ಶನಿವಾರ, ಜನವರಿ 10, 2009

ಆವಿಯಾದ ರಕ್ತ ಕಣ



ರಸ್ತೆ ಭಣಗುಡುತ್ತಿತ್ತು
ನಿದ್ರಿಸುತ್ತಾ ಆಕಳಿಕೆ
ಚಿಮಿಣಿ ಬೆಳಕಲ್ಲಿ ನಡೆಯುತ್ತಿದ್ದೆ
ಸುಂದರ ಸುಮಗಳು
ಹಸಿರು ಮರಗಳು ದಾಟುತ್ತಿದ್ದವು
ಧುತ್ತನೆ ಕಾಲಿಗೆ ಅಡರಿತು ಕಡಿದ ಕಾಲು

ಆರಡಿ ಉದ್ದದ ದೇಹಗಳು
ಮೂರಡಿಯಾಗಿ ಚೆಲ್ಲಿ ಕುಳಿತಿದ್ದವು
ಸತ್ತವರ ಸುತ್ತ ಹುತ್ತ ಬೆಳೆದಂತೆ
ನಾಯಿ, ನರಿ, ಹದ್ದುಗಳು ಬಾಯಾರಿದ್ದವು
ಬಿಳಿ ಮೂಳೆ, ಎರೆಹುಳುವಿನಂತಹ ನರ
ಹಸಿರು ಕಣ್ಣು ಎಲ್ಲವನ್ನೂ ನಿಯತ್ತಾಗಿ
ಬಾಯಿಗಿಳಿಸುತ್ತಾ ಅವುಗಳ ರಕ್ಕಸ
ಹಸಿವು ಸಾಯುತ್ತಿತ್ತು

ಬೆತ್ತಲಾಗಿ ಒಬ್ಬರ ಮೇಲೊಬ್ಬರಂತೆ
ಮಲಗಿದ್ದರು ಧೀರರು
ಕನಸಿನ ಕಣ್ಣುಗಳು, ಬಾಯಾರಿದ ಗಂಟಲು
ಸಾಯದ ನೋವು ಎಲ್ಲಾ ಆಕಾಶ ನೋಡುತ್ತಿದ್ದವು
ಮೊನ್ನೆಯಷ್ಟೇ ಮದುವೆಯಾದವ
ನಿನ್ನೆಯಷ್ಟೇ ನಕ್ಷತ್ರ ಕಂಡವ
ನಾಳೆ ಸೇನಾನಿಯಾಗಬೇಕಿದ್ದವ
ಎಲ್ಲರೂ ನನ್ನೆದುರೇ ನರಳುತ್ತಾ ಮುರುಟಿ ಹೋದರು

ಛಿದ್ರ ರಥಗಳ ಮಧ್ಯೆ ರಾಜಠೀವಿಯಿಂದ
ಬಾಣದ ಹೊದಿಕೆ ಹೊದ್ದು ನಿದ್ರಿಸುತ್ತಿದ್ದ ಆತ
ಬಾನಿನ ಸೂರ್ಯ ಬಣ್ಣ ಕಳೆದುಕೊಳ್ಳುತ್ತಿದ್ದ
ಆಗಸ ಕೆಂಪಾಗುತ್ತಿತ್ತು
ಅಲ್ಯೂಮಿನಿಯಂ ತಟ್ಟೆಯಂತೆ ಜಜ್ಜಿದ ಕಿರೀಟ
ರಥದ ಚಕ್ರದಡಿ ಮುದುಡಿತ್ತು
ಇನ್ನು ಕಿಲುಬು ಕಾಸಿನ ಕಿಮ್ಮತ್ತಿಲ್ಲ ಅದಕ್ಕೆ
"ಕ್ಷತ್ರೀಯನಿಗೆ ಯುದ್ಧವೇ ಮುಖ್ಯ" ಎಂಬ
ಬರಹ ಕಂಡಿತು ನನಗೆ ರಥದಡಿ
"ಹಸಿದವರ ಬದುಕು ಕ್ಷತ್ರೀಯನಿಗೆ
ಫುಟ್ಬಾಲು ಚೆಂಡಲ್ಲವೇ?" ಅಂತ ಅಂದುಕೊಂಡೆ

ಆದರೂ ಆತನ ಕಣ್ಣುಗಳಲ್ಲಿ
ಚಿನ್ನದ ಕಿರೀಟ ಮಿನುಗುತ್ತಿತ್ತು
ಮುಖದ ತುಂಬೆಲ್ಲಾ ವೈರಿಯ
ಮಾರ್ಗವನ್ನು ಸೂಚಿಸುವ ಸುಪ್ತ ರೇಖೆಗಳು
ಮೀಸೆಯಡಿ ಚಿನ್ನದ ಸಿಂಹಾಸನ
ನೇತಾಡುತ್ತಾ ನಗುತ್ತಿತ್ತು.

ಆಗಲೇ ರಕ್ತ ಕಣಗಳು
ಆವಿಯಾಗಿ ಆಕಾಶದಲ್ಲಿ
ಮೋಡಗಳಾದದ್ದು.

(ಕೆಂಡಸಂಪಿಗೆಯಲ್ಲಿ ಪ್ರಕಟವಾದ ಕವಿತೆ)

1 ಕಾಮೆಂಟ್‌:

Ittigecement ಹೇಳಿದರು...

ಕಾರ್ತೀಕ್....

ಭಾವನಾ..ಲೋಕಕ್ಕೆ ಎಳೆದೊಯ್ಯುವಲ್ಲಿ ಸಫಲವಾಗಿದೆ.. ಕವನ..

ಚಂದವಾದ ಕವನಕ್ಕಾಗಿ.. ಅಭಿನಂದನೆಗಳು...