ ಕಾಡತೊಡಗಿತು.
ಮರುದಿನ ಬೆಳಿಗ್ಗೆ ರಾಮಚಂದ್ರರ ಹೆಂಡತಿ ಸುಶೀಲಮ್ಮ ಸ್ನಾನ ಮಾಡಿ ದೇವರ ಕೋಣೆಗೆ ನಮಸ್ಕಾರ ಮಾಡಲು ಹೊರಟಾಗ ಸಾಲಿಗ್ರಾಮಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು, ಸ್ವಾಮಿಗಳು ಕೊಟ್ಟ ಶ್ರೀ ಚಕ್ರ,, ದಾಸವಾಳದ ಹೂವು ಹರಿವಾಣದಿಂದ ಕೆಳಕ್ಕೆ ಬಿದ್ದಿದ್ದವು.
ಮಂಟಪದ ಮೇಲೆ ಪದ್ಮಾಸನ ಹಾಕಿ ಗೋವಿಂದ ಭಟ್ಟರು ಕುಳಿತಿದ್ದರು!!!